Thursday, February 16, 2017

ಮುಖ ಎಂದರೆ..

ಮುಖ ಎಂದರೆ..
ಉರೂಟು ಆಕಾರ
ಅಳತೆಗೊಪ್ಪುವ ಅಂಗ
ಉಬ್ಬಿನಿಂತ ಎಲುಬು
ಜೀವದೊರತೆ ನೋಟ
ನಗುವೇ ಇರಬಹುದು ಎಂದೆನ್ನಿಸುವ ತುಟಿಯ ಗೆರೆ
ಈ ಕಡೆಯೆ ತಿರುಗಲಿ ಎಂದು ಬಯಸುವ
ಈ ಇಷ್ಟೆ ಇರಬಹುದೆ?


ಅಥವಾ ಇನ್ನೊಂಚೂರು ಟಾಪಿಂಗ್ಸ್:
ಕೆನ್ನೆಯಲೊಂದು ಗುಳಿ
ನಯವಾದ ತ್ವಚೆ
ಹೊಳಪೇರಿದ ಕಣ್ಣು
ಮೊಗ್ಗುಬಿರಿದ ಬಾಯಿ
ಮಾತಾಡುತ್ತಲೆ ಇರಲಿ ಎನಿಸುವಂತಹ ದನಿ
ನೋಡುತ್ತಲೆ ಇರಬೇಕೆನಿಸುವ ನೋಟ..
ಇದೂ ಅಷ್ಟು ಸೇರಿಸಿದರೆ
ಇಷ್ಟಿರಬಹುದೆ ಮುಖ?!

ಅಥವಾ ಈ ಮುಖವನ್ನ ಎತ್ತಿ ಹಿಡಿದ ಶಂಖಗೊರಳು
ಅದರಡಿಗೆ ಆಧಾರದ ಅಳತೆಸ್ಪಷ್ಟ ಅಂಗಾಂಗ
ಆರೋಗ್ಯ ಸದೃಢ
ಚಿಮ್ಮು ನಡಿಗೆ
ಕೂರಲು ಬದಿಗೆ
ಲೋಕವೆಲ್ಲ ಸರಿಯಲು ಬದಿಗೆ..
ಇದಿರಬಹುದೆ?!


ಅಥವಾ
ಅಂದುಕೊಂಡಿರದ ಅಪರಿಚಿತ
ಚಹರೆಯೊಂದು
ಮನದೊಳಗೆ ಅಚ್ಚಾಗಿ
ಹುಚ್ಚಾಗಿ ಕಾಡಿ
ಹೊರಗಿನ ಕುರುಹು
ಹುಡುಕಿ ಸೋತು
ಎದುರು ಸಿಕ್ಕೊಡನೆ
ಆಹ್.. ಗಪ್ಪನೆ ಅಪ್ಪಿ ಕರಗುವ ಬಯಕೆ
ಝಿಲ್ಲೆಂದು ಚಿಮ್ಮುವಾಗ ಅದುಮಿಟ್ಟು
ಸುಮ್ಮನೆ ಎತ್ತಲೋ ನೋಡಿ
ಸಂಭಾಳಿಸುವ ಹಾಗೆ ಮಾಡುವುದೇ
ಇರಬಹುದೆ ಮುಖ ಎಂದರೆ?!

ಹುತ್ತಗಟ್ಟದೆ, ಚಿತ್ತ ಕೆತ್ತದೆ,
ಒಳಗೊಳಗೆ ಅಸ್ಪಷ್ಟ
ಆದರೂ ನಿಖರ,
ಅರೆಬರೆ ಇರುವ ನನ್ನ
ಮಾಡುಬಹುದೆ ಪೂರಾ?!
ಈ ಮುಖ

ಮುಖ ಎಂದರೆ ಇಷ್ಟೆಯೆ?!
ಮುಖ ಎಂದರೆ ಇಷ್ಟೇಯೆ?!
ಬೇಕಿದ್ದರೆ ಓದಿ ನೋಡಿ:
ಚಿಂತಾಮಣಿಯಲ್ಲಿ ಕಂಡ ಮುಖ.

Monday, February 13, 2017

ಉನ್ಮತ್ತೆ

ನೀನು ನಗುತ್ತೀಯ-
ಹೂವರಳುತ್ತದೆ.
ತಣ್ಣಗೆ ಸವರುವ ಗಾಳಿಯಲ್ಲಿ
ಕಳೆದ ಕಾಲದ ಅಲರು
ಪರಿಮಳೋನ್ಮತ್ತ ಮನಸು
ಕಾಲ ಕೆಳಗಿನ ನದರು
ಮರೆತು
ಓಡೋಡುವ ಕಾಲ...


ನೀನು ನಗುವುದಿಲ್ಲ-
ಹೂವು ಅರಳುತ್ತಿದೆ
ನೋಡದೆ ಹೋಗುವ ಕಣ್ಣು,
ತಣ್ಣಗೆ ಸವರುವ ಗಾಳಿಯಲ್ಲಿ-
ಒಣಗಿ ಬಿರಿದ ಮೈ ನಡುಗುತ್ತದೆ
ಕಾಲ ಕೆಳಗೇನೂ ಇಲ್ಲದ ನದರು
ಮರೆತು
ನೆನಪುಗಳ ಬನದ ದಾರಿ
ಹುಡುಕುತ್ತ ನಿಲ್ಲುತ್ತೇನೆ-
ಪರಿಮಳವ ಹುಡುಕಿ ಮತ್ತೆ ಮತ್ತೆ.

ಸಿಗ್ನಲ್ಲು ರಿಪೇರಿಗೆ ಬಂದಿದೆ
ಹಸಿರಿಲ್ಲ. ಕೆಂಪು ಆರುವುದಿಲ್ಲ
ಅದೋ ಅಲ್ಲಿದೆ ದಾರಿ
ಭಗ್ನ ಸೇತುವೆಯ ಚೂರುಗಳು
ಚದುರಿ...

ನೀನು ನಗುತ್ತೀಯ-
ಹೂವರಳಿದ ನೆನಪು;
ಕಳೆದ ಕಾಲದ ಅಲರು;
- ತೀಡದೆ ಉನ್ಮತ್ತೆ, ಭ್ರಾಂತೆ..ಅವಿಶ್ರಾಂತೆ,
ಸಾಕಾಗಿದೆ ಹಾಗೆ ಇಲ್ಲಿ ಮಲಗುತ್ತೇನೆ.

ನೀನು ನಗು ಅಥವಾ ಸುಮ್ಮನಿರು
ಎನಗಿಲ್ಲ ಚಿಂತೆ..
ಸೊನ್ನೆ ತೆಗೆದು ಉರಿಸಲು ಕಾಯುತ್ತಿರುವರಂತೆ.

Monday, February 6, 2017

ಮಾರ್ದವ

ವಾಷಿಂಗ್ ಮಶೀನಿನ ಫಿಲ್ಟರಲ್ಲಿ
ಒಂದಿಷ್ಟು ನೂಲುಕಸ ಕೂತಿರುತ್ತೆ
ವಾರಕ್ಕೊಮ್ಮೆ ತೆಗೆದು ತೊಳೆದು
ಮತ್ತದರದೇ ಜಾಗದಲ್ಲಿ ಫಿಲ್ಟರ್ ಕೂರಿಸುವುದು
ಬಟ್ಟೆ ಒಗೆಯುವಷ್ಟೇ ಮುಖ್ಯ.
ಇವತ್ತು ಕಸ ತೆಗೆಯುವಾಗ
ಪ್ರಪಂಚದಾದಿಯಿಂದ ಇರುವ ಅಚ್ಚರಿ
ನನ್ನ ಕಣ್ಣಳತೆಯಲ್ಲಿ!!!
"ಕಸದ ಮಧ್ಯೆ ಪಚ್ಚೆಮೊಳಕೆ"
ಎಲ್ಲ ಸೃಷ್ಟಿಕ್ರಿಯೆಗೂ ಬೇಕಿರುವುದು
ಒಂದಿಷ್ಟು ತೇವ.
ಅಂತಃಕರಣ..

ಇದೆಲ್ಲ ಮೇಲಿನ ವಿಷಯ
ಒಳಗಿನ ಮಾತೇನು?!!

ಎವೆ ದಾಟಿ ಕೆಳಗಿಳಿಯಿದ
ನನ್ನ ಕಣ್ಣಿನ ತೇವ
ನಿನ್ನ ಬಿರಿದ ಮನದಲ್ಲಿ
ಒರತೆಯುಕ್ಕಿಸಿರಬಹುದೆ
ಎಂದು ಅನಿಸುತ್ತಿರುವ ಈ ಕ್ಷಣ
ತುಸುದೂರವಿದ್ದರೆ ಮಾತ್ರ ಮೂಗಿಗಡರುವ
ರಾತ್ರಿರಾಣಿಯ ಘಮದಲ್ಲಿ ತೋಯ್ದಿದೆ
ಶ್!! ಎಂದು ಬಾಯ ಮೇಲೆ ಬೆರಳಿಟ್ಟಿದೆ.

Tuesday, January 17, 2017

ಸಂಪಿಗೆಸರ

ಸಾಗರದ ಬಸ್ನಿಲ್ದಾಣ,
ಗಿಜಿಗುಟ್ಟುವ ಬಸ್ಸು
ಒಂದು ಕಾಲೂರಿ
ಪಕ್ಕದ ಕಂಬಿಗಾತು ನಿಂತ ಪಯಣ
ಹೆದ್ದಾರಿಯಾಸಿ ನಿಲ್ಲಿಸುವರು:
ಯಾರ್ರೀ ಸಂಪ್ಗೆಸರ, ಸಂಪ್ಗೆಸರ.
ಇಳಿಜಾರಿನ ಮಣ್ಣರಸ್ತೆಯಲ್ಲಿ
ಪುಟುಪುಟು ಹೆಜ್ಜೆ
ಕೊನೆಯಾಗುವಾಗ
ದೊಡ್ಡ ದಣಪೆಯಾಚೆ ಹರವಿದ ಅಂಗಳಕ್ಕೆ
ಕಟ್ಟಿದ ಮನೆಯ ಚಿಟ್ಟೆಯಲ್ಲಿ
ಬಂದ್ಯನೇ ಅಮೀ.. ಬರ್ರೇ ಆಸ್ರಿಗೆಂತು
ಸಡಗರಿಸುವ ಜೀವ.
ಮುಳುಗಡೆಯಾದ ಬದುಕನ್ನು
ಅಬ್ಗತ್ತಿ ನಿಂತು ಮೇಲೆತ್ತಿಸಿದ ಗಟ್ಟಿ ಜೀವ-
-ದ ಮನಸು ಹೂಮೆತ್ತಗೆ
ಕಿಲಿಕಿಲಿಸಿ ನಕ್ಕು ಬಾಳೆತುಂಬ ಬಡಿಸಿ
ಹಪ್ಳ ತಿನ್ನು, ಮನ್ಯಷ್ಟೇ ಮಾಡಿದ್ದು
ಎಂದು ಕರಿಕರಿದು ಬಡಿಸಿ
ಸಂಜ್ಯಾಗುತ್ಲೂ
ಅಮೀ ಒಬ್ಳೆ ಓದ್ತ್ಯಲೆ, ಎಂಗಕ್ಕೂ ಹೇಳೆ,
ಮುಚುಕುಂದ ಗುಹೆಯಲ್ಲಿ
ಕೃಷ್ಣನ ಗೆಲುವು ಕೇಳುತಲೆ
ಕಣ್ಣೀರು ಸುರಿಸಿ....
ನಸುನಕ್ಕ ಬಾಯಿ ಬೊಚ್ಚಾಗಿ
ಬೆನ್ನು ಬಾಗಿ,
ಕಣ್ಣದೀಪ ಮಸುಕಾಗಿ,
ಅರಿವು ಮರೆವಾಗಿ
ನೂರ್ಹತ್ತು ವರುಷಗಳು ಮೊದಲ ತೊದಲಾಗಿ
ಮಲಗಿದ ಸಂಪ್ಗೆಸರದ ಅಮ್ಮಮ್ಮ
ನಿನ್ನೆ ರಾತ್ರಿ ಬಂದಲ್ಲಿಗೇ ಹೋದಳು.
-*-

ಕಥೆ ಕೇಳುವವರ ರುಚಿ ಮತ್ತು ಉಲ್ಲಸದ ಅರಿವು ನನಗೆ ಮೂಡಿಸಿದ ಅಮ್ಮಮ್ಮಾ ಹಗ್ಸ್.


Tuesday, November 8, 2016

ಗಾಳಿ ಹೆಜ್ಜಿ ಹಿಡಿದ ಸುಗಂಧ...

ಎಷ್ಟೋ ಬಾರಿ ನಕ್ಕು ಕಲೆತು
ಮತ್ತೆಷ್ಟೋ ಪ್ರಶ್ನೋತ್ತರಗಳು ಕುಳಿತು
ಜೊತೆಜೊತೆಗೆ ನಡೆವಾಗ
ಮಾತು ಮಾತಿಗೆ ಮಲೆತು
ಹಾಗೀಗೇ ಓಡಾಡಿಕೊಂಡಿದ್ದ
ಇವೆರಡು ಕಣ್ಣು
ಅವತ್ಯಾಕೋ
ಎಚ್ಚರ ತಪ್ಪಿ ಬಿದ್ದೆದ್ದು
ನಿನ್ನ ಕಣ್ಣ ಕಾಳಜಿಯ
ಕೊಳದಲ್ಲಿ ಹೊಕ್ಕು
ಮತ್ತೆಂದೂ ತೊರೆಯದ ಹಾಗೆ...

ಮತ್ತೆ ಮತ್ತೆ ನೋಟದ ಕರೆಂಟು
ಹರಿದು....
ಫಿಲಮೆಂಟು ಉದುರಿದ ಬಲ್ಬಿನಲ್ಲೂ
ದೀಪ ಉರಿದ ಜಾದು

ಇವತ್ತು ನೀನು ರಾಗವಾಗಿ ಹಾಡುತ್ತೀ...
"ಪ್ರಣತಿ ಇದೆ. ಬತ್ತಿ ಇದೆ.
ಜ್ಯೋತಿ ಬೆಳಗುವೊಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ..." ಎಂದು..

(ಪ್ರಣತಿ ಇದೆ ಬತ್ತಿ ಇದೆ... ಇದು ಅಲ್ಲಮನ ವಚನ. ವೆಂಕಟೇಶ ಕುಮಾರರ ದನಿಯಲ್ಲಿ ಹರಿದ ಸುಧೆ.)

Tuesday, October 25, 2016

ಉಪ ನಿಷತ್

ಹತ್ತಿರವಿರು
ಇಲ್ಲೆ ಬಳಿಯಲ್ಲಿ,
ದೂರವಿರಲಿ
ಮಾತು, ಹೊರನೆಗೆದಾಟ

ದನಿಯೊಡೆಯದೆಯೂ
ಕೇಳಬಲ್ಲೆನಾದರೆ,
ಮುಟ್ಟದೆಯೂ
ಅರಿಯಬಲ್ಲೆನಾದರೆ,
ನೋಡದೆಯೂ
ಕಾಣಬಲ್ಲೆನಾದರೆ,
ಅಷ್ಟು ಸಾಕು
ಈ ಬದುಕಿಗೆ.
ಉಳಿದದ್ದೆಲ್ಲ
ತಮ್ಮ ತಮ್ಮ ಪಾಡಿಗೆ
ಇರಲಿ ಹಾಗೆಯೇ ಚೆಂದಕೆ

ಎಳೆತನವೆ ಸೊಗಸು
ಮಾಗಿದ ಬದುಕಿಗೆ.