Wednesday, August 19, 2009

ಬರಿ ಬೆಳಗಲ್ಲೋ ಅಣ್ಣಾ...

ಪಾದರಕ್ಷೆಯೊಳಗಣ ಒದ್ದೆ ಮುದ್ದೆ ಪಾದ
ನೆನೆದು ತೋಯ್ದ ರಸ್ತೆಯ ಮೇಲೆ
ಕೊಡೆಯ ಕೆಳಗೇ ನಡೆದೂ
ಮೇಲುದದ ತುದಿಯಲ್ಲಿ ತುಂತುರು ಹನಿಗಳು
ಛೇ, ಬೆಳಗಿನ ಹೊಸ್ತಿಲಲಿ
ಹೀಗೆ ಮಳೆ ಹುಯ್ದರೆ
ಆಫೀಸಿಗೆ ಹೋಗುವುದು ಹೇಗೆ
ಎಷ್ಟು ಕಷ್ಟವಪ್ಪಾ ಬದುಕೂ...
ಥಂಡಿಯಲಿ ತುಟಿ ಸುತ್ತಿಸಿ ಒಳಗಿನ ಬಿಸಿಯನ್ನು
ಗಾಳಿಯಲಿ ಊದಿಬಿಟ್ಟ ಉಂಗುರಗಳನ್ನ
ನೋಡುತ್ತ ಕತ್ತು ಮೇಲೆತ್ತಿದರೆ..

ಬೀದಿಯಂಚಲಿ
ಮೋಡವೇ ತನ್ನೊಳಗೆ ಎಂಬಂತೆ
ಹನಿಯಿಡುತ್ತಿರುವ ಆಕಾಶಮಲ್ಲಿಗೆಯ ಮರ
ತೂಗಿಬಿದ್ದ ಬೆಂಡೋಲೆಹೂಗಳ ಗೊಂಚಲಲ್ಲಿ
ಪರಿಮಳವ ಹೊದ್ದು
ಇಳಿಯುತ್ತಿರುವ ಬನಿ
ಯಾರೂ ರಂಗೋಲಿಯಿಡದ
ಮುಖ್ಯರಸ್ತೆಯ
ಮೈಯ ತುಂಬ
ಚಿತ್ತಾರವಿಟ್ಟ ಬಿಳಿಬಿಳಿಹೂಗಳು
ಎಲೆಮರೆಯಲ್ಲಿ ಒದ್ದೆ ಪುಕ್ಕ
ಕೊಡವುತ್ತ ಆರ್ದ್ರವಾಗಿ ಕುಳಿತು
ಬೆಚ್ಚನೆ ರಾಗವ ಉಲಿಯುತ್ತಿರುವ ಹಕ್ಕಿ ಸಮುದಾಯ
ಬೇಡಿಕೆ, ಬೇಸರಗಳಿಲ್ಲದ ಸಹಜ ಸತ್ಯ ಬದುಕು

ಅದೇ ಒದ್ದೆಮುದ್ದೆ ಹಾದಿ,
ಮೈ ತೋಯಿಸುವ ಮಳೆ ಆಪ್ತವೆನಿಸಿ..
ಅಷ್ಟೇ ಅಲ್ಲ
ಕಾದಿರುವ ಬೆಚ್ಚನೆ ಕ್ಯಾಬು,
ಒಣಗಿ ಗರಿಗರಿಯಾಗಿರುವ ಆಫೀಸು ಕ್ಯೂಬು
ಎಲ್ಲ ನೆನಪಾದವು...
ಇದು ಬರಿ ಬೆಳಗಲ್ಲೋ ಅಣ್ಣಾ -
ಬೇಂದ್ರೆ ಅಂದರಂತೆ
ಹೌದೆನಲು ಮಾತು ಮರೆತು ನಿಂತೆ!

ಕಾರ್ಪೋರೇಟ್ ಮೌನದಲಿ
ಮರೆತ ಮಾತು ಆವಿಯಾಗುತ್ತಿದೆ
ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ
ನೋಡಬೇಕು ಅಷ್ಟೆ!

4 comments:

ಅನಂತ said...

ಚೆನ್ನಾಗಿದೆ..! :)
ಇಷ್ಟ ಆಯ್ತು..

sunaath said...

Routineದಲ್ಲೇ ಕಾವ್ಯ ಅರಳುವ ಪರಿ ಎಂದರೆ ಇದು!

ಸುಪ್ತದೀಪ್ತಿ said...

ನಿತ್ಯದ ಬವಣೆಯನ್ನು ದಾಟಿ ನೋಡಿದಾಗ ಕಂಡ ಇನ್ನೊಂದು ನೋಟ ಇಷ್ಟವಾಯ್ತು ಸಿಂಧು. ಅದನ್ನು ಚಪ್ಪರಿಸಿಕೊಂಡು ನಮ್ಮೊಂದಿಗೆ ಹಂಚಿಕೊಂಡ ರೀತಿಯೂ ಮೆಚ್ಚಾಗಿದೆ. ಬರೀತಿರು.

ಆಲಾಪಿನಿ said...

ಚೆನ್ನಾಗಿದೇರೀ..