Friday, July 9, 2010

ನೆನಪು ನೇವರಿಕೆ

ಅಮ್ಮನಿಲ್ಲದೆ ನಿದ್ದೆ ಬರಲೊಲ್ಲದೆಂಬವಳ
ಮಗ್ಗುಲಿಗೆ ಅವುಚಿ ಮಲಗಿಸಿ;
ಶಾಲೆಯಂಗಳದ ಧೂಳು
ಹೊದ್ದು ಮನೆಗೆ ಬರುವವಳ
ಬಾಯಿ ಬಡಿಗೆಗೆ
ಎರಡು ಹಿಡಿ ಅವಲಕ್ಕಿ
ಮೇಲೆ ಮೊಸರು ಬೆಲ್ಲ ಕರುಣಿಸಿ;
ರಾತ್ರಿಯಿಡೀ ಯಕ್ಷಗಾನ ನೋಡಿ
ತಲೆನೋವು ಬಂತೇ
ಅರ್ಧ ಕಡಿ ನಿಂಬೆಹಣ್ಣೂ
ಎರಡು ಚಮಚ ಕೊಬ್ರಿ ಎಣ್ಣೆ
ಹಚ್ಚಿ ತಿಕ್ಕಿ,
ಬಿಸಿ ಬಿಸಿ ಸುರಿನೀರ ತಲೆಸ್ನಾನ;
ಕುಣಿಕುಣಿದು ನಲಿದ ಕಾಲು ನೋವೆ
ರಬ್ನಿಸಾಲ್ ಹಚ್ಚಿ ತಿಕ್ಕಿ,
ಹಳೆಸೀರೆಯಿಂದ ಕಿತ್ತ ಫಾಲ್ಸ್
ಸುತ್ತಿ;
ಇವತ್ತು ಪರೀಕ್ಷೆ,
ಬೆಳಗಿಂಜಾವಕ್ಕೆದ್ದು
ಓದುತ್ತ ಕೂತವಳ
ಕೈಗೆ ಬಿಸಿಬಿಸಿ ಚಾ ಹಿಡಿಸಿ;
ಮಧ್ಯಾಹ್ನದ ಊಟ ಗಡದ್ದಾಯಿತೇ
ಮಡಿಚಿ ರೆಡಿ ಮಾಡಿಟ್ಟ
ಕವಳದಲ್ಲರ್ಧ ಸಲ್ಲಿಸಿ;
ಬೆಳೆಸಿದವಳು,
ಬೆಳೆದು ನಿಂತ ಮೇಲೆ
ಅರೆಬೆರಗು,ಅರೆಮೆಚ್ಚುಗೆ,ಉಳಿದೆಲ್ಲ ಪ್ರೀತಿ
ಎರೆದವಳು,
ವರ್ಷವೆರಡರ ಹಿಂದೆ
ಯಾತ್ರೆ ಮುಗಿಸಿ ಹೋಗಿಬಿಟ್ಟಳು.
ಬಿಳಿಬಿಳಿ ಕಣ್ಣು,ಪುಟ್ಟ ಜಡೆ,
ಸುಕ್ಕು ಮೈ, ಮುಗ್ಧ ನಗು
ಎಲ್ಲ ಪ್ರೀತ್ಯಾದರಗಳ
ನೆನಪಿನಂಚಿಗೆ ಹೊಳೆದು
ನಿಲ್ಲುವುದು
ಹೊರಡುವ ಮೊದಲು
ಕಿರಿಹಿಡಿದು ನೋಡಿದ ನೋಟ
ಏನು ಹೇಳಬೇಕಿತ್ತು ಅಮ್ಮಮ್ಮಾ?!
ನನಗೆ ಈಗ ಅನ್ನಿಸುತ್ತಿರುವುದೆಲ್ಲ
ನೀನು ಹೇಳದೆ ಉಳಿದಿದ್ದಾ!
ಆಚೆಮೊನ್ನೆ ತಿಥಿಯಾಯಿತು,
ನಿನ್ನೆ ವಡೆ,ಸಿಹಿ ಸಿಕ್ಕಿತು.

ಹತ್ತಕ್ಕೆ ಕಳಕೊಂಡ ಮುಗ್ಧತೆಯ
ಸಾವಿನಂಚು ಮರಳಿ ಕೊಟ್ಟಿತೆ?
ಆಟವಾಡುವ ಮನಸ ಜಗ್ಗಿ ನಿಲ್ಲ್ಲಿಸಿ
ಕೆಲಸಕೆಳೆದ ಕೈಯನ್ನ
ವೃದ್ಧಾಪ್ಯ ಕ್ಷಮಿಸಬಹುದೆ?
ಬದುಕು ಸಲ್ಲಿಸದೆ ಹೋಗಿದ್ದನ್ನು
ತಿಥಿಯಲ್ಲಿ ಪಡೆಯಬಹುದೆ?
ಎಲ್ಲ ವಿಶೇಷ ಸಿಟ್ಟು,ದ್ವೇಷಗಳು
ಕೊನೆಯ ದಿನಗಳಲ್ಲಿ
ನಿನ್ನ "ಹೋಕ್ಯಳ್ಲಿ ಬಿಡು"ವಿನಲ್ಲಿ
ಒಂದೊಂದಾಗಿ ಕಳಚಿಕೊಂಡಾಗ
ಹೀಗಂದುಕೊಂಡೆ,
ಕಾಲ ಮಾಗುತ್ತಾ ಕಳೆಯುತ್ತದೆ!

11 comments:

ಭಾಶೇ said...

ಅದ್ಭುತ! ಹೃದಯ ತಾಕುವಂತ ಕವನ

ತೇಜಸ್ವಿನಿ ಹೆಗಡೆ said...

ಪ್ರಿಯ ಸಿಂಧು,

ತುಂಬಾ ಇಷ್ಟಾತು ಕವನ. ಅದರಲ್ಲೂ ಕೊನೆಯ ಸಾಲುಗಳು ಮನವನ್ನು ಭಾರಗೊಳಿಸಿದವು...

ಸಾಗರದಾಚೆಯ ಇಂಚರ said...

ಸಿಂಧು
ತುಂಬಾ ಭಾವುಕ ಕವನ
ಅವಳ ತೆಕ್ಕೆಯಲ್ಲಿ ಬೆಳದ ನಾವು ಅವಳಿಗೆ ಕೊಟ್ಟದ್ದು ಅಲ್ಪ,
ತೆಗೆದುಕೊಂಡದ್ದು ಅಪಾರ

sunaath said...

ಸಿಂಧು,
ಮೊದಲರ್ಧ ಓದುತ್ತಿರುವಾಗ ಮೂಡುತ್ತಿದ್ದ ಸುಖಿ ಭಾವನೆ, ಎರಡನೆಯ ಅರ್ಧ ಪ್ರಾರಂಭಿಸುತ್ತಲೇ ತಲ್ಲಣದಲ್ಲಿ ಬದಲಾಯಿತು.
ನೀವು ಬರೆದದ್ದು ಕೇವಲ ಕಲ್ಪನೆಯ ಆಧಾರದ ಮೇಲೆ ಎಂದು ಭಾವಿಸುತ್ತೇನೆ.
ಇದು ಕಣ್ಣೀರಿನ ಕವನ.

Subrahmanya said...

ಹೋಕ್ಕಳ್ಳಿ ಬಿಡಿ !

Anonymous said...

ರಾತ್ರಿಯಿಡೀ ಯಕ್ಷಗಾನ ???? we no longer have it right ? I miss my childhood days.. whole night chande maddale :-)

Enigma said...

bahala chennagide

ಸಿಂಧು sindhu said...

ಸ್ಪಂದಿಸಿದ ಸಹಮನಸ್ಕರಿಗೆಲ್ಲ ಭಾ.ಶೇ, ತೇಜಸ್ವಿನಿ, ಸಾಗರದಾಚೆಯ ಇಂಚರ,ಸುನಾಥ, ಸುಬ್ರಹ್ಮಣ್ಯ,ಬಚೋಡಿ, ಎನಿಗ್ಮಾ ಎಲ್ಲರಿಗೂ ವಂದನೆಗಳು.

ಸುನಾಥ,
ಕ್ಷಮಿಸಿ ಇದು ಕಲ್ಪನೆಯ ಕವಿತೆ ಅಲ್ಲ. :(
ಬದುಕಿನಲ್ಲಿ ಮುಂದೆ ಏನೇನೋ ಸಿಕ್ಕ ಅವಳಿಗೆ ಯಾವುದರಲ್ಲಿ ಅವಳು ಕಳೆದುಕೊಂಡ ಮುಗ್ಧ ಬಾಲ್ಯ ದೊರಕುತ್ತಿತ್ತು? ಈ ಪ್ರಶ್ನೆಗೆ ನನಗೆ ಎಂದಿಗೂ ಉತ್ತರವೇ ಸಿಗುವುದಿಲ್ಲ.

ಬಚೋಡಿ,
ಈಗ ಬಹುಶಃ ಇಲ್ಲೆ. ಆದರೂ ತಾಳಮದ್ದಲೆಯಂತೂ ಆಗ್ತಲೆ ಇರ್ತು ಅಂತ ಕಾಣ್ತು. ನನ್ನ ಕವಿತೆ ಒಂದು ೧೫-೧೮ ವರ್ಷಕ್ಕೂ ಹಿಂದಿನ ನೆನಪುಗಳನ್ನ ಆಧರಿಸಿದ್ದು.

ಪ್ರೀತಿಯಿಂದ,
ಸಿಂಧು

Shree said...

ಓಹ್...

ಅನಂತ್ ರಾಜ್ said...

ಒ೦ದು ಹೃದಯಸ್ಪರ್ಶಿ ಕವನ. ಇದು ಕಲ್ಪನೆಯಲ್ಲ ಎ೦ಬ ನಿಮ್ಮ ಉತ್ತರವನ್ನೂ ನೋಡಿದೆ. ಹೆತ್ತವ್ವನಿಗೆ ಯಾರು ಸಾಟಿಯಿಲ್ಲ..

ಶುಭಾಶಯಗಳು
ಅನ೦ತ್

ಸಿಂಧು sindhu said...

ಶ್ರೀ,
:(

ಅನಂತರಾಜ್,
ಧನ್ಯವಾದಗಳು.
ಈ ಕವಿತೆಯ ಸ್ಫೂರ್ತಿ ನನ್ನ ಅಜ್ಜಿ. ಅಮ್ಮನಲ್ಲ. ನಮ್ಮ ಕಡೆ ಅಜ್ಜಿಗೆ ಅಮ್ಮಮ್ಮ ಎಂದು ಕರೆಯುತ್ತೇವೆ.

ಪ್ರೀತಿಯಿಂದ
ಸಿಂಧು