ಜಿಟಿಜಿಟಿ ಮಳೆ ಬೆಳಿಗ್ಗೆ ಎದ್ದಾಗಿನಿಂದಲೇ ಸುರಿಯುತ್ತಿದೆ. ಹೂವು ಕೊಯ್ಯಲು ಹೋಗುವಾಗಲೂ ಕೊಡೆ ಹಿಡಿದುಕೊಂಡೇ ಹೋಗಬೇಕಾದಷ್ಟು ಜೋರೇ. ಹಾಗಾಗೇ ಇವತ್ತು ದೇವರಿಗೆ ಒಂದೆರಡು ಬೇಲಿಸಾಲಿನ ಹೂಗಳು ಖೋತಾ. ಸ್ನಾನ ಮುಗಿಸಿ ಯುನಿಫಾರ್ಮ್ ಹಾಕಿ, ಕೈಯಲ್ಲಿ ಹಣಿಗೆ ಹಿಡಿದು ಬಂದವಳಿಗೆ ಅಮ್ಮ ಬಿಸಿಬಿಸಿ ಹಬೆಯಾಡುತ್ತಿದ್ದ ತಟ್ಟೆ ಕೊಟ್ಟು ತಲೆಬಾಚತೊಡಗಿದಳು. ತಟ್ಟೆ ನೋಡಿದ ಕೂಡಲೆ ಇವಳಿಗೆ ಸಿಟ್ಟು. ನನಗೆ ಗಂಜಿ ಬೇಡ, ತಿಂಡಿ ಬೇಕು. ಸಿಡುಕತೊಡಗಿದಳು. ಅಮ್ಮ ನಯವಾಗಿ ಮಾತನಾಡಿಸುತ್ತ, ನೋಡು ಈ ಚಳಿ ಮಳೇಲಿ ಬಿಸಿ ಬಿಸಿ ಗಂಜಿ ತಿನ್ನು, ಮೇಲೆ ಘಮ ಘಮ ಕೊಬ್ಬರಿ ಎಣ್ಣೆ ಮತ್ತೆ ಕರಿಯಪ್ಪೆ ಮಾವಿನ ಮಿಡಿ ಇದೆ. ಎಷ್ಟು ರುಚಿ ಇರುತ್ತಲ್ಲಾ ಪುಟ್ಟೀ, ಈ ಮಳೆಯಲ್ಲಿ ಮೈ ಬೆಚ್ಚಗಿರತ್ತೆ. ಹೊಟ್ಟೆ ತಂಪಾಗಿರತ್ತೆ ತಿಂದರೆ ಅಂತ ಹೇಳುತ್ತ ಎರಡೂ ಜಡೆಯನ್ನೂ ಎತ್ತಿ ಕಟ್ಟಿ, ಅಲ್ಲೇ ಕಿಟಕಿಯ ಬಳಿ ಇಟ್ಟಿದ್ದ ಹಳದಿ ಬಣ್ಣದ ಗುಂಡು ಡೇರೆ ಹೂವನ್ನ ಮುಡಿಸಿದಳು. ಇವಳಿಗೆ ಅಮ್ಮನ ಮಾತು ಚೂರು ಚೂರೂ ಇಷ್ಟವಾಗಲಿಲ್ಲ. ಗಂಜಿ ತಿನ್ನಲಿಕ್ಕೇನೋ ರುಚಿಯಾಗೇ ಇತ್ತು. ಮನಸ್ಸು ಕೆಟ್ಟಿತ್ತು. ತಾನು ಓದಿದ ಕತೆಗಳಲ್ಲೆಲ್ಲ ಬಡವರ ಮನೆಯವರು ಗಂಜಿ ತಿಂದು ಬದುಕುತ್ತಿದ್ದರು. ಹಾಗಾದರೆ ನಾವೂ ಬಡವರೆ ಎಂಬ ಗಾಢ ನಿರಾಸೆಯಲ್ಲಿ ತಿಂದು ಮುಗಿಸಿ ಕೈ ತೊಳೆದುಕೊಳ್ಳುವಾಗ ಅವಳ ಕಣ್ಣಲ್ಲಿ ನೀರಿತ್ತು. ಗಮನಿಸಿದ ಅಮ್ಮ ಮೆತ್ತಗೆ ಹೇಳಿದಳು. ನಾಳೆ ತಿಂಡಿ ದೋಸೆ. ಈಗ ಸಿಟ್ಟು ಮಾಡಿಕೊಳ್ಳದೆ ಸ್ಕೂಲಿಗೆ ಹೋಗು ಮಗಳೇ. ಸರಿ ಎಂದರೂ ಬಿಗುವಾದ ಮನದಲ್ಲೆ ಕೊಡೆ ಬಿಚ್ಚಿ ಹೊರಟಳು. ಅಮ್ಮ ಬಾಗಿಲಲ್ಲೇ ತನ್ನ ಟಾಟಾಕ್ಕೆ ಕಾಯುತ್ತಿದ್ದಾಳೆ ಅಂತ ಗೊತ್ತಿದ್ದೂ ತಿರುಗಿ ನೋಡದೆ ಹೋಗಿಬಿಟ್ಟಳು.
ಅವತ್ತು ಶಾಲೆಗೆ ಹೋದರೂ ಬೆಳಗ್ಗಿನಿಂದಲೇ ಒಂದು ತರ ಗೌ ಅನ್ನುತ್ತಿತ್ತು. ಧಾರಾಕಾರ ಮಳೆ. ಶಾಲೆಯ ಹೊರಗಿನ ಅಂಗಳವೆಲ್ಲ ಕೆಸರು ಹೊಂಡವಾಗಿತ್ತು. ಎಲ್ಲರೂ ಕ್ಲಾಸಿನಲ್ಲೆ ನಿಂತುಕೊಂಡು ಪ್ರಾರ್ಥನೆ ರಾಷ್ಟ್ರಗೀತೆ ಹೇಳಬೇಕಾಯಿತು. ಬೆಳಗ್ಗೆ ಹೇಗೆ ಹೇಗೋ ಮುಗಿಯಿತು. ಮಧ್ಯಾಹ್ನದ ಕ್ಲಾಸು ಭಾರೀ ಕಷ್ಟವಾಗಿಬಿಟ್ಟಿತು. ಸಂಜೆಯಾಗೇ ಹೋಯಿತೇನೋ ಅನ್ನುವಂತೆ ಕವಿದುಕೊಂಡಿದ್ದ ಕತ್ತಲು, ಎಲ್ಲರಿಗೂ ನಿದ್ದೆಯ ಮೂಡು ತಂದುಬಿಟ್ಟಿತ್ತು. ಅದಕ್ಕೆ ಸರಿಯಾಗಿ ಗುಂಡಮ್ಮ ಟೀಚರ ಗಣಿತ ಕ್ಲಾಸು ಎರಡು ಪೀರಿಯಡ್ಡು ಬೇರೆ. ಎಷ್ಟು ಕೂಡಿದರೂ ಕಳೆದರೂ ಲೆಕ್ಕವೇ ಮುಗಿಯುತ್ತಿಲ್ಲ. ದಿನವೂ ಆಗಿದ್ದರೆ ಮುಂದಿನ ಪಿರಿಯಡ್ಡು ಆಟಕ್ಕೆ ಬಿಡಬೇಕು. ಹಾಗಾಗಿ ಅದರ ಹಿಂದಿನ ಪಿರಿಯಡ್ಡಿನಲ್ಲೆ ಹಂಚಿಕೆ ಶುರುವಾಗಿರುತ್ತಿತ್ತು ಗುಟ್ಟಾಗಿ. ಯಾರು ರೂಪನ ಟೀಮು, ಯಾರು ಭಾಗ್ಯನ ಕಡೆ, ಕೆರೆ ದಡವೋ, ಕಳ್ಳಾ ಪೋಲಿಸೋ,..ಹೀಗೇ ಎಲ್ಲ ನಿರ್ಧಾರಗಳೂ ಗುಸುಗುಸೂಂತ ಹರಡಿಕೊಂಡು ಕ್ಲಾಸಿನಲ್ಲಿ ತುಂಬ ಚಟುವಟಿಕೆ ಇರುತ್ತಿತ್ತು. ಇವತ್ತು ಎಲ್ಲರೂ ಮಂಕಾಗಿದ್ದರು. ಹೊರಗೆ ಧೋ ಮಳೆ. ಅಷ್ಟಕ್ಕೇ ಮುಗಿಯಲಿಲ್ಲ. ಮುಂದಿನ ಪಿರಿಯಡ್ಡಲ್ಲಿ ಅನಸೂಯಮ್ಮ ಟೀಚರು ಬಂದುಬಿಟ್ಟರು. ಅಯ್ಯೋ ರಾಮ ಇವರಿನ್ನು ಮತ್ತೆ ಬೆಳಗ್ಗಿನ ಕನ್ನಡವನ್ನೇ ಕೊರೆಯುತ್ತಾರಲ್ಲಾ ಅಂದುಕೊಳ್ಳುತ್ತಿದ್ದ ಹಾಗೆ ಒಳಗೆ ಬಂದ ಟೀಚರು, ಮಕ್ಳಾ ಇವತ್ತು ಮಳೆ, ಆಟ ಬಂದ್, ಅದಕ್ಕೆ ಈಗ ಕತೆ ಹೇಳಾಟ ಅಂತ ಶುರು ಮಾಡಿದರು. ಓ ಇದೇನೋ ಬೇರೆ ತರ ನಡೀತಾ ಇದ್ಯಲ್ಲ ಅಂತ ಎಲ್ಲರ ಕಿವಿಯೂ ಚುರುಕಾಯಿತು. ಮೂಲೆಯಲ್ಲಿ ಬಾಗಿಲ ಹಿಂದಿನ ಬೆಂಚಲ್ಲಿ ಕೂತ ಶೋಭಾ ತೂಕಡಿಸುತ್ತಿದ್ದಿದ್ದು ಟೀಚರ ಕಣ್ಣಿಗೆ ಬಿತ್ತು. ಕೂಡಲೇ ಅವರ ಕೈಯಲ್ಲಿದ್ದ ಉದ್ದನೆ ಬೆತ್ತ ತಗೊಂಡು ಅವಳ ಹತ್ತಿರ ಹೋಗಿ ಸಣ್ಣಗೆ ತಿವಿದರು. ಅಯ್ಯಮ್ಮಾ ಅಂತ ಅವಳು ಬೆಚ್ಚಿ ಬಿದ್ದು ಎದ್ದು ಕೂತರೆ ನಮಗೆಲ್ಲ ಮುಸಿಮುಸಿ ನಗು. ಇನ್ಯಾರಾದರೂ ಮಲಗಿದರೆ ಸರಿಯಾಗಿ ಬೀಳತ್ತೆ ಮೈಮೇಲೆ ನಾಗರಬೆತ್ತ ಇದು ಗೊತ್ತಾಯ್ತಾ ಅಂತ ಪುಟ್ಟಗೆ ನಡೆದುಕೊಂಡ ಬಂದ ಟೀಚರು ಒಂದು ಕ್ಷಣ ಅಜ್ಜ ಹೇಳುವ ಕತೆಯ ಲಂಕಿಣಿಯಂತೆಯೇ ಕಾಣಿಸಿದರು. ಛೇ ಛೇ, ಟೀಚರ್ ಬಗ್ಗೆ ಹಂಗೆಲ್ಲಾ ಅಂದ್ಕಂಡ್ರೆ ಪಾಪ ಬರುತ್ತೆ, ಅಂತ ನೆನಪು ಮಾಡಿಕೊಂಡು ಲಂಕಿಣಿಯನ್ನ ಹಿಂದೆ ದಬ್ಬಿದರೂ ಟೀಚರ್ ಕನ್ನಡಕದೊಳಗಿನ ಚೂಪುಕಣ್ಣಿನಲ್ಲಿ ನೋಡುತ್ತಿದ್ದುದ್ದು ಏನೋ ಭಯ ಹುಟ್ಟಿಸುತ್ತಿತ್ತು.
ಅಷ್ಟರಲ್ಲಿ ಟೀಚರ್ ಕತೆ ಶುರುಮಾಡಿದರು. ಅಲ್ಲಿ ನೋಡಿದರೆ ಮತ್ತೆ ಗಂಜಿಯೇ ಬರಬೇಕಾ? ಅದ್ಯಾರೋ ಅಡುಗೂಲಜ್ಜಿ ಅವಳ ಮೊಮ್ಮಗಳಿಗೆ ಮಳೆಯಲ್ಲಿ ಬಿಸಿಬಿಸಿ ಗಂಜಿ ಮಾಡಿ ಕೊಡುವ ಕತೆ. ಇವಳಿಗೆ ಬೇಜಾರಾಗಿ ಹೋಯಿತು. ಇವಳ ಇರುಸುಮುರುಸು ಟೀಚರ ಕಣ್ಣಿಗೂ ಬಿತ್ತು. ಎಬ್ಬಿಸಿ ನಿಲ್ಲಿಸಿ ಕೇಳಿದರು. ಅದು ಅದೂ ಗಂಜಿ ಅಂದ್ರೆ ಬಡವರೂಟ ಅಲ್ವಾ.. ಅಂತ ತೊದಲಿದಳು. ಅಯ್ಯೋ ಹುಚ್ಚಕ್ಕಾ, ಯಾರ್ ಹೇಳಿದ್ದು ಹಂಗೇ ಅಂತ. ಒಂದೊಂದ್ಸಲ ಮಾರಾಜಂಗೂ ಗಂಜಿನೇ ರುಚಿಯಾಗ್ ಬಿಡತ್ತೆ ಗೊತ್ತಾ. ಬಿಸಿಬಿಸಿ ಗಂಜಿಗೆ, ಚೂರು ಉಪ್ಪು, ಎಣ್ಣೆ, ಉಪ್ಪಿನಕಾಯಿರಸ ನೆಂಚಿಕೊಂಡು ತಿಂದರೆ ಆಹಾ ಅಂತ ಅವರೇ ತಿಂದ ಖುಶಿಯಲ್ಲಿ ಚಪ್ಪರಿಸಿಬಿಟ್ಟರು. ಇದು ಬಡವರ ಕತೆಯಾಯಿತು. ಶ್ರೀಮಂತರು ಇದಕ್ಕೊಂಚೂರು ಕಾಯಿತುರಿ ಹಾಕಿ ತಿಂತಾರೆ ಅದಂತೂ ಇನ್ನೂ ರುಚಿ. ತಿಂದು ನೋಡಿದಿಯಾ ಯಾವಾಗಾದ್ರೂ, ಒಂದ್ಸಲ ತಿನ್ನು, ಆಮೇಲೆ ಪಾಯಸ ಕೊಟ್ರೂ ಇಲ್ಲ ಗಂಜಿ ಬೇಕು ಅಂತೀಯ ಅಂತ ಹೇಳಿ ನಕ್ಕರು. ಶ್ರೀಕೃಷ್ಣ ಪರಮಾತ್ಮನಿಗೂ ಹಸಿವಾಗಿ ಸುಧಾಮನ ಮನೆಗೆ ಹೋದಾಗ ಅವನು ಕೊಟ್ಟಿದ್ದು ಅವಲಕ್ಕಿ ಮತ್ತು ಗಂಜಿ, ಹೇಗೆ ಸುರಿದುಕೊಂಡು ತಿಂದ ಗೊತ್ತಾ ಅವನು. ರಾಮನಿಗೆ ಶಬರಿ ಬರೀ ಹಣ್ಣು ಕಚ್ಚಿ ಕೊಟ್ಟಳು ಅಂದುಕೊಂಡ್ಯಾ, ಗಂಜಿ ಉಪ್ಪಿನಕಾಯಿ ರಸವನ್ನೂ ಕೊಟ್ಟಿರುತ್ತಾಳೆ. ಪಾಪ ಇಲ್ಲದಿದ್ದರೆ ಹಸಿವೆಲ್ಲಿ ಹೋಗತ್ತೆ. ಅಂತಹ ರಾಮದೇವರೇ ಗಂಜಿಯನ್ನು ಖುಶಿಯಿಂದ ತಿಂದ ಮೇಲೆ ಇನ್ಯಾವ ಶ್ರೀಮಂತರು ಬೇಕು ನಿನಗೆ? ಆಹ್ ಹೌದಲ್ಲಾ ಅನ್ನಿಸಿತು ಇವಳಿಗೂ.ಮತ್ತೆ ಕತೆ ಮುಂದುವರಿಯಿತು. ಅಜ್ಜಿ, ಮೊಮ್ಮಗಳು, ಕಾಡು, ಬಂಗಾರದ ಹೂವಿನ ಗಿಡ, ರಾಜಕುಮಾರ, ಮತ್ತು ಕೊನೆಗೆ ಅವರಿಬ್ಬರ ಮದುವೆಗೆ ರುಚಿಯಾದ ಗಂಜಿಯೂಟದೊಡನೆ ಕತೆ ಮುಗಿಯಿತು. ಇವಳಿಗೆ ಭಾರೀ ಸಮಾಧಾನ. ಇಷ್ಟು ದಿನಕ್ಕೆ ಒಂದು ಕತೇಲಿ ರಾಜಕುಮಾರ ಗಂಜಿ ತಿಂದ. ಆಮೇಲೆ ಟೀಚರ್ ಬೇರೆ ಶ್ರೀಮಂತರೂ ಗಂಜಿಯನ್ನ ಕೇಳಿ ಮಾಡಿಸಿಕೊಂಡು ತಿಂತಾರೆ ಅಂದ್ ಬಿಟ್ಟಿದಾರೆ. ಹೌದು ಗಂಜಿ ರುಚಿಯೇ ಆದ್ರೆ ಬಡವರು ಮಾತ್ರ ತಿನ್ನುತ್ತಾರೆ ಅನ್ನುವುದು ಅವಳ ಕೊರಗಾಗಿಬಿಟ್ಟಿತ್ತು. ಅದಕ್ಕೆ ಸರಿಯಾಗಿ ಅವರ ಮನೆಯಲ್ಲಿ ವಾರಕ್ಕೆ ನಾಲ್ಕು ದಿನ ಗಂಜಿ. ಈಗ ಏನೋ ಸಮಾಧಾನವಾಯಿತು. ಕತೆ ಮುಗಿಯುವಷ್ಟರಲ್ಲಿ ಮಳೆ ನಿಂತು, ಹೂಬಿಸಿಲು ಮೋಡದ ಮರೆಯಲ್ಲಿ ತೂರಿ ತೂರಿ ಬರುತ್ತಿತ್ತು. ಮತ್ತೆ ಮರುದಿನ ಅಮ್ಮ ದೋಸೆ ಮಾಡಿದರೆ, ಇವಳು ಗಂಜಿ ಹಾಕಮ್ಮಾ ಅಂತ ಕೇಳಿದಳು ಅಂತ ಬೇರೆ ಹೇಳಬೇಕಿಲ್ಲ ಅಲ್ಲವಾ..! :)
ಇತ್ತೀಚೆಗೆ ಹುಶಾರಿಲ್ಲದಾಗ ಒಂದು ದಿನ ಗಂಜಿ ಮಾಡಿ, ಉಪ್ಪಿನಕಾಯಿ ರಸ, ಎಣ್ಣೆಯ ಜೊತೆಗೆ ಚಪ್ಪರಿಸಿ ತಿಂದು ಬಾಯಿ ಸರಿಮಾಡಿಕೊಂಡಾಗಿನಿಂದ ಅನಸೂಯಮ್ಮ ಟೀಚರೂ ಮತ್ತು ಅವರ ಗಂಜಿಯ ಕತೆ ಉಮ್ಮಳಿಸಿ ನೆನಪಾಗುತ್ತಿದೆ. ಅವತ್ತು ಅವರು ಆ ಕತೆಗೆ ಮತ್ತು ಅವಳ ಕುತೂಹಲಕ್ಕೆ ಒಂದು ಮುಗ್ಧ ತಿರುವನ್ನ ಕೊಡದೆ ಹೋಗಿದ್ದರೆ ಎಷ್ಟೊಳ್ಳೆ ಗಂಜಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೆ ನಾನು.
ಎಲ್ಲ ಊರಿನ ಎಲ್ಲ ಶಾಲೆಗಳಲ್ಲೂ ಅನಸೂಯಮ್ಮ ಟೀಚರಿನಂತವರು ಒಬ್ಬರಾದರೂ ಇರಲಿ, ಮಕ್ಕಳ ಮನಸ್ಸನ್ನ ಮೆತ್ತಗೆ ಹೂವರಳಿಸಿದಂತೆ ಕತೆ ಹೇಳಿ ತಿದ್ದಲಿ ಅಂತ ಆಶಿಸುತ್ತೇನೆ. ನನ್ನ ಬಾಲ್ಯದ ಕೊಂಕುಗಳನ್ನ ತಿದ್ದಿದ ಅನಸೂಯಮ್ಮ ಟೀಚರ್ ಮತ್ತು ಅವರಂತಹದೇ ಇನ್ನೂ ಹಲವಾರು ಟೀಚರುಗಳಿಗೆ ಒಂದು ಪ್ರೀತಿಯ ನಮಸ್ಕಾರ.
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
25 comments:
Olleya gurugaLu siguvudu baaLyada bhaagyavE nija... thuMbaaaaa dinagaLa mEle oMdu oLLeya kathe... supperb! :)
ಗಂಜಿ!
ನಮ್ಮ ಚಾರಣಗಳಲ್ಲಿ ಊಟಕ್ಕೆ ಗಂಜಿನೇ. ಉಪ್ಪಿನಕಾಯಿ ಮತ್ತು ಸೂಕ್ತ ಚಟ್ಣಿ ಜೊತೆಗೆ ಗಂಜಿ ಊಟ ಚಾರಣದ ಪ್ರಮುಖ ಅಂಗ. ಈ ಲೇಖನ ಓದುತ್ತಿರುವಾಗ ಚಾರಣಗಳಲ್ಲಿ ಬೇರೆ ಬೇರೆ ಕಡೆ ಗಂಜಿ ಊಟ ತಯಾರು ಮಾಡಿ ಬಾಯಿ ಚಪ್ಪರಿಸಿ ಊಟ ಮಾಡಿದ್ದು ನೆನಪು ಮಾಡಿಕೊಂಡೆ. ಧನ್ಯವಾದಗಳು.
ಸಿಂಧು,
ಮಳೆಗಾಲದ ಪ್ರಾರಂಭನ ಒಳ್ಳೆಯ ಗಂಜಿಯೂಟದಿಂದ ಮಾಡಿದ್ದೀರಾ.. ಓದುಗರಿಗೆಲ್ಲಾ ಬಿಸಿ ಬಿಸಿ ಗಂಜಿಯೂಟದ ರುಚಿ ಕೊಟ್ಟಿರುವಿರಿ. ನನಗೂ ಒಂದು ಒಳ್ಳೆಯ ಟೀಚರ್ ಸಿಕ್ಕಿದ್ದರು... "ಲಿಂಗಮ್ಮ" ಎಂದು. ಅವರನ್ನು ನಾನು ಸದಾ ನೆನಪಿಸಿಕೊಳ್ಳುತ್ತಿರುತ್ತೇನೆ. ಈ ಕಾಲದಲ್ಲಿ ಅಂತಹ ಟೀಚರ್ ಗಳು ವಿರಳವಾಗುತ್ತಿದ್ದಾರೇನೋ ಅನ್ನಿಸುತ್ತಿದೆ ಏನಂತೀರಿ?
ಸಿಂಧು, ಉತ್ತರಕರ್ನಾಟಕದವಳಾದ ನನಗೆ ಗಂಜಿಊಟದ ರುಚಿ ಗೊತ್ತಿಲ್ಲ. ಆದ್ರೆ ನಿಮ್ಮ ಲೇಖನದ ಮೂಲಕ ಅದರ ಪರಿಮಳ ಬಡಿಸಿದಿರಿ. ಲೇಖನದ ಆರಂಭಿಕ ಪ್ಯಾರಾದ ನಿರೂಪಣೆ ಹದವಾಗಿತ್ತು. ಖುಷಿಯಾಯ್ತು.
ಅಂದಹಾಗೆ ಕನ್ನಡಪ್ರಭದಲ್ಲಿ ‘ಖಲಿ’ ಬಗ್ಗೆ ಬರೆದಿದ್ದು ನೀವೇನಾ? ಬರೆವಣಿಗೆ ಶೈಲಿ ಇಷ್ದಟವಾಯ್ತು.
ಗಂಜಿ... ಹ್ಮ್! ನಮ್ಮ ಮನೆಯಲ್ಲೂ ಅದರ ಘಮ ಈಗಲೂ ಒಮ್ಮೊಮ್ಮೆ ಹಬ್ಬುತ್ತಿರುತ್ತೆ. ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.
ಮುಂಗಾರಿನ ಧೋ ಧೋ ಮಳೆಗೆ ಮನೆ ಒಳಗೆ ಬೆಚ್ಚಗೆ ಮುದುರಿ ಕೂತು, ಬಿಸಿ ಬಿಸಿ ಗಂಜಿಗೆ ಒಂಚೂರು ತುಪ್ಪ, ಉಪ್ಪು, ಒಂದು ಹೋಳು ಮಾವಿನ್ಮಿಡಿ ಉಪ್ಪಿನಕಾಯಿ ಇಟ್ಟುಕೊಂಡು ಸವಿಯುವಾಗ... "ಸ್ವರ್ಗಕ್ಕೆ ಕಿಚ್ಚು" ಬೇರೆ ಬೇಕಿಲ್ಲ.
ಸಿಂಧು:
ಗಂಜಿ (ನಮ್ಮಲ್ಲಿ ಹೆಚ್ಚಾಗಿ ಅಂಬಲಿ) ನನಗೆ ತುಂಬಾ ಇಷ್ಟ. ಆದರೂ ಹುಷಾರಿಲ್ಲದಾಗ ತಾಯಿ ಮಾಡಿಕೊಡುವ ಗಂಜಿಯನ್ನು ಚಪ್ಪರಿಸುತ್ತಲೆ, "ಛೇ! ನಮಗೆ ಗಂಜಿ ಕುಡಿಯುವ ಗತಿ ಬಂದಿದೆಯಲ್ಲ!" ಅಂತೆಲ್ಲ ಡೈಲಾಗು ತಪ್ಪದೇ ಹೊಡೆಯುತ್ತೇನೆ. ನಿಮ್ಮ ಕತೆ ಓದಿ ಇದು ನೆನಪಾಗಿ ನಗು ಮೂಡಿತು.
Dear blogger,
On the occasion of 8th year celebration of Kannada saahithya.
com we are arranging one day seminar at Christ college.
As seats are limited interested participants are requested to
register at below link.
Please note Registration is compulsory to attend the seminar.
If time permits informal bloggers meet will be held at the same venue after the seminar.
For further details and registration click on below link.
http://saadhaara.com/events/index/english
http://saadhaara.com/events/index/kannada
ನಮ್ಮ ಬಯಲು ಸೀಮೆಯ ಕಡೆ ಗಂಜಿ ಬಳಸೋದು ಕಡಿಮೆ, ಕಾಯಿಲೆ ಬಿದ್ದಾಗ ಮಾತ್ರ ಗಂಜಿಯ ಪ್ರತ್ಯಕ್ಷ... :)
ಅಮ್ಮ ಮಾಡಿಟ್ಟ ಬೆಳಗಿನ ತಿಂಡಿಗೆ ದಿನಕ್ಕೊಂದು ಕೊಂಕು ಮಾತಾಡಿ ಮುಖ ಊದಿಸಿಕೊಂಡು, ಅರೆಬರೆ ತಿಂದು ಶಾಲೆಗೆ ನಡೆಯುತ್ತಿದ್ದ ಆ ದಿನಗಳು ನೆನೆಸಿಕೊಂಡರೆ ನಗು ಬರುತ್ತೆ. ಇವತ್ತು ನಾವೆ ಅಡುಗೆ ಮಾಡಿಕೊಂಡು ಉಪ್ಪು ಹುಳಿಯ ಸದ್ದು ಮಾಡದೆ ........ ನಾವು ತಿನ್ನುತ್ತಿರುವುದೆ ಬೆಸ್ಟ್ ಅಂತ ಅಂದುಕೊಂಡಾಗ ...... ಅಡುಗೆ ಮನೆಯ ಚಿತ್ರಣ ಸ್ಪಷ್ಟವಾದದ್ದು.... :D
-ಅಮರ
ನೂರು ಕನಸಿನ ಶ್ರೀ,
ಹೌದು. ಕತೆಗೆ ಕಾರಣವಾದ ಬಡವರ ಅಮೃತಕ್ಕೆ ಥ್ಯಾಂಕ್ಸ್.
ರಾಜೇಶ್,
ಹೌದು. ಚಾರಣದ ಊಟಕ್ಕೆ ಗಂಜಿಯೇ ಸರಿ. ನಾವೂ ಇತ್ತೀಚಿನ ಚಾರಣಗಳಲ್ಲಿ (thanks to Shyam) ಗಂಜಿಯನ್ನೆ ಮಾಡಿ ಉಂಡೆವು. ಚಾರಣದ ಖುಷಿಯನ್ನು ಅದು ಇಮ್ಮಡಿಸಿದ್ದು ಹೌದು.
ತೇಜಸ್ವಿನಿ,
ಈಗಿನ ಕಾಲದಲ್ಲಿ ಅಂತಹ ಟೀಚರ್ - ಇದು ಒಂದ್ರೀತಿಯ ಕ್ಲೀಷೆ. ಆಗಿನ ಕಾಲ, ಟೀಚರ್, ಪೋಷಕರು ಮತ್ತು ಮಕ್ಕಳು ಎಲ್ಲರೂ ಬದಲಾಗಿದ್ದಾರೆ. ನನ್ನ ಒಂದು ನಂಬುಗೆ(ಮೂಢನಂಬುಗೆ ಅಂದರೂ ಸರಿ) ಏನಂದ್ರೆ ಸಹೃದಯತೆ ಬದಲಾಗಿಲ್ಲ. ಅದಕ್ಕೆ ಕನೆಕ್ಟ್ ಮಾಡುವ ತೆರೆದ ಮನಸ್ಸು ಬೇಕು. ಈಗ ಎಲ್ಲದೂ ಮುಚ್ಚಿದ ಸ್ವಾರ್ಥದ ಮಿತಪರಿಧಿಯೊಳಗಿರುತ್ತದೆ. ಅದರಿಂದ ಹೊರಬಂದು ಸೇತುವೆ ನೇಯುವ ಕೆಲಸವೊಂದು ಅವಶ್ಯ ಬೇಕು. ಏನಂತೀರಾ?
ತಂಬೂರಿಯವರೆ,
ನಿಜ. ಅಲ್ಲಿನ ದಿನದಿನದ ಊಟದ ರಾಗಿ ಅಂಬಲಿಯೋ, ಜೋಳದ ಭಕ್ರಿಯೋ ಅದರ ಬಗ್ಗೆ ಮಲೆನಾಡಿನ ನನಗೆ ಗೊತ್ತಿಲ್ಲ. ಆದರೆ ದೈನಂದಿನ ಬದುಕಿನ ಸರಳ ಆಹಾರಗಳ ರುಚಿ ಪರಿಮಳ ಅದೇ ಆಗಿರುತ್ತದೆ.
ಇಲ್ಲ ಕನ್ನಡಪ್ರಭದಲ್ಲಿ ಬರೆದದ್ದು ನಾನಲ್ಲ.
ಸುಪ್ತದೀಪ್ತಿ,
ಈ ತರಹದ ಸ್ವರ್ಗಕ್ಕೆ ಕಿಚ್ಚು ಹಚ್ಚುವ ವಿಷಯಗಳೆಂದರೆ ನಂಗೆ ಸಿಕ್ಕಾಪಟ್ಟೆ ಇಷ್ಟ.
ಚಕೋರ,
ಅಲ್ವಾ, ಅಮ್ಮ ಹತ್ತಿರ ಇದ್ದರೆ ಎಲ್ಲ ಮಕ್ಕಳೂ ಹಾಗೇ ಆಡುವುದು.
ಅಮರ,
ಈಗೀಗ ಬಹುಶಃ ಎಲ್ಲ ಕಡೆಯೂ ಕಡಿಮೆಯೆ. ಟೂ ಮಿನಿಟ್ಸ್ ನೂಡಲ್ಸ್ ಬಂದಿದೆಯಲ್ಲಾ.. :) ದಿನದಿನದ ಅನ್ನವನ್ನು ದುಡಿದು ತರುವವರ ನೆಚ್ಚಿನ ಊಟವಾಗಿ ಉಳಿದಿರಬಹುದು.
ಆ ಶಾಲೆಯ ದಿನಗಳೇ ಮಜ. ಅವತ್ತು ಸಿಟ್ಟು,ತಳಮಳ,ತಮಾಷಿ,ಕಸಿವಿಸಿ,ಗಲಿಬಿಲಿಗೆ ಕಾರಣವಾದ ಎಲ್ಲವೂ ಇವತ್ತು ಆಪ್ತವಾಗಿ ಕಾಣುತ್ತವೆ ಅಲ್ಲವಾ?
ಅಡುಗೆಯ ಬಗ್ಗೆ ಏನು ಬರೆಯಲಿ. ಪೂಚಂತೇಯವರ ಪಾಕಕ್ರಾಂತಿ ಓದಿದಿರಲ್ಲವಾ. ಅದೊಂದು ಸ್ಪೇಸ್ ಸೈನ್ಸ್ ಥರಾನೇ.
ಓದಿ ಸ್ಪಂದಿಸಿದ ಎಲ್ಲರಿಗೂ ಅಕ್ಕರೆಯ ವಂದನೆಗಳು.
ಪ್ರೀತಿಯಿಂದ
ಸಿಂಧು
ಸಿಂಧು ಅವರೆ,
ರಸವತ್ತಾದ ಬರಹ ಗಂಜಿಯ ಹಾಗೆಯೇ. ಮಳೆ ಬೀಳುತ್ತಿದ್ದರೆ ಆಹಾ...ಗಂಜಿಯೂಟ . ಅಮ್ಮನಿಗೆ ಹೇಳುತ್ತೇನೆ ಇವತ್ತೇ ಮಾಡು ಅಂತ.
ಸಿಂಧು,
ನಿಮ್ಮ ಕತೆ ಓದಿ, ನನಗೂ ಗಂಜಿ ಚಪ್ಪರಿಸುವ ಆಸೆಯಾಗುತ್ತಿದೆ.
kathe chennaagide
baalyada nenapinolage vartamaanavannu kattikolluva nimma manostiti khushikoduvanthadu.
- cheekal
ಸಿಂಧು,
ನನ್ನ ಗ್ಯಾಸ್ಟ್ರಾನಮಿಕ್ ಸೆನ್ಸುಗಳನ್ನ ಪರೀಕ್ಷೆಗೆ ಒಡ್ಡಿತು ನಿಮ್ಮ ಬರಹ.ತಮಾಷೆ ಅಂದ್ರೆ ಮೊನ್ಮೊನ್ನೆ ನನ್ನ ಮಗಳಿಗೆ ಗಂಜಿ ಮಾಡಿ, ಅದ್ರ ಜತೆ ಕಾಳಿನ ಒಣಪಲ್ಯ ಮಾಡಿ, ಒಂಚೂರು ಮಜ್ಜಿಗೆ ಸುರಿದು, ತುಪ್ಪ ಕಾಣಿಸಿ, ತಿನ್ನಿಸಿದೆ. ಮೊದಲು ಗಲಾಟೆ ಮಾಡಿದ್ರೂ, ಒಂದು ತುತ್ತು ತಿಂದು ’ಯಮ್ಮೀ!!’ ಅಂದು ಪೂರ್ತಿ ಬಟ್ಟಲು ಖಾಲಿ ಮಾಡಿದಳು. ನಂಗೆ ನನ್ನ ಬಾಲ್ಯದ ಒಂದು ಭಾಗವನ್ನ ಅವ್ಳೂ ಅನುಭವಿಸ್ತಾ ಇದಾಳೆ ಅನ್ನಿಸಿ ಥ್ರಿಲ್ಲು!!
ಥ್ಯಾಂಕ್ಯೂ!!
ಟೀನಾ
ಸಿಂಧು,
ಗುರುಕುಲದಲ್ಲಿ ೫ ವರ್ಷ ಇದ್ದಾಗ ಬೆಳಗ್ಗೆ ಯಾವಾಗಲೂ ಗಂಜಿಯೇ...ಅದರ ನೆನಪಿಗೆ ಇಂದಿಗೂ ಮನೆಯಲ್ಲಿ ವಾರಕ್ಕೆ ಒಮ್ಮೆ ಗಂಜಿ...ರಾಜೇಶ್ ಹೇಳಿದ ಹಾಗೆ ಚಾರಣದಲ್ಲೂ ರಾತ್ರಿ ಉಳಿದಾಗ ಕಾಡಿನ ನಡುವೆ ಖುಷಿ ಕೊಡೋದು ಗಂಜಿ...ಮತ್ತೆ ನಿಮ್ಮ ಲೇಖನದಲ್ಲೂ ಗಂಜಿಯ ಘಮಲು...ಅದಕ್ಕೆ ನಿಮಗೊಂದು ಥ್ಯಾಂಕ್ಸ್ :)
ನಿಮ್ಮ ಬರಹ ಓದಿ ಖುಷಿಯಾಯಿತು. ನನಗೆ ತುಪ್ಪ ಎಂದರೆ ಇಷ್ಟವಿಲ್ಲ. ಅದಕ್ಕೆ ಅಮ್ಮ ಕುಚಲಕ್ಕಿ ಗಂಜಿ ಮಾಡಿದಾಗ ಎಲ್ಲರೊಂದಿಗೆ ನನಗೆ ಮಜ್ಜಿಗೆ ಹಾಕುತ್ತಿದ್ದಳು. ಅದೆಲ್ಲಾ ನೆನಪಾಯ್ತು. ಮತ್ತೊಂದು ಸಂತಸವೆಂದರೆ ಈಗ ನನ್ನ ಮಗ ಅಜ್ಜನ ಮನೆಯಲ್ಲೇ ಓದುತ್ತಿದ್ದಾನೆ, ಅಂದರೆ ದಿನವೂ ಅಮ್ಮಮ್ಮ ಮಾಡಿದ ಬಿಸಿಗಂಜಿ, ತುಪ್ಪದ ಸಮಾರಾಧನೆ.
ಅಂದ ಹಾಗೆ, ನಾಲ್ಕೈದು ವರ್ಷಗಳ ಹಿಂದೆ ಹುಣ್ಣಿಮೆಯ ಕವಿಗೋಷ್ಠಿಯಲ್ಲಿ ಇಂಥದೇ ನೆನಪೊಂದನ್ನು ಜಯಂತ ಕಾಯ್ಕಿಣಿ ಕಾವ್ಯವಾಗಿ ಹೇಳಿದ್ದರು. ಅದನ್ನು ವರದಿ ಮಾಡಿದ್ದೆ..ಅದಕ್ಕೆ ನೀಡಿದ್ದ ಹೆಡ್ಡಿಂಗು "ಗಂಜಿಯಲ್ಲಿ ಕರಗಿ ಹೋದ ಶಾಯಿ..'
ಹೀಗೆ ನಿಮ್ಮ ಬರಹ ನೆನಪುಗಳ ಸುರುಳಿಯನ್ನೇ ಬಿಚ್ಚಿತು. ಧನ್ಯವಾದ.
ನಾವಡ
ಸಿಂಧು ಅವ್ರೆ ಮಳೆಗಾಲನ ನೆನಪಿಸಿಬಿಟ್ರಿ. ಗಂಜಿ ಅಂದ್ರೆ ಮಾರು ದೂರ ಹಾರುತ್ತಿದ್ದ ನಾನು ಇತ್ತೇಚೆಗೆ ಜ್ವರಕ್ಕೆ ಬಿದ್ದುಕೊಂಡಾಗ ಗಂಜಿಯೆ ಗತಿಯಾದಾಗ ನಿಧಾನವಾಗಿ ಅದರ ರುಚಿಗೆ ಮಾರುಹೋಗಿದ್ದೆ. ಇವತ್ತು ನನ್ನ ಅಡುಗೆ ಅದೇ. ಥ್ಯಾಂಕ್ಸ್ ಕಣ್ರಿ.
ಮಳೆನೆನಪಿನವರಿಗೆ,
ಗಂಜಿ ರುಚಿ, ಅದರಲ್ಲೂ ಅಮ್ಮ ಮಾಡಿ ಬಡಿಸುವುದು ಇನ್ನೂ ರುಚಿ.
ಸುನಾಥ,
ಬರೆದ ಮೇಲೆ ನಾನೇ ಮತ್ತೆರಡು ಸಲ ಮಾಡಿಕೊಂಡು ಸುರಿದೆ.. :)
ಅಕ್ಷಯ ರಾಮ,
:) ಧನ್ಯವಾದ.
ಚೀಕಲ್,
ನನ್ನ ಸಮೃದ್ಧ ಬಾಲ್ಯವೇ ಇವತ್ತಿನ ನನ್ನ ಬುನಾದಿ. ಅದಿಲ್ಲದೆ ನಾನಿಲ್ಲ. ಕೆಲವೊಮ್ಮೆ ನಾನೂ ತೀರಾ ಹಳೆಯ ನೆನಪುಗಳಲ್ಲಿ ಮುಳುಗಿದಂತೆ ಕಂಡುಬಂದರೂ ನನ್ನ ಇಂದಿನ ಎಲ್ಲ ಧೈರ್ಯ ನಿಲುವುಗಳ ಒರತೆ ನನ್ನ ಬಾಲ್ಯದಲ್ಲಿ ಸುತ್ತಲಿದ್ದವರು ಉಣ್ಣಿಸಿದ ಜೀವನಪ್ರೀತಿ,ಒಳ್ಳೆಯತನ ಮತ್ತು ಕಷ್ಟದಲ್ಲಿ ಬೆನ್ನುಕಟ್ಟಿದ ಸಹೃದಯತೆ. ಅದೇ ನನ್ನ ಬರಹಗಳಲ್ಲಿ ಮತ್ತೆ ಮತ್ತೆ ನೆನಪಾಗಿ ನೇವರಿಕೆಯಾಗಿ ಹೊಳೆಯುತ್ತದೆ.
ಟೀನಾ,
ಯಮ್ಮೀ.. ಅವಳು ಅದೃಷ್ಟಶಾಲಿ-ತನ್ನ ಬಾಲ್ಯದ ತುಣುಕುಗಳನ್ನ ಕತೆಯಾಗಿ ನೀತಿಯಾಗಿ ಹೇಳದೆ, ಮಾಡಿ ತಿನ್ನಿಸುವ, ಅವಳ ಪರಿಧಿಗೆ ಹರಿಸುವ ಅಮ್ಮ ಇದ್ದಾಳಲ್ಲ. ಖುಶಿಯಾಯ್ತು.
ವೇಣು,
ಈ ಖುಶಿಯಲ್ಲಿ ಮತ್ತೆರಡು ಕವಿತೆ ಬರಲಿ.
ಗುರುಕುಲದ ಮಾತು ಹೊತ್ತು ತರುತ್ತದೆ ಮತ್ತೆ ಹಲವು ನೆನಪುಗಳನ್ನು.
ನಾವಡರೇ,
ನನಗೂ ತುಪ್ಪವೆಂದರೆ ಇಷ್ಟವಿಲ್ಲ. ಬೆಣ್ಣೆಯೆಂದರೆ ಪ್ರೀತಿ.
ನಿಮ್ಮ ಮಗನಿಗೆ ಗಂಜಿಯ ಜೊತೆಗೆ ಅಜ್ಜ ಅಮ್ಮಮ್ಮನ ಅಕ್ಕರೆಯ ಮಡಿಲೂ ಸಿಕ್ಕಿದೆ. ತುಂಬ ಖುಶಿಯಾದ ವಿಚಾರ. ಕಾಯ್ಕಿಣಿಯವರ ಭಾವದೊರತೆಯ ಬಗ್ಗೆ ಎರಡು ಮಾತಿಲ್ಲ. ಆ ವರದಿಯನ್ನು ಸಾಧ್ಯವಾದರೆ ಚೆಂಡೆಮದ್ದಳೆಯಲ್ಲಿ ಮಾರ್ದನಿಸಲು ಆಗುತ್ತಾ?
ಶರಶ್ಚಂದ್ರ,
ಜ್ವರಕ್ಕೆ ಗಂಜಿ ಬಿಸಿಯಾದ ಹಿತ.
ನಿಮಗಿಷ್ಟವಾಗಿದ್ದು, ನಿಮ್ಮನ್ನು ಇವತ್ತೂ ಗಂಜಿ ಮಾಡಲು ಪ್ರೇರೇಪಿಸಿದ್ದು ತಿಳಿದು ಖುಶಿಯಾಯ್ತು.
ಓದಿ ಸ್ಪಂದಿಸಿದ ಎಲ್ಲರಿಗೂ ಪ್ರೀತಿಯ ನಮನಗಳು.
ಪ್ರೀತಿಯಿಂದ
ಸಿಂಧು
ಸಿಂಧು-
ಎಷ್ಟೊಂದು ಬರೆದಿದ್ದೀರಿ. ಮತ್ತು ಚಂದ ಬರೆದಿದ್ದೀರಿ. ನಿಮ್ಮನ್ನು ನಾನು ಈ ತನಕ ಕೆಂಡಸಂಪಿಗೆಯಲ್ಲಷ್ಟೇ ಓದಿದ್ದು.
ಖುಷಿಯಾಯಿತು.
ನಾಗರಾಜ ವಸ್ತಾರೆ
ನಮಸ್ಕಾರ,
ಬಿಸಿ ಬಿಸಿ ಗಂಜಿ, ಬೆಚ್ಚನೆಯ ಬರಹ, ಜೊತೆಗೊಂದಿಷ್ಟು ನವಿರು ನೆನಪು. ಈ ಮಳೆಗಾಲಕ್ಕೆ ಇನ್ನೇನು ಬೇಕು?
ಧನ್ಯವಾದಗಳು.
ಜೋಮನ್.
ವಸ್ತಾರೆಯವರಿಗೆ,
ಅಕ್ಕರೆ ತುಂಬಿದ ದೊಡ್ಡ ಮಾತು. ನಿಮಗೆ ಓದಿ ಖುಶಿಯಾಗಿದ್ದು ನನಗೂ ಖುಶಿ ತಂದಿದೆ.
ನಿಮ್ಮ ರೋಜಾವದಿಯ ಇಸ್ಟೇಲಲ್ಲಿ ಏನಾದರೂ ಬರೆಯೋಣವೆಂದುಕೊಂಡೆ, ಇಲ್ಲ ತೋಚುತ್ತಿಲ್ಲ :)
ಜೋಮನ್,
ಮಳೆಹನಿಯವರು ನೀವು, ಮಳೆ-ಗಂಜಿ ಎರಡೂ ಹೇಗೆ ತಾನೆ ಇಷ್ಟವಾಗದೆ ಹೋಗುತ್ತೆ. ಸ್ಪಂದನಕ್ಕೆ ವಂದನೆಗಳು್.
ಪ್ರೀತಿಯಿಂದ
ಸಿಂಧು
ನಿಮ್ಮ ಈ ಕತೆಗೆ ಇಷ್ಟೊಂದು ಒಳ್ಳೆ ಕಾಮೆಂಟ್ಸ್ ದೊರಕಿರುವುದನ್ನ ನೋಡಿ, ಗಂಜಿನ ಇಷ್ಟ ಪಡುವವರು ಇನ್ನ ಇದ್ದಾರೆ ಅಂತ ಸಮಧಾನ ಆಯಿತು :)
"ಹಲಸಿನ ಹಣ್ಣಿನ ಪಾಯಸ"ದ ಮೇಲೊಂದು ಸಿಹಿಯಾದ ಉಪಕಥೆ ಏನಾದರೂ ಮುಂದಿನ ದಿನಗಳಲ್ಲಿ ತಮ್ಮ ಕೀಲಿಮಣೆಯಿಂದ ಹರಿದುಬರುತ್ತದೆಂದು ಆಶಿಸಬಹುದೇ?!
:)
Nice article!
- ಇದು ಯಾರು ಅಂತ correct-ಆಗಿ guess ಮಾಡಿದ್ರೆ ಒಂದು prize :)
ಸುಜಯ್,
ನಂಗೂ ಅಷ್ಟೇ. ಸಮಾಧಾನ ಆಯ್ತು.
ಅನಾಮಿಕನಂತೆ ಆಟವಾಡಿಸಿದವರಿಗೆ.. :D
ನನ್ನ ಹತ್ತಿರ ಹಲಸಿನ ಹಣ್ಣಿನ ಪಾಯಸ ಮಾಡಲು ಕೇಳಿ ಕೇಳಿ ಸುಸ್ತಾಗಿರುವವರು ಯಾರು ಅಂತ ಹೇಗೆ ತಾನೆ ಮರೆಯಲು ಆಗುತ್ತೆ. ಕಲ್ಯಾಣಿಯವರ ಪತಿ ಮಹಾಶಯರೂ ಮಾವಿನಕೆರೆ ಬೆಟ್ಟದ ಮೇಲಿನ ದೇವರಿಗೆ ನಡೆದುಕೊಳ್ಳುವವನೂ ಆದ ನನ್ನ ಸ್ನೇಹಿತನೆ ಅಲ್ಲವೆ :D
ಪ್ರೈಸ್ ಏನೂ ಬೇಡಾ, ಈ ಕಡೆ ರಿಂಗ್ ರೋಡ್ ಕಡೆ ಬಂದಾಗ ತಪ್ಪದೇ ನಮ್ಮನೆಗೆ ಬಂದರೆ ತುಂಬ ಖುಶಿಯಾಗತ್ತೆ. ಉಪಕಥೆ ಅಲ್ಲದಿದ್ದರೂ, ಪಾಯಸವನ್ನೇ ಹರಿಸಲು ಆಗುತ್ತಾ ನೋಡೋಣ. :)
ಪ್ರೀತಿಯಿಂದ
ಸಿಂಧು
ಬಹಳ ಸುಂದರವಾಗಿದೆ ನಿಮ್ಮ ಬರವಣಿಗೆ. ಇವತ್ತು ಒಬ್ಬ ಬಹಳ ಹಳೆಯ ಸ್ನೇಹಿತನಿಂದ ನಿಮ್ಮ ಬರಹದ ಬಗ್ಗೆ ಗೊತ್ತಾಯಿತು. ಇಷ್ಟೆಲ್ಲ ಕನ್ನಡದಲ್ಲೆ ಬರೆದಿರುವುದು ನೋಡಿ ತುಂಬಾ ಸಂತೋಷವಾಗ್ತಾ ಇದೆ.
ಧನ್ಯವಾದಗಳು... ಹೀಗೇ ಬರವಣಿಗೆ ಮುಂದುವರಿಸಿ...
Post a Comment