Wednesday, November 19, 2014

ಒಂದು ಕಿರಿಬೆರಳ ಜಾದೂ!

ಹಣ್ಣಾರಿಸಿ ಕಾಯುತ್ತ
ಕೂತು, ತಾನೇ ಹಣ್ಣಾದವಳ
ನಿರೀಕ್ಷೆಗೆ ಪುಟವಿಟ್ಟು
ಮುಕ್ತಿಕೊಟ್ಟಿದ್ದು;


ಹೊಡೆಯಲು ಕೈ ಎತ್ತಿದವಳ
ದಿಕ್ಕು ತಿರುಗಿಸಿ,
ಸೃಷ್ಟಿಯ ತೋರಿದ್ದು;


ಸಂಸಾರ ವೃಂದದ
ಕೋಟಲೆಯಿಂದ ಪಾರುಗಾಣಿಸಲು,
ಸಂಗೀತ ಸುಧಾಂಬುಧಿಯಲ್ಲಿ
ಅದ್ದಿ ತೆಗೆಯಲು,
ಪಿಡಿದ ಬಿದಿರಿನ ಕೋಲಿಗೆ
ಮತ್ತು ಆಲಿಸಿದವರಿಗೆ ಜೀವವೂಡಿದ್ದು;


ಹಿರಿತಲೆಗಳ ಗರುವಭಂಗಕ್ಕೆ,
ಹೊಸಆಲೋಚನೆಗಳ ಉತ್ಕರ್ಷಕ್ಕೆ,
ಶರಣುಬಂದವರ ನೆರಳಿಗೆ,
ಎತ್ತಿ ಹಿಡಿದ ಗಿರಿಯ ಆನಿಕೆಯಾಗಿದ್ದು;


ಗಡಿಬಿಡಿಯಲ್ಲಿ
ದಾಕ್ಷಿಣ್ಯದಲ್ಲಿ ಪರಿಮಳದ ಡಬ್ಬಿಯ
ತುರುಕಿ, ಬದಿಗೆ ಸರಿದು ನಿಂತು
ಸುತ್ತಲವರ ಅಪಹಾಸ್ಯಕ್ಕೆ
ಈಡಾದ ಕುರೂಪಿಯ
ಕಿನ್ನರಿಯಾಗಿ ಬದಲಿಸಿದ್ದು;


ತಡೆಹಿಡಿದಷ್ಟೂ ಜಾರುವ
ಕಣ್ಬನಿ ಪ್ರವಾಹವ
ಒರೆಸಿ ಕಟ್ಟೆ ಕಟ್ಟಿದ್ದು;


ಜಾರುದಾರಿಯ ಹೆಜ್ಜೆಗಳ
ದಿಕ್ಕು ಬದಲಿಸಿ
ಜೊತೆಕೊಟ್ಟಿದ್ದು;


ಒಂದಕ್ಕೊಂದು ಬೆರೆಸಿ ನಡೆವಾಗ
ಕಾರಣವಿರದೆ
ಚಿತ್ತಾರವಿಟ್ಟು
ಮೈಮನದಲ್ಲಿ ಹೂವರಳಿಸಿದ್ದು;


ಜಗದೆಲ್ಲ ಚಿಂತೆಗಳ
ಅಮ್ಮನೆ ಕಳೆವಳೆಂಬ
ಭರವಸೆಯಲಿ,
ರಸ್ತೆಯುದ್ದಕೂ
ಕುಣಿಯುತ ಸಾಗುವ,
ಪುಟ್ಟಕಿನ್ನರಿಯು
ಹಿಡಿದು ನಡೆವುದು:
ಮತ್ತು
ಹಿಡಿದವಳು-ಕೊಟ್ಟವಳೂ ಇಬ್ಬರನ್ನೂ ಪಾರುಗಾಣಿಸುವುದು;


ಈ ಕಿರುಬೆರಳೇ ಅಲ್ಲವೇ?


ಇದಕೆ ಇರಬಹುದು
ಹಿರಿಯರ ಸಾಲು.. 
"ಮುಳುಗುವ ಜೀವಕೆ ಹುಲ್ಲುಕಡ್ಡಿಯ ಆಸರೆ" ಎಂಬ ರೂಪಕ

4 comments:

sunaath said...

ಜೈ ಕನಿಷ್ಠಿಕಾ!

ಮನಸಿನಮನೆಯವನು said...

ಕಟ್ಟುವ ಮನಸ್ಸಿದ್ದರೆ ಕಿರುಬೆರಳ ಮೇಲೂ ಪದ ಕಟ್ಟಬಹುದು- ಎಂಬ ಮಾತು ನಿಮ್ಮಂತಹವರ ಬ್ಲಾಗಿಗೆ ಬಂದಾಗೆಲ್ಲ ಅರಿವಾಗುತ್ತಿದೆ. ಚೆನ್ನಾಗಿ ಬರೆದಿದ್ದೀರಿ.

ಸಿಂಧು sindhu said...

ಥ್ಯಾಂಕ್ಯೂ ಮನಸಿನ ಮನೆಯವರಿಗೆ ಮತ್ತು ಸುನಾಥ ಕಾಕಾ.
ಕಾಕಾ, ನಿಮ್ಮ ಕಮೆಂಟು ನೋಡಿದ ಮೇಲೆ ಇನ್ನೊಂದು ಪ್ಯಾರಾ ಹುಟ್ಟಿತು..

ಕವಿಮಹಾಕವಿಗಳನ್ನೆಲ್ಲ ತೂಗಲು
ಬೆರಳ ಮೊರೆಹೋಗಿ
ಕಾಳಿದಾಸನನ್ನ ವರಿಸಿ
ತುಲನೆ ಅಲ್ಲಿಗೇ ನಿಲ್ಲಿಸಿದ್ದು....
(ಕನಿಷ್ಟಿಕಾ ಕಾಲಿದಾಸಸ್ಯ...)

ಪ್ರೀತಿಯಿಂದ,
ಸಿಂಧು

ಸಿಂಧು sindhu said...
This comment has been removed by the author.