Wednesday, June 4, 2014

ಹೀಗೆಲ್ಲಾ ಇರುತ್ತೆ...

ಮೊದಲ ಸಲ -
   ಮುಖ ಉಬ್ಬಿ,
   ಕಣ್ ತುಂಬಿ ತುಳುಕಿ,
   ಹಲ್ಲು ಕಚ್ಚಿ,
   ಇಡಲಾರದೆ ಇಟ್ಟ ಹೆಜ್ಜೆ,
   ನೋಟ ಕಿತ್ತಿಡದೆ-,
   ಇರಿಯುತ್ತಾ,
  ಯಾರದೋ ಕೈಯಲ್ಲಿ-
  ಕೈಯಿಡಿಸಿಕೊಂಡು,
  ಬಾಗಿಲಿಂದ ಮರೆಯಾಗುವವರೆಗೂ
  ಬಗೆದು ತಿಂದ
  ಕಣ್ಗಳು.


ಎರಡನೆಯ ಸಲ -
   ಕಿತ್ತಿಡಲೇ ಬೇಕಿದ್ದಿದ್ದು
   ಗೊತ್ತಿದ್ದೇ,
   ತುಳುಕದೆ ತುಂಬಿಕೊಂಡ ಕಣ್ಗಳು.
   ತಿರುಗಿದರೆ ತುಳುಕೀತೆಂದು,
   ನೋಡದೆ,
   ಭರಭರನೆ ನಡೆದು,
   ಬಾಗಿಲಿಂದ
   ಮರೆಯಾಗುವ ಮೊದಲೊಮ್ಮೆ
   ಹಣಿಕಿದ್ದು.

ಮೂರನೆಯ ಸಲ-
   ನವಿಲಿನ ಕುಣಿತವಲ್ಲದಿದ್ದರೂ
   ಹೊಸದರ ನಿರೀಕ್ಷೆಯ
   ನಲಿವಿನ ನಡಿಗೆ.
   ಕಣ್ಣು ಹರಿದಾವು
   ಅತ್ತಿತ್ತ,
   ಹಳಬರ ಹುಡುಕುತ್ತ,
   ಒಳಗಿನ ಹುಮ್ಮಸ ಹೊರಗೂ.

ಆಹಾ..! ಗೆದ್ದೆನೆಂದು
ಬೀಗುವಂತಿಲ್ಲ,
ದಾರಿಯುದ್ದಕೂ
ಸಡಿಲವಾಗಿ ಹಿಡಿದ
ಮೆದು ಕೈ,
ಬಿಡಿಸಿಕೊಳ್ಳುವಾಗ
ಬಿಗಿಯಾಗಿದ್ದು .............
ಅಮ್ಮ ಮಗಳಿಗೆ ಮಾತ್ರ ಗೊತ್ತು.

ಇಂದು ನನ್ನ ಸೃಷ್ಟಿ ಶುಭದಾಯಿನಿಗೆ ಶಾಲೆ ಶುರು. ಪ್ಲೇಹೋಮು, ಎಲ್-ಕೆಜಿ ಮುಗಿಸಿ ಈಗ ಯೂ-ಕೆಜಿ.

2 comments:

Badarinath Palavalli said...

ಇಡೀ ಕವನವು ನನ್ನ ನಾದಿನಿಯ ಪಾಪು ಧೃತಿಯ ಮೊದಲ ದಿನ ಶಾಲೆಯತ್ತ ಪಯಣದ ಚಿತ್ರಣವುಚಿತ್ರಣವು ಕಣ್ಣ ಮುಂದೆ ಬಂದಂತಾಯಿತು.
ದೊದ್ದಪ್ಪಾ ನಾನು ಚ್ಕೂಲ್ಗೆ ಒಯ್ತೀನಿ
ಅಂದಂತಾಯಿತು! :)

sunaath said...

ನಮ್ಮೆಲ್ಲರ ಮಕ್ಕಳ ಮೊದಲ ಅನುಭವವನ್ನು ನೆನಪಿಸುವಂತೆ ಚಿತ್ರಿಸಿದ್ದೀರಿ.ಹೃದಯ ಮಿಡಿಯುವ ಕವನ.