Wednesday, May 9, 2007

ಹರ್ ಅದಾ ಹೈ ಲಾಜವಾಬ್...

ಇವನು ಪ್ರತ್ಯೂಷ್
೩ ವರುಷದ ಪುಟ್ಟ ಪೋರ.. ನನ್ನ ಸೋದರಳಿಯ.

ಈ ಪುಟಾಣಿ ಹಕ್ಕಿಯ ಮುದ್ದು ಮಾತುಗಳ ಮಾಧುರ್ಯವನ್ನ, ಅವನ ಮುಗ್ಧ ಅಚ್ಚರಿಯನ್ನ, ಪುಟ್ಟ ಪುಟ್ಟ ಸಂತೋಷಗಳನ್ನ ಹಿಡಿದಿಡುವುದಕ್ಕೆ ನನ್ನ ಪದಪುಂಜಗಳು ಎಷ್ಟು ಕೂಡಾ ಸಾಟಿಯಲ್ಲ. ಆದರೆ ಆ ಮೂರು ದಿನಗಳು ನಾನು ಸವಿದ ಆಹ್ಲಾದವನ್ನ ಹಂಚಿಕೊಳ್ಳದೆ ಹೋದರೆ ಪಾಪಿಯಾದೇನು ಎಂಬ ಭಯ, ಬರೆಯುವ ಭಂಡ ಧೈರ್ಯಕ್ಕೆ ಸಾಥ್ ನೀಡಿದೆ.

ಓದಿ ನಿಮ್ಮ ಮನದಲ್ಲೆರಡು ಕ್ಷಣ ಆಹ್ಲಾದದ ತಂಪು ತುಂಬಿದರೆ ನನಗೆ ಖುಷಿ.

ಯೇ ತೇರಾ ನಾಝುಕ್ ಬದನ್ ಹೈ ... ಯಾ ಕೋಯಿ ಮೆಹಕಾ ಗುಲಾಬ್!
ಕಾ ಕರೂಂ ತಾರೀಫ್ ತೇರಿ.. ಹರ್ ಅದಾ ಹೈ ಲಾಜವಾಬ್...!

ಇದು ನನಗೆ ತುಂಬ ಇಷ್ಟವಾದ ಮೆಹದಿ ಹಸನ್ ಅವರು ಹಾಡಿದ ಗಝಲ್ ಒಂದರ ಸಾಲುಗಳು. ಎಲ್ಲಿ ಪುಟ್ಟ ಪುಟಾಣಿ ಅಚ್ಚರಿ ನೋಡಿದರೂ ನನ್ನ ಮನದಲ್ಲಿ ಈ ಸಾಲುಗಳು ರಿಂಗಣಿಸುತ್ತವೆ.

ನೂರು ಗುಲಾಬಿಗಳು ಒಟ್ಟಿಗೆ ಅರಳಿದ ಆಹ್ಲಾದದಂತ ಚಿನ್ನಾರಿ ಈ ಪ್ರತ್ಯೂಷ್. ಜಲತರಂಗದ ನಾದದಲೆಯಂತೆ ಮಾತು. ಬರೀ ಮುದ್ದು ಮಾತಷ್ಟೇ ಆಗಿದ್ದರೆ ಒಂದು ಲೆಕ್ಕ.. ಹಾಗಿಲ್ಲ. ಇವನ ಕಲ್ಪನೆಯ ಕುದುರೆ ನಾವು ದೊಡ್ಡವರ ವಾಸ್ತವದ ಚಿತ್ರಣಗಳನ್ನೆಲ್ಲ ಮುದುರಿ ಪಕ್ಕಕ್ಕಿಟ್ಟು, ಚಂದ ಭಾವಲೋಕದ ಕಡೆಗೆ ನಾಗಾಲೋಟ. ನಿಮಗೆ ಕೇಳುವ ಕಿವಿಯಿದೆಯೇ? ಹೂಂ..ಗುಡುವ ಮನಸಿದೆಯೇ.. ಆ ಮಾಯಾಕುದುರೆಯ ಮೇಲೆ ನಿಮ್ಮನ್ನೂ ಹತ್ತಿಸಿಕೊಂಡು ಹೋಗುತ್ತಾನೆ ಈ ಬಾಲಗಂಧರ್ವ. ನಿಧಾನವಾಗಿ ಗಂಟೆಗಟ್ಟಲೆ ತಿಂಡಿ ತಿನ್ನುವ ಈ ಚಿನ್ನಾರಿಗೆ - ಅವನ ಅಜ್ಜಿ ಒಂದ್ಸಲ ಬಯ್ದರು.. - ಏನೋ ನೀನು.. ದಿನಾ ಬೆಳಿಗ್ಗೆ ಒಂದ್ ಗಂಟೆ, ಮಧ್ಯಾಹ್ನ ಒಂದ್ಗಂಟೆ, ರಾತ್ರೆ ಒಂದ್ಗಂಟೆ ತಿಂತೀಯ... ನಿಂಗೆ ತಿನ್ಸಕ್ಕೆ ನನ್ ಕೈಯಲ್ಲಿ ಆಗೋಲ್ಲ ಅಂತ.. - ನಮ್ ಮರೀ ಏನಂತು ಗೊತ್ತಾ- ಏನಜ್ಜೀ ನೀನು ಏನೇನೋ ಮಾತಾಡ್ತೀಯ.. ನಾನೆಲ್ಲಿ ಗಂಟೆ ತಿಂತೀನಿ.. ಬರೀ ಊಟ ತಿಂತೀನಿ ಅಷ್ಟೇ...!! :D
ಯಾವಾಗಲೂ ಏನಾದರೊಂದು ಕತೆ ಹೊಸೆಯುವ ಈ ಪೋರ.. ಒಂದಿನ ನಮ್ಮನೆಗೆ ಬಂದಾಗ ಸುಮ್ಮನೆ ಕೂತಿದ್ದ.. ನಾನ್ ಕೇಳ್ದೆ - ಏನೇ ಪುಟ್ಟಾಣಿ ಮಾತೆಲ್ಲ ಎಲ್ ಹೋಯ್ತು? - ಶ್..., ಸುಮ್ನಿರು(ಗಂಟಲು ತೋರಿಸಿ) ಇಲ್ಲಿದೆ, ಇಂಚೊಲ್ಪ ಹೊತ್ತಿಗೆ ಬರತ್ತೆ ಅಂತ ಮುತ್ತುದುರಿಸಿತು..

ಮೊನ್ನೆ ನಾವು ಮನೆಯವರೆಲ್ಲ ಒಟ್ಟಿಗೆ ಮಡಿಕೇರಿಗೆ ಒಂದು ಚಿಕ್ಕ ಪ್ರವಾಸ ಹೋಗಿದ್ದೆವು. ಆ ಮೂರು ದಿನಗಳು ನಾನು ಹೋಟೆಲಿನಲ್ಲಿ ಊಟ ಮಾಡುವಾಗ ಮತ್ತು ರಾತ್ರಿ ಹಾಸಿಗೆಗೆ ತಲೆಕೊಡುವಾಗ ಮಾತ್ರ ಈ ಲೋಕದೊಡನೆ ಸಂವಾದ.. ಉಳಿದ ಹೊತ್ತೆಲ್ಲ ನಮ್ಮ ಚಿನ್ನಾರಿಯೊಡನೆ ಭಾವಲೋಕದ ಸುತ್ತಾಟ, ಜೊತೆಗೆ ಭೂಮಿನ್ ತಬ್ಬಿದ್ ಮೋಡದಂತಾ ಮಂಜು, ಆಗಾಗ ಸೂರ್ಯ ದರ್ಶನಕೆ ಮೈ ನವಿರೆದ್ದ ವನದೇವಿಯ ಮೋಡಿ.. ಎತ್ತರೆತ್ತರದ ಜಾಗಗಳು.. ನೋಡೇ ನೀನೆಷ್ಟು ಕುಳ್ಳಿ, ನಾನೆಷ್ಟು ಅಗಾಧ ಎಂದು ನಗುವ ಅಮ್ಮ - ಭೂಮಿತಾಯಿ.

ಅಲ್ಲಿ ಎತ್ತರದಲ್ಲಿ ನಮ್ಮ ಕಾರು ಸುತ್ತುವಾಗ ಪುಟಾಣಿಗೆ ತೋರಿಸಿದೆ.. ನೋಡಲ್ಲಿ ಕಾಡು.. ಅವನ ಉಲಿ - ಅತ್ತೆ ಮರದ ತುದಿಯೇ ಕಾಣಿಸ್ತಿದೆಯಲ್ಲಾ ಈಗ ನಾವು ಎತ್ತರದ ಸ್ಟೂಲ್ ಹಾಕ್ಕೊಂಡ್ರೆ ಮೋಡದ ಒಳಾಗೇ ಹೋಗ್ತೀವಾ? ಏನೋ ವೈಜ್ಞಾನಿಕ ಉತ್ತರ ಕೊಡಹೊರಟವಳು ಜೋಡಿ ದಾಸವಾಳಗಳಂತೆ ಅರಳಿದ್ದ ಅವನ ಕಣ್ಣು ನೋಡಿದೆ... ಬಿಸಿಲಿಗೆ ಕೊಂಚ ಕೆಂಪಗೆ ಹೊಳೆಯುವ ಚಿಗುರು ಕೆನ್ನೆಯ ತುಂಬ ಕುತೂಹಲ.. ಅಲ್ಲಿ ಬಿಂಕದಿ ಕೊಂಕಿರುವ ಹವಳದೆಸಳಿನ ತುಟಿಯಲ್ಲಿ ಮಾಯಾಕುದುರೆಯ ಜೀನು... ನಾನಂದೆ ತುಂಬ ಎತ್ತರದ ಸ್ಟೂಲು ಒಂದೇ ಸಾಕಾಗಲ್ಲ ಅದ್ರ ಬದಲು ಉದ್ದೂನೆ ಏಣಿ ಇಡೋಣ.. ಕೊನೇ ಮೆಟ್ಟಲಲ್ಲೇ ಮೋಡ, ರಾತ್ರಿಯಂತೂ ನಕ್ಷತ್ರಗಳ ಗೊಂಚಲೆ ಸಿಗುತ್ತೆ ಅಂತ.. ನಮ್ ಪುಟಾಣಿಯ ಅರಳು ಕಣ್ಗಳ ಅಂಚಲ್ಲಿ ಕಂಡೂ ಕಾಣದ ಭಯದ ಹೊಳಪು.. ನಂಗೆ ಏಣಿ ಅಂದ್ರೆ ಭಯ ಆಗುತ್ತಲ್ಲ... ನಾನು ಬಿಟ್ಟೇನಾ.. ಇಲ್ ಕಣಾ ನಿನ್ನ ಕೈ ಹಿಡಿದು ಪಕ್ಕದಲ್ಲೆ ನಾನೂ ಏರ್ತೀನಲ್ಲ.. ಇಬ್ರೂ ಝಂ ಅಂತ ಒಂದ್ ಸೆಕೆಂಡಲ್ಲಿ ಏಣಿ ತುದೀಲಿರ್ತೀವಿ ಅಂದೆ. ಒಂದೇ ಸೆಕೆಂಡ್ ಸಾಕಾ? ಝಂ ಅಂತ ಹೋಗ್ತೀವಾ ಅತ್ತೆ ಜುಂಯ್ ಅಂತ ಹೋಗೋಣಾ...
ನಾನು ಆಯ್ತು ಅನ್ನೋಷ್ಟರಲ್ಲಿ... ಮತ್ತೊಂದು ಬಾಣ.. ನಕ್ಷತ್ರ ಆಫ್ ಆಗೋಗತ್ತಾ? ಅದನ್ನ ಹೊಳಿತಾನೆ ಇರೋ ಹಾಗೆ ಮಾಡೋದು ಹೇಗೆ..? ಹೌದಲ್ಲ ಹೇಗೆ... ಹಾಂ ಹೊಳೀತು.. ರಾತ್ರೀನ ಹಾಗೆ ಹಿಡಿದಿಟ್ ಬಿಡೋದು.. ಅದು ಆಫ್ ಆಗೊದೆ ಇಲ್ಲ...

ಅಲ್ಲಿ ತಲಕಾವೇರಿಯಿಂದ ಮೇಲೆ ಬ್ರಹ್ಮಗಿರಿಯ ತುದಿಗೆ ಹೋಗುವಾಗ ಒಂದು ಹಕ್ಕಿ ಪುಕ್ಕ ಬಿದ್ದಿತ್ತು.. ತೋರಿಸಿದೆ.. ಅವನಿಗೆ ರೆಕ್ಕೆಯ ನೆನಪು. ಅವನಿಗೆ ಹೇಳ್ದೆ.. ಈ ಪುಕ್ಕಗಳನ್ನ ಜೋಡಿಸಿ ಅಂಟು ಹಚ್ಚಿ ಎರಡೂ ಕೈಗೆ ಕಟ್ಕೊಂಡ್ ಬಿಟ್ರೆ ರೆಕ್ಕೆ ರೆಡಿ.. - ಖುಷಿಯಿಂದ ಹೊಳೆವ ಕಣ್ಗಳನ್ನ ತಾವರೆಗಳಷ್ಟು ಅಗಲವಾಗಿ ಅರಳಿಸಿ ಕೇಳ್ತಾನೆ.. ಆಮೇಲೆ ಬೆಟ್ಟದ ತುದೀಯಿಂದ ನಾನು ರೆಕ್ಕೆ ಕಟ್ಕೊಂಡು ಹಾರ್ಬೋದಾ? ಸೂಪ-ಮ್ಯಾನ್ ತರಾ? - ಏನ್ ಹೇಳೋದು...ಏನ್ ಬಿಡೋದು?!

ಮೆಟ್ಟಿಲು ಹತ್ತುವಾಗ ಮಂಜು ತೆರೆತೆರೆಯಾಗಿ ಸಾಗಿ ಹೋಗುತ್ತಿತ್ತು.. ನಮ್ಮ ನಡುವೆ - ಅವನಿಗೆ ಖುಷಿ.. ಬಿಳಿ ಮೋಡ ಬಿಳಿ ಮೋಡ... ಕರಿ ಮೋಡ ಇಲ್ ಬರಲ್ಲ ಅಲ್ವಾ ಅಂತಾನೆ..
ಡುಮ್ಮಿ ನಾನು - ಮೆಟ್ಟಿಲು ಹತ್ತುತ್ತಾ ಸುಸ್ತಾಗಿ ಆ ಚೈತನ್ಯದ ಸುಳಿಗೆ.. ಕೂತ್ಕೊಳ್ಳೋಣ ಅಂತ ಹೇಳ್ದೆ.. ಹುಂ ಅಂತ ಉಸಿರು ಬಿಡುತ್ತಾ ಒಂದೆರಡು ಕ್ಷಣ ಕೂತಿತ್ತು.. ಅತ್ತೆ ಸುಮ್ನೆ ಕೂತಿರೋಕೆ ಬೇಜಾರಾಗತ್ತೆ ಬಾ ಮೇಲ್ ಹೋಗೋಣ.. ಅಂತ ಎದ್ ನಿಲ್ಬೇಕಾ? ಸರಿ ಪೂರ್ತಿ ಮೇಲೆ ಹೋದ್ವಿ.. ಮಂಜು ಎಲ್ಲೆಲ್ಲೂ.. ಚಳಿಗಾಳಿ ಕೂಡ.. ಅಲ್ಲಲ್ಲಿ ಕೆಲ ಹಕ್ಕಿಗಳು ಪುರ್ ಅಂತ ಹಾರಾಡ್ತಿದ್ದವು. ನಮ್ ಮರೀಗೂ ರೆಕ್ಕೆಯ ಆಸೆ.. ನನ್ ವೇಲ್ ಹೊದ್ದುಕೊಂಡು ರೆಕ್ಕೆ ಮಾಡಿರುವ ಪೋಸನ್ನೇ ನಾನು ಇಲ್ಲಿ ಹಾಕಿರೋದು..

ಮನೆಯಲ್ಲಿ ಅಜ್ಜಿ-ತಾತ, ಅಪ್ಪನ ಹತ್ತಿರ ದಿನಾ ಕತೆ ಕೇಳುತ್ತಾನೆ. ಅದನ್ನೆಲ್ಲ ನಮಗೆ ಉಣ ಬಡಿಸುತ್ತಾನೆ. ಆದ್ರೆ ಅವನು ಕತೆ ಹೇಳುವಾಗ - ಮೊಟ್ಟೆಯಾಗಿದ್ದ ಕತೆಗೆ... ಬಣ್ಣ ಬಣ್ಣದ ಪುಕ್ಕ ಬಂದಿರುತ್ತದೆ. ಅವನು ಹೇಳುವಾಗ ಕಣ್ಣಿಗೆ ಕಾಣಿಸುವ ಸಮಸ್ತ ವಸ್ತುಗಳ ಬಣ್ಣದ ಪುಕ್ಕ ಸೇರಿರುತ್ತದೆ. ಎಲ್ಲೆಲ್ಲೋ ಹಾರುತ್ತದೆ... ಇನ್ನೇನು ಸೌರಮಂಡಲವನ್ನೇ ದಾಟಿ ಬಿಟ್ಟೆ ಅಂದ್ಕೊಳ್ಳುವಷ್ಟರಲ್ಲೀ.. ಅಷ್ಟೆ ಆಗೋಯ್ತು.. ಅಂತ ಉಸಿರುತ್ತಾನೆ.. ನಾವು ನಂಬಿಕೊಂಡು ಕೇಳಿದೆವು ಅಂತ ಮನದಟ್ಟಾದರೆ, ನಮ್ಮ ಹೂಂಗುಟ್ಟುವಿಕೆ ಅವನಿಗೆ ಖುಷಿ ಕೊಟ್ಟರೆ.. ಇದೇ ಕತೇದು ಪಾರ್ಟ್ ಟೂ ಇದೆ ಹೇಳಲಾ ಅಂತ ನೈಸ್ ಮಾಡುತ್ತಾನೆ. ಸ್ವಲ್ಪ ಹಿಂದೆ ಮುಂದೆ ನೋಡಿದರೆ ಬೇಕಿದ್ರೆ ಪಾರ್ಟ್ ಥ್ರೀ ಇದೆ ಅದು ಹೇಳಲಾ ಅಂತ ನಾಗಮಂಗಲದ ಬೆಣ್ಣೆ...

ಹೀಗೇ ಅವನದೊಂದು ಸೀರಿಯಲ್ ಕತೆಗಳನ್ನ ಮೊನ್ನೆ ಕೇಳಿದೆ.. - ಕತೆಯ ಹೆಸರು ಕರಡಿ ರಸಾಯನ.. ಕಪ್ಪಾನೆ ಕರಡಿಯೊಂದು, ಅಲ್ಲಾಡಿ ಇಲ್ಲಾಡಿ ಹಲಸಿನ ಹಣ್ಣು ತಂದು, ಅಲ್ ಹತ್ತಿ ಇಲ್ ಹತ್ತಿ ಜೇನು ತುಪ್ಪ ತಂದು, ಅಲ್ ಕಿವುಚಿ ಇಲ್ ಕಿವುಚಿ, ರುಚಿಯಾದ ರಸಾಯನ ಮಾಡಿ, ಆ ಮರೀನೂ ಈ ಮರೀನೂ ಕರೆದು ತಿನ್ನಿಸಿದ ಕತೆ.
ನಮ್ ಹಕ್ಕಿ ಮರಿ ಈ ಕತೆಯನ್ನ ಅಲ್ಲಾಡಿ ಇಲ್ಲಾಡಿಯಿಂದ ಶುರೂ ಮಾಡ್ತು.. ಅಷ್ಟರಲ್ಲೆ ದಾರಿಯಲ್ಲಿ ಕಾಣಿಸಿದ ಅಂಗಡಿಯಲ್ಲಿ ತೂಗುಬಿಟ್ಟಿದ್ದ ಜೆಮ್ಸ್ ಪ್ಯಾಕೆಟ್ ಕಾಣ್ಸಿಬಿಟ್ಟಿತು.. ಅವನ ಭಾಷೇಲೆ ಕತೆ ಕೇಳಿ.
ಊಂ.. ಆಂ.. ಒಂದಿತ್ತಂತೆ.. ಆ ಕಲ್ಡೀ.. ಅಲ್ಲಾ...ಡಿ, ಇಲ್ಲಾ...ಡಿ ಹಲ್ಸಿ ಹಣ್ ತಂತಂತೆ... ಆಮೇಲೆ.. ಜೇನ್.. ಇಲ್ಲಾ ಎಲ್ಡು ನೀಲೀಗಿರೋದು ಜೆಮ್ಸ್ ಹಾಕ್ತಂತೆ..ಅದನ್ನ ಗುಬ್ಬಿ ಗುಬ್ಬಿ ಮಾ...ಡಿ, ಗ್ಯಾಸ್ ಮೇಲಿಟ್ಟು ಟಿಕ್ ಅಂತ ಗ್ಯಾಸ್ ಹಚ್ಚಿ ಬೇಯಕ್ಕಿಡ್ತಂತೆ... ತುಂಬ ನೀರ್ ಹಾಕ್ತಂತೆ, ಒಂದು ಮೆಣ್ಸಿನಕಾಯಿ ಹಾಕ್ತಂತೆ, ಮತ್ತೆ ಗ್ಯಾಸ್ ಟಿಕ್ ಮಾಡ್ತಂತೆ.. ಒಂತೊಟ್ಟು ವಿಷ ಹಾಕ್ತಂತೆ.. - ನಾನು ಫುಲ್ ಗಾಬ್ರಿ - ಆಮೇಲ್ ಮತ್ತೆ ಅದನ್ನ ಗುಬ್ಬಿ ಗುಬ್ಬಿ ಮಾಡಿ ಬೌಲ್ ಗೆ ಹಾಕಿ... ಕಳ್ಳಂಗೆ ಕೊಟ್ಬಿಡ್ತಂತೆ.. ಅವ್ನು ಕುಡಿದ್ ಬಿಟ್ಟು ಓಡಕ್ಕೆ ಆಗ್ದೆ ಪೋಲಿಸ್ ಬಂದು... ಹೀಗೇ ಮುಂದುವರೀತು...

ಏನೇ ಮಾತಾಡಿದ್ರೂ ಅದ್ರಲ್ಲೊಬ್ಬ ಕಳ್ಳ ಬರ್ಲೇಬೇಕು ಈ ಕುಳ್ಳಂಗೆ..

ಅಲ್ಲಿ ದುಬಾರೆಯಲ್ಲಿ ಆನೆ ನೋಡಲು ಹೋದಾಗಲೂ ಅಷ್ಟೆ... ಈ ಆನೆ ಕಳ್ಳಂಗೇನ್ ಮಾಡುತ್ತೆ... ನಾನು ಇದು ಯಾರ್ಗೂ ಏನೂ ಮಾಡಲ್ಲ. ತನ್ ಪಾಡಿಗೆ ತಾನಿರುತ್ತೆ... ನಾವು ಅದನ್ನ ಪ್ರೀತಿ ಮಾಡ್ಬೇಕು ಅಂತ ಹೇಳ್ದೆ... ಅಲ್ಲಾ ಅತ್ತೇ ಕೆಟ್ಟೋರಿಗೆ ಏನೂ ಮಾಡಲ್ವಾ? ಅದು ಸೊಂಡ್ಲಿಂದ ಚಚ್ ಬಿಡತ್ತೆ ಅಲ್ವಾ... ಅಂತಾನೆ...

ಅವ್ನಿಗೆ ನೀರು ನೋಡಿ ಖುಷಿ, ಇಳಿಯಕ್ಕೆ ಭಯ.. ನಿಧಾನಕ್ಕೆ ಎತ್ತಿಕೊಂಡು ಹೋಗಿ, ನೀರಲ್ಲಿಳಿಸಿ ಕಾಲು ಒದ್ದೆ ಮಾಡಿಸಿದರೆ, ಮುಖ
ಮೇಲೆತ್ತಿ ನೋಡಿ ತುಂಬು ನಗು ನಗುತ್ತಾನೆ...

ಅಲ್ಲಿ ಹೋಗುವವರೆಗೂ ಆನೆಗಾಗಿ ಹಾತೊರೆದಿದ್ದ ನಮ್ಮ ಕೋಳಿ... ಆನೆಯ ಗಾತ್ರ, ಸೊಂಡಿಲು, ದಂತ ಎಲ್ಲ ನೋಡಿ ಸಕ್ಕತ್ ಗಾಬ್ರಿ... ಆದ್ರೂ ಸ್ವಲ್ಪ ಧೈರ್ಯ ಮಾಡಿ ಆನೆಸವಾರಿಗೆ ಹೊರಟ. ಅದರ ಮೇಲೆ ಕೂತರೆ ಅಲ್ಲಿವರೆಗೂ ಮುಖ ಮಂಡಲದ ತುಂಬ ಬಿರಿದಿದ್ದ ನಗೆ ಹೂವು ಮುದುಡಿಹೋಯಿತು.. ಉದೂದ್ದ ರೆಪ್ಪೆಗಳ ಕಣ್ಣು ಕೆಳಮುಖವಾಯಿತು... ಕತ್ತು ಚೂರು ಬಗ್ಗಿ ಕಣ್ಣುಗಳಿಗೆ ಸಾಥ್ ಕೊಟ್ಟಿತು. ಅಮ್ಮನ ತೋಳಿನ ಮೇಲಿನ ಹಿಡಿತ ಬಿಗಿಯಾಯ್ತು... ಅತ್ತಿತ್ತ ನೋಡುವಂತೆಯೇ ಇಲ್ಲ... ಕೆಮೆರಾಕ್ಕೆ ನಿರಾಶೆ..

ಸವಾರಿ ಮುಗಿದು ಕೆಳಗಿಳಿದು ನನ್ನ ತೋಳತೆಕ್ಕೆಗೆ ಬಂದ ಮೇಲೆ ಮತ್ತೆ ಆರ್ಭಟ...ಅದು ಕಳ್ರಿಗೆ ಒದ್ ಬಿಡತ್ತಾ? ಅದ್ರ ಕಿವಿ ಯಾಕೆ ಅಷ್ಟು ದೊಡ್ಡ.. ಅದ್ರ ಮರೀ ಯಾಕೆ ನೀರಲ್ಲಿ ಮುಳುಗಿಹೋಗಿದೆ... ಈಗ ಮಳೆ ಬಂದ್ರೆ ಅದು ಎಲ್
ನಿಲ್ಲತ್ತೆ?... ಹೀಗೇ ಪ್ರಶ್ನೆಗಳ ಸರಮಾಲೆ..

ಆಮೇಲೆ ಸಂಜೆ ಅಬ್ಬೆ ಜಲಪಾತ ನೋಡಲು ಹೋಗಿದ್ವಿ. ಸ್ವಲ್ಪ ದೂರ ನಡೆಯಬೇಕು.. ಮೊದಮೊದಲು ಜೋಶಲ್ಲಿ ನಡೆದ ನಮ್ ದೇವರಿಗೆ ಹೊಟ್ಟೆಯ ಪ್ರೆಶರ್ ಸ್ವಲ್ಪ ಜಾಸ್ತಿಯಾಗಿತ್ತು... ಜಲಪಾತ ಕಾಣ್ಸಿದ ಕೂಡಲೆ ಜತೆಯಲ್ಲೆ ಹೆಜ್ಜೆ ಹಾಕುತ್ತಿದ್ದ ಅವನಮ್ಮ ಫಾಲ್ಸ್ ಬಂತು ಅಂದ್ರು... ಸದ್ಯ ಬಂದ್ವಲ್ಲಪ್ಪ..ಅನ್ಬೇಕೆ ನಮ್ಮ ಮರಿ. ಅಲ್ಲೊಂದು ತೂಗು ಸೇತುವೆ.. ಅವನಿಗೆ ಅದೊಂದು ದೊಡ್ಡ ಜೋಕಾಲಿಯ ಹಾಗೆ ಕಂಡಿತು.. ಮಧ್ಯ ಬಂದು ನಿಂತು ಜಲಪಾತ ತೋರಿಸಿದ್ರೆ..ಇದೊಂದು ಬ್ರಿಜ್ ಅಂತ ಗೊತ್ತಾಯ್ತು.. ಅದು ದೊಡ್ ಶವರ್ರಾ? ಅಂತ ಕೇಳ್ತು.. ಜಲಪಾತ ತೋರಿಸಿ... ನಮಗೆಲ್ಲ ನಗು..

ಇನ್ನೇನು ಹೊರಡೋಣ ಅನ್ನೋಷ್ಟರಲ್ಲಿ......ಅಮ್ ಮ್ಮಾ ಅಜ್ಜೆಂಟ್ ಕಕ್ಕಾ... ಅದನ್ನು ಅಲ್ಲಿ ದೂರದಲ್ಲಿ ಮುಗಿಸಿ ಮೇಲೆ ಬಂದು ಮಡಿಕೇರಿಯ ಓಂಕಾರೇಶ್ವರ ದೇವಸ್ಥಾನಕ್ಕೆ ಹೋದ್ವಿ.


ಅಲ್ಲಿ ದೇವಸ್ಥಾನದ ಗೋಡೆಯ ತುಂಬ ದೇವ ದೇವತೆಯರ ಚಂದದ ಚಿತ್ರಣಗಳಿದ್ದವು. ಅದನ್ನ ನೋಡಿ ನಮ್ಮ ಮರಿಗೆ ಖುಷಿಯೋ ಖುಷಿ.. ನಿಂಗೊಂದು ಮ್ಯಾಜಿಕ್ ತೋರಿಸ್ತೀನಿ ನೋಡು ಅಂತ ಮಣ ಮಣ ಅಬ್ರಕದಬ್ರ ಹೇಳುತ್ತಾ ನನ್ನ ಕಣ್ಣು ಮುಚ್ಚಿಸಿ ಒಂದೊಂದೂ ಚಿತ್ರದ ಮುಂದೆ ನಿಲ್ಲಿಸಿ - ಆ ಚಿತ್ರದಲ್ಲಿದ್ದ ಹಸುವನ್ನೋ, ಚಂದ್ರನನ್ನೋ, ಹಾವನ್ನೋ, ಹುಲಿಯನ್ನೋ, ದೇವಿ ಸುಗಿದು ನಿಂತ ನಾಲಿಗೆಯನ್ನೋ, ನನಗೆ ತೋರಿಸಿದ. ನನಗೆ ಅಜ್ಜ ಹೇಳಿದ ಕತೆಗಳ ನೆನಪಾದವು.

ಹೀಗೇ ಮರುದಿನ ನಾಗರಹೊಳೆ.. ಅಲ್ಲಿ ಸಫಾರಿ ದಾರಿಯಲ್ಲಿ ಎರಡು ಮೂರು ಸಲ ಕಂಡ ಆನೆಗುಂಪು, ಗಿಡುಗ, ನವಿಲು, ಜಿಂಕೆಗಳೊಡನೆ ನಮ್ಮ ಮರಿ.. ಅವತ್ತು ಏನೋ ತಿಂದಿದ್ದು ಎಡವಟ್ಟಾಗಿ ಸ್ವಲ್ಪ ಮಂಕಾಗಿತ್ತು
ಆದ್ರೂ ಕತೆಗೇನೂ ಕಡಿಮೆಯಿರಲಿಲ್ಲ. ದೂರದಲ್ಲಿ ಹಿಂಡಿನೊಂದಿಗೆ ರಸ್ತೆ ದಾಟಿದ ಆನೆ ಮರಿ ಕಾಣಿಸಿ ಮತ್ತೆ ಥ್ರಿಲ್ಲಾಗಿ ಇನ್ನೊಂದೆರಡು ಕತೆ ಹೊಸೆದ.

ರಾತ್ರಿ ಮರಳಿ ಬೆಂಗಳೂರಿಗೆ.. ಬೆಳಕು-ಶಬ್ದ-ವಾಹನ-ಜನ ಜಂಗುಳಿಗೆ.. ಪುಟ್ಟನ್ನ ಬಿಟ್ಟಿರಲು ಬೇಜಾರು.. ಅವನು ಈಗ ದಿನಾ ಫೋನ್ ಮಾಡಿ.. ಮತ್ತೆ ಊರಿಗೆ ಹೋಗ್ತೀಯಾ.. ಒಬ್ಬಳೆ ಹೋಗಬೇಡಾ.. ನಾವು ಎಲ್ಲ ಬರ್ತೀವಿ ಅಂತ ಹೊಸ ಕತೆ ಶುರು....

ನೂರು ದೇವತೆಗಳ ಚಂದದ ಮಾಟದಿಂದ ಹೊಳೆವ ಮಗುವೇ, ನಿನಗೆ ಶರಣು. ಆಗೀಗ ಉಂಹುಂ ಸಿಕ್ಕಿದಾಗೆಲ್ಲ ಉಣಿಸಿದ ನಿನ್ನ ನಲಿವಿನ ಕೃಪೆಗೆ ನಾನು ಕೃತಜ್ಞೆ.