Tuesday, July 31, 2007

ಹೀಗೇ ಸುಮ್ಮನೆ..

ಭಾರವಾದ ನಿಟ್ಟುಸಿರು,
ಹೆಪ್ಪುಗಟ್ಟಿದ ಮೌನ,
ದುಃಖಕ್ಕೆ ಆಸರೆಯಾಗಿ ಗಾಳಿ ತೀಡದೆ ನಿಂತು,
ಸುತ್ತೆಲ್ಲ ಬಿಸಿಯಾಗಿ ಸೆಖೆಯೇರಿ,
ಇನ್ನೇನು ಹನಿಯಬೇಕು ಕಣ್ಣಂಚು,
ಅದೋ ಮೊಬೈಲಿನಲಿ ಮಿಂಚು!

ಹನಿಯ ಕಣ್ಣಂಚಲೆ ತಡೆದು
ಉದಾಸವಾಗಿ ಫೋನೆತ್ತಿಕೊಂಡು
ಡಿಸ್ ಪ್ಲೇ ನೋಡಿದರೆ
ನೀರಂಚಲಿ ಕುಳಿತು
ಹನಿವ ಮಳೆಯ, ಸುಳಿವ ಕುಳಿರ್ಗಾಳಿಯ

ಸೊಗವನ್ನು
ಹೂವರಳಿದ ಸಹಜತೆಯಲ್ಲಿ

ಬಣ್ಣಿಸುವ ಆ ಮೆಸೇಜು..
ದುಃಖ ಕರಗಿ,
ಮೌನ ಹಗುರಾಗಿ
ಮನದ ತುಂಬ ಹಗೂರಭಾರದ ನೆನಪು.
ನಿಸೂರಾಗಿ ಹಾಯತೊಡಗಿದ ಗಾಳಿಯಲಿ ತಂಪು.
ಸುತ್ತೆಲ್ಲ ವಿಷಯಗಳಲ್ಲಿ ಅದೇನೋ ಹೊಸ ಒನಪು...

ಪುಟ್ಟ ದೀಪದ ಚೆಂಬೆಳಕು,
ಹಿತರಾಗದ ಮುದನೀಡುವ ಹಾಡು,
ಮಳೆ, ಹೂವು, ಹಕ್ಕಿ, ಕಾಡು,
ಹೊಳೆ,ಕಡಲು,ಬೆಟ್ಟದ ಬೀಡು
ಎಲ್ಲ ಚಂದದ ಸಂಗತಿಗಳ
ಒಟ್ಟಂದದ ಆಪ್ತ ಪ್ರಭಾವಲಯ
ಹರಡಿದ ನಿನಗೆ ಅರ್ಪಿತವೀ
ತಡೆ ಹಿಡಿದಿಟ್ಟ ಕಣ್ಣ ಹನಿ..

Friday, July 27, 2007

ಹಾಡು ಹಕ್ಕಿ..

(ಹಾಡಿನ ದುಃಖದ ಭಾವ ಕೇಳುವ ನಮ್ಮನ್ನು ಅಳಿಸಬಹುದು, ಆದರೆ ಹಕ್ಕಿಗೆ ಈ ಹಾಡೇ ದುಃಖ ಕಳೆವ ದಾರಿ..)

ಕೊಟ್ಟಿಗೆಹಾರದಲ್ಲಿ ಬೆಳಗಿಂಜಾವ ಇಳಿದು, ಧರ್ಮಸ್ಥಳಕ್ಕೆ ಹೋಗುವ ಬಸ್ಸಿಗೆ ಕಾದು ಚಾರ್ಮಾಡಿಯ ಘಾಟಿಯಲ್ಲಿ ಹೊರಟಿದ್ದೆವು. ನಮಗೆ ಅಲ್ಲಿ ಜೇನುಕಲ್ಲು ಗುಡ್ಡದ ಆಚೆ ತಿರುವಲ್ಲಿಳಿದು ಕಾನ್ಮನೆಯ ಕಣಿವೆಗೆ ಹೋಗುವುದಿತ್ತು. ಬೆಂಗಳೂರಿನ ಐಟಿ ಮಂದಿ ನಾವು ನಾಲ್ಕೈದು ಜನಕ್ಕೆ ಬಿಡುವು ಸಿಕ್ಕಿದಾಗೆಲ್ಲ ನಿಸರ್ಗದ ಮಡಿಲಿಗೆ ಹೋಗಿ ಅಮ್ಮನನ್ನು ಆರಾಧಿಸುವ ಹವ್ಯಾಸ. ಇದೂ ಒಂದು ಬಗೆಯ ಭಕ್ತಿಪಂಥ ಅಲ್ವಾ ಅರೂ ಅನ್ನುತ್ತಾನೆ ನಮ್ಮ ಟೀಮಿನ ಗೆಳೆಯ ಅಜಯ. ನಾನು, ಸಂಗಾತಿ ಅಂಶು, ಅಜಯ,ನೂರುಲ್ಲ,ಶ್ಯಾಮ ಈಗ ಹೊರಟಿದ್ದು ಕಾನ್ಮನೆಯ ಚಂದ ಕಣಿವೆಯ ತಪ್ಪಲಿಗೆ. ಮೊದಲೊಮ್ಮೆ ಬಿರುಬೇಸಿಗೆಯಲ್ಲಿ ಬಂದಿದ್ದೆವು. ಅಲ್ಲಿ ಆತಿಥ್ಯ ಒದಗಿಸುವ ಸುಬ್ರಾಯ ಹೆಗಡೆಯವರು ನಮ್ಮ ಚಾರಣಾಸಕ್ತಿ ನೋಡಿ, ಮಳೆಗಾಲಕ್ಕೆ ಬನ್ನಿ ಅಂತ ಹೇಳಿದ್ದನ್ನ ಮರೆಯದೆ ಈ ಜುಲೈಯಲ್ಲಿ ಮತ್ತೆ ಕಾನನದ ಮಡಿಲಿಗೆ ಹೊರಟಿದ್ದೆವು. ಬಸ್ಸಿಳಿದು, ಏರಿಕಲ್ಲು ಗುಡ್ಡ ಹತ್ತಿಳಿದು, ಬಾರೆಕಲ್ಲು ಗುಡ್ಡ ಬಳಸಿ ಹೋದರೆ ಅಲ್ಲಿ ಕಣಿವೆಯಲ್ಲಿ ಹರಿಯುವ ಹಳ್ಳವೊಂದರ ಮಗ್ಗುಲಲ್ಲಿ ಹಚ್ಚಗೆ ನಗುವುದೇ ಕಾನ್ಮನೆ. ಇಡೀ ಕಾಡಿನ ಮೌನದಲ್ಲಿ ಹಸಿರಾಗಿ ತೇಲುವ ಕಾನ್ಮನೆಯಲ್ಲಿ ಒಂದೇ ಮನೆ. ಹೆಗಡೆಯವರದ್ದು. ಸುತ್ತ ಗದ್ದೆ, ಬ್ಯಾಣ, ಹರಿಯುವ ಆಲೇಹಳ್ಳ, ಮನೆಯಂಗಳದ ಜಗುಲಿಯ ಮೂಡು ದಿಕ್ಕಲ್ಲಿ ಕೂತು ನೋಡಿದರೆ ಎತ್ತರಕ್ಕೆ ನಿಂತ ಕೊಡೆಕಲ್ಲು ಗುಡ್ಡದ ತುದಿ.. ಹೀಗೆ ಚಂದಕೆ ನಗುವ ಸೃಷ್ಟಿಯ ರಮ್ಯತೆ ವಿವರಿಸಲಿಕ್ಕೆ ಆಗದ್ದು. ಹಿತ್ತಲಂಚಿನ ನೇರಳೆ ಮರದ ಕೊಂಬೆಯಲ್ಲಿ ಕೋಗಿಲೆ ಉಲಿಯುತ್ತದೆ, ಹೂಬಿಟ್ಟಿರುವ ಗಿಡದಿಂದೆಲ್ಲ ಹೂರಸ ಕುಡಿಯುವ ಕುಂಡೆಕುಸ್ಕ ಹಕ್ಕಿ ಟೀಂವ್ ಅಂತ ಸಾಥ್ ಕೊಡುತ್ತ ನುಲಿಯುತ್ತದೆ, ಗಂಭೀರವಾಗಿ ನಿಂತು ಮನೆಯನ್ನು ಸುತ್ತರಿದಿರುವ ಹೊನ್ನೆ,ಮತ್ತಿ,ನಂದಿ ಮರಗಳು ಸುಂಯ್ ಎಂದು ಸುಯ್ಯುತ್ತ ಉಸಿರುತ್ತವೆ ಕಾನ್ಮನೆಯ ಚಂದವನ್ನು, .. ಕಣ್ಣು ನೋಡಿದ್ದೆಲ್ಲವನ್ನ, ಮನಸ್ಸು ತುಂಬಿಕೊಂಡಿದ್ದೆಲ್ಲವನ್ನು ಮಾತಿನಲ್ಲಿ ಕಟ್ಟಿಕೊಡಲಾಗುವುದಿಲ್ಲ, ಆ ಪ್ರಯತ್ನ ಮಾಡಲೂ ಬಾರದು. ಸೂಚ್ಯ ಮಾತ್ರ ಸೊಗ ಕೊಡುತ್ತದೆ. ಉಳಿದದ್ದು ನಾವು ಕಂಡ ಅನುಭವಿಸಿದ ಕಣ್ಣು ನೋಡಬೇಕು. ಮನವರಿಯಬೇಕು.

ನಾವು ನಾಲ್ಕೈದು ಗಂಟೆ ಗುಡ್ಡ ಹತ್ತಿಳಿದು ಕಾನ್ಮನೆ ಸೇರುವಾಗ ಮಧ್ಯಾಹ್ನ ಹನ್ನೆರಡರ ಮೇಲಾಗಿತ್ತು. ಮನೆಯಂಗಳಕ್ಕೆ ಬಂದು ನೋಡಿದರೆ, ಸದ್ದಿಲ್ಲ. ಮುಂಚಿತವಾಗಿ ತಿಳಿಸದೆ ಬಂದೆವಲ್ಲ ಅನ್ನಿಸಿತು. ತಿಳಿಸುವುದು ಹ್ಯಾಗೆ, ಕರೆಂಟಿಲ್ಲ, ಫೋನಿಲ್ಲ ಇಲ್ಲಿ. ನನ್ನಿಂಗಿತ ತಿಳಿದ ಅಂಶು ನಗುತ್ತ ಹೇಳಿದ. ರೇಡಿಯೋ ಅನೌನ್ಸ್‌ಮೆಂಟ್ ಕೊಟ್ಟಿದ್ದರೆ ಆಗಿತ್ತು. ನಕ್ಕೆವು. ನಾವಿಲ್ಲಿ ಬಂದರೆ ಅವರ ಮನೆಯ ಮಂಗಳೂರು ಆಕಾಶವಾಣಿಯೇ ನಮ್ಮ ಹೊರಪ್ರಪಂಚದ ಕೊಂಡಿ. ಅಷ್ಟರಲ್ಲಿ ಮನೆಯ ಬಾಗಿಲಿಗೆ ಬಂದವರು "ಶೇಷಜ್ಜಿ". ಅವರು ಕಣ್ಣಿಗೆ ಕೈಯಡ್ಡ ಹಿಡಿದು, ದರೆ ತಿರಿಗ್ಲಿಕ್ಕೆ ಬಂದ್ರಾ, ಬನ್ನಿ ಕೈಕಾಲು ತೊಳೀರಿ, ಆಸ್ರಿಗೆ ಮಾಡ್ತೆ ಅಂದು ನಕ್ಕರು. ನನ್ನ ಗುರ್ತು ಹಿಡಿದು, ಓಹೋ, ನೀವು ಶಿವರಾತ್ರಿಗೆ ಬಂದಿದ್ರಲ್ಲಾ ಅದೇ ಗುಂಪಲ್ದಾ, ಎಂತು ಮಗಾ ಗನಾಗಿದ್ಯಾ? ಅಂತ ಕೇಳಿದರು. ನಮ್ಮ ಗುಂಪಲ್ಲಿ ನಾನೊಬ್ಬಳೇ ಹುಡುಗಿ, ಹಾಗಾಗಿ ಗುಂಪಲ್ಲಿ ನನ್ನ ನೆನಪಿರುತ್ತದೆ. ಮುಡಿ ಎತ್ತಿ ಕಟ್ಟಿ, ಬೆನ್ನು ಪೂರ್ತಿ ಲಂಬಕೋನದಲ್ಲಿ ಬಾಗಿದ ಶೇಷಜ್ಜಿಯಲ್ಲಿ ನಂಗೆ ಶಬರಿಯ ಚಿತ್ರ ಕಂಡಿತು. ಅಜ್ಜಿ ಕೊಟ್ಟ ಕಷಾಯ ಕುಡಿದು ಅಂಶು ಕೇಳಿದ ಹೆಗಡೇರೆಲ್ಲಿ, ನಾವು ಇಲ್ಲಿ ಮೂರು ದಿನ ಉಳಿಯುವ ಅಂತ ಬಂದಿದ್ದು, ಇರಬಹುದಾ ನಿಮಗೆ ತೊಂದರೆಯಿಲ್ಲವಾ? ಅಜ್ಜಿ ನಕ್ಕರು - ಎಂತ ತೊಂದ್ರೆ. ಈಗ ನೆಟ್ಟಿ ಮುಗಿದಿದೆ. ಬೇಕು ಅಂದ್ರೂ ಜನರ ಮುಖ ಕಾಣಲಿಕ್ಕೆ ಇನ್ನೂ ತಿಂಗಳೇ ಹೋಗ್ಬೇಕೇನೋ. ಹೆಗಡೇರು ಇಲ್ಲೆ ಹೋಗಿದ್ದಾರೆ, ಬರುತ್ತಾರೆ. ನೀವು ಬೇಕಲ್ಲೀಪ್ಪವರೆಗೆ ಇರಿ. ಎಂತೂ ತೊಂದ್ರೆ ಇಲ್ಲ.

ಅಷ್ಟರಲ್ಲಿ ಹೆಗಡೆಯವರು ಬಂದು ಗುರುತು ಹಿಡಿದು ಮಾತಾಡಿಸಿದರು. ಅವರಿಗೂ ಖುಷಿಯಾಗಿತ್ತು. ಸುರಿಮಳೆಯ ದಿನಗಳಲ್ಲಿ ಮಲೆಕಾಡಲ್ಲಿ ದಿನ ದೂಡುವುದು ಕಷ್ಟ. ಮಾತಿಗೆ ಯಾರಾದ್ರೂ ಜನ ಸಿಗುವುದಂತೂ ಇನ್ನೂ ಕಷ್ಟ. ಅಜ್ಜಿ ನೈವೇದ್ಯಕಾಯ್ತು ಅಂತ ಕರೆದ ಕೂಡಲೆ, ಹೆಗಡೆಯವರು ಎದ್ದು ಹೋದರು, ಎರಡು ಮಿನೀಟಿನಲ್ಲಿ ಸ್ನಾನ ಮುಗಿದು ನಮಸ್ತೇ ತ್ರ್ಯಂಬಕೇ ದೇವೀ ನಾರಾಯಣೀ..... ಹಾಗೇ ಗಂಟೆಯ ಗಣಗಣ ಕೇಳಿಸಿತು. ಕಿವಿಸಂದಿಯಲ್ಲಿ ಹೂವು ಸಿಕ್ಕಿಸುತ್ತ ಹೊರಬಂದವರು, ಊಟಕ್ಕಾಗಿದೆ ಬನ್ನಿ ಎಂದು ಜಗುಲಿಯಲ್ಲಿ ಚಾಪೆ ಹಾಸಿ ಬಾಳೆಲೆ ಕೊಟ್ಟರು. ನಾವು ಬಿಸಿಬಿಸಿಯಾದ ದಪ್ಪಕ್ಕಿ ಅನ್ನ ಸೌತೆಕಾಯಿ ಹುಳಿ ಎರಡೆರಡು ಸಲ ಹಾಕಿಸಿಕೊಂಡು ಉಂಡೆವು. ನಮ್ಮ ಊಟ ಮುಗಿಯುವಾಗ ಅವರು ಊಟ ಮುಗಿಸಿ ಬಂದು ಕೂತು ರೇಡಿಯೋ ಟ್ಯೂನ್ ಮಾಡಿ, ಎಲೆ‌ಅಡಿಕೆ ಹಚ್ಚತೊಡಗಿದರು. ನಾವೆಲ್ಲ ಕೈತೊಳೆದು, ಕೂತ ಜಾಗವನ್ನೊಮ್ಮೆ ಗುಡಿಸಿ, ಮೂಲೆಯಲ್ಲಿಟ್ಟ ಜಮಖಾನವನ್ನೆಳೆದು ಕೂತೆವು. ಹೊರಗೆ ಧೋಮಳೆ. ಮಾರುದೂರದಾಚೆಗೆ ಏನೂ ಕಾಣುತ್ತಿರಲಿಲ್ಲ. ರೇಡಿಯೋ ಮಂಗಳೂರಿನಲ್ಲಿ ಪ್ರದೇಶ ಸಮಾಚಾರ.. ಆಮೇಲೆ, ಹಿಂದಿ ಚಿತ್ರಗೀತೆಗಳು ಕೇಳಿಬಂದವು. ಕಣ್ಣೆಳೆಯುತ್ತಿತ್ತು. ಸಣ್ಣ ನಿದ್ದೆ ಮಾಡೆದ್ದಾಗ ಸಂಜೆಯ ಇಳಿಬಿಸಿಲಿತ್ತು. ಇಲ್ಲೇ ಹೋಗಿಬರುತ್ತೇವೆಂದು ಹೇಳಿ ಹೊರಹೊರಟೆವು. ಗದ್ದೆ ಬಯಲಲ್ಲಿ ಸುತ್ತಾಡಿ, ಬ್ಯಾಣದ ದಿಬ್ಬದಲ್ಲಿ ಕೂತು ಸೂರ್ಯನ ಕಲಾಪ್ರೌಢಿಮೆಯನ್ನ ನೋಡುತ್ತಿರುವಾಗ ಮೋಡ ಕಪ್ಪುಗಟ್ಟಿತು. ಈಗಷ್ಟೇ ಕೇಳುತ್ತಿದ್ದ ಹಕ್ಕಿಹಾಡಿನ ಕಛೇರಿ ನಿಂತು, ಜೀರುಂಡೆಗಳು ಗುಂಯ್‌ಗುಟ್ಟತೊಡಗಿದವು.. ಮಿಂಚತೊಡಗಿತು. ಗಡಿಬಿಡಿಯಲ್ಲೆದ್ದು ಮನೆ ಸೇರಿದೆವು. ಕೊಟ್ಟಿಗೆಹಾರಕ್ಕೆ ಹೋಗುವ ಬಸ್ಸಿಗೆ ಹಾಲುಕ್ಯಾನ್ ಕೊಟ್ಟು ಬಂದ ಹೆಗಡೆಯವರು ಕೃಷಿರಂಗ ಕೇಳುತ್ತಾ ಕೂತಿದ್ದರು.

ಕೊಡೆಕಲ್ಲು ಗುಡ್ಡದ ನೆತ್ತಿಯಿಂದ ಇಳಿದಿಳಿದು ಬಂದ ಕತ್ತಲರಾಶಿ ಕಾನುಮನೆಯನ್ನು ಆವರಿಸತೊಡಗಿತ್ತು. ಕೈಕಾಲು ತೊಳೆದು ಜಗುಲಿಯಲ್ಲಿ ಕೂರುವಷ್ಟರಲ್ಲಿ ಮಲೆನಾಡಿನ ಧೋಮಳೆಯ ರಾತ್ರಿಯ ಪ್ರದರ್ಶನ ಆರಂಭವಾಯಿತು. ಮನೆಯೊಳಗೆ ಕತ್ತಲಮೂಲೆಗಳಲ್ಲಿ ಅಲ್ಲಲ್ಲಿ ಮಿನುಗುವ ಮಿಂಚುಳ. ಬಾಗಿಲಿಗೆ ನೇತಾಡಿಸಿದ ಲಾಟೀನು - ಗವ್ವೆನ್ನುವ ಕತ್ತಲೆಯಲ್ಲಿ ಆಪ್ತವಾದ ಬೆಳಕು.. ಅದೊಂದು ಬೇರೆಯದೇ ಲೋಕ. ಆ ಮನೆಯವರ ಬಗ್ಗೆ ಅಚ್ಚರಿಯೆನಿಸಿತು. ವಯಸ್ಸಾದರೂ ಚಟುವಟಿಕೆಯಿಂದಿರುವ ಹೆಗಡೆಯವರು, ಬೆನ್ನು ಬಾಗಿಯೂ ಮನೆಯ ಎಲ್ಲ ಕೆಲಸ ನಡೆಸುವ ಶೇಷಜ್ಜಿ.. ಬೇರೆ ಯಾರೂ ಇಲ್ಲ ಯಾಕೆ..? ರೇಡಿಯೋ ನಂದಿಸಿ ನಮ್ಮ ಜೊತೆ ಮಾತುಕತೆಗೆ ತಿರುಗಿದ ಹೆಗಡೆಯವರನ್ನು ಕೇಳಿದೆವು. ಕವಳ ತುಂಬಿದ ಬಾಯಲ್ಲಿ ಹೆಗಡೆಯವರು ಸಂಕ್ಷಿಪ್ತ ವಿವರ ಹೇಳಿದರು.

ನಾನು ಅಜ್ಜಿಗೆ ಸಹಾಯಕ್ಕೆ ಹೋಗಲಾ ಅಂತ ಕೇಳಿ ಒಳಹೋದೆ. ಅಜ್ಜಿ ದೊಡ್ಡ ಅಡಿಗೆಮನೆಯಲ್ಲಿ, ಕಟ್ಟಿಗೆ‌ಒಲೆಯಲ್ಲಿ ಅನ್ನಕ್ಕಿಟ್ಟು ಸಣ್ಣ ದನಿಯಲ್ಲಿ ಹಾಡಿಕೊಳ್ಳುತ್ತಿದ್ದರು. ಆಲಿಸಿದರೆ ಯಾವುದೋ ಹಿಂದುಸ್ತಾನಿ ರಾಗ ಎಲ್ಲೋ ಕೇಳಿದಂತ ಹಾಡು.. ನಿಮಗೆ ಏನಾದರೂ ಮಾಡಿಕೊಡಬೇಕಾ ಅಂದ್ರೆ ದೊಡ್ಡದಾಗಿ ನಗಾಡಿದರು. ನಮ್ಮ ಅಡಿಗೆಮನೆಯಲ್ಲಿ ಕತ್ತಲಲ್ಲಿ ಓಡಾಡದೇ ಕಷ್ಟ. ಎಂತ ಮಾಡದೂ ಬ್ಯಾಡ. ಕೂತ್ಕ ಅಲ್ಲೇ ಒಲೆ ಹತ್ರ, ಯಾವೂರಾತು ನಿಂಗೆ, ಕೈ ಅಡ್ಡಹಿಡಿದು ನನ್ನ ಮುಖವನ್ನೇ ದಿಟ್ಟಿಸಿದರು. ನನ್ನ ಊರು, ಸಾಗರ. ಇರೋದು ಬೆಂಗಳೂರಲ್ಲಿ ಗಂಡ ಅಂಶುನ ಜೊತೆ ಎಲ್ಲ ಹೇಳಿದೆ... ಹವ್ಯಕರಾ ಅಂತ ಕೇಳಿ ತಿಳಿದು ಖುಷಿಯಾದರು. ನೀವು ಈಗ ಹಾಡುತ್ತಿದ್ದುದು ಯಾವುದು ಅಂತ ಕೇಳಿದರೆ, ಅಯ್ಯೋ ನನ್ನ ಕಗ್ಗ ಎಲ್ಲ ಯಾಕೆ ನಿಮ್ಗೆ ಪೇಟೆಮಕ್ಕಳಿಗೆ... ನಾನು ಸುಮ್ಮನೆ ಕುಳಿತೆ. ಉರಿವ ಬೆಂಕಿಯನ್ನೇ ನೋಡುತ್ತಾ. ಮತ್ತೆ ಅನ್ನದಲ್ಲಿ ಸೌಟು ತಿರುಗಿಸುತ್ತಿರುವಾಗ ತಂತಾನೆ ಅವರ ಬಾಯಿಂದ ಉಲಿಯೆದ್ದಿತು..


ಮೈ ಉಸೇ ಮೆಹಸೂ..ಸ್ ಕರ್ ಸಕ್ತಾಥಾ, ಛೂ ಸಕ್ತಾ ನ ಥಾ.. ಫಾಸಲೇ ಐಸೇ ಭೀ ಹೋಂಗೆ, ಯೇ ಕಭೀ ಸೋಚಾ ನ ಥಾ..

ನಾನು ಬೆರಗಾಗಿ ಕೂತೆ. ಗುಲಾಮ್‌ಅಲಿಯವರ ಬಾಯಲ್ಲಿ ಕೇಳಿದ್ದ ಗಝಲಿನ ಸಾಲುಗಳು ಈ ಕಗ್ಗಾಡಿನಲ್ಲಿ ಅಜ್ಜಿಯ ಬಾಯಲ್ಲಿ ಪಕ್ಕವಾದ್ಯದ ಕನಿಷ್ಠ ಹಾರ್ಮೋನಿಯಂ ಸಾಥ್ ಕೂಡ ಇಲ್ಲದೆ ಬೇರೆಯದೇ ಮಾಧುರ್ಯದಲ್ಲಿ ಕೇಳಿಸಿತು. ಅಜ್ಜೀ ಇದು ಗಝಲ್ ಅಲ್ದಾ, ನೀವು ಹೆಂಗೆ ಕಲ್ತದ್ದು? - ಆ ಕತೆ ಯಾಕೆ ಬಿಡು, ಕೇಳಿ ಬೇಜಾರ್ ಬತ್ತ್, ಬ್ಯಾಡ.. ಕತೆಯೆಂದರೆ ಬಾಯಿ ಬಿಡುವ ನಾನು ಬಿಡುತ್ತೇನಾ? ಅಜ್ಜಿಯ ಬೆನ್ನು ಹತ್ತಿದೆ. ಇವತ್ತೆಲ್ಲ ಮುಗಿಯದಿಲ್ಲೆ ಅಂತ ಹೆದರಿಸಿದರು. ನಾನು ಬಿಡಲಿಲ್ಲ. ನಾವು ಹೇಗೂ ಮೂರ್‍ದಿನ ಇರೋದು. ಪೂರ್ತಿ ಕತೆ ಹೇಳಿ. ನಾನು ಬೇಕಿದ್ದರೆ ನಿಮ್ಮ ಕೆಲಸದಲ್ಲಿ ಸಹಾಯ ಮಾಡ್ತೇನೆ ಅಂದೆ. ನನ್ನ ಕೆನ್ನೆ ಹಿಂಡಿ, ಎಂತೂ ಬ್ಯಾಡ ಬಂದು ಹತ್ತಿರ ಕೂತು ಮಾತಾಡಿದ್ಯಲ್ಲ ಸಾಕು, ತಡಿ ಅನ್ನ ಬಸ್ದು ಬಿಡ್ತಿ ಆಮೇಲೆ ಊಟಕ್ಕೆ ಆಗಲ್ಲೀಪ್ಪವರೆಗೆ ಕತೆಯೋ ಕತೆ, -ನಕ್ಕರು.
ಅನ್ನ ಬಸಿಯುವಾಗ ಇನ್ಯಾವುದೋ ಒಂದು ಗಝಲು..



ಝಕ್ಮ್‌ಏ ತನಹಾಯಿ ಮೇ ಖುಶ್ಬೂ ಏ ಹಿನಾ ಕಿಸ್‌ಕೀ ಥೀ.. ಸಾಯಾ ದೀವಾರ್ ಪೆ ಮೇರಾ ಥಾ..
ಸದಾ ಕಿಸ್‌ಕೀ ಥೀ..

ನಾನು ಬೇಂದ್ರೆಯವರ ಸೂಜಿಯೊಳಗಿನ ದಾರದಂತೆ ಅಜ್ಜಿಯ ನೆನಪಿನ ಕಣಿವೆಗೆ ಜಾರತೊಡಗಿದೆ. ಕತ್ತಲು ತುಂಬಿದ ಅಡಿಗೆ ಮನೆಯಲ್ಲಿ ದೇವರ ಮುಂದಿನ ನೀಲಾಂಜನದ ಬೆಳಕು. ನಾವಿಬ್ಬರೂ ಒಲೆಯ ಪಕ್ಕದ ಗೋಡೆಗೊರಗಿ ಕೂತು, ಸಾರು ಕುದಿಯುತ್ತಾ, ಒಲೆಯ ಬೆಂಕಿಯ ಬೆಳಕು. ಕಟ್ಟಿಗೆ ಸ್ವಲ್ಪ ಹಸಿಯಿದ್ದಿರಬೇಕು, ಸಣ್ಣಗೆ ಹೊಗೆಯಾಡುತ್ತಿತ್ತು.
ಅಜ್ಜಿಯ ನೆನಪು ಹೊರಗೆ ಕವಿದ ಮಳೆಮಂಜಿನಂತೆ ತಂಪಗೆ ಇಳಿಯತೊಡಗಿತು.


ಹುಟ್ಟಿದೂರು ಕಾಸರಗೋಡಿನ ಸಜಂಕಿಲ ಮಗಾ, ದೊಡ್ಡ ಹಳ್ಳಿಯೇ, ಊರಲ್ಲಿ ಕನ್ನಡಶಾಲೆಯಿತ್ತು, ಇಕ್ಬಾಲ್ ಸಾಬರ ಮನೆಯಲ್ಲಿ ಮದರಸವೂ ನಡೆಯುತ್ತಿತ್ತು. ಸಂಜೆ ದನಕರ ಮನೆಗೆ ಬರುವ ಹೊತ್ತಲ್ಲಿ ನಾವು ಮಕ್ಕಳು ಊರ ಮೈದಾನದಲ್ಲಿ ನೆಗಾಡಿಕೊಂಡು ಆಡುತ್ತಿದ್ದೆವು. ಆಟಕ್ಕೆ ಜಾತಿ ಗೊತ್ತಾಗುತ್ತಿರಲಿಲ್ಲ, ತೆಪ್ಪಗೆ ಮನೆಯೊಳಗಿರುತ್ತಿತ್ತು. ಅಲ್ಲಿ ನನ್ನ ಒಬ್ಬ ಗೆಳತಿ, ನಸೀಮಾ, ಆಟ ಮುಗಿಸಿ ಬರುವಾಗ ಅವರ ಮನೆಯಾಸಿಯೇ ಬರಬೇಕು. ಅವಳಪ್ಪ ಪ್ಯಾರೇಸಾಬರು, ಮೂರುಸಂಜೆಯಲ್ಲಿ ಊರಸಾಬರೆಲ್ಲ ನಮಾಜು ಮಾಡುವಾಗ, ಹೊನ್ನೆಣ್ಣೆಯ ಕಿರುದೀಪದ ಬೆಳಕಲ್ಲಿ ಪೇಟಿ ಇಟ್ಟುಕೊಂಡು ನೀನು ಹೇಳಿದ್ಯಲ್ಲ ಗಝಲ್ ಅದು ಹಾಡುತ್ತಿದ್ದರು. ಚಿಕ್ಕಂದಿನಿಂದ ಸಂಗೀತದ ಹುಚ್ಚಿನ ಅವರು ಉತ್ತರದ ಕಡೆ ಎಲ್ಲೋ ಹೋಗಿ ಕಲಿತದ್ದುಂಟಂತೆ. ಆಮೇಲೆ ಬದುಕಿನ ಹರಿವಿಗೆ ಶರಣಾಗಿ, ಸಜಂಕಿಲದಲ್ಲಿ ಸೈಕಲ್ ಶಾಪ್ ಇಟ್ಟುಕೊಂಡು ಮನೆ ನಡೆಸುತ್ತಿದ್ದರು. ಸಂಜೆ ಕೆಲಸ ಮುಗಿದು, ಊಟಕ್ಕೆ ಮೊದಲು ಅವರ ಹಾಡು ಉಲಿಯಾಗುತ್ತಿತ್ತು. ಅವರ ಮನೆಯ ದಣಪೆಗೆ ಅಂಟಿಕೊಂಡು ಕೇಳುತ್ತ ನಿಂತವಳನ್ನ, ಮನೆಯಿಂದ ಕಕ್ಕ ಬಂದು ಬೈದು ಹೊರಡಿಸಿದಾಗಲೇ ಎಚ್ಚರ.. ಹಾಗೇ ಕೇಳಿ ಕಲಿತ ಹಾಡಷ್ಟೇ. ನನ್ನ ಕೇಳುವ ಖುಷಿ ನೋಡಿ, ಅವರಿಗೂ ಖುಷಿಯಾಗಿ, ಪ್ಯಾರೇಸಾಬ್ರು ಆಗೀಗ ಮಧ್ಯಾಹ್ನ ಪೇಟಿ ಹಿಡಿಯಲು ಕೊಟ್ಟಿದ್ದರು. ಅರ್ಥವನ್ನೂ ಹೇಳಿದ್ದರು. ಹಾಡಿನ ರಾಗ, ತಾಳಗಳಿಗಿಂತ, ಹಾಡಿನ ಭಾವ, ಅದರ ಇಂಪು ನನ್ನನ್ನು ಕಟ್ಟಿ ಹಾಕಿದ್ದವು. ಹಾಗೆ ಮನಸ್ಸಿನಲ್ಲುಳಿದ ಹಾಡುಗಳೇ ಈಗ ದಿನಾ ನನ್ನ ಜೊತೆಗಿರುವುದು.. ಸುಮ್ಮನೆ ಕೂತರು. ನಾನು ಅವರ ಮೌನವನ್ನ ಕೇಳಿಸಿಕೊಂಡೆ.

ಚಂದದೂರು ಸಜಂಕಿಲದಿಂದ ಈ ಶೇಷಿಯನ್ನು ಆಗುಂಬೆಗೆ ಕಳಿಸಿಕೊಟ್ಟರು, ಗಂಡನ ಜೊತೆಯಲ್ಲಿ. ಹದ್ಮೂರು ವರ್ಷ ಇದ್ದಿರಬೇಕು ನನಗಾಗ.
ಆಗುಂಬೆಯೂ ಚಂದದೂರೆ. ಸಜಂಕಿಲಕ್ಕಿಂತ ದೊಡ್ಡದು, ಘಟ್ಟದ ಮೇಲೆ ಬೇರೆ. ಬೇಜಾರೆಂದರೆ, ಅಲ್ಲಿ ಮೊರೆವ ಕಡಲಿಲ್ಲ. ಸುರಿವ ಮಳೆ, ದಟ್ಟ ಕಾಡು, ಸುತ್ತುವರಿದ ಮಲೆ.. ಮೂರು ವರ್ಷದ ಕೊನೆಗೆ ಮಗಳು ಹುಟ್ಟಿದಳು.. ಹೆಸರಿಡುವುದಕ್ಕಿಂತ ಮುಂಚೆ, ಗಂಡ ಮನೆಯ ಯಾವುದೋ ವಿಚಾರಕ್ಕೆ ಬೇಸರ ಮಾಡಿಕೊಂಡವರು, ಮನೆ ಬಿಟ್ಟು ಹೋದರು. ತುಂಬು ಮನೆ. ಯಾರಲ್ಲಿ ಕೇಳುವುದು. ಹೆಣ್ಣುಜೀವಕ್ಕೆ ಮಾತಾಡಿ ಗೊತ್ತಿರಲಿಲ್ಲ, ಕಣ್ಣೀರಿಡುವುದಷ್ಟು ಗೊತ್ತಿತ್ತು. ಸುಮ್ಮನಿದ್ದುಬಿಟ್ಟೆ. ಮಗಳು ದೊಡ್ಡವಳಾದಾಗ, ಮಾವ ಮತ್ತು ಭಾವ ನಿಂತು ಗಂಡು ಹುಡುಕಿ ಮದುವೆ ಮಾಡಿಕೊಟ್ಟರು ಕಾನುಮನೆಯ ಸುಬ್ರಾಯನಿಗೆ. ಅವನಿಗೋ ಅಪ್ಪ ಅಮ್ಮ ಇರಲಿಲ್ಲ. ತಮ್ಮಂದಿರು ಇಲ್ಲ. ಅವನ ತಂಗಿಯೊಬ್ಬಳನ್ನು ಪುತ್ತೂರಿಗೆ ಕೊಟ್ಟಿದೆ. ಮಗಳ ಬಾಣಂತನಕ್ಕೆ ನಾನೇ ಬಂದೆ. ಬಂದವಳು ಇಲ್ಲೇ ನಿಂತೆ. ಅವಳು ಯಾಕೋ ಮೊದಲಿನಿಂದ ಸೂಕ್ಷ್ಮಜೀವ. ಈ ಮನೆಯಲ್ಲಿ ಒಬ್ಬಳೇ ಇರಲು ಕಷ್ಟವಾಗಿ ನನಗೂ ಇಲ್ಲೆ ಇರಹೇಳಿದಳು. ಮಾವನವರು ಹೋದ ಸುದ್ದಿ ಬಂದಾಗ, ಆಗುಂಬೆಗೆ ಸುಬ್ರಾಯನೇ ನನ್ನ ಕರೆದುಕೊಂಡು ಹೋಗಿ ಬಂದಿದ್ದ. ಆಮೇಲೆ ಆ ಕಡೆ ಹೋಗಲ್ಲೆ. ಇಲ್ಲೆ ಹಾಡಿಕೊಂಡು, ಕೆಲಸ ಮಾಡಿಕೊಂಡು ಮಗಳನ್ನ ನೋಡಿಕೊಂಡು, ಮೊಮ್ಮಗಳನ್ನ ಆಡಿಸಿಕೊಂಡು ಇದ್ದುಬಿಟ್ಟೆ.

ಆಚೆ ವರ್ಷ ಮೊಮ್ಮಗಳ ಮದುವ್ಯಾತು. ಮಗಳು ಮಲೇರಿಯಾ ಬಂದು, ಹೋದ್ವರ್ಷ ಕೈಬಿಟ್ಟುಹೋದ. ಸುಬ್ರಾಯನ್ನ, ಮನೆ, ಅಡಿಗೆ, ಕೊಟ್ಟಿಗೆಯನ್ನ ನೋಡಿಕೊಂಡು, ನೀವು ಚಾರಣಕ್ಕೆ ಬಂದವರ ಹತ್ರ ನಾಕು ಮಾತಾಡಿಕೊಂಡು, ಇದ್ದುಬಿಟ್ಟೆ. ಜೊತೆಗೆ ಸಾಥಿ ಕೊಡ್ಲಿಕ್ಕೆ ಪ್ಯಾರೇಸಾಬ್ರು ಹೇಳ್ಕೊಟ್ಟ ಹಾಡಿದ್ದಲ್ಲಾ.. ಎಲ್ಲ ದುಃಖದ ಹಾಡುಗಳು, ಆದರೂ ಹಾಡಿಕೊಂಡ್ರೆ, ಬೇಜಾರು ಹಿಡ್ದ ಮನಕ್ಕೆ ಹಾಯೆನಿಸ್ತು..
ಒಂದೊದ್ಸ ಕೇಳಿಸಿಕೊಂಡ ಸುಬ್ರಾಯ ತಮಾಷ್ಗೆ ಮಾಡ್ತ - ಅತ್ಯಮ್ಮ ನೀವು ದೇವರನಾಮಾನಾದ್ರೂ ಹೀಂಗ್ ಹೇಳ್ ಕ್ಯಂಡಿದ್ರೆ ಕೊನಿಗೆ ಸ್ವರ್ಗದಾಗೆ ಒಳ್ಳೇ ಜಾಗ ಸಿಗ್ತು ಅಂತ.. ಆನೂ ನೆಗ್ಯಾಡ್ತಿ. ಬದುಕಿನ ನರಕವನ್ನೇ ತೇಯ್ದವಳಿಗೆ ಸತ್ತ ಮೇಲಿಂದು ಏನ್ ಮಹಾ ಅಲ್ದಾ ಅಂತ ಕಾಣ್ತು ನಂಗೆ.. - ನೋವಿನ ರಾಗವೊಂದರ ಚರಣದಂತೆ ನಕ್ಕರು.

ಶಾಲೆ ಕಲ್ತ ಮೊಮ್ಮಗಳು ನಗಾಡ್ತ ಹೇಳಿದ್ದಳು. ಅಮ್ಮಮ್ಮಾ ಶೇಷಿ, ಅಂದ್ರೆ ಲೆಕ್ಕ ಮಾಡಿ ಮಾಡಿ ಉಳೀತಲಾ ಶೇಷ, ಉಳಿದದ್ದು ಅಂತ ಅರ್ಥ. ಹೌದಲ್ದಾ ಮಗಾ, ಎಲ್ಲ ಹೋದ ಮೇಲೂ ತಣ್ಣಗೆ ಉಳಿದುಕೊಂಡ ಶೇಷವೇ ಅಲ್ದಾ ನಾನು? ಸಜಂಕಿಲದ ಕಡಲಗಾಳಿ ಕುಡಿದ ಶೇಷಿ, ಕಾನು-ಮಳೆಯ ಆಗುಂಬೆಗೆ ಹೋಗಿ, ಗಂಡನನ್ನ ಕಳೆದು, ಕಾನ್ಮನೆಗೆ ಬಂದು, ಮೊಮ್ಮಗಳನ್ನ ಕಳಿಸಿ, ಮಗಳನ್ನ ಕಳೆದು, ಯಾರು ಇಲ್ಲದೆಯೂ ಉಳಿದ ಶೇಷ.. ಏನಂತೆ ನೀನು ಕಲ್ತವಳೂ..? ನಾನು ಮಾತು ಬಾರದೆ ಕೂತಿದ್ದೆ.

ನನ್ನ ಮುಖದ ಮೇಲಿನ ವಿಷಾದ ಬೆಂಕಿಬೆಳಕಲ್ಲಿ ಕಂಡಿರಬೇಕು. ಮಗಾ, ಇದಕ್ಕೆಲ್ಲ ಹೀಂಗೆ ಯೋಚ್ನೆಯಾ? ರೆಕ್ಕೆ ಬಂದ ಮರಿ ಗೂಡಿಂದ ಹಾರಿದರೆ, ತಾಯಿ ಹಕ್ಕಿ ಮತ್ತೆ ಹೊಸ ಮೊಟ್ಟೆಗೆ ಕಾವು ಕೊಡದಿಲ್ಯಾ ಹಂಗೇಯ ಬದುಕು. ಒಂದು ನೆಲೆ ತಪ್ಪಿದರೆ, ಇನ್ನೊಂದು, ಹಬ್ಬಿಕೊಂಡು ಹೋಗಲು ಮನಸ್ಸಿರಬೇಕಷ್ಟೆ. ಇಷ್ಟೂ ಇಲ್ಲದೆ ಬೀದಿಸಾವು ಸಾಯುವ ಜೀವಗಳೆಷ್ಟಿದ್ದ ಈ ಜಗತ್ನಾಗೆ. ನನ್ನ ಪಾಡು ಅದಾಗಲ್ಯಲ್ಲ ಅಂತ ಸಮಾಧಾನ. ಇವಳೊಬ್ಬಳೆ ಹೆಂಗೆ ಏಗ್ತ ಅಂತ ವಿಚಾರ ಮಾಡದೆ ಬಿಟ್ಟು ಹೋದ ಗಂಡನ್ನ ನೆನೆದರೆ ಕಿರಿಕಿರಿ. ಅದಕ್ಕೇ ನಾನು ಆ ಮನೆಯ ಗೂಡು ಬಿಟ್ಟು ಇಲ್ಲಿ ಕಾಡಿನ ನೆರಳು ಸೇರಿದೆ. ನನ್ನ ಮರಿ ಹಕ್ಕಿ ಹಾರಿ ಹೋಗುವವರೆಗೆ ನೋಡಿಕೊಂಡೆ. ಇವಳೊಂದು ಜೀವ ಅಂತ ಯೋಚಿಸದೆ ಬಿಟ್ಟು ಹೋದ ಗಂಡನಿಗಿಂತ, ಅತ್ಯಮ್ಮ ಅಂತ ಬಾಯ್ತುಂಬ ಮಾತಾಡುವ ಸುಬ್ರಾಯ ಮಗನೇ ಆಗಿದ್ದಾನೆ. ಹಿತವೆನಿಸುತ್ತಾನೆ. ನಾನು ಕಂತೆ ಒಗೆದಾಗ, ಬೆಂಕಿ ಇಡಲಿಕ್ಕಿದ್ದಾನೆ.
ನೀನು ಮಾತಾಡುವಾಗ ಮೊಮ್ಮಗಳು ನೆನಪಾಯಿತು. ಅವಳು ಅಜ್ಜಿಗೆ ಅಂಟಿಕೊಂಡು, ಮನೆಯಂಗಳದಲ್ಲಿ ಕೂಗುವ ಹಕ್ಕಿಯನ್ನು ಅಣಕಿಸಿಕೊಂಡು, ಮಳೆಯಲ್ಲಿ ಜಗುಲಿಕಟ್ಟೆಯಲ್ಲಿ ಸುಮ್ಮಗೆ ಕೂತು ಹೊರಗೆ ನೋಡುತ್ತಾ ಮನೆಯನ್ನ ಕಳೆಗಟ್ಟಿಸುತ್ತಾಳೆ. ಹಾಂಗಾಗೆ ಇಷ್ಟೆಲ್ಲ ಮಾತಾಡಿದೆ. ನೀನು ಯೋಚನೆ ಮಾಡುವುದು ಬ್ಯಾಡ. ನಾವು ಏನೇ ಮಾಡಿದರೂ ಬದುಕು ತಾನೇ ತಾನಾಗಿ ಮುಂದೆ ಸಾಗುವ ಹಾಡು. ಅದಕ್ಕೆ ಬೇಕಿದ್ದ ರಾಗವನ್ನ ನಾವು ಸೇರಿಸಿ ಹಾಡಿಕೊಳ್ಳಬೇಕಷ್ಟೇ..


ಯೋಳು ಎಲ್ರನ್ನೂ ಎಬ್ಸು ಊಟಕ್ಕೆ.. ತುಂಬ ಹೊತ್ತಾತು -ಅಂತ ಎಬ್ಬಿಸಿದಳು.

ರಾತ್ರೆ ಉಂಡು ಮಲಗಿದಾಗ, ಎಂದಿನಂತೆ ಚಾರಣ ಹೋದಾಗ ಬರುವ ಸುಖನಿದ್ದೆ ಬರಲಿಲ್ಲ. ಶೇಷಪ್ರಶ್ನೆಗಳ ಸರಮಾಲೆ... ನಾನು ಹೊರಳಾಡಿ ಹೊರಳಾಡಿ ಅಂಶುಗೆ ಎಚ್ಚರಾಗಿ ಎಂತಾತು ಅಂತ ಕೇಳುವಷ್ಟರ ಮಟ್ಟಿಗೆ. ಆಮೇಲೆ ಅಲುಗಾಡದೆ ಸುಮ್ಮನೆ ಮಲಗಿದೆ. ಬೆಳಿಗ್ಗೆ ಎಲ್ಲರೂ ಸೇರಿ ನನ್ನ ಹೊದಿಕೆ ಕಿತ್ತೆಳೆದು ಎಬ್ಬಿಸಿದರು. ಆರೂವರೆ ಗಂಟೆ, ಇನ್ನೂ ಪೂರ್ತಿ ಬೆಳಕಾಗಿರಲಿಲ್ಲ. ರಾತ್ರೆಯಿಡೀ ಸುರಿದ ಮಳೆ ಬೆಳಿಗ್ಗೆ ಬಿಡುವು ಕೊಟ್ಟಿದ್ದರೂ, ಮೋಡ ಹೇಗೆ ಬಿಟ್ಟಿರಲಿ ನಿನ್ನನ್ನ ಎಂಬಂತೆ ಕಾನುಮನೆ, ಕಾಡು ಮಲೆ, ಬೆಟ್ಟಶಿಖರವನ್ನೆಲ್ಲ ಕವಿದುಕೊಂಡಿತ್ತು. ಎಲ್ಲರೂ ಅಲ್ಲಿ ಅಂಗಳದ ಮೂಲೆಯಲ್ಲಿ ಐಸಿನಂತೆ ಹರಿದು ಬರುತ್ತಿದ್ದ ಅಬ್ಬಿನೀರಿನಲ್ಲಿ ಮುಖ ತೊಳೆದೆವು. ಆಮೇಲೆ ಅಜ್ಜಿ ಕೊಟ್ಟ ಕಷಾಯ ಕುಡಿದು, ನಾವು ತಂದಿದ್ದ ಬನ್ನು ತಿಂದುಕೊಂಡು, ಮಧ್ಯಾಹ್ನ ಕಳೆದು ಬರುವುದಾಗಿ ಹೇಳಿ ಕೊಡೆಕಲ್ಲು ಗುಡ್ಡ ಹತ್ತಲು ಹೊರಟೆವು. ಹೆಗಡೆಯವರ ಮನೆಯ ಕೊಟ್ಟಿಗೆ ಕೆಲಸಕ್ಕೆ ಬಂದ ಮಂಜನ ತಮ್ಮ, ನಾಗ ನಮ್ಮ ಜೊತೆ ದಾರಿ ತೋರಲು ಬಂದ. ದಟ್ಟ ಕಾಡು ಹಾದು, ಬಯಲಲ್ಲಿ ನಡೆದು, ಏರುದಾರಿ ಹಿಡಿದು, ಅಷ್ಟು ತಣ್ಣನೆಯ ವಾತಾವರಣದಲ್ಲೂ ಬೆವರುತ್ತ, ನಾವು ಕೊಡೆಕಲ್ಲು ತುದಿ ಮುಟ್ಟಿದಾಗ ಎಳೆಬಿಸಿಲು ಬೆಳೆದು ಚುರುಗುಡುತ್ತಿತ್ತು. ನಮ್ಮ ಅದೃಷ್ಟವೆಂಬಂತೆ ಮಳೆ ಬಿಡುವು ಕೊಟ್ಟು, ಹಬ್ಬಿ ನಿಂತ ಮಂಜು ಕರಗಿ ಕಣ್ಣಿಗೆ ಹಬ್ಬವಾಗುವಂತಹ ಹಸಿರು ಹಬ್ಬಿತ್ತು. ಕೊಡೆಕಲ್ಲಿನ ತುದಿಯಲ್ಲಿ ಕೊಡೆಯಂತೆ ಚಾಚಿಕೊಂಡಿದ್ದ ಬೃಹತ್ ಬಂಡೆಯ ಕೆಳಗೆ ಕೂತು ಮುಂದೆ ಹರಡಿಕೊಂಡಿದ್ದ ಕಣಿವೆಯನ್ನು ಮನಸೋ ಇಚ್ಛೆ ಸವಿದೆವು. ಅಷ್ಟರಲ್ಲಿ ಅಜಯ ಬ್ಯಾಗಿನಿಂದ ನಾವು ತೆಗೆದುಕೊಂಡು ಹೋಗಿದ್ದ ಹಣ್ಣುಗಳನ್ನು, ಸೌತೆಕಾಯನ್ನು ಮುಂದಿಟ್ಟ. ಎಲ್ಲರೂ ಮಾತಾಡದೆ ಸದ್ದು ಮಾಡದೆ, ಕಾಡಿನ ಮೌನದಲ್ಲಿ, ಹಕ್ಕಿಪಕ್ಕಿಗಳ ಚಿಲಿಪಿಲಿಯಲ್ಲಿ ಒಂದಾಗಿ ಸೇರಿ ತಿಂದೆವು. ಕಣ್ಣು ನೋಡಿದಲ್ಲೆಲ್ಲಾ ಹಸಿರು, ದೂರದೂರದಲ್ಲಿ ಅಲೆಗಳಂತೆ ಹಬ್ಬಿನಿಂತ ನೀಲಿ ಬೆಟ್ಟಸಾಲು, ಮಧ್ಯೆ ಬಳ್ಳಿಯಂತೆ ಬಳುಕಿ ಹರಿದ ನದಿ,ಹೊಳೆಗಳು, ಅಲ್ಲಲ್ಲಿ ಕಾಡನ್ನು ಕತ್ತರಿಸಿ ನಡೆದ ಟಾರು ರಸ್ತೆಯ ದೂರನೋಟ.. ದೂರದಲ್ಲಿ ಕಣಿವೆಯಲ್ಲಿ, ಕಾನುಮನೆಯ ಕೆಂಪುಹಂಚು, ಮನೆಯಿರುವ ಸುತ್ತಲಿನ ಹಸಿರುಗದ್ದೆ, ಮನೆಯಿಂದ ಮೇಲೆದ್ದ ಹೊಗೆ ಎಲ್ಲ ಚಿತ್ರದಲ್ಲಿ ಬಿಡಿಸಿದಂತೆ ಕಾಡುತ್ತಿತ್ತು. ಇಂತ ಸುಂದರ ಸನ್ನಿವೇಶದಲ್ಲಿ ಎಂದಿನಂತೆ ತನ್ನ ಹಕ್ಕಿ ಹಾಡು ಹಾಡುವ ಅಂಶು, ಗುನುಗುತ್ತಿದ್ದ... ಈ ಸೃಷ್ಟಿ ಎಂತಾ ಸೊಬಗಿನಾಲಯಾ,, ಸೌಂದರ್ಯದ ನೆಲೆ ಈ ದೇವಾಲಯಾ.. ತಣ್ಣಗೊಂದು ಗಾಳಿ ಬೀಸಿತು.. 'ಗಾಳಿಯೆಂಬುದೆಲ್ಲ ಬರಿಯ ಸುಳ್ಳು ಹೆಸರೂ..ನಿಜದಲಿ ಅದು ಭಗವಂತನ ಉಸಿರೂ.. ಮತ್ತೊಂದು ಕುಳಿರ್ಗಾಳಿ, ಈಗ ಅಜಯ ವಿಷಲ್ ಹಾಕುತ್ತಾ ಹಾಡಿಗೆ ಸಾಥ್ ಕೊಟ್ಟ. ಹಾಗೇ ತುಂಬ ಹೊತ್ತು ಮನಸ್ಸಿಗೆ ಬಂದ ಹಾಡನ್ನೆಲ್ಲ ಗುನುಗುತ್ತ, ಕೇಳುತ್ತ ಕುಳಿತಿದ್ದೆವು. ನೂರುಲ್ಲ ಅಮ್ಮನ ಬಗೆಬಗೆಯ ಚಂದಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತ ಕೂತಿದ್ದ. ನಾಗ, ಬಿಸ್ಲೇರ್ತಾ ಇದ್ಯಲ್ಲ, ವಾಪಿಸ್ ಹೋಗಣ, ಇಲ್ಲಿ ಎಷ್ಟ್ ಹೊತ್ತಿಗೆ ಮಳೆ ಹಿಡೀತು ಹೇಳಕ್ಕಾಗಲ್ಲ, ಆಮೇಲೆ ದಾರಿ ಹಿಡ್ಯದು ಕಷ್ಟ. ಅಂದಾಗ ಎದ್ದು ಹೊರಟೆವು. ಇಳಿಯುವುದು ಹತ್ತುವುದಕ್ಕಿಂತ ಕಷ್ಟವಾಗಿತ್ತು.. ನಿಧಾನ ಇಳಿದು ಕಾನ್ಮನೆ ಸೇರುವಷ್ಟರಲ್ಲಿ ಹೆಗಡೆಯವರು ಮಧ್ಯಾಹ್ನದ ಊಟ ಮುಗಿಸಿ ಪ್ರದೇಶ ಸಮಾಚಾರ ಕೇಳುತ್ತ ಕುಳಿತಿದ್ದರು. ಅಜ್ಜಿ ನಡುಮನೆಯ ಮೆಟ್ಟಿಲಲ್ಲಿ ಕೂತಿದ್ದರು.

ಊಟವಾಗಿ ಜಗುಲಿಯಲ್ಲಿ ಕಾಲು ಚಾಚುವಷ್ಟರಲ್ಲಿ ಮತ್ತೆ ಜೋರು ಮಳೆ ಹಿಡಿಯಿತು. ನೀವು ಬೇಗ ಬೆಟ್ಟಕ್ಕೆ ಹೋಗಿದ್ದು ಒಳ್ಳೇದಾತು, ನಿಮಗೆ ಇನ್ನೆರಡು ದಿನ ಜಗುಲಿಯೇ ಗತಿ ಅಂತ ಕಾಣ್ತು ಅಂತ ಹೆಗಡೆಯವರು ನಕ್ಕರು..
ಅವರು ಹೇಳಿದ ಹಾಗೇ ಮಳೆ ಅವತ್ತಿಡೀ ಬಿಡಲಿಲ್ಲ. ನಾವು ಅಲ್ಲೇ ಜಗುಲಿಯಲ್ಲಿ ಕೂತು ಮಳೆ ನೋಡುತ್ತ ದಿನ ಕಳೆದೆವು.

ರೇಡಿಯೋದಲ್ಲಿ ಇನ್ನೆರಡು ದಿನ ಘಟ್ಟದಲ್ಲಿ ಭಾರೀ ಮಳೆ ಅಂತ ನ್ಯೂಸ್ ಕೇಳಿ ತೆಪ್ಪಗೆ ಕೂತೆವು. ಆದರೂ ಆ ಮಳೆ ಚಂದವಿತ್ತು. ಮರುದಿನವೂ ಮಳೆಯ ಕತೆಯೇ ಮುಂದುವರಿಯಿತು. ಸ್ವಲ್ಪ ದೂರದಲ್ಲಿದ್ದ ಎತ್ತಿನಭುಜವೆಂಬ ಗುಡ್ಡಕ್ಕೆ ಹೋಗುವ ನಮ್ಮ ಪ್ಲಾನ್ ಕೈಬಿಟ್ಟು, ಮಧ್ಯಾಹ್ನಕ್ಕೆ ಮೊದಲೇ ಹೆಗಡೆಯವರಿಗೆ, ಅಜ್ಜಿಗೆ ವಿದಾಯ ಸಲ್ಲಿಸಿ ರಸ್ತೆಯ ಕಡೆ ಬಸ್ಸು ಹಿಡಿಯಲು ಹೊರಟೆವು.
ಏರಿಕಲ್ಲು ಬೆಟ್ಟವನ್ನು ಇಳಿವಾಗ ಸುತ್ತಲ ಕಣಿವೆ ಹೊದ್ದಿದ್ದ ಮೋಡ ಬಿಸಿಲುಗಳ ಸೆರಗಿನ ಮೇಲೆ ಮೌನ ಚಿಲಿಪಿಲಿಯ ಚಿತ್ತಾರವಿತ್ತು. ಗುಡ್ಡಗಳ ದಾರಿ ಮುಗಿದು ಕಣಿವೆ ಕತ್ತರಿಸಿ ಹರಿದ ಟಾರು ರಸ್ತೆ ಸಿಕ್ಕಲ್ಲಿ ಜನರಿಲ್ಲದ ಒಂದು ಪುಟ್ಟ ಬಸ್ ಸ್ಟಾಪಿತ್ತು. ಒಂದೆರಡು ನಿಮಿಷ ಕಾಯುವಷ್ಟರಲ್ಲಿ ಕೊಟ್ಟಿಗೆಹಾರದ ಕಡೆ ಹೊರಟಿದ್ದ ಬಸ್ಸು ಬಂದಾಗ ಹತ್ತಿ ಹೊರಟು ಕೊಟ್ಟಿಗೆ ಹಾರ ಸೇರಿದೆವು. ಅಲ್ಲಿ ಕಾಮತರ ಕ್ಯಾಂಟೀನಿನಲ್ಲಿ ಬಿಸಿ ಬಿಸಿ ಟೀ ಬಾಳೆಹಣ್ಣಿನ ಬನ್ನು ತಿನ್ನುವಷ್ಟರಲ್ಲಿ ಬೆಂಗಳೂರಿನ ಕಡೆ ಹೊರಟ ಕನೆಕ್ಟಿಂಗ್ ಬಸ್ ಸಿಕ್ಕಿತು. ನಮ್ಮೆಲ್ಲ ಲಗೇಜು, ಕಣಿವೆಯ ಚಂದದಲ್ಲಿ ಅದ್ದಿ ತೆಗೆದ ಚೈತನ್ಯವನ್ನ ಸೇರಿಸಿಕೊಂಡು ಬಸ್ಸೇರಿದೆವು. ಬಸ್ಸು ಕೊಟ್ಟಿಗೆ ಹಾರದಿಂದ ಹೊರಡುವ ಕೊನೆಯ ತಿರುವಿನಲ್ಲಿ ದೂರದ ಕೊಡೆಕಲ್ಲು ಗುಡ್ಡಸಾಲು ಆಕಾಶದಲ್ಲಿ ಬರೆದ ಚಿತ್ರದಂತೆ ಕಾಣುತ್ತಿತ್ತು. ಹರಿಯುವ ಹೇಮಾವತಿಯ ಸೇತುವೆ ದಾಟುವಾಗ ಗಾಳಿಗೆ ಬಗ್ಗಿ ನಿಂತ ಮರವೊಂದು ಶೇಷಜ್ಜಿಯ ನೆನಪನ್ನು ಹಸಿರಾಗಿಸಿ ತಂದಿತು. ಅಜ್ಜಿ ತನಗೂ ನನಗೂ ಸಮಾಧಾನ ಮಾಡಲು ಹೇಳಿದ ಮಾತು ಮನದಲ್ಲಿ ತಿಳಿವಿನ ಬೆಳಕಾಗಿ ಹೊಳೆಯಿತು.
ನಾವು ಏನೇ ಮಾಡಿದರೂ, ಬದುಕು ತಾನೇ ತಾನಾಗಿ ಮುಂದೆ ಸಾಗುವ ಹಾಡು. ಅದಕ್ಕೆ ಬೇಕಿದ್ದ ರಾಗವನ್ನ ನಾವು ಸೇರಿಸಿ ಹಾಡಿಕೊಳ್ಳಬೇಕಷ್ಟೇ..


(ಈ ಕತೆಯನ್ನು ಜುಲೈ ಮೊದಲವಾರದ ಸಂಡೇ ಇಂಡಿಯನ್ ಕನ್ನಡ ವಾರಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಗೆಳೆಯ ಶಶಿಸಂಪಳ್ಳಿಯ ಆಯ್ಕೆ. ಕತೆಗೆ ಮೂಲ ಸ್ಫೂರ್ತಿಯಾದ ಶೇಷಜ್ಜಿ, ಅವಳ ಹಕ್ಕಿ ಬದುಕು, ಮತ್ತು ವಿಷಾದವನ್ನೂ ಸಹನೀಯವಾಗಿ ಕಟ್ಟಿಕೊಡುವ ಗಝಲ್ ಸಾಲುಗಳಿಗೆ ನಾನು ಅತ್ಯಂತ ಋಣಿ. ಹೋದಾಗಲೆಲ್ಲ ಮುದ್ದಿಸಿ ತೆರೆದುಕೊಳ್ಳುತ್ತಾ ಹೋದ ಅಮ್ಮನ ಬಗ್ಗೆ ಎಷ್ಟು ಬರೆದರೂ ಏನು ಹೇಳಿದರೂ ಸಾಲದು, ಅವಳು ಬಿತ್ತಿದ ಹುಲ್ಲು ನಾನು)


Sunday, July 22, 2007

ರಾಜಧಾನಿಯಿಂದ ರಾಜಧಾನಿಗೆ...

ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಮತ್ತಿಲ್ಲಿಗೆ

ತಿರುಗಿ ನೋಡಿ ದಾಖಲು ಮಾಡಿಕೊಳ್ಳಲೂ
ಪುರುಸೊತ್ತಿರದಷ್ಟು ಕೆಲಸದ ನಡುವೆ, ಕಂಡ
ನೂರೆಂಟು ನೋಟಗಳು,
ಅವುಗಳಾಚೆಗೆ ಹೊಳೆವ ಹಲವಾರು ಚಿತ್ರಗಳು
ಎಲ್ಲ ಮೆಮೊರಿ ಕಾರ್ಡಿನಲ್ಲಿವೆ,
ಈ ವಾರ ಕಾದಿರುವ ಕೆಲಸದೊತ್ತಡದ ನಡುವೆ
ಒಂದೊಂದಾಗಿ ಪಡಿಮೂಡಲು ಕಾಯುತ್ತಾ..

ಹೋಗಿದ್ದೆಲ್ಲಿಗೆ ಬಂದಿದ್ದೆಲ್ಲಿಗೆ?
ಅದೇ ದಿಲ್ಲಿಗೆ.. ಮತ್ತೆ ಬೆಂಗಳೂರಿಗೆ..
ಪುಣ್ಯವೆಂದರೆ ಹೊರಟ ಜಾಗಕ್ಕೆ
ಮತ್ತೆ ಬಂದು ಸೇರಿರುವುದು.
ಅದೇ ಜಾಗ, ಅದೇ ಮನೆ,
ಹೊರಟಾಗ
ಮೊಗ್ಗು ಮೂಡಿದ್ದ ಗಿಡದ ತುಂಬ
ಈಗ
ಬಿರಿದು ನಿಂತ ಹೂಚೆಲುವು..

ನಾಲ್ಕಾರು ತಿಳಿವಿನ ಹೊಳವು
ಸುತ್ತ ಹರಡಿ..
ಮಳೆನಿಂತ ಬೆಳಗು.

Tuesday, July 10, 2007

ಹಿಡಿದಿಡಲಾಗದ ಚಿತ್ರಗಳು..

ಫ್ರೇಮಿನಲ್ಲೊಂದು ರೋಚಕ ತಿರುವು..
ಬಗ್ಗಿ ನೋಡಿದ್ದಿದ್ದರೆ ಕಣಿವೆಯ ಹಸಿರು ಗದ್ದೆ
ತಲೆಯೆತ್ತಿದರೆ ಮೋಡ ಮುತ್ತಿಕ್ಕುವ ಬೆಟ್ಟಸಾಲು..

ಓಹ್, ರಂಜಕತೆಯ ಬಣ್ಣ ಖಾಲಿಯಾಗಿ
ಕರಿಗೆರೆಯೆಳೆಯುವ ಇದ್ದಿಲ ಚೂರು ಮುಗಿದುಹೋಗಿ
ಒಳಗೂ ಹೊರಗೂ ಸುರಿವ ಮಳೆಗೆ-
ಬಿಳಿಯ ಹಾಳೆ ಒದ್ದೆ!
ಫ್ರೇಮಿನ ಅಂಟು ಲಡ್ಡಾಗಿ,
ಅಲುಗಾಡುತ್ತಿದೆ
ಗೋಂದಿನ ಟ್ಯೂಬು ಚಪ್ಪಟೆ..

ಬಿಡಿಸಲಾಗದ ಚಿತ್ರಗಳನ್ನು
ತುಂಬಲಾಗದ ಬಣ್ಣಗಳನ್ನು
ಊಹಿಸುತ್ತ ಮುದಗೊಂದು,
ಎಚ್ಚರದಿ ಖಿನ್ನವಾಗಿ
ಕೈಚಲ್ಲಿ ಕೂತು ದಿಟ್ಟಿಸುವುದಷ್ಟೆ ಉಳಿದದ್ದು
ಮಾತು ದೂರ,
ಮೌನ ಭಾರ..

ಮುರಿದು ಬಿಸಾಡಿದ ಕ್ರೇಯಾನ್ ಹಿಡಿದ
ರದ್ದಿ ಆಯುವ ಪುಟ್ಟನ ಕೈಯಲ್ಲಿ
ನನಗೆಂದೂ ಗೊತ್ತಿರದ ಬಣ್ಣದ ಛಾಯೆ!
ಅವ ಬಿಡಿಸಬಹುದಾದ ಚಿತ್ರದಲ್ಲಿ
ನನ್ನ ಕೈ ಮೀರಿದ ರೇಖೆಗಳ ಮಾಯೆ!

ಎಲ್ಲ ಚಿತ್ರಗಳಾಚೆಗುಳಿಯುವುದು ನನ್ನ ಕವಿಗುರುವಿನ ಇನ್ನೊಂದು ಚಿತ್ರ
"ಕಣ್ಣು ಕಪ್ಪೆಯ ಚಿಪ್ಪಿನಗಲದ ದೋಣಿ, ಅದಕೆ ಕಂಡ ನೋಟ ಸಮುದ್ರದಂಥ ಪ್ರಾಣಿ"

Friday, July 6, 2007

ಸಹಜ ಯಾನದ ತುಂಗಾ ಎಕ್ಸ್ ಪ್ರೆಸ್..

..ಚಡಪಡಿಕೆ ಶುರುವಾಗಿತ್ತು..ರುಟೀನ್ ಇರೋದೇ ಮುರಿಯಕ್ಕೆ ಎನ್ನುವ ಧ್ಯೇಯವಾಕ್ಯದ ಗೆಳೆಯರ ಪುಟ್ಟ ಗುಂಪು ನಮ್ಮದು. ಮುರಿಯುವ ದಾರಿ - ಗಜಿಬಿಜಿಯಿಂದ ದೂರಕ್ಕೆ, ಹಸಿರು ಹೊದ್ದ ಕಾಡಿನ ಮಡಿಲಿಗೆ ಹೋಗಿ, ಇಲ್ಲ ನಂಗೇನೂ ಗೊತ್ತಾಗ್ತಾ ಇಲ್ಲ, ಅಲ್ಲಿ ಏನ್ ನಡೀತಾ ಇದೆ - ಸರಿಯಾಗಿ ಕೆಲಸ ಮಾಡದ ಕೋಡ್, ಪೂರ್ತಿ ಮುಗಿಸಿರದ ರಿಪೋರ್ಟ್, ಹಾಗೇ ಉಳಿಸಿದ ಬಗ್, ಬಗೆಹರಿಯದ ಬಜೆಟ್ ಅನಲಿಸಿಸ್, ಎಲ್ಲ ಏನೋ ಗೊತ್ತಿಲ್ಲ, ಅಂತ ಕಣ್ಣು ಮುಚ್ಚಿಕೊಂಡು ಹಾಲುಕುಡಿವಂತೆ, ನಾವು ಕಾಡಿನ ಮಡಿಲು ಹುಡುಕಿ ಹೊರಡುತ್ತೇವೆ. ಅದೇನು ಕಡಿದಾದ ಬೆಟ್ಟದ ಕಷ್ಟಸಾಧ್ಯ ಚಾರಣವೇ ಆಗಬೇಕಿಲ್ಲ. ಎಲ್ಲಿ ಸರಳ ದಿನಚರಿಯ, ಹಸಿರ ನೆರಳೋ ಅಲ್ಲಿಗೆ ನಾವು.. ಒಂದು ದೀರ್ಘ ಪ್ರಯಾಣ, ಬೆಳಗಾ ಮುಂಚೆಯ ಬಸ್ ಸ್ಟಾಂಡ್ ಹೋಟೆಲಿನ ಗಬ್ಬು ಆದರೆ ಬಿಸಿಯಾದ ಕಾಫಿ, ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಶಟ್ಲಿನಲ್ಲಿ, ಎದ್ದೆದ್ದು ಹಾರಿ ಕೂರುತ್ತ, ಊರಿಂದ ದೂರಾಗಿ ಮನೆಯಲ್ಲೇ ಊರಿರುವ ಹಳ್ಳಿಯ ತಪ್ಪಲು ಸೇರುವುದು ನಮ್ಮನ್ನು ಸದಾ ಹಿಡಿದಿಟ್ಟ ಆಕರ್ಷಣೆ.. ಅಲ್ಲಿ ಬೆಟ್ಟವಿದ್ದರೆ, ದಟ್ಟ ಕಾನಿದ್ದರೆ, ಜಲಪಾತವಿದ್ದರೆ ಮುಗಿದೇ ಹೋಯಿತು.. ಹೋಗಲೇಬೇಕು.. ಮಳೆಯಾ, ಬಿಸಿಲಾ, ಚಳಿಯಾ ಅದೇನಡ್ದಿಲ್ಲ ಬಿಡಿ, ಮಳೆಯಲ್ಲಿ ಒದ್ದೆಯಾಗಿ ನಡೆದು ಬಂದು, ಬೆಚ್ಚಗೆ ಬಟ್ಟೆ ಬದಲಾಯಿಸಿ ಕೂರದಿದ್ದರೆ, ಮಳೆಯ ಮಜಾ, ಹೋಗಲಿ ಬೆಚ್ಚಗಿರುವುದರ ಮಜಾ ಹ್ಯಾಗೆ ಗೊತ್ತಾಗುತ್ತದೆ..?! ಅದಿರಲಿ, ಚಳಿಯಲ್ಲಿ ನಡುಕ ಬರುವಾಗ, ಕಾಲಿಗೆ ಸಾಕ್ಸ್ ಹಾಕಿ, ಬೆಚ್ಚನೆ ಸ್ವೆಟರ್, ಟೋಪಿ ಧರಿಸಿ ಕೂತು ಚಳಿಯನ್ನೇ ಸಿಪ್ ಮಾಡುವ ಮಜಾ.. ಬಿಸಿಲಲ್ಲಿ ಬೆವರಿಳಿದು, ಉಸಿರು ಭಾರವಾಗಿ, ಉಪ್ಪುಪ್ಪು ಬೆವರು ಕಣ್ಣಿಗಿಳಿದು ಉರಿಯಾಗಿ, ಬೆನ್ನ ಹೊರೆಯನ್ನ ಹೊರಲಾರದೆ ಹೊತ್ತು ಆ ಬೆಟ್ಟದ ತುದಿ ಸೇರಿ ಬೀಸಿ ಬರುವ ತಂಗಾಳಿಗೆ ಒಪ್ಪಿಸಿಕೊಂಡು, ಸುತ್ತಲ ಚಂದದಲ್ಲಿ ಮಾತು ಹೊರಡದೆ ಕೂತು ಹಗುರಾಗುವ ಕ್ಷಣದ ಖುಶಿ.. ಇದೆಲ್ಲದರ ಮುಂದೆ ಇನ್ನೇನಿದೆ..? ಅಬ್ಬಬ್ಬಾ ಅಂತ ಹಾಯಾಗಿ ಕೂತ ಕ್ಷಣದಲ್ಲಿ, ಇದನ್ನ ಇವತ್ತು ಇಷ್ಟೊತ್ತಿಗೆ ಮುಗಿಸಿ ರಿಪೋರ್ಟ್ ಕಳಿಸಬೇಕು ಎನ್ನುವ ಧಾವಂತವಿಲ್ಲ.. ಅಲ್ಲದೆ, ಪ್ರಕೃತಿಯ ಶಕ್ತಿ ಮತ್ತು ಭವ್ಯತೆಗೆ ಮಣಿದು ಮೆತ್ತಗಾದ ಕ್ಷಣಗಳಲ್ಲಿ ಎಲ್ಲ ಖಾಲಿಯಾಗಿ ಮತ್ತೆ ಎಲ್ಲ ತುಂಬಿಕೊಂಡ ಅದ್ವೈತ ಭಾವ..

ಹಾಗೇ ಕಳೆದ ವಾರ ನಾವು ನಾಲ್ವರು ಮುತ್ತೋಡಿ - ಭದ್ರಾ ಅಭಯಾರಣ್ಯ, ಚಿಕ್ಕಮಗಳೂರಿಗೆ ಹೊರಟೆವು.. ತುಂಬು ಮಳೆ, ಚಂದ ಕಾಡು, ಅಲ್ಲಲ್ಲಿ ಹೊಳವಾದಾಗ ಮರದಿಂದ ಮರಕ್ಕೆ ಉಲಿಯುತ್ತ ಹಾರುವ ಥರಾವರಿ ಹಕ್ಕಿಗಳು.. ನೆಂದು ಹೊಳೆವ ಹಸಿರ ಜೀವಗಳು..ಕೆಂಪಗೆ ತುಂಬಿ ಹರಿವ ಸೋಮವಾಹಿನಿ, ಅದರಲ್ಲಿ ಅದ್ದಿ ತೇಲಿ ಬರುತ್ತಿರುವ ದೊಡ್ಡ ದೊಡ್ಡ ಮರದ ಚಿಕ್ಕ ದೊಡ್ಡ ಕಾಂಡಗಳು.. ಸೋರುತ್ತಿದ್ದ ಕಾಟೇಜುಗಳು, ನೀಟಾಗಿ ಆಹ್ವಾನಿಸುತ್ತಿದ್ದ ಜಗುಲಿಯ ಮೇಲೆ ಬೆತ್ತದ ಖುರ್ಚಿಗಳು, ಯುನಿಫಾರ್ಮಿನ ಮೇಲೆ ಅರ್ಧ ತೋಳಿನ ಸ್ವೆಟರ್ ಹಾಕಿ, ತಲೆಗೆ ಮಳೆಟೊಪ್ಪಿಗೆ ಹಾಕಿದ ಫಾರೆಸ್ಟ್ ಆಫೀಸಿನವರು.., ಅಲ್ಲಿದ್ದ ಊಟದ ಮನೆಯಿಂದ ಬೆಚ್ಚಗೆ ಹೊರಹೋಗುತ್ತಿದ ಕಟ್ಟಿಗೆ ಒಲೆಯ ಹೊಗೆ, ಹೊಗೆ ಮಾತ್ರ ಯಾಕಮ್ಮ ನಾನೂ ಹೋಗ್ ಬೇಕ್ ಅಂತ ಮೈ ತುಂಬ ಸ್ವೆಟರ್ ತೊಟ್ಟ ಇನ್ನೂ ಮಾತು ಬರದ ಕಂದನೊಂದು ಹೊಸ್ತಿಲ ದಾಟಲು ಮಾಡುತ್ತಿರುವ ಕಸರತ್ತು, ಅಲ್ಲಿ ಸುತ್ತ ಬೆಳೆದಿದ್ದ ಹೂಗಿಡಗಳ ರಸಕುಡಿಯಲು ಮಳೆ ಕಡಿಮೆಯಾದ್ ಕೂಡಲೆ ಹಾರಿ ಬಂದು ಬಗ್ಗಿ ಕೂತು ಹೂವೊಳಗೆ ಕೊಕ್ಕಿಟ್ಟ ಪುಟಾಣಿ ಹಕ್ಕಿ.. ಯಾವ ರಸವನ್ನ ಸವಿಯುವುದು.. ಯಾವುದನ್ನ ಬಿಡುವುದು.. ಅಲ್ಲ ಬಿಡಲಿಕ್ಕೆ ಆದೀತಾ? ನೋಡುತ್ತ ನೋಡುತ್ತ ಸವಿಯುತ್ತ ನಾವು ಜಾರಿ ಹೋಗಿ ಮಾಯಾಲೋಕ ಸೇರಿದ್ದೆವು.. ನಾಳೆ ಊರಿಗೆ ವಾಪಸಾಗಲೇಬೇಕು ಎಂಬ ಎಚ್ಚರದ ಜಗುಲಿಯ ಮೇಲೆ ನಾವು ಆ ಚಂದದ ಜಾಗದ ಸೊಗದಲ್ಲಿ ನೇಯ್ದ ಮಾಯಾಚಾಪೆ ಹಾಸಿ ಕೂತಿದ್ದೆವು.. ನಮ್ಮ ತೇಲುವಿಕೆಯ ಸಮಗ್ರ ನೋಟವನ್ನು ಮತ್ತೆ ಕಟ್ಟಲು ಅಸಾಧ್ಯವಾದರೂ ಕೆಲ ಹಕ್ಕಿನೋಟಗಳನ್ನು ಹೇಗಾದರೂ ಮಾಡಿ ಬರೆದಿಟ್ಟು ಮತ್ತೆ ಮತ್ತೆ ಮೆಲುಕು ಹಾಕಬೇಕೆಂಬ ಸ್ವಾರ್ಥ...

ಪ್ರಕೃತಿಯ ಚಂದ ಮತ್ತು ಗಂಭೀರ ನಿಲುವನ್ನ ಪದರಪದರವಾಗಿ ಬಿಡಿಸಿಟ್ಟ ಹಾಗಿನ ಮುತ್ತೋಡಿ ಕಾಡು, ಚಿಕ್ಕಮಗಳೂರಿನಿಂದ ಸುಮಾರು ೪೦-೪೫ ಕಿ.ಮೀ. ದೂರದಲ್ಲಿದೆ. ಅಲ್ಲಿಗೆ ಹೋಗುವಾಗ ಬಸ್ಸಲ್ಲಿ ಹೋದರೆ, ನಮಗೆ ಅಲ್ಲಿನ ಚಂದ ಕಾಡಿನ ಜೊತೆಗೆ, ಅಲ್ಲಿ ಹಳ್ಳಿಯಲ್ಲಿ ದುಡಿದು ಬದುಕುವ ಎತ್ತರದ ಜೀವಗಳ ಕಿರುನೋಟ ಸಿಕ್ಕೀತು. ಕಾಡೆಂದರೆ ಬರೀ ಕಾಡಲ್ಲ ಅಲ್ಲಿ ಕಾಡು, ಹಳ್ಳಿ, ದುಡಿಮೆ, ಕಷ್ಟ, ತಂಪು ಮಳೆ, ಏರು ತಗ್ಗಿನ ಹಾದಿ ಎಲ್ಲ ಸೇರಿದ ಬದುಕಿನ ಹಾಡು.. ನೋಡಲು ಚಣಕಾಲ ನಿಂತರೆ ಕೇಳಿಸೀತು.. ಇಂಗ್ಲಿಷ್ ಹೆಸರೊಂದರಲ್ಲಿ ಜನಪ್ರಿಯವಾದ ನಮ್ಮದೇ ಕಾಡಿನ ಬಣ್ಣದ ಹಕ್ಕಿಯನ್ನು ನೋಡುವ ನಿಶ್ಚಲ ರೀತಿಯಲ್ಲಿ, ಅಲುಗಾಡದೆ, ಅದರದ್ದೇ ಒಂದು ಭಾಗವಾಗಿ, ಅಲ್ಲಿನ ಹೊಂದಿಕೆ ಕೆಡಿಸದೆ, ನೋಡ ಹೊರಟರೆ ಕಣ್ಣಿಗೆ ಸಿಕ್ಕುವ ನೋಟಗಳು, ಬರೆದಿಡಲಾಗದ್ದು.. ಅಲ್ಲಲ್ಲಿ ಕಾಫಿ ಎಸ್ಟೇಟುಗಳು, ಸುರಿಮಳೆಯಲ್ಲೂ ಉಟ್ಟ ಸೀರೆಯ ಮೇಲೆ ತುಂಬು ತೋಳಿನ ದೊಗಲೆ ಅಂಗಿ, ಹಾಳೆ ಟೋಪಿ, ಬಿಗಿಯಾಗಿ ಹಿಡಿದ ಪುಟ್ಟಕತ್ತಿಯೊಡನೆ, ಬಸ್ಸು ಹತ್ತಿ ಮುಂದಿನೂರಿನ ಎಸ್ಟೇಟ್ ಕೆಲಸಕ್ಕೆ ಹೊರಟ ಹೆಂಗಳೆಯರನ್ನು ನೋಡಿ ನಾನು ಬೆರಗಾದೆ. ಬೆಚ್ಚಗೆ ಮನೆಯಲ್ಲೆದ್ದು, ಬಿಸಿನೀರು ಸ್ನಾನ ಮಾಡಿ, ಎಲ್ಲ ಒಳ್ಳೆಯ ಬೆಚ್ಚನೆ ಅಂಗಿ ಹಾಕಿ, ಮನೆ ಮುಂದೆ ಬರುವ ಕ್ಯಾಬ್ ಹತ್ತಿ ಎ.ಸಿ.ಆಫೀಸಿನ ಮುಂದೆ ಇಳಿಯುವ ಸೌಲಭ್ಯದಲ್ಲಿ ಇದಿಲ್ಲ ಅದಿಲ್ಲ ಅಂತ ಕೊಂಕು ತೆಗೆಯುವ ನಮ್ಮ ನಡವಳಿಕೆ ನೆನಪಾಗಿ ನಾಚಿಕೆಯಾಯಿತು. ಓಹ್ ಎಷ್ಟು ಕಷ್ಟ ಅಂತ ಅನುಕಂಪದ ನನ್ನ ನೋಟವನ್ನ ಕತ್ತರಿಸಿ ಬಿಸಾಕಿದ್ದು ನನ್ನ ಪಕ್ಕ ಕೂತ ಅವಳ ಜೋರುನಗೆ. ಅದು ಬಸ್ಸೆಲ್ಲ ಹರಡಿ, ಸುತ್ತ ನಿಂತ ಜೊತೆಗಾತಿಯರ ನಗುವಿನಲ್ಲಿ ಮಾರ್ದನಿಸಿ, ಕಂಡಕ್ಟರನ ಕೀಟಲೆಯಲ್ಲಿ ಮೊಗ್ಗೊಡೆದಿತ್ತು.. ಕಷ್ಟ ಈಚೆ ದಡದಲ್ಲಿ ನಿಂತವರಿಗೆ.. ಅನುಕೂಲಗಳು ಹುಟ್ಟಿದಾಗಿನಿಂದ ಅಭ್ಯಾಸವಾದವರಿಗೆ, ಆಚೆ ದಡದ ಅವರಿಗದು ಸಹಜ ಬದುಕು, ಅಲ್ಲೂ ನಗು, ಕೀಟಲೆ, ಸಮಾಧಾನ, ಪ್ರೀತಿಯ ಮೊಗ್ಗು, ಅಲ್ಲೊಂದು ಇಲ್ಲೊಂದು ಬಿಕ್ಕು, ಶೀತ ಜ್ವರ, ಕಂತ್ರಾಟುದಾರನ ಹತ್ತಿರ ಬೈಗುಳ.. ಎಲ್ಲ ಸಹಜವಾಗಿ.. ನಮ್ಮ ರಾಜಧಾನಿಯಲ್ಲಿ ನಡೆವಂತೆ ಇಲ್ಲಿ ಮೇಕಪ್ಪಿಲ್ಲ, ಬಿನ್ನಾಣವಿಲ್ಲ, ಸೋಗಿನ ಭಾವಪ್ರದರ್ಶನವಿಲ್ಲ... ಕಪ್ಪು ಮೋಡ, ತಂಪು ಮಳೆ, ಕುಳಿರು ಚಳಿ, ಚುರು ಚುರು ಬಿಸಿಲು, ಕಾಲಕ್ಕೆ ತಕ್ಕಂತೆ ಹೊಂದಿ ನಡೆವ, ಅಳಲೂ ನಗಲೂ ಹೊತ್ತು ಗೊತ್ತಿಲ್ಲದ ಸಹಜ ಯಾನದ ತುಂಗಾ ಎಕ್ಸ್ ಪ್ರೆಸ್..

ನಾವು ಬಸ್ಸಿಳಿದು ಮುತ್ತೋಡಿ ಸೇರಿ ಹಕ್ಕಿಯ ಪ್ರಾರ್ಥನಾ ಗೀತೆಗೆ ತಲೆಯಾಡಿಸಿ, ಮಧ್ಯಾಹ್ನದ ಊಟವನ್ನು ಗೊತ್ತು ಮಾಡಿ ಅಲ್ಲಿ ಹೊಳೆಯಂಚಿನ ಕಾಟೇಜಿನ ಜಗುಲಿಯಲ್ಲಿ ಕೂತೆವು.. ಸೌಂದರ್ಯದ ಪ್ರತಿಫಲಿತ ಬಿಂಬಗಳು ಎಲ್ಲೆಲ್ಲೂ.. ಯಾವ ರಾಗಕ್ಕೂ ಸೇರದ ಮಧುರ ಉಲಿಗಳು ಸುತ್ತೆಲ್ಲೂ.. ಊಟವಾಗಿ ಮಳೆ ಕಡಿಮೆಯಾಗಿ, ನಾವು ಬೆಟ್ಟದ ಮೇಲಿನ ತಂಗುದಾಣಕ್ಕೆ ಹೊರಟೆವು.. ದಾರಿಯಲ್ಲಿ ಆನೆ ನಡೆದ(ದ್ದೇ) ದಾರಿ.. ಮಳೆಯ ನೂಲಿಗೆ ಹಕ್ಕಿಗೊರಳ ರಾಗದೆಳೆ ಸೇರಿಸಿ ನೇಯ್ದ ಹಸಿರು ಉಡುಗೆಯ ತೊಟ್ಟ ಕಾಡು.. ಅಲ್ಲಲ್ಲಿ ಕೆಂಪು ಚಿಗುರಿನ ಚಿತ್ತಾರ, ಕಂದು ತೊಗಟೆಯ ಅಂಚು.. ಯಾವ ಸೂಪರ್ ಮಾಲ್ ನ, ಫ್ಯಾಷನ್ ಡಿಸೈನರ್ ನೇಯಬಲ್ಲಳು ಇದನ್ನ?


ಬೆಟ್ಟದ ಮೇಲೆ ಒಂಟಿ ಮನೆಯಂತಹ ತಂಗುದಾಣ. ಕರೆಂಟಿಲ್ಲ, ಮೊಬೈಲ್ ಸಿಗ್ನಲ್ ಸಿಗುವುದಿಲ್ಲ.. :) ಬೆಚ್ಚನೆ ವರಾಂಡದಲ್ಲಿ ಹಾಕಿದ ಆರಾಮಕುರ್ಛಿಯಲ್ಲಿ ಕೂತು, ಉದ್ದುದ್ದ ಕಿಟಕಿಗಳ ಗಾಜಿನಿಂದ ಮಳೆಯ ಕುಣಿತ, ನೆಲದ ಜೀವಿಗಳ ಏರಿಳಿತ, ಸ್ಪಂದನಗಳನ್ನ ನೋಡುತ್ತಾ ಸಂಜೆ ಕಳೆದೆವು. ಮಳೆ ನಿಂತಾಗೆಲ್ಲ ಹಕ್ಕಿ ಹಾಡು.. ಮುಗಿಯುವಷ್ಟರಲ್ಲಿ ಮಳೆಯ ತಾನ.. ಯಾವ ಕಚೇರಿಯಲ್ಲೂ ಕೇಳಿರದ ಗಾನಸುಧೆ ಸವಿದೆವು. ಸೂರ್ಯನ್ನ ಯಾರಿಗೂ ಗೊತ್ತಾಗದ ಹಾಗೆ ಮನೆಗೆ ಕಳಿಸಿದ ಸಂಜೆ, ಇಂಚಿಂಚೇ ಕತ್ತಲೆಯನ್ನ ನಮ್ಮಂಗಳಕ್ಕೆ ದೂಡುತ್ತಿತ್ತು.. ನೋಡನೋಡುತ್ತ ಪೂರ್ತಿ ಆವರಿಸಿದ ಕತ್ತಲ ಚೆಲುವನ್ನ ಇಮ್ಮಡಿಸಲು ಮೋಡದ ಮರೆಯಲ್ಲೇ ಕೂತು ಕಿರ್‍ಅಣ ಹಾಯಿಸುವ ಚಂದ್ರ, ಇವತ್ತು ರಜಾ ಅಂತ ಕಣ್ಣಿಗೆ ಕಾಣದ ಹಾಗೆ ಬಾನಿನೂರಿನ ಮೋಡಮನೆಗಳಲ್ಲಿ ಬೆಚ್ಚಗೆ ಕೂತ ಚಿಕ್ಕೆರಾಶಿ.. ಕಂಡಿದ್ದು, ಕಾಣದ್ದು, ಕಾಣಬೇಕೆಂದು ಬಯಸಿದ್ದು, ಕಾಣಲಾಗದೆ ಹೋಗಿದ್ದು.. ಎಲ್ಲವೂ ತುಂಬ ಚಂದ ಇತ್ತು.. ಕತ್ತಲೆಯೇ ಆದ್ಮೇಲೆ ಇನ್ನೇನು ಅಂತ ನಗೆದೀಪದ ಕುಡಿ ಬೆಳಗಿದ ಗೆಳೆಯನಿಗೆ ಜೊತೆಯಾಗಿ ನಾವು ಮೂವರೂ ಜೋಕಿನ ಎಣ್ಣೆ ಸುರಿದು, ಸುತ್ತಲೂ ನಗೆಹಬ್ಬದ ಬೆಳಕಿನೋಕುಳಿ..
ಹಂಚಿನ ಮೇಲೆ ಬೋಲ್ ನುಡಿಸುವ ಮಳೆಯನ್ನು ಕೇಳುತ್ತಾ ರಾತ್ರಿ ಬೆಚ್ಚಗೆ ಮಲಗಿ, ಬೆಳಿಗ್ಗೆ ಏಳುವಾಗ, ಮೂಡಣದಲ್ಲಿ ಬೆಳಕಿನ ಘರಾನಾದ ಪೂರ್ವಿ ರಾಗ.. ನಾವೆನು ಕಡಿಮೆ ಅಂತ ಉಲಿದುಲಿದು ತೇಲುವ ಹಕ್ಕಿಗೊರಳಿನ ಪಹಾಡೀ.... ನೋಡುತ್ತ ನೋಡುತ್ತ ಪೂರ್ವಿ, ಕಲ್ಯಾಣಿಯಾಗಿ, ಮಲ್ಹಾರದ ಮಳೆ ಸುರಿದು, ನಾವು ರಾಗಗಳ ಅವರೋಹಣದಲ್ಲಿ ಸೇರಿ ಕೆಳಗೆ ಅರಣ್ಯ ಕಛೇರಿಗೆ ಇಳಿದು ಬಂದೆವು.. ಮತ್ತೆ ಕೆಲಸಮಯದಲ್ಲಿ ಸಹಜಯಾನದ ತುಂಗಾ ಎಕ್ಸ್ ಪ್ರೆಸ್, ಹತ್ತಿ ಕುಲುಕಾಡಿ, ಚಿಕ್ಕಮಗಳೂರಿನ ಗಿಜಿಗುಟ್ಟುವ ಬಸ್ ಸ್ಟಾಂಡಿಗೆ ಕಾಲಿಡುವಾಗ ಮಳೆ ನಿಂತು ಬಿಸಿಲೇರಿ, ಓಹ್ ಒಂದ್ಗಂಟೆಗೆ ಬಸ್ ಸಿಕ್ಕಿದ್ರೆ ಬೇಗ ಮನೆಗ್ ಹೋಗಿ, ಮಲಗೆದ್ದು ಬೆಳಿಗ್ಗೆ ಬೇಗ ಆಫೀಸಿಗೆ ಹೊರಟು ಆ ರಿಪೋರ್ಟ್ ಒಂದು ಮುಗಿಸ್ ಬಿಟ್ರೆ ಆಯ್ತಪ್ಪಾ .. ಎಲ್ಲ ರಾಗಗಳೂ ಕಳೆದು ಬೆಳಕಿನ ರಾಜಧಾನಿಯ ಝಗಮಗ, ಜೀವನಯೋಗ.. (ಜೀವನ ದೊಂಬರಾಟ ಅಂತ ಬರೆಯಬೇಕೆನ್ನಿಸಿತು.. ಹಾಗೆ ಬರೆದರೆ ಬರೆದ ಪ್ರಾಸಕ್ಕೆ ಮತ್ತು ಆದರಿಸಿ ತೆಕ್ಕೆಗೆಳೆದುಕೊಂಡ ಬದುಕಿನ ಪ್ರೀತಿಗೆ ಮೋಸವಾಗಬಹುದೆನ್ನಿಸಿ.. )

Tuesday, July 3, 2007

ದೀಪಗಳು..

ಇನ್ನೇನು ಮಳೆ ಬರುವ ಸೂಚನೆಯಲ್ಲಿ ಕಪ್ಪುಗಟ್ಟಿದ ಮೋಡ, ಇನ್ನೆಲ್ಲೋ ಮಳೆಬಿದ್ದ ಕುರುಹಾಗಿ ತೀಡಿ ಬಂದ ತಂಗಾಳಿಯ ಆ ಸಂಜೆ ನಾನು ಮತ್ತು ತಮ್ಮ ಗಾಂಧಿ ಬಜಾರಿಗೆ ಹೊರಟಿದ್ದೆವು. ಊರಿಗೆ ಹೊರಟ ಅವನಿಗೆ ಅಲ್ಲಿರುವ ಪುಟ್ಟ ಮಕ್ಕಳಿಗೆ ಆಟ ಸಾಮಾನು, ಕತೆ ಪುಸ್ತಕ ಕೊಳ್ಳಬೇಕಿತ್ತು. ಗಡಿಬಿಡಿಯಲ್ಲಿ ಪಾರ್ಕ್ ಮಾಡಿ, ಇಳಿದು ಪುಸ್ತಕದಂಗಡಿ ಹೊಕ್ಕರೆ ಅಲ್ಲಿ ಕುರ್ಚಿಯಲ್ಲಿ ಪುಸ್ತಕವೊಂದನ್ನು ಹಿಡಿದು ಏನೋ ಮಾತಾಡುತ್ತ ಕುಳಿತ ನನ್ನ ಪ್ರೀತಿಯ ಕತೆಗಾರ. ಅಲ್ಲಲ್ಲಿ ಜನರಿದ್ದರು. ಹೇಗೆ ಮಾತಾಡುವುದೆಂಬ ಸಂಕೋಚದಲ್ಲಿ, ಆಚೆ ಬದಿಯಾಸಿ ಪುಸ್ತಕ ಆರಿಸಿ, ನಿದಾನವಾಗಿ ಗಲ್ಲೆಯ ಕಡೆ ಬಂದು ಅವರ ಕಣ್ಣೋಟಕ್ಕೆ ಸಿಕ್ಕಿಬಿದ್ದೆ.


ನನ್ನ ಮನದೊಳಗಣ ಖುಷಿ, ಮೈಯೆಲ್ಲ ಆವರಿಸಿ, ಮುಖಮಂಡಲದಲ್ಲಿ ನಗೆಹೂವಿನ ಗೊಂಚಲರಳಿ ತುಂಬ ದಿನಗಳ ಬಳಿಕ ನೋಡಲು ಸಿಕ್ಕಿದ ಅವರನ್ನು ವಿಷ್ ಮಾಡಿತು. ಅವರೋ ಕಡಲತೀರದವರಲ್ಲವಾ, ಪ್ರೀತಿಯ ರಾಶಿ; ಅಲೆಅಲೆಯಾಗಿ ನುಗ್ಗಿಬಂದ ಹಿಗ್ಗು ಅವರ ಮಿಂಚುಕಣ್ಣಿಂದಿಳಿದು, ಕನ್ನಡಕ ತೆಗೆಸಿ, ಹತ್ತಿರ ಬಂದು ಬಳಸಿ ಹಿಡಿಯಿತು.

ನನಗೆ ಟೇಬಲ್ ಮೇಲೆ ಕುಳಿತು ಅಜ್ಜನ ಕತೆ ಕೇಳುತ್ತಾ ಬೇರೆ ಲೋಕಕ್ಕೆ ತೇಲಿ ಹೋದ ಹಾಗೆ, ತುಂಬ ಇಷ್ಟವಾದ ಅಣ್ಣನ ತೋಳತೆಕ್ಕೆಗೆ ಸಿಕ್ಕಿದ ಹಾಗೆ, ತುಂಬದಿನಗಳಿಂದ ದೂರದೂರಲ್ಲಿದ್ದ ಗೆಳತಿ ಅಚಾನಕ್ ಸಿಕ್ಕಿ ಮಾತುಕತೆಯಾಡಿದ ಹಾಗೆ, ಈಗಷ್ಟೇ ಮಳೆ ನಿಂತು, ಬಿಸಿಲು ಹರಡಿ ಕಾಮನ ಬಿಲ್ಲು ಮೂಡಿದ ಹಾಗೆ.. ಎಲ್ಲ ಆಪ್ತ ಅನುಭವಗಳ ಒಟ್ಟಂದದ ಹಾಗೆ... ಮಾತು ಬರದೆ ಬರಿದೆ ನಕ್ಕೆ. ಮಾತ ಬದಲು ಅವರು ನಕ್ಕರು. ಹಾಗೆ ಒಂದಷ್ಟು ಅವರ ತಿಳಿವಿನ ಸವಿ ಸವಿದು, ನಾಲ್ಕೆಂಟು ಹಿತಮಾತನಾಡಿ, ಸುತ್ತರಿದಿದ್ದ ಯಾವ್ಯಾವುದೋ ಸೀರಿಯಸ್ ವಿಷಯಗಳಿಂದ ಕೆಲಕ್ಷಣಗಳ ಮಟ್ಟಿಗೆ ಮರೆಯಾಗಿ ಹಗುರ್‍ಆಗಿ.. ಹೇಗೆ ಹೇಳಲಿ ಆ ಕ್ಷಣಗಳ ಮಾಧುರ್ಯವನ್ನು..
ಇಳಿಸಂಜೆಯಲ್ಲಿ ಪುಟ್ಟ ದೀಪವೊಂದು ದೇವರಗೂಡಿನಲ್ಲಿ ಬೆಳಗಿ ಕತ್ತಲನ್ನ ಇಂಚಿಂಚೇ ತಳ್ಳಿದಂತ ಹಿತವಾದ ಬೆಳಕಲ್ಲಿ ಅದ್ದಿ ಹೋದೆ.



ಅದಾಗಿ ಮಾರನೆಯ ದಿನ, ಮನೆಯಲ್ಲಿ ಗಂಡನೊಡನೆ ಕೂತು ಬಿಸಿಬಿಸಿ ಕಾಫಿ ಕುಡಿಯುತ್ತಾ, ಚಾನಲ್ ತಿರುಗಿಸುತ್ತಿದ್ದಾಗ ಅಚಾನಕ್ ಆಗಿ ಮನಸು ಗಾಂಧಿ ಬಜಾರು ಅಂತ ಬರೆದ ಪ್ರೀತಿಯ ಕವಿ ನಿಸಾರ್ ಅಹಮದ್ ಕಂಡರು. ಅಲ್ಲೆ ನಿಂತು ಅವರನ್ನು ಸವಿದೆವು. ಅಸ್ಖಲಿತ ಕನ್ನಡ, ಎಲ್ಲೂ ಗ್ರಂಥಸ್ಥವೆನ್ನಿಸದೆ ಆದರೆ ಕವಿತೆಯ ಸೊಗದಿಂದ ಹೊರಬರುವ ಸಹಜ ಮಾತುಗಳು, ಅವರ ಹಲವೆಂಟು ಕವಿತೆಗಳಲ್ಲಿ ಮಿಂದು ಬಂದ ಅನುಭವ. ಆ ಕಾರ್ಯಕ್ರಮ ನಡೆಸಿಕೊಟ್ಟವರು ಯಾರೋ ತಿಳಿಯಲಿಲ್ಲ ಗಬ್ಬಾಗಿ ಮಾತಾಡಿದರು. ನಿಸಾರ್ ಅಂತಹ ಹಿರಿಯ ಚೇತನದ ಮಾತನ್ನು ಅವರು ಅಲ್ಲಲ್ಲಿ ತಡೆಹಿಡಿದು ಪಾತಿ ಮಾಡಿ ಹರಿಯಬಿಡುತ್ತಿದ್ದರು. ತುಂಬ ಇರಿಟೇಟ್ ಆಗುತ್ತಿತ್ತು ನೋಡುತ್ತಿದ್ದ ನನಗೆ.. ಅಷ್ಟರಲ್ಲೆ ಅವರು ಏನೇ ಮಾಡಿದರೂ ಸರಳವಾಗಿ, ನೇರವಾಗಿ ಮಾತಾಡುತ್ತಿದ್ದ ನಿಸಾರರ ಹಿರಿತನದ ಮಾತುಗಳು ಮನಕ್ಕೆ ತಂಪೆರೆಯುತ್ತಿದ್ದವು. ಕಾರ್ಯಕ್ರಮದ ಉದ್ದೇಶ ತುಂಬ ಗೊಂದಲಮಯವಾಗಿತ್ತು, ಆದರೆ ಚಾನಲ್ ತಿರುಗಿಸದೆ ಕೂತು ನೋಡುವಂತೆ ಮಾಡಿದ್ದು ಕವಿವರ್ಯರೇ. ನಿರ್ವಾಹಕ ಎಲ್ಲೂ ಮಧ್ಯದಲ್ಲಿ ಮಾತಾಡದೆ, ಅವರಿಗೇ ಮಾತಾಡಲು ಬಿಟ್ಟಿದ್ದರೆ ಚೆನ್ನಾಗಿತ್ತು ಅನ್ನುವಷ್ಟು ಚೆನ್ನಾಗಿ ನಡೆಸಿಕೊಟ್ಟರು. ನಿಸಾರರು ಹೇಗೆ ಮುಸ್ಲಿಂ ಸಂವೇದನೆ ಎಂಬ ಜಾಡಿಗೆ ಬೀಳದೆ ಧ್ಯಾನಸ್ಥ ಮನಸ್ಥಿತಿಯಲ್ಲಿ ಕವಿತೆ ಬರೆದರು ಅನ್ನುವುದು ಹಿಗ್ಗಾಡಿ ಜಗ್ಗಾಡಿ ಕೇಳಿದ ಕಾರ್ಯಕ್ರಮ ನಿರ್ವಾಹಕನ ಪ್ರಶ್ನೆಗಳ ಸಾರಾಂಶ. ಮತ್ತದೇ ಬೇಸರದ ಪ್ರಶ್ನೆಗೆ ನಿಸಾರರು ಬೆಣ್ಣೆ ಕದ್ದ ಕೃಷ್ಣನ ಹಾಡು ಬರೆದಂತೆ ನವಿರಾಗಿ, ಮೇಲೆಸೆದ ಕಲ್ಲು ಮತ್ತೆ ಕೆಳಗೆ ಬೀಳುವಷ್ಟು ಸಹಜವಾಗಿ ಉತ್ತರಿಸಿದರು. ಕುಲವನ್ನಾಧರಿಸಿ ಕವಿಯನ್ನು, ಕವಿತೆಯನ್ನು ಅಳೆಯುವ ಮಾಪನದ ಬಗ್ಗೆ ಅವರಿಗೆ ಕಿರಿಕಿರಿಯಾಗಿತ್ತು. ಬೆಳೆದ ವಾತಾವರಣವನ್ನು ಸಹಜವಾಗಿ ತಂದರೆ ಆ ಬಗ್ಗೆ ಕುಹಕವಾಡುವ ಸಧ್ಯದ ಸಾಹಿತ್ಯ ಪರಿಸ್ಥಿತಿಯ ಬಗ್ಗೆ ನೋವಿತ್ತು. ಹಳೆಯ ದಿನಗಳ ಧೀಮಂತ ಚರ್ಚೆ ವಿಮರ್ಶೆಗಳ ಬಗ್ಗೆ ಪ್ರೀತಿಯಿತ್ತು.
ನಾನು ಏನು ಹೇಳಲು ಹೊರಟೆ ಅಂದರೆ, ಇಲ್ಲಿಯವರೆಗೆ ಒಂದು ದಿನಕ್ಕೂ, ಅವರ ಕವಿತೆ ಓದಿದಾಗ, ಹಾಡು ಕೇಳಿದಾಗ ನಾನು ಅವರನ್ನು ನಿಸಾರ್ ಎಂದು ಅನುಭವಿಸಿದ್ದೆನೇ ಹೊರತು, ಆಹಾ ಎಷ್ಟು ಚಂದ ಕನ್ನಡದಲ್ಲಿ ಬರೆವ ಮುಸ್ಲಿಂ ಕವಿ ಎಂದಲ್ಲ. ಇದು ನಾವು ಬಹುಪಾಲು ಕನ್ನಡಿಗರ ಅನುಭವ ಕೂಡಾ. ಹೀಗಿದ್ದೂ ಮತ್ತೆ ಮತ್ತೆ ಅವರನ್ನು ಈ ಭೂಮಿಕೆಗೆ ಎಳೆತರುವ ಸಣ್ಣತನ ಬೇಸರ ತಂದಿತು.



ಅವರು ಸ್ವಲ್ಪ ಕಿರಿಕಿರಿಯಾಗಿದ್ದರೂ, ಲೋಕವೇ ಹೀರದಿರು ದುಂಬಿಯೊಲು ಹೂವ ಎಂದು ಕೇಳುವ ಒಲವಿನ ಬಳ್ಳಿಯಂತೆ ಮೈದುಂಬಿ ನಮಗಾಗಿ ಮಾತಾಡುತ್ತಿದ್ದರು, ನಿರ್ವಾಹಕರ ಪ್ರಶ್ನೆಯ ರಗಳೆಗೆ ಮತ್ತೆ ಸಿಕ್ಕಿಬೀಳುವ ಅರಿವಿದ್ದೂ, ಗಾಳಿಯಲಿ ಗಂಧದಂತೆ ತೇಲುವ ಚೇತನವಾಗಿ..


ಈ ಎರಡೂ ಭಿನ್ನ ದರ್ಶನಗಳು. ಒಂದು ಮನದ ಕತ್ತಲಲ್ಲಿ ಬೆಚ್ಚಗೆ ಮಿನುಗಿದ ದೀಪ, ಇನ್ನೊಂದು ಬುದ್ಧಿಯ ಕತ್ತಲೆಯಲ್ಲಿ ಹೊಳೆದು ಬೆಳಗಿದ ದೀಪ. ಎರಡೂ ಬೆಳಕುಗಳನ್ನುಂಡು ಇಲ್ಲಿ ಈಗ ಸ್ವಲ್ಪ ಬೆಳಕಿದೆ. ಆರದಂತೆ ಕಾಯುತ್ತ ಆ ಬೆಳಕನ್ನು ಅಕ್ಷರವಾಗಿಸುವ ನಮ್ರ ಪ್ರಯತ್ನ. ಆ ಚೇತನಗಳ ಬೆಳಕು ಸೋಂಕಿ ನನ್ನ ಚೈತನ್ಯ ಪುಳಕಿತಗೊಂಡಿದೆ.