Monday, November 3, 2008
ಸ್ಪಂದನೆ..
ಕೆಲಸ ಮತ್ತು ವೈಯಕ್ತಿಕ ಒತ್ತಡಗಳಿಂದ ಪ್ರತಿಸ್ಪಂದನೆ, ಬ್ಲಾಗ್ ಬರಹ ಮತ್ತು ಓದು ಎರಡೂ ತುಂಬ ನಿಧಾನವಾಗಿಬಿಟ್ಟಿದೆ.
ನನ್ನ ಲಹರಿಗೆ (ಹಿಂದಿನ ಬರಹ/ಕವಿತೆ) ಸ್ಪಂದಿಸಿದವರಲ್ಲಿ ಹೆಚ್ಚಿನವರು ನಾನು ಬ್ಲಾಗ್ ಮುಚ್ಚುತ್ತಿದ್ದೇನಾಗಿ ತಿಳಿದುಕೊಂಡಿದ್ದೀರಿ. ಆ ಅರ್ಥ ಬರುವ ಹಾಗೆ ಬರೆದಿದ್ದರೆ ಕ್ಷಮಿಸಿ.
ನಾನು ಬರೆಯುವುದು ನನ್ನ ಮನದ ಮೇಲೆ ಹಾಯುವ ಎಷ್ಟೋ ಕಾಲದ ಮತ್ತು ದಿನದಿನವೂ ಘಟಿಸಿದ ನೆನಪುಗಳನ್ನ ನೇವರಿಸಿದ ಭಾವಲಹರಿಯನ್ನ. ಓದಿದ ನೀವೂ ಇದನ್ನ ಪ್ರೀತಿಯಿಂದ ಆಸ್ಥೆಯಿಂದ ನೇವರಿಸಿದ್ದೀರಿ ಪ್ರತಿಸ್ಪಂದಿಸಿದ್ದೀರಿ. ಎಷ್ಟೋ ಬಾರಿ ಈ ಎಲ್ಲವೂ ನಾನಂದುಕೊಂಡ ಆಯಾಮವನ್ನು ದಾಟಿ ಇನ್ನೆಲ್ಲೋ ಸಾಗಿವೆ. ಬಿಟ್ಟ ಬಾಣದ ಗತಿಯಲ್ಲಿ ಬರೆದ ಮಾತುಗಳು ನನ್ನ ಪರಿಧಿ ಮೀರಿ ಸಾಗುತ್ತವೆ ನಾಟುತ್ತವೆ. ಇದು ಎಲ್ಲರ ಬರಹದ ಮಿತಿ ಮತ್ತು ಸಾಮರ್ಥ್ಯ. ಹೀಗಾದಾಗ ಭಾವುಕ ಮನಸ್ಸು ಗೊಂದಲದಲ್ಲಿ ಬೀಳುತ್ತದೆ. ತಾರ್ಕಿಕ ನೆಲೆಗಟ್ಟು ಗಟ್ಟಿಯಿರದ ಭಾವಸಂವೇದನೆಗಳು ದಿಕ್ಕೆಡುತ್ತವೆ. ಹೀಗಿದ್ದೂ ತಡವರಿಸಿಕೊಂಡೂ ಭಾವಲಹರಿಗಳು ಹರಿಯುತ್ತಲೇ ಇರುತ್ತವೆ. ಇದರ ಜೊತೆಗೆ ನನ್ನ ಕೆಲಸದ ಒತ್ತಡ, ವೈಯಕ್ತಿಕ ಒತ್ತಡಗಳು ಇನ್ನೊಂದಿಷ್ಟು ಒಜ್ಜೆ ಹೇರಿವೆ.
ಬರೆಯದೆ ಕೂರಬಹುದಾದ ಹುಟ್ಟಲ್ಲ ನನ್ನದು. ಬರೆಯಲು ಬಿಂಕ ಬಿಗುಮಾನವೆರಡೂ ಇಲ್ಲ. ಬರೆದಾಗ ಇಲ್ಲಿ ಖಂಡಿತ ಹಂಚಿಕೊಳ್ಳುತ್ತೇನೆ. ನಿಮ್ಮ ಅನಿಸಿಕೆಗಳಲ್ಲಿ ಕಲಿಯಬಯಸುತ್ತೇನೆ.
ಮೊದಲೆ ಹೇಳಿದ ಹಾಗೆ ಇದು - ಆಶೆಯೆಂಬ ತಳ ಒಡೆದ ದೋಣಿಯ ದೂರ ತೀರ ಯಾನ. ಎಲ್ಲೂ ಮುಳುಗಬಹುದು. ತೇಲಿ ಇನ್ನೆಲ್ಲೋ ಸಾಗಲೂ ಬಹುದು. ಇದು ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ.. ಎಂಬ ಸಾಲು ದೋಣಿಯ ಹುಟ್ಟಾಗಿರುವುದು ನನ್ನ ಯಾನದ ಅದೃಷ್ಟವಿರಬಹುದು.
ಪ್ರೀತಿಯಿರಲಿ
ಸಿಂಧು
Monday, September 29, 2008
ಆಶೆಯೆಂಬ ತಳವೊಡೆದ ದೋಣಿಯಲಿ ದೂರತೀರಯಾನ..
ಮನದ ಭಿತ್ತಿಯೊಳಗೆ ಮೂಡಿಸಲಾಗುವುದಿಲ್ಲ;
ಒಳಗೆ ಮೂಡಿದ್ದೆಲ್ಲವನ್ನೂ
ಹೊರಗೆ ಹಂಚಿಕೊಳ್ಳಲೂ ಆಗುವುದಿಲ್ಲ.
ಕಂಬನಿಯ ಬದುಕಿಗೆ
ಕವಿತೆಯ ಕರವಸ್ತ್ರ ಕೊಟ್ಟವರು
ಮಾತಿನ ಹಾದಿಯುದ್ದಕ್ಕೆ
ಮೌನದ ಹೆಜ್ಜೆ ಇಟ್ಟು ಹೋಗಿದ್ದಾರೆ.
ಇಷ್ಟಕ್ಕೂ ಭಾವವೊಂದು
ನನ್ನದೇ ಮಾತಾಗಿ ದಾಖಲಾಗಲೇಬೇಕೆ!
ಗುಳ್ಳೆ-
ಒಳಿತು,ಚೆಲುವು,ಭಾವ,ಸಹಯಾನ,ಬದುಕು,ಬದಲಾವಣೆ,ನಾನುಇತ್ಯಾದಿ..
- ಎಲ್ಲ ಗುಳ್ಳೆಗಳೂಒಡೆದಿವೆ,
ಈ ದಾರಿ ಕೊನೆಗೊಂಡಿದೆ.
ಎಲ್ಲರ ಪ್ರೀತಿಯ ಸ್ಪಂದನೆಗೆ ತಲೆಬಾಗಿ ನಮಿಸುತ್ತಾ
ನೇಪಥ್ಯ ಸಿಂಧುವಿನೊಳಗಿನ್ನೊಂದು ಬಿಂದುವಾಗಿ..
-ಪ್ರೀತಿಯಿಂದ
ಸಿಂಧು
Tuesday, September 23, 2008
ಹೊಸಜೀವ ಹೊಸಭಾವ ಹೊಸತೀರ..
ಚವತಿ ಚಂದಿರನ ಅಪವಾದ ಅಂಟಿಸುವ
ಚೆಲ್ಮೊಗಕ್ಕೆ
ಕೃಷ್ಣಪಕ್ಷದ ಸವೆತ..
ಅಲ್ಲಿ ಪಡುವಣದ ತೀರದಲ್ಲಿ
ಒಬ್ಬರಿನ್ನೊಬ್ಬರಲ್ಲಿ ಲೀನದಂಪತಿಗಳ ಮಡಿಲಲ್ಲಿ
ಮೊಗ್ಗು ಹೂಬಿರಿದಿದೆ;
ಮನಸು ಹಗುರಾಗಿ,
ಚಳಿ ಕೂರುತ್ತಿರುವ ಸಂಜೆಗಳಲ್ಲಿ
ಮಳೆಮೋಡದ ನೆನಪು ದಟ್ಟವಾಗಿ-
ಪುಟ್ಟವಳು, ಚಿಕ್ಕವಳು
ಇವತ್ತಷ್ಟೇ ಹುಟ್ಟಿದವಳು
ಅಮ್ಮನ ಮಡಿಲು ತುಂಬಿ,
ಅಪ್ಪನ ಮನಸು ತುಂಬಿ,
ಸುತ್ತೆಲ್ಲರ ಬದುಕಲ್ಲಿ ಆಹ್ಲಾದ ತುಂಬುವವಳು
ಚೆಲುವಾಗಿ,ಒಳಿತಾಗಿ ಬೆಳೆಯಲಿ
ಎಂದು
ನವನವೋನ್ಮೇಷ ಶಾಲಿನೀ
ಪ್ರಕೃತಿಯ ಚರಣಗಳಲ್ಲಿ
ಒಂದು ತುಪ್ಪದ ದೀಪದ ವಿನಂತಿ..
ಇಲ್ಲಿ ಬೆಳಗುವ ಸೊಡರಿನ
ಪ್ರತಿಫಲನಕ್ಕೆ
ಇಂದು ಸಂಜೆಯ ಪಡುವಣ ತೀರದ ಕೆನ್ನೆ ಇನ್ನಷ್ಟು ಕೆಂಪಾಗಲಿದೆ.
Friday, August 29, 2008
ಗೊಂದಲಪುರದಿಂದ ಹೊರಗೆ ಹೋಗುವ ದಾರಿ ಯಾವುದು..?
ಪ್ರಕೃತಿಯನ್ನ ಹುರಿದು ಮುಕ್ಕುತ್ತಿರುವ ಯೋಜನೆಗಳ ಬಗ್ಗೆ ಗೆಳೆಯ ರಾಜೇಶ್ ನಾಯಕ್ ಬರೆದಿದ್ದು ಓದುವಾಗ ಸಂಕಟವಾಗುತ್ತದೆ. ಅದೇ ರೀತಿಯ ದಿನದಿನವೂ ಪ್ರಗತಿಯ ಬಣ್ಣ ಮೆತ್ತಿಕೊಂಡಿರುವ ಹಲವಾರು ವಿಷಯಗಳು ಮನಸ್ಸಿಗೆ ಬರೆ ಇಡುತ್ತವೆ. ಪರಿಸರ ಪ್ರೀತಿಯ ಲೇಖಕರು, ಪರಿಸರ ವಿಜ್ಞಾನಿಗಳು ಬರೆದಿರುವ ಪುಸ್ತಕಗಳನ್ನ ಓದಿ, ಅವರು ನಡೆಸುತ್ತಿರುವ ಸಂರಕ್ಷಣಾ ಕೆಲಸಗಳ ಬಗ್ಗೆ ತಿಳಿದು ಸ್ವಲ್ಪ ಸಮಾಧಾನವೆನ್ನಿಸುತ್ತದೆ. ಆದರೆ ನಿಜವಾಗಲೂ ನನ್ನ ನಡವಳಿಕೆ ಎಷ್ಟು ಸರಿ? ಇಷ್ಟೆಲ್ಲ ಯೋಚಿಸುವ, ಕುಟ್ಟುವ ನಾನು ಏನು ಮಾಡಿದ್ದೇನೆ? ನಲ್ಲಿಯಿಂದ ನೀರು ಸೋರದಂತೆ ನಿಲ್ಲಿಸುವಷ್ಟಕ್ಕೆ, ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದೆ ಇರುವಷ್ಟಕ್ಕೆ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವಷ್ಟಕ್ಕೆ , ವಿದ್ಯುತೆ ಉಪಕರಣಗಳ ಅತಿಬಳಕೆ ಮಾಡದೆ ಇರುವಷ್ಟಕ್ಕೆ ನನ್ನ ಕಾಳಜಿ, ಬದ್ಧತೆ ಮುಗಿಯಿತೇ? ನನಗೆ ದಿನ ನಡೆಸಲು ಬೇಕಾಗುವ ಕಂಪ್ಯೂಟರ್/ಲ್ಯಾಪ್ ಟಾಪ್ ಅತಿಬಳಕೆ ಮಾಡದೆ ಇರುವಷ್ಟು, ತಿಳುವಳಿಕೆ ಇದೆಯೇ ಎಂದರೆ ಇಲ್ಲ ಎಂತಲೇ ಕಾಣುತ್ತದೆ.
ಈ ಬಗ್ಗೆ ಇತ್ತೀಚೆಗೆ ಗೆಳೆಯನು ಕಳುಹಿಸಿದ ಬ್ಲಾಗ್ ಬರಹವೊಂದನ್ನ ಓದಿದ ಮೇಲೆ ತಲೆ ಸ್ವಲ್ಪ ಕೆಟ್ಟ ಎಲ್ಲ ಲಕ್ಷಣಗಳೂ ಕಾಣಿಸಿಕೊಂಡಿವೆ ನನಗೆ. ಸರಿ ತಪ್ಪುಗಳ, ಸಾಮಾಜಿಕ ಬದ್ಧತೆಗಳ, ಪರಿಸರ ಪ್ರೀತಿಯ, ಬಗ್ಗೆ ಗೊಂದಲ ಶುರುವಾಗಿದೆ. ಎಲ್ಲ ಸಮಸ್ಯೆಗಳನ್ನೂ ಮಾತಾಡೀ ಮಾತಾಡೀ, ಅನಲೈಸ್ ಮಾಡೀ ಮಾಡೀ ನಮ್ಮ ಮನದ ಭಾರವನ್ನ ಕಳೆದುಕೊಳ್ತಿದೀವೀಂತ ಅನುಮಾನ ಶುರುವಾಗಿದೆ. ಈ ಗೊಂದಲಪುರದಿಂದ ಹೊರಗೆ ಹೋಗುವ ದಾರಿ ಯಾವುದು ಅಂತ ಯೋಚಿಸುತ್ತ ಕೂತಾಗ ಬರೆದಿದ್ದನ್ನ, ಕೆಂಡಸಂಪಿಗೆಯಲ್ಲಿ ಲಾವಂಚ ಅಂಕಣದಲ್ಲಿ ಪ್ರಕಟಿಸಿದ್ದಾರೆ. http://www.kendasampige.com/article.php?id=1292
ನಿಮಗೆ ಸಮಯವಿದ್ದಾಗ ಓದಿ ನೋಡಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ. ಲೇಖನದ ಒಪ್ಪಕ್ಕಿಂತ ವಿಷಯದ ತೀವ್ರತೆಯ ಬಗ್ಗೆ ತಿಳಿಸಿದರೆ ನನ್ನ ಗೊಂದಲವಿಷ್ಟು ಕಡಿಮೆಯಾಗಬಹುದು. ನಿಮಗೂ ತಲೆ ಕೆಡಿಸಿದೆ ಎಂದು ಬಯ್ದುಕೊಳ್ಳಬೇಡಿ.
Tuesday, August 26, 2008
ಒಂದು ತುಂಡು ಗೋಡೆ..
ಸಾಮಾನ್ಯವಾಗಿ ಕೋಮುಭಾವನೆಗಳು ಪುಟ್ಟಕಿಡಿಗೆ ಕಾಯುವ ಗರಿಗರಿ ಸಿಡಿಮದ್ದಿನ ಹಾಗೆ. ಅಕ್ಷರಲೋಕದ ಹಲವು ಮಶಿ ಹಿಡಿದ ಚಿತ್ರಗಳ ಮೂಲಬಣ್ಣವೆ ಈ ತರಹದ ಪ್ರೇರೇಪಕ ಬರಹಗಳು. ಎಷ್ಟೇ ಆಕರ್ಷಕ ಶೈಲಿಯಲ್ಲಿದ್ದರೂ, ಇವುಗಳನ್ನ ಒಂಥರಾ ಅನುಮಾನದಿಂದಲೆ ಓದುವುದು ನನ್ನ ಅಭ್ಯಾಸ. ನನ್ನ ಜೀವನದ ಸೀಮಿತ ಅವಧಿಯಲ್ಲಿ, ಪರಿಧಿಯಲ್ಲಿ ಕಂಡ ಪ್ರಭಾವಿಸಿದ ಮಾನವೀಯತೆಯ ಸೆಲೆಗಳು ಎಲ್ಲ ಜಾತಿ ಧರ್ಮ ನೆಲೆಗಳನ್ನು ಮೀರಿ ನಿಂತ ವ್ಯಕ್ತಿತ್ವಗಳಾಗಿದ್ದರಿಂದ, ನನ್ನ ಯೋಚನೆಗಳಿಗೆ ಈ ಕೋಮು ಫ್ರ್‍ಏಮು ಬೀಳದ ಸುರಕ್ಷಿತ ಜಾಗದಲ್ಲಿದ್ದೇನೆಂಬ ಭಾವನೆ ನನಗೆ.
ಹೀಗೆಯೆ ಕೆಲದಿನಗಳ ಹಿಂದೆ ತಮ್ಮನು ಒಂದು ಪುಸ್ತಕ ಓದಿ ಸಿಕ್ಕಾಪಟ್ಟೆ ಚೆನಾಗಿದೆ ಓದು ಅಂತ ಒಂದು ಪುಸ್ತಕ ತಂದುಕೊಟ್ಟ. ಹೆಸರು "ಒಂದು ತುಂಡು ಗೋಡೆ" ಬರೆದವರು ಶ್ರೀ ಬೊಳುವಾರು ಮಹಮ್ಮದ್ ಕುಂಇ ಯವರು.
ಊಟ ಮಾಡುವಾಗ ಒಂದು ಕತೆ ಓದುವಾ ಅಂತ ಶುರು ಮಾಡಿದರೆ, ಸಂಕಲನದಲ್ಲಿದ್ದ ಐದೂ ಕತೆಗಳು ಒಳಗಿಳಿದವು. ಬಹಳ ಒಳ್ಳೆಯ ಉದ್ರೇಕರಹಿತ ನಿರೂಪಣೆ, ಮನಸ್ಸಿಗೆ ನಾಟುವ ಚಿತ್ರಣ, ಬರಹದಲ್ಲಿ ಎದ್ದು ಕಾಣುವ ಪ್ರಾಮಾಣಿಕತೆ, ಮಿತವಾದ ಸೂಚ್ಯವಾದ, ಅಂತರ್ಗತವಾದ ಸಹಿಷ್ಣುತೆ ಎಲ್ಲವೂ ತುಂಬ ಚೆನಾಗಿದೆ. ನಾವೆಲ್ಲ ಓದಲೇಬೇಕೆನ್ನಿಸಿದ ಪುಸ್ತಕ. ದಯವಿಟ್ಟು ಕೊಂಡು, ಅಥವಾ ಲೈಬ್ರರಿಯಲ್ಲಿ ತಗೊಂಡು ಓದಿ. ಇವು ಈಗಾಗಲೆ ಸುಧಾ, ಪ್ರಜಾವಾಣಿ ವಿಶೇಷಾಂಕಗಳಲ್ಲಿ ಪ್ರಕಟವಾದವೂ ಕೂಡ.
- ಒಂದು ತುಂಡು ಗೋಡೆ,
- ಕೇಸರಿ ಬಿಳಿ ಹಸುರು ಮೂರು ಬಣ್ಣ ನಡುವೆ ಚಕ್ರವು,
- ಮೀನು ಮಾರುವವನು,
- ಓದು,
- ಸ್ವಾತಂತ್ರದ ಓಟ
ಎಲ್ಲ ಕತೆಗಳೂ ವಿಶಿಷ್ಟ ಅನುಭವಗಳನ್ನ ಕಟ್ಟಿಕೊಡುತ್ತವೆ.
ನನ್ನ ಕೈಯಾರೆ ಮನೆ ಸುಟ್ಟು
ಬೂದಿ ಹೊತ್ತು ಹೊರಟಿರುವೆ,
ಸುಡಬಯಸುವಿರಾದರೆ ನಿಮ್ಮ
ಮನೆ,
ನನ್ನ ಜೊತೆಯಲ್ಲಿ ಬರಬಹುದು..
ಎಂಬ ಕಬೀರನ ದೋಹೆಯ ಸಾಲುಗಳಿಂದ ಆರಂಭವಾಗುವ ಸಂಕಲನ ಮನಸ್ಸಿನಲ್ಲಿ ಬಲವಾದ ಛಾಪೊತ್ತುತ್ತದೆ.
ಮಕ್ಕಳ ಸಾಹಿತ್ಯಕ್ಕೆ, ಆ ಮೂಲಕ ದೊಡ್ಡವರ ಅಭಿವ್ಯಕ್ತಿಗೆ ಇವರು ನೀಡಿದ ಕೊಡುಗೆಯೂ ಅಪಾರ. ತಟ್ಟು ಚಪ್ಪಳೆ ಪುಟ್ಟ ಮಗು ಇವರದೇ ಕೃತಿ. ಜೆಹಾದ್ ಅಂತೊಂದು ತುಂಬ ಎಂದರೆ ತುಂಬ ಇಷ್ಟವಾಗುವ ಕಾದಂಬರಿಯೂ ಇವರದ್ದೆ. ಅಂಕ, ಆಕಾಶಕ್ಕೆ ನೀಲಿ ಪರದೆ, ದೇವರುಗಳ ರಾಜ್ಯದಲ್ಲಿ, ಅತ್ತ ಇತ್ತ ಸುತ್ತ ಮುತ್ತ ಇವರ ಇತರ ಕಥಾ ಸಂಕಲನಗಳು.
ಒಂದು ತುಂಡು ಗೋಡೆಯ ಸಂಕಲನದ ಕತೆಗಳ ಬಗೆಗೆ ಕೆಲವು ಅನಿಸಿಕೆಗಳು..
ರೊಟ್ಟಿ ಪಾತುಮ್ಮ, ಅವಳ ದಿನಗೂಲಿಯ ಸಂಗ್ರಹವಾದ ಹಣ, ಮನೆ ಕಟ್ಟುವ ಆಸೆಯಷ್ಟೆ ನಿಖರವಾಗಿ ಶ್ರೀನಿವಾಸಶೆಟ್ಟರ ಬಡ್ಡಿ ವ್ಯಾಪಾರ, ಅದರಲ್ಲಿಯೂ ತೋರುವ ಪ್ರಾಮಾಣಿಕತೆ, ಏನೋ ಸಾಧಿಸಲು ಹೊರಟು ಮಾಡಬಾರದ್ದನ್ನು ಮಾಡಿದ ಹಳಹಳಿಯಲ್ಲಿ ಕೊರಗುವ ಮನುಷ್ಯಸಹಜ ನಿಸ್ಪ್ರಹತೆ ಒಂದು ತುಂಡು ಗೋಡೆ ಯಲ್ಲಿ ನನಗೆ ತುಂಬ ಇಷ್ಟವಾದ ಅಂಶಗಳು.
ಕೇಸರಿ ಬಿಳಿ ಹಸುರು.. ಈಗಿನ ಕಾಲಕ್ಕೆ ಉತ್ಪ್ರೇಕ್ಷೆಯೆನ್ನಿಸಬಹುದಾದ ಆದರ್ಶದ ಎಳೆಗಳಲ್ಲಿ ಅದ್ದಿ ತೆಗೆದಂತಿದೆಯಾದರೂ ಆ ಕತೆಯ ಪಾತ್ರಗಳು ಇನ್ನೂ ಇಲ್ಲೆ ನಮ್ಮ ನಡುವೆಯೇ ಇರುವುದನ್ನ ನೋಡಬಹುದು.
ಮೀನು ಮಾರುವವನು ಕತೆಯ ಮೀನು ಮಾರುವವನು ಮತ್ತು ಶಾಸ್ತ್ರಿಗಳು, ಅವರ ಸುತ್ತಲಿನ ಸಮಾಜ ಮತ್ತು ಬದುಕು ಎಲ್ಲ ದಕ್ಷಿಣಕನ್ನಡದ ಅಚ್ಚ ಹಸಿರು ನೋಟಗಳ ಸೊಗದಲ್ಲಿ ಮನಸ್ಸಿಗಿಳಿಯುತ್ತವೆ.
ಓದು ನಂಗೆ ಇಡೀ ಸಂಕಲನದಲ್ಲಿ ಸಿಕ್ಕಾಪಟ್ಟೆ ಇಷ್ಟವಾದ ಕತೆ. ಅನುದ್ದೇಶಿತ ಆದರೂ ಗಹನವಾದ ವಿಷಯಗಳ ವಾಹಕರಾಗಿ ನಮ್ಮ ಬದುಕು ಹೇಗೆ ರೂಪಿತವಾಗಬಹುದು ಎಂಬುದರ ಒಂದು ಸರಳ ನಿರೂಪಣೆ. ಎಲ್ಲ ಪಾತ್ರಗಳೂ - ಸಿಟ್ಟುಗೊಂಡು ಮಾಸ್ತರ ವಿರುದ್ಧ ಕೆಂಡ ಕಾರುವ ಪುತ್ತುಮೋಣು, ನಯವಾಗಿ ಪಾಠ ಹೇಳಿಕೊಡುವ ಮಾಸ್ಟರನ್ನು ಇಷ್ಟಪಡುತ್ತಲೇ ಅವರನ್ನು ದೂರವಿಡಬಯಸುವ ಕಾಸಿಂ ಎಂಬ ದೊಡ್ಡವನಾಗಿಬಿಟ್ಟಿರುವ ಪುಟ್ಟ ಹುಡುಗ, ಅಪ್ಪನ ಆದರ್ಶದ ಹೊಳಪಲ್ಲೆ ದಾರಿ ಹುಡುಕುವ ಯುವ ಮಾಸ್ತರ್, ಎಲ್ಲವನ್ನೂ ಕುತೂಹಲದಿಂದ ಗಮನಿಸುತ್ತಾ ಭಾಗಿಯಾಗುವ ಊರಿನ ಸಮಸ್ತರು.. ಎಲ್ಲ ಕಾಡುವ ಪಾತ್ರಗಳೇ ಆಗಿವೆ.
ಕೊನೆಯ ಕತೆ ಸ್ವಾತಂತ್ರದ ಓಟ ಕೂಡ ಒಂದು ವಿಲಕ್ಷಣ ನೆನಪನ್ನು, ನಾವಿಲ್ಲಿ ಗಡಿಯಿಂದ ದೂರವಾಗಿ ಬದುಕು ಕಟ್ಟಿಕೊಂಡವರಿಗೆ ತೀರಾ ಪುಟ್ಟದು ಅನ್ನಿಸುವ ಸಂಗತಿಯನ್ನು ಅದರ ಮಾನವೀಯ ನೆಲೆಗಳಲ್ಲಿ ಚಿತ್ರಿಸಿದ ಕತೆ.
ಇತ್ತೀಚೆಗೆ ಈ ಕತೆಯ ನಾಟಕರೂಪವನ್ನ ಸಮುದಾಯ ಬೆಂಗಳೂರು ತಂಡದ ಕಲಾವಿದರು ಪ್ರದರ್ಶಿಸಿದರು ಕೂಡಾ. ಸ್ವತಹ ಬೊಳುವಾರು ಅವರೇ ನಾಟಕದ ರೂಪಾಂತರ ಮಾಡಿದ್ದರು. ನನಗೆ ನಾಟಕಕ್ಕಿಂತ ಕತೆಯೇ ಜಾಸ್ತಿ ಇಷ್ಟವಾಯಿತು. ಕತೆಯ ಸೂಚ್ಯ ಮಿತಿಗಳು ನಾಟಕ ಪ್ರದರ್ಶನದಲ್ಲಿ ವಾಚ್ಯವಾಗಿ, ಕೆಲವೊಮ್ಮೆ ಅತಿ ಸರಳೀಕೃತವಾಗಿ, ನಾಟಕ ಮಾಡಿಸುವವರ ಸಿದ್ಧಾಂತಗಳ ಮರುದನಿಯಾಗಿ ಹೊಮ್ಮಿರುತ್ತವೆ. ಕತೆ ನನ್ನ/ಮ್ಮ ಓದಿನ,ತಿಳುವಳಿಕೆಯ,ಅನಿಸಿಕೆಗಳ ಕಿಂಡಿ. ಹಾಗಿದ್ದೂ ನಾಟಕವೂ ಒಂದು ವಿಶಿಷ್ಟ ಅನುಭವವನ್ನ ಕೊಟ್ಟಿದ್ದು ಸುಳ್ಳಲ್ಲ.
ಅಡ್ದಗೋಡೆಯನ್ನು ಒಡೆಯಬಯಸುವವರಿಗೆ ಲೇಖಕರು ಈ ಸಂಕಲನವನ್ನು ಅರ್ಪಿಸಿದ್ದಾರೆ. ಒಳ್ಳೆಯ ಓದಿಗೆ,ಚಿಂತನೆಗೆ ಪೂರಕವಾಗುವ ಕತೆಗಳು. ನನಗೆ ಸಿಕ್ಕ ಹಿತವಾದ ಓದು ನಿಮ್ಮದೂ ಆಗಲಿ ಎಂಬ ಉದ್ದೇಶದಿಂದ ಈ ಬರಹ...
Monday, August 11, 2008
ಮತ್ತೆ ಸಿಗುವುದು ಬೇಕೆ..?
ಅಲ್ಲೊಂದು ಇಲ್ಲೊಂದು..
ಬರಿಯ ಮುಳ್ಳು ತುಂಬಿದ
ಎಲೆಗಳಿಲ್ಲದ ಪೊದೆಯ ಮಧ್ಯೆ
ಚುಚ್ಚಿ ಗಾಯವಾಗಿ ರಕ್ತಸುರಿದು
ಪೊದೆಯನ್ನೇ ಕಿತ್ತು
ಒಣಗಿಸಿ ಕತ್ತರಿಸಿ
ಬೂದಿಯಾಗಿಸಿ
ಕಲ್ಲಗೋರಿಯಲಿ ಮಲಗಿಸಿ
ಮೇಲಿಷ್ಟು ಮಣ್ಣೆಳೆದು
ಪ್ರಮಾಣ ಮಾಡಿ
ಎಪಿಗ್ರಾಫಿಯಾ ಬರೆದಿದ್ದೂ ಆಗಿದೆ
ಮತ್ತೇಕೆ ಕೆದಕುತ್ತೀಯೆ
ಏಳುವುದು ಬರಿಧೂಳು
ಕಾಲ ಕೆಳಗಿರುವುದು ಶೂನ್ಯ,
ಕಾಲು ಹೊತ್ತಿರುವ
ಮನದ ಗೂಡಲ್ಲಿ
ಸೂತಕದ ನೆರಳು.
ಮಾಗಿದ ಗಾಯವ ಕಿತ್ತು
ಒಣಗಿಸುವ ಉಪಚಾರವೇಕೆ,
ದಾರಿ ಬದಲಿಸಿದ ಮೇಲೆ
ಮತ್ತೆ ಸಿಗುವುದು ಬೇಕೆ?
ಬದುಕದ ಪ್ರೀತಿಯ
ಮೊದಲ ಚಿಗುರಿನ ಹೂಗಳ
ಬಿಳಿನೀಲಿಯಷ್ಟೇ ನೆನಪಿರಲಿ ;
ಮಧ್ಯದ ರಂಪ, ಕೊನೆಯ ಬೂದಿ
ಎರಡೂ ಬೇಡ.
ಆ ಹಾದಿಯ ಗುರಿಯೇ ಅಲ್ಲಿಗೆ -
ಯಾರೂ ಜೊತೆಯಾಗುಳಿಯದೆ
ಗಾಡಿ ಬದಲಿಸುವ ಜಂಕ್ಷನ್ನಿಗೆ.
ಇಲ್ಲ ಅವಳಿಲ್ಲ ಹುಡುಕುವುದು ಬೇಡ
ಕಲ್ಲಕೆಳಗಿನ ಕರಗಿದ ಬೂದಿಯೆಡೆಯಲ್ಲಿ
ಉಳಿದಿರಬಹುದು ಅವಳ
ಚಹರೆಯ ಕುರುಹು,
ಮೇಲೆ ಹುಡುಕುವುದು ಬೇಡ..