ಹೌದು ಮುಗಿಲಗಲದ ಕಣ್ಣಿನವಳೇ, ನೀನು ತಡವಾಗಿ ಬಂದೆ ಎಂಬ ಸೆಡವು ಎನಗಿಲ್ಲ. ನನ್ನ ಜೀವಕೆ ನೀನು ಬಂದ ಪರಿಯನು ನೆನೆದು ಮಾತು ಬರಹಗಳೆಲ್ಲ ಮೂಕವಾಗಿ, ಎದೆಯ ಬಡಿತದಲ್ಲಿ ಕವನದ ಛಂದಸ್ಸು ತುಂಬುತ್ತಿದೆ. ನೀನು ಬಂದಿದ್ದರಾಗಿತ್ತು ಅಂತ ಮನಸ್ಸು ಬಯಸಿದ್ದು ಹೌದಾದರೂ, ನೀನೆ ಬರಬಹುದು ಅಂತ ಗೊತ್ತಿರಲಿಲ್ಲ. ಎಷ್ಟೇ ಒಳ್ಳೆಯವನೇ ಆದರೂ ಎಡವಟ್ಟನಂತೆ ಇರುವ ನನ್ನ ಬದುಕಿನ ಬಯಲಿಗೆ ಬೆಳದಿಂಗಳಂತೆ ಹರಿದು ಬಂದ ಹುಣ್ಣಿಮೆಯೇ ನಿನ್ನ ಬೆರಳಳತೆ ಅಂದಾಜು ಮಾಡಲಾಗದೆ ಅಮ್ಮನ ಬೆರಳಿನಳತೆಯ ಉಂಗುರ ತಂದಿದ್ದಕ್ಕೆ ದಯವಿಟ್ಟು ಕ್ಷಮಿಸು.
ನಮ್ಮನೆಯ ಹೊಸಿಲಕ್ಕಿ ದೂಡಿದ ಕೆಲವೇ ದಿನಗಳಲ್ಲಿ ನಿನ್ನನ್ನು ದಪ್ಪಗೆ ಮಾಡುವ ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತೇನೆ.
ನಿನಗೆ ತಿಳಿನೇರಳೆ ಬಣ್ಣ ಇಷ್ಟ ಅಂತ ಗೊತ್ತಾದಾಗಿನಿಂದ ನಾನು ತಗೊಳ್ಳುತ್ತಿರುವ ಎಲ್ಲ ಟೀಶರ್ಟ್ ಗಳೂ ಹೆಚ್ಚು ಕಡಿಮೆ ಅದರದ್ದೇ ಶೇಡಿನದ್ದು.ನಿನ್ನ ಜಡೆ ಹರಡಿದ ಬೆನ್ನು ನಿಮ್ಮನೆಯವರು ಕಳಿಸಿದ ಫೋಟೋದಲ್ಲಿ ಕಾಣಿಸದೇ ಇದ್ದರೂ, ಹುಣ್ಣಿಮೆಯ ಹಾಲು ಹರಿದಂತಹ ನಗು ಮಾತ್ರ ನನ್ನನ್ನ ಫಿದಾ ಮಾಡಿದ್ದು ಹೌದು. ಆಮೇಲೆ ದಿನಾ ರಾತ್ರೆ ಜೀಟಾಕ್ ಕಂಡುಹಿಡಿದ ಗೂಗಲ್ ಟೀಮನ್ನು ನೆನೆಸಿಕೊಂಡು ದೀಪ ಹಚ್ಚಿಟ್ಟೇ ಲ್ಯಾಪ್ಟಾಪ್ ಆನ್ ಮಾಡುತ್ತಿದ್ದೇನೆ. ದೇವರ ಮುಂದೆ ಕೈಮುಗಿಯಲು ಸೋಮಾರಿತನ ಮಾಡುವ ಈ ನನ್ಮಗ ಅದ್ಯಾಕೆ ದೀಪ ಹಚ್ಚಿಡುತ್ತಾನೆ ಅಂತ ಅಮ್ಮ ಸುಡೊಕು ಬಿಡಿಸುವುದಕ್ಕಿಂತ ಜಾಸ್ತಿ ತಲೆಕೆಡಿಸಿಕೊಂಡಿದಾಳೆ. ಅವಳಿಗೇನು ಗೊತ್ತು ನಮ್ಮ ನೆಟ್ಸಂಚಾರ, ಸಮಾಚಾರ.. ಅದೆಷ್ಟೇ ಹಳೇ ಕಾಲದವಳು ಅಂದುಕೊಂಡರೂ, ಸೈಲೆಂಟ್ ಮೋಡಿನ ನನ್ನ ಮೊಬೈಲಿನ ದೀಪ ಮಿನುಗಿದ ಕೂಡಲೆ ಅಮ್ಮನ ಕುಡಿಗಣ್ಣು ಮಿಂಚುತ್ತದೆ. ಅವಳಿಗೆ ಗೊತ್ತು ಬೆಟ್ಟದ ನೆಲ್ಲಿಕಾಯಿಗೆ ಸಮುದ್ರದ ಉಪ್ಪಿನವರು ಕರೆಮಾಡುತ್ತಿದ್ದಾರೆ ಅಂತ.
ನಿನ್ನ ಜೊತೆ ಚಾಟ್ ಮಾಡುವಾಗಲೆಲ್ಲ ಬರೀ ಸ್ಮೈಲಿಗಳೇ ತುಂಬಿಕೊಂಡು, ಪೂರ್ತಿ ಬರೆಯಲು ಅರ್ಜೆಂಟಾಗುವ ಅರ್ದಂಬರ್ಧ ಕಂಗ್ಲೀಶು ಕುಟ್ಟಿಕೊಂಡು ಅವತ್ತವತ್ತಿನ ಎಮೋಟ್ ಐಕಾನ್ಸ್ ಮಾತ್ರ ಹೊರಬರುತ್ತವೆ.
ಏನಾದರೂ ಮಾಡಿ ಕನ್ನಡಪಂಡಿತರು ಬೆತ್ತದ ಪೆಟ್ಟು ಕೊಟ್ಟು ಕಲಿಸಿದ ವರ್ಣಮಾಲೆಯನ್ನ ಉಪಯೋಗಿಸಿ ಕನಸಿನ ಬಣ್ಣಗಳನ್ನ ನನಸಿನ ಕ್ಯಾನ್ವಾಸಿನಲ್ಲಿ ಹರಡೋಣ ಅಂತ ಕೂತುಕೊಂಡಿದೀನಿ. ನನಗೇ ಗೊತ್ತಿಲ್ಲದಂತೆ ಚಿಕ್ಕವನಿದ್ದಾಗಿಂದ ಕೇಳಿ ಬೆಳೆದ ಕವನಗಳು ಭಾವಗೀತಗಳು ಪ್ರತೀ ಭಾವನೆಯ ಸೊಲ್ಲಿಗೂ ಪಲ್ಲವಿಯಾಗುತ್ತಿದೆ. ಓದುವ ನಿನಗೆ ಹೊಸಲೋಕದ ಕನಸಿನ ಹೂಗಳ ದಾರಿ ಘಮ್ಮಂತ ತೆರೆದುಕೊಳ್ಳುವ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ. ನಾನು ಬರೆದಿದ್ದೆಲ್ಲ ನಿನ್ನ ಮನಸ್ಸಿನಲ್ಲಿ ನಲ್ಮೆಯ ಬನಿಯಿಳಿಸಿದರೆ ಅದರ ಕ್ರೆಡಿಟ್ಟು ಭಾವಗೀತಗಳ ಕ್ಯಾಸೆಟ್ಟು ತಂದು ಕೇಳಿಸುವ ಅಮ್ಮನಿಗೂ, ನರಸಿಂಹಸ್ವಾಮಿಯವರ ಮಲ್ಲಿಗೆಯ ಮಾಲೆಯನ್ನು ಆರಿಸಿ ಆರಿಸಿ ಓದಿಸಿದ ಅಣ್ಣನಿಗೂ ಸಲ್ಲುತ್ತದೆ.
ನಿನ್ನ ಪ್ರಸ್ತಾಪ ಬರುವ ಒಂದು ವಾರ ಮುಂಚೆ ನಾವು ಸ್ನೇಹಿತರೆಲ್ಲ ಸೇರಿ ಮೂರು ದಿನ ಸುತ್ತಾಟಕ್ಕೆ ಹೋಗಿದ್ದೆವು.ನಮ್ಮ ಮೊದಲ ತಾಣ ಅಯ್ಯನಕೆರೆ ಅಂತ. ಸಕ್ಕರೆ ಪಟ್ಣದ ಮುಖ್ಯರಸ್ತೆಯಿಂದ ಒಂದ್ನಾಲ್ಕು ಕಿ.ಮೀ. ಒಳಗಿರುವ ಈ ಕೆರೆ ಯಾರೋ ರಾಜರ ಕಾಲದಲ್ಲಿ ಕಟ್ಟಿಸಿದ್ದು. ಸುತ್ತಮುತ್ತಲಿನ ಪುಟ್ಟ ಕೆರೆಗಳ ನೀರು ಕೋಡಿ ಬಿದ್ದು ಈ ಕೆರೆಗೆ ಬಂದು ತುಂಬಿ ನಂತರ ಕೋಡಿ ಬಿದ್ದು ಹೊಳೆಯಾಗಿ ಹರಿಯುತ್ತದೆ. ಸುತ್ತ ಮುತ್ತಲ ಹತ್ತಿಪ್ಪತ್ತು ಊರುಗಳಿಗೆ, ಗದ್ದೆ ತೋಟಗಳಿಗೆ, ಕುಡಿಯುವ ನೀರಿಗೆ ಆಸರೆಯಾಗಿ ಒದಗಿಬಂದ ಕೆರೆ.ನಾವು ಹೋಗಿದ್ದು ನವೆಂಬರಿನ ಕೊನೆಯಾದ್ದರಿಂದ ನೀರು ತುಂಬಿ ಕೆರೆ ಸಮುದ್ರದ ಪುಟ್ಟ ಪ್ರತಿಕೃತಿಯಂತೆ ಕಾಣುತ್ತಿತ್ತು.ದಂಡೆಗೆ ಅಲೆಗಳು ಅಪ್ಪಳಿಸುತ್ತಿದ್ದವು.ಕೋಡಿ ಬೀಳುವ ಕಟ್ಟೆಯ ಮೇಲೆ ನೀರು ತೆಳ್ಳಗೆ ದಾವಣಿಯಂತೆ ಆವರಿಸಿ ಕೆಳಗೆ ಧಾರೆಯಾಗುತ್ತಿತ್ತು.ನಾವೆಲ್ಲ ಕೈಕೈ ಹಿಡಿದು ಕೋಡಿದಂಡೆಯನ್ನ ನೀರಿನಲ್ಲಿ ಕಾಲದ್ದಿ ದಾಟುತ್ತಿದ್ದಾಗ ಗೆಳತಿಯೊಬ್ಬಳು ಮೇಲೆ ನೋಡಿ ಅಂತ ಕೂಗಿಕೊಂಡಳು ನೋಡಿದರೆ ಬೆಳ್ಳಕ್ಕಿಗಳು ದೇವರ ರುಜುವಿನಂತೆ ವೀವೀವೀಯಾಗಿ ನೀಲಿಯೆಂದರೆ ನೀಲಿಯಾಗಿ ಕಾಣುವ ಆಕಾಶದಲ್ಲಿ ಹಾರಿ ಹೋಗುತ್ತಿದ್ದವು. ನಿಮ್ಮನೆಯಲ್ಲಿ ನೀನು ಇಷ್ಟಪಟ್ಟು ಬೆಳೆಸಿರುವ ಭಟ್ಕಳ ಮಲ್ಲಿಗೆಯ ಬಿಳುಪಿನೊಂದಿಗೆ ಸ್ಪರ್ಧೆ ಇಟ್ಟರೆ ಬೆಳ್ಳಕ್ಕಿಯೇ ಗೆಲ್ಲುತ್ತದೆ. ಹಿನ್ನೆಲೆಗೆ ಅಯ್ಯನಕೆರೆಯ ಮೇಲೆ ಕಾಣುವ ನೀಲಿಯೇ ಇರಬೇಕಷ್ಟೇ. ನೀನು ನಮ್ಮನೆಯಲ್ಲಿ ಎಲ್ಲರ ನಲ್ಮೆಯಲ್ಲಿ ನೆಲೆಗೊಂಡ ಮೇಲೆ ಒಂದಿನ ಅಲ್ಲಿಗೆ ಕರೆದುಕೊಂಡು ಹೋಗುತ್ತೀನಿ. ರಾತ್ರಿ ಲೇಟಾಗಿ ಇಲ್ಲಿಂದ ಹೊರಟರೆ, ಬೆಳಗ್ಗಿನ ಬಿಸಿಲು ರಂಗೋಲಿ ಇಡುವುದರೊಳಗೆ ಅಲ್ಲಿರುತ್ತೀವಿ. ಯಾವುದೋ ಕಾಲದ ರಾಜ ಶಿಸ್ತುಬದ್ಧವಾಗಿ ಕಟ್ಟಿಸಿದ ಈ ಕೆರೆ ಇಂದಿಗೂ ಅದೇ ಅಚ್ಚುಕಟ್ಟಲ್ಲಿ ಉಳಿದುಕೊಂಡು ಸಾವಿರಾರು ಜನರಿಗೆ ಜೀವಸೆಲೆಯಾಗಿದೆ. ದಾರಿಯಲ್ಲಿ ಸಿಕ್ಕ ಹಳ್ಳಿಯವ ಹೇಳುತ್ತಿದ್ದ.ಹೂಳು ತೆಗೆಸುವುದು ಸರ್ಕಾರದ ಕೆಲಸವಾದಾಗಿನಿಂದ ಅದು ದೇವರ ಕೆಲಸವಾಗಿ, ಈಗೀಗ ಬೇಸಿಗೆಯಲ್ಲಿ ನೀರಿಗಿಂತ ಹೂಳೇ ಇರುತ್ತದೆ ಅಂತ. ನಾವೇ ಹೊಸದಾಗಿ ಕಟ್ಟಿಸುವುದಿರಲಿ, ಇದ್ದಿದ್ದನ್ನೂ ಉಳಿಸಗೊಡದೆ ಹೋಗುತ್ತೀವಲ್ಲ ಈ ಬಗ್ಗೆ ಭಾರೀ ಬೇಸರ ನನಗೆ. ನಿಮ್ಮ ಮನೆಯ ಹಿತ್ತಲಲ್ಲಿ ಇಂಗುಗುಂಡಿಯನ್ನ ನೋಡಿ ಮನಸ್ಸಿಗೆ ನೆಮ್ಮದಿಯಾಯಿತು. ಅದನ್ನು ನೀನೂ ನಿಮ್ಮಪ್ಪ ಸೇರಿ ಗುಂಡಿ ತೋಡಿ, ಇಟ್ಟಿಗೆ ಇಟ್ಟು ಕಟ್ಟಿದಿರಿ ಅಂತ ಕೇಳಿ ಆ ನೆಮ್ಮದಿಗೆ ಗರಿ ಮೂಡಿದೆ. ನಾವಿಬ್ಬರೂ ಇನ್ನೂ ಏನೇನೋ ಮಾಡುವುದರ ಬಗ್ಗೆ ಯೋಚಿಸಬಹುದಲ್ಲಾ ಅಂತ ಸಂತಸವಾಗಿದೆ. ಅದಕ್ಕೇ ಹೇಳಿದ್ದು ತಡವಾಗಿ ಬಂದವಳು ಎಂಬ ಸಿಟ್ಟೇನಿಲ್ಲ ಅಂತ. ನನ್ನ ನೆಚ್ಚಿನ ಹಾಡು ಕೂಡ ನೀನು ಮೊದಲು ಕಲಿತ ಕೆರೆಯ ನೀರನು ಕೆರೆಗೆ ಚೆಲ್ಲಿ..
ಯಾವುದಕ್ಕೂ ಬೆಳಗಿನ ತಂಪು ನನ್ನ ಪತ್ರದಲ್ಲಿ ಇಳಿಯಲಿ ಅಂತ ಬೆಳಿಗ್ಗೆ ಮುಂಚೆ ಕೂತ್ಕೊಂಡು ಬರೀತಾ ಇದೀನಿ. ಈಗಷ್ಟೇ ಸೂರ್ಯ ತನ್ನ ಒಲವುಬಲೆಗಳನ್ನ ಹೊರಗಿನ ಪುಟ್ಟಹಿತ್ತಲಿನ ಎಳೆ ಮೊಗ್ಗುಗಳ ಮೇಲೆಲ್ಲ ಸುಳಿಯುತ್ತಿದಾನೆ. ನನ್ನ ಕಿಟಕಿಯ ನೇರಕ್ಕೆ ಇರುವ ಗಂಟೆ ದಾಸವಾಳದ ಮೊಗ್ಗಿಗೆ ಬಾಯಿಟ್ಟು ಕೆಂಪುಕುತ್ತಿಗೆಯ ಉದ್ದಕೊಕ್ಕಿನ ಪುಟ್ಟ ಹೂಗುಬ್ಬಿ ಹಕ್ಕಿ,ಬಾಯಿಟ್ಟು ರಸ ಹೀರುತ್ತಾ ಇದೆ. ನನಗೆ ಫೋಟೋ ತೆಗೆಯುವುದೆಂದರೆ ಅಷ್ಟಕ್ಕಷ್ಟೇ.ನೀನು ಇಲ್ಲಿಯೇ ಇರುತ್ತೀಯಲ್ಲಾ ಆಗ ಗಮನಿಸು. ಒಂದು ಅಚಾನಕ್ ಮಳೆ ಬಂದು ಹೋದ ರಾತ್ರಿಯ ಮರುಬೆಳಗ್ಗೆ ಅರಳುವ ಮೊಗ್ಗಿಗೆ ಈ ಹಕ್ಕಿ ಗ್ಯಾರಂಟಿ ಬರುತ್ತದೆ. ಆಗ ನೋಡಬಹುದಂತೆ.
ಈಗ ಗೊತ್ತಾಗುತ್ತಿದೆ ಹಕ್ಕಿಇಂಚರವೂ ಮತ್ತು ಬೆಳಗಿನ ತಂಪೂ ಮನಸ್ಸಿಗೆ ಏನು ಜಾದೂ ಮಾಡುತ್ತದೆ ಅಂತ.ಒಂದ್ ಹತ್ತು ನಿಮಿಷ ನನಗೆ ಏನೂ ಬರೆಯಬೇಕು ಅಂತಲೇ ಅನ್ನಿಸಲಿಲ್ಲ. ಆ ಪುಟಾಣಿಯ ರಸಹೀರುವಿಕೆಯನ್ನೇ ಗಮನಿಸುತ್ತಿದ್ದೆ. ಈಗ ಮನಸ್ಸು ನಾನೇ ರಸ ಕುಡಿದ ಅನುಭೂತಿಯಲ್ಲಿ ತೇಲುತ್ತಿದೆ.
ಗಾಳಿಗೆ ತೂಗುವ ಎಲೆಯ ನವಿರಿನ ಹಾಗೆ ಆವಿರ್ಭವಿಸಿ ನನ್ನ ಮನಸ್ಸಿನಲ್ಲಿ ಮೋಹ ಉಲ್ಬಣಿಸುವಂತೆ ಮಾಡಿದವಳೇ ಈಗ ನಾನು ಕಾಲೇಜಿಗೆ ಹೊರಡಲು ರೆಡಿಯಾಗಬೇಕಿದೆ. ಇವತ್ತು ಸೈಕೋಅನಾಲಿಸಿಸ್ ಮಾಡುವ ಹೊಸ ಪ್ರಾಯೋಗಿಕ ಅಭ್ಯಾಸ ಮಾಡಿಸುತ್ತೇನೆ ಅಂತ ವಿದ್ಯಾರ್ಥಿಗಳಿಗೆ ಹೋದವಾರವೇ ಹೇಳಿಟ್ಟಿದ್ದೆ.ಎಂದಿಗಿಂತ ಸ್ವಲ್ಪ ಮೊದಲೇ ಹೋಗಬೇಕು.ಇವತ್ತಿಗೆ ಈ ಪುಟ್ಟ ಪತ್ರ ಪೋಸ್ಟ್ ಮಾಡಿರುತ್ತೀನಿ. ಮುಂದಿನವಾರ ಪ್ರಬಂಧವನ್ನೇ ಕಳಿಸುತ್ತೇನೆ.ಓದಲು ಸಮಯಾವಕಾಶ ಮಾಡಿಕೊಂಡಿರು.
ಕ್ಲ್ಶಾಸಿನಲ್ಲಿ ಏನಾದರೂ ಯಡವಟ್ಟಾದರೆ ಇರಲಿ ಅಂತ ನಿನ್ನ ಮೋಹಕ ಮುಗುಳ್ನಗೆಯ ಮ್ಯಾಕ್ಸಿ ಪ್ರಿಂಟ್ ತೆಗೆದಿಟ್ಟುಕೊಂಡಿದೀನಿ. ಹುಡುಗರು ನನ್ನ ಎಡವಟ್ಟು ನೋಡಿ ಹೋ ಅಂತ ಕೂಗಿದ ಕೂಡಲೆ ಈ ಫೋಟೋ ಟೇಬಲ್ ಮೇಲಿಟ್ಟು, ಚಂದನ್ ಸಾ ಬದನ್..ಹಾಡಿನ ಚರಣವನ್ನು ಹಾಡಲು ರೆಡಿಯಾಗಿದೀನಿ. ಓಹೋ,ಈ ಲೆಕ್ಚರರ್ ನನ್ಮಗನೂ ನಮ್ ಫುಟ್ ಪಾತಿಗೇ ಬಂದವ್ನಲ್ಲಾ ಅಂತ ಅವರೆಲ್ಲ ಆಗ ಕೋ ಆಪರೇಟ್ ಮಾಡ್ತಾರೆ. ಇದು ನನ್ನ ಲೆಕ್ಚರರಿಂದ ಕಲಿತ ಪಾಠ.
ಉಂಹು ಈ ಪತ್ರದಲ್ಲಿ ಮುದ್ದು,ಅಪ್ಪುಗೆಯೆಲ್ಲ ಏನಿಲ್ಲ. ಇದು ಭಾವಸಂಚಾರವಷ್ಟೇ.!
ಮುಂದಿನ ಪತ್ರದವರೆಗೆ ಅಪ್ಪಳಿಸುವ ಎಲ್ಲ ಭಾವದಲೆಗಳನ್ನ ಮನಸ್ಸಿನಲ್ಲೇ ಸಾಲುಗಳಾಗಿ ಪರಿವರ್ತಿಸುತ್ತಿರುತ್ತೇನೆ, ನಿನ್ನ ಭಾವೋಲ್ಲಾಸದ ಸಾಲುಗಳಿಗೆ ಕಾಯುತ್ತಾ,
ನಿನ್ನವ,
now the ball n court is yours..!
[ತಲೆಬರಹ ಕೆ.ಎಸ್.ನ ಅವರ ಕವಿತೆ ಸಾಲು ಮತ್ತು ಕೊನೆಯ ಇಂಗ್ಲಿಷ್ ಅಡಿಬರಹವೂ ಅವರದೇ ಕವಿತೆಯಲ್ಲಿನ ಭಾವ]
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
16 comments:
ಅದು ನಂಗೂ ಗೊತ್ತಿತ್ತು: ಎಷ್ಟೇ ತಡವಾಗಿ ಬಂದರೂ ಚಿಂದಕ್ಕ ಮತ್ತದೇ ಓದೋ ಖುಶಿ ಕೊಡ್ತಾಳೆ ಬ್ಲಾಗಲ್ಲಿ ಅಂತ..
ಥ್ಯಾಂಕ್ಸಕಾ... :-)
ಸಿಂಧು,
ಶಬ್ದಗಳ ಬಳಸಿಕೊಳ್ಳುವಿಕೆ ಬಹಳ ಉತ್ತಮವಾಗಿದೆ. ಅದರಲ್ಲ್ಲೂ ''ನೀನು ಬಂದಿದ್ದರಾಗಿತ್ತು ಅಂತ ಮನಸ್ಸು ಬಯಸಿದ್ದು ಹೌದಾದರೂ, ನೀನೆ ಬರಬಹುದು ಅಂತ ಗೊತ್ತಿರಲಿಲ್ಲ. ಎಷ್ಟೇ ಒಳ್ಳೆಯವನೇ ಆದರೂ ಎಡವಟ್ಟನಂತೆ ಇರುವ ನನ್ನ ಬದುಕಿನ ಬಯಲಿಗೆ ಬೆಳದಿಂಗಳಂತೆ ಹರಿದು ಬಂದ ಹುಣ್ಣಿಮೆಯೇ ನಿನ್ನ ಬೆರಳಳತೆ ಅಂದಾಜು ಮಾಡಲಾಗದೆ ಅಮ್ಮನ ಬೆರಳಿನಳತೆಯ ಉಂಗುರ ತಂದಿದ್ದಕ್ಕೆ ದಯವಿಟ್ಟು ಕ್ಷಮಿಸು'' ತುಂಬಾ ಇಷ್ಟವಾಯಿತು.
ಹೀಗೆ ಬರೆಯುತ್ತಿರಿ
ಅವಳಿಗೆ ಗೊತ್ತು ಬೆಟ್ಟದ ನೆಲ್ಲಿಕಾಯಿಗೆ ಸಮುದ್ರದ ಉಪ್ಪಿನವರು ಕರೆಮಾಡುತ್ತಿದ್ದಾರೆ ಅನ್ನೋ ಪ್ರಯೋಗ ಇಷ್ಟ ಆಯಿತು..ತುಂಬಾ ಬಾವನಾತ್ಮಕವಾಗಿ,ಮನಸ್ಸಿಗೆ ಇಷ್ಟ ಆಗುವ ಹಾಗೆ ಬರೆದಿದ್ದೀರಿ.ನಿಮ್ಮ ಭಾವೋಲ್ಲಾಸದ ಸಾಲುಗಳಿಗೆ ಕಾಯುತ್ತಾ [:)] ಮುಂದಿನ ಹೊಳಹುಗಳಿಗೆ ಕಾಯುತ್ತ ಇರುವೆ ..
ಶರತ್ .ಎ
Sindhu,
Tumbaa chennaagiruva bhaavanegaLu. My favorite line: ಅವಳಿಗೆ ಗೊತ್ತು ಬೆಟ್ಟದ ನೆಲ್ಲಿಕಾಯಿಗೆ ಸಮುದ್ರದ ಉಪ್ಪಿನವರು ಕರೆಮಾಡುತ್ತಿದ್ದಾರೆ ಅಂತ. heege bareyuttaa iri.
Meena Jois
ಇದಪ್ಪ!:) ಸೂಪರ್ರು ಅಕಾ! ಅದೆಲ್ಲಿಂದಾ ಹೊಳಿಯತ್ತಪ್ಪ ಶಬ್ದಗಳು:)
ಸಿಂಧು ಮೇಡಮ್,
ಇದು ನಿಜಕ್ಕೂ ನಾನು ಓದಿದ ಅತ್ಯುತ್ತಮ ಭಾವನಾತ್ಮಕ ಪತ್ರ. ಎಂದಿನಂತೆ ಮೊದಲು ವೇಗವಾಗಿ ಓದಿದೆ. ಆ ವೇಗಕ್ಕೆ ಭಾವನೆಗಳ ಚಿತ್ರಗಳು ಕಣ್ಣ ಮುಂದೆ ಕಟ್ಟಲಿಲ್ಲ. ನಂತರ [ಫೋಟೋಗ್ರಫಿಯನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು]ನಿದಾನವಾಗಿ ಒಂದೊಂದೆ ವಾಕ್ಯಗಳನ್ನು ಓದುತ್ತಿದ್ದಂತೆ ಪ್ರತಿಯೊಂದು ಚಿತ್ರಗಳು ಕಾಣತೊಡಗಿದವು.
ನೀವೇನೇ ಹೇಳಿ ಈ ರೀತಿ ಯಾರೇ ಬರೆದರೂ ನನಗೆ ಇಷ್ಟ. ಪ್ರತಿಯೊಂದು ಚಿತ್ರಗಳನ್ನು ಕಲ್ಪಿಸಿಕೊಂಡು ಸಕ್ಕತ್ enjoy ಮಾಡುತ್ತೇನೆ....
"ಒಂದು ಅಚಾನಕ್ ಮಳೆ ಬಂದು ಹೋದ ರಾತ್ರಿಯ ಮರುಬೆಳಗ್ಗೆ ಅರಳುವ ಮೊಗ್ಗಿಗೆ ಈ ಹಕ್ಕಿ ಗ್ಯಾರಂಟಿ ಬರುತ್ತದೆ."
"ಅವಳಿಗೆ ಗೊತ್ತು ಬೆಟ್ಟದ ನೆಲ್ಲಿಕಾಯಿಗೆ ಸಮುದ್ರದ ಉಪ್ಪಿನವರು ಕರೆಮಾಡುತ್ತಿದ್ದಾರೆ ಅಂತ."
ಇಡೀ ಲೇಖನದಲ್ಲಿ ಎಲ್ಲಾ ಸಾಲುಗಳು ಮತ್ತು ಭಾವಗಳು ಇಷ್ಟವಾಯಿತು. ಹಾಗೆ ಇಷ್ಟದಲ್ಲಿ ಇಷ್ಟ ಮೇಲಿನೆರಡು ಸಾಲುಗಳು.
ಅಭಿನಂದನೆಗಳು.
Tumba olle baraha Sindhu. Ittichege ella news papernallu onde bageya prema patra odi odi bejaragittu. Adre this is worth reading. Tumba ishta aytu. Inmele regular attendence haktini.
ಸಿಂಧು,
ಎಂದಿನಂತೆಯೇ ಮತ್ತೊಂದು ಸಿಂಪ್ಲೀ ಸುಪರ್ಬ್ ಭಾವಾಲಾಪ, ಭಾವೋಲ್ಲಾಸ.
ಚೆಂದದ,ನವಿರಾದ ಬರಹ.ಹೀಗೆ ತುಂಬಾ ಸುಂದರವಾಗಿ ಬರೆದು ಸುಮ್ಮ ಸುಮ್ಮನೆ ನಿಮ್ಮ ಬಗ್ಗೆ ನಾವು ಅಸೂಯೆಪಟ್ಟುಕೊಳ್ಳುವಂತೆ ಮಾಡುತ್ತೀರಿ.
ಸು,
ಹೌದೌದು.. ಎಷ್ಟೇ ತಡ ಮಾಡಿ ಬಂದು ಬರೆದರೂ ನೀವೆಲ್ಲ ಪ್ರೀತಿಯಿಂದ ಓದುತೀರ ಅಂತ ನಂಗೂ ಗೊತ್ತು.
ಸಾಗರದಾಚೆಯ ಇಂಚರ,
ಎಲ್ಲ ಸಹೃದಯ ಮನಸ್ಸುಗಳಿಗೂ ಈ ತರಹದ್ದೆ ಆಚೀಚಿನ ಅನುಭವ ಆಗೇ ಇರುತ್ತೆ ಅಲ್ವಾ
ಶರತ್,ಮೀನಾ,
ಖಂಡಿತ, ನೀವು ಓದುವುದೇ ನಂಗೆ ಖುಶಿ
ನಿಧಿ,
ಆಹ್, ಪಂಡಿತರೇ ಮೆಚ್ಚಿದರಲ್ಲ.. ಇನ್ನು ಪಾಸಾದ ಹಾಗೇ ಲೆಕ್ಕ..
ಶಿವು,
ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್, ಬರೆಯುತ್ತಿದ್ದಾಗ ನನ್ನ ಕಣ್ಣ ಮುಂದೆ ಚಿತ್ರಗಳು ಹೊಳೆಯುತ್ತಿದ್ದರೇನೇ ನನ್ನ ಬೆರಳುಗಳು ಕೆಲಸ ಮಾಡುವುದು.. :)
ರಜನಿ,
ಹೌದು ನಂಗೂ ನ್ಯೂಸ್ ಪೇಪರಿನ ಪ್ರೇಮಪತ್ರಗಳ ಮೇಲೆ ಬೇಜಾರಾಗಿಬಿಟ್ಟಿತ್ತು. ಹೀಗೇ ಬಂದು ಟಿಪ್ಪಣಿಸುತ್ತಿರಿ
ಜ್ಯೋತಿಅಕ್ಕ,
ನಿಮ್ಮ ಮೆಚ್ಚುಗೆಗೆ ನನ್ನದೊಂದು ಅಕ್ಕರೆಯ ಅಪ್ಪುಗೆ.
ಜೋಮನ್,
ಅಸೂಯೆ ಆದ ಕೂಡಲೆ ಬೋದಿಲೇರ್ ವೈನ್ ಕುಡಿದರೆ ಭಾರಿ ಒಳ್ಳೇದು. ಸಿಕ್ಕಾಪಟ್ಟೆ ಒಳ್ಳೆ ಕಾವ್ಯ ಹುಟ್ಟುತ್ತದೆ. :) ಇದು ಖಂಡಿತಾ ನುಗ್ಗೆಮರದ ಕೊಂಬೆಯಲ್ಲ.
ಆದ್ರೆ ಏನೇ ಆಗಲಿ ಈಗ ನಾನು ಕೊಂಬೆಯಿರಲಿ ಮರದ ಬುಡದಲ್ಲಿ ನಿಂತರೂ ಮರ ಬಿದ್ದೋಗತ್ತೆ. ಕರುಣೆಯಿರಲಿ... :)
ಓದಿ, ಸ್ಪಂದಿಸಿದ ಎಲ್ಲರಿಗೂ
ಅಕ್ಕರೆಯ ವಂದನೆಗಳು
ಪ್ರೀತಿಯಿಂದ
ಸಿಂಧು
ವಾವ್! ಸಖತ್ ಕ್ಯೂಟಾಗಿದೆ! ಹೀಗೆ ಬರಿಯೋಕೆ ಬರೋ ಹುಡುಗ್ರೂ ಇರ್ತಾರಾ?;p
Adbuthavagide odi anandavaythu
sat
ಅಕ್ಕಾ
ತುಂಬಾ ಚನ್ನಾಗಿ ಇದೆ. ಖುಷಿ ಆಯ್ತು ಓದಿ....
ಮಿಸ್ ಮಾಡ್ತಾ ಇದ್ವಿ ನಾವು ಇದೆಲ್ಲಾ್.
ಥ್ಯಾಂಕ್ಯೂ ಸೋ ಮಚ್
ಶ್ರೀ, ಸತೀಶ, ರಂಜನಾ,
ನಿಮಗಿಷ್ಟವಾಗಿದ್ದು ನನಗೂ ಖುಶಿ.
ಪ್ರೀತಿಯಿಂದ
ಸಿಂಧು
ಸಿಂಧು, ತುಂಬಾ ದಿನ ಆಗಿತ್ತು ನಿಮ್ಮ ಮನೆ ಕಡೆ ಬರದೆ... ನವಿರಾದ ಬರಹ ಸಖತ್!
Post a Comment