Wednesday, October 8, 2014

ಇಬ್ಬಗೆ

ಎಲ್ಲ ಮುಗಿದ ಹಾಗೆ
ಅಂದ್ಕೊಂಡ ಆ ದಿನಗಳಲ್ಲಿ,
ಕತ್ತಲೆಕಾನ್ ಬದುಕಿನಲ್ಲಿ,
ಬೆಳಕು ಹರಿಯಿತು.
ಹೌದು,
ಉದೂದ್ದಕೆ ನೆರೆಯಾಗಿ..
ಈಜು ಮತ್ತು ಲೈಫ್ ಜಾಕೆಟ್ಟಿನ
ಸುಳಿವೂ ಇಲ್ಲದೆ,
ಸಡಿಲ ಮೈಯಲ್ಲಿ ಸುಮ್ಮಗೆ,
ಇಳಿಬಿದ್ದೆ.
ಹರಿದಷ್ಟೂ ಹರವು!

ನಿಲ್ಲ ಬೇಕು,
ಒಡ್ಡು ಬೇಕು,
ಹರಿವ ಪಾತ್ರ ಹೀಗಿರಬೇಕು,
ಎಲ್ಲ ಯಾಕೆ ಬೇಕು?
ಎಂದೆಲ್ಲ ಭಾಷಣ ಬಿಗಿವ ವಯಸ್ಸು
ಮುಗಿದು,,,

ಹೊಳೆ
ಕೆರೆಯಾಗಿದೆ.
ಸುತ್ತ ಕೆರೆಗಳ ನೀರು ಹರಿದು,
ತುಂಬಿ ತುಳುಕಿ,
ಒಡ್ಡು ದಾಟಿ,
ಸಣ್ಣಕೆ ಧಾರೆಯಾದ
ಹರಿವಿನ ಕಟ್ಟೆಯ
ಮೇಲೆ ಮಕ್ಕಳು
ಕಾಲಾಡಿಸಿ ನಗುತ್ತಾರೆ,

ಹೂಳೆತ್ತುವ ದಿನ
ಹತ್ತಿರ ಬರುತ್ತಿರುವ
ನೆನಕೆ!

ಇಲ್ಲ ಮಳೆ ಬೇಡ,
ನೆರೆಯೇ ಬೇಕು
ಎಂದು ಹಟ ಮಾಡುವ
ಮನಸ್ಸು,
ಯಾವ ಹಟಕ್ಕೂ ಬಗ್ಗದ
ಜ್ಞಾನವೈರಾಗ್ಯ ವಯಸ್ಸು.

ದೂರದೂರಿನ
ಹೊಳೆಯೊಂದರ ಹೊಳವು:
ಮರೆತುಬಿಡು ಮನಸ್ಸು, ವಯಸ್ಸು
ಸುಮ್ಮನೆ ಕೂರುವುದೇ ತಪಸ್ಸು
ಅಷ್ಟಾದರೆ...
ನೆರೆ ಬಂದ ಹಾಗೆ
ತೊರೆ ಸಿಕ್ಕ ಹಾಗೆ.

ಅಷ್ಟಾಗುವುದೆ?! 

2 comments:

Badarinath Palavalli said...

ವಯೋಮಾನಕ್ಕೆ ತಕ್ಕಂತೆ ವೇದಾಂತ ನೋಟದ ದೃಷ್ಟಿ ಕೋನವು ಬದಲಾಗುತ್ತ ಹೋಗುತ್ತದಂತೆ, ಹಾಗಿದೆ ತಮ್ಮ ಈ ಕವನದ ಹರಿವು.
ಹೂರಣವು ಹಲ ಗ್ರಹಿಕೆಗಳ ಸಮ್ಮಿಶ್ರಣವಿಲ್ಲಿ.

sunaath said...

ವಯಸ್ಸಿನೊಡನೆ ಬದಲಾಗಲೇ ಬೇಕಲ್ಲವೆ ಬದುಕು? ನಿಮ್ಮ ಲೇಖನಿಯಲ್ಲಿ ಕಾವ್ಯವೇ ಹರಿದು ಬರುತ್ತದೆ!