ಮುದ್ದಿಸಿ ಲಾಲಿಸಿ
ನೇರ ನಿಂತ ಬೆನ್ತಟ್ಟಿ
ಸೆರಗನ್ನು ಉತ್ತರೀಯಕ್ಕೆ ಗಂಟು ಕಟ್ಟಿ
ಹಾಲು - ನೀರು ಧಾರೆಯೆರೆದು
ಕೊಟ್ಟದ್ದೊಂದು ಉದ್ದ ಹಳಿ,
ಕಟ್ಟಿದ ಗಂಟಿನೊಂದಿಗೇ
ಸೆಳೆದುಕೊಂಡು, ಪಕ್ಕಕೆ ನಿಂದು
ಬೆನ್ನು ಸವರಿ,
ಒಳಸೇರಿಸಿಕೊಂಡ ಹಾಗೆ
ಅನಿಸುವಂತೆ ಮಾಡಿದ್ದೊಂದು
ಉದ್ದ ಹಳಿ,
ಎರಡರ ಮಧ್ಯದಲ್ಲಿ
ಎಷ್ಟೊಂದು ಕೂಡುಕೊಳೆ
ಸೇರಿಸುವ ಪುಟ್ಟ ಪುಟ್ಟ ಕಂಬಿ
ಅಂಕು ಡೊಂಕಾಗಿ
ಹರಿವ ಪಯಣದ
ಉದ್ದ ಕಾಯುವ ಸಮಾನಾಂತರ ರೇಖೆಗಳು
ಈ ಪಯಣವ ಹೊತ್ತ
ಭುವಿಗೇನು ದಕ್ಕಿದ್ದು?
ದಿನದಿನದ ಧಡಭಡ ಪಯಣ
ವೇಳಾಪಟ್ಟಿಯ ನಿಭಾಯಿಸುವ
ನಿಲ್ದಾಣ
ಹತ್ತಿಳಿವವರ ಅನುರಣನ.
ಮುದ್ದು ಮಗುವಿರುವಳಲ್ಲ
ಎಂದಿರೋ
ಇಲ್ಲ ಅದು ಹಾಗಲ್ಲ
ಅಮ್ಮನಿಲ್ಲದೆ ಇರುವವಳಲ್ಲ.
ಯಾಕೆ ಕೊಡಬೇಕು
ಹೆತ್ತ ಹೊಟ್ಟೆಗೆ ಸಂಕಟ??
ಹೆರಿಸುವ ಪುರುಷಾರ್ಥಕ್ಕೆ ಧರ್ಮಸಂಕಟ?
ಪೊರೆದು ತೊರೆದ ಊರಿನ ನೆನಪು
ಗಾಢವಾಗಿ ಒತ್ತಿ ಕಾಡುತ್ತವೆ
ಆದರೇನು ಮಾಡಲಿ
ಹೊಕ್ಕ ಊರಿನ
ಪ್ರಭಾವಳಿ ಮೀರಲಾರೆ
ಇಲ್ಲಿರಲಾರೆ
ಅಲ್ಲಿಗೆ ಹೋಗಲಾರೆ
ಹೋದರೆ ಎದೆಗವಚಿಕೊಳ್ಳುವ
ಮನೆಯ ಮರುಕದ ಭಾರ ಹೊರಲಾರೆ
ಹೊನ್ನಮ್ಮನೋ ಚೆನ್ನಮ್ಮನೋ
ಎಲ್ಲರನ್ನೂ ಪೊರೆದು, ಕೊರೆದು, ತೊರೆದ
ಗಂಡುಮೆಟ್ಟಿನ ನೆಲದ ಸಂಸ್ಕೃತಿಯೇ
ಹೇಗೆ ಬಿಡಲಿ ನನ್ನ
ಮುದ್ದು ಮಗಳನ್ನ ನಿನ್ನ ಆರೈಕೆಗೆ?!
ಅದೋ
ಸಂಜೆಗತ್ತಲಲ್ಲಿ
ನಿಲ್ದಾಣದಿಂದಾಚೆ
ಬೆಳಕು ಬೀಳದ ದೂರದಲಿ
ಹೆತ್ತ ಮಗುವ
ಬಿಗಿದಿದ್ದೇನೆ ಹೊಟ್ಟೆಗೆ
ಕೂಗು ಹೊರಬರದಿರಲೆಂದು
ಕರ್ಚೀಫು ತುರುಕಿದ್ದೇನೆ,
ಉಕ್ಕಿ ಬರುವ ದುಃಖಕ್ಕೆ
ಅಸಹಾಯ ರೋಷದ ಆಸರೆಯಿಟ್ಟು
ನಿಂತಿದ್ದೇನೆ-
ಕೂಡಿ ಕಳೆವ
ಕಂಬಿಗಳ ಬಳಸಿದ
ಸಮದೂರದ ಹಳಿಗಳ ಮೇಲೆ
ಧಡಬಡ ಸದ್ದು..
ಆಹ್ ಇಲ್ಲೆ
ರಭಸದ ಬೆಳಕು ಶಬ್ಧ
ಅಸಹನೀಯ ನೋವು
ಮುಗಿದ ಕತೆ
ನಿಶ್ಯಬ್ಧ ನಿರಾಳ.
ಕೆಂಪು ಕರಗಿದ ಸಂಜೆ ಮುಗಿದು
ಚುಕ್ಕಿಯೂ ಮಿನುಗದ ರಾತ್ರಿಯಿಡೀ
ಧಾರಾಕಾರ ಮಳೆ
ಬೆಳಿಗ್ಗೆ
ಅಳಿದುಳಿದ ಚೂರುಪಾರಿಗೆ
ಶವಸಂಸ್ಕಾರ.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
2 comments:
ಈ ಕವನವು ದುಃಖಕ್ಕೆ ಕಟ್ಟಿದ ಗೋರಿಯಂತಿದೆ.
ಆದರೇನು, ಗೋರಿಯೂ ಸಹ ತಾಜಮಹಲ್ ಆಗಬಲ್ಲದು!
ಯಾಕೋ ಮನಸು ವಿಹ್ವಲವಾಯಿತು. ವೃದ್ಧಾಪ್ಯವೇ ಶಾಪವಾಗುತ್ತಿರುವ ಈ ಕಾಲದಲ್ಲಿ ಇದು ಹಲವು ಕಠಿಣ ಹೃದಯಿಗಳಿಗೆ ಪಾಠದಂತಹ ಕವನ.
ಒಳ್ಳೆಯ ಕವನ.
ನನ್ನ ಇದೇ ಹೆಸರಿನ ಕವನವನ್ನೂ ಓದಿರಿ, ನಿಮ್ಮ ಅಭಿಪ್ರಾಯಗಳೇ ನನಗೆ ದಾರಿ ದೀಪ. ನನ್ನ ಸಂಧ್ಯಾರಾಗದ ಲಿಂಕ್:
http://badari-poems.blogspot.in/2012/03/blog-post_30.html
Post a Comment