Wednesday, December 3, 2014

ಮುಂದಿದೆ ಮಾರಿಹಬ್ಬ

ಇದು ಬಹುಶಃ ನಮ್ಮೂರಿನಲ್ಲಿ ಮಾನವ ಜನಾಂಗದ ಚಳಿಗಾಲ.
ಮಾರ್ದವತೆ ಒಣಗಿ, ಚರ್ಮ ಬಿರಿದು, ಗಾಯವನೆ ಕೆರೆ ಕೆರೆದು ಹುಣ್ಣಾಗಿಸಿ
ಮುಂದಿನ ಬಿರುಬಿಸಿಲಿಗೆ ಇವತ್ತಿನಿಂದಲೆ ತೆರೆದುಕೊಳ್ಳುತ್ತಿರುವ ಹಾಗಿದೆ.
ಹತಾಶೆ ನನಗೆ.
ನಾನು ಬೆಚ್ಚನೆ ಗೂಡಿನಲ್ಲಿದ್ದೇನೆ. ಇರಬೇಕು.
ಹೊರಗೆ ಇರಲೇಬೇಕಾದ ಅವಳು, ಇವಳು, ಇನ್ನೊಬ್ಬಳು
ಎಲ್ಲರೂ ಬೇರೆಯವರ ಮೃಗತೃಷೆಯ ನೀಗಬೇಕು.
ಅವಳು, ಇವಳು, ಇನ್ನೊಬ್ಬಳು ಸಧ್ಯ ನಾನಲ್ಲ ಎಂದು ಸುಮ್ಮನಿರಲೆ?
ನನ್ನ ಸರದಿ ಮುಂದಿದೆಯೆಂದು ಭಯಪಡಲೆ?
ಏನೋ.. ಇದು ಹಿಂಡುತ್ತಿರುವ ಮನಸ್ಸು
ಓಹ್ ಟೈಮಿಲ್ಲ. ಪ್ರಾಜೆಕ್ಟು ಡೆಡ್ ಲೈನು
ಸಂಜೆಗೆ ಮುಗಿಸಲೇಬೇಕಿರುವ ಹೋಮ್ ವರ್ಕು
ನಾದಿಟ್ಟ ಚಪಾತಿ ಹಿಟ್ಟು ಮುಗಿದಿರಬಹುದು
ಹೋದಮೇಲೆ ನೆನಪಿಟ್ಟು ಕಲಸಿ
ರಾತ್ರಿಯೂಟ ತಯಾರಿಸಿ
ಕೈಯಲ್ಲಿ ತಟ್ಟೆ ಹಿಡಿದು ಪೇಪರ್ ಹಿಡಿದ ಮೇಲೆ
ನನ್ನ ಸಾಮಾಜಿಕ ಜವಾಬ್ದಾರಿಗಳ ಮೇಲೆ ಕಣ್ಣೋಡಿಸಬಹುದು.
ತುಂಬ ಕಲಕಿದರೆ ಬಿಡಿ
ಇದ್ದೇ ಇದೆ ಎಫ್.ಬಿ., ಬ್ಲಾಗಂಗಳ
ಒಳಗಿನದ್ದೆಲ್ಲ ಹೊರಹರಿಸಿ ಝಳ ಝಳ.
ಮತ್ತೆ ಹೊಸ ಸಮಸ್ಯೆಗಳ ತಟ್ಟೆಗೆ ಸುರುವಿಕೊಳ್ಳುತ್ತ
ಮುಗಿದ ನಿನ್ನೆಗಳ ಬುಟ್ಟಿಗೆ ಕೆಡವುತ್ತಾ
ನನ್ನ ಗುಂಡಿಯ ನಾನೇ ತೋಡುತ್ತಾ...
ಚಳಿ ಹೆಚ್ಚಿ, ಚರ್ಮ ಬಿರಿದಿದೆ.
ಕೆರೆದಷ್ಟೂ ಹಿತ. ರಕ್ತ ಹನಿದಿದೆ.
ಗಾಯ ಒಣಗಿದ ಮೇಲೆ...
ಮಾರಿಹಬ್ಬ ಮುಂದಿದೆ.