Monday, August 11, 2008

ಮತ್ತೆ ಸಿಗುವುದು ಬೇಕೆ..?

ಪುಟ್ಟಪುಟ್ಟ ಬಿಳಿನೀಲಿ ಹೂಗಳು
ಅಲ್ಲೊಂದು ಇಲ್ಲೊಂದು..
ಬರಿಯ ಮುಳ್ಳು ತುಂಬಿದ
ಎಲೆಗಳಿಲ್ಲದ ಪೊದೆಯ ಮಧ್ಯೆ
ಚುಚ್ಚಿ ಗಾಯವಾಗಿ ರಕ್ತಸುರಿದು
ಪೊದೆಯನ್ನೇ ಕಿತ್ತು
ಒಣಗಿಸಿ ಕತ್ತರಿಸಿ
ಬೂದಿಯಾಗಿಸಿ
ಕಲ್ಲಗೋರಿಯಲಿ ಮಲಗಿಸಿ
ಮೇಲಿಷ್ಟು ಮಣ್ಣೆಳೆದು
ಪ್ರಮಾಣ ಮಾಡಿ
ಎಪಿಗ್ರಾಫಿಯಾ ಬರೆದಿದ್ದೂ ಆಗಿದೆ
ಮತ್ತೇಕೆ ಕೆದಕುತ್ತೀಯೆ
ಏಳುವುದು ಬರಿಧೂಳು
ಕಾಲ ಕೆಳಗಿರುವುದು ಶೂನ್ಯ,
ಕಾಲು ಹೊತ್ತಿರುವ
ಮನದ ಗೂಡಲ್ಲಿ
ಸೂತಕದ ನೆರಳು.

ಮಾಗಿದ ಗಾಯವ ಕಿತ್ತು
ಒಣಗಿಸುವ ಉಪಚಾರವೇಕೆ,
ದಾರಿ ಬದಲಿಸಿದ ಮೇಲೆ
ಮತ್ತೆ ಸಿಗುವುದು ಬೇಕೆ?
ಬದುಕದ ಪ್ರೀತಿಯ
ಮೊದಲ ಚಿಗುರಿನ ಹೂಗಳ
ಬಿಳಿನೀಲಿಯಷ್ಟೇ ನೆನಪಿರಲಿ ;
ಮಧ್ಯದ ರಂಪ, ಕೊನೆಯ ಬೂದಿ
ಎರಡೂ ಬೇಡ.
ಆ ಹಾದಿಯ ಗುರಿಯೇ ಅಲ್ಲಿಗೆ -
ಯಾರೂ ಜೊತೆಯಾಗುಳಿಯದೆ
ಗಾಡಿ ಬದಲಿಸುವ ಜಂಕ್ಷನ್ನಿಗೆ.

ಇಲ್ಲ ಅವಳಿಲ್ಲ ಹುಡುಕುವುದು ಬೇಡ
ಕಲ್ಲಕೆಳಗಿನ ಕರಗಿದ ಬೂದಿಯೆಡೆಯಲ್ಲಿ
ಉಳಿದಿರಬಹುದು ಅವಳ
ಚಹರೆಯ ಕುರುಹು,
ಮೇಲೆ ಹುಡುಕುವುದು ಬೇಡ..

17 comments:

dinesh said...

ಕಲ್ಲಕೆಳಗಿನ ಕರಗಿದ ಬೂದಿಯೆಡೆಯಲ್ಲಿ
ಉಳಿದಿರಬಹುದು ಅವಳ
ಚಹರೆಯ ಕುರುಹು,
ಮೇಲೆ ಹುಡುಕುವುದು ಬೇಡ.. nice lines

ಹರೀಶ್ ಕೇರ said...

Poem OK.
But v miss ur prose.
-Harish Kera

Shree said...

ಬೇಜಾರಾಗ್ತಿದೆ! :(

Raghu said...

ನನಗೂ ಹಿಡಿಸಿದ ಸಾಲುಗಳಿವು.
ಕಲ್ಲಕೆಳಗಿನ ಕರಗಿದ ಬೂದಿಯೆಡೆಯಲ್ಲಿ
ಉಳಿದಿರಬಹುದು ಅವಳ
ಚಹರೆಯ ಕುರುಹು,
ಮೇಲೆ ಹುಡುಕುವುದು ಬೇಡ
ಧನ್ಯವಾದಗಳೊಂದಿಗೆ
ಮಿತ್ರವಿಂದೆ

ಶ್ಯಾಮಾ said...

ಮಾಗಿದ ಗಾಯವ ಕಿತ್ತು
ಒಣಗಿಸುವ ಉಪಚಾರವೇಕೆ,
ದಾರಿ ಬದಲಿಸಿದ ಮೇಲೆ
ಮತ್ತೆ ಸಿಗುವುದು ಬೇಕೆ?
ಬದುಕದ ಪ್ರೀತಿಯ
ಮೊದಲ ಚಿಗುರಿನ ಹೂಗಳ
ಬಿಳಿನೀಲಿಯಷ್ಟೇ ನೆನಪಿರಲಿ ;
ಮಧ್ಯದ ರಂಪ, ಕೊನೆಯ ಬೂದಿ
ಎರಡೂ ಬೇಡ.

ನನ್ನನ್ನು ಬಹಳ ಹಿಡಿದಿಟ್ಟ ಸಾಲುಗಳಿವು.

ತುಂಬ ಚೆನ್ನಾಗಿದೆ.

ರಂಜನಾ ಹೆಗ್ಡೆ said...

ದಾರಿ ಬದಲಿಸಿದ ಮೇಲೆ
ಮತ್ತೆ ಸಿಗುವುದು ಬೇಕೆ?
ಬದುಕದ ಪ್ರೀತಿಯ
ಮೊದಲ ಚಿಗುರಿನ ಹೂಗಳ
ಬಿಳಿನೀಲಿಯಷ್ಟೇ ನೆನಪಿರಲಿ ;
ಮಧ್ಯದ ರಂಪ, ಕೊನೆಯ ಬೂದಿ
ಎರಡೂ ಬೇಡ.

ee saalu galu thumba channagi iddu.

Anonymous said...

ಚೆನ್ನಾಗಿದೆ sindu.

Anonymous said...

ನಮಸ್ತೇ,
ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ, ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.
ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.
‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ನೀವು ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ.
ಖಂಡಿತ ಬರಲೇಬೇಕು.

ನಿಮಗಾಗಿ ಕಾದಿರುತ್ತೇನೆ.

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

sunaath said...

ಕವಿತೆ punch-filled and compact.

Anonymous said...

ಶ್ರೀ ತರನೇ ತುಂಬ ಬೇಜಾರಾಗ್ತಿದೆ!:(

-ನಾನು ನಾನೆ

ಸಿಂಧು sindhu said...

ಓದಿ ಸ್ಪಂದಿಸಿದ ಎಲ್ಲರಿಗೂ ನನ್ನ ಪ್ರೀತಿಯ ನಮಸ್ತೇ.

ದಿನೇಶ್,
thanks.. :)

ಹರೀಶ್,
ಓಕೆ. ಗದ್ಯಬರಹ ಬರುತ್ತೆ. ಒಂದರ ನಂತರ ಇನ್ನೊಂದು. ಬೇಸರ ಯಾಕೆ?

ಶ್ರೀ,
ನಂಗೂ ಬೇಜಾರಾಗೆ ಬರ್ದೆ ಇದನ್ನ. :(

ಮಿತ್ರವಿಂದೆ,
ಸಮಾನ ಮನಸ್ಕರಿಗಷ್ಟೇ ಅರ್ಥವಾಗಬಹುದಾದವು. ಎಷ್ಟು ಹೇಳಿದರೂ ಯಾರಿಗೆ ಬೇಕೋ ಅವರಿಗೆ ಗೊತ್ತಾಗುವುದೇ ಇಲ್ಲ. :(

ಶ್ಯಾಮಾ,
ನಮಗೆ ಯಾಕೆ ಒಳ್ಳೆಯ ನೆನಪು ಸಿಹಿ ಅಂತ ಗೊತ್ತಿದ್ದೂ ಅದನ್ನೇ ಚಪ್ಪರಿಸಲು ಬರುವುದಿಲ್ಲವೋ ಗೊತ್ತಾಗೊಲ್ಲ. ಆ ಬೇಸರದಲ್ಲಿ ಮೂಡಿದ್ದು. ಅದರ ಮೇಲೆ ಒಣಗಿದ ಗಾಯವನ್ನೇ ಕಿತ್ತು ಉಪಚಾರ ಮಾಡುವ ಅಣಕ ಬೇರೆ.

ರಂಜೂ,
ಥ್ಯಾಂಕ್ಸ್,

ಪೂರ್ಣಿಮಾ,
ಹೇಗೆ?

ಸುನಾಥ,
ಕಂಬನಿ ಬದುಕು, ಕವಿತೆ ಕರವಸ್ತ್ರ (ಕೆ.ಎಸ್.ನ)

ನಾನು ನಾನೆ,
ಶ್ರೀಗೆ ಹೇಳಿದ ಉತ್ತರವೇ ..
ನಂಗೂ ಬೇಜಾರಾಗೆ ಬರ್ದೆ ಇದನ್ನ. :(

ಪ್ರೀತಿಯಿಂದ
ಸಿಂಧು

ಗಿರೀಶ್ ರಾವ್, ಎಚ್ (ಜೋಗಿ) said...

ದಾರಿ ಬದಲಿಸಿದ ಮೇಲೆ
ಮತ್ತೆ ಸಿಗುವುದು ಬೇಕೆ?
ಬದುಕದ ಪ್ರೀತಿಯ
ಮೊದಲ ಚಿಗುರಿನ ಹೂಗಳ
ಬಿಳಿನೀಲಿಯಷ್ಟೇ ನೆನಪಿರಲಿ ;
ಮಧ್ಯದ ರಂಪ, ಕೊನೆಯ ಬೂದಿ
ಎರಡೂ ಬೇಡ.
-ಹಿಡಿಯದ ಹಾದಿಯ ಕುರಿತು ಎಂದೋ ಓದಿದ್ದು ನೆನಪಾಯಿತು. ಹಲವು ಒಳ್ಳೆಯ ಸಾಲುಗಳು ಖುಷಿಕೊಟ್ಟವು.

Parisarapremi said...

avaLa chahareya kuruhu "fossil" aagOgirbOdu antiraa?? ;-)

tamaashe ge heLde.. sogasaada kavana ree.. :-)

ಸಿಂಧು sindhu said...

ಜೋಗಿಯವರೆ,

ನಿಮಗಿಷ್ಟವಾಗಿದ್ದು ನನಗೆ ಖುಶಿ.

ಪರಿಸರಪ್ರೇಮಿ,
ಟೀಚರ್ ಗೇ ಪಾಠ ಹೇಳ್ಕೊಡಕ್ಕಾಗತ್ತಾ ನಾನು.. ;) ಆಮೇಲೆ ಜಾಸ್ತಿ ಹೋಮ್ ವರ್ಕ್ ಕೊಟ್ ಬಿಟ್ರೆ.. :)

ಹೌದು ಅದೊಂಥರಾ ಪಳೆಯುಳಿಕೆಗಳೇ.. ಆಲ್ ಮೋಸ್ಟ್ ಕರಗಿ ಹೋದವು ಅಷ್ಟೆ..

ನಿಮಗೆ ಇಷ್ಟವಾಗಿದ್ದು ನನಗೆ ಖುಶಿಯಾಯ್ತು.

ಪ್ರೀತಿಯಿಂದ
ಸಿಂಧು

raju hulkod said...

ಬದುಕದ ಪ್ರೀತಿಯ
ಮೊದಲ ಚಿಗುರಿನ ಹೂಗಳ
ಬಿಳಿನೀಲಿಯಷ್ಟೇ ನೆನಪಿರಲಿ ;
ಮಧ್ಯದ ರಂಪ, ಕೊನೆಯ ಬೂದಿ
ಎರಡೂ ಬೇಡ.

Hi, MELINA SAALUGALU TUMBHA ISTA AYITHU...

raju hulkod said...

ಬದುಕದ ಪ್ರೀತಿಯ
ಮೊದಲ ಚಿಗುರಿನ ಹೂಗಳ
ಬಿಳಿನೀಲಿಯಷ್ಟೇ ನೆನಪಿರಲಿ ;
ಮಧ್ಯದ ರಂಪ, ಕೊನೆಯ ಬೂದಿ
ಎರಡೂ ಬೇಡ.

Hi, MELINA SAALUGALU TUMBHA ISTA AYITHU...

shivu.k said...

ಕವನ ಚೆನ್ನಾಗಿದೆ...!

ಶಿವು.ಕೆ.
ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನನ್ನದು ಫೋಟೊಗ್ರಫಿ ಪ್ರಪಂಚ. ನೀವು ನನ್ನ ಬ್ಲಾಗಿನೊಳಗೆ ಕಾಲಿಟ್ಟರೇ ಅಲ್ಲಿ ನಿಮಗಿಷ್ಟವಾದ ಛಾಯಾಚಿತ್ರಗಳು ಅದರ ಕುರಿತಾದ ಲೇಖನಗಳು ಸಿಗಬಹುದು. ಬನ್ನಿ.

ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com/
ಹೊಸ ರೀತಿಯ ವಿಚಾರದ ಬರವಣಿಗೆಯ ನನ್ನ ಬ್ಲಾಗ್ ವಿಳಾಸ:
http://camerahindhe.blogspot.com/