Monday, April 20, 2015

ಕೊನೆಯದೊಂದು ಜತೆಪಯಣ..

ದಿ ಇನ್ಸ್ಟಂಟ್ ಮೇಡ್ ಎಟರ್ನಿಟಿ..! (ಬ್ರೌನಿಂಗ್)

ಒಪ್ಪಿದೆ.
ನಾನು ಸಲ್ಲದವಳು. ತಕ್ಕುದಲ್ಲದವಳು.
ಕುಟುಂಬ ವತ್ಸಲೆಯಲ್ಲ,
ನಿನ್ನ ಮೌನದ ಕೊಳಕ್ಕೆ
ನನ್ನ ಮಾತಿನ ಕಲ್ಲೆಸೆದು ಘಾಸಿಗೊಳಿಸಿರುವೆ-
ಅನುದ್ದೇಶದ ಒಡಲೊಳಗಿರುವ
ಘನೋದ್ದೇಶದ ಅರಿವಿರದೆ.

ಒಪ್ಪಿದೆ
ಜತೆಪಯಣಕ್ಕೆ ತಕ್ಕ ಸುಹೃದೆಯಲ್ಲ,
ನಿನ್ನ ಹೆಜ್ಜೆಗೆ ನನ್ನದು ಜೋಡಿಸಲೆ ಇಲ್ಲ,
ಹಂಬಲಗಳ ಹರವಿ ಕೂತು,
ತೊಂದರೆಗಳ ಪರಿಕಿಸದೆ
ಹರಿವಿಗೆ ಬಿದ್ದೆ....
ಬಿದ್ದ ಮೇಲೆ ಕಲಿತ ಈಜು
ಆಟವಲ್ಲ. ಬದುಕುವ ದೊಂಬರಾಟ.


ಒಪ್ಪಿದೆ
ಇದು ನಿನ್ನ ಮಾತು.
ಎಲ್ಲ ದನಿಯನ್ನೂ ಮಾತಲ್ಲೆ ಕಡೆಯಬೇಕಿಲ್ಲ
ಸುಮ್ಮನಿರಲು ಬರದವಳಿಗೂ ಇದು ಗೊತ್ತಾಗಿದೆಯಲ್ಲ!


ಒಪ್ಪಿದೆ
ಹೊಳೆಗಿಳಿಯದೆ ಪಕ್ಕದಲ್ಲೆ ನಡೆದು ಹೋಗುವ ಹಾದಿ ಇದೆ.
ತಂಪು ಪಡೆಯದೆಯೂ ತಣ್ಣಗಿದೆ.
ಹರಿಯದೆಯೂ ಮುಂದುವರೆದಿದೆ.

ಹೊಳೆಯೊಳಗಿನ ಕಲ್ಲು ಎಷ್ಟೆಲ್ಲ ನೆನೆದೂ
ದೊರಗು ಕಳೆದು ಬರಿಯ ನುಣುಪು,
ಮೆತ್ತಗಾಗುವುದಿಲ್ಲ.
ದೂರ ದೂರಕೆ ಹರಿವ ಹೊಳೆಯಲ್ಲೆ
ಮುಳುಗಿಯೂ ತಾನೆ ಹೊಳೆಯಾಗುವುದಿಲ್ಲ.
ಒಣಗಿದ ಹೆಜ್ಜೆಗಳು ಒದ್ದೆಯಾಗಬಯಸುವುದಿಲ್ಲ.


ಒಪ್ಪಿದೆ
ಜೊತೆ ಎಂದರೆ ಒಟ್ಟಿಗೇ ಎಂದಷ್ಟೆ ಅಲ್ಲ!
ಹೊಳೆಗೆ ದಂಡೆಯ ಹಾಗೆ,
ರೈಲು ಕಂಬಿಗಳ ಹಾಗೆ,
ನಿದ್ದೆ ಎಚ್ಚರದ ಹಾಗೆ,
ಬೆಳಕು ಕತ್ತಲ ಹಾಗೆ,
ಮೌನ ದನಿಗಳ ಹಾಗೆ,
ಜೊತೆಗೇ ಇರುತ್ತೇವೆ. ಬೇರೆ ಬೇರೆ.


ಅದಕ್ಕೆ ಇವತ್ತೊಂದು ಹೊಸ ಹಂಬಲು.
ಬೆಳಗಲ್ಲಿ ದಿನಮಣಿಯ ಬೆಳಕಿನ ಬಲೆಯಲ್ಲಿ
ಪುಳಕಿಸುವ ಹುಲ್ಗರಿಕೆಯ ಬೆಟ್ಟದೆಡೆ
ಕೆಂಪು ಒಡಲಲ್ಲಿ ಎಳೆಹಸಿರು ಮೊಳಕೆ ಹೊತ್ತ ಇಳೆಗೆ
ನೀಲಿ ಮುಗಿಲು ಬಾಗಿ ಮುದ್ದಿಸುವ ಕಡೆ,
ಕತ್ತಲ ಆಗಸಕೆ ಚಿಕ್ಕೆ ಮಿನುಗು ಮಿಂಚುವೆಡೆ,
ದಾರಿ ಮುಗಿಯದಿರಲಿ ಎಂದೆನಿಸುವೊಡೆ,
ಗಿರಿಯಿಂದ ಕಣಿವೆಗೆ ಹರಿವೆಡೆ,
ಕೊನೆಯದಾಗಿ ಒಂದು ಪಯಣ ಹೋಗೋಣವೆ?

ಮತ್ತೆ ಕೇಳಲಾರೆ. ಒಪ್ಪಿದೆನಲ್ಲ. ಜೊತೆಗೇ ಬೇರೆ.
ಅದಕ್ಕೆ ಮುಂಚೆ ಒಮ್ಮೆ
ಈ ಮೂರ್ಖ ಮನದ ಮುದ್ದಿನ ಬಯಕೆ.
ಹೌದೌದು ಕೊನೆಯ ಒಂದು ಸಲ.


ಆಹ್ ಸಧ್ಯ ಒಪ್ಪಿದೆಯಲ್ಲ!

ಈಗ ನಾನು ನನ್ನವನು
ಕೊನೆಯ ಸವಾರಿ, ಕೊನೆಯ ಪಯಣ.
ಶ್. ಸುಮ್ಮನಿರಿ. 
ಜಗತ್ತು ಇವತ್ತಿಗೆ ಕೊನೆಯಾದರೂ ಆಗಬಹುದು.
ನನ್ನ ಬೇಷರತ್ ಒಪ್ಪಿಗೆಯಿದೆ.

ಇವನ ಬಗಲಲ್ಲಿ ಹೋಗುತ್ತಿರುವೆ ನಾನು.
ಇಳಿಸಂಜೆಬೆಳಕಲ್ಲಿ ಬದಿಗೆ ಕದ್ದು ನೋಡಿದೆ
ಅದೇ ಬಿಂಬ. ಅದೇ ಪುಟ್ಟ ಬಾಯಿ. ಕಿರಿಹಲ್ಲು. ಸಿರಿನಗೆ.
ಇವತ್ತಿಗೆ ಕೊನೆಯಾಗಲಿ ಜಗತ್ತು
ಈ ಕ್ಷಣ, ಈ ಪಯಣ, ಈ ಕೊನೆಯೇ ಚಿರಾಯು!