ಮಳೆಗಾಲ ಅಂತ ಕರೆಯಲು ಬರದ ಆದರೆ ಆಗಾಗ ಸಿಕ್ಕಾಪಟ್ಟೆ ಮಳೆಸುರಿದು ಮೋಡ ಮುಚ್ಚಿಕೊಳ್ಳುವ ಈ ದಿನಗಳಲ್ಲಿ, ನನ್ನ ಕಾರ್ಯಕ್ಷೇತ್ರದ ಒಂದು ಹೊಂಗಿರಣ ದೂರದ ಪಥದೆಡೆಗೆ ಹೊರಟಿದೆ. ಸ್ನೇಹವೆಂದು ಹೇಳಲು ಬರದ, ಆದರೆ ವ್ಯಾವಹಾರಿಕ ಸಂಬಂಧವನ್ನು ಮೀರಿದ, ಅಚ್ಚರಿ-ಮೆಚ್ಚುಗೆ ಮತ್ತು ಅಕ್ಕರೆ ತುಂಬಿರುವ ಸಂಬಂಧವೊಂದು ದಿಕ್ಕು ಬದಲಿಸುತ್ತಿದೆ. ಕಣ್ಣಿದಿರುಗಿರುವುದೇ ಸಂಬಂಧ ಎಂಬ ವ್ಯಾಖ್ಯಾನದಿಂದ ನಾವು ನೆಟ್ ಯುಗದ ಮಂದಿ ಹೊರಬಂದು ತುಂಬ ವರ್ಷಗಳಾದವು. ಸಮಭಾಜಕವೃತ್ತದ ಇಕ್ಕೆಲಗಳಲ್ಲು ಚಾಚಿನಿಂತ ಸ್ನೇಹದ ಹರವು, ಸಂಬಂಧಗಳ ಹರಿವು ಪುಟ್ಟ ಮನೆಯ ಮೂಲೆಯ ಕಂಪ್ಯೂಟರ್ ಪರದೆಯ ಮೇಲೆ ವಿಸ್ತರಿಸುತ್ತಿದೆ.
ಆದರೆ ಈಗ ನಾಲ್ಕೂವರೆ ವರ್ಷಗಳಿಗೂ ಮಿಕ್ಕಿ ದಿನದಿನವೂ ಒಡನಾಡಿದ ಹಿರಿಯ ಸಹೋದ್ಯೋಗಿ ಕಾರ್ಯಕ್ಷೇತ್ರದ ನಿಲುವುಗಳಿಂದಾಗಿ ದೂರವಾಗಲಿದ್ದಾರೆ. ವಯಸ್ಸಿನ ಅಂತರಗಳನ್ನ ದಾಟಿ ನಮ್ಮ ಮನಮನದ ಮೂಲೆಯಲ್ಲಿ ಉತ್ಸಾಹದಿಂದ ಓಡಾಡಿ, ಬೇಕೋ ಬೇಡವೋ ನನ್ನಂತಹ ಮುಚ್ಚುಗ ಸ್ವಭಾವದವಳನ್ನೂ ಎಲ್ಲರೊಡನೆ ಬೆರೆಯುವಂತೆ ಮಾಡಿದ, ಸಕಲ ಆಟಗಳ ಮುಂಚೂಣಿಯಲ್ಲಿ ಓಡುವ, ಚೈತನ್ಯವನ್ನು ಜೀನುಗಳಲ್ಲಿಯೇ ಹೊತ್ತುಕೊಂಡು ಬಂದಿರಬಹುದಾದ ಈ ಒಡನಾಡಿ ಮುಂದಿನ ಕೆಲದಿನಗಳಲ್ಲಿ ಬೇರೆ ಹೋಗಲಿದ್ದಾರೆ. ಸಹೋದ್ಯೋಗಿ ಎಂದರೆ ನಮ್ಮ ನಡುವಿನ ಅನುಬಂಧವನ್ನು ದೂರವಿರಿಸಿದಂತೆ, ಹಿರಿಯಕ್ಕನೆಂದರೆ ಆ ಮಗುಸದೃಶ ಚೈತನ್ಯಕ್ಕೆ ಸರಪಳಿ ಬಿಗಿದಂತೆ, ಸ್ನೇಹಿತೆ ಎನ್ನಲು ಹೋದರೆ ಆಕೆಯ ತಿಳುವಳಿಕೆ ಮತ್ತು ಪ್ರೌಢತೆಯನ್ನ ಕಿರಿದುಗೊಳಿಸಿದಂತೆ, ಇವೆಲ್ಲವನ್ನೂ ಮೀರಿ ಅಳತೆಗಳನ್ನು ಹೊರತಾಗಿಸಿ ಜೊತೆಜೊತೆಗೆ ನಡೆದು ದಾರಿ ಹೊರಳುವಲ್ಲಿ ನಗೆಮೊಗದಿ ಭಾರಹೃದಯದಿ ಹೊರಡುತ್ತಿರುವ ಈ ಮೂರ್ತರೂಪ ಜೀವನ್ಮುಖತೆಯನ್ನ ಏನೆಂದು ಕರೆಯಲಿ ಹೊಳೆಯುತ್ತಿಲ್ಲ.
ಬದಲಾವಣೆಯೆ ಜಗದ ನಿಯಮ, ಇಲ್ಲಿ ಯಾರೂ ಮುಖ್ಯರಲ್ಲ ಎಂಬ ಅಲಿಖಿತ ಕಾರ್ಪೋರೇಟ್ ನಿಯಮಗಳು ಅರಿವು ಬೆನ್ನಿಗಿದ್ದೂ ಈ ವಿದಾಯ, ಈ ಹೊರಳುವಿಕೆ ಮನಸ್ಸಿಗೆ ಅತ್ಯಂತ ತ್ರಾಸು ಕೊಡುತ್ತಿದೆ. ಇನ್ನೊಂದೆರಡು ವಾರ ಸುತ್ತಲಿನ ವಾತಾವರಣ ಭಿನ್ನವಾಗೆನಿಸಿ, ಮತ್ತದೇ ಏಕತಾನತೆಗೆ ಹೊರಳಿಕೊಳ್ಳುವುದು ನನಗೆ ಗೊತ್ತು. ಆದರೆ ಈ ಚೈತನ್ಯ ಬರಿಯ ಆಫೀಸು ಸಮಯದಲ್ಲಿ ಮಾತ್ರ ನನ್ನ ಮೇಲೆ ಪ್ರಭಾವ ಬೀರಿದ್ದರೆ ಎರಡುವಾರದ ಕೊರಗು ಕರಗಿ ಹೊಸಗಾಳಿ ಹೊಸದಿನಚರಿಗೆ ಮನ ಒಗ್ಗಿಕೊಳ್ಳುತ್ತಿತ್ತೇನೋ.
ಚಿಕ್ಕಂದಿನಲ್ಲಿ ಎಲ್ಲೋ ಯಾವುದೋ ಮನೆಯಂಗಳದ ಅಂಚಿಗೆ ಒತ್ತಾಗಿ ಬೆಳೆದು ಘಮ್ಮಗೆ ಅರಳಿದ ಸುಳಿಹೂವಿನ ಗೊಂಚಲು ಮತ್ತದರ ಘಮ, ಇವತ್ತಿಗೂ ಯಾವುದೇ ಆಹ್ಲಾದದ ಸಂಗತಿ ಸಂಭವಿಸಿದಾಗ ನನ್ನನ್ನು ಆವರಿಸಿಕೊಳ್ಳುತ್ತದೆ. ಉಂಹೂಂ ಅಷ್ಟು ಹೂಗಿಡಗಳ ರಾಶಿ ನಮ್ಮನೆಯಂಗಳದಲ್ಲಿದ್ದರೂ ಒಂದು ಸುಳಿಹೂವಿನ ಗಿಡವೂ ಇರಲಿಲ್ಲ. ಅದ್ಯಾರ ಮನೆಯ ಅಂಗಳದಂಚೋ ಗೊತ್ತಿಲ್ಲ ಕಂಪೌಂಡ್ ಮೂಲೆಯಲ್ಲಿ ಒತ್ತಾಗಿ ಬೆಳೆದ ಪೊದೆಗಳೂ ಅವುಗಳಿಂದ ಪರಿಮಳವೇ ನಾಜೂಕು ಬಳುಕು ಪಡೆದು ಹೊರಟಂತೆ ಎಸಳು ಎಸಳಾಗಿ ಅರಳಿಕೊಂಡಿದ್ದ ಸುಳಿಹೂವಿನ ಗೊಂಚಲುಗಳೂ, ಅಷ್ಟು ದೂರಕ್ಕೆ ನಡೆದರೂ ಅವುಗಳಿಂದ ತೇಲಿಬರುತ್ತಿದ್ದ ಪರಿಮಳವೂ ಅವತ್ತು ನೋಡಿದ್ದಕ್ಕಿಂತ ಗಾಢವಾಗಿ ನನ್ನ ಭಿತ್ತಿಯಲ್ಲಿ ಅಚ್ಚೊತ್ತಿ ಕೂತಿದೆ. ಎಷ್ಟೇ ಗಬ್ಬೆದ್ದು ಹೋಗಿದೆ ಅಂತ ಬಯ್ದುಕೊಂಡಿರುವ ಈ ಅಡ್ಡಾದಿಡ್ಡಿ ಬದುಕಿನ ಅನಿವಾರ್ಯ ಅಯಾಚಿತ ದಿನಚರಿಯಲ್ಲಿ ಯಾವುದೋ ಬಗೆಯಲ್ಲಿ ಆ ಆಹ್ಲಾದ ಮರುಕಳಿಸುತ್ತಲೇ ಇದೆ. ಇರುತ್ತದೆ.
ಹಾಗೆಯೇ ಈ ಜೀವನ್ಮುಖೀ ಚೈತನ್ಯ ದಿನದಿನದ ಕಾರ್ಯಕ್ಷಮತೆಯ ಮೂಲಕ, ಅಂತಃಕರಣದ ಮೂಲಕ, ಗಟ್ಟಿಯೆಂದರೆ ಗಟ್ಟಿ ಅಂತ ಯಾರೂ ಥಟ್ಟನೆ ಹೇಳಿಬಿಡಬಹುದಾದಷ್ಟು ಮನೋಸ್ಥೈರ್ಯದ ಮೂಲಕ, ಹೊಸತನ್ನು ಸದಾ ಹುಡುಕುವ ಅನ್ವೇಷಣಾಸಕ್ತಿಯ ಮೂಲಕ, ಅಂದುಕೊಂಡಿದ್ದನ್ನು ಮಾಡಿಯೇ ಬಿಡುವ ಛಲದ ಮೂಲಕ, ನೋವು ಇರುವುದು ಬೆನ್ನಿಗೆ ಕಟ್ಟಿಕೊಂಡು ಹೋರಾಡಲಷ್ಟೇ - ನಗುವನ್ನು ಹುದುಗಿಸಿಡಬೇಕಿಲ್ಲ ಅಂತ ತೋರಿಸಿಕೊಡುವ ಮೂಲಕ, ಆತ್ಮಸಾಕ್ಷಿಗೆ ತಕ್ಕಂತೆ ಬದುಕು - be true to yourself - ಎಂಬುದನ್ನ ಇಂಚಿಂಚೂ ಸಾಧಿಸಿ ತೋರಿಸುವ ಇವರಿಂದ ನಾನು ಕಲಿತದ್ದು ಇಷ್ಟೇ, ಅರ್ಥೈಸಿಕೊಂಡಿದ್ದು ಇಷ್ಟೇ ಎಂದು ಹೇಳಲಿಕ್ಕಿಲ್ಲ. ಇವರು ಇನ್ನು ನನ್ನ ದಿನಚರಿಯ ಮೂರ್ತರೂಪದಲ್ಲಿರುವುದಿಲ್ಲ ಎಂಬುದಷ್ಟೇ ನಿಜ.
ನನ್ನ ಬದುಕಿನ ಅಂತಃಪ್ರಜ್ಞೆಯನ್ನು ಇಷ್ಟೊಂದು ಪ್ರಭಾವಿಸಿದ ಈಕೆ ನನ್ನ ನಡೆನುಡಿಗಳಲ್ಲಿ ಅಂದೆಂದೋ ಹುಟ್ಟಿದ ಸುಳಿಹೂವಿನ ಗಂಧದಂತೆಯೇ ಆವರಿಸಿಕೊಂಡಿರುತ್ತಾರೆ ಎಂಬ ಅರಿವು ಈ ವಿದಾಯವನ್ನ ಸಹನೀಯವಾಗಿಸಿದೆ.
ಈ ಚೇತನದ ಬಗ್ಗೆ ಮಾತಲ್ಲಿ ಹಿಡಿಯಬಹುದಾದಷ್ಟನ್ನು ಇಲ್ಲಿಡುವ ಪ್ರಯತ್ನ ಮಾಡಿದ್ದೇನೆ. ಮಾತಿಗೆ ಸಿಕ್ಕದ್ದು ಅಳವಿಗೆ ಮೀರಿದ್ದು ಇನ್ನೂ ಬಹಳವಿದೆ.
ಚೈತನ್ಯದ ಸಿರಿಬುಗ್ಗೆಯೇ,
ನಿಮಗೆ ನಲಿವು ನೆಮ್ಮದಿಯ ಆಶಿಸುತ್ತಾ
ಅಕ್ಕರೆ,
ಕಿರಿಮುತ್ತು,
ಬಿರಿನಗು,
ಹಿರಿಯಪ್ಪುಗೆ
ಮತ್ತು ಆಹ್ಲಾದದ ಗೊಂಚಲುಗಳ ಹಿಂದ
ಅಡಗಿಸಿಟ್ಟ ಬಿಸಿಕಂಬನಿಯೊಡನೆ
ನವುರಾದ ವಿದಾಯ.
ಮತ್ತೆ ಮತ್ತೆ ಸಿಗೋಣ.
Dreams are given to u only to make them come true.
1 comment:
ಸಿಂಧು,
ನಿಮ್ಮ ವಿದಾಯಗೀತೆ ನಿಮ್ಮ ಮನದಾಳದ ದುಗುಡವನ್ನು ತೆರೆದು ತೋರಿಸುತ್ತಿದೆ.ಏನೆ ಆಗಲಿ,ವಿದಾಯದ ಸಮಯದಲ್ಲಿ ಹೇಳಬಹುದಾದದ್ದು ಇಷ್ಟೇ, ಅಲ್ಲವೆ:
"ಶುಭಾಸ್ತೇ ಪಂಥಾನ: ಸಂತು!"
Post a Comment