Thursday, June 21, 2007

"ಬೇಡವಾದ ಕನಸು"

ಬೆಚ್ಚಗಿರಲೊಂದು ಗೂಡು,

ನಚ್ಚಗಿರಲೊಂದು ಹಾಡು,

ಕಣ್ತೆರೆದಾಗೊಂದು ಗಾನ,

ಕಣ್ಮುಚ್ಚುವಾಗಿನ್ನೊಂದೇ ತಾನ,

ನಡುವೆ ಅರಿವಿನ ಸೀಮೆಯಾಚೆಗಿನ

ಯಾವುದೋ ತನನ;

ನನ್ನ ತಲೆಯಾನಿಸಲೆಂದೇ

ಹರವಿ ನಿಂತ ನಿನ್ನೆದೆ,

ನನ್ನ ಹಿಡಿದಿಡಲೆಂದೇ

ಬಳಸಿ ನಿಂದ ನಿನ್ನ ಭದ್ರಬಾಹು .....


ಉಹ್... ಇವೆಲ್ಲ

ನಾನು ಕಂಡ ಕನಸಿನ

ಸ್ಕೆಚ್ಚೇ ಹೌದು

ಈ ಚಂದದ ಗೆರೆಗಳಿಗೆ

ಆ ರಾಡಿ ಬಣ್ಣಗಳನ್ನ

ಎರಚಿದ್ಯಾರು...? ಯಾಕೆ..?


ಗೂಡಿಗೊಂದು ಬೀಗ,

ಹಾಡಿಗೆ ಸೆಟ್ ಮಾಡಿಟ್ಟ ಫ್ರೀಕ್ವೆನ್ಸಿ,

ರಾಗಗಳಿಗೆ ರಿಮೋಟು,

ಮನಸಿನಂಗಳಕ್ಕೆ ಭದ್ರ ಬೇಲಿ,

ಬಳಸಿನಿಂದ ಕೈಗಳಲ್ಲಿ ರೇಶಿಮೆ ಸರಪಳಿ ...


ಇದೆಲ್ಲ ಯಾವಾಗಾಯ್ತು..?

ಹೇಗೆ...?


ಹುಂ, ಈ ಎಲ್ಲದರ

ಮಧ್ಯೆ

ನಾನು ಇನ್ನೊಂದು

ಹೊಸದೇ ಕನಸಿಗೆ ಅಡಿಯಿಡುವವಳಿದ್ದೆ;

ಹೊಸ ಮೊಳಕೆಗೆ

ನೀರೆರೆಯುವವಳಿದ್ದೆ;

ಪುಟ್ಟದೊಂದು ಲಾಲಿಹಾಡಿಗೆ

ರಾಗ ಸಂಯೋಜಿಸುವವಳಿದ್ದೆ.... ....;


ಆದ್ರೆ ಇದೇನು?


ನೀನು ಯಾರೋ ಆಗಿ,

ಸದಾ ಕಚಗುಳಿಯಿಟ್ಟ

ನಿನ್ನ ಕಣ್ಣು ಚೂರಿಯಾಗಿ,

ಸವಿಮಾತುಗಳನ್ನುಣಿಸಿದ ನಿನ್ನ ನಾಲಗೆ

ಕತ್ತಿಯಲುಗಾಗಿ,


ಓಹ್_

ನನ್ನ ಕನಸು

ಚೆದುರಿಹೋಯಿತಲ್ಲಾ . ..

ಮೊಳಕೆ ಅಪ್ಪಚ್ಚಿ. ..

ರಾಗ ಚೆಲ್ಲಾಪಿಲ್ಲಿ.....


ಅದು ಹ್ಯಾಗೋ


ಜೀವ ಕಳಚದೆ ಉಳಿದಿದೆ ಇನ್ನೂ-

ಈ ಸಿಕ್ಕಿನಲ್ಲಿ,

ಬೇಡವಾದ ಕನಸಿನಲ್ಲಿ...


17-08-2001

5 comments:

ಸುಪ್ತದೀಪ್ತಿ suptadeepti said...

ಬದುಕಿನ ಇನ್ನೊಂದು ಮುಖ...! ಕ್ಲಪ್ತ ಪದಗಳಲ್ಲ್ಲಿ ಒಪ್ಪವಾಗಿ ಚಿತ್ರಿಸಿದ್ದೀರಿ.

Anonymous said...

ಜೀವ ಕಳಚದೆ ಉಳಿದಿದೆ ಇನ್ನೂ-

ಈ ಸಿಕ್ಕಿನಲ್ಲಿ,

ಬೇಡವಾದ ಕನಸಿನಲ್ಲಿ...

ಸೊಗಸಾದ ಸಾಲು. ಇಷ್ಟವಾಯ್ತು ಇಡೀ ಪದ್ಯ

ಜೋಗಿ

VENU VINOD said...

ಛೇ, ಒಳ್ಳೆ ಕನಸು ಕಾಣ್ತಿದ್ದಾಗ ಬಂದ ಆ ಕತ್ತಿ ಅಲಗಿನ ನಾಲಿಗೆಯಾತನನ್ನು ಕತ್ತರಿಸಬೇಕಿತ್ತು

mysoorininda said...
This comment has been removed by the author.
Anonymous said...

Hi,

Nimma blog galu bahala chennagi ide... Nimma kategalige tumba thanks!!

-Suma Udupa.K.