ಅಪ್ಪನನ್ನ ಒಲಿಸಿ ಮುದ್ದಿಸಿ ತೂಗುಯ್ಯಾಲೆ ಹತ್ತಿಸಿ, ತಾನು ತೊಡೆ ಹತ್ತಿ ಅವಳು ಕೂರುವ ಮರೆವಿನ ಕ್ಷಣಗಳಲ್ಲಿ ನಾನು ಊಟ ಶುರು ಮಾಡಿದ್ದೆ. ಅವಳಿಷ್ಟದ ಒಂದೆರಡು ಹಾಡು ಮುಗಿದವು. ಕಮಲ ನಯನ ಮಾಧವಾ..; ಚನ್ನಪ್ಪ ಚನ್ನಗೌಡ; ನಿಂಬೀಯಾ ಬನಾದ ಮ್ಯಾಗ ಎಲ್ಲ ಆಯಿತು.ಅಷ್ಟೊತ್ತಿಗೆ ಅಲ್ಲೇ ಕುರ್ಚಿಯ ಮೇಲೆ ಕೂತಿದ್ದ ಮೆತ್ತನೆ ನಾಯಿ ನೆನಪಾಗಿ ಅದನ್ನು ಎತ್ತಿಸಿಕೊಂಡು ತೊಡೆಯ ಮೇಲೆ ಇಟ್ಟುಕೊಂಡಾಯಿತು. ಒಂದೆರಡು ಜೀಕು ಮುಗಿಯಿತು. ಬೌ ಬೌ ಸಾಕಾಯಿತು. ಅದನ್ನು ಕೆಳಗೆಸೆದು ಅವಳಷ್ಟೇ ಉದ್ದದ ಐಶು ಗೊಂಬೆಯನ್ನು ಎತ್ತಿಸಿಕೊಂಡಾಯಿತು. ಮತ್ತೊಂದಿಷ್ಟು ತೂಗುವಿಕೆ. ಇನ್ನೆರಡು ಹಾಡು. ಈಗಲಂತೂ ತೊಡೆಯ ಮೇಲೆ ಎಲ್ಲ ತಾಳಗಳೂ ಒಟ್ಟಿಗೆ ಮೇಳ ನಡೆಸಿಯಾಯಿತು. ಆ ಹಾಡು ಮುಗಿದ ಕೂಡಲೆ ಮತ್ತೆ ಅದನ್ನೆ ಹಾಡಲು ಅಪ್ಪನನ್ನು ಪೀಡಿಸಿಯಾಯಿತು. ಸರಿ ಮತ್ತೆ ಹೇಳುತ್ತಾನೆ ಅಪ್ಪ ರಾಗವಾಗಿ -
- ಪಂಡರಾಪುರವೆಂಬ ದೊಡ್ದ ನಗರ
ಅಲ್ಲಿ ವಿಠೋಬನೆಂಬ ಬಲು ಸಾಹುಕಾರ
ವಿಠೋಬನಿರುವುದು ನದಿ ತೀರ
ಅಲ್ಲಿ ಪಂಡರಿ ಭಜನೆಯ ವ್ಯಾಪಾರ...
ಸುಮ್ಮನೆ ಕುಳಿತಿರಲಾಗದ ನಾನು ಇನ್ನೇನು ಕಣ್ಣು ಮುಚ್ಚುತಿದ್ದ ಅವಳನ್ನೇ ನೋಡುತ್ತಾ ಅಪ್ಪನ ಹಾಡಿಗೆ ನನ್ನದೊಂದು ಉಲಿ ಸೇರಿಸಿಬಿಟ್ಟೆ.
ಗುಬ್ಬಕ್ಕನಿರುವುದು ನದಿತೀರ -ಅಲ್ಲಿ ಟುಪ್ಪೂ ಭಜನೆಯ ವ್ಯಾಪಾರ...
ಅಷ್ಟೇ ಅಪ್ಪನ ತೊಡೆಯ ಮೇಲಿಂದ ಟುಪ್ಪೂ ಜೀಕಿಕೊಂಡು ಇಳಿದಾಯಿತು. ಇನ್ನೇನು ಮುಚ್ಚುವಂತಿದ್ದ ಕಣ್ಣುಗಳು ಮತ್ತೆ ದೊಡ್ದ ದೊಡ್ಡಕ್ಕೆ ಹೂವು ಪೂರ್ತಿ ಅರಳಿದಂತೆ ಅರಳಿಕೊಂಡವು. ಅರ್ಧ ರಾತ್ರಿಗರಳುವ ಹೂವು ಯಾವುದದು ಬ್ರಹ್ಮಕಮಲವಲ್ಲವಾ ಅದರ ಘಮವೇ ಆವರಿಸಿಕೊಂಡಂತಾಯಿತು. ಸೊಳ್ಳೆ ಕಚ್ಚದಿರಲಿ ಅಂತ ಹಚ್ಚಿದ್ದ ಜಾನ್ಸನ್ ಬೇಬಿ ಎಣ್ಣೆಯ ಮೆಲು ಆಹ್ಲಾದ ನನ್ನನ್ನ ಸುತ್ತಿಕೊಂಡಿತು. ನನ್ನ ಹತ್ತಿರ ಓಡಿಬಂದು ಕುರ್ಚಿ ಹತ್ತಲು ಒಂದು ಕಾಲು ಮೇಲೆತ್ತಿದಳು.
ಅಷ್ಟೇ ಹಂಗೇ ಸ್ಟಾಚ್ಯೂ ಭಂಗಿಯಲ್ಲಿ ನಿಂತುಕೊಂಡು ಒಂದು ಕೈ ಹಿಂದಕ್ಕೆ ಇಟ್ಟುಕೊಂಡು ಮುದ್ದಾಗಿ ಉಲಿದಳು - ಅಮ್ತಾತ..ನಾನು ಹೌದು ಟುಪ್ಪೂ ತಾತ ಹೈದರಾಬಾದಲ್ಲಿ ಇದಾರೆ ಇಲ್ಲಿಲ್ಲ ಟಾssಟ ಅಂದೆ.
ಅವಳು ತಲೆಯಲ್ಲಾಡಿಸಿ ಮತ್ತೆ ಉಲಿದಳು - ಅಮ್ ತಾತ. ಏನದು ಎಂದು ಕೇಳಿದೆ ಅದೇ ಉಲಿ - ಅಮ್ ತಾತ.
ಏನಿರಬಹುದೋ ಗೊತ್ತಾಗಲಿಲ್ಲ. ಏನು ಹಂಗಂದ್ರೆ ಮತ್ತೆ ಅವಳನ್ನೆ ಕೇಳಿದೆ. ಸಣ್ಣಗೆ ನಗುತ್ತ ಮತ್ತೆ ಉಲಿದಳು - ಅಮ್ ತಾತ. ನನ್ನ ಮುಖ ನೋಡುತ್ತಲೇ ಇದ್ದಳು. ನಂಗೆ ಗೊತ್ತಾಗಲಿಲ್ಲ ಅನ್ನುವುದು ಅವಳಿಗೆ ಗೊತ್ತಾಯಿತು.ಅಲ್ಲೆ ನನ್ನ ಬದಿಯಲ್ಲಿ ಇಟ್ಟುಕೊಂಡಿದ್ದ ಪುಸ್ತಕ ತೋರಿಸುತ್ತ ಹೇಳಿದಳು ಅಮ್ ತಾತ.
ಅಲ್ಲಿದ್ದದ್ದು ಜೋಗಿಯವರ ಕಥಾಸಮಯ ಪುಸ್ತಕ. ಅದರ ಮುಖಪುಟದಲ್ಲಿ ಲಂಕಾದಹನದಲ್ಲಿ ಕಾಲು ಮೇಲೆತ್ತಿ ಬಾಲ ಎತ್ತರಿಸಿ ನಿಂತ ಹನುಮಂತ. ನನ್ನ ಗುಬ್ಬಕ್ಕ ಉಲಿಯುತ್ತಿರುವುದು ಅದನ್ನೇ - ಅಂತಾತ.. ಗೊತ್ತಾಗಲಿ ಅಂತ ಕೈ ಹಿಂದಕ್ಕೆ ಇಟ್ಟುಕೊಂಡು ಬಾಲವನ್ನ ಬೇರೆ ಅಭಿನಯಿಸಿ ತೋರಿಸುತ್ತಿದ್ದಾಳೆ.
ಅಯ್ಯೋ ಮಗುವೆ ಆದರೂ ಗೊತ್ತಾಗಲಿಲ್ಲವಲ್ಲ ಅಂದುಕೊಂಡು ಹನುಮಂತನಾ ಟುಪ್ಪೂ ಅಂದ ಕೂಡಲೆ ಮುಖದಲ್ಲಿ ನಗೆ ಝಗ್ಗನೆ ಬೆಳಕಾಯಿತು. ಅವಳ ಕೆನ್ನೆಯ ಮೇಲೆ ನನ್ನ ತುಟಿಗಳಿದ್ದವು ಅನ್ನುವುದನ್ನೇನು ಹೇಳುವುದು ಬೇಡ ಅಲ್ಲವಾ?

-ಪ್ರೀತಿಯಿಂದ,
ಸಿಂಧು