Tuesday, July 2, 2013

ಹೂ-ಬಲ...

ಸಂಜೆಯಿಡೀ..
ಭೋರೆಂದು ಸುರಿವ ಮಳೆಗೆ
ಗೋಣು ಬಗ್ಗಿಸಿ ನಿಂತ
ಪಾರಿಜಾತ ಮರದ
ಗೆಲ್ಲುಗಳಲ್ಲಿ ಅಲ್ಲಲ್ಲೇ
ಅರೆಬಿರಿವ ಪಾರಿಜಾತ..

ಹೂಬಿರಿವ ಸದ್ದು ಕೇಳುವುದಿಲ್ಲ,
ಕಿವಿಗೆ ಸ್ಕಾರ್ಫ್ ಬಿಗಿಯಲಾಗಿದೆ.

ಸುರಿವ ಮಳೆಯ ತಡೆದ
ಎಳೆಮೊಗ್ಗ ಎಸಳುಗಳು
ಬೆಳಗು ಮುಂಚಿನ ನಸುಗಾಳಿಗೆ
ಉದುರಿದವು ನೆಲದೊಡಲಿಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ

ಗಂಧಶಾಲಿನೀ ಬೆಳಗು
ಎಂದು ಕವಿಯ ಮೆಸೇಜು,
ದಾರಿ ಬದಿಯ ಮರದ ಕೆಳಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ
ತುಂಬುತ್ತಿರುವುದು
ಆಯುವ ಅಜ್ಜನ ಜಾಲರಿಬುಟ್ಟಿ.

ಗಿಡದಿಂದ, ನೆಲದಿಂದ,
ಬುಟ್ಟಿಯಿಂದ, ದೇವರ ಪದತಳದಿಂದ
ಮಣ್ಣು ಸೇರಿದ ಹೂವಿ-
ನ ಗಂಧ ಗಾಳಿ ಪಾಲಾದರೂ
ಭಾವಕೋಶದಿ ನಿತ್ಯ ಗಂಧಿ.

ಸುರಿಮಳೆಗೆ ಬಗ್ಗಿ ನಿಂತು
ಭರಿಸಿದ ಹೂವು
ನಸುಗಾಳಿಗೆ ಉದುರಿತು
ಎಂಬುದು
ಮಾರಲ್ ಆಫ್ ದ ಸ್ಟೋರಿ.

4 comments:

sritri said...

ಬಹಳ ದಿನಗಳ ನಂತರ ಓದಲು ಸಿಕ್ಕ ‘ಹೂ ಕವನ’! ಖುಷಿಯಾಯಿತು! :-)

ಹೂಬಿರಿವ ಸದ್ದು ಕೇಳುವುದಿಲ್ಲ,
ಕಿವಿಗೆ ಸ್ಕಾರ್ಫ್ ಬಿಗಿಯಲಾಗಿದೆ.

ಸುಂದರವಾದ ಸಾಲು! ಪುಟ್ಟ ಸಾಲು ಅಪಾರ ಅರ್ಥ ಹೊಮ್ಮಿಸುತ್ತಿದೆ.

ಕನಸು ಕಂಗಳ ಹುಡುಗ said...

ಗಂಧಶಾಲಿನೀ ಬೆಳಗು
ಎಂದು ಕವಿಯ ಮೆಸೇಜು,
ದಾರಿ ಬದಿಯ ಮರದ ಕೆಳಗೆ
ಬಿದ್ದಿದ್ದು ಹೂವು
ತೇಲಿದ್ದು ಗಂಧ
ತುಂಬುತ್ತಿರುವುದು
ಆಯುವ ಅಜ್ಜನ ಜಾಲರಿಬುಟ್ಟಿ.

ಚಂದವಿದೆ...
ಹಾಗೆಯೇ ಕೊನೆಯದಾಗಿ ಮಾರಲ್ ಆಫ್ ದಿ ಸ್ಟೋರಿಯ ಸಾಲುಗಳದ್ದೂ ಹೊಸ ಕಲ್ಪನೆ.......
ಎಲ್ಲವೂ ನವ್ಯ.

Badarinath Palavalli said...

ಮಣ್ಣು ಸೇರಿದ ಹೂವಿ-
ನ ಗಂಧ ಗಾಳಿ ಪಾಲಾದರೂ
ಭಾವಕೋಶದಿ ನಿತ್ಯ ಗಂಧಿ.

ತುಂಬಾ ಇಷ್ಟವಾಯಿತು.
ಬದುಕನ್ನು ಇಷ್ಟು ಚೆನ್ನಾಗಿ ಅರ್ಥೈಸಬಹುದು ಎಂದೂ ತೋರಗೊಟ್ಟಿರಿ.

sunaath said...

Dear Sindhu,
Could not visit the blogs due to computer problem. Just read your poem from some other place. I am delighted. The poem is as fragrant as the Parijata flower!