Monday, July 7, 2008

ಅವನ ಹಾಡು..


ಆ ಉದ್ದ ಜಡೆಯನ್ನ ಬಿಂಕವಾಗಿ ಹೊತ್ತು ತಿರುಗುವ
ಮೊದ್ದುತನದ ಮೇರುತಲೆಗೆ ಎರಡು ತಟ್ಟುತ್ತಾ;
ಜಗದ ಎಲ್ಲ ಚಲನೆಯನ್ನ ಹೊತ್ತು ಸುಳಿವ
ತುಂಟ ಕಣ್ಣುಗಳ ಕೊಳದಲ್ಲಿ ಬಿದ್ದು ಈಜುತ್ತಾ;
ಸಾಗರದಷ್ಟು ಮಾತು ತುಂಬಿ ತುಳುಕುವ
ಪುಟ್ಟ ಬಾಯಿಗೆ ನನ್ನ ಮೌನದೊಲವ ಕುರುಹ ಹಚ್ಚುತ್ತಾ;
ಚಕ್ರ ಕಟ್ಟಿದಂತೆ ತಿರುಗುವ ಕಾಲ ಹಾದಿಯ
ಹಿಂಬಾಲಿಸಿ ಹಿಂಬಾಲಿಸಿ ಸುಸ್ತಾಗುತ್ತಾ;
ಮಾಡಿದಡುಗೆ ಘಾಟು ಘಾಟಾಗಿದ್ದರೂ
ಅಮ್ಮನಡುಗೆಯಂತೇ ಇದೆ ಎಂದು ಭಾವಿಸಿ ತಿನ್ನುತ್ತಾ,
ನಡೆಯದೇ ಓಡುತ್ತ ಎಡವಿಬಿದ್ದಾಗ
ಮೇಲೇಳಲು ಕೈ ನೀಡುತ್ತಾ;
ಎಲ್ಲ ನಿಯಮಗಳ ಮೀರಿದ-ಯಾವ ಅಳತೆಗೂ ಸಿಗದ
ಸಿಟ್ಟು ಮಾಡಿದರೆ ಮುದುಡುವ,
ಮುದ್ದು ಮಾಡಿದರೆ ಚಿಗುರುವ
ನಿನ್ನ ಚೈತನ್ಯದ ಹರಿವು
ನೋಡಿ ನೋಡಿ ಅವಾಕ್ಕಾಗುತ್ತಾ;
ನನ್ನಲಿಲ್ಲದ, ನನಗೆ ತುಂಬ ಬೇಕಿರುವ ಎಲ್ಲದೂ
ನಿನ್ನಲಿರುವುದ ನೋಡುತ್ತ
ಪುಳಕಗೊಂಡು
ಮತ್ತೆ ಮತ್ತೆ ಬಿಗಿದಪ್ಪುತ್ತಾ;
ನಿನ್ನ ಮಾತಿನ ತಾಳಕ್ಕೆ
ನನ್ನ ಮೌನರಾಗ
ಜತೆಯಾಗಿ
ಬದುಕಿನ ಕವಿತೆಗೆ
ಸಂಜೀವನ ಸಂಗೀತದ ಸಂಯೋಜನೆ..

3 comments:

Sushrutha Dodderi said...

ಶಂಕರ್ ಮಹಾದೇವನ್‍ನ ನಾನ್‍ಸ್ಟಾಪ್ ಹಾಡಿನ್ ಹಾಗೆ ಓದಿಸಿಕೊಳ್ತು ನಿನ್ನೆ..! ಇದನ್ನೇ ಈಗ ಮತ್ತೊಮ್ಮೆ ನಿಧಾನವಾಗಿ ಓದಿಕೊಂಡಾಗ ಕವಿತೆಯ ಭಾವಗಳು ಬಿಚ್ಚಿಕೊಳ್ತಾ ಹೋದವು..

ಶಾಂತಲಾ ಭಂಡಿ (ಸನ್ನಿಧಿ) said...

ಸಿಂಧು...
ಆಹಾ! ಸೊಗಸಾದ ಸಾಲು
ಇಷ್ಟವಾದ್ವು. ವಿರಹ ಕೊಡುವ ಸುಖಗಳನ್ನ ಹಿಡಿದಿಟ್ಟ ಹಾಗಿದೆ. ಬಲು ಚಂದ.

ಸಿಂಧು sindhu said...

ಸುಶ್ರುತ,
ಥ್ಯಾಂಕ್ಸ್,

ಶಾಂತಲಾ,
ವಿರಹವೇ ಅಂತ ಅಂದುಕೊಂಡಿದ್ದು ಯಾಕೆ? ;)

ಪ್ರೀತಿಯಿಂದ
ಸಿಂಧು