Monday, December 26, 2011

ಟುಪ್ಪೂ ಕಥಾ ಸರಿತ್ಸಾಗರದ ಕೆಲವು ಬಿಂದುಗಳು!

ತುಂಬ ದಿನಗಳಿಂದಲೂ ನನ್ನ "ಟುಪ್ಪೂ ಕಥಾಸರಿತ್ಸಾಗರ"ದ ದಂಡೆಗೆ ಬರಲಿಕ್ಕಾಗಲಿಲ್ಲ. ಕಥೆಗಳು ಕಣ್ಮುಂದೆ ಬಿಚ್ಚಿಕೊಳ್ಳುತ್ತಾ ಮಂತ್ರಮುಗ್ಧವಾಗಿಸುವ ಕ್ಷಣಗಳಲ್ಲಿ ಮೈಮರೆತಿದ್ದೆ ನಾನು. ಅದನ್ನು ಅಕ್ಷರಕ್ಕಿಳಿಸುವ, ನನ್ನ ಅಕ್ಕ,ಗೆಳತಿಯರು ಕೇಳುವ ಹಾಗೆ ಕ್ಯಾಮೆರಾಕ್ಕಿಳಿಸುವ, ರೆಕಾರ್ಡ್ ಮಾಡುವ ಯಾವ ಎಚ್ಚರವೂ ಇಲ್ಲದ ಸುಖವಾದ ಮೈಮರೆವು. ಕೆಲವು ನೆನಪುಗಳು ಅವು ಆದ ವರ್ಷದಲ್ಲಾದರೂ ದಾಖಲಾಗಲಿ ಎಂಬ ಆಸೆಯಿಂದ ಈ ಬರಹ. ಅಮ್ಮಂದಿರೆಂದರೆ ಹೀಗೇ ಮಕ್ಕಳ ಬಾಲ್ಯದಲ್ಲಿ ದಿನವೂ ಮಾತನಾಡಿಸಿದರೂ ನಿಮಗೆ ಒಂದೊಂದು ಹೊಸ ಮುದ್ಗಥೆ ಕೇಳಲು ಸಿಗುತ್ತಿರುತ್ತದೆ. ಅವಳ ಮಾತು ಕತೆ,ತುಂಟತನ,ಮುದ್ದುಗರೆಯುವಿಕೆ, ಆಟ,ನಲಿವು,ಸಿಡುಕು ಸೆಡವು, ಕಾಮಿಡಿಗಳಲ್ಲಿ ಕೆಲವು ನಿಮ್ಮ ಅವಗಾಹನೆಗಾಗಿ ಮತ್ತು ಮುಂದೆಂದೋ ಅವಳು ಓದಿದರೆ, ಅವಳ ಪುಟ್ಟಬಾಯಿ ಅಗಲವಾಗಿ ನಗುವಿನ ಹೂ ತುಂಬಲಿಕ್ಕಾಗಿ.

ರಾಜ್ ಕುಮಾರ ನನ್ನ ಮಗಳ ನೆಚ್ಚಿನ ಮಾಮ. ಅವಳು ಅವನನ್ನು ಕರೆಯುವುದೇ "ಎಲ್ಲೂ ಹೋಗಲ್ಲ ಮಾಮ" ಎಂದು. ಅವನ ಹಳೆಯ ಕೆಲವು ಹಾಡುಗಳು ಅವಳ ಫೇವರಿಟ್ಟು. ನಗುನಗುತಾ ನಲಿ, ಬಾನಿಗೊಂದು ಎಲ್ಲೆ ಎಲ್ಲಿದೆ, ಆಗದು ಎಂದು, ಸಿಹಿಮುತ್ತು ಸಿಹಿಮುತ್ತು ನಂಗೊಂದು, ಥೈ ಥೈ ಬಂಗಾರಿ, ಇಫ್ ಯೂ ಕಮ್ ಟುಡೇ, ಒಂದು,ಎರಡು ಮೂರು ನಾಕು ಆದ್ಮೇಲೆ ಏನು, ಲಾಲಿ ಲಾಲಿ ಸುಕುಮಾರ.. ಇತ್ಯಾದಿ. ರಾಜ್ ಕುಮಾರ್ ನ ಯಾವ ಹಾಡು ಟೀವಿಯಲ್ಲಿ ಬಂದರೂ ಹತ್ತಿರ ಹೋಗಿ ನಿಂತು ನೋಡುತ್ತಾ ಕೇಳುತ್ತಾ ಇರುತ್ತಾಳೆ. :) ಮೊದಮೊದಲು ನಾವು ಅವಳನ್ನ ಬೆಳಗ್ಗೆ ಪ್ಲೇಹೋಮಿಗೆ ಬಿಡುವಾಗ, ಮೇಲೆ ಆಕಾಶ ನೋಡಿ ಟಾಟಾ ಮಾಡುತ್ತಿದ್ದಳು. ಏನೆಂದು ಕೇಳಿದರೆ, ನಕ್ಷತ್ರವಾಗಿರುವ ಎಲ್ಲೂ ಹೋಗಲ್ಲ ಮಾಮಂಗೆ ಟಾಟಾ ಎಂದು ವಿವರಿಸಿದ್ದಳು.
ಅಮರಚಿತ್ರಕಥೆಗಳಲ್ಲಿ ಭಕ್ತ ಪ್ರಹ್ಲಾದ ಅವಳಿಗಿಷ್ಟವಾದ ಕಥೆಗಳಲ್ಲಿ ಒಂದು. ಅವಳು ಪುಟ್ಟ ಮಗುವಾಗಿದ್ದಾಗಿನಿಂದ ಈಗ ಮೂರುವರ್ಷದವರೆಗೆ ಮೂರು ಪ್ರತಿಗಳಲ್ಲಿ ಆ ಪುಸ್ತಕದ ಕಥೆ ಹರಿದಿದೆ( ಅಕ್ಷರಶಃ ಮೊದಲ ಎರಡು ಪುಸ್ತಕಗಳು ಹರಿದು ಚಪ್ಪೆದ್ದು ಹೋಗಿವೆ).
ಒಂಟಿಕಾಲಿನಲ್ಲಿ ತಪಸ್ಸು ಮಾಡುವ ಹಿರಣ್ಯಕಶಿಪು, ತಂಬೂರಿ ನಾರದರ ನಾರಾಯಣ, ನಾರಾಯಣ, ಲಾಲಿ ಲಾಲಿ ಹೇಳುವ ಕಯಾದು, ಪ್ರಹ್ಲಾದನ ಕೈಮುಗಿದ ಹರಿಭಜನೆ, ಕಂಬ ಒಡೆಯುವ ಹಿರಣ್ಯಕಶಿಪುವಿನ ಗದಾಪರ್ವ, ಹೊಟ್ಟೆ ಸೀಳುವ ನರಸಿಂಹ ಮತ್ತು ಅವನ "ಎರಡೂ ಅಲ್ಲ" ಪ್ರಶ್ನೋತ್ತರಗಳು, ಇವು ನಮ್ಮನೆಲ್ಲ ರಂಜಿಸುವ ಅವಳ ಅಭಿನಯದ ಘಳಿಗೆಗಳು. ಹೀಗಿರಲಾಗಿ ಹೋದತಿಂಗಳು ಅವಳು ರಾಜ್ಕುಮಾರ್ ಅಭಿನಯದ ಭಕ್ತಪ್ರಹ್ಲಾದ ಸಿನಿಮಾವನ್ನು ಟೀವಿಯಲ್ಲಿ ಎರಡು ಮೂರು ಸಲ ನೋಡಿಬಿಟ್ಟಳು. ಮೊದಲ ಸಾರಿ ನರಸಿಂಹ ರಾಜಕುಮಾರ್ ನನ್ನ ಎತ್ತಿ ಕೊಂಡು ಹೊಟ್ಟೆ ಸೀಳುವಾಗ ಅವಳಿಗೆ ಭಯವಾಗಿ ಅಳು ಬಂತು. ನರಸಿಂಹನ ಮೇಲೆ ಕೋಪವೂ ಬಂತು. ಎಲ್ಲೂ ಹೋಗಲ್ಲ ಮಾಮ ಪಾಪ ಎಂದುಕೊಂಡು ನೆನೆಯುತ್ತಿದ್ದಳು. ಆಮೇಲೆ ಎರಡು ಸಲ ನೋಡುವಾಗ ಎಲ್ಲೂಹೋಗಲ್ಲ ಮಾಮ ಹಿರಣ್ಯಕಶಿಪುವೇ ಆಗಿ ಕಂಡುಬಂದಿದ್ದರಿಂದ, ಅವಳು ಮತ್ತೆ ವಾಪಸ್ ಪ್ರಹ್ಲಾದನ ಪರವಾಗಿದ್ದಾಳೆ. ಇದೆಲ್ಲ ಹೋಗಲಿ ನಾನು ಅವಳಿಗೆ ಅವಳ ಪೂರ್ತಿ ಹೆಸರು ಸೃಷ್ಟಿ ಶುಭದಾಯಿನಿ... .ಮುದ್ದು ರಾಕ್ಷಸಿ ಎಂದು ಹೇಳಿಕೊಟ್ಟಿದ್ದೆ. ಮೊದಮೊದಲು ಹಾಗೇ ಹೇಳುತ್ತಿದ್ದಳು. ಆಮೇಲೆ ನಾನು ಮುದ್ದು ರಾಕ್ಷಸಿ ಎಂದು ಕರೆದರೆ ನಗುತ್ತಿದ್ದಳು. ಆದರೆ ಭಕ್ತಪ್ರಹ್ಲಾದ ನೋಡಿದಾಗಿನಿಂದ ನಾನು ಮುದ್ದು ರಾಕ್ಷಸಿ ಎಂದು ಕರೆದರೆ ಕೋಪವೇ ಬಂದುಬಿಡುತ್ತದೆ. ಮೊದಲು ಸಿಡುಕಿ, ಆಮೇಲೆ ಅತ್ತು, ಕೊನೆಗೆ ಪುಸಲಾಯಿಸುತ್ತಾಳೆ. ಹಾಗೆ ಕರೆಯಬಾರದು ಎಂದು. :) ಯಾಕೇಂತ ಕೇಳಿದರೆ ರಾಕ್ಷಸ ಮಕ್ಕಳು ಕರ್ಕಶವಾಗಿ ಹಾಡು ಶ್ಲೋಕ ಹೇಳುತ್ತಾರೆ ಅಂತೆ!. ನಾನು ಕೈಮುಗಿದೆ.

ಅವಳಿಗಿಷ್ಟವಾದ ಇನ್ನೊಂದು ಅಮರಚಿತ್ರಕತೆ (ನಂಗೂ ತುಂಬ ಇಷ್ಟ) "ನನ್ನ ಗೋಪಾಲ" ಈ ಕಥೆಯನ್ನು ನಾನು ತುಂಬ ದಿವಸಗಳ ಕಾಲ ಅವಳನ್ನು ರೆಡಿ ಮಾಡಲು ಉಪಯೋಗಿಸುತ್ತಿದ್ದೆ. ಆ ಕಥೆಯಲ್ಲಿ ಗೋಪಾಲನಿಗೆ ಅಮ್ಮ ಸ್ನಾನ ಮಾಡಿಸಿ, ಅಂಗಿ ಹಾಕಿ, ಕಾಲ್ಚೀಲ ಹಾಕಿ, ತಲೆಬಾಚಿ ಶಾಲೆಗೆ ಕಳಿಸ್ತಾರೆ. ಅವಳನ್ನು ರೆಡಿ ಮಾಡುವಾಗ ಈ ರೆಫರೆನ್ಸ್ ಒಳ್ಳೆ ಸಹಾಯ ಮಾಡುತ್ತಿತ್ತು. ಈಗ ಅವನು ಕಾಲ್ಚೀಲ ಹಾಕಿಯೇ ಇಲ್ಲ, ಚಡ್ಡಿ ಇಲ್ಲ ಬರಿಯ ಪಂಚೆ, ಎಲ್ಲಿ ತಲೆ ಬಾಚ್ತಾ ಇದಾರೆ ತೋರ್ಸು ಅಂತೆಲ್ಲ ಕೇಳುತ್ತಾಳೆ. ನಾನು "ಚಿತ್ರದಲ್ಲಿ ಕಾಣಿಸದ ಕತೆಯಲ್ಲಿ" (ಎಲ್ಲ ಚಿತ್ರಗಳಾಚೆಗಿನ ಚಿತ್ರ!) ಎನ್ನುವ ಸಬೂಬಿನೊಂದಿಗೆ ಮ್ಯಾನೇಜ್ ಮಾಡ್ತಾ ಇದೀನಿ. ಸದ್ಯಕ್ಕೆ ಇದು ಕೆಲಸ ಮಾಡುತ್ತಿದೆ. ಒಬ್ಬಳೆ ಹೋಗುವಾಗ ತಾನು ಕೃಷ್ಣಮಾಮಿಯನ್ನು ಕರೆಯುವುದಾಗಿಯೂ ಆಗ ತನಗೆ ಭಯ ಆಗುವುದಿಲ್ಲವೆಂದೂ ಅವಳೂ ಹೇಳುತ್ತಿರುತ್ತಾಳೆ. ಇದರ ಸತ್ವ ನಂಗೆ ಗೊತ್ತಿಲ್ಲ. ಯಾಕೆಂದರೆ ಬಾಗಿಲಿಂದ ಆಚೆ ಹೋದಕೂಡಲೆ ಅಮ್ಮನ ಕೈಬಿಡುವುದಕ್ಕೆ ಗೊತ್ತಿಲ್ಲ ನಮ್ಮ ದೇವರಿಗೆ.
ಇದರ ಮಧ್ಯೆ ದಿನಾ ಅಮ್ಮಮ್ಮ ಹೇಳುವ ಕಿಷನನ ಕತೆಗಳು ಅಂದ್ರೆ ನಮ್ಮಗೂಗೆ ಸಿಕ್ಕಾಪಟ್ಟೆ ಇಷ್ಟ. ಅವಳ ತುತ್ತಿನ ಚೀಲ ತುಂಬುವುದೆ ಈ ಕಥೆಗಳಿಂದಾಗಿ. ಅದರ ಗುಂಗಿನಲ್ಲಿ ನಂಜೊತೆ ಮನೆಗೆ ಬರುವವಳು ದಿನಾ ಬೆಣ್ಣೆ ಮಡಿಕೆಯೊಡೆಯುತ್ತಾ, ಕುರ್ಚಿ ಸಂದಿಯಲ್ಲಿ ಅಡಗಿಕೊಳ್ಳುತ್ತಾ, ಮೃಣ್ಮಯ ಬಾಯನ್ನು ತೋರುತ್ತಾ, ಕಿರುಬೆರಳಿನಲ್ಲಿ ಗಿರಿಯನ್ನೆತ್ತುತ್ತಾ ಇರುತ್ತಾಳೆ. ಯಾವುದಕ್ಕಾದರೂ ನಾನು ಬೈದರೆ ನಾನು ತುಂಟತನ ಮಾಡಿದೆ ಅಷ್ಟೇಮ್ಮಾ ಕಿಶನನ ಹಾಗೆ ಅಂದು ಬಿಡುತ್ತಾಳೆ. ನಾನು ದೇವಕಿ, ಅಮ್ಮಮ್ಮ ಯಶೋದೆ ಮತ್ತು ಇವಳೇ ಕೃಷ್ಣ. ಸಂದರ್ಭಕ್ಕೆ ತಕ್ಕ ಹಾಗೆ ಅಲ್ಲಿ ಇದ್ದವರು ನಂದಗೋಪಾಲ, ಮತ್ತು ಗೋಪಿಕೆಯರು. ಅವಳು ದೇವಕಿಯಮ್ಮಾ ಅಂತ ಕರೆದಾಗ ನಾನು ಬರೀ ಏನು ಎಂದರೆ ಮೂಗಿನ ತುದಿಯ ಕೋಪ ಮಾತಿಗೆ ಮತ್ತು ಕಣ್ಣಹನಿಗೆ ಬಂದುಬಿಡುತ್ತದೆ. ಏನು ಕೃಷ್ಣಾ ಎಂದೇ ಕೇಳಬೇಕು. ಬದುಕಿನ ಬ್ರಹ್ಮಾಂಡ ದರ್ಶನ ಆಗುತ್ತಾ ಇರುತ್ತದೆ ನನಗೆ.

ಕೆಲವು ರಷ್ಯಾ ರಾದುಗ ಪ್ರಕಾಶನದ ಕತೆಗಳು ಅವಳಿಗಿಷ್ಟ. ಅದರಲ್ಲಿ ಮಾಟಗಾತಿ ಬರುತ್ತಾಳೆ. ಆಮೇಲೆ ಸ್ನೋವೈಟಿನಲ್ಲೂ ಅಷ್ಟೇ ಒಂದು ಭಯಂಕರ ಮೋಸದ ಮಾಟಗಾತಿ ಇದ್ದಾಳೆ. ಹೀಗಾಗಿ ಮಾಟಗಾತಿಯೆಂದರೆ ನಮ್ಮ ಸಿಂಗಾರಿಗೆ ಸ್ವಲ್ಪ ನಿಜವಾದ್ದು ಮತ್ತು ಸ್ವಲ್ಪ ಜಾಸ್ತಿ ತೋರಿಕೆಯದ್ದೂ ಎರಡೆರಡು ರೀತಿಯ ಭಯ. "ಮಾ" ಅಂದರೆ ಸಾಕು ಅವಳು ಬಂದುಬಿಡುತ್ತಾಳೆ ಎಂದು ಹೆದರಿಸಿ ಅವಳನ್ನು ನಿದ್ದೆಗೆ ದಬ್ಬಿದ ಮಧ್ಯರಾತ್ರಿಗಳು ತುಂಬ ಇದ್ದವು. ಈಗ ಈ ಟ್ರಿಕ್ಕು ನಡೆಯುವುದಿಲ್ಲ. ಅವಳು ಮಾಟಗಾತಿಗೇ ಫೋನ್ ಮಾಡಿಬಿಡುತ್ತಾಳೆ. ಒಂದು ಮಾಟಗಾತಿ ಪೊರಕೆಗೆ ಸಮೀಕರಿಸುವ ಕೋಲಿಟ್ಟುಕೊಂಡಿದ್ದಾಳೆ. ಅದರ ಮೇಲೆ ಕುಳಿತು ಅಬ್ರಕದಬ್ರ ಹೇಳಿ ಎಲ್ಲೆಂದರಲ್ಲಿ ಸುತ್ತಿ ಬರುತ್ತಾಳೆ. ಆದರೆ ಆಳದಲ್ಲಿ ಮಾಟಗಾತಿಯೆಂದರೆ ಭಯವೂ ಇದೆ. ಏನೆಂದರೆ ನೀವೇನಾದರೂ ಅವಳಿಗೆ ರೋಪ್ ಹಾಕಿದರೆ, ಅವಳು ಮಾಟಗಾತಿಗೆ ಫೋನ್ ಮಾಡುತ್ತಾಳೆ ಅಷ್ಟೆ. ನಾನೇನಾದ್ರೂ ಮಾಟಗಾತಿಯ ಮಾತೆತ್ತಿದರೆ ಅವಳು ಸ್ಲೀಪಿಂಗ್ ಬ್ಯೂಟಿಯಲ್ಲಿ ಬರುವ ಒಳ್ಳೆಯ ಮಾಟಗಾತಿಯಾಗಿಬಿಡುತ್ತಾಳೆ. ಹೀಗೆ ಈ ಮಾತುಗಾತಿಯ ಹತ್ತಿರ ಮಾಟಗಾತಿ ಸೋತು ಬಂದ ದಾರಿಯಲ್ಲೇ ಪೊರಕೆ ಹತ್ತಿ ಸಾಗಬೇಕು.

ಅವಳ ಇನ್ನೊಂದು ಹಾಟ್ ಫೇವರಿಟ್ ಕಥೆ ಮಣಿಕಂಠನದ್ದು. ಇದು ಅಜ್ಜ ಹೇಳುವ ಹಾಡು ಮತ್ತು ಕಥೆ. ಪಂದಳ ರಾಜನಿಗೆ ಸಿಕ್ಕಿದ ಮಣಿಕಂಠ, ಹುಲಿಯಹಾಲು ತರಲು ಹೋಗಿ ಮಹಿಷಿಯನ್ನು ಸೋಲಿಸಿ, ಹುಲಿಗಳ ಮೇಲೆ ಹತ್ತಿ ಅರಮನೆಗೆ ಬರುವ ಕಥೆ. ಇದು ಕೇಳುತ್ತ ಕೇಳುತ್ತ ನಿದ್ದೆ ಬಂದುಬಿಡುತ್ತದೆ ನಮ್ಮ ಮಗುವಿಗೆ. ಮಧ್ಯಾಹ್ನ ಎರಡುಗಂಟೆಯ ಹೊತ್ತಿಗೆ ಒಂದು ಸಲ ಅಜ್ಜನೂ, ರಾತ್ರಿ ಹನ್ನೆರಡು ಗಂಟೆಯ ಸುಮಾರಿಗೆ ನಾನೂ ಎಲ್ಲ ಕಥೆಗಳನ್ನು ಹೇಳಿ ಮುಗಿದ ಮೇಲೆ ಇದು ಹೇಳಿ ಮಲಗಲು ಪ್ರಯತ್ನ ಮಾಡುತ್ತೇವೆ. :)

ಈ ಎಲ್ಲ ಕಥೆಗಳಲ್ಲೂ,ಘಟನೆಗಳಲ್ಲೂ ತನಗೆ ಬೇಕಾದ್ದನ್ನು ಆವಾಹಿಸಿಕೊಂಡು ತಾನು ಅದೇ ಆಗುವ ಒಂದು ಮುಗ್ಧತೆಯ ಜಾದೂ ಇವಳಲ್ಲಿದೆ. ಅದೇ ಈ ಎಲ್ಲ ಚಂದ ಸಂಗತಿಗಳ ಹೂರಣ. ಒಂದು ಕಥೆಯ ಕಾಂಗರೂ ಮರಿಯಾಗಿ ಒಂದು ವಾರ ಓಡಾಡಿಕೊಂಡಿರುತ್ತಾಳೆ. ಆ ವಾರವಿಡೀ ಎಲ್ಲರೂ ಅವಳನ್ನು ರೂಮರಿ ಎಂದೇ ಕರೆಯಬೇಕು. ನಾನೆಲ್ಲಾದರೂ ಬೈದರೆ ಕಣ್ಣ ತುಂಬು ನೀರು ತುಂಬಿ ರೂಮರಿಗೆ ಯಾರಾರೂ ಬೈತಾರ ಅಂತ ಹೇಳಿ ನನ್ನ ಅಳಿಸುತ್ತಾಳೆ. ಆಮೇಲೆ ಇನ್ನೊಂದು ವಾರ ಸ್ನೋವೈಟಿನ ಒಬ್ಬ ಪುಟ್ಟ ಕುಳ್ಳನ ಹಾಗೆ ಓಡಾಡಿಕೊಂಡಿರುತ್ತಾಳೆ. ಮತ್ತಿನ್ನೊಂದು ವಾರ ಸಿಂಡ್ರೆಲಾ ಮತ್ತವಳ ಡ್ಯಾನ್ಸು ನಡೆಯುತ್ತದೆ. ಅದರ ಮುಂದಿನ ವಾರ ಗೋಪಾಲ, ಆಮೇಲೆ ಪ್ರಹ್ಲಾದ, ಕೃಷ್ಣ ಎಲ್ಲ ಆಗಿ ರೂಪಾಂತರ ಹೊಂದುತ್ತಿರುತ್ತಾಳೆ. ಈ ವಾರ ಗೋಲ್ಡಿಲಾಕ್ಸ್ ಕತೆಯ ಪಾಪು ಕರಡಿಯಾಗಿದ್ದಾಳೆ. ಈ ಎಲ್ಲ ರೂಪಗಳಲ್ಲು ಆಗಾಗ ಕೃಶ್ಣ ಮತ್ತು ಛೋಟಾ ಭೀಮ್ ಮಾತ್ರ ಖಾಯಮ್ಮಾಗಿ ಬಂದು ಹೋಗುತ್ತಾರೆ. ಮುಂದಿನ ವಾರದ ಕಥೆಗೆ ನಾನು ಸ್ಕೆಚ್ಚು ಹಾಕುತ್ತಾ ಇದ್ದೀನಿ.

ಈ ಎಲ್ಲ ಕಥೆ ಹೇಳುವಾಗಿನ ಒಂದು ಕಷ್ಟ ಅಂದರೆ ಈ ಕ್ವೆಶ್ಚನ್ ರಾಣಿಯ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ಹೇಳುವುದು. ನಚಿಕೇತನ ಕತೆ ಹೇಳಿ ತುಂಬ ಕಷ್ಟ ಆಗಿಬಿಟ್ಟಿತ್ತು. ಸಾಯುವುದನ್ನು ವಿವರಿಸಿ ಯಾರೆಲ್ಲ ಸಾಯಬಹುದು ಅಂತ ಹೇಳಿ ಕೊನೆಗೆ ಈಗ ಯಾರ್ಯಾರೂ ಸಾಯುವುದೇ ಇಲ್ಲ ಅಂತ ಒಪ್ಪಿಸುವ ಹೊತ್ತಿಗೆ ಸಾಕಾಗಿ ಹೋಗಿತ್ತು ನನಗೆ.

ಹೋದವಾರ ಒಂದು ರಾತ್ರಿ ಮಲಗುವಾಗ ಎಂದಿನಂತೆ ನಮ್ಮ ಸಂವಾದ ನಡಿಯುತ್ತಿತ್ತು. ಇದು ಒಂದ್ರೀತಿ ಮಾತಿನ ಯುದ್ದ. ಎಷ್ಟೋ ದಿನ ನನ್ನ ಮಾತು ಅವಳು ಕೇಳದೆ ನಾನು ಸಿಟ್ಟು ಮಾಡಿಕೊಂಡು ಎದ್ದು ಹೋಗಿ ಆಚೆ ಮಲಗಿ ಅವಳು ಮತ್ತೆ ಅತ್ತು ಕರೆದು ಅಪ್ಪನ ಮೂಲಕ ನನ್ನಲ್ಲಿ ಸಂಧಾನ ನಡೆಸಿ ನನ್ನ ತೋಳು ಬಳಸಿ ಮಲಗುತ್ತಾಳೆ. ಮತ್ತೊಂದಷ್ಟು ಸಲ ಅವಳಿಗೆ ಕೋಪ ಬಂದು, ನನಗೆ ಬೇಜಾರಾಯಿತು ಅಂತ ಹೇಳಿ ಕತ್ತಲಲ್ಲೆ ಎದ್ದು ಗೋಡೆ ಕಡೆ ಮುಖ ಮಾಡಿ ಕೂತು, ಆಮೇಲೆ ನಾನು ಅವಳಿಗಿಷ್ಟವಾದ ಏನೇನೋ ಕತೆ ಹೇಳಿ ಮುದ್ದು ಮಾಡಿ ಒಲಿಸಿಕೊಳ್ಳುತ್ತೇನೆ. ಹೆಚ್ಚಿನ ರಾತ್ರಿಗಳು ಕತೆ, ಪ್ರಶ್ನೆ, ಕತೆ ಮತ್ತು ಹಾಡುಗಳಲ್ಲಿ ಹನ್ನೆರಡಕ್ಕೆ ಕೊನೆಯಾಗುತ್ತವೆ. ಹೋದ್ವಾರ ಏನಾಯ್ತೂಂದ್ರೆ ನಾನು ಅವಳನ್ನ ನೀನು ದೊಡ್ಡವಳಾದ ಮೇಲೆ ಏನು ಮಾಡುತ್ತೀ ಎಂದು ಕೇಳಿದೆ. ಅವಳೂ ನಾನು ದೊಡ್ಡವಳೇ ಆಗೋಲ್ಲಮ್ಮ ಅಂತ ಡಿಕ್ಲೇರ್ ಮಾಡಿದಳು. ಅದ್ಯಾಕೆ ಅಂದ್ರೆ, ಅವಳ ಮುದ್ದು ಟ್ಯೂನಿನಲ್ಲಿ ಉತ್ತರ ಬಂತು. ನಾನು ದೊಡ್ಡವಳಾದ್ರೆ ನೀನೂ ದೊಡ್ಡವಳಾಗಿ ಮುದುಕಿಯಾಗಿ ಆಮೇಲೆ ಸತ್ತು ಹೋಗುತ್ತೀ. ಅದು ನಂಗೆ ಬ್ಯಾಡ. ನಾನು ಹೀಗೇ ಇರ್ತಿ. ನೀನು ಹೀಗೇ ಇರು ಎಂದಳು. ಈ ಮೊದ್ದು ಮುದ್ದಿಗೆ ತುಂಬಿ ಬಂದ ಕಣ್ಣನ್ನು ನಾನು ನಕ್ಕು ಇಂಗಿಸಿದೆ. ಈ ಪ್ರೀತಿ ಹಿಂದೆ ಎಂದೂ ಸಿಕ್ಕಿರಲಿಲ್ಲ, ಮತ್ತು ಮುಂದೆಂದೂ ಸಿಗುವುದೂ ಇಲ್ಲ. ಸಿಕ್ಕಾಗ ಒಡ್ಡಿಕೊಂಡು ನಿಲ್ಲುವುದಷ್ಟೇ ನನ್ನ ಭಾಗ್ಯ.

ಮೊನ್ನೆ ಶನಿವಾರ ಎಲ್ಲ ಕಡೆಯೂ ಕ್ರಿಸ್ಮಸ್ ವ್ಯಾಪಾರ ಭರಾಟೆ. ಅಲ್ಲದೆ ಶುಕ್ರವಾರ ಅವಳ ಪ್ಲೇಹೋಮಿನಲ್ಲೂ ಕ್ರಿಸ್ಮಸ್ ಆಚರಣೆ ಇತ್ತು. ಹಾಗಾಗಿ ಒಂದೆರಡು ದಿನದಿಂದ ಸಾಂತಾಕ್ಲಾಸ್ ಬಗ್ಗೆಯೇ ಮಾತು ಕತೆ ಮತ್ತು ಜಿಂಗಲ್ ಬೆಲ್ ಹಾಡು. ನಿನ್ನೆ ಭಕ್ತಿಪೂರ್ವಕವಾಗಿ ಅವಳು ಒಂದು ಹೊಸಾ ಕ್ರೇಯಾನ್ ಸೆಟ್ಟು ಬೇಡಿಕೊಂಡೂ ಆಯಿತು. ನಾವಿಬ್ಬರೂ ಮೇಲಿಂದ ಮೇಲೆ ಒಳ್ಳೆಯ ನಡವಳಿಕೆಯ ಮಕ್ಕಳಿಗೆ ಕ್ರಿಸ್ಮಸ್ ತಾತ ಉಡುಗೊರೆ ಕೊಟ್ಟೇ ಕೊಡ್ತಾನೆ ಅಂತ ಹೇಳಿ ನಿನ್ನೆಯ ಭಾನುವಾರವನ್ನು ಮ್ಯಾನೇಜ್ ಮಾಡಿದ್ದೇನೋ ಹೌದು. ಕೊನೆಗೆ ಇವತ್ತು ಬೆಳಿಗ್ಗೆ ಅವಳು ಏಳುವಾಗ ನೋಡುತ್ತಾಳೆ ಚೆಂದದ ಹೊಳೆಯುವ ಗಿಫ್ಟ್ ಚೀಲದಲ್ಲಿ ಒಂದು ಹೊಸಾಥರದ ಕ್ರೇಯಾನ್ ಪೆನ್ ಸೆಟ್ಟಿದೆ!. ಕವರಿನ ಮೇಲೆ ಮೆರ್ರಿ ಕ್ರಿಸ್ಮಸ್ ಎಂದು ಕೂಗುತ್ತಿರುವ ಬಿಳಿಗಡ್ಡದ ಸಾಂತಾ!! ಅವಳ ಖುಶಿಯನ್ನ ಬರೆಯಲು ನನ್ನ ಕೈಸೋತಿದೆ. ಅವಳು ನಿದ್ದೆಯಲ್ಲಿದ್ದಾಗಲೇ ಬೆಳಿಗ್ಗೆಯೇ ಅವನು ಇಡ್ತಾನೆ ಎಂಬ ನಿರೀಕ್ಷೆ ನಿಜವಾಗಿ ಸಕತ್ ಥ್ರಿಲ್ಲಾಗಿಬಿಟ್ಟಿತ್ತು. ಆದರೂ ಒಂದು ಅನುಮಾನವಿತ್ತು. ಪಕ್ಕದಲ್ಲಿದ್ದ ಅಪ್ಪನಿಗೆ ಹೇಳಿದಳೂ. ಅಪ್ಪಾ ಸಾಂತಾ ಕೊಟ್ಟಿರುವ ಕ್ರೇಯಾನ್ಸ್, ಅವತ್ತು ಪ್ರತ್ಯೂಷಿ ನನ್ ಹ್ಯಾಪಿ ಬರ್ಥ್ ಡೇಗೆ ಕೊಟ್ಟಿದ್ನಲ್ಲಾ ಆ ಕ್ರೇಯಾನ್ಸ್ ಥರಾನೇ ಇದೆ ಅಲ್ವಾ ಅಂತ. :) ಆ ಕ್ರೇಯಾನ್ಸ್ ನಿಂಗೆ ತುಂಬ ಇಷ್ಟ ಆಗಿತ್ತಲ್ವಾ ಅದ್ಕೇ ಅದೇ ತರದ್ದು ಕೊಟ್ಟಿದಾನೆ ಅಂತ ಹೇಳಿ ಅಪ್ಪ ಬಚಾವಾಗಿದ್ದಾನೆ. ಮಗಳು ಆ ಸೆಟ್ಟಲ್ಲಿರುವ ಎಲ್ಲ ಬಣ್ಣಗಳನ್ನೂ ಹೆಸರಿಸುತ್ತಾ ಕ್ರಿಸ್ ಮಸ್ ರಜೆ ಕಳೆಯಲಿದ್ದಾಳೆ. ಆ ಕ್ರೇಯಾನ್ಸ್ ಎಲ್ಲ ಖಾಲಿ ಮಾಡಕ್ಕೆ ಅಂತ ಒಂದು ಕಲರಿಂಗ್ ಬುಕ್ ಬೇರೆ ಇದೆ. ಮುಂದಿನ ಕತೆ ಮುಂದಿನ ವರ್ಷ. ಅಲ್ಲೀವರೆಗೂ ತುಂಬ ಕೆಲ್ಸ ಇದೆ. ಕಲರಿಂಗ್ ಅಂದ್ರೆ ಸುಮ್ನೇನಾ?

ಸೃಷ್ಟಿ ಶುಭದಾಯಿನಿಗೆ ಈ ನವೆಂಬರ್ ಕೊನೆಯಲ್ಲಿ ಮೂರ್ವರ್ಷ ತುಂಬಿತು.
ನಾಳೆಯಿಂದ ನಿಂಗೆ ಮೂರ್ ವರ್ಷ ಅಂತಂದೆ ನಾನು ಹಿಂದಿನ ದಿನ. "ಆವಾಗ ನೀನೇನಾಗಿರ್ತೀಯಾ" ಮುದ್ದಾದ ಮಾತಿನ ಬಾಣ ತೂರಿಬಂತು.
ಸ್ವಚ್ಛ ಕಣ್ಣುಗಳ ತಿಳಿಗೊಳದಲ್ಲಿ ಬೀಳದೆ ಉತ್ತರಿಸಲು ಸಾಧ್ಯವೇ?
ಪ್ರಶ್ನೆಯ ಕಡಲು ಬತ್ತುವುದೇ ಇಲ್ಲ. ಉತ್ತರದ ನದಿ ಸಣ್ಣಗೆ ಸೊರಗಿದರೂ ಹರಿದು ತುಂಬುತ್ತಿರುತ್ತದೆ. ಎಷ್ಟೇ ಉತ್ತರ ಹೇಳಿದರೂ ಕೊನೆ ಕೊನೆಯ ಪ್ರಶ್ನೆ ಬರುವಾಗ ಬೇಸಿಗೆಯಾಗಿ ಉತ್ತರವಿಲ್ಲದೆ ನಿಲ್ಲಬೇಕಾದ ಸಂಭವವೇ ಜಾಸ್ತಿ. ಅದಕ್ಕೇ ಅವಳು ನನ್ನ "ಲಾಜವಾಬ್" ಮಗಳು!

5 comments:

prabhamani nagaraja said...

ಈ ಗಡಿಬಿಡಿಯ ಕಾಲದಲ್ಲಿ ಕಥೆಗಳನ್ನು ಹೇಳುತ್ತಾ ಮಗಳ ಮನೋ ವಿಕಾಸಕ್ಕೆ ಕಾರಣರಾಗಿರುವ ನಿಮ್ಮ೦ಥಾ ಅಮ್ಮನನ್ನು ಪಡೆದ ಸೃಷ್ಟಿ ಶುಭದಾಯಿನಿ ನಿಜಕ್ಕೂ ಭಾಗ್ಯಶಾಲಿ. ಅವಳಿಗೆ ನನ್ನ ಶುಭ ಹಾರೈಕೆಗಳು. ನನ್ನ ಬ್ಲಾಗ್ ಗೆ ಭೇಟಿ ಕೊಡಿ.

sunaath said...

ಸಿಂಧು,
ನಿಮ್ಮನ್ನು ಲಾಜವಾಬ್ ಮಾಡುವ ಮಗಳು ಸೃಷ್ಟಿ ಶುಭದಾಯಿನಿಯ ಕತೆಗಳನ್ನು ಓದಿ ತುಂಬ ಹರುಷವಾಯಿತು. ಮಕ್ಕಳ ಆಟ ತುಂಬ ಮುದ್ದು ಅಲ್ಲವೆ? ಇಂತಹ ಭಾಗ್ಯಕ್ಕಿಂತ ದೊಡ್ಡದು ಯಾವುದಿದೆ? ಅವಳು ನಿಮ್ಮನ್ನು ಇನ್ನಿಷ್ಟು ಖುಶಿ ಪಡಿಸಲಿ; ಆ ಖುಶಿಯನ್ನು ನೀವು ನಮ್ಮೊಡನೆ ಹಂಚಿಕೊಳ್ಳಲಿ ಎಂದು ಹಾರೈಸುತ್ತೇನೆ.
ನಿಮಗೂ, ಸೃಷ್ಟಿಗೂ ಶುಭಾಶಯಗಳು.

ಚುಕ್ಕಿಚಿತ್ತಾರ said...

nice.... srushtige nanna umma...!!

ತೇಜಸ್ವಿನಿ ಹೆಗಡೆ said...

ಇದನ್ನ ಓದದ ಮೇಲೆ ನನ್ನ ಪುಟ್ಟಿಯೊಂದಿಗಿನ ಅನೇಕ ಮಧುರ ಕ್ಷಣಗಳು ನೆನಪಾದವು.. ಅವುಗಳಿಗೆ ಅಕ್ಷರರೂಪ ಕೊಡಲು ನಿನ್ನ ಈ ಬರಹವೇ ಪ್ರೇರಣೆ :) ಪುಟ್ಟಿಗೆ ಸಿಹಿ ಮುತ್ತು ಸಿಹಿ ಮುತ್ತು ನೂರಾ ಒಂದು :)

ಸಿಂಧು sindhu said...

@ ಪ್ರಭಾಮಣಿ: ಮನೋವಿಕಾಸ ಎಲ್ಲ ದೊಡ್ಡ ಮಾತು. ಮಗಳು ಅವಳಿಗೇನು ರುಚಿಸುತ್ತೋ ಅದನ್ನ ನಮ್ಮ ಬದುಕಲ್ಲಿ ಅರಳಿಸುತ್ತಿದ್ದಾಳೆ. ನಿಮ್ಮ ಹಾರೈಕೆಗೆ ವಂದನೆಗಳು.

@ ಸುನಾಥ: ಹೌದು ಕಾಕಾ. ಅವಳ ನೆರಳಿನಲ್ಲಿ ನಡೆಯುವಾಗ ಹಾದಿಯ ಸುಸ್ತು ತೋರುವುದೇ ಇಲ್ಲ. ಭಾಗ್ಯ ನನ್ನದು. ನಿಮ್ಮ ಹಾರೈಕೆ ಅವಳನ್ನು ಶುಭದಾಯಿನಿಯಾಗಿಸಲಿ.

@ ವಿಜಯಶ್ರೀ: ಥ್ಯಾಂಕ್ ಯು. ಸ್ವಲ್ಪ ಲೇಟ್ ಅತು. ಅದ್ರು ತಲುಪಿಸ್ತಿ. ನಂದು ಹಳೆ ಪೋಸ್ಟ್ ಆಫೀಸು. :)

@ ತೇಜಸ್ವಿನಿ: ಥ್ಯಾಂಕ್ ಯು. ಸಿಹಿಮುತ್ತುಗಳನ್ನು ತಲುಪಿಸುವೆ.