ಉಪಯೋಗಿಸದೆ ಇಟ್ಟರೆ ಎಲ್ಲವಕ್ಕೂ ತುಕ್ಕು ಹಿಡಿಯುತ್ತದೆ ಅಂತ ಅದ್ಯಾವುದೋ ಕಾಲದಲ್ಲಿ ಕ್ಲಾಸಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿದ್ದಾಗ ಕೇಳಿದ ನೆನಪು. ಇನ್ಯಾವತ್ತೋ ಈ ಬಗ್ಗೆ ಪುಟಗಟ್ಟಲೆ ಬರೆದು ೫ ಮಾರ್ಕು ಗಳಿಸಲು ಹೋರಾಡಿದ್ದ ನೆನಪು. ಬ್ಲಡ್ಡೀ ಕರ್ರೋಸನ್ ಅಂತ ಮಾಸ್ತರರೊಬ್ಬರು ವೀರಾವೇಶಾದಿಂದ ಗಂಟೆಗಟ್ಟಲೆ ಕೊರೆಯುವುದನ್ನ ಅಣಕಿಸಿ ಮುಸಿಮುಸಿ ನಕ್ಕ ನೆನಪು ಇಲ್ಲೇ ಬಗಲಲ್ಲಿ ಹಚ್ಚಗಿದೆ.
ಈ ಧಾವಂತದ ಬದುಕಿನಲ್ಲಿ – ಸುಮ್ಮನಿದ್ದರೆ ಪಕ್ಕದಲ್ಲಿ ಧಾವಿಸುವವನು ನಿನ್ನ ಮೇಲೆಯೇ ಹಾದು ಹೋಗುತ್ತಾರೆ ಅದಕ್ಕಾಗಿ ನೀನೂ ಧಾವಿಸುತ್ತಿರಬೇಕು ಎಂಬ – ನಿಯಮಗಳ ಬದುಕಿನಲ್ಲಿ ಮಾರ್ದವತೆಗೆ ತುಕ್ಕು ಹಿಡಿದಿದೆ.
ಈಗಷ್ಟೇ ಸಂಜೆಗತ್ತಲು ಕವಿಯುವ ಮೊದಲು ಮಿನರ್ವಾದಿಂದ ಹೊರಟು ಗಾಂಧಿಬಜಾರಿನವರೆಗೂ ಸಾವಧಾನದಿಂದ ಬಂದ ನಡಿಗೆಯ ನೆನಪು ಹಾಗೆ ಇಲ್ಲಿ ಆರದೆ ಕೂತಿದೆ.
ಇವತ್ತು ಸಂಜೆ ಇಲ್ಲೆ ಮನೆಯಾಚೆ ಇರುವ ಪಾರ್ಕಿಗೆ ಹೋಗಲು ಸಮಯವಿಲ್ಲ, ಹೋಗಲೇಬೇಕಿದ್ದರೆ ಬೈಕು ಬೇಕು. ನಡಿಗೆಯ ಆಮೆಓಟವನ್ನ ಹಿಂದೆ ಹಾಕಿ ಸಮಯವಿಲ್ಲದ ಮೊಲ ಓಡಿಹೋಗುತ್ತಿದೆ.
ಅದಕ್ಕೆ ಗೊತ್ತಿದೆಯಾ ಈ ಓಡುವಿಕೆಯ ಕೊನೆಗೆ ಎದ್ದು ನಿಲ್ಲಲೂ ತ್ರಾಣವಿರುವುದಿಲ್ಲ ಅಂತ?!
ಇವಳ ಮಿಂಚುಕಣ್ಣು ಅವತ್ತು ಮಿಂಚಿದ್ದರೆ ಅದಕ್ಕೆ ಅವನೇ ಕಾರಣ.
ಇವತ್ತು ಅವಳ ಮಿಂಚು ಕಣ್ಣು ಕುಕ್ಕುತಿದ್ದರೆ ಅದಕ್ಕೂ ಅವನೇ ಕಾರಣ.
ಎರಡು ಮಿಂಚುಗಳ ನಡುವೆ ಕಳೆದುಕೊಂಡಿದ್ದೇನು.
ಮಿಂಚು ಕಂಡು ರೋಮಾಂಚನಗೊಳ್ಳುವುದನ್ನೇ?
ಕಳೆದುಕೊಳ್ಳುವಿಕೆ ಮಾತ್ರ ಅಕಾರಣ!
ಹೊಸತೆಂದರೇನು? ಬರಿಯ ಚಿಗುರು ಮಾತ್ರವೇ? ಬೇರಲ್ಲಿರುವುದೆಲ್ಲ ಹಳೆಯದೇ ಹಾಗಾದರೆ?!
ಬದಲಾವಣೆಯ ಬದುಕಿನಲ್ಲಿ ಬದಲಾಗದೆ ಉಳಿಯುವುದೇನು?
ತೀರದ ಆಶೆಗಳೇ?
ಜೊತೆಜೊತೆಯ ಹೆಜ್ಜೆ, ಎಷ್ಟೇ ಹತ್ತಿರವಾಗಿಟ್ಟರೂ
ಕೊನೆಗೆ ಯಾಕೆ ಅನಿಸುತ್ತದೆ
ದೋಣಿಯೊಳಗೆ ನೀನೂ.... ಕರೆಯ ಮೇಲೆ ನಾನೂ...?!
ಎಲ್ಲ ಗೊಂದಲಗಳ ಉತ್ತರದ ಮ್ಯಾಪು ಚಾರಣದಲ್ಲಿದೆಯೇ?
ಆರೋಹಣದ ಹಾದಿಯ ಮೂಲ ಕಣಿವೆಯಲ್ಲಂತೆ ಹೌದೆ?
ಸೇತುವೆಯಾದ ಮಾತು ಗೋಡೆಯಾದ ಮೇಲೆ
ಬೇಸರಾಗಿದೆ ಮನಕೆ
ಇಂದಿನ ತುಂಬಾ ಅಂದಿನ ನೆನಕೆ.
ಮತ್ತೊಮ್ಮೆ ನೆನಪಿಸಿಕೊಳ್ಳಬಯಸುತ್ತೇನೆ. ಮತ್ತೆ ಮತ್ತೆ ಕನಸುತ್ತೇನೆ;
ಅಂದು – ಇರುಳಿನಲ್ಲೂ ಬೆಳಗು
ಕತ್ತಲಿಲ್ಲಿ ಒಳಗೂ ಹೊರಗೂ!
ಇಷ್ಟೆಲ್ಲ ಕನವರಿಸಿಯೂ, ಎಲ್ಲದರ ಮೇಲೆ ಬೇಸರಿಸಿಕೊಂಡೂ,
ತುಂಬು ಕೃತಜ್ಞತೆ ನನಗೆ,
ಅಂದಿಗಾದರೂ ದಕ್ಕಿತ್ತಲ್ಲ ಬೇಕಿದ್ದುದು,
ಇಂದಿಗೆ ನೆನಪಿಸಿಕೊಳ್ಳಲು ಉಳಿಯಿತಲ್ಲ.
ಇಷ್ಟೆಲ್ಲ ಮಾತನಾಡಿದೆ ನಾನು. ನಾನು ಅವಳಾಗಿಯೇ ಉಳಿದಿಲ್ಲ
ನೀನು ಹೇಗೆ ಅವನೇ ಆಗಿರುತ್ತಿ?!
ಅಲ್ಲ!!!
ಪುಣ್ಯವೆಂದರೆ ಇಬ್ಬರ ಬೆನ್ನಿಗೂ ಅದೇ ನೆಲ.
ನೋಡಲೊಂದೇ ಆಕಾಶ,
ಹಾದಿ ಮುಗಿದಿಲ್ಲ
ವಿಸ್ತರಿಸಿದೆ!
ಕತ್ತಲೆಯ ಕಾವಳದಲ್ಲಿ
ಅಮ್ಮನ ಮಿನುಗುಚುಕ್ಕಿ!
ನೆನಪಿನ ಎಣ್ಣೆ, ಅಕ್ಕರೆಯ ಹಳೆಬಟ್ಟೆ
ತಿಕ್ಕಿ ಒರೆಸಲು ಕಳೆಯದೆ ತುಕ್ಕು?
ಬರೆಯಲಿಕ್ಕೆಷ್ಟೋ ಇದೆ.
ಎಲ್ಲವನ್ನ ಬರೆದೆ ಅರುಹಬೇಕೆ
ಹೊಳವಿಗೂ ಅಷ್ಟಿರಲಿ!
(ತಲೆಬರಹದ ಸಾಲು ರಾಜರತ್ನಂ ಅವರ -ರತ್ನ ಬೇವಾರ್ಸಿ- ಕವಿತೆಯದು)
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
3 comments:
ಈ ಓಟ ನಿರಂತರ ಯೋಚಿಸುವ ಮನಸುಗಳಷ್ಟೇ ನೊಂದುಕೊಳ್ಳುವುದು ಓಡುವ ಸಾವಿರಾರು ಜೀವಗಳಿಗೆ ಓಡುತ್ತಿರುವ ಕಾರಣದ ಅರಿವೂ ಇರುವುದಿಲ್ಲ
ಸಿಂಧು,
ಜೀವನವೆಲ್ಲ ಮಿಂಚು ಹಾಗು ರೋಮಾಂಚನವಾಗಿ ಉಳಿಯುವದು ಸಾಧ್ಯವೆ, ಸರಿಯೆ?
ಎಳೆ ಚಿಗುರನ್ನು ನೋಡಿ ರೋಮಾಂಚನಗೊಳ್ಳುವದು ಮಾಗುತ್ತಿರುವ ಎಲೆಗೆ ಸಾಧ್ಯವಿದೆ.
ಮಾಗುವದೇ ಜೀವನ ರೀತಿ, ಜೀವನ ನೀತಿ!
-ಸುನಾಥ
ಭಾಶೇ,
ನಿಮ್ಮ ಸ್ಪಂದನೆಗೆ ಧನ್ಯವಾದಗಳು. ನಿಮ್ಮ ಅನಿಸಿಕೆ ನನಗೂ ಒಪ್ಪಿಗೆ.
ಸುನಾಥ,
ನಿಮ್ಮ ತಿಳುವಳಿಕೆ ಯಾವತ್ತೂ ನನಗೊಂದು ಹೊಳಹಾಗಿ ಕೈ ಹಿಡಿಯುತ್ತದೆ.
ಬಹುಶಃ ಬದುಕು ನೀವು ಹೇಳಿದಂತೆಯೇ ಮಾಗುತ್ತದೆ. ಆದರೆ ಎಂದೋ ಅನುಭವಿಸಿದ ಮಾಧುರ್ಯದ ನೆನಕೆ, ರೋಮಾಂಚನ, ಪ್ರತೀಕ್ಷೆ ಇವತ್ತಿನ ಕ್ಷಣಗಳನ್ನು ಅಲ್ಲಿ ಇಲ್ಲಿ ಕಾಡುವುದು ಸುಳ್ಳಲ್ಲ. ಹಾಗೆ ಕಾಡದೆ ಇದ್ದರೆ ಹೇಗೆ ಅಂತಲೂ ಅನ್ನಿಸುತ್ತದೆ.
ಮಾಗುವುದೇ ಜೀವನ ರೀತಿ - ಇದು ವಾಸ್ತವ.
ಎಚ್ಚರದಲ್ಲೂ ಕನಸದೆ ನನ್ನ ದಿನವೇ ಮುಗಿಯುವುದಿಲ್ಲ ಇದು ಪೂರ್ವಸಂಪಾದಿತ ಕರ್ಮ :)
ಪ್ರೀತಿಯಿಂದ
ಸಿಂಧು.
Post a Comment