Thursday, July 2, 2009

ಕರುಣಾಳು ಬಾ ಬೆಳಕೆ..

ಸಂಜೆ ಕಾವಳ ಕವಿದಿದೆ
ದೂರದಿ ತೇಲಿಹ ಕರ್ಮುಗಿಲ ಮಾಲೆ
ಭುವಿಯ ಮೈಗೆ ಮೆತ್ತಿದೆ
ಇನ್ನೇನು ಮಳೆ ಬರಲಿದೆ..
ದಿನದ ಬಿನ್ನಹಗಳ
ಆಲಿಪನೆಂದು ನಂಬಿದವನ ಮುಂದೆ
ಎರಡು ನಂದಾದೀಪ
ಬತ್ತಿ ಸರಿಮಾಡಿ ಎಣ್ಣೆತುಂಬಿಸಿ
ಕಡ್ಡಿ ಕೊರೆದರು ಗೌರಮ್ಮ
ದೇವರ ಮುಂದೆ ಚೆಂಬೆಳಕು
ಹಚ್ಚಿದ ಮೊಗದ ಮೇಲೂ
ಪ್ರತಿಫಲಿಸಿ ಚೆಲ್ಲಿದ ಬೆಳಕು,
ಕಾವಳ ಸರಿಯಿತೆ ಹೊರಗೆ?!

ಸಮಾನತೆಯ ಬೇರಿನ
ಕಷಾಯ ಕುಡಿದವಳಿಗೆ
ಇರಿಸುಮುರಿಸು
ಅವರು ಹಚ್ಚಬಹುದೆ ದೀಪ
ಅತ್ತೆ ಸ್ವತಃ ಹುಣಿಸೆಹಣ್ಣು
ತಿಕ್ಕಿ ತೊಳೆದು ಇಟ್ಟ ದೀಪ !
ಸಂಜೆ ಕಾವಳ ಇಳಿದಿತ್ತು
ಮನಸಿನ ಒಳಗೆ;
ದೀಪದ ನಿಹಾರಿಕೆ ಹೊರಗೆ;
ದೇವರೆಡೆಗೆ.
ವಿಚಾರವೇನಿದ್ದರೂ ಮಾತಿಗೆ,
ಬರವಣಿಗೆಗೆ,
ಕೊನೆಗೂ ದೀಪದ ಸುತ್ತ ಕತ್ತಲೆ,
ಬೆಳಕು ಮಾತ್ರ ಬೆಳ್ಳಗೆ,
ಕಪ್ಪಿಡದೆ.. ತನ್ನ ಪಾಡಿಗೆ ತಾನಿದೆ..

ನಕ್ಕಳೊಬ್ಬ ಕಿನ್ನರಿ
ಹರಿಯಿತೊಂದು ಬೆಳಕ ಝರಿ
ಮನೆದೇವರನ್ನೆ
ಮಡಿಲಿಗೆ ತುಂಬಿಹೆನು
ದೀಪ ಹಚ್ಚಬಾರದೆ
ದೇವರಿಗೂ ಮೈಲಿಗೆಯೇ?!

ಹಬ್ಬಿದ ಕಾವಳ ಕರಗಿ
ಮೋಡಒಡೆದು ಮಳೆಯಾಗಿ
ಗೌರಮ್ಮನಲಿ
ಅಮ್ಮನದೇ ಬಿಂಬ
ಮನದ ಕಪ್ಪು ತೊಳೆದ ಬೆಳಕು
ಮತ್ತೆ ಮತ್ತೆ ಮಿನುಗಿ
ನಿತ್ರಾಣದಿ ಮೂಲೆಹಿಡಿದ
ವಿಚಾರದೆಳೆಯಲಿ
ಹೊಸ ಜೀವಸೆಲೆ.