ದೊಡ್ಡದಾದ ಭವಂತಿ ಇರುವ ನಡುಮನೆಯ ಜಗುಲಿಯಲ್ಲಿ ಪುಟ್ಟ ಪುಟ್ಟ ಗುಡ್ಡಗಳಂತಹ ಅಡಿಕೆ ರಾಶಿ, ಸುತ್ತ ಗುಡ್ಡಗಳನ್ನ ಹರಡಿ ಕೂತು ತನ್ನ ಸೃಷ್ಟಿಯನ್ನ ತಾನೇ ಪರಿಶೀಲಿಸುವ ಶಿಲ್ಪಿಯಂತೆ ಕುಳಿತಿರುವ ಅಜ್ಜ..ಪುಟ್ಟಿ ಓಡೋಡಿ ಬಂದಳು ಶಾಲೆಯಿಂದ. ಇವತ್ತು ಏಪ್ರಿಲ್ ಹತ್ತು. ಇನ್ಮೇಲೆ ಎರಡು ತಿಂಗಳು ಶಾಲೆಗೆ ಬೇಸಿಗೆ ರಜ; ಯುನಿಫಾರ್ಮ್ ಬಿಸಾಕಿ, ಪಾಟಿ ಚೀಲ ಅಮ್ಮಮ್ಮನ ಮರಿಗೆಯ ಪಕ್ಕದ ಸಂದಿಯಲ್ಲೆಸೆದು, ಅವಳಿಗಿಷ್ಟವಾದ ನೇರಳೆ ಬಣ್ಣದ ಫ್ರಾಕಿನ, ಚಿಟ್ಟೆ ಚಿತ್ರದ ಬಿಳಿ ಜೇಬಿನಲ್ಲಿ ಕಿರುನೆಲ್ಲಿಕಾಯಿ ತುಂಬಿಟ್ಟುಕೊಂಡು, ಅಡಿಕೆ ಗುಡ್ಡಗಳ ಬದಿಯಲ್ಲಿ ದಾರಿ ಮಾಡಿಕೊಂಡು, ಅಜ್ಜನ ಪಕ್ಕದಲ್ಲಿ ಜಾಗ ಮಾಡಿಕೊಳ್ಳುತ್ತ ಕೂರಲಿಕ್ಕಿಲ್ಲ..ಅಮ್ಮಮ್ಮನಿಗೆ ಸಿಟ್ಟು - ಸುಮ್ನೆ ಏಳಲ್ಲಿಂದ, ಆರಿಸಿಟ್ಟ ಅಡಿಕೇನೆಲ್ಲ ಸೇರಿಸ್ ಬಿಡ್ತೆ, ಆ ಕಡೆ ಮೆತ್ತಿನ್ ಮೇಲೆ ಬೇರೆ ಆಟ ಆಡು ಹೋಗು..- ಪುಟ್ಟಿ ತುಂಬ ಒಳ್ಳೆಯವಳಂತೆ ಮುಖ ಮಾಡಿಕೊಂಡು ಅಜ್ಜನ ಹತ್ರ - ಇಲ್ಲಜ್ಜಾ ನಂಗೊತ್ತಿದ್ದು ಯಾವ್ದು ಯಾವಡಕೆ ಅಂತ - ಬಿಳೆಗೋಟು, ಚಾಲಿ, ಆಪಿ, ಹುಳುಕ ಅಲ್ದಾ.. ನಾನೂ ಆರಿಸ್ತಿ ಪ್ಲೀಸ್..ಅಜ್ಜ ಯಾವಾಗಲೂ ಅಭಯದಾತ. ಎಷ್ಟು ಸಿಟ್ಟು ಮಾಡಿಕೊಳ್ಳೋಣ ಅಂದರೂ ಪುಟ್ಟಿಯ ಮುಖ ನೋಡಿದ ಕೂಡಲೆ ನಗು ಬಂದು ಸಡಿಲಾಗುವ ಮುಖ ಬಿಗುಗೊಳ್ಳುವುದೇ ಇಲ್ಲ. ಸರಿ ಬಾ, ನೀನು ಬಿಳೆ ಗೋಟು ಮಾತ್ರ ಆರಿಸಿ ಇಕಾ ಈ ರಾಶಿಗೆ ಸೇರಿಸು.. ಬೇರೆ ಅಡಿಕೆ ಎಲ್ಲ ನಾನೇ ಆರಿಸ್ತಿ.
ಆರಿಸುತ್ತಾ ಕೂತ ಹಾಗೆ ಅಲ್ಲೊಂದಿಷ್ಟು ಹಾತೆಗಳು ಹಾರಾಡುತ್ತಿವೆ. ನೋಡುವಷ್ಟೂ ನೋಡಿ, ಅದಾಗಲೇ ಆರಿಸಿ ಬೇಜಾರು ಬಂದಿದ್ದ ಪುಟ್ಟಿ ಅಜ್ಜನ ಕಡೆ ನೋಡಿದಳು. ಅವನು ಸೀರಿಯಸ್ಸಾಗಿ ಅಡಿಕೆ ಆರಿಸುತ್ತಿದ್ದಾನೆ. ಹಗೂರ ತಿರುಗಿಕೊಂಡು ಒಂದು ಹಾತೆಯನ್ನು ಪಟಾರನೆ ಸೊಳ್ಳೆ ಹೊಡೆಯುವ ಹಾಗೆ ಹೊಡೆದರೆ ಹೋ.. ಅದು ಪಡ್ಚ.. ವಾವ್, ಇದು ಸೊಳ್ಳೆಯಷ್ಟು ಚಾಲಾಕಲ್ಲ ಆರಾಮಾಗಿ ಹೊಡೀಬಹುದು. ಇನ್ನೊಂದೆರಡು ಹೊಡೆದೇಬಿಡುವಷ್ಟರಲ್ಲಿ, ತಲೆ ತಗ್ಗಿಸಿಕೊಂಡು ಅಡಿಕೆ ಆರಿಸುತ್ತಿದ್ದ ಅಜ್ಜ ಕೇಳಿಬಿಟ್ಟ.. ಎಂತ ಮಾಡ್ತಾ ಇದ್ದೆ? ಅಜ್ಜಾ ಸೊಳ್ಳೆ ಹೊಡೀತಾ ಇದ್ದಿ.. ನಿಂಗೆ ಕಚ್ಚಬಾರ್ದು ಅದು ಅಂತ.. ನಮ್ ಪುಟ್ಟಿ ಸಿಕ್ಕಾಪಟ್ಟೆ ಜಾಣೆ. ಆದ್ರೇನು ಮಾಡ್ತೀರಿ ಅವನು ಪುಟ್ಟಿಯ ಅಜ್ಜ, ಇನ್ನೂ ಜಾಣ.. - ಇಷ್ಟು ಮಧ್ಯಾಹ್ನದಾಗೆ ಸೊಳ್ಳೆ ಎಲ್ಲಿಂದ ಬರ್ತು? ಅದು ಹಾತೆ.. ಹಂಗೆಲ್ಲಾ ಹಾತೆ ನೊಣ ಎಲ್ಲ ಹೊಡೀಲಾಗ. ಇರುವೆನೋ ಸೊಳ್ಳೆನೋ ನಮಗೆ ಕಚ್ಚಿ ತೊಂದರೆ ಕೊಟ್ಟರೆ ಮಾತ್ರ ಹೊಡೆಯಬೇಕೆ ವಿನಃ ಸುಮ್ ಸುಮ್ನೆ ಹೊಡದ್ರೆ ಅಣಿಮಾಂಡವ್ಯ ಋಷಿಯ ಕತೆ ಇತ್ತಲಾ ಹಂಗೇ ಆಗ್ತು ನಿಂಗೂ..
ಅಣಿಮಾಂಡವ್ಯ!!! - ಈಗ ಪುಟ್ಟಿ ಗಾಳಕ್ಕೆ ಸಿಕ್ಕ ಮೀನು.. ಅಜ್ಜನ ಕತೆಯ ಗಾಳ ಎಂತ ಪವರ್ ಫುಲ್ ಗೊತ್ತಾ- ಅಜ್ಜಾ ಅದ್ಯಾವ ಕತೆ ನಂಗೆ ಗೊತ್ತೇ ಇಲ್ಯಲ್ಲಾ.. ಅಜ್ಜನ ಮುಖದಲ್ಲಿ ಕಂಡೂ ಕಾಣದ ನಗು, ಸರಿ ಹೇಳ್ತಿ ಮತ್ತೆ ನೀನು ಸುಮ್ಮನೆ ಹಾತೆ ಹೊಡೀದೆ ಕೂರಕ್ಕು ಅಷ್ಟೇ.ಹೋ ಅದ್ಯಾವ ಮಹಾ ಕೆಲಸ.. ಹೇಳ ಹೇಳುತ್ತಲೇ ಅವಳ ಕೈ ಅಲ್ಲೇ ಹಾರುತ್ತಿದ್ದ ಹಾತೆಯತ್ತ ಹೋಯಿತು.. ನೋಡಿದ್ಯಾ ನೋಡಿದ್ಯಾ ಇದೇ ಬ್ಯಾಡ ಅಂತ ಹೇಳಿದ್ದು..ಸರಿ ಸರಿ ನಾನು ಕೈ ಕಟ್ಟಿ ಕೂರ್ತೀನಿ ನೀನ್ ಕತೆ ಹೇಳು -
ಒಂದು ಕಾನಿನಲ್ಲಿ ಅಣಿ ಮಾಂಡವ್ಯ ಅಂತೊಬ್ಬ ಋಷಿ ಇದ್ದ. ತುಂಬ ಒಳ್ಳೆಯ ಋಷಿ. ಗೆಡ್ಡೆ ಗೆಣಸು ತಿಂದುಕೊಂಡು, ದೇವರ ಪೂಜೆ, ತಪಸ್ಸು ಮಾಡಿಕೊಂಡು ತನ್ನ ಪಾಡಿಗೆ ತಾನಿರುತ್ತಿದ್ದ. ಒಂದು ಇರುವೆಯನ್ನೂ ಕೊಲ್ಲುತ್ತಿರಲಿಲ್ಲ. ಅಂತಹಾ ಋಷಿ ಒಂದು ದಿನ ಸತ್ತು ಹೋದ. ಅಷ್ಟು ಒಳ್ಳೆಯವನು ತಾನು ಇನ್ನು ಸ್ವರ್ಗಕ್ಕೇ ಹೋಗುವುದು, ದೇವರ ಜೊತೆ ಆನಂದದಿಂದ ಇರಬಹುದು ಅಂದುಕೊಂಡಿದ್ದ. ನೋಡಿದರೆ ನರಕಕ್ಕೆ ಬಂದು ಬಿಟ್ಟಿದ್ದಾನೆ. ಏನು ಎತ್ತ ಅಂತ ಅವನು ಕೇಳುವುದಕ್ಕೆ ಮೊದಲೇ ಯಮದೂತರು ಅವನನ್ನ ಎತ್ತಿಕೊಂಡು ಹೋಗಿ ಕುದಿಯುತ್ತಿರುವ ಎಣ್ಣೆ ಕೊಪ್ಪರಿಗೆಯೊಳಗೆ ಅದ್ದಿ ತೆಗೆದರು..ಪುಟ್ಟಿಯ ಬಾಯಿ ಭಯದಿಂದ ತೆರೆದುಕೊಂಡುಬಿಟ್ಟಿದೆ. ಕಟ್ಟಿಕೊಂಡಿದ್ದ ಕೈ ಯಾವಾಗಲೋ ಬಿಚ್ಚಿಹೋಗಿ, ನೆಲಕ್ಕೆ ಊರಿಕೊಂಡು ಅಜ್ಜನ ಕತೆಯನ್ನ ಮೈಯಿಡೀ ಕಿವಿಯಾಗಿಸಿ ಕೇಳುತ್ತಿದ್ದಾಳೆ.
ಅಯ್ಯಯ್ಯೋ ಅಮ್ಮಾ ಅಂತ ಕೂಗಿಕೊಂಡ ಅಣಿಮಾಂಡವ್ಯ ಋಷಿ. ಅಷ್ಟರಲ್ಲಿ ಅಲ್ಲಿಗೆ ಬಂದ ಚಿತ್ರಗುಪ್ತ ಅಣಿಮಾಂಡವ್ಯನ ಲೆಕ್ಕದ ಪುಸ್ತಕ ನೋಡಿ, ಈಗ ಇವನನ್ನ ತಲೆಕೆಳಗಾಗಿ ನೇತು ಹಾಕಿ, ಕೆಳಗಡೆ ಬೆಂಕಿ ಹಾಕಿ ಅಂತ ಹೇಳಿದ.ಯಮದೂತರಿಗೇ ಅಷ್ಟೆ ಸಾಕು. ಚಿತ್ರಗುಪ್ತ ಹೇಳಿದ ಹಾಗೆ ಮಾಡುವುದೇ ಕೆಲಸ. ಅವರು ಬಂದವರು ಯಾರು ಏನು ಅಂತೆಲ್ಲ ನೋಡುವುದಿಲ್ಲ. ಯಾರ ಜೊತೆಯೂ ಮಾತಾಡುವುದಿಲ್ಲ. ಅವರಿಗೆ ನೆಹರೂನೂ ಒಂದೇ ಅಣಿಮಾಂಡವ್ಯ ಋಷಿಯೂ ಒಂದೇ.
ನಾನೂ ಅಷ್ಟೇನಾ ಅಜ್ಜಾ.. ಮಕ್ಕಳಿಗೂ ಹಾಗೇನಾ..ಛೇ ಛೇ ಮಕ್ಕಳೆಲ್ಲಿ ನರಕಕ್ಕೆ ಹೋಗ್ತಾರೆ. ಇದೆಲ್ಲ ದೊಡ್ಡವರಿಗೆ ಮಾತ್ರ. ಮುಂದೆ ಕೇಳು..
ಅವರು ಅವನನ್ನ ತಲೆ ಕೆಳಗೆ ಮಾಡಿ ನೇತುಹಾಕಿದರು. ಕೆಳಗೆ ದೊಡ್ಡ ಉರಿಯ ಬೆಂಕಿ ಮಾಡಿದರು. ಉರಿ ಹೆಚ್ಚೂ ಕಮ್ಮಿ ಅವನ ಎತ್ತಿಕಟ್ಟಿದ ಜಟೆಯವರೆಗೂ ಬರುತ್ತಿದೆ. ಉರಿ ಸೆಕೆ ತಾಳಲಾಗುತ್ತಿಲ್ಲ. ಇನ್ನೇನು ಎಚ್ಚರ ತಪ್ಪಬೇಕು ಅಷ್ಟರಲ್ಲಿ ಚಿತ್ರಗುಪ್ತ ಬಂದು, ಈಗ ಒಂದು ಸರಳನ್ನು ಕೆಂಪಗೆ ಕಾಯಿಸಿ, ಅವನ ಕುಂಡಿಗೆ ಚುಚ್ಚಿ ಅನ್ನಬೇಕೇ..! ಇದನ್ನು ಕೇಳಿದ ಅಣಿಮಾಂಡವ್ಯ ದೇವರೇ ನನ್ನನ್ನು ಹೇಗಾದರೂ ಕಾಪಾಡು, ಯಾವ ಪಾಪವನ್ನೂ ಮಾಡದ ನನಗ್ಯಾಕೆ ಈ ಶಿಕ್ಷೆ ಅಂತ ಕೇಳಿಕೊಂಡ.. ಅಷ್ಟರಲ್ಲಿ ಯಮಧರ್ಮರಾಯ ಅಲ್ಲಿಗೆ ಬಂದ. ಬಂದವನು ಎಲ್ಲ ಪಾಪಿಗಳೂ ಅನುಭವಿಸುತ್ತಿದ್ದ ಶಿಕ್ಷೆಯನ್ನೆಲ್ಲಾ ಹೀಗೇ ಒಂದು ಸಾರಿ ಕಣ್ಣಾಡಿಸಿ ನೋಡಿ ಇನ್ನೇನು ಹೊರಡಬೇಕು, ಆಗ ಅವನ ಕಣ್ಣಿಗೆ ಅಣಿಮಾಂಡವ್ಯ ಋಷಿಯು ಬಿದ್ದ. ಅರೇ ಇದೇನು ಇವರಿಲ್ಲಿ ಅಂದುಕೊಂಡು ಹತ್ತಿರ ಹೋಗಿ ಗಮನಿಸಿ ನೋಡಿದರೆ ಹೌದು, ಋಷಿವರ್ಯರೇ..
ಚಿತ್ರಗುಪ್ತಾ ಅಂತ ಕೂಗಿ ಕರೆದರೆ ಅವನು ಓಡೋಡುತ್ತ ಬಂದ. ಇದೇನು ಇವರಿಲ್ಲಿ ಅಂತ ಕೇಳಿದಾಗ ಚಿತ್ರಗುಪ್ತನು ಪಾಪದ ಲೆಕ್ಕದ ಪುಸ್ತಕ ತೆಗೆದು ನೋಡಿದ. ಹೌದು ದೇವಾ ಇವರು ಸಣ್ಣಕಿದ್ದಾಗ ಒಂದು ಭಯಾನಕ ಪಾಪ ಮಾಡಿದ್ದರು. ಇವರ ತಂದೆ ಯಾಗ, ನೇಮಗಳಲ್ಲಿ ನಿರತರಾಗಿದ್ದರೆ, ಇವರು ಮಾತ್ರ ಸುತ್ತ ಮುತ್ತ ಸುಳಿದಾಡುವ ನೊಣಗಳನ್ನು ಹಿಡಿದು, ಅವುಗಳ ಕುಂಡಿಗೆ ದರ್ಭೆ ಚುಚ್ಚಿ ಆಟವಾಡುತ್ತಿದ್ದರು,ಅಂತಹ ಪಾಪಕ್ಕೆ ಇದೇ ಶಿಕ್ಷೆ. ಅದಕ್ಕೇ ಅವರು ಆಮೇಲೆ ಯಾವ ಪಾಪವನ್ನೂ ಮಾಡದೆ ತುಂಬ ಒಳ್ಳೆಯವರಾಗಿ ಬದುಕು ನಡೆಸಿದರೂ ನರಕಕ್ಕೆ ಬಂದಿರುವುದು -ವಿವರಣೆ ನೀಡಿದ. ಯಮನಿಗೆ ಎಲ್ಲೋ ಏನೋ ತಪ್ಪಾಗಿದೆ ಅನಿಸಿತು. ಅಷ್ಟೊತ್ತಿಗೆ ಅಣಿಮಾಂಡವ್ಯ ಋಷಿಯೂ ಸಹ ಯಮದೇವಾ, ನಾನು ಮಾಡಿದ ಆ ತಪ್ಪು ಎಷ್ಟನೇ ವರ್ಷದಲ್ಲಿ ನಡೆದಿದ್ದು ಅಂತ ಕೇಳಿದ. ಚಿತ್ರಗುಪ್ತ ಪುಸ್ತಕ ನೋಡಿ ಸುಮಾರು ನಾಲ್ಕರಿಂದ ನಾಲ್ಕೂವರೆ ವರ್ಷ ಪ್ರಾಯ ನಿಮಗಾಗ ಅಂತ ಹೇಳಿದ. ಅದಾದ ಮೇಲೆ ಇನ್ನೇನು ಪಾಪವನ್ನು ಮಾಡಿದ್ದೇನೆ ಅಂತ ಋಷಿ ಮತ್ತೆ ಕೇಳಿದ. ಇನ್ಯಾವುದೂ ಪಾಪವೇ ಇಲ್ಲ. ಭೂಮಿಯಲ್ಲಿ ನಾಲ್ಕು ಸಂವತ್ಸರ ಮಳೆ ಬೆಳೆ ಚೆನ್ನಾಗಿ ಆಗುವಷ್ಟು ಪುಣ್ಯವಿದೆ ನಿಮ್ಮ ಆಯುಸ್ಸಿನಲ್ಲಿ ಅಂತ ಹೇಳಿದ. ಇದನ್ನು ಕೇಳಿ ಋಷಿಗೆ ತುಂಬ ದುಃಖವಾಯಿತು. ಅವನು ಯಮನಿಗೆ ಹೇಳಿದ, ದೇವಾ, ತಪ್ಪು ಮಾಡಿದ್ದಕ್ಕೆ ತಕ್ಕ ಶಿಕ್ಷೆ ವಿಧಿಸಲೇ ಬೇಕು. ಆದರೆ ಏನೂ ತಿಳಿಯದ ಬಾಲ್ಯಕಾಲದಲ್ಲಿ ಮಾಡಿದ ಒಂದು ತಪ್ಪಿಗೆ ಜೀವನ ಪೂರ್ತಿ ಮಾಡಿದ ಒಳ್ಳೆಯ ಕೆಲಸಗಳೂ, ಪುಣ್ಯಗಳಿಕೆಯನ್ನೆಲ್ಲಾ ಬದಿಗಿಟ್ಟು ಹೀಗೆ ಶಿಕ್ಷೆ ಕೊಟ್ಟರೆ ಪ್ರಪಂಚದಲ್ಲಿ ಅರಾಜಕತೆ ಹೆಚ್ಚಾಗುತ್ತದೆ. ಆಮೇಲೇ ಎಲ್ಲರೂ ಒಂದ್ಸಲ ತಪ್ಪು ಮಾಡಿದವರೆಲ್ಲ ಹೇಗಿದ್ರೂ ಶಿಕ್ಷೆ ಆಗೇ ಆಗತ್ತೆ ಅಂತ ಮತ್ತೆ ಮತ್ತೆ ತಪ್ಪು, ಪಾಪ, ಅನ್ಯಾಯಗಳನ್ನ ಮಾಡುತ್ತಲೇ ಹೋಗುತ್ತಾರೆ, ಇದಕ್ಕೆ ಒಂದು ಪರಿಹಾರವಿರಬೇಕು. ಅಂತ ಹೇಳಿದ.
ಯಮನಿಗೆ ಹೌದು ಇದು ಸರಿ ಅನ್ನಿಸಿತು. ಕೂಡಲೇ ಯಮದೂತರಿಗೆ ಋಷಿಯನ್ನು ಇಳಿಸಿ, ಸೂಕ್ತ ಉಪಚಾರ ಮಾಡಲು ಹೇಳಿದನು. ಋಷಿಯು ಸ್ವಲ್ಪ ಚೇತರಿಸಿಕೊಂಡ ಮೇಲೆ, ತನ್ನ ಸಭೆಗೆ ಕರೆಸಿ, ನಡೆದ ಅಚಾತುರ್ಯಕ್ಕೆ ಕ್ಷಮೆ ಕೇಳಿ, ಈ ತೊಂದರೆಗಾಗಿ ಏನು ಬೇಕಾದರೂ ವರ ಕೇಳಲು ಹೇಳಿದನು. ಅದಕ್ಕೆ ಋಷಿಯು, ಆರು ವರ್ಷದ ಒಳಗಿನ ಮಕ್ಕಳು ತಪ್ಪು ಮಾಡಿದರೆ ಅದನ್ನು ಪಾಪವೆಂದು ಚಿತ್ರಗುಪ್ತರು ಬರೆದುಕೊಳ್ಳಬಾರದಾಗಿಯೂ ಮತ್ತು ಯಾವ ಮನುಷ್ಯನೂ ಮೊದಲ ಬಾರಿ ತಿಳಿಯದೆ ತಪ್ಪು ಮಾಡಿದರೆ ಅದನ್ನು ಕ್ಷಮಿಸಬೇಕೆಂದೂ ಕೇಳಿಕೊಂಡನು.ಯಮನೂ ಸಂತುಷ್ಟಗೊಂಡು ಒಪ್ಪಿಕೊಂಡನು. ಆದರೆ ಮಾಡುತ್ತಿರುವುದು ತಪ್ಪೆಂದು ತಿಳಿದ ಮೇಲೂ ಅದನ್ನೇ ಮಾಡಲು ಹೊರಟರೆ ಅದು ಮಹಾಪಾಪವೆಂದೂ, ಅಂತಹ ಪಾಪಕ್ಕೆ ನರಕದಲ್ಲಿ ಕಠಿಣ ಶಿಕ್ಷೆ ಕಾದಿದೆಯೆಂದೂ ಎಚ್ಚರಿಸಲು ಮರೆಯಲಿಲ್ಲ. ನಂತರ ದೇವದೂತರನ್ನು ಕರೆಸಿ, ಋಷಿಯನ್ನು ದೇವಲೋಕಕ್ಕೆ ಕಳಿಸಿಕೊಟ್ಟನು.
ಅದಕ್ಕೇ ಹೇಳುವುದು, ಸುಮ್ಮಸುಮ್ಮನೆ ಯಾವ ಪ್ರಾಣಿ,ಪಕ್ಷಿ,ಕ್ರಿಮಿ, ಕೀಟಗಳನ್ನೆಲ್ಲ ಹಿಂಸಿಸಬಾರದು ಎಂದು.ಅಷ್ಟರಲ್ಲೇ ಪುಟ್ಟಿಗೆ ಭಯ ಹತ್ತಿಕೊಂಡುಬಿಟ್ಟಿತು. ಹಾಗಾದ್ರೆ ಈಗ ನಾನು ಹಾತೆಯನ್ನೆಲ್ಲ ಪಟ್ ಅಂತ ಹೊಡೆದುಕೊಂದೆನಲ್ಲಾ ಅದಕ್ಕೆ ನನಗೆ ಆಮೇಲೆ ಶಿಕ್ಷೆಯಾಗುತ್ತಾ.. ಅಜ್ಜನನ್ನು ಪೀಡಿಸಿತೊಡಗಿದಳು. ಇಲ್ಲ ಮಾರಾಯಿತಿ, ಇಲ್ಲ. ನೀನಿನ್ನೂ ತುಂಬ ಚಿಕ್ಕವಳು. ಅಲ್ಲದೆ ನಾನು ಹಾತೆಯನ್ನು ಹೊಡೆಯಬಾರದು ಅಂತ ಹೇಳಿದ ಮೇಲೆ ನೀನು ಹಾತೆಗಳ ತಂಟೆಗೇ ಹೋಗಿಲ್ಲ. ತಿಳಿದೂ ತಿಳಿದೂ ತಪ್ಪು ಮಾಡುವವರಿಗೆ ಮಾತ್ರ ಹೀಗೆಲ್ಲ ಶಿಕ್ಷೆಯಾಗುತ್ತದೆ ಅಂತ ಹೇಳುತ್ತಿದ್ದಾನೆ ಅಜ್ಜ..
ತಾನ್ ತನನನಾ... ಇದ್ದಕ್ಕಿದ್ದಂಗೆ ಟೀವಿ ವಾಲ್ಯೂಮ್ ಜಾಸ್ತಿಯಾಗಿ ಕುರ್ಚಿಯಲ್ಲಿ ಕೂತ ಹಾಗೇ ಮಂಪರಿಗೆ ಜಾರಿದ್ದ ನನಗೆ ಎಚ್ಚರವಾಯಿತು. ಅಜ್ಜನ ಕತೆಯ ಕನಸು ಫ್ರೇಮ್ ಬೈ ಫ್ರೇಮ್ ನೆನಪಿತ್ತು. ಅರೇ ಈ ಕನಸು ಈಗ್ಯಾಕೆ ಬಿತ್ತು ಅಂತ ಯೋಚನೆ ಮಾಡುವಷ್ಟರಲ್ಲಿ ಜಾಹೀರಾತು ಮುಗಿದು ಮತ್ತೆ ವಾರ್ತೆ ಶುರುವಾಯಿತು. ವಾರ್ತೆಯ ತುಂಬಾ ಗಾಂಧಿಗಿರಿಯ ಸಂಜಯ್ ದತ್ತನ ಶಿಕ್ಷೆ/ಕೋರ್ಟು/ಜೈಲುವಾಸದ ಸುದ್ದಿ.. ಹಾಗೇ ಬಿಚ್ಚು ಹೀರೋ ಸಲ್ಮಾನನ ಪೋಚಿಂಗ್ ಕೇಸಿನ ವಿಶ್ಲೇಷಣೆ... ಇವರಿಗ್ಯಾರಿಗೂ ಹೀಗೆ ಕತೆ ಹೇಳುವ ಅಜ್ಜನೇ ಇರಲಿಲ್ಲವೇ ಅಂತನ್ನಿಸತೊಡಗಿತು... ಜಡ್ಜ್ ಸಾಹೇಬರ ಕರುಣೆಯನ್ನು ಗಳಿಸಲು ಇತ್ತೀಚೆಗೆ ಮಾಡಿದ ಸೇವೆ, ಒಳ್ಳೆಯ ಕೆಲಸ, ಅಮ್ಮನ ಮದರ್ ಇಂಡಿಯಾ ಇಮೇಜು, ಗಾಂಧೀಜಿಯ ಹೆಸರು ಎಲ್ಲ ಬಳಸುವ ಜಾಣ್ಮೆ ಮನಸ್ಸಿಗೆ ಕಷ್ಟ ಕೊಡುತ್ತಿದೆ.
ಚಿತ್ರಗುಪ್ತನೆಲ್ಲಿದ್ದಾನೆ? ಅವನ್ಯಾಕೆ ಬಂದು ಈ ಮಂದಿಯನ್ನ, ಇಂತಹ ಆಮಿಷಗಳಿಗೆ ಬಲಿಯಾಗುವ ನ್ಯಾಯಾಧೀಶರನ್ನ ಲೆಕ್ಕದ ಪುಸ್ತಕ ತೋರಿಸಿ ಎಚ್ಚರಿಸುವುದಿಲ್ಲ? ಸಿನಿಮಾ ಮಂದಿ ಹೋಗಲಿ, ನಮ್ಮ ಮಕ್ಕಳೇ ವೈಭವೀಕರಿಸಿದ ಆಕ್ಷನ್ ಸಿನಿಮಾಗಳು, ಕ್ರೈಂ ಸ್ಟೋರಿ ನೋಡಿ ನೋಡಿ ಯಾವ ನರಕದ ಕತೆಯೂ ಭಯ ಹುಟ್ಟಿಸುವುದಿಲ್ಲ. ಹೇಗಾದರೂ ಮಾಡಿ, ಋಷಿ ಮುನಿಗಳನ್ನ, ಮುಲ್ಲಾ ನಸರುದ್ದೀನನನ್ನ, ಶಹಜಾದೆಯನ್ನ, ಬೀರಬಲ್ಲನನ್ನ, ವಿಷ್ಣುಶರ್ಮನನ್ನ,ಮಾರ್ಕ್ ಟ್ವೈನ್ ನನ್ನ ನಮ್ಮ ಮಕ್ಕಳಿಗೆ ಗೊತ್ತು ಮಾಡಿಕೊಡಬೇಕಲ್ಲಾ, ಇದರ ಹೊರತಾಗಿ ಇನ್ಯಾವ ಅವೇರ್ ನೆಸ್ ಕ್ಯಾಂಪೈನ್ ಬೇಕು?!
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
-
“ಅಸ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ| ಪೂರ್ವಾಪರೌ ತೋಯನಿಧೀ
ವಗಾಹ್ಯ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ”
ಕವಿಗುರು ಕಾಳಿದಾಸನು ತನ್ನ ‘ಕುಮಾರಸಂಭವ’ ಕಾವ್ಯ...
27 comments:
ಸಿಂಧಕ್ಕ,
ಇನ್ಯಾವ ಅವೇರ್ ನೆಸ್ ಕ್ಯಾಂಪೈನ್ ಬೇಕು ಎಂದು ಕೇಳುತ್ತಲೇ ಒಂದು awareness create ಮಾಡಿದ್ದಕ್ಕೆ thanx.
ನಂಗೆ ಅಣಿಮಾಂಡವ್ಯನ ಕಥೆ ಅವನಿಗೆ ಶಿಕ್ಷೆ ಆಗುವವರೆಗೆ ಮಾತ್ರ ಗೊತ್ತಿತ್ತು ಆನಂತರದ್ದು ೬ ವರ್ಷದವರೆಗಿನ ಮಕ್ಕಳಿಗೆ ರಿಯಾಯತಿ ಕೊಟ್ಟದ್ದು ಎಲ್ಲಾ ಗೊತ್ತಿರಲಿಲ್ಲ. ಕಥೆಯನ್ನೂ ಪೂರ್ತಿ ತಿಳಿದುಕೊಂಡ ಹಾಗಾಯಿತು. ಮತ್ತೊಂದು thankkx.
ನಂದೂ ಥ್ಯಾಂಕ್ಸ್ ಚಿಂದಕ್ಕಾ.. ನನ್ ರೂಂಮೇಟಿಗೂ ಹೇಳ್ತಿ, ಅಂವ ಸಿಕ್ಕಾಪಟ್ಟೇ ಜಿರ್ಲೆ ಹೊಡಿತ. ;D
kathe, niroopaNe sogasaagide Sindhu,
oLLeya barahakke dhanyavda.
preetiyinda,
Chetana
ಕತೆ ಹೇಳಿದ ರೀತಿ, ಅದರ ಹಿಂದಿನ ನೀತಿ, ಎರಡೂ ಚೆನ್ನಾಗಿವೆ.
ಅಣಿಮಾಂಡವ್ಯನ ಕಥೆ ಗೊತ್ತಿರಲಿಲ್ಲ, ನಿಮ್ಮಜ್ಜನಂತಹ ಅಜ್ಜ/ಅಜ್ಜಿ ನನಗಿರಲಿಲ್ಲ. ನನ್ನ ಮಗನ ಅಜ್ಜ/ಅಜ್ಜಿಯರಿಗೂ ಇದು ಗೊತ್ತಿರಲಿಕ್ಕಿಲ್ಲ, ಅವರು ಅವನನ್ನು ಕೂರಿಸಿ ಕತೆ ಹೇಳಿದ್ದು ನಾನು ಕೇಳಿಲ್ಲ. ಇಂಥ ಕತೆ-ಖಜಾನೆ ತೆರೆದಿಡಿ. ನನ್ನ ಮೊಮ್ಮಕ್ಕಳಿಗಾದರೂ ಆದೀತು.
ಧನ್ಯವಾದಗಳು.
ನಿನ್ನ "ವಿಚಾರ್ಸಿದ್ದು" ಸಾರ್ಥಕಾತು ನೋಡು. :)
ಅಣಿಮಾಂಡವ್ಯ, ಉಪಮನ್ಯು, ನಚಿಕೇತ .. ಹೀಂಗೇ ಎಷ್ಟೋ ಕಥೆಗಳ್ನ ಈಗಿನ ಹುಡ್ರು ಮಿಸ್ ಮಾಡ್ಕ್ಯತಾ ಇದ್ದ.
ನಾನು ಒಂದರಿಂದ ನಾಲ್ಕನೇ ತರಗತಿಗೆ ದಿನಾ ಬೆಳ್ಗೆ ನಡ್ಕೊಂಡು ಹೋಗಬೇಕಿತ್ತು ಶಾಲೆಗೆ. ಸುಮಾರು ೩ ಕಿಲೋಮೀಟರು. ಅಪ್ಪನೂ ಜೊತೆಗೆ ಬರುತ್ತಿದ್ದರು. ಅಪ್ಪ ಆ ನಾಲ್ಕೂ ವರ್ಷ - ರಾಮಾಯಣ, ಮಹಾಭಾರತ, ಭಾಗವತ, ಪುರಾಣಗಳ ಕಥೆ ಹೇಳಿದ್ದರು ನನಗೆ.
ಈಗಿನ ಮಕ್ಕಳಿಗೆ ನಡೆಯುವ ಸುಖವೂ ಇಲ್ಲ. ಅಪ್ಪ ಅಮ್ಮನಿಗೆ ಕಥೆ ಹೇಳುವ ಸಮಯವೂ ಇಲ್ಲ. ಛೆ.
ಅಣಿಮಾಂಡವ್ಯನ ಕತೆ ಚೆನ್ನಾಗಿ ಹೇಳಿದ್ದೀರಿ. ನೀವು ಕೊನೆಯಲ್ಲಿ ವಿಷ್ಣುಶರ್ಮನನ್ನು ಮಕ್ಕಳಿಗೆ ಗೊತ್ತುಮಾಡಿಕೊಡಬೇಕು ಎಂದಾಗ ನನ್ನ ಗೆಳೆಯನೊಬ್ಬ ಹೇಳಿದ್ದು ನೆನಪಾಯಿತು: ಪಂಚತಂತ್ರದ ಕತೆಗಳು ಅದ್ಭುತವಾಗಿದ್ದರೂ ತೀರ ಸಣ್ಣ ಮಕ್ಕಳಿಗೆ ಅವನ್ನು ಓದಲು ಕೊಡಬಾರದು, ಎಂದು ಅವನ ಅಭಿಪ್ರಾಯ. ಏಕೆಂದರೆ ಕತೆಗಳಲ್ಲಿ ತುಂಬ ಕುಟಿಲತೆ, ದ್ರೋಹ, ಚಾಲಾಕು ಇದೆ ಅಂತ ಹೇಳುತ್ತಾನೆ. ನಾವೆಲ್ಲ ಆ ಕತೆಗಳನ್ನು ಸಣ್ಣವರಿದ್ದಾಗಲೆ ಓದಿದ್ದೆವಲ್ಲ, ನಮ್ಮ ಮೇಲೇಕೆ ಅವು ಆ ರೀತಿ ಪ್ರಭಾವ ಬೀರಿಲ್ಲ, ಎಂದು ಯೋಚನೆ ಮಾಡುತ್ತೇನೆ. ಆದರೆ ಈಗಿನ ಕೆಲವು ಸಂಗತಿಗಳನ್ನು ಗಮನಿಸಿದರೆ ನೋಡಿದರೆ ಅವನ ಮಾತನ್ನು ಪೂರ್ತಿಯಾಗಿ ತಿರಸ್ಕರಿಸಲೂ ಧೈರ್ಯವಿಲ್ಲ.
simply superb nange nan appa ee kathe helidru matte nam oorallu adake jasti and nama manilu idella madthare adekke ooru thumba nenapagthide ........
latha
kathe tumba chennagide...
ವಿಕಾಸ,
ಇಷ್ಟೊಂದು ಥ್ಯಾಂಕ್ಸ್! ನರಕಕ್ಕೆ ಹೋಪಕ್ಕಾರೆ ವಜ್ಜೆ ಆಗ್ ಬಿಡ್ತು. :D
ನಂಗೆ ಈ ಕತೆ ಓದಿ ಗೊತ್ತಿಲ್ಲೆ. ಅಜ್ಜನ ಕಣಜದಿಂದ ಬಂದ ಗಟ್ಟಿ ಕಾಳು. ಯಾವಾಗಲೂ ನೆನಪಿರ್ತು. ಮತ್ತೆ ನಂಗೆ ಕತೆಗಿಂತಲೂ ಅವನು ಕತೆ ಹೇಳಿದ/ಹೇಳುವ ರೀತಿಯೇ ಸಿಕ್ಕಾಪಟ್ಟೆ ಇಷ್ಟ.
ಸುಶ್ರುತ,
ಪಾಪ ಸುಮ್ ಸುಮ್ನೆ ಫ್ರೆಂಡ್ಸ್ ನ ಹೆದರ್ಸಾಲಾಗ. ಜಿರಲೆ ತೊಂದ್ರೆ ಕೊಡ್ತಲಾ ಅಂತ ಹೊಡೀತ ಅಂವ.
ಚೇತನಾ,
ನಿಮಗಿಷ್ಟವಾಗಿದ್ದು ನನಗೆ ಖುಶಿ. ನಿಮ್ಮ ಪ್ರಣವನಿಗೆ ಇನ್ನೊಂದು ಕತೆ ಇದು.. :)
ಸುಪ್ತದೀಪ್ತಿ,
ಕತೆ ಹೇಳಿದ ರೀತಿ ಯಾಕೆ ಚಂದ ಇದೆ ಅಂದ್ರೆ ಅದನ್ನು ಹಂಗೆ ಬಾಯಿ ಕಳ್ಕೊಂಡು ಕೇಳೋ ತರಾ ಹೇಳ್ತಾ ಇದ್ನಲ ಅಜ್ಜ, ಅವನ ಮ್ಯಾಜಿಕ್!
ಖಂಡಿತ. ನನ್ನ ನೆನಪಿನಲ್ಲಿ ಹಚ್ಚಗೆ ಅರಳಿರುವ ಅಜ್ಜನ ಕತೆಗಳನ್ನು ಸಾಧ್ಯವಾದಾಗೆಲ್ಲ ಅಕ್ಷರಕ್ಕಿಳಿಸಲು ಪ್ರಯತ್ನಿಸುತ್ತೇನೆ.
ನಿಧಿ,
ಮತ್ತೆ! ಕನ್ನಡ ಪಂಡಿತ್ರು ಅಂದ್ರೆ ಸುಮ್ನೇನಾ! ಸ್ಕೂಲ್ ಬಿಟ್ ಮೇಲೂ ಹೆದ್ರಿಕೇನೆ. :)
ಈಗಿನವ್ರು ಮಿಸ್ ಮಾಡ್ಕ್ಯತಾ ಇದ್ದ ಅಂದ್ರೆ ಎಂತು? ನಾವು ಹೇಳದನ್ನು ಮಿಸ್ ಮಾಡ್ತಾ ಇದ್ಯ ಅಂತ್ಲಾ? ನಾವು ಹೇಳಿದರೆ, ನಮಗೆ ಅವರನ್ನು ಕೂರಿಸಿಕೊಂಡು ಹೇಳುವ ವ್ಯವಧಾನ ಇದ್ದರೆ ಯಾವ ಮಕ್ಕಳೂ ಕೇಳಿಯಾವು.
ನಿನ್ ಕತೆಗಳನ್ನ ಕೇಳಕ್ಕೆ ಕಾಯುತ್ತಿರ್ತಿ. ಅದದೇ ಕತೆಯಾದ್ರೂ ಅಪ್ಪ ಹೇಳಿದ, ಅಜ್ಜ ಹೇಳಿದ, ಅತ್ತೆ ಹೇಳಿದ, ಚಿಕ್ಕಿ ಹೇಳಿದ ಕತೆಗಳ ಶೈಲಿಯೇ ಸೊಗಸು. ಅಲ್ದಾ?
ಚಕೋರ,
ನಿಮ್ಮ ಒಳನೋಟ ಇಷ್ಟವಾಯಿತು. ಎಲ್ಲ ವಿಷಯಗಳಿಗೂ ಹಲಮುಖಗಳಿರುತ್ತವೆ ಅನ್ನಿಸುತ್ತದೆ. ಪಂಚತಂತ್ರದ ಚಾಲಾಕುತನ ನಮಗೆ ಗೊತ್ತಿದ್ದರೇ ಒಳ್ಳೆಯದು ಅನಿಸುತ್ತದೆ ನನಗೆ. ಇದು ಕೆಡುಕು, ಇದು ಕುಟಿಲತೆ ಅಂತ ತಿಳಿದುಕೊಳ್ಳುವುದಕ್ಕಾದರೂ ನಮಗೆ ಗೊತ್ತಿರಬೇಕು.
ಕಾರ್ಟೂನು ಮತ್ತು ಸಿನಿಮಾಗಳಲ್ಲಿ ಬರುವ ಅನವಶ್ಯಕ ವಿಜೃಂಭಣೆ ನಮ್ಮ ಯಾವುದೇ ಪ್ರಾಚೀನ ಕತೆಗಳಲ್ಲಿಲ್ಲ ಅನ್ಸುತ್ತೆ. ನಾನು ಎಲ್ಲ ದೇಶದ, ಎಲ್ಲ ಸಂಸ್ಕೃತಿಗಳ ಬಗ್ಗೆ ಹೇಳ್ತಿದೀನಿ. ಬರೀ ಭಾರತವೆಂದಲ್ಲ.
ನಾವು ಮೊದಲೇ ಒಂದು ಸಲ ಚರ್ಚಿಸಿದ ಹಾಗೆ, ಮಕ್ಕಳ ಸಾಮರ್ಥ್ಯವನ್ನ underestimate ಮಾಡಬಾರದು ಅಂತ ನನ್ನ ಅಭಿಪ್ರಾಯ. ಅವರಿಗೆ ಬೇಕಾದ್ದು ಇದೇ ಅಂತ ನಮಗೆ ಹೇಗೆ ಗೊತ್ತು? :)
ವಿಚಾರ ಹಂಚಿಕೊಂಡಿದ್ದಕ್ಕೆ ಆಭಾರಿ.
ಲತಾ,
ಯಾವೂರು ನಿಮ್ಮದು? ಹೇಳಿ ಅಲ್ಲಿಯದೇ ಕತೆ ಬರೆಯೋಣ. ಲತೆಯ ಕತೆ :)
ದಿನೇಶ್,
ಖುಶಿ.
ಪ್ರೀತಿಯಿಂದ
ಸಿಂಧು
ಸಿಂಧು...
ಆಣಿ ಮಾಂಡವ್ಯನ ಕಥೆಯನ್ನು ಅದೆಷ್ಟು ಸಮಯಕ್ಕೆ ಸರಿಯಾಗಿ ಹೇಳಿದ್ದೀರಾ! ಇದೀಗ ಐದುವರ್ಷಮುಗಿದು ಆರನೇ ವರ್ಷಕ್ಕೆ ಕಾಲಿಡುತ್ತಿರುವ ನನ್ನ ಮಗನಿಗಾಗಿಯೇ ಈ ಕಥೆಯನ್ನು ನೀನು ಹೇಳಿದಂತೆ ನಾನೂ ನನ್ನ ಮಗನೂ ಖುಷಿಪಟ್ಟೆವು.
ಈ ಕಥೆ ನಂಗೆ ಗೊತ್ತಿರ್ಲೆ. ನನ್ ಮಗ ಈ ಕಥೆ ಕೇಳಿ ಈಗೊಂದೆರಡು ದಿನದಿಂದ ತುಂಬಾ ಹುಷಾರಾಗಿರ್ತಾ ಇದ್ದ :). ಈ ಕಥೆಯ ಪ್ರಭಾವ ಎಷ್ಟು ದಿನ ಇರ್ತು ನೋಡವ್ವು :).
"ಆದ್ರೆ ಆ ಋಶಿಗೆ ಬೇರೆ ಹೆಸ್ರು ಇಡಕ್ಕಾಗಿತ್ತು, ಕಷ್ಟದ ಹೆಸ್ರು ಇದು" ಅಂದ. "ಅದು ಹಾಂಗೆಲ್ಲ ನಮ್ಮಂಥ ಮನುಷ್ಯರೆಲ್ಲ ಬದಲು ಮಾಡಿರೆ ತಪ್ಪಾಗ್ತು, ಆಣಿಮಾಂಡವ್ಯ ಅಂತಾನೇ ಹೇಳವ್ವು " ಅಂದ್ಮೇಲೆ ಸುಮ್ನಾದ.
"ಕೆಂಪಿ ಕಣ್ಣು" ಕೂಡ ಅವಂಗೆ ತುಂಬಾ ಇಷ್ಟ ಆಗಿತ್ತು.
ಇಂತದೇ ಒಂದಿಷ್ಟು ಕಥೆ ಹೇಳು ಆಗಾಗ, ನಿನ್ನ ಅಳಿಯಂಗೆ ನಾನು ಆ ಕಥೆನೇಲ್ಲಾ ಓದಿ ಹೇಳ್ತಿ.
ಸಿಂಧು, ಚಂದದ ಕಥೆಯನ್ನ ಚಂದವಾಗಿ ಚಿಣ್ಣರಿಗೆ, ಚಿಣ್ಣರ ಅಮ್ಮ-ಅಪ್ಪಂದಿರಿಗೆ ನೀಡಿದ್ದಕ್ಕೆ ಒಂದಿಷ್ಟು ಪ್ರೀತಿ, ಇನ್ನೊಂದಿಷ್ಟು ಧನ್ಯವಾದ ಕೂಡ.
ಸಿಂಧು ಅವರೇ,
ನಿಜವಾಗಲೂ ಚೆನ್ನಾಗಿದೆ. ಖುಷಿಯಾಯಿತು. ಚಿಕ್ಕವರಿದ್ದಾಗ ನಮಗೂ ಇಂಥ ಕಥೆ ಹೇಳುತ್ತಿದ್ದರು. ಈಗಿನ ಮಕ್ಕಳು ಕಥೆಯ ಮೂಲಕ ನಿರ್ಮಿಸಿಕೊಳ್ಳಬಹುದಾದ ದೊಡ್ಡ ಕಲ್ಪನಾ ಲೋಕವನ್ನೇ ಕಳೆದುಕೊಳ್ಳುತ್ತಿದ್ದಾರಲ್ಲಾ ? ಯಾವುದಕ್ಕೂ ಈ ಕಥೆ ಕೊಟ್ಟಿದ್ದಕ್ಕೆ, ಒಳ್ಳೆಯ ನಿರೂಪಣೆಗೆ ಧನ್ಯವಾದ.
ಅಂದಹಾಗೆ ನಮ್ಮ ಬ್ಲಾಗ್ ಕಡೆ ಬರ್ತಾನೇ ಇಲ್ಲ. ದಯವಿಟ್ಟು ಬನ್ನಿ. ಅಭಿಪ್ರಾಯ ತಿಳಿಸಿ.
ನಾವಡ
ಚೆನ್ನಾಗಿತ್ತು ಹಾಗೂ ಪರಿಣಾಮಕಾರಿಯಾಗಿತ್ತು.
ನೀವು ಕಥೆ ಹೇಳುವ ರೀತಿ ಎಷ್ಟು ಪರಣಾಮಕಾರಿಯಾಗಿದೆಯೆಂದರೆ, ನಿಮ್ಮ ಕಥೆ ಓದಿದಾಗಿನಿಂದ ನನಗೆ ಭಯ ಶುರುವಾಗಿಬಿಟ್ಟೆದೆ ನಾನು ನರಕಕ್ಕೆ ಹೋಗ್ತೀನೇನೋ ಅಂತ. ಯಾಕೇಂದ್ರೆ ನನ್ನ ರೂಮಿನಲ್ಲಿ ಸ್ವಲ್ಪ ಸೊಳ್ಳೆ ಕಾಟ ಜಾಸ್ತಿ
ನಿಮ್ಮ ಕಥೆ ನಾಕು ವರ್ಷದ ವರೆಗೆ ಗೊದ್ದ ಹಿಡ್ದು ಸಾಯ್ಸಿದ್ ನನ್ನ guiltಗೆ ಸಮಾಧಾನ ಹೇಳ್ತು!:)) ಕಥೆ ತುಂಬಾ ಚೆನ್ನಾಗ್ ಹೇಳಿದೀರ, ಇಲ್ಲಿ ಕಾಮೆಂಟ್ಗಳಿಗೆ ಉತ್ತರಿಸ್ತಾ ಈಗಿನ ಮಕ್ಕ್ಳು ಇವನ್ನೆಲ್ಲಾ ಮಿಸ್ ಮಾಡ್ಕೋತಿವೆ ಅಂದ್ರೆ ನಾವ್ ಹೇಳೋದ್ ಮಿಸ್ ಮಾಡ್ತಿದೀವಿ ಅಂತನಾ ಅಂದಿದ್ದೂ ಸರಿ ಅನ್ನಿಸ್ತು. ನಿಮ್ಮ ಕಥೆಗಳು ಈ ’ಮಿಸ್ಸಿಂಗ್’ಅನ್ನು ತಪ್ಪಿಸಬಹುದು, ಬರೀತಾ ಇರಿ!:)
ಅಕ್ಕ,
ಕಥೆ ತುಂಬಾ ಚನ್ನಾಗಿ ಇದ್ದು.
ಈ ಕಥ್ಎ ನಂಗೆ ಗೊತ್ತೆ ಇರ್ಲೆ. ನಾನಂತು ನರಕಕ್ಕೆ ಹೋಪದು ಅಷ್ಟು ಪಾಪ ಮಾಡಿದ್ದಿ.no doubt.
ಸಿಂಧು,
ಕತೆ ರಾಶಿನೇ ಚೋಲೋ ಇದ್ದು. ನನ್ನ ಮಗ್ಳು ಸ್ವಲ್ಪ ದೊಡ್ಡ ಆದ್ಮೇಲೆ ಖಂಡಿತ ಹೇಳ್ತಿ. ಈ ಜೀವನದಲ್ಲಿ ನಾ ಏನೂ ಪಾಪ ಮಾಡಿದ್ನಿಲ್ಲೆ ಹೇಳಿ ಖುಶಿ ಪಡ್ತಾ ಇದ್ದಿದ್ದಿ.. ಈಗ ನರಕದ ಭಯ ರಾಶಿನೇ ಕಾಡ್ತಾ ಇದ್ದು;-(! ಹೊಸ ನೀತಿ ಕತೆ ಕೊಟ್ಟೊದ್ದಕ್ಕೆ ಧನ್ಯವಾದಗಳು.
ಸಿಂಧು,
ನಾನೂ ಅಂಗಳದಲ್ಲಿ ಹರಡಿದ್ದ ಅಡಕೆ ರಾಶಿಯಲ್ಲಿ ಕುಳಿತು ಅಜ್ಜನ ನೂರಾರು ಕಥೆ ಕೇಳಿದ್ದೇನೆ, ಅಣಿಮಾಂಡವ್ಯನ ಕಥೆ ಫಸ್ಟ್ ಟೈಂ ಕೇಳ್ತಾ ಇದ್ದೇನೆ. ಎನಿವೇ, ನಾಸ್ಟಾಲ್ಜಿಯಾ, ನೀತಿ ಎರಡೂ ಬೆರೆತಿದೆ ನಿಮ್ಮ ಬರಹದಲ್ಲಿ...
ಕಥೆ ಚೆನ್ನಾಗಿದ್ದು. ಊರಲ್ಲಿ ಅಡಿಕೆ ಸುಲಿಯದು ಒಂದ್ಸಲ ನೆನಪಾತು.
೬ ವರ್ಷದ ಮೇಲ್ಪಟ್ಟವು ಗೊತ್ತಿಲ್ಲ್ದೆ(?)ತಪ್ಪು ಮಾಡಿದ್ರೆ ಯಾವ್ದೇ ಶಿಕ್ಷೆಯಾಗದೇ ಇರ ತರ ಯಾವ್ದಾರು ಕಥೆ ಇದ್ರೆ ಕೇಳಿ ಸಮಾಧಾನ ಮಾಡ್ಕಿಳ್ಲಾಗಿತ್ತು.
ಮೊದ ಮೊದಲ ಸಾಲುಗಳಲಿ ಅಡಗಿಹ ಮಲೆನಾಡ ಕೃಷಿಕರ ಬದುಕಿನ ಚಿತ್ರಣ ನನಗೆ ಹಿಡಿಸಿತು.
ಬಾಲ್ಯದ ದಿನಗಳಲಿ ಪ್ರಚಲಿತವಿದ್ದ ಪ್ರಾಣಿ ಹಿಂಸೆಮಾಡಿದವರು ನರಕ ಸೇರುವ ಫ಼್ಲಾಶ್ ಬ್ಯಾಕ್ ಸ್ಟೊರಿ ನೆನಪಾದದ್ದು ನಿಜ .. :)
-ಅಮರ
ನನ್ನಜ್ಜ ರಾಮಾಯ್ಣ ಮಹಾಭಾರ್ತ ಭಾಗವತ ಕಥೆಗಳು ನನ್ ಕೈಲಿ ಓದಿಸ್ಕೊಳ್ತಿದ್ದಿದ್ದು ನೆನ್ಪಾಯ್ತು :-) ಅವ್ರಿಗೆ ಕಥೆ ಗೊತ್ತಿತ್ತು, ನಂಗೆ ಗೊತ್ತಾಗ್ಲಿ, ನಾನು ಕಲಿತ್ಕೊಳ್ಲಿ ಅಂತ ಓದಿಸ್ತಿದ್ರು ಅಂತ ಈಗ ಹೊಳೀತಿದೆ..! :)
ಓದಿ ಖುಷಿಯಾಯ್ತ... ಚೆನ್ನಾಗಿದೆ.
ಹರೀಶ್ ಕೆ. ಆದೂರು.
ಪ್ರೀತಿಯ ಶಾಂತಲಾ,
ಅನುದೀಪಂಗೆ ಕತೆ ಇಷ್ಟ ಆಗಿದ್ದು ಕೇಳಿ ಖುಶಿಯಾತು. ಅಣಿಮಾಂಡವ್ಯ ಅನ್ನ ಹೆಸರು ಚೂರು ಕಷ್ಟ ಮೊದೂಲಿಗೆ.. ಆಮೇಲಾಮೇಲೆ ಅಭ್ಯಾಸ ಆಗೋಗ್ತು ಅಂತ ಹೇಳು.ಅನ್ಯಥಾ ಹೆದರ್ಸಡ ಅವನ್ನ. ಕತೆ ಅಷ್ಟೇ ಮಗಾ ಇದು ಅಂತ ಹೇಳ್ತಿರು. ಅದು ಅವ್ನ ಇಮಾಜಿನೇಶನ್ನಿಗೆ ಒಂದು ದಾರಿಯಾಗವು ಅಷ್ಟೆ.
ನಾವಡರೇ.
ಖುಶಿ, ನಿಮ್ಗೆ ಖುಶಿಯಾಗಿದ್ದಕ್ಕೆ. ಮತ್ತೂ ಖುಶಿ ಮೊನ್ನೆ ನೀವು ಸಿಕ್ಕಿದ್ದಕ್ಕೆ. :)
ಹೌದು ನೀವು ಹೇಳುತ್ತಿರುವುದು ನಿಜ. ನಂಗೂ ಅದೇ ಬೇಜಾರು. ಕತೆಗಳು ಕಂಬಿಗಳಿಲ್ಲದ ಕಿಟಕಿಯ ಹಾಗೆ. ತೆರೆದಿಟ್ಟರೆ ಅಲ್ಲೆ ಕೂತು ನೋಡಲೂ ಬಹುದು. ಹೊರಗೆ ಹಾರಲೂ ಬಹುದು. ನಾವು ನಮ್ಮ ಮಕ್ಕಳಿಗೆ ಕತೆಗಳನ್ನ ಪ್ರೀತಿಯಿಂದ ಪರಿಚಯ ಮಾಡಿಸಬೇಕು ಅಂತ ನನ್ನ ಅಭಿಪ್ರಾಯ.
ನಿಮ್ಮ ಬ್ಲಾಗ್ ತಪ್ಪದೇ ಓದುತ್ತೀನಿ. ಪ್ರತಿಕ್ರಿಯೆ ಹಾಕುವಷ್ಟು ಸಮಯಾವಕಾಶವಾಗುತ್ತಿಲ್ಲ. ಸುಧನ್ವ ಹೇಳಿದ ಹಾಗೆ, ಬರೀ ಚೆನ್ನಾಗಿದೆ ಅಂತ ಅಷ್ಟೇ ಹಾಕಿದರೆ ಸಾಲೋಲ್ಲ ನಿಮ್ಮ ಬರಹಗಳಿಗೆ. :) ಸಧ್ಯದಲ್ಲೇ ಬಂದು ಗೋಳು ಹುಯ್ಯುತ್ತೇನೆ ಇರಿ.
ಸುಧೇಶ್,
:)
ಭಯ ಬೇಡ ಅದು ಕತೆ. ಕತೆಯೊಳಗಿನ ತಿರುಳು ಗೊತ್ತಾದರೆ ಸಾಕು. ಆಮೇಲೆ ಅಜ್ಜನೇ ಹೇಳಿದ್ದನಲ್ಲಾ.. ತೊಂದರೆ ಕೊಡುವ ಸೊಳ್ಳೆ ತಿಗಣೆ..ಗಳನ್ನ ಕೊಲ್ಲಬಹುದು ಅಂತ.. :) ನಮ್ಮೆಲ್ಲ ಕತೆ,ನೀತಿ,ಆಚಾರಗಳೂ ಅನುಕೂಲಸಿಂಧುವೇ.
ಶ್ರೀ,
ಸಧ್ಯ. ಖುಶಿ.
ಬರೀತಾ ಇರೋದ್ರ ಬಗ್ಗೆ ಕೆಲವು ಡೌಟ್ಸ್ ಬಂದ್ ಬಿಟ್ಟಿದೆ ಮೊನ್ನೆ ಬ್ಲಾಗರ್ಸ್ ಮೀಟ್ ಆದಮೇಲೆ.
ನೀವು ಸಿಕ್ಕಿದ್ದು ತುಂಬ ಖುಶಿಯಾಯಿತು. ಮತ್ತೆ ಯಾವಾಗಾದರೂ ಜಾಸ್ತಿ ಹೊತ್ತು ಸಿಗೋಣ ಹೀಗೇ ಸುಮ್ಮನೆ.. :)
ರಂಜು,
ಥ್ಯಾಂಕ್ಸ್.
ಅದಕ್ಕಾಗೆ ಅಲ್ದಾ ನೀನು ಬೆಚ್ಚನೆ ಮನೆ ಬಿಟ್ಟು ಪಿ.ಜಿ.ಲಿ ಇರಾ ಹಂಗೆ ಆಗಿರದು.. :)
ತೇಜಸ್ವಿನಿ,=
ಕತೆ ಮಾರಾಯ್ರೇ ಇದು ಕತೆ. :)
ಆದ್ರೂ ನಮ್ಗೆ ಒಳ್ಳೆಯದು ಮತ್ತು ಕೆಟ್ಟದ್ದರ ಬಗ್ಗೆ ತಿಳುವಳಿಕೆ ಮತ್ತು ಭಯ ಇರೋದು ಒಳ್ಳೇದೆ.
ವೇಣು,
ಅಲ್ವಾ, ಆ ಅಂಗಳ, ಜಗುಲಿ, ಹಿತ್ತಿಲ ಮೂಲೆ, ಕಾಡು ದಾರಿ ಎಷ್ಟೆಲ್ಲ ಕತೆ ಕೇಳಿಸಿವೆ ನಮಗೆ. ಪುಣ್ಯ ಮಾಡಿದ್ದೆವು ನಾವು. :)
ನೀತಿ.. ತುಂಬ ದೊಡ್ಡ ಪದವಾಯಿತು ಈ ಕತೆಗೆ :) ಅಜ್ಜನ ಕತೆಗಳು ಮಾಯಾಲೋಕದ ಕಿಟಕಿಗಳಂತೆ ನನಗೆ. ಇದಕ್ಕೂ ಇನ್ಯಾವುದೋ ತಮಾಷಿಯ ಕತೆಗೂ ತುಂಬ ವ್ಯತ್ಯಾಸ ಇರೋಲ್ಲ. ಮಕ್ಕಳನ್ನು ಹೆಚ್ಚು ತರ್ಕ ಮಾಡಿಸದೆ ಸಮಾಧಾನಿಸುವ, ಅವರು ಹಟ ಮಾಡಿದ್ದಕ್ಕೆ ಉತ್ತರವಾಗಿ ಇನ್ನೊಂದೇನನ್ನೋ ಕೊಟ್ಟು ಬೇರೆಯದೇ ಲೋಕಕ್ಕೆ ಕರೆದೊಯ್ಯುವ ಕತೆಗಳು ಇವು. ಇಲ್ಲಿ ನೀತಿಗಿಂತ ಹೆಚ್ಚಾಗಿ ಡಿಸ್ಟ್ರಾಕ್ಷನ್ (distraction) ಕಾಣುತ್ತದೆ ನನಗೆ. ಏನೋ ಮಾಡುವ ಮಕ್ಕಳಿಗೆ ಇಮ್ಮೀಡಿಯೆಟ್ ಆಗಿ ಗೊಂಬೆ,ಕಾರು,ವಿಡಿಯೋಗೇಮ್ ಅಥವಾ ತಿಂಡಿಗೆ ಬದಲಾಗಿ ರಮ್ಯಕತೆಯೊಂದನ್ನು ಕೊಡುವ ಈ ಐಡಿಯಾ ನನ್ನನ್ನ ಯಾವತ್ತೂ ಬೆರಗುಗೊಳಿಸಿದೆ.
ಬೇರೆಯವ್ರ ಬಗ್ಗೆ ಗೊತ್ತಿಲ್ಲ. ನಂಗಂತು ತುಂಬ ಇಷ್ಟವಾಗಿತ್ತು ಕತೆಗಳೆಂದರೆ. ಈಗಲೂ.
ಯಜ್ಞೇಶ್,
ಅಡಿಕೆ ಸುಲಿಯದು! ಓಹ್ ಅದು ಬೇರೆಯೇ ಕತೆ. ಚೆನಾಗಿರ್ತು.
ನೋಡನ ಆ ತರಹ ಕತೆಗಳನ್ನು ಹುಡುಕ್ತಿ. :)
ಅಮರ,
ಹಳೆಯ ಸಾವಧಾನದ ಬದುಕು ಅದು. ಅದಕ್ಕೆ ಅಲ್ಲಿ ಅಷ್ಟು ಟೈಮಿತ್ತು. :)
ಶ್ರೀ,
ಅಜ್ಜ ಅಜ್ಜಿಯರು ಇಷ್ಟವಾಗೋದೆ ಅವರ ಈ ಕ್ರಿಯೇಟಿವ್ ಐಡಿಯಾಗಳಿಗೆ.
ಈಗ ಹೊಳೀತಲ್ಲಾ, ಹಂಗರೆ ಪೂರ್ತಿ ನೆನಪು ಮಾಡಿಕೊಂಡು ಒಂದು ಕತೆ ಬರದ್ ಬಿಡಿ. ಮನಸು ಮಾತಾಡುವುದನ್ನ ಕೇಳಬೇಕಿದೆ.
ಹರೀಶ್,
ಖುಶಿಯಾಯ್ತು, ನಿಮ್ಗೆ ಇಷ್ಟವಾಗಿದ್ದು.
ಪ್ರೀತಿಯಿಂದ
ಸಿಂಧು
that was good one, wow
ಮಲೆನಾಡಿನ ಚಿತ್ರಣವನ್ನು ತುಂಬಾ ಚೆನ್ನಾಗಿ ಹಿಡಿದಿಡುತ್ತೀರ ಅಕ್ಷರಗಳಲ್ಲಿ.
ಸಿಂಧು ಅವರೇ,
ನನಗೂ ಅಷ್ಟೇ ನೀವು ಸಿಕ್ಕಿದ್ದು ಖುಷಿಯಾಯಿತು. ವಾಸ್ತವವಾಗಿ ಸುಧನ್ವ ಮತ್ತು ನಾನು ನಿಮ್ಮ ಬಗ್ಗೆ ಮಾತನಾಡಿಕೊಂಡಿದ್ದೆವು. ನಿಮ್ಮ ಹೆಸರನ್ನು ಕೂಗಿ ಕರೆದಾಗ ನೀವು ಸಿಕ್ಕಿದಿರಿ ಎಂದು ಖುಶಿಯಾಯಿತು.ಆದರೆ ಏನೂ ಮಾತನಾಡಲೇ ಆಗಲಿಲ್ಲ. ನಿಮ್ಮೊಂದಿಗೆ ಚರ್ಚಿಸುವುದು ಬಹಳಷ್ಟಿದೆ. ಮತ್ತೊಮ್ಮೆ ಹೀಗೆ ಇನ್ ಫಾರ್ಮಲ್ ಆಗಿ ಕೆಲವರೇ ನಾವು ಕಾಫಿಗೆ ಒಂದಾಗ್ಬೇಕು. ಅಂದ ಹಾಗೆ ಬೇಸರವಿಲ್ಲದಿದ್ರೆ ನಿಮ್ಮ ಇಮೇಲ್ ವಿಳಾಸ ಕೊಡಲಿಕ್ಕಾಗುತ್ತಾ
ಹಾಗೆಯೇ ನೀವು ಬಂದು ಗೋಳು ಹೊಯ್ದುಕೊಂಡ್ರೇನೇ ಖುಶಿ.
ನಾನು ಕಾಯ್ತಾ ಇರ್ತೇನೆ.
ನಾವಡ
ಸಿಂಧು ಅವರೆ,
ಒಂದು ಅಪ್ ಡೇಟ್ ನೋಡಿ
ಬ್ಲಾಗೀ ಮಿಲನದ ಫೋಟೋಗಳು…ಜೊತೆಗೆ ಇನ್ನೊಂದು ಸೆನ್ಸೇಷನ್:
Gold Questnet ಪೋಸ್ಟ್ ಮಾರ್ಟಂ-ಚಿನ್ನ ಮಾರಿ ಲಕ್ಷ ಗಳಿಸಿ !
ಕಥೆ ನಿರೂಪಿಸಿದ ಬಗೆ ಬಹಳ ಚೆನ್ನಾಗಿದೆ
ನನ್ನ ಮನವನ್ನೂ ೪೦ ವರ್ಷಗಳ (ಮಲೆನಾಡು ಬಿಟ್ಟು ಬಯಲುಸೀಮೆಗೆ ಬಂದ ಕಾಲ) ಹಿಂದಕ್ಕೆ ತಳ್ಳಿದಿರಿ.
ಈ ಬ್ಲಾಗಿನಿಂದಲೂ ಕಲಿಯುವಂತಹದ್ದು ಬಹಳಷ್ಟಿದೆ :)
ಇಂತಹ ಬರಹ ಅನವರತ ಸಾಗಲಿ
ಗುರುದೇವ ದಯಾ ಕರೊ ದೀನ ಜನೆ
ಶಶೀ,
ಖುಶಿಯಾತು ನಿಂಗೆ ಇಷ್ಟ ಆಗಿದ್ದು ನೋಡಿ. ಯಾವಾಗ್ ಬರ್ತಾ ಇದ್ದೆ ಊರಿಗೆ?
ವಿನಾಯಕ,
ಮನಸು ನೆನಪುಗಳಲ್ಲಿ ನೆಲೆಯಾಗಿ ನಿಂತ ನನ್ನ ಊರು, ಜನ, ಜನಪದ ಮತ್ತು ಬದುಕು ನನ್ನೆಲ್ಲ ಅಭಿವ್ಯಕ್ತಿಗಳ ಸಾರಸರ್ವಸ್ವ. ನಿಮ್ಮ ಮೆಚ್ಚುಗೆಗೆ ಖುಶಿಯಾಗಿದೆ.
ನಾವಡರೇ,
ಖಂಡಿತ ಭೇಟಿಯಾಗೋಣ. ನಿಮ್ಮ ಬ್ರಹ್ಮಚಾರಿ ಸೀರೀಸ್ ಯಾಕೋ ಸತತವಾಗಿ ಓದಲೆ ಆಗಿಲ್ಲ. ಓದಿ ಬರೆಯುತ್ತೇನೆ.
ರವೀ,
ಥ್ಯಾಂಕ್ಸರೀ.. ಆದ್ರೂ ನನ್ನೂ ಹಿಡಿದಾಕ್ ಬಿಟ್ಟಿದೀರಲ್ಲ ಫ್ರೇಮಲ್ಲಿ, ಗೊತ್ತಿದ್ದರೆ ತಪ್ಪಿಸಿಕೊಳ್ಳುತ್ತಿದ್ದೆ.
ಸೆನ್ಸೇಷನ್ ಸ್ಟೋರಿ ಮಾಸ್ಟರ್ ಆಗ್ ಬಿಟ್ಟಿದೀರ. ಚೆನಾಗಿದೆ. ಓದಲೇಬೇಕಾದ ವಿಷಯ.
ತವಿ ಶ್ರೀ ಯವರಿಗೆ,
ನಿಮಗೆ ಮೆಚ್ಚುಗೆಯಾಗಿದ್ದು ಖುಶಿ ನನಗೆ. ಕಲಿಯುವುದು ಎಲ್ಲದರಲ್ಲೂ ಇರುತ್ತದೆ. ಕಲಿಯಬೇಕಿದೆ ಎಂಬ ತಿಳುವಳಿಕೆ ಮತ್ತು ನಮ್ರತೆ ನಿಮ್ಮ ಹಾಗಿನ ದೊಡ್ಡಮನಸ್ಸಿನವರಿಗೆ ಮಾತ್ರ ಸಾಧ್ಯ. ನಿಮ್ಮ ಬ್ಲಾಗ್ ಬರಹಗಳಿಗಿಂತ ಹೆಚ್ಚಾಗಿ ನಿಮ್ಮ ಸ್ಪಂದನೆಗಳ ಅಭಿಮಾನಿ ನಾನು.
ಪ್ರೀತಿಯಿಂದ
ಸಿಂಧು
Post a Comment