Friday, August 28, 2009

ಅಶ್ರುತ ಗಾನ..

ಬೇಸರ,ಸಂಕಟ,ಅನಾನುಕೂಲಗಳನ್ನೆಲ್ಲ
ಮೂಟೆ ಕಟ್ಟಿಟ್ಟ
ಆಹ್ಲಾದದ ಹಾದಿಯದು
ಪುಲ್ಲ ಕುಸುಮಿತ ದ್ರುಮದಲ ಶೋಭಿನೀ
ಹೊರೆಗೆಲಸದ ಕಟ್ಟೆಯಿಳಿದು
ಕಾಲು ಚೆಲ್ಲಿದ ಕೂಡಲೆ
ಮುತ್ತಿಡುವ ಆಶಾದಾಯಿನಿ

ಯಾವ ತಿರುವಲ್ಲಿ ತಿರುಗಿದೆನೋ ಗೊತ್ತಿಲ್ಲ
ಅನುಕೂಲಗಳ ಆತಂಕರಹಿತ
ಅನಾಹತ ಹೈವೇಗೆ ಬಂದಾಯಿತು
ಇಲ್ಲೇ ಸುದೂರದಿ
ನೀಲಿಗೆರೆಯ ಸುತ್ತಲ
ಹಸಿರು ಪದರದ ಹಾದಿಯ ಸಂಜೀವಿನೀ
ದೂರವೇನಿಲ್ಲ,
ಕಾಲಿಗೆ ದಕ್ಕುವುದಿಲ್ಲ,
ನಡುವೆಯಿರುವುದೀಗ
ದಾಟಿ ಹಾರಬಹುದಾದ ಕಿಟಕಿಯಲ್ಲ
ದಿನದಿನವೂ ಮೊನಚಾಗಿ ಚುಚ್ಚುವ ಕನ್ನಡಿ!
ಮುಂದೆ ಮುಂದೆ ಹೋದರೆದಾರಿ ಸಿಕ್ಕದಲ್ಲ
ಹಿಂದೆ ತಿರುಗಿ ಹೋಗಬಹುದೆ?
ಅದರ ಗುಟ್ಟು ನನಗೆ ತಿಳಿಯದಲ್ಲ..!
ಕೂತು ಯೋಚಿಸಲು ಗಡಿಬಿಡಿ
ಕೊನೆಗೆ ಷರಾ ಹೋಗಲಿಬಿಡಿ..
ಆಕಡೆ ನೋಡದಿದ್ದರಾಯಿತು
ದಾರಿ ತನ್ನ ಪಾಡಿಗೆ ತಾನು ಕನ್ನಡಿಯಲ್ಲಿರಲಿಬಿಡಿ

ಆದರೂ...

ಈಗ ಇಲ್ಲದಿದ್ದರ ಕುರಿತು
ಕೊರಗಿ ನಲುಗುವ ಮೊದಲು
ಒಂದು ಕೃತಜ್ಞತೆ ಹೇಳಬೇಕಿದೆ,
ಇಲ್ಲಿಯವರೆಗೆ ನಿಲುಕಿದ್ದಕ್ಕೆ
ಬೇಕಿತ್ತೋ ಬೇಡವೋ ಒಳಗೊಂಡಿದ್ದಕ್ಕೆ
ಕೇಳದೆಯೇ ಒಲಿದು ಬಂದದ್ದಕ್ಕೆ
ಕಣ್ಣಹನಿಯಿಳಿಯುವಾಗ ಅಂಗೈ ಹಿಡಿದದ್ದಕ್ಕೆ
ಹೆಜ್ಜೆ ಜಾರುವಾಗ, ಕೈಬೆರಳ ಬಿಗಿದು ಹಿಡಿದ ಬಿಸುಪಿಗೆ
ಹಾಗೆ ನೋಡಿದರೆ
ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿಸಿದ ಬದುಕಿಗೆ
ಬೇಸರ ಮಾಡಬಹುದೆ ಈಗ?

ಸಂಕಟಕಳೆದು
ನಲಿವು ಮುಗಿದು
ಸ್ಥಿತಪ್ರಜ್ಞಯೋಗದಲ್ಲೂ
ಇನ್ನೇನೋ ಬೇಕು ಬೇಕೆನ್ನುವುದು
ಸಾಥ್ ಕೊಡಲಾಗದ ಹೆಸರಿರದ ರಾಗ!

6 comments:

sunaath said...

ಯಾವ ದರಿ ನಮ್ಮ ಕಾಲುಗಳಿಗೆ ಸಿಗುವದೋ ಅದೇ ದಾರಿಗೇ ಕೃತಜ್ಞತೆಯನ್ನು ಅರ್ಪಿಸುವದು ಉಳಿದಿರುವ ಉಪಾಯ!

ಜಲನಯನ said...

ಸಿಂಧು, ಶಿವು ಮೂಲಕ ನಿಮ್ಮ ಬ್ಲಾಗಿಗೆ ಇಣುಕಿದ್ದೇನೆ...ತುಂಬು ಆಳದ ಗಹನ ವಿಚಾರಗಳ ಕವಿತೆಗೆ ಅಭಿನಂದನೆಗಳು.
ನೀಲಿಗೆರೆಯ ಸುತ್ತಲ ಹಸಿರು ಪದರದ ಹಾದಿಯ ಸಂಜೀವಿನಿ...ನಭಕ್ಕೆ -ಭುವಿಯ ಚಾದರವೋ ಅಥವಾ ಹಸಿರು ಭುವಿಗೆ ನೀಲಿ ನಭದ ಆವರಣವೋ ತಿಳಿಯಲಿಲ್ಲ...ಹೇಗೆ ಇದರ ಪ್ರಯೋಗ..?? ತಿಳಿಸಿ.

shivu.k said...

ಸಿಂಧು ಮೇಡಮ್,

ಕವಿತೆ ಚೆನ್ನಾಗಿದೆ. ಅನೇಕ ಒಳ ಅರ್ಥಗಳನ್ನು ಕವನದ ಮೂಲಕ ಹೇಳೀದ್ದೀರಿ...

ಸುಪ್ತದೀಪ್ತಿ said...

ಸಿಂಧು, ನಿನ್ನ ಕವನಗಳಲ್ಲಿ ಜೀವನ ಚಿಂತನೆಯ ಗಾಢತೆಯಿರುತ್ತದೆ. ಇಲ್ಲೂ ಅದು ಹೊರತಾಗಿಲ್ಲ. ಆಳವಾದ ಚಿಂತನ, ಮಥನ ನಿನ್ನ ಕವನಗಳ ಜೀವಾಳ, ಶಕ್ತಿ. ಹೀಗೇ ಬರೀತಿರು.

Shiv said...

ಸಿಂಧು ಅವರೇ,

ಹೌದಲ್ವಾ..ಆ ರಾಗಕ್ಕೆ ಹೆಸರೇ ಇಲ್ಲಾ..

ಇನ್ನೇನೋ ಬೇಕು ಬೇಕೆನ್ನುವುದು
ಸಾಥ್ ಕೊಡಲಾಗದ ಹೆಸರಿರದ ರಾಗ!

ಇಷ್ಟವಾಯ್ತು ನಿಮ್ಮ ಕವನ

-ಪಾತರಗಿತ್ತಿ

ಶಾಂತಲಾ ಭಂಡಿ (ಸನ್ನಿಧಿ) said...

ಚಿಂದಕ್ಕಾ...

"ಹಾಗೆ ನೋಡಿದರೆ
ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರೀತಿಸಿದ ಬದುಕಿಗೆ
ಬೇಸರ ಮಾಡಬಹುದೆ ಈಗ?"

ಹಬ್ಬಿ ಹಬ್ಬಿ ಹಂದರವಾದ ಚೆಂದದ ಸಾಲುಗಳಿಗೆಲ್ಲ ಆಧಾರಸ್ಥಂಬದಂಗಿರುವ ಈ ಸಾಲು ಮತ್ತಷ್ಟು ಇಷ್ಟವಾಯಿತು.
ನೀ ಬರೀತಿರು ಮತ್ತೆ.