Thursday, February 6, 2014

ಪರಪುಟ್ಟಿ..

ತೊರೆಪಕ್ಕದಿ
ಕಾಡ ಅಂಚಲಿ
ಹಸಿರಾಗಿ ಬೆಳೆದ ಮರದ
ಕೊಂಬೆತುಂಬ
ತಿಳಿಗುಲಾಬಿ ನೇರಳೆ ಹೂಗಳ
ಹೊತ್ತ ಆ ಗಿಡಗುಚ್ಛದ ಹಣ್ಣು
ಹೂರಸ ಸಿಹಿಸಿಹಿ.
ಬೆಳಗಿನ ಉಪಾಹಾರಕ್ಕೆ
ಅದನುಂಡ ಕಾಗಕ್ಕನ
ಕೊಕ್ಕಿಗೆ ಅಂಟಿತು ಬೀಜ
ಆಮೇಲಿಷ್ಟು ಹಾರಾಟ
ಅಲ್ಲಲ್ಲಿ ನೀರು ಎರಚಾಟ
ಬಿಸಿಲ ಪೊರೆವಾಟ
ಮುಗಿಸಿ
ಮಧ್ಯಾಹ್ನದೂಟ
ಇದೀಗ
ಇನ್ನೊಂದು ಹಣ್ಣಿನ ಮರ
ಬಲು ಜತನದಿ ಬೆಳೆಸಿದ ಕಸಿಮರ
ಕಾಟಲ್ಲ, ಹಾದಿಬದಿಯದಲ್ಲ
ಮನೆಯ ತೋಟದಿ
ಸುಪೋಷಣೆಯ ಎಳೆಮರ.
ಹಣ್ಣು ತಿಂದಾಯಿತು.
ಕೊಕ್ಕಲ್ಲಿ ಅಂಟಿದ್ದ ಬೆಳಗಿನ ಬೀಜ
ಮರದ ಕಾಂಡಕ್ಕೆ.
ವಾರ ಕಳೆಯಿತು.
ಬೀಜ ಮೊಳಕೆಯೊಡೆದು
ತೊಗಟೆಯ ಅಂಟಿ ಹಿಡಿದು
ಎಳೆ ಚಿಗುರು.
ವರ್ಷಗಳಳಿದವು
ಸುಪುಷ್ಟ ಮರದ
ಹೆಗಲೇರಿದ ಬೀಜಸಂತಾನ
ಈಗ ಮೈತುಂಬ.
ಮರದ ಜೀವರಸವುಂಡು
ಬೆಳೆಬೆಳೆವ ಬಂದಳಿಕೆ.
ಜೀವರಸವ ಹೀರಗೊಟ್ಟ
ಮರ ಈಗ ಮೊರೋಸ್ (morose).
ಎಳೆಬೀಜ, ಚಿಗುರು
ಬಣ್ಣ ಬಣ್ಣದ ಹೂಗುಚ್ಛ
ಹೊದ್ದ ಮೊದಲ ದಿನಗಳು
ಮುಗಿದು ಈಗ
ಮೈಸೋಲುವ ಕಾಲ.

ನಮ್ಮ ತನ
ಅರಿವಾಗುವ
ಚಣದ ಕಾಲದ ಮುಳ್ಳು ಬಲು ಚೂಪು.

ಅರಿವಿರದೆ ಹಬ್ಬಿ ಕೊರೆದೆ.
ಸಾಧ್ಯವಾದರೆ ಕ್ಷಮೆಯಿರಲಿ.

ದುಃಖ ಏನೆಲ್ಲ ಕಲಿಸುತ್ತದೆ!
ಎಂದೋ ಕಲಿತು ಮರೆತ
ಬಾಟನಿಯನ್ನೂ.
mistletoe
Web Courtesy: http://thetrustygardener.com

3 comments:

sunaath said...

ಮರ್ತ್ಯಲೋಕದ ಎಲ್ಲರಿಗೂ ದುಃಖ ಇರುವುದೇ. ದೇವರು ದುಃಖದ ಜೊತೆಗೆ ಕೈಯಾನಿಕೆಗಳನ್ನು ಕೊಟ್ಟಿರುತ್ತಾನೆ.
"If winter comes
Can spring be far behind?"

ಸುಮ said...

ವೈಜ್ಞಾನಿಕ ಸತ್ಯವನ್ನು ಮತ್ತು ಅದರೊಂದಿಗೇ ಬದುಕಿನ ಸತ್ಯವನ್ನೂ ತೆರೆದಿಡುವ ಕವನ , ಇಷ್ಟವಾಯ್ತು .

Badarinath Palavalli said...

ಯಾರಿಗಿಲ್ಲ ನೋವು
ಯಾರಿಗಿಲ್ಲ ಸಾವು
ಎನ್ನುತ್ತಾರೆ ಆಧುನಿಕ ವಾಜ್ಮಿ ಹಂಸಲೇಖ ಅವರು.

ಬಾಟನಿ ನೆನಪಿಸುತ ಮೊರೋಸ್ (morose)ಬಿಡಿಸಿಟ್ಟ ನಿಮಗೆ ಶರಣು.