Monday, August 3, 2009

ಹತ್ತುವುದೆಲ್ಲ ಇಳಿಯಲಿಕ್ಕೇ...!!?

ಏರು ಹಾದಿಯ ಬೆಟ್ಟಸಾಲಿನ
ನಿಬಿಡ ಕಾಡಿನ ಅಂಚಲಿ
ಹರಡಿ ನಿಂತ ಚಾಮರವ
ಹೊತ್ತ ಮತ್ತಿಮರದ ನೆರಳಲಿ
ನಿಂತು ನೋಡಲು
ಕಾಣಸಿಗುವುದು ದೂರಕಣಿವೆಯ
ಕಾಲುಹಾದಿ,..
ಹಸಿರ ಹುಲ್ಲಿನ ಮಧ್ಯೆ
ಬಳುಕಿ ಹರಿವ ಹೊನಲಿದೆ,
ಅಲ್ಲೆ ಸನಿಹದಿ
ಮೆಲ್ಲಹೊರಳುತ ದಾರಿ
ದೂರಕೆ ಸಾಗಿದೆ
ಬೆಟ್ಟತುದಿಯ ನೋಟಕೆ
ಕ್ಯಾಮೆರಾ ಕಣ್ಣಾಟಕೆ
ರಮಣೀಯ ಚಿತ್ರದ ಯೋಚನೆ
ದಾರಿಯೆಡೆಯಲ್ಲಿ ನಡೆದವರಿಗಷ್ಟೇ
ಗೊತ್ತು
ಚುಚ್ಚುವ ಮುಳ್ಳು, ಒತ್ತುವ ಕಲ್ಲು
ಹಳ್ಳದ ಉಸುಕು,
ಗುರಿಯಿರದ ಪಯಣದ ಯಾತನೆ....

ಇಲ್ಲಿ ದೂರದಿ
ಬೆಟ್ಟದೇರಲಿ
ತಂಪು ಮತ್ತಿಯ
ನೆರಳಲಿ
ಆ ಎಲ್ಲ ಯಾತನೆಗಳ
ತಿಥಿ ನಡೆದಿದೆ
ಊಟವಿಲ್ಲದ ಶ್ರಾದ್ಧ;
ಮನಸೋ
ಮರೆಯಬೇಕಿರುವುದನ್ನೆ
ನೆನೆಯಲು
ಮತ್ತೆ ಮತ್ತೆ ಬದ್ಧ;
ಮರೆಯಲೋ ನೆನಪಾಗಲೋ
ನೆನಪುಗಳಿಗೆ ನಡೆದಿವೆ
ತಂತಮ್ಮೊಳಗೇ ಯುದ್ಧ!

ಯುದ್ಧ ಮುಗಿದು
ಗಾಯಗಳ ನೆಕ್ಕುತ್ತಾ,
ಕಣ್ಣ ನೋಟವ ಕದಲಿಸಿ
ಬೆಟ್ಟಸಾಲಿನಲ್ಲಿ
ಆರೋಹಣ.
ಮತ್ತೆ ಮುಂದಿನ ತಿಥಿಗೆ
ನೆನಪುಗಳ ಅವರೋಹಣ..
ಹತ್ತುವುದೆಲ್ಲ ಇಳಿಯಲಿಕ್ಕೇ ಅಂತ ಇದಕ್ಕೇ ಅನ್ನುತ್ತಾರೇನೋ!

7 comments:

ಶಾಂತಲಾ ಭಂಡಿ (ಸನ್ನಿಧಿ) said...

ಚಿಂಧಕ್ಕಾ...
ಹತ್ತುವುದೆಲ್ಲ ಇಳಿಯಲಿಕ್ಕೇ. ಆದರೂ ಹತ್ತುವುದೆಲ್ಲ ಇಳಿಯುವುದಕ್ಕೇ ಅಂತ ನೆನಪಾದರೆ ಬೇಸರ. ಅಲ್ಲೆಲ್ಲೋ ಖುಷಿ. ಹತ್ತುವಾಗ ಏರಿದ ಉಸಿರೂ ಇಳಿವಾಗ ಜಾರುತ್ತದೆಯಲ್ಲ. ಭಯ.
ಬರೆಯುತ್ತಿರಬೇಕು ನೀನು. ನಾನು ಓದುತ್ತಲಿರಬೇಕು.
ನಿಜ, ಪ್ರತಿಸಾಲನ್ನೂ ಪ್ರೀತಿಸುವಂತೆ ಬರೆಯುತ್ತೀಯೆಂದರೆ ಅದು ನೀನು. ಹೊಗಳಿದ್ದಲ್ಲ ಬಿಡು.

sunaath said...

ಸಿಂಧು,
ಹಳೇ ಗಾದೆಗೆ ಹೊಸ ಅರ್ಥ ಕೊಟ್ಟಿದ್ದೀರಿ. ಕವನ ಚೆನ್ನಾಗಿದೆ.

ಸಾಗರದಾಚೆಯ ಇಂಚರ said...

ತುಂಬಾ ಸುಂದರವಾಗಿದೆ, ಪ್ರತಿ ಸಾಲುಗಳೂ ಚಿಂತನೆಗೆ ನಮ್ಮನ್ನು ಒಡ್ಡುತ್ತವೆ

shivu.k said...

ಸಿಂಧು ಮೇಡಮ್,

ಕವನ ಚೆನ್ನಾಗಿದೆ...ಹೊಸದಾಗಿದೆಯೆನಿಸಿತು. ಅರ್ಥಗರ್ಭಿತವೂ ಆಗಿದೆ.

SuZ said...

ಪ್ರತೀ ಸಲ ಹತ್ತಿದಾಗಲು ನಾನು ಪೂರ್ತಿ ಇಳಿದು ಬರೋಕೆ ಆಗಿಲ್ಲ, ನನ್ನ ಮನಸ್ಸು ಇನ್ನಾ ಅಲ್ಲೇ, ಆ ಬೆಟ್ಟತುದಿಗಳಲ್ಲೇ ಇದೆ :)

ಗಿರಿ said...

wow.... tumba chennagide...
heege bareyuttiri..

thanks,
-giri

ಸಿಂಧು sindhu said...

ಶಾಂತಲೆ,
ಬೇಸರ,ಖುಶಿ,ಭಯ, ಆದರೂ ಪ್ರಯತ್ನಿಸುವ ಛಲ ಇದೆ ಅಲ್ಲವೇ ಏರಿಳಿತದ ಬದುಕು?!

ಸುನಾಥ,ಇಂಚರ,ಶಿವು
ನಿಮಗಿಷ್ಟವಾಗಿದ್ದು ಖುಶಿ.
ನನ್ನ ಅನುಭವದ ಕಹಿತೆರೆಯಲ್ಲಿ ಹಾಯ್ದ ಸಾಲುಗಳು.

ಸುಜಯ್,
ನಿಮ್ಮ ನೋಟವೇ ಬೇರೆ. ನನ್ನ ಎಲ್ಲ ನೋಟಗಳಾಚೆಯ ಇನ್ನೊಂದು ಚಿತ್ರ ತೋರಿಸಿದ್ದಕ್ಕೆ ಥ್ಯಾಂಕ್ಸ್. ಇದು ನನ್ನ ಮನಸ್ಸನ್ನ್ನು ಹಗುರಾಗಿಸಿತು.

ಗಿರಿ,
ವಂದನೆಗಳು

ಪ್ರೀತಿಯಿಂದ,
ಸಿಂಧು