Tuesday, January 10, 2012

ಈ ಹುಚ್ಚಿಗೆ ಹೆಸರು ಬೇಕೆ?

ಹಿತವಾದ ಕತ್ತಲ ಇಳಿಸಂಜೆ
ಮಾತುಕತೆ ಮುಗಿಸಿ ಹಗುರಾಗಿ
ಬೀಸುಹೆಜ್ಜೆಯ ಲಘುನಡಿಗೆಯಲಿ
ಬೇಲಿ ದಾಟುವಾಗ ಮನೆಯಂಗಳದಿ-
ಪುಟ್ಟಗೆ ಉರಿವ
ತುಳಸಿಯ ದೀಪ
ಹಚ್ಚಿಡುವ ನೀನು,
ಸುಖಾಸುಮ್ಮನೆ ಕಡೆಗಣ್ಣಲಿ
ನೋಡಿದ್ಯಾಕೆ?

ದೀಪದ ಬೆಳಕನ್ನಷ್ಟೆ ತುಂಬಿಕೊಂಡು
ಮುನ್ನಡೆಯಲಿದ್ದ ನನ್ನ
ಜಗ್ಗಿ ನಿಲ್ಲಿಸಿ, ಮುಗ್ಗರಿಸಿ
ತಿರುತಿರುಗಿ ನೋಡುತ್ತ
ಹೊರಡಲಾರದೆ ಹೊರಟೆ..
ಈಗ ನೋಡು-
ಮಳೆ ನಿಂತ ತಂಪಲ್ಲು
ಹೊತ್ತಿ ಉರಿವ ಒಳಗು!
ನಿನಗೇನೂ..ಅಮ್ಮನ ಕರೆಗೆ
ಜೋಡು ಜಡೆಯ ಬೀಸುತ್ತ
ಕುಣಿವ ಹೆಜ್ಜೆಗಳಲ್ಲಿ ಓಡುತ್ತ
ಹೋಗುವ ಹೊತ್ತು;
ನಾನಿಲ್ಲಿ
ಹೆಜ್ಜೆ ಇಲ್ಲಿಡಲಾ ಬೇಡವಾ
ಯೋಚಿಸುತ್ತಾ
ಕಳೆಯದೇ ಜಾರುವ ಹೊತ್ತನ್ನ
ತುಂಬಲಾರದೆ ನೋಯುತ್ತಾ..

ಹೋಗೇ ಮರಿರಾಕ್ಷಸೀ,
ಇನ್ನೊಮ್ಮೆ ನಿನ್ನ ಯೋಚನೆ ಸುಳಿದರೆ ಕೇಳು
ನಿನ್ನ ದೀಪದುರಿಯ ಕುಡಿಗಣ್ಣು
ನನ್ನ ಕೆನ್ನೆಯ ಕತ್ತಲ ಮೇಲೆ ಪ್ರತಿಫಲಿಸುವವರೆಗೂ..
ಜನ ಹೇಳುತ್ತಾರೆ
ಪ್ರೀತಿ ಪ್ರೇಮ ಬರಿಯ ಮರುಳು..
ಹೌದಾ..?
ಅವರಿಗೇನು ಗೊತ್ತು
ನಿನ್ನ ಕಣ್ಣಿನ ಅಮಲು.

6 comments:

sunaath said...

ಸಿಂಧು,
ಬಹಳ ದಿನಗಳಿಂದ ಯೋಚಿಸುತ್ತಿದ್ದೆ:‘ನಿಮ್ಮ ಕವನದ ಸ್ವರೂಪ ಏನು?’ಎಂದು. ಈದಿನ ಹೊಳೆಯಿತು:ಬಾಹ್ಯರೂಪ ಅಡಿಗರದು ;ಅಂತಃಸತ್ವ ಕೆ.ಎಸ್.ಎನ್. ಅವರದು! Of course, ಇದಲ್ಲದೆ, ಬೇರೆ ರೂಪಗಳೂ ಇರಬಹುದು!

Badarinath Palavalli said...

ನಿನ್ನ ಕಣ್ಣಿನ ಅಮಲು ಎನ್ನುವಲ್ಲಿ ಕವನ ಗೆದ್ದು ಬಿಡುತ್ತದೆ.

ಉತ್ತಮ ಕವನ ವಾಚನಕ್ಕೆ ಸಿಕ್ಕಿದ್ದು ನಮ್ಮ ಪುಣ್ಯ.

ನನ್ನ ಬ್ಲಾಗಿಗೂ ಸ್ವಾಗತ.

nenapina sanchy inda said...

ah!!! lovely!!

Swarna said...

Wonderful lines.

Unknown said...

ಈ ಹುಚ್ಚು.,. ಅಮಲೇರಿಸುತ್ತಿದೆ..

ಸಿಂಧು sindhu said...

@ ಸುನಾಥ : ಏನು ಹೇಳಲೂ ತೋಚುತ್ತಲೇ ಇಲ್ಲ. ಇಷ್ಟು ದಿನಗಳಾದ ಮೇಲೂ :)
@ ಬದರಿನಾಥ್: ಥ್ಯಾಂಕ್ ಯು. ಓದುತ್ತಿರುತ್ತೇನೆ ನಿಮ್ಮ ಪೋಸ್ಟ್ಗಳನ್ನು.

@ ಮಾಲತಿ ಅಕ್ಕ : ಖುಶೀ. :)
@ ಗೋಲ್ಡ್ 13 : ಥ್ಯಾಂಕ್ ಯು
@ ರಾಜ್: ಮತ್ತು(ಅಮಲು) ಕೆಲವು ಸಲ ಗಮ್ಮತ್ತಾಗುತ್ತದೆ.