Tuesday, November 6, 2007

ಮಾತು-ಮೌನ

ಹುಲುಸಾಗಿ ಬೆಳೆದ ಮಾತಿನ ಬೆಳೆ,
ಭೂಮಿ ಹುಣ್ಣಿಮೆ ಕಳೆದು,
ಭೂರೆ ಅಭ್ಯಂಜನ ಸುರಿದು,
ಮಾಗಿಯ ಇಬ್ಬನಿಯ ಮೆದ್ದು,
ಸಂಕ್ರಮಣದ ಎಳೆಬಿಸಿಲ ಹೊದ್ದು
ಕಾಯುತ್ತ ಕೂತಿತ್ತು
ನಿನ್ನ ನಲುಮೆಯ ಕೊಯ್ಲಿಗೆ


ನೀನ್ಯಾಕೆ ಕೊಯ್ಲು ಬೇಸರವುಕ್ಕಿ
ಸುಮ್ಮನೆ ಕತ್ತರಿಸಿ
ಕಾಳೊಕ್ಕದೆ
ಮೌನ ಬಿತ್ತಿಬಿಟ್ಟೆ?!


ಇನ್ನೂ ಮಳೆಯ ಹದ ಕಾಣದ
ಬಿರುನೆಲದಲ್ಲಿ
ಬಿಮ್ಮಗೆ ಮೊಳಕೆಯೊಡೆದ ಮೌನ
ಒಕ್ಕದೇ ಹೋಗಿ
ಎಲ್ಲ ಕಾಳೂ ಜೊಳ್ಳಾಗಿ
ಮಾತು ಸಸಾರವಾಗಿ
ಕೇಳುವವರಿಲ್ಲದೆ ಬಿದ್ದು
ನಿದ್ದೆ ಎಚ್ಚರದ ನಡುವಿನ ಪಯಣ


ದೀಪಾವಳಿಯಂತೆ, ಹೊಸವರ್ಷ, ಹೊಸಬದುಕಂತೆ,
ನಿನ್ನ ಜೊತೆಬೆಳಕಿಲ್ಲದೆ ಇನ್ಯಾವ ದೀಪವಿದ್ದರೇನಂತೆ..?!


ಹೋಗಲಿ ನಸುನಗುವೊಂದೆರಡ ಬಿಸಾಕು
ನಿನ್ನ ನಲ್ದನಿಯ ಜೊತೆಯಿಲ್ಲದ
ಬೆಂದ ಮನಸಿಗಿಷ್ಟು ತಂಪು ಸೇಚನ..


--------------------
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ..
(ಜಿ.ಎಸ್.ಎಸ್ ಅಥವಾ ಕಣವಿಯವರ ಸಾಲು, ಯಾರದೆಂದು ಸರಿಯಾಗಿ ಗೊತ್ತಿಲ್ಲ)

8 comments:

jagadeesh sampalli said...

Hi,

Kavana tumba chennagide. I like it really.

ಶಾಂತಲಾ ಭಂಡಿ (ಸನ್ನಿಧಿ) said...

ತುಂಬ ಚೆನ್ನಾಗಿದೆ.
‘ನಿದ್ದೆ ಎಚ್ಚರದ ನಡುವಿನ ಪಯಣ’ ಎಂತಹ ಸಾಲಿದು!
ಈ ಕವನದಲ್ಲಿ ಬರುವ ‘ನಿದ್ರೆ’ಗೆ ಕೊಟ್ಟ ವ್ಯಾಖ್ಯಾನ ಚೆನ್ನಾಗಿದೆ.

Haaru Hakki said...

ದೀಪಾವಳಿಯಂತೆ, ಹೊಸವರ್ಷ, ಹೊಸಬದುಕಂತೆ,
ನಿನ್ನ ಜೊತೆಬೆಳಕಿಲ್ಲದೆ ಇನ್ಯಾವ ದೀಪವಿದ್ದರೇನಂತೆ..?!
ಕವನದ ಸಾಲುಗಳು ತುಂಬಾ ಅದ್ಭುತವಾಗಿ ಮೂಡಿ ಬಂದಿವೆ.

ಬ್ರಹ್ಮಾನಂದ್.ಎನ್.ಹಡಗಲಿ

Anonymous said...

ತುಂಬಾ ಚೆನ್ನಾಗಿದೆ ಸಿಂಧು.
-ಪೂರ್ಣಿಮ ಸುಬ್ರಹ್ಮಣ್ಯ

mala rao said...

ವೆಬ್ ದುನಿಯಾದಲ್ಲಿ ನಿಮ್ಮ ಬ್ಲಾಗ್ ಬಗ್ಗೆ ಲೇಖನ ಓದಿದೆ
ಕಂಗ್ರಾಟ್ಸ್....
ದಿವಾ ಸಿಕ್ಕನಾ?

ಶ್ಯಾಮಾ said...

ನೀನ್ಯಾಕೆ ಕೊಯ್ಲು ಬೇಸರವುಕ್ಕಿ
ಸುಮ್ಮನೆ ಕತ್ತರಿಸಿ
ಕಾಳೊಕ್ಕದೆ
ಮೌನ ಬಿತ್ತಿಬಿಟ್ಟೆ?!

ದೀಪಾವಳಿಯಂತೆ, ಹೊಸವರ್ಷ, ಹೊಸಬದುಕಂತೆ,
ನಿನ್ನ ಜೊತೆಬೆಳಕಿಲ್ಲದೆ ಇನ್ಯಾವ ದೀಪವಿದ್ದರೇನಂತೆ..?!

ಆಹಾ! ಎಂಥ ಸಾಲುಗಳು!!... ಮತ್ತೆಮತ್ತೆ ಓದಿಕೊಂಡೆ.. ತುಂಬ ಇಷ್ಟವಾಯಿತು..

Anonymous said...

ಬ್ಲಾಗ್ ಚೆನ್ನಾಗಿದೆ..ಭಾವನೆಗಳನ್ನು ಪೋಣಿಸಿ ಬರೆದ ಕವನಗಳು ಹೃದಯದ ಒಳಹೊಕ್ಕು ಮೌನವಾಗಿ ಮಾತಾಡ್ತಾವೆ..ಮೌನಕ್ಕೂ ಮಾತಿನ ದನಿಯನ್ನು ಕಲ್ಪಿಸುತ್ತವೆ..

ಸಿಂಧು sindhu said...

ಜಗದೀಶ್,

ಖುಷಿಯಾಯ್ತು.

ಶಾಂತಲಾ,
ನಿದ್ದೆ ಎಚ್ಚರದ ನಡುವಿನ ಪಯಣ-ದ ಕ್ಷಣಗಳು ತುಂಬ ದೀರ್ಘವೆನಿಸಿಬಿಡುತ್ತವೆ. ಆಮೇಲ್ಯಾವಾಗಲೋ ಕೂತು ಬರೆಯುವಾಗ ಮೆಲುದನಿಯ ಸಾಲುಗಳಾಗಿ ಉಲಿಯುತ್ತವೆ.

ಬ್ರಹ್ಮಾನಂದ್,
ಅಲ್ವಾ. ತುಂಬ ಪ್ರೀತಿಸುವ ಮತ್ತು ಬದುಕಿನ ಚೈತನ್ಯವೇ ಆಗಿರುವ ಜೀವದ ಜೊತೆ,ನಗು ಮತ್ತು ಮಾತಿಲ್ಲದೆ ಇನ್ಯಾವ ಸಡಗರ ಉಲ್ಲಸ ತರುತ್ತದೆ?

ಪೂರ್ಣಿಮಾ,
:)

ಮಾಲಾ,
ನೀವು ಅಮ್ಮುವಿನಮ್ಮ ಅಲ್ಲವಾ, ನಾನು ನಿಮ್ಮ ಚಿತ್ರದುರ್ಗ ಮತ್ತು ನಂದಗೋಕುಲದ ಅಭಿಮಾನಿ.
ವಿಷಯ ತಿಳಿಸಿದ್ದಕ್ಕೆ ಥ್ಯಾಂಕ್ಸ್,
ದಿವಾ ಮಾತಿಗೆ ಸಿಕ್ಕಿದ್ದಾನೆ. ನೋಡಲು ಹೋಗಬೇಕು ನಾನೆ.

ಶ್ಯಾಮಾ,
ಒಕ್ಕಲು ಕಾಯುತ್ತಿದ್ದ ಮಾತಿನ ಕಾಳುಗಳೆಲ್ಲ ಜೊಳ್ಳಾಗಿ ಉದುರಿಬಿದ್ದಾಗ ಹುಟ್ಟಿದ ಸಾಲುಗಳು.
ನಿಮ್ಮ ಪಂಚಿಗ್ ಕವಿತೆಗಳು ಇಷ್ಟ ನನಗೆ.

ಚಿತ್ರಾ,
ನಿಮಗೆ ಇಷ್ಟವಾಗಿದ್ದು ಖುಷಿಯಾಯ್ತು. ಅನಿಸಿಕೆಗಳನ್ನು ಹಂಚಿಕೊಳ್ಳಿ. ಇನ್ನೂ ಇಷ್ಟವಾಗುವ ಹಾಗೆ ಬರೆಯಲಾಗುತ್ತಾ ನೋಡಬೇಕು.

ಪ್ರೀತಿಯಿಂದ
ಸಿಂಧು