Wednesday, May 30, 2012

ಅರಿವು

ನೀನು
ಭ್ರಮೆಗಳ ಸಿಪ್ಪೆಗಳನ್ನೆಲ್ಲಾ
ಒಂದೊಂದಾಗಿ ಸುಲಿದುಬಿಟ್ಟೆ.
ಈಗ ನೋಡು
ಹಣ್ಣಾಗದ,
ರುಚಿಹಿಡಿಸದ
ಸತ್ಯವೆಂಬೋ ಕಾಯಿ 
ಇನ್ನೆಂದೂ ಹಣ್ಣಾಗುವುದೂ ಇಲ್ಲ!
ಒಂದಿಷ್ಟು ಭ್ರಮೆಯ
ಆವರಣ ಹಾಗೆ ಇದ್ದಿದ್ದರೆ
ಕನಸು ನಿರೀಕ್ಷೆಗಳ
ಧೂಪವಿಟ್ಟು
ಹಣ್ಣಾಗಿಸಬಹುದಿತ್ತೇನೋ
ಎಂಬ ಆಸೆಯ
ತಲೆಯ ಮೇಲೆ
ರಪ್ಪನೆ ಹೊಡೆಯುತ್ತದೆ
ಹೂವು ಹಣ್ಣು ಸಹಜವಾಗಿ
ಆಗಬೇಕು
ಒತ್ತೆಹಾಕಿ ಅಲ್ಲ ಎಂಬ
ನನ್ನ-ನಿನ್ನ ನಂಬಿಕೆ.
ಉಹ್
ನಹಿ ಜ್ಞಾನೇನ ಸದೃಶಂ!
ಅರಿವಿಗೆ ಹಾತೊರೆಯುವಾಗ
ಕಣ್ಣು ಕುಕ್ಕುವ ಬೆಳಕು
ಮತ್ತು ಕುರುಡುತನ
ಎರಡಕ್ಕೂ
ತಯಾರಿರಬೇಕು.
and some times...
ಪ್ರೀತಿ ಅರಿವಿನ
ಇನ್ನೊಂದು ರೂಪ!

4 comments:

Badarinath Palavalli said...

ಒತ್ತಡಕ್ಕೆ ಸಿಲುಕಿಸಿ ಪ್ರೀತಿ ಪಡೆದುಕೊಳ್ಳುವುದು ಅಸಾಧ್ಯ ಎನ್ನುವುದನ್ನು ಎಷ್ಟು ಮನೋಜ್ಞವಾಗಿ ಚಿತ್ರಿಸಿಕೊಟ್ಟಿದ್ದೀರಿ ಮೇಡಂ.

ಸೂಪರ್ರು...

sunaath said...

ಇದು ಕೆಳೆತನದ ಒಂದು ಅನಿವಾರ್ಯ ಘಟ್ಟ. ಪ್ರೀತಿ ಎಲ್ಲ ಸತ್ಯವನ್ನು, ಎಲ್ಲ ಅರಿವನ್ನು ಮೀರಿ ನಿಲ್ಲುತ್ತದೆ ಎನ್ನುವ ಅರಿವೇ, ಮಾಗುವಿಕೆಯನ್ನು ಸೂಚಿಸುತ್ತದೆಯೆ?
ಭಾವನೆಗಳ ಪಾಕ--ನಿಮ್ಮ ಕವನ.

Badarinath Palavalli said...

ಹೋದ ಶುಕ್ರವಾರ ವಿ.ಕ ದಲ್ಲಿ ನಿಮ್ಮ ಬ್ಲಾಗ್ ಲಿಂಕ್ ನೋಡಿ, ಓದಿ ನೋಡೋಣ ಅಂದುಕೊಂಡೆ.

ಓದಿದ ನಂತರ ಒಳ್ಳೆಯ ಬ್ಲಾಗ್ ಲಿಂಕ್ ಹಾಕಿದ್ದಾರೆ ಅಂತ ಖುಷಿಯಾಯಿತು ಮೇಡಂ.

ನನ್ನ ಬ್ಲಾಗಿಗೂ ಸ್ವಾಗತ.

ಸಿಂಧು sindhu said...

ಬದರಿನಾಥ್,
ಧನ್ಯವಾದ. ಓದುತ್ತಿರುತ್ತೇನೆ ನಿಮ್ಮ ಬ್ಲಾಗನ್ನು.

ಸುನಾಥ ಕಾಕಾ,
ಅರಿವು ಅರಿತ ಮೇಲೆ ಮುಂದೇನು? ಅರಿವಿನ ಸುಳಿವಷ್ಟೇ ಬದುಕಿನ ದಾರಿ ಎಂದು ತೋರುತ್ತದೆ ನನಗೆ.
ಅರ್ಹಂತನ ಮಾತು ಬೇರೆ. ನಾವು ಪಾಥೇಯರು!
ಈ ಮಾತಿರಲಿ.
ಮಾಗುವಿಕೆಯು ಕವಿತೆ ಬರೆಯುವ ಬಗ್ಗೆ ಅನುಮಾನವಿದೆ ನನಗೆ. :) ಮಾಗಿದ್ದು ಹಣ್ಣಾಗಿ ಸುಮ್ಮನೆ ಕೂತಿರುತ್ತದೆ. ಹತ್ತಿರಬಂದು ಹಂಚಿಕೊಂಡು ಹೋಗಲಿ ಬೇಕಾದವರು ಅಂತ. ಅಜ್ಜ-ಅಜ್ಜಿಯರ ಹಾಗೆ ಅಲ್ವಾ

ಪ್ರೀತಿಯಿಂದ,ಸಿಂಧು