Thursday, September 6, 2007

ಊರು, ಅಜ್ಜಿ, ಮಳೆ ಮತ್ತು ಅಜ್ಜನ ನೆನಪು...

ಸಾಗರದಲ್ಲಿ ಬೆಳಗ್ಗೆ ಬಸ್ಸಿಳಿದಾಗಿನಿಂದ ಜಿಟಿಜಿಟಿ ಮಳೆ. ರಸ್ತೆ,ರಸ್ತೆಬದಿಯ ಹುಲ್ಲು ಹಾಸು, ಹೂಳುತುಂಬಿದ ಕೆರೆಯ ಮುಕ್ಕಾಲು ಭಾಗ ತುಂಬಿದ ಜೊಂಡುಹುಲ್ಲು, ಮಳೆಯಿಂದ ತುಂಬಿದ ಮಧ್ಯಭಾಗದಲ್ಲಿ ಅರಳುಮೊಗ್ಗಾದ ಕಮಲಗಳು.. ಸುತ್ತ ಮಾತಿಲ್ಲದೆ ಜೊತೆಯಾಗಿ ನಿಂತ ಬಿಳಿಬಿಳಿ ಕಟ್ಟಡಗಳು ಕೆರೆಯಾಚೆಗಿನ ರಸ್ತೆಯಂಚಿನ ದೊಡ್ಡ ದೊಡ್ಡ ಮರಗಳು ಎಲ್ಲವೂ ಮಳೆಯ ಸೋನೆಗೆ ಮೈಯೊಡ್ಡಿ ಸೊಂಪಾಗಿ ಕಾಣುತ್ತಿತ್ತು. ತುಂಬ ದಿನಗಳ ನಂತರ ಊರಿಗೆ ಹೋಗಿದ್ದೆ. ಎಲ್ಲ ಅವತ್ತು ೧೫ ವರ್ಷಗಳ ಮುಂಚೆ ಒಂದು ಮಳೆಗಾಲದಲ್ಲಿ ನಾನು ಹೊರಟಾಗ ಇದ್ದಂತೆಯೇ ಕಂಡರೂ ಎಲ್ಲ ಬೇರೆಯೇ ಅಂತ ಗೊತ್ತಾಗುತ್ತಿತ್ತು. ಕಳೆದಕಾಲದೊಡನೆ ಬದಲಾದ ಊರು ಮತ್ತು ನಾನು..

ಅಜ್ಜಿಗೆ ಸ್ವಲ್ಪ ಹುಷಾರಿರಲಿಲ್ಲ. ನನಗೆ ನೋಡಲೇಬೇಕೆನ್ನಿಸಿತ್ತು. ಎಷ್ಟೇ ಫೋನಿನಲ್ಲಿ ಮಾತಾಡಿದರೂ ನನ್ನ ಸ್ವರದ ಅಂದಾಜಿನ ಮೇಲೆ ಮಾತನ್ನು ಊಹಿಸುವ ಇಳಿವಯಸ್ಸಿನ ಅರೆಕಿವುಡು. ನನಗೆ ಅವಳ ಜೊತೆಕೂತು ಮಾತುಕತೆ ಹೊಸೆಯಬೇಕಿತ್ತು. ಬೆನ್ನ ಹಿಂದೆ ಜಗ್ಗಿನಿಂತ ಎಲ್ಲ ಕೆಲಸಗಳನ್ನೂ ರಿಕ್ವೆಸ್ಟ್ ಮಾಡಿ ಬದಿಗೆ ಸರಿಸಿ ರಾತ್ರಿ ಬಸ್ಸು ಹತ್ತಿದೆ. ಹಣ್ಣು ಮುಖದ ತುಂಬ ಹೂನಗೆ ಹೊತ್ತವಳು ಕಾದಿದ್ದಳು.. ಯಾವಯಾವುದೋ ವಿಷಯದಲ್ಲಿ ಶುರುವಾದ ಎಲ್ಲ ಮಾತಿನ ಹಾದಿಗಳೂ ಸಾವಿನ ಮನೆಯ ಜಗುಲಿಗೇ ಹೋಗಿ ಸೇರುತ್ತಿತ್ತು. ಅವಳ ಓರಗೆಯವರನೇಕರು, ಚಿಕ್ಕವರು ಮತ್ತು ದೊಡ್ಡವರು ಸಾಕಷ್ಟು ಜನ ಗಂಟು ಮೂಟೆ ಕಟ್ಟಿದ್ದರು. ಒಬ್ಬೊಬ್ಬರು ಹೋದಾಗಲೂ ಮೊದಲ ಆತಂಕ ನೆಕ್ಸ್ಟ್ ನಾನೇ ಏನೋ ಅನ್ನುವುದೇ. ಎರಡನೆಯದು ಯಾವ ಬಗೆಯ ಸಾವು..? ಆಸ್ಪತ್ರೆಯಲ್ಲಿ ಜೀವರಸವನ್ನೂ(ಗ್ಲೂಕೋಸ್) ಹಿಂಡುವ ನೋವಿನೊಂದಿಗೆ ಜೀವದೊಳಗೆ ಬಿಟ್ಟುಕೊಳ್ಳುತ್ತಾ ಬಿಡಲಾರದೆ ಜೀವ ಬಿಡುವುದೋ, ಇಲ್ಲಾ ಮನೆಯಲ್ಲಿ ಬೆಳಿಗ್ಗೆ ತಿಂಡಿ, ಸ್ನಾನ ಚಾ ಆಗಿ ಅಡಿಕೆ ಕುಟ್ಟಿಕೊಂಡು ಎಲೆ ನೀವಿ ಸುಣ್ಣ ಹಚ್ಚುವಾಗ ಗೊತ್ತಾಗದಂಗೆ ಜೀವ ಹೋಗುವುದೋ.. ನೇರವಾಗಿ ಹೀಗೇ ಆಗಲಿ ಎನ್ನುವ ಧೈರ್ಯವಿಲ್ಲವಾದರೂ ಅವಳ ಮನಸ್ಸಿನ ತುಂಬ ಕಾಡಿನಿಂತ ಆಸೆ ಅದೇ.. ಚಿಕ್ಕಂದಿನ ನೆನಪುಗಳಿಂದ ಹಿಡಿದು ಇವತ್ತಿನ ಮಾತ್ರೆಗಳು, ಡಾಕ್ಟರವರೆಗೆ, ಎಲ್ಲ ಮಾತಾಡುತ್ತ ಕೂತೆವು. ನಾಲ್ಕೈದು ಲೋಡು ಕವಳ ಖರ್ಚಾಯಿತು. ಅಂಗಳದಲ್ಲಿ ಮಳೆ ನಮ್ಮ ಮಾತಿಗೆ ಹನಿ ಹಾಕುತ್ತಿತ್ತು.ನಾನು ವಿಮಾನದಲ್ಲ್ ಊರುಗಳಿಗೆ ಹೋಗುವುದನ್ನು ಮತ್ತೆ ಮತ್ತೆ ಕೇಳಿದಳು. ಅವಳಿಗೆ ವಿಮಾನದಲ್ಲಿ ಹೋಗಿನೋಡಬೇಕೆಂಬಾಸೆ ಆದರೆ ಭಯ :)

ಮಧ್ಯಾಹ್ನ ಊಟವಾಗಿ ಅವಳು ಮಲಗಿದ ಮೇಲೆ ನಾನು ಚಿಕ್ಕಪ್ಪನ ಜೊತೆ ಅಜ್ಜನೂರಿಗೆ ಹೋದೆ. ಅದು ಅಜ್ಜನಷ್ಟೇ ಹಿತವಾಗಿ, ಪ್ರೀತಿಯಿಂದ ಕಾದು ನಿಂತಿತ್ತು. ಊರ ಹತ್ತಿರದ ತಿರುವು, ಸೇತುವೆ, ಮೈದಾನ, ಶಾಲೆ, ನೀರಿರದ ಬಾವಿ ಮತ್ತು ದೂರದ ಬೋರ್ ವೆಲ್,ಬೃಹದಾಕಾರದಲ್ಲಿ ನಿಂತ ಬೂತಪ್ಪನ ಮರ, ಮನೆಯಾಚೆಗಿನ ಪುಟ್ಟ ಹಸಿರುಗುಡ್ಡ, ಗುಡ್ಡದ ಮೇಲಿನಿಂದ ಕಾಣಬರುವ ಶರಾವತಿಯ ಹಿನ್ನೀರು, ಊರ ಮೈದಾನದ ಕೊನೆಗೆ ದೊಡ್ಡದಾಗಿ ಆವರಿಸಿ ನಿಂತ ಮನೆ, ಮನೆಯ ಸುತ್ತಲ ಗೇರುಮರಗಳು ಎಲ್ಲವೂ ಅಜ್ಜನ ನೆನಪನ್ನ ಗೊಂಚಲು ಗೊಂಚಲಾಗಿ ಹೊತ್ತು ನಿಂತಿದ್ದರೆ, ಮನಸು ಒಳಗೇ ಸರಿಯುತ್ತಿತ್ತು.

ಹಳ್ಳಿಯ ಮನೆಯಲ್ಲಿ ಯಾರೂ ಇಲ್ಲದ ದಿನಗಳಲ್ಲಿ ಅಜ್ಜ ಮತ್ತು ಪುಟ್ಟ ನಾನು ಸಾಗರದಿಂದ ಬಸ್ಸಿಗೆ ಬಂದು, ಅಲ್ಲಿಂದಲೇ ತಂದುಕೊಂಡಿರುತ್ತಿದ್ದ ಫ್ಲಾಸ್ಕಿ ನ ಟೀ ಕುಡಿದು ಬಿಸ್ಕತ್ ತಿನ್ನುತ್ತಿದ್ದ ಸಮಯ, ಗದ್ದೆ ತೋಟಗಳ ಮೇಲುಸ್ತುವಾರಿಗೆ ಹೋಗುವ ಅಜ್ಜನ ಬಾಲದಂತ ನಾನು, ಗದ್ದೆಯಲ್ಲಿ ಹೆದರಿಸುವ ಏಡಿ, ತೋಟದಲ್ಲಿರುತ್ತಿದ್ದ ಭಯಾನಕ ಆಕಾರದ ಜೇಡಗಳು, ಕಟ್ಟಿ ನಿಂತ ಗದ್ದೆಯ ಬದುವಲ್ಲಿ ಅಲ್ಲಲ್ಲಿ ಪುಟ್ಟ ಜಲಪಾತದಂತೆ ಹರಿಯುವ ನೀರು, ಈ ಹೊತ್ತಿನಲ್ಲಿ ಯಾವ್ಯಾವುದೋ ಗಿಡದ ನಡುವೆ ಅಡಗಿಕೊಂಡು ಬಿರಿದಿರುವ ಗೌರಿ ಹೂಗಳು, ಮರವ ತಬ್ಬಿ ಸೊಗಯಿಸುವ ಸೀತಾಳೆ ದಂಡೆಗಳು, ಅಜ್ಜನೆಂದರೆ ಭಕ್ತಿಯನ್ನೇ ತೋರುವ ನರಸ, ಉಡಾಫೆ ಕತೆ ಹೊಡೆಯುವ ಕೇಶವ.. ತೋಟದ ಹಾಳಿಗಳ ಮಧ್ಯೆ ಅಲ್ಲಲ್ಲಿ ಹರಿಯುವ ತೋಡುಗಳು ಎಲ್ಲ ಒಟ್ಟೊಟ್ಟಿಗೆ ನೆನಪಾದವು. ಅಜ್ಜನಿಲ್ಲ ಅಂತ ಬೇಸರಿಸಿ ಕಣ್ಣೀರಿಡಲೋ ಅಥವಾ ಸುತ್ತೆಲ್ಲ ಕಾಣುವ ಈ ಚಂದ ಸಂಗತಿಗಳ ಪ್ರತಿ ಹೊರಳಲ್ಲೂ ಹೊಳೆವ ಅವನ ನೆನಪನ್ನ ನೇವರಿಸಿ ಮುದ್ದಾಡಲೋ?! ಈ ಎಲ್ಲ ಸಂಗತಿಗಳನ್ನ ನನ್ನ ಮಡಿಲಿಗಿಟ್ಟು, ಕಣ್ಣು ನೋಡಲು ಒಂದು ವಿಶಾಲ ಆಕಾಶವನ್ನು ಕೊಟ್ಟ ಅವನಿಗೆ ನನ್ನ ಪ್ರೀತಿಯ ನಮನ.

ಅತ್ತೆ ಮಾಡಿಕೊಟ್ಟ ಟೀ ಕುಡಿದು ಹಾಗೇ ಗದ್ದೆಯ ಕಡೆ ಹೊರಟೆವು. ಅಲ್ಲಿ ತೋಟವನ್ನಾಸಿ ಹೋಗುವಾಗ ಕಾಣಿಸಿತು - ಬ್ರಹ್ಮ ಕಪಾಲದ ಕಮರಿ.. ಚಿಕ್ಕವಳಿದ್ದ ನನ್ನನ್ನು ಅಜ್ಜ ಜೊತೆಗಿರಲಿ ಅಂತ ಕರೆದುಕೊಂಡು ಹೋಗುತ್ತಿದ್ದ ಹಳ್ಳಿಗೆ. ಆದರೆ ನನ್ನನ್ನು ಎತ್ತಿಕೊಳ್ಳಲಾಗುತ್ತಿರಲಿಲ್ಲ ಅವನಿಗೆ. ನನ್ನನ್ನ ನಡೆಸಿಕೊಂಡು ಏರುತಗ್ಗಿನ ಹಾದಿಯಲ್ಲಿ ಗದ್ದೆ ತೋಟ ಎಲ್ಲ ಹಾಯಬೇಕಲ್ಲ, ಅದಕ್ಕೊಂದು ಉಪಾಯ ಕಂಡುಹಿಡಿದಿದ್ದ. ಕತೆ ಹೇಳುವುದು. ಮನೆಯಿಂದ ಹೊರಡುವಾಗ ಒಂದು ಕತೆ ಶುರು ಮಾಡಿಬಿಡುವುದು. ಆಮೇಲೆ ದಾರಿಯುದ್ದಕ್ಕೂ ಅಲ್ಲಲ್ಲಿ ಇಷ್ಟಿಷ್ಟೇ ಕತೆ ಹೇಳುತ್ತ ಹೋಗುವುದು, ನಡು ನಡುವೆ ಅವನ ಕೆಲಸ, ಕೆಲಸದವರ ಜೊತೆ ಮಾತು, ಇತ್ಯಾದಿ. ನಾನು ಕಾಲುನೋವೆಂದು ನೆನಪು ಮಾಡಿದ ಕೂಡಲೆ ಅಜ್ಜ ನನಗೆ ಅಲ್ಲೆ ನಿಂತಿದ್ದ ಮರವನ್ನೋ, ಅದ್ಯಾವುದೋ ಹೂವನ್ನೋ, ದೂರದಲ್ಲೆಲ್ಲೋ ಕೇಳಿಬಂದ ಹಕ್ಕಿಗೊರಳನ್ನೋ ತೋರಿಸಿ/ಕೇಳಿಸಿ, ಅದನ್ನ ಅವನು ಹೇಳುತ್ತಿದ್ದ ಕತೆಯಲ್ಲಿ ಸೇರ್‍ಇಸಿ ಇದು ಅದೇ ಮರ, ಅವಳು ಮುಡಿಯುತ್ತಿದ್ದ ಹೂವು, ಆಗ ಹಾಡಿದ್ದ ಹಕ್ಕಿಯ ಸಂತತಿ ಹೀಗೆ ಕತೆ ಕಟ್ಟುತ್ತಿದ್ದ. ನಂಗೆ ಅಜ್ಜನ ಬರಿಯ ಕತೆಗಳೆಂದರೇ ಕಲ್ಪನೆಯ ಕುದುರೆ ಸವಾರಿಯ ಹಾಗೆ.. ಅದರ ಜೊತೆಗೆ ಜೀವಂತವಾಗಿ ಎದುರು ನಿಂತಿರುವ ಅಥವಾ ಕಾಣುವ ಯಾವುದೋ ಆ ಕತೆಯಲ್ಲಿದೆ ಅಂದರೆ ಡಬ್ಬಲ್ ಇಷ್ಟ. ಕಾಲುನೋವು ಮರೆತುಹೋಗುತ್ತಿತ್ತು. ಕಲ್ಪನೆಯ ಕುದುರೆಯ ನಾಗಾಲೋಟಾಕ್ಕೆ ರೆಕ್ಕೆಗಳ ಬಡಿತವೂ ಸೇರುತ್ತಿತ್ತು.. ಹೀಗೇ ಅವನು ಹೇಳಿದ ಕತೆಯೊಂದರ ಸನ್ನಿವೇಶ ನಾವು ನಮ್ಮ ತೋಟ ಹೊಕ್ಕುವಾಗ ಸಿಗುವ ಚಿಕ್ಕ ದರಿ. ಭೂಮಿ ಅಥವಾ ಮಣ್ಣ ಗುಡ್ಡ ಅಲ್ಲಲ್ಲಿ ಕುಸಿದು ಆಗಿರುವ ಪುಟ್ಟ ಪುಟ್ಟ ಹೊಂಡಗಳಿಗೆ ನಮ್ಮಲ್ಲಿ ದರೆ/ದರಿ ಅನ್ನುತ್ತಾರೆ. ಪ್ರತಿ ಮಳೆಗಾಲ ಬಂದಾಗಲು ಇದು ಸ್ವಲ್ಪ ಅಗಲವಾಗುವುದುಂಟು.. ಕುಸಿದ ಮಣ್ಣು ಮತ್ತಷ್ಟು ಕುಸಿದು.. ಇದನ್ನು ದಾಟಿ ಆಚೆಹೋಗಲು ಬಿದ್ದ ಅಡಿಕೆಮರಗಳನ್ನು ಕಡಿದುಸೇರಿಸಿ ಸೇತುವೆ ಮಾಡಿರುತ್ತಾರೆ. ಅದನ್ನು ನಮ್ಮ ಕಡೆ ಸಂಕ ಎಂದು ಕರೆಯುತ್ತಾರೆ.

ನಾವು ಈಗ ಪಟ್ಟಣದಲ್ಲಿ ಪೇಟೆಯಲ್ಲಿ ಸುರಕ್ಷಿತ ರಸ್ತೆ ಸೇತುವೆಗಳಲ್ಲಿ ಓಡಾಡುವವರಿಗೆ ಇದನ್ನು ನೋಡಿದರೆ ಗಾಬರಿಯಾಗಿ ಕಾಲಿಡಲು ಭಯವಾಗುತ್ತದೆ. ಆದರೆ ಇಲ್ಲೇ ಬೆಳೆದ ಜೀವಗಳು ಸುಮ್ಮನೆ ಸಪಾಟು ರಸ್ತೆಯಲ್ಲೇ ನಡೆದ ಹಾಗೆ ಸಹಜವಾಗಿ ದಾಟಿಹೋಗುತ್ತಾರೆ. ಅಂತಹ ಒಂದು ಸಂಕವನ್ನು ನಾನು ಅಜ್ಜನ ಕೈಹಿಡಿದು ದಾಟುತ್ತಿದ್ದೆ. ಆದರೆ ದಾಟುವಾಗೆಲ್ಲ ತುಂಬ ಭಯ. ಸಾಕಷ್ಟು ಉದ್ದ ಮತ್ತು ಆಳವಾಗಿದ್ದ ದರೆಯದು. ಅಜ್ಜ ತನ್ನ ಕಲ್ಪನೆಯನ್ನೆಲ್ಲ ಖರ್ಚು ಮಾಡಿ ತುಂಬ ಎಕ್ಸೈಟಿಂಗ್ ಆಗಿರುವ ಕತಾ ಸನ್ನಿವೇಶಗಳನ್ನು ಹೇಳುತ್ತಿದ್ದ. ನಾನು ಹೂಂಗುಡುತ್ತಾ ಭಯವಾದರೂ ಕತೆ ಕೇಳುತ್ತಾ ಹೇಗೆ ಹೇಗೋ ದಾಟುತ್ತಿದ್ದೆ. ಅಂತ ಒಂದು ಕತೆಯ ಸನ್ನಿವೇಶ ಇದು. ಬ್ರಹ್ಮ ಹತ್ಯಾದೋಷ ಹತ್ತಿದ ಶಿವನ ಕೈಗೆ ಅಂಟಿಕೊಂಡ ಬ್ರಹ್ಮಕಪಾಲವು ಅವನನ್ನು ಏನು ಮಾಡಲೂ ಬಿಡುತ್ತಿರಲಿಲ್ಲ. ಊಟ ಮಾಡಲು ಹೋದರೆ ಕಪಾಲವೇ ತಿಂದುಬಿಡುತ್ತಿತ್ತು, ಕೈಯಲ್ಲೇ ಇತ್ತಲ್ಲಾ, ನೀರು ಕುಡಿಯಲು ಹೋದರೂ ತಾನೇ ಕುಡಿಯುತ್ತಿತ್ತು, ಒಟ್ಟಲ್ಲಿ ಯಾವ ಕೆಲಸವನ್ನೂ ಮಾಡಗೊಡುತ್ತಿರಲಿಲ್ಲ. ಒಂದೇ ಪರಿಹಾರವೆಂದರೆ ಆ ಕಪಾಲವನ್ನು ಇನ್ನೊಬ್ಬರ ಕೈಗೆ ಅವರು ಒಪ್ಪಿದರೆ ದಾಟಿಸುವುದು, ಆದರೆ ಅದಕ್ಕೆ ಯಾರೂ ಸಿಗಲಿಲ್ಲ. ಯಾರು ತಾನೆ ಹೀಗೆ ಜೀವಹಿಂಡುವ ಕಪಾಲವನ್ನು ಇಷ್ಟಪಟ್ಟು ತಗೋತಾರೆ? ಹೀಗೆ ಕಷ್ಟಪಡುತ್ತಿರುವ ಶಿವನ ಗೋಳು ನೀಗಿಸಲು ವಿಷ್ಣು ಒಂದು ಸಕ್ಕತ್ತಾಗಿರುವ ಉಪಾಯ ಮಾಡಿದ. ಒಂದು ದೊಡ್ಡ ಪ್ರಪಾತದ ಆಚೆ ಈಚೆ ವಿಷ್ಣು ಶಿವ ಇಬ್ಬರೂ ನಿಂತುಕೊಂಡರು. ವಿಷ್ಣುವಿನ ಕೈಗೆ ಶಿವ ಕಪಾಲವನ್ನು ದಾಟಿಸಬೇಕಿತ್ತು, ಶಿವ ಕೈ ಮುಂದೆ ನೀಡಿ ಕಪಾಲವನ್ನು ಕಳಿಸಲು ರೆಡಿಯಾದರೆ, ವಿಷ್ಣುವೂ ಕೈ ಮುಂದೆ ನೀಡಿ ಕಪಾಲವನ್ನು ಪಡೆಯಲು ರೆಡಿಯಾಗಿದ್ದನು. ಇಬ್ಬರ ಮಧ್ಯೆ ಪ್ರಪಾತ. ಶಿವನ ಕೈಯನ್ನ ಕಪಾಲ ಬಿಟ್ಟು ಇನ್ನೇನು ವಿಷ್ಣುವಿನ ಕೈಯನ್ನು ಹಿಡಿಯಬೇಕು, ಕ್ಷಣಾರ್ಧದಲ್ಲಿ ವಿಷ್ಣು ಕೈ ವಾಪಸ್ ತಗೊಂಡ್ ಬಿಡುತ್ತಾನೆ. ನೆಗೆಯುತ್ತಿರುವ ಬ್ರಹ್ಮಕಪಾಲ ಆಳವಾದ ಕಮರಿಗೆ ಬೀಳುತ್ತದೆ. ಅದು ಎಷ್ಟು ದೊಡ್ಡದು ಮತ್ತು ಆಳ ಅಂದರೆ ಕಪಾಲಕ್ಕೆ ಇನ್ನು ಮೇಲೆ ಬರಲಾಗುವುದಿಲ್ಲ. ಅದು ಎಷ್ಟು ದೊಡ್ಡದು ಆಳ ಅಂದರೆ ನಾವೀಗ ದಾಟುತ್ತಿದೇವಲ್ಲ ಇದೇ ದರಿಯೇ.. ಮತ್ತು ನಾನು ಈಗ ಬೇಗಬೇಗ ಸಂಕ ದಾಟದೇ ಇದ್ದರೆ ಅಲ್ಲೇ ಕೆಳಾಗೆ ತೆವಳುತ್ತಿರುವ ಬ್ರಹ್ಮಕಪಾಲ ಯಾರು ಸಿಗುತ್ತಾರೋ ಅವರ ಕೈ ಹಿಡಿದುಕೊಂಡುಬಿಡುತ್ತದೆ. ಹಾಗೆಲ್ಲ ನಿಧಾನವಾಗಿ ದಾಟುವುದು ನಾನೇ ಆಗಿದ್ದರಿಂದ ನಾನೇ ಅದರ ಈಸಿ ಟಾರ್ಗೆಟ್. ನಂಗೆ ಸಿಕ್ಕಾಪಟ್ಟೆ ಹೆದರಿಕೆ ಮತ್ತು ಕುತೂಹಲ. ಅಷ್ಟು ಹೆದರಿಕೆಯಲ್ಲಿ ದಾಟುವ ನಾನು, ಅಲ್ಲಿ ಕೆಳಗೆ ತೆವಳುತ್ತಿರುವ ಕಪಾಲ ಕಾಣುತ್ತದೆಯಾ ಅಂತ ನೋಡಲು ಮರೆಯುತ್ತಿರಲಿಲ್ಲ. ಸಂಕ ದಾಟಿದ ಮೇಲೆ ಸ್ವಲ್ಪ ದೂರ ಅದೇ ದರೆಯ ಗುಂಟ ಸಾಗಬೇಕು. ಕಾಲು ದಾರಿಯಲ್ಲಿದ್ದರೂ ನನ್ನ ಕಣ್ಣು ದರೆಯೊಳಗಿರುತ್ತಿತ್ತು, ಬ್ರಹ್ಮ ಕಪಾಲ ಹುಡುಕುತ್ತಾ. ಒಬ್ಬಳೇ ಅಲೆಯಲು ಹೊರಡುವ ನನ್ನನ್ನು ಈ ಜಾಗಕ್ಕೆಲ್ಲ ಒಬ್ಬಳೆ ಬರದಿರಲು ಅಜ್ಜ ಉಪಯೋಗಿಸುವ ರಾಮಬಾಣವೂ ಕೂಡ ಅದೇ ಬ್ರಹ್ಮಕಪಾಲವೇ ಆಗಿತ್ತು ಎಷ್ಟೋ ವರುಷಗಳವರೆಗೆ.

ನಾನು ಸ್ವಲ್ಪ ದೊಡ್ಡವಳಾಗಿ ಆ ಕತೆಯೊಳಗಿನ ಕತೆ ಅರ್ಥವಾದ ಮೇಲೆ, ಇನ್ನೂ ಪುಟ್ಟವನಿದ್ದ ತಮ್ಮನನ್ನು ಅಲ್ಲೆಲ್ಲ ಸುತ್ತಾಡಿಸಿ ಈ ಕತೆ ಹೇಳಿ ಹೆದರಿಸಿದ್ದಿದೆ. ಹೆದರಿಸಿ ಅಭಯ ತೋರಿ ಅವನ ಕೈಯಲ್ಲಿದ್ದ ಕಾಡು ಹಣ್ಣು ಹೂವು ಗಿಟ್ಟಿಸಿಕೊಂಡಿದ್ದಿದೆ. ಆಮೇಲೆ ಇಬ್ಬರೂ ಇದನ್ನೆಲ್ಲ ಜೋಕು ಮಾಡಿ ನಗುವಷ್ಟು ದೊಡ್ಡವರಾದ ಮೇಲೆ ಅಲ್ಲಿ ಹೋದಾಗ ಪ್ರತಿಬಾರಿಯೂ ಬ್ರಹ್ಮಕಪಾಲದ ಕಮರಿಯನ್ನು ಸುಮ್ಮನೆ ಹೋಗಿ ಹಾದುಬಂದಿದ್ದಿದೆ. ಅಜ್ಜನ ತಿಥಿಗೆ ಹೋದರೆ ನನಗೆ ಗೊತ್ತು ಅಜ್ಜ ಮನೆಯಂಗಳದ ನೈವೇದ್ಯಕ್ಕೆ ಬರುವುದಿಲ್ಲ.. ಅಲ್ಲಿರುತ್ತಾನೆ ಬ್ರಹ್ಮಕಪಾಲದ ಸಂಕ ದಾಟಲು ಬರುವ ಮೊಮ್ಮಕ್ಕಳ ಕೈಹಿಡಿದು ಕತೆ ಹೇಳಿ ದಾಟಿಸಲು. ಅದಕ್ಕೆ ನಾನು ಅಲ್ಲೆ ಮರಗಳ ನೆರಳಲ್ಲಿ ಸಂಕದ ಆಸುಪಾಸು, ತೋಟ ಸುತ್ತುತ್ತಿರುತ್ತೇನೆ, ಅಜ್ಜನ ಕೈ ಬಳಸಲು.

ಈ ಎಲ್ಲ ನೆನಪನ್ನು ಹೊತ್ತು ಸಂಕ ದಾಟುವಾಗ ಈ ಸಲದ ಮಳೆಗೆ ತುಂಬ ಮಣ್ಣು ಕುಸಿದು ದರೆ ಅಗಲವಾದದ್ದು ಕಾಣಿಸಿತು. ಸಂಕ ದೊಡ್ಡದು ಮಾಡಲೇ ಬೇಕಿರಲಿಲ್ಲ. ದರೆಯ ಸುತ್ತಿ ಬಳಸಿ ಹಾಯುವ ದಾರಿಯನ್ನೇ ಎಲ್ಲರೂ ಉಪಯೋಗಿಸಿ ಸಂಕ ಹ್ಯಾಪುಮೋರೆ ಹಾಕಿಕೊಂಡಿತ್ತು.

ಹೀಗೇ ಏನೇನೋ ನೆನಪು ಮಾಡಿಕೊಳ್ಳುತ್ತಾ ಅಲ್ಲೆಲ್ಲ ತಿರುಗಿ ಮನೆಗೆ ವಾಪಸಾಗುವಾಗ ಅಲ್ಲೊಂದಿಷ್ಟು ಕಡು ಹಸಿರಿನ ಗಿಡಗಳ ನಡುವೆ ದಟ್ಟ ಹಳದಿಕೆಂಪಿನ ಡಿಸೈನಿನಲ್ಲಿ ಚೆಲುವಾಗಿ ಅರಳಿನಿಂತ ಗೌರಿಹೂಗಳು ಕಾಣಿಸಿ ಅಜ್ಜನನ್ನೇ ನೋಡಿದ ಖುಷಿಯಾಯಿತು.

20 comments:

mysoorininda said...

ಪ್ರಿಯ ಸಿಂಧು,
ಎಲ್ಲ್ದದರ ಕುರಿತು ಎಲ್ಲರಿಗೂ ಎಷ್ಟು ಪ್ರೀತಿ ಉಕ್ಕುವ ಹಾಗೆ ಬರೆದಿದ್ದೀರಿ.ಸಾವೆಂಬ ಬ್ರಹ್ಮಕಪಾಲ ಮತ್ತು ಸಾಯಲು ಸಾಧ್ಯವೇ ಇಲ್ಲದ ನೆನಪುಗಳು.
ನನಗೆ ತುಂಬಾ ಇಷ್ಟವಾಯ್ತು.ನೀವಂತೂ ಬರೀತಾನೇ ಇರ್ಬೇಕು
ರಶೀದ್.

ರಾಜೇಶ್ ನಾಯ್ಕ said...

ಸುಂದರ ನೆನಪುಗಳನ್ನು ನೇಯ್ದ ಸುಂದರ ಬರಹ. ಅಜ್ಜಿಯ ಪ್ಲೇನೇರುವಾಸೆ ನನ್ನದೂ ಕೂಡಾ! ಇಂತಹ ಬರಹಗಳನ್ನು ಓದಿದ್ದಾಗ ಆ ಗದ್ದೆ, ಬಯಲು, ತೋಟಗಳಲ್ಲಿ ಓಡಾಡಿದ ನೆನಪುಗಳು ಮರುಕಳಿಸುತ್ತವೆ. ಓದಲು ಉತ್ತಮ ಲೇಖನ ಕೊಟ್ಟಿದ್ದಕ್ಕೆ ವಂದನೆಗಳು.

Harisha - ಹರೀಶ said...

ಸಾಗರದ ಕಡೆ ಹಲವು (ಸಾಮಾನ್ಯವಾಗಿ ೩ ರಿಂದ ೫) ಅಡಿಕೆ ಎಳೆಗಳ ಸಂಕ ಮಾಡಿರುತ್ತಾರೆ. ಆದರೆ ಶಿರಸಿಯ ಕೆಲವು ಕಡೆ ಕೇವಲ ಒಂದೇ ಎಳೆಯ ಸಂಕವೂ ಉಂಟು... ಅದನ್ನು ನೋಡಿದಾಗ ಸಾಗರದ ಸಂಕ ದಾಟಿದವರಿಗೂ ಭಯವಾಗದೇ ಇರದು

ವಿಕ್ರಮ ಹತ್ವಾರ said...

ಸಿಂಧು,

ಊರು, ನಾಸ್ಟಾಲ್ಜಿಯಾ, ಬಾಲ್ಯವೇ ಹಾಗೆ. ಯಾರಿಗಾದರೂ ಎಷ್ಟು ಮೊಗೆದರೂ ಮಧುರವೇ. ಅದರಲ್ಲೂ ಮಲೆನಾಡು, ಕರಾವಳಿ ಕಡೆಯಾದರೆ ಕೇಳಬೇಕೇ?.

ರಂಜನಾ ಹೆಗ್ಡೆ said...

ಸಿಂಧು ಅಕ್ಕಾ,
ತುಂಬಾ ಚನ್ನಾಗಿ ಬರದ್ದೆ ಯಾವಾಗಿನಂತೆ. ಸಾಗರದ ನೆನಪು ಕಾಡುವ ತರಹ. mostly ನೀನು ಹೇಳಿದ ಕೆರೆ ಗಣಪತಿ ಕೆರೆ ಇರಬಹುದು ಅಲ್ದಾ. ತುಂಬಾ ಮಿಸ್ ಮಾಡಿಕೊಳ್ಳತಾ ಇದಿನಿ ಸಾಗರ ನಾ.

ಅಜ್ಜನ ಪ್ರೀತಿ ಬಗ್ಗೆ ಬರದಿದ್ದು ಸಕತ್ ಆಗಿ ಇದೆ.
ನನ್ನಷ್ಟು ಅಜ್ಜನ ಪ್ರೀತಿ ಉಂಡವರು ಯಾರು ಇಲ್ಲವೇನೊ. ಅಷ್ಟೊಂದು ಪ್ರೀತಿ ಆಸರೆ ಕೊಟ್ಟಿದ್ದರು ನನ್ನ ಅಜ್ಜ.ಇವತ್ತು ಕೇವಲ ಅಜ್ಜನ ನೆನಪು ಮಾತ್ರ ನನ್ನಲ್ಲಿ ಉಳಿದಿರುವುದು. ಊರಿಗೆ ಹೋದಾಗ ಎಲ್ಲಾ ಸಂತೋಷಗಳ ನಡುವೆಯೂ ಅಜ್ಜನ ಇಲ್ಲದಿರುವಿಕೆ ನನ್ನನ್ನ ಕಾಡುತ್ತೆ.

ತುಂಬಾ ಥ್ಯಾಂಕ್ಸ್. ಅಕ್ಕಾ ಇಂಥಾ ಒಂದು ಬರಹ ಬರೆದ ನಿನ್ನ ಕೈಗಳಿಗೆ ನನ್ನದೊಂದು ಸಿಹಿ ಮುತ್ತು.

ಅನಂತ said...

!!!! ;)

ಶ್ರೀನಿಧಿ.ಡಿ.ಎಸ್ said...

ಅಕ್ಕಾ,
ಸೂಪರ್ ಬರದ್ದೆ ನೋಡು:) ಹೀಂಗೆಲ್ಲ ಬರಿಯಲೆ ಐಡಿಯಾ ಹ್ಯಾಂಗೆ ಬತ್ತೇ ಮಾರಾಯ್ತಿ ನಿಂಗೆ?:)

Seema S. Hegde said...

ಒಳ್ಳೇ ಬರಹ. ಊರ ಕಡೆಯ ನೆನೆಪು ಇನ್ನೊಮ್ಮೆ ಹಸಿರಾಯಿತು.

Anonymous said...

ಬಹಳ ಆಪ್ತವಾಗಿ ಬರೀತೀರಿ. ಬರೆಯುತ್ತಿರಿ.

dinesh said...

ಸಿಂಧು ಅವರೇ ... ಏನ್ ಚೆನ್ನಾಗಿ ಬರೀತಿರಾ..! ನಿಮ್ಮ ಬರಹ ಓದಿದಾಗೆಲ್ಲಾ ...ಅಲ್ಲಿರೋ ನಮ್ಮೂರಿಗೆ ಹೋಗೊ ಯೋಚನೆ ಬರುತ್ತೆ... ಥ್ಯಾಂಕ್ಸ್ ಕಣ್ರಿ...

chetana said...

ಓದಿ ಮುಗಿಸೋ ಹೊತ್ತಿಗೆ ಮನಸೆಲ್ಲ ಒದ್ದೊದ್ದೆ. ಮಳೆಯಲ್ಲಿ ಮಿಂದ ಅನುಭವ.
ಹಳೆ ನೆನಪುಗಳು ಉಕ್ಕಿದವು.
ಥ್ಯಾಂಕ್ಸ್ ಸಿಂಧೂ.

ಪ್ರೀತಿಯಿಂದ,
ಚೇತನಾ

chethan said...

ತುಂಬಾ ತುಂಬಾ ಇಷ್ಟವಾಯ್ತು. ಮುಂದಿನ ಪೋಸ್ಟ್ ಯವಾಗ?

Anonymous said...

yaakree maDam sumnaadri? kelavu divasada nantra bande illige, enu hosathu barede illa!!
SHREE

ಸಿಂಧು sindhu said...

ಪ್ರಿಯ ರಶೀದ್,

ಪ್ರೀತಿ ಮತ್ತು ನೆನಪುಗಳೇ ಹಾಗಲ್ಲವೇ? ನಿಮಗೆ ಇಷ್ಟವಾಗಿದ್ದು ನನಗೆ ತುಂಬ ಖುಷೀ..

ರಾಜೇಶ್,
ಹೌದು ರಾಜೇಶ್, ಊರಿನ ಸೊಗಡೇ ಅದು, ಒಂದೊಂದು ನೆನಪೂ ಭಾವುಕ ಮನಸ್ಸನ್ನ ಹೊಸಹೊಸ ನೇಯ್ಗೆಯಲ್ಲಿ ಅದ್ದಿ ಚಿತ್ತಾರಗೊಳಿಸುತ್ತದೆ.

ಹರೀಶ್,
ಹೌದು, ನಮ್ಮೂರಲ್ಲೂ ಒಂದೇ ಅಡಿಕೆಮರದ ಉದ್ದುದ್ದ ಸಂಕಗಳುಂಟು. ನಂಗೆ ಅದನ್ನು ದಾಟುವುದು ಎಷ್ಟು ಭಯವೆಂದರೆ, ಬರೆಯಲಿಕ್ಕೂ ಭಯವಾಗಿ ಬಿಟ್ಟಿದೆ.. :)

ವಿಕ್ರಮ,
ಎಷ್ಟು ಮೊಗೆದರೂ ಮಧುರವೇ..

ರಂಜು,
ಹೌದು ಅದು ಗಣಪತಿ ಕೆರೆಯೇ.. ಅಜ್ಜನ ಬಗ್ಗೆ ಏನು ಹೇಳಲಿ.?!
ನಿನ್ನ ಸಿಹಿಮುತ್ತು, ಕೈಮೇಲೇರಿ ಸಾಗಿ ಈಗ ಮನದ ಮೆತ್ತೆಯಲ್ಲಿ ಬೀಜವಾಗಿ ಉದುರಿ, ಅಲ್ಲೊಂದು ನಗೆಹೂವಿನ ಬಳ್ಳಿಯ ಪುಟ್ಟ ಮೊಳಕೆ..

ಅನಂತ,
! :)

ನಿಧಿ,
ಥ್ಯಾಂಕ್ಸ್ ಕಣಲೋ.. ಆಗ ಈಗ ಟೈಮ್ ಮಾಡ್ಕ್ಯಂಡು ಬ್ಲಾಗ್ ಓದ್ತ್ಯಲಾ.. ಇನ್ನೊಂಚೂರು ಟೈಮ್ ಹೊಂದಿಸ್ಕ್ಯಂಡು ನಿನ್ ಬ್ಲಾಗಲ್ಲಿ ಬರದ್ ಬಿಡು, ಸೂಪರೋಸೂಪರ್ ಬರಹಗಳು ಬತ್ತು, ನಂಗೊತ್ತಿದ್ದು..

ಸೀಮಾ,
ಹಸಿರ ಊರಿನ ನೆನಪು ಸದಾ ಹಸಿರಾಗಿರಲಿ,

ಚಕೋರ,
:) ಧನ್ಯವಾದಗಳು.

ದಿನೇಶ್,
ಯೋಚನೆ ಬಂದ್ ಕೂಡ್ಲೆ ಟೈಮ್ ಕಳೀಬಾರದು, ತಕ್ಷಣ ಹೊರಟ್ ಹೋಗ್ ಬಿಡಬೇಕು. ಒಂದಿನದ ದಿಢೀರ್ ಬೇಟಿ ಕೂಡಾ ಮನಸ್ಸನ್ನ ತುಂಬಿ ಬಿಡುತ್ತದೆ.

ಚೇತನಾ,
ಬರೆವ ಮೊದಲು ಒದ್ದೆಯಾದ ನನ್ನ ಮಾರ್ದವ ಭಾವಗಳು ನಿಮ್ಮ ಭಾವುಕ ಮನಸ್ಸಿಗಿಳಿದು ಒದ್ದೆಯಾಗಿಸಿದೆ.. ಧನ್ಯವಾದಗಳು.

ಚೇತನ್,
:) ಗೊತ್ತಿಲ್ಲ.. ಆದರೆ ಬಲುಬೇಗ..

ಶ್ರೀ,
ಆರ್ಟ್ ಆಫ್ ಲಿವಿಂಗ್ ಕಲೀಬೇಕಿದೆ, ಸಿಕ್ಕಾಪಟ್ಟೆ ಕೆಲಸವನ್ನ ಮ್ಯಾನೇಜ್ ಮಾಡಕ್ಕೆ ಕಷ್ಟವಾಗ್ ಬಿಟ್ಟಿದೆ, ಮನಸ್ಸಿನ ಗೋಜಲಿನಷ್ಟೇ ಸುತ್ತಲಿನ ಗೋಜಲೂ ಕಾಂಪ್ಲೆಕ್ಸಾಗಿಬಿಟ್ಟಿದೆ..

ಆಮೇಲೆ, ಸಜಂಕಿಲದ ಬಸ್ ಟಿಕೇಟ್ ಬಂತಾ? :D

SuZ said...
This comment has been removed by the author.
SuZ said...

ತುಂಬ ಚೆನ್ನಾಗಿದೆ ಬ್ಲಾಗ್, ಓದ್ತಾ ಹಂಗೆ ಮಲೆನಾಡಿಗೆ ನಾನ್ ಹೋಗ್ಬಿಟ್ಟೆ...ನಂಗೆ ನನ್ನ್ ಮುತ್ತಜ್ಜಿಯ ಕತೆಗಳು ನೆನಪಿಗೆ ಬಂದವು...
'ಇಲ್ಲಾ ಮನೆಯಲ್ಲಿ ಬೆಳಿಗ್ಗೆ ತಿಂಡಿ, ಸ್ನಾನ ಚಾ ಆಗಿ ಅಡಿಕೆ ಕುಟ್ಟಿಕೊಂಡು ಎಲೆ ನೀವಿ ಸುಣ್ಣ ಹಚ್ಚುವಾಗ ಗೊತ್ತಾಗದಂಗೆ ಜೀವ ಹೋಗುವುದೋ' - ಈ ಸಾಲಂತೂ ಔಟ್ ಆಫ್ ದಿಸ್ ವರ್ಲ್ಡ್ :)

jagadeesh sampalli said...

Hi
It's a beautiful recollection of our past things. Many of us have the same nastolgic experiences, but all are as capable as you to put it in words. Expecially, people from Malnad and coastal region have such kind of experiences. Its really wonderful.

Bye
Jagadeesh Sampalli

Anonymous said...

ಏನು ಸಿಂಧು, ಬಹಳ ದಿನಗಳಿಂದ ಏನೂ ಅಪ್ ಡೆಟ ಮಾಡೇ ಇಲ್ಲ ?

Anonymous said...

ಪ್ರೀತಿಯ ಸಿಂಧು,
ನೆನಪು ಸುರಗಿ ಹೂವಿನ ಹಾಗೆ. ಹೂವು ಬಾಡಿ ಒಣಗಿದರೂ ಅದರ ಪರಿಮಳ ಮಾತ್ರ ಹಾಗೇ ಇರುತ್ತದೆ.
ಪ್ರೀತಿ ಗೆಜ್ಜೆಯ ಹಾಗೆ. ಹೊಳಪು ಕಳೆದುಕೊಂಡು, ಕಾಲಿಂದ ಕಳಚಿಬಿದ್ದರೂ ನಾದ ಹಾಗೇ ಇರುತ್ತದೆ.
ನೆನಪು ನಾದದ ಹಾಗೆ. ಹಾಡುವವರು ಎಲ್ಲಿಸಿ ಎಷ್ಟೋ ಕಾಲವಾದರೂ ಕಿವಿಯಲ್ಲಿ ನಿನದಿಸುತ್ತಲೇ ಇರುತ್ತದೆ.
ನೆನಪು ನಿಮ್ಮ ಈ ಲೇಖನದ ಹಾಗೆ
ಓದಿ ಎಷ್ಟೇ ದಿನಗಳಾದರೂ ಮಾತು ಮನಸ್ಸಿನಲ್ಲಿ
ಹಾಗೇ ಉಳಿದುಬಿಡುತ್ತದೆ.
-ಜೋಗಿ

ಬೆಂಗಳೂರು ರಘು said...

All I can say, one of the best (if not the best)blog ever read. Sindhu, Keep up the good work.
thanks