Monday, March 31, 2008

ಹೂವು ಚೆಲ್ಯಾವೆ ಹಾದಿಗೆ..

ಮಲೆನಾಡಿನ ಪುಟ್ಟ ಊರಿನಿಂದ ಬಂದ ನನಗೆ ರಾಜಧಾನಿಯ ಗಜಿಬಿಜಿ, ಗಡಿಬಿಡಿ, ಗುಂಪಿನಲ್ಲಿ ಕವಿಯುವ ಏಕಾಂಗಿತನ ಎಲ್ಲ ಬೇಸರಹುಟ್ಟಿಸಿಬಿಟ್ಟಿದ್ದವು. ಎಲ್ಲ ಅಮೂರ್ತವಾಗಿ, ಕನ್ನಡಿಯೊಳಗಿನ ಗಂಟಾಗಿ, ಆಪ್ತತೆಯಿಂದ ಹೊರತಾಗಿ ಕಾಣಿಸುತ್ತಿದ್ದವು.ಈ ಎಲ್ಲ ಬೇಸರದ ಕಾವಳಗಳನ್ನು ಬೆಚ್ಚಗೆ ಅರಳಿದ ಒಂದು ಬೆಳಗು ಸಹ್ಯವಾಗಿಸಿಬಿಟ್ಟಿತು. ಬೆಳಗ್ಗೆ ೭ ಗಂಟೆಗೆ ಬಿ.ಎಂ.ಟಿ.ಸಿ ಬಸ್ಸಿನ ಕಿಟಕಿಯಿಂದ ಕಂಡ ಮೈತುಂಬ ಹೂಬಿರಿದು ಪಾದಪಥಕ್ಕೂ ಚೆಲ್ಲಿದ ಮರಗಳ ಸಾಲು, ಇಬ್ಬನಿಯ ಮಬ್ಬಿನಲ್ಲೂ ಗೆರೆಕೊರೆದಂತೆ ಕಾಣುವ ಬೆಳ್ಳಕ್ಕಿ ಸಾಲು, ಬುಲ್ ಬುಲ್ ಮೈನಾಗಳ ಚಿಲಿಪಿಲಿ, ರಸ್ತೆಬದಿಯಲ್ಲಿ ಬೆವರಿಳಿಸುತ್ತ ಓಡುತ್ತಿರುವ ಮಂದಿ ಎಲ್ಲವೂ ಊರಿನ ಆಪ್ತತೆ ಮತ್ತು ಮಾನುಷೀ ಮಾರ್ದವತೆಯನ್ನ ಚೂರು ಚೂರಾಗಿ ಬನಿ ಇಳಿಸತೊಡಗಿದವು.

ಚಳಿಗಾಲ ಗಾಢವಾಗುತ್ತಿದ್ದಂತೆ ಹೂಬಿರಿದು ನಿಲ್ಲುವ ಮರಗಳ ಸಾಲು ಏನೇನೋ ಖುಷಿಗಳನ್ನ ಹಿತವನ್ನ ಹರಡುತ್ತವೆ. ಬೆಂಗಳೂರೆಂಬ ಮಾಯಾನಗರಿ ಮಾಯೆಯ ಝಗಮಗ ಕಳೆದು, ಇಬ್ಬನಿಯಲ್ಲಿ ತೊಳೆದು ತಂಪಗೆ ಹೊಳೆಯುತ್ತದೆ. ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಕೆಂಪಾಗುವ ಪಡು ದಿಕ್ಕು ಓ ಇದು ನಮ್ಮೂರಲ್ಲಿ ಮುಳುಗುವ ಸೂರ್ಯನೇ ಅಂತನ್ನಿಸಿ ಬೆಂಗಳೂರು ಮನದಲ್ಲಿ ಇನ್ನೊಂದು ಮೆಟ್ಟಿಲೇರುತ್ತದೆ. ಎಲ್ಲ ಬಗೆಯ ಕೆಲಸ ಕಾಯಕಗಳಿಗೆ ಅವಕಾಶ ಕೊಟ್ಟು ಗುಳೆಬಂದ ರೈತರನ್ನೂ, ಓದಲು ಬಂದ ಮಕ್ಕಳನ್ನೂ,ಐಟಿ ಅಲೆಯಲ್ಲಿ ತೇಲುವ ಯುವಜನಾಂಗವನ್ನೂ, ವಾಕಿಂಗಿನಲ್ಲಿ ಸಂಚರಿಸುವ ಹಿರಿಜೀವಗಳನ್ನು, ಗಡಿಬಿಡಿಯಲ್ಲಿ ಓಡುವ ದಿನಗಳನ್ನು ಸಮಾನ ಭಾವದಲ್ಲಿ ಒಳಗೊಳ್ಳುವ ಯುಟೋಪಿಯಾದಂತೆ ಭಾಸವಾಗುತ್ತದೆ.

ಒಮ್ಮೊಮ್ಮೆ ಸಿರಿತನ, ದಾರಿದ್ರ್ಯ ಎರಡೂ ಸೀಸಾ ಆಡುತ್ತಿರುವಂತೆ ಕಂಡು ಮನಸ್ಸಿನಲ್ಲಿ ಮುಳ್ಳು ಚಿಟಿಗೆಯಾಡುತ್ತದೆ. ಒಬ್ಬರಿನ್ನೊಬ್ಬರ ಹೆಗಲು ಕಟ್ಟದ ವ್ಯವಹಾರೀ ಸಂಬಂಧಗಳ ಮೆರವಣಿಗೆ ನೋಡಿ ಮನಸು ಮುದುಡುತ್ತದೆ.ಸಾಕಪ್ಪಾ ಅನ್ನಿಸುತ್ತ ರಾತ್ರಿ ಮಲಗೆ ಬೆಳಗ್ಗೆ ಏಳುವಾಗ ತಂಪಗೆ ಅರಳುವ ಬೆಳಗು, ಹೂಚೆಲ್ಲಿದ ಪಾದಪಥ, ಹೂವಾಡಗಿತ್ತಿ, ತರಕಾರಿಯಮ್ಮ, ಯುನಿಫಾರ್ಮ್ ಹಾಕಿ ತಿದ್ದಿ ತೀಡಿದ ತಲೆಗೂದಲಿನ ಜೊಂಪೆ ಹಿಂದಕ್ಕೆ ತಳ್ಳುತ್ತಾ ನಡೆಯುವ ಪುಟಾಣಿಗಳನ್ನ ನೋಡಿದರೆ ಎಲ್ಲ ಕಸಿವಿಸಿ ಕಳೆದು ಮುದ್ದು ಮೂಡುತ್ತದೆ. ಯಾವುದನ್ನೂ ಪ್ರೀತಿಸುವುದು ನಮ್ಮ ಮನಸ್ಥಿತಿಗೆ ಸಂಬಂಧ ಪಟ್ಟ ವಿಷಯವಾ ಹಾಗಾದರೆ? ನಿನ್ನೆ ಸಿಡುಕು ಮೂಡಿಸಿದ್ದ ದಾರಿಯಲ್ಲಿ ಇವತ್ತು ಹೊಸ ಹಿತ ಹೇಗೆ ಅರಳುತ್ತದೆ? ನಿನ್ನೆ ಚಿಟ್ಟು ಹಿಡಿಸಿದ್ದ ಗಜಿಬಿಜಿ ಇವತ್ತು ಹೇಗೆ ಅಚ್ಚರಿ ಹುಟ್ಟಿಸುತ್ತದೆ? ಯೋಚಿಸಬೇಕಾದ ವಿಷಯ.

ಊರಿನ ನೆನಪನ್ನು ಹೊತ್ತು ತರುವುದು ಇಲ್ಲಿಯ ಅಚಾನಕ್ ಮಳೆ. ಈ ಮಳೆಯನ್ನ ಮಲೆನಾಡಿನ ಧೋ ಮಳೆಯ ಜೊತೆ ಹೋಲಿಸಲಾಗುವುದಿಲ್ಲವಾದರೂ, ಬೇಸಿಗೆ ದಿನಗಳಲ್ಲಿ ಕಾವು ಹೆಚ್ಚಿ ಮನಸ್ಸು ವಿಷಣ್ಣವಾದಾಗ ಇದ್ದಕ್ಕಿದ್ದಂಗೆ ಸಂಜೆಯೋ ರಾತ್ರಿಯೋ ಬಂದು ತೋಯಿಸುವ ಮಳೆ, ಮನಸ್ಸಿನ ಕಸಿವಿಸಿಯನ್ನು ಹೋಗಲಾಡಿಸಿ ಬಾಲ್ಯದ ನೆನಪನ್ನು, ಊರಿನ ಆಪ್ತತೆಯನ್ನು ತಂಪಾಗಿ ತಂದಿಟ್ಟು ಹೋಗುತ್ತದೆ. ಎಲ್ಲ ಚಂದವೇ ಅಂತೇನಿಲ್ಲ. ಕಟ್ಟಿ ನಿಂತ ಮೋರಿಗಳಲ್ಲಿ ಹೋಗಲಾಗದ ನೀರು ರಸ್ತೆಗೆ ನುಗ್ಗುತ್ತದೆ. ರಸ್ತೆ ಹೊಳೆಹಾದಿಯಾಗುತ್ತದೆ. ಕೆಳಗಿನ ಮಟ್ಟದಲ್ಲಿ ಕಟ್ಟಿರುವ ಮನೆಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಬೆಳಿಗ್ಗೆ ಕಸಗುಡಿಸುವವರ ಗಾಡಿ ತುಂಬಿ ತುಳುಕಿ ಭಾರವಾಗಿರುತ್ತದೆ. ಆಫೀಸುಗಳ ಹೌಸ್ ಕೀಪಿಂಗ್ ನವರ ಕೆಲಸ ಡಬ್ಬಲ್ಲಾಗಿರುತ್ತದೆ. ಇದೆಲ್ಲ ನೋಡಿದಾಗ ಮನವು ಮುದುಡಿದರೂ ಸುಮ್ಮನೆ ಕಿಟಕಿಯಾಚೆಯಿಂದ ನೋಡುವಾಗ ಮಳೆಗೆ ತೋಯ್ದು, ಧೂಳು ಕಳೆದ ಚಿಗುರು ಮರಗಳು, ಅಲ್ಲಲ್ಲಿ ಹಸಿರು ಗುಪ್ಪೆಯಾಗಿ ಕಾಣುವ ಪುಟ್ಟ ಪುಟ್ಟ ಪಾರ್ಕುಗಳು, ಸಾಲು ಮರಗಳು, ತಣ್ಣಗೆ ಭಾರವಾಗಿ ಹರಿದಾಡುವ ಗಂಧವತೀ ಗಾಳಿ ಎಲ್ಲ ಮುದುಡಿದ ಮನದ ಪಕಳೆಗಳ ಮೇಲೆ ಒಂದು ನಲಿವಿನ ಛಾಯೆಯನ್ನ ಹಬ್ಬಿಸುತ್ತವೆ. ಮೇಲೆ ನೀಲಿ ಆಗಸ ಕೆಳಗೆ ತಾಯಿ ಭೂಮಿ..ಹಾಡು ನೆನಪಾಗುತ್ತದೆ.

ಚುಕ್ಕಿ ಹರಡಿದ ರಾತ್ರಿಗಳು ನಮ್ಮ ನಿಯಾನು ದೀಪದ ಬೆಳಕಲ್ಲಿ ಮಂಕಾಗಿದ್ದರು ಮಿನುಗುತ್ತಲೇ ಇರುತ್ತವೆ. ನಗರದ ಹೃದಯಭಾಗದಿಂದ ದೂರವಿರುವ ಕೆಲವು ಬಡಾವಣೆಗಳಲ್ಲಿ ಹುಣ್ಣಿಮೆ ಬೆಳಕು ನೇರ ಬಾಲ್ಕನಿಗೇ ನುಗ್ಗಿ ಮನಸ್ಸು ಹಾಡಾಗುತ್ತದೆ.. ಹುಣ್ಣಿಮೆ ಆಗಸದ ಬಣ್ಣದ ಛತ್ರಿಯು ಮೆಲ್ಲನೆ ತಾನಾಗಿ ಬಿಚ್ಚುತ್ತದೆ(ಲಕ್ಷ್ಮೀನಾರಾಯಣ ಭಟ್ಟರ ಕವಿತೆ ಸಾಲು).

ಬೆಚ್ಚಗೆ ಕಾಫೀ ಹೀರುತ್ತ ನಿಂತಾಗ ತಣ್ಣಗೆ ಮುಟ್ಟುವ ಬೇಡುವ ಕೈ, ಮನಸ್ಸನ್ನು ಮಂಜುಗಟ್ಟಿಸುತ್ತದೆಯಾದೆಯಾದರೂ, ಹೊಸಹಗಲಿನ ಭರವಸೆ ನಂದುವುದಿಲ್ಲ. ಉದ್ಯಾನ ನಗರಿ ಎಂದು ಕರೆಸಿಕೊಂಡಿದ್ದ ಉದ್ಯೋಗನಗರಿ ಎಲ್ಲಕ್ಕೂ ಪರಿಹಾರವಿದೆಯೆಂಬ ಭರವಸೆಯಿಂದ ಹೂವರಳಿಸಿ ನಿಲ್ಲುತ್ತದೆ. ತಲ್ಲಣಿಸದಿರು ಕಂಡ್ಯ ತಾಳು ಮನವೇ ಅಂತ ಸಮಾಧಾನಿಸಿಕೊಳ್ಳುತ್ತೇನೆ.

ಹೂಳು ತುಂಬಿ ಲೇಔಟುಗಳಾಗುತ್ತ ನಡೆದಿರುವ ಕೆರೆಗಳನ್ನು ನೋಡಿದರೆ ಮಾತ್ರ ಯಾವ ಹಾಡು, ಎಷ್ಟೇ ಹಸಿರಾಗಿರುವ ಮರವೂ ಕೂಡ ನನಗೆ ಹಾಯೆನಿಸುವುದಿಲ್ಲ. ನಮ್ಮ ಅನ್ನಕ್ಕೆ ನಾವೇ ಕಲ್ಲು ಹಾಕಿಕೊಳ್ಳುವ ನಮ್ಮ ಗೋರಿಯನ್ನ ನಾವೇ ತೋಡುವ ಕೆಲಸದಲ್ಲಿ ಎಷ್ಟು ಗಡಿಬಿಡಿಯಿಂದ ಮುಳುಗಿಹೋಗಿದ್ದೇವಲ್ಲಾ ಅಂತ ಬೇಜಾರಾಗಿ ಹೋಗುತ್ತದೆ. ಏನು ಮಾಡಲಿ? ಬಂದ ಎಲ್ಲರನ್ನೂ ತೆಕ್ಕೆಗೆ ಎಳೆದುಕೊಂಡಿರುವ ಬೆಂಗಳೂರೆಂಬ ಮಹಾತಾಯಿಯ ಬೆನ್ನು ತೊಡೆಗಳನ್ನ ಹುಣ್ಣು ಮಾಡುತ್ತಿರುವ ನಮ್ಮ ಪಾಪಕ್ಕೆ ಪರಿಹಾರವೆಲ್ಲಿದೆ? ನಾನು ಚೂರೂ ನಂಬದಿರುವ ದೇವರು ಇದ್ದಕ್ಕಿದ್ದಂಗೆ ಬಂದು ವರ್ಷಗಟ್ಟಲೆ ಮಾಡಬೇಕಿರುವ ಯಾವುದೋ ಹೊಚ್ಚ ಹೊಸಾ ಹಸಿರು ವ್ರತವನ್ನ ಹೇಳಿಕೊಡಬಾರದೇ ಅನ್ನಿಸುತ್ತಿದೆ.

ಹೂವು ಚೆಲ್ಯಾವೆ ಹಾದಿಗೆ... ಹೂವಲ್ಲ ಅವು ಭೂಮಿಯ ಬಯಕೆಗಳು ಮತ್ತು ನೆನವರಿಕೆಗಳು! ನೆಲದ ಆಳದಿಂದ ಆಗಸೆದೆಡೆಗೆ ಚಿಮ್ಮಿದ ಜೀವನ್ಮುಖತೆಯ ಕುಸುಮಗಳು. ನಡೆಯುವಾಗ ತುಳಿಯದೆ ಹೋಗಲು ಬರದೇ ಹೋಯಿತಲ್ಲ ನಮಗೆ?!

12 comments:

Sree said...
This comment has been removed by the author.
Sree said...
This comment has been removed by the author.
Sree said...

ಸಿಂಧು,
ಇತ್ತೀಚಿನ ದಿನಗಳಲ್ಲಿ ನನಗೆ ತುಂಬಾ ಹಿಡಿಸಿದ ಬರಹ ಇದು ಅನ್ನಬಹುದು! ಬ್ಲಾಗಿಗರಲ್ಲಿ ಅರ್ಧಕ್ಕಿಂತ ಮಲೆನಾಡ ಮಲ್ಲಿಗೆಗಳು, ಕಡಲತೀರದ ಭಾರ್ಗವರೂ ತುಂಬಿ ಎಲ್ಲಾ ಊರಿನ ನೆನಪಲ್ಲಿ ತೊಯ್ದು ನಮ್ಮಂಥಾ ಬಡಪಾಯಿಗಳಿಗೆ ಹೊಟ್ಟೆಕಿಚ್ಚು ಮೂಡಿಸ್ತಿರೋದರ್ ಜೊತೆಗೇ ಬೆಂಗ್ಳೂರಲ್ಲೇನಿದೆ ಅಂತ ನನ್ನ ಪ್ರೀತಿಯ ಊರನ್ನ ಒಂದೇ ಸಲ ತಳ್ಳಿಹಾಕೋದು ನೋಡ್ತಾ ಸ್ವಲ್ಪ ನೋವಾಗ್ತಿತ್ತು... ನಿಮ್ಮ ನೋಟದಲ್ಲಿ ಆರಕ್ಕೇರಿಸದೆ ಮೂರಕ್ಕಿಳಿಸದೆ ಜೀವನಪ್ರೀತಿ ತುಂಬಿಕೊಂಡು ಕಂಡ ಚಿತ್ರವಿದೆ, ಆ ನೋಟಕ್ಕೆ ಎಲ್ಲವನ್ನೂ ತನ್ನದಾಗಿಸಿಕೊಂಡು ಕಾಣುವ ಪ್ರಬುದ್ಧತೆಯಿದೆ. ಅದಕ್ಕೇ ಅದು ಅಲ್ಲಿಯವರು-ಇಲ್ಲಿಯವರು ಎನ್ನದೇ ಎಲ್ಲರ ಮನತಟ್ಟೋಹಾಗಿದೆ! ತುಂಬ ಖುಷಿಯೆನ್ನಿಸ್ತು...

’ಯಾವುದನ್ನೂ ಪ್ರೀತಿಸುವುದು ನಮ್ಮ ಮನಸ್ಥಿತಿಗೆ ಸಂಬಂಧ ಪಟ್ಟ ವಿಷಯವಾ ಹಾಗಾದರೆ?’ - ಖಂಡಿತಾ ಹೌದು ಅಂತನ್ನಿಸುತ್ತೆ ನನಗಂತೂ:)
ಆ ನಿಮ್ಮ ಚೆಲುವಿನ ಮನಕ್ಕೆ, ಕಂಗಳಿಗೆ, ಅದನ್ನ ಬರಹಕ್ಕಿಳಿಸೋ ಪರಿಗೆ ಒಂದು ದೊಡ್ಡ ಥ್ಯಾಂಕ್ಸ್ !:)

ಶ್ರೀನಿಧಿ.ಡಿ.ಎಸ್ said...

ನೀ ಬಚಾವಾದೆ! ಇವತ್ ನಿನ್ ಮನೆಗ್ ನುಗ್ಗೋ ಪ್ಲಾನ್ ಮಾಡ್ತಾ ಇದ್ದಿದ್ದಿ.

ಚೊಲೋ ಬರದ್ಯೇ, ಆದ್ರೆ ಏನು - ಕಡ್ಮೆ ಬರದ್ದು?:)

ರಂಜನಾ ಹೆಗ್ಡೆ said...
This comment has been removed by the author.
Sushrutha Dodderi said...
This comment has been removed by the author.
Sharath Akirekadu said...

"ಹೂವು ಚೆಲ್ಯಾವೆ ಹಾದಿಗೆ... ಹೂವಲ್ಲ ಅವು ಭೂಮಿಯ ಬಯಕೆಗಳು ಮತ್ತು ನೆನವರಿಕೆಗಳು! ನೆಲದ ಆಳದಿಂದ ಆಗಸೆದೆಡೆಗೆ ಚಿಮ್ಮಿದ ಜೀವನ್ಮುಖತೆಯ ಕುಸುಮಗಳು. ನಡೆಯುವಾಗ ತುಳಿಯದೆ ಹೋಗಲು ಬರದೇ ಹೋಯಿತಲ್ಲ ನಮಗೆ?!" - ತುಂಬಾ ಇಷ್ಟ ಆಯಿತು.

ಧನ್ಯವಾದ
ಪ್ರೀತಿಯಿಂದ
ಶರತ್ .ಎ

ಮನಸ್ವಿನಿ said...

ಸಿಂಧು ಅಕ್ಕ,

ಬಹಳ ಚಂದದ ಬರಹ.
"ಯಾವುದನ್ನೂ ಪ್ರೀತಿಸುವುದು ನಮ್ಮ ಮನಸ್ಥಿತಿಗೆ ಸಂಬಂಧ ಪಟ್ಟ ವಿಷಯವಾ ಹಾಗಾದರೆ?" - ನನ್ನ ಮಟ್ಟಿಗೆ ಹೌದು.

ದೇಶದ ಮೂಲೆ ಮೂಲೆಗಳಿಂದಲೂ ಹರಿದು ಬರುವ ಜನಸಾಗರವನ್ನು ಕೈ ಬೀಸಿ ಬರಮಾಡಿಕೊಂಡು, ಅವರಿಲ್ಲಿ ನೆಲೆ ನಿಂತು, ಗಳಿಸಿ, ಉಳಿಸಿ, ತನ್ನ ಊರಿನಲ್ಲಿರುವ ತನ್ನವರಿಗೆ ಕಳಿಸಿ ಅವರ ಬದುಕಿನ ಸ್ಥಿತಿ ಗತಿಗಳನ್ನು ಇನ್ನಷ್ಟು ಚಂದಗೊಳಿಸುವ ಊರು ನಮ್ಮ ಬೆಂಗಳೂರು . ಇಂತ ಊರಿನ ಚಂದವೇ ಬೇರೆ.

ಜಯಂತ ಕಾಯ್ಕಿಣಿಯ ಬಹಳಷ್ಟು ಬರಹಗಳು ಮುಂಬಯಿಯ ಸುತ್ತ ಮುತ್ತ ಇವೆ. ಈ ಲೇಖನ ಓದಿದಾಕ್ಷಣ ಕಾಯ್ಕಿಣಿಯ ಬರಹಗಳ ನೆನಪು ಬಂತು.

ಶ್ರೀ ಹೇಳಿದಂತೆ ನಿನ್ನ ನೋಟವೇ ಚಂದ. ಎಲ್ಲವನ್ನು ಪ್ರೀತಿಯಿಂದ ಬರೆಯುವ ನಿನಗೆ ಶರಣು. :)

Anonymous said...

ಸಿಂಧು:
ತುಂಬ ಆಪ್ತವಾಗಿ, ತನ್ಮಯರಾಗಿ ಬರೀತಿರಿ. ಅಸೂಯೆಯಾಗತ್ತೆ.

Shree said...

:( ಏನಾದ್ರು ಮಾಡ್ಬೇಕು ಅಂತ ನಾವು ಅಂದ್ಕೊಳೋದು ಮಾತ್ರ, ಏನು ಮಾಡಲ್ಲ!

SuZ said...

ನಿನ್ನೆ ಮಂಗಳೂರಿನಿಂದ ವಾಪಸ್ ಬರುವಾಗ, ಕೆಂಪುಹೊಳೆ ಹತ್ತಿರ ಹೈಡಲ್ ಪವರ್ ಪ್ರಾಜೆಕ್ಟಿನ ಫಲಕ ನೊಡಿದ್ದೆ, ಈಗ ಇದನ್ನ ಓದಿದಾಗ, ನಮ್ಮ ಬೆಂಗ್ಳೂರ್ ಕೆರೆಗಳಿಗೆ ಹೋಲಿಸಿದರೆ ಮಲೆನಾಡು ಕೂಡ ಹಿಂದೆ ಇಲ್ಲ ಆನ್ನಿಸಿತು.

ಸಿಂಧು sindhu said...

ಶ್ರೀ,

ಅಲ್ಲಿಯವರು ಇಲ್ಲಿಯವರು ಅಂತ ಅನ್ನಿಸುವುದು ಕೆಲವು ಸಲ ಹೌದು. ಹಳ್ಳಿ ಅಥವಾ ಸಣ್ಣ ಊರಿನ naivity ತುಂಬ ಸಲ ಮಹಾನಗರದ ಚಾಲಾಕು ಜಾಣತನದ ಮುಂದೆ ಕಳೆದುಹೋಗಿರುತ್ತದೆ. ಅದು ಮನಸ್ಸನ್ನು ಮುದುಡಿಸುವುದು ಹೌದು. ಹಾಗಂತ ಅಷ್ಟೇ ಅಲ್ಲವಲ್ಲ. ನಮ್ಮ ಬದುಕನ್ನ ಕಟ್ಟಿ ಕೊಡುತ್ತಿರುವುದು ಇದೇ ಮಹಾನಗರವೇ ತಾನೆ? ಇದನ್ನ ಹಾಳು ಮಾಡಲಿಕ್ಕೆ ನಾವೂ ಒಬ್ಬ ಪಾಲುದಾರರೇ ಅಲ್ಲವೇ.. ಹಾಗೆನ್ನಿಸಿದ್ದಕ್ಕೆ ಬರೆದೆ. ನಿಮ್ಮ ಅಭಿಪ್ರಾಯಗಳಿಗೆ ತುಂಬ ಆಭಾರಿ. ವಸ್ತುನಿಷ್ಠತೆ ಯಾವ ಕಾಲಕ್ಕೂ ಇಷ್ಟ ನನಗೆ.

ನಿಧಿ..
ಸಧ್ಯ ಬಚಾವಾಗಿದ್ದು ಹೌದು. :)
ಪಂಡಿತರು ತಮ್ಮಂದಿರು ಎಲ್ಲ ಬಯ್ತವಲಾ ಮಾರಾಯ ಜಾಸ್ತಿ ಬರದ್ರೆ. ಈ ಸಲ ಕಟ್ಟೆ ಸಿಗದೇನೆ ಬ್ರೇಕ್ ಹಾಕಕ್ಕೆ ಬಂತಪಾ.. ಏನೋ ಫ್ಲೂಕ್ ಇದ್ದಿಕ್ಕು.. :D

ಶರತ್,
ನನಗೆ ಹೂಗಳನ್ನ ನೋಡಿದಾಗೆಲ್ಲ ಅನ್ನಿಸುವುದೇ ಹಾಗೆ. ಹಾಗೇ ಬಾನಿನೆತ್ತರಕ್ಕೆ ಮುಖವೆತ್ತಿ ನಿಂತಿರುವ ಮರಗಳೂ ಕೂಡ.

ಮನಸ್ವಿನಿ,
ಇಷ್ಟೆಲ್ಲ ದೊಡ್ಡ ಮಾತು ಬೇಡ. ಸಂಕೋಚವಾಗುತ್ತದೆ. ನಿನಗೂ ನನಗೂ ಅನ್ನಿಸುವುದನ್ನೆ ನಾನು ಅಕ್ಷರಕ್ಕಿಳಿಸಿದೆ ಅಷ್ಟೆ. ಹೌದು ಮುಂಬಯಿಯನ್ನ ನನ್ನ ಕಣ್ಣಿಗೂ ಮನಸ್ಸಿಗೂ ಇಳಿಸಿರುವುದು ಜಯಂತರ ಶಹರದ ಬರಹಗಳು.

ಚಕೋರ,
ಅಸೂಯೆಯಿಂದ ಅಸಿಡಿಟಿ ಜಾಸ್ತಿಯಾಗುತ್ತೆ. ದೂರದೇಶದಲ್ಲಿ ಒಬ್ಬರೇ ಇದ್ದೀರ ಸರ.. ಬ್ಯಾಡ್ರಿ..ಇಲ್ಲಿ ಬೆಂಗಳೂರಿಗೆ ಬಂದ ಮೇಲೆ ಹೊಟ್ಟೆಕಿಚ್ಚು ಎಕ್ಸ್ ಚೇಂಜ್ ಮಾಡೂಣು ಒಂದೊಂದು ಲೋಟ ಕಬ್ಬಿನ ಹಾಲಿನ ಜೊತೆ. ಏನೇ ಬರದ್ರೂ ನಿಮ್ ತಮಾಷ್ಗಿ ಬರಂಗಿಲ್ಲ ನೋಡ್ರಿ ನಂಗೆ..

ಶ್ರೀ..
ಅಂದ್ಕೊಳ್ಳೋದು ಮಾಡುವುದರ ಮುಂಚಿನ ಮೆಟ್ಟಲು ಅನ್ನತ್ತೆ ನನ್ನ ಆಶಾಭಾವ.
ಅದಕ್ಕೆ ನಿಲ್ಲಬಾರದಷ್ಟೇ.

ಸುಜಯ್,
ಓಹ್ ಕೆರೆಗಳ ನೆನಪಲ್ಲಿ ಖಿನ್ನವಾಗಿರುವ ಮನಕ್ಕೆ ಈ ಹೈಡೆಲ್ ಪ್ರಾಜೆಕ್ಟ್ ಮತ್ತು ಮಿನಿ ಪವರ್ ಪ್ರಾಜೆಕ್ಟ್ ಭೂತಗಳೆಂದರೆ ತಲೆಯೇ ಕೆಡುತ್ತೆ. ಯಾವ ಊರು ಇಂತಹ ವಿಷಯಗಳಲ್ಲಿ ಹಿಂದೆ ಬಿದ್ದಿದೆ. ಎಲ್ಲರೂ ಪ್ರಗತಿಯ ಬೆನ್ನಟ್ಟಿ ನಾಗಾಲೋಟ ಓಡುವವರೆ. ಭೂಮಿಯನ್ನ ಹಾಳುಗೆಡವುವರೆ.