Tuesday, September 26, 2023

 ಶ್ರೀ ಸುಬ್ರಾಯ ಚೊಕ್ಕಾಡಿಯವರ ಸಮಗ್ರ ಬರಹ ಸಂಪುಟಗಳ ಬಿಡುಗಡೆ

8 January 2023 ಯಂದು ಶ್ರೀ ಸುಬ್ರಾಯ ಚೊಕ್ಕಾಡಿಯವರ ಸಮಗ್ರ ಸಾಹಿತ್ಯ ಬಿಡುಗಡೆ ಮೈಸೂರಿನಲ್ಲಿ ಆದಾಗ ಅವರ ಸಾಹಿತ್ಯ(ವಿಶೇಷವಾಗಿ ಕವಿತೆಗಳು) ಕುರಿತು ನನ್ನ ಮಾತು.

ಹಿರಿಯ ಕವಿ, ವಿಮರ್ಶಕರರಾದ ಮತ್ತು ಆತ್ಮೀಯರಾದ ಶ್ರೀ ಸುಬ್ರಾಯ ಚೊಕ್ಕಾಡಿಯವರ ಸಮಗ್ರ ಬರಹಗಳ ಸಂಪುಟ ಪ್ರಕಟವಾಗುತ್ತಿರುವುದು ಗೊತ್ತಾಗಿ ಬಹಳ ಸಂತೋಷ, ಸಂಭ್ರಮ ಆಯಿತು. ಆ ಸಂಪುಟಗಳ ಬಿಡುಗಡೆಯಲ್ಲಿ ನನಗೆ ಮಾತನಾಡಬೇಕು ಅಂತ ಕರೆದಾಗ ಸ್ವಲ್ಪ ತಲೆ ಗಿಮ್ಮೆಂದಿತು. ಎಲ್ಲೂ ಅಷ್ಟಾಗಿ ಹೋಗದ ನನಗೆ, ಗುರುಸಮಾನರಾದ ಹಿರಿಯರಾದ ಚೊಕ್ಕಾಡಿಯವರ ಮಾತಿಗೆ ಇಲ್ಲವೆನ್ನದೆ ಒಪ್ಪಿದೆ. ನನ್ನ ಓದಿಗೆ ದಕ್ಕಿದಷ್ಟು ಚೊಕ್ಕಾಡಿಯವರ ಕಾವ್ಯ, ವಿಮರ್ಶೆ, ಮತ್ತು ಕಥೆಗಳ ಕುರಿತು ಕೆಲವು ಅಭಿಪ್ರಾಯಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುತ್ತೇನೆ. ನಾನು ಅಕಡೆಮಿಕೆ ಆಗಿ ಸಾಹಿತ್ಯಾಭ್ಯಾಸ ಮಾಡಿಲ್ಲ. ಓದುಪ್ರೀತಿಯಿಂದ ನನಗೆ ಸಿಕ್ಕಷ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮೊದಮೊದೂಲಿಗೆ ಚೊಕ್ಕಾಡಿಯವರ ಹತ್ತಿರದ ಪರಿಚಯವಾದ ಹೊಸದು. ಅದೊಂದು ಸಾಹಿತ್ಯ ಪ್ರೀತಿಯ ಗೆಳೆಯರೆಲ್ಲ ಸೇರಿದ್ದ ಗಳಾಸು ಸಂಜೆ. ಅವರು ನನ್ನ ಆಸಕ್ತಿಯ ಕವಿ,ಸಾಹಿತ್ಯ ಇತ್ಯಾದಿಯಾಗಿ ವಿಚಾರಿಸಿದರು.

ಇವರು ಮುನಿಸು ತರವೇ, ದಿನ ಹೀಗೆ ಜಾರಿ ಹೋಗಿದೆ ಮುಂತಾದ ಬಹಳ ಇಷ್ಟವಾದ ಭಾವಗೀತೆಗಳ ಕವಿ, ಮತ್ತು ಹಿರಿಯರು ಎಂಬ ಗೌರವಭರಿತ ಸಂಕೋಚದಲ್ಲಿ ನಾನು ಮಾತಾಡುವುದೋ ಬೇಡವೋ ಅಂತ ಮಾತಾಡುತ್ತಿದ್ದೆ.

ಆಗ ಅವರು ಇದ್ದಕ್ಕಿದ್ದಂತೆ ಒಂದು ಕಥೆ ಹೇಳಿದರು. ನೋಡಿ ಒಬ್ಬ ಅಜ್ಜ ಅಥವಾ ಅಪ್ಪ ಮಗುವನ್ನು ಸಂತೆಗೆ ಕೊಂಡು ಹೋದ ಅಂತ ಇಟ್ಟುಕೊಳ್ಳೋಣ. ಒಬ್ಬ ಅಪ್ಪ ತನ್ನ ಹೆಗಲ ಮೇಲೆಯೇ ಮಗುವನ್ನು ಕೂರಿಸಿ ಜಾತ್ರೆ ಸುತ್ತಾಡಿಸಿ, ಇದು ನೋಡು ಅದು ನೋಡು ಅಂತೆಲ್ಲ ತಾನು ಕಂಡಿದ್ದನ್ನ, ಗ್ರಹಿಸಿದ್ದನ್ನ, ಅನುಭವಿಸಿದ್ದನ್ನ ಮಗುವಿಗೆ ತೋರಿಸಬಹುದು. ಅಥವಾ ಮಗೂ ಇದು ಸಂತೆ, ಈ ಮಾಳದ ಬೌಂಡರಿಯಲ್ಲಿ ಅಡ್ಡಾಡಿ ನಿನಗೇನೇನು ಕಾಣುತ್ತದೋ ನೋಡು ಅಂತ ಒಂದು ಆವರಣ ಕೊಟ್ಟು ಅಡ್ಡಾಡಿ ಅನುಭವಿಸಿ ನೋಡಲು ಬಿಡಬಹುದು. ಎರಡೂ ಒಳ್ಳೆಯ ವಿಧಾನವೇ. ಆದರೆ ನಮಗೆ ಯಾವುದು ಬೇಕು, ನಮಗೆ ಯಾವುದಾದೀತು ಅನ್ನುವುದು ನಮ್ಮ ಮನೋಧರ್ಮದ ಮೇಲೆ ನಿರ್ಧರಿಸಬೇಕು ಅಂತ ನನಗೆ ಅನಿಸುತ್ತಪ್ಪಾ. ನೀವು ಹೊಸಬರು ನಿಮಗೆ ಹೇಗೆ ತೋರುತ್ತೋ ಹಾಗೆ ಮಾಡಿ. ನಾನು ಹೇಳಿದ್ದನ್ನ ಓದುವಾಗ ಗಮನಿಸುತ್ತಿರು ಅಂದರು. ನಾನು ಅವತ್ತೇ ಅವರಿಗೆ ಅಡ್ಡಬಿದ್ದೆ. ಆಕ್ಚುವಲೀ ಅವರು ಕುವೆಂಪು ಮತ್ತು ಬೇಂದ್ರೆಯವರ ಕಾವ್ಯವಿಧಾನದ ಕುರಿತು ಮಾತನಾಡಿದ್ದರು.

ಅವತ್ತಿನಿಂದ ಇವತ್ತಿನವರೆಗೂ ಸಾಹಿತ್ಯದ ಕುರಿತ ನನ್ನ ಪ್ರಶ್ನೆಗಳಿಗೆ ಕೆಲವಾರು ಬದುಕಿನ ಕುರಿತ ಪ್ರಶ್ನೆಗಳಿಗೂ ಚೊಕ್ಕಾಡಿಯವರು ಸಂತೆಮಾಳದಲ್ಲಿ ನನ್ನನ್ನು ಓಡಾಡಲು ಗ್ರಹಿಸಲು ಬಿಟ್ಟ ಅಪ್ಪನ ಕೆಲಸವನ್ನು ಮಾಡಿದ್ದಾರೆ. ಅದನ್ನು ನನಗೆ ಅಂತಲ್ಲ, ಸಾಹಿತ್ಯ ಪ್ರೀತಿಯ ಯಾರು ಬಂದರೂ ಮಾಡಿದ್ದಾರೆ.


ಚೊಕ್ಕಾಡಿಯವರ ಸಮಗ್ರ ಸಾಹಿತ್ಯದ ಕುರಿತಾಗಿ ಮೊದಲಿಗೆ ಒಂದೆರಡು ಮಾತುಗಳನ್ನು ನನಗೆ ಹೇಳಬೇಕಿದೆ.

ಹಲವು ಕಡೆ ಚೊಕ್ಕಾಡಿಯವರೇ ಬರೆದುಕೊಂಡಿರುವಂತೆ ಅವರ ಬಡತನದ ಬಾಲ್ಯ ಮತ್ತು ಬೆಳೆಯುವ ಕಾಲದ ತವಕ ತಲ್ಲಣಗಳಿಗೆ ಅವರು ಸಾಹಿತ್ಯವನ್ನು ಅಡಗುದಾಣವಾಗಿ ಉಪಯೋಗಿಸಿಕೊಂಡಿದ್ದಾರೆ. ಸಾಕಷ್ಟು ಲೇಖಕರಿಗೆ ಕೂಡಾ ಈ ಮಾತು ಅನ್ವಯಿಸುತ್ತದೆಯೇನೋ.

ಅವರ ಗದ್ಯ ಸಾಹಿತ್ಯ - ಅಂದರೆ ಕಥೆಗಳು, ಮತ್ತು ಕಾದಂಬರಿಯನ್ನು ಓದಿದಾಗ ಮೊದಲು ಮನಸ್ಸಿಗೆ ಬರುವ ಭಾವ... ಉಹ್..ಈ ಬದುಕು ಎಷ್ಟು ಗಂಭೀರ ಮತ್ತು ದಾರುಣ ಎಂದು. ಅವರ ಮೊದಮೊದಲ ನೂರಾರು ಕವಿತೆಗಳಲ್ಲೂ ಕೂಡಾ ಈ ಬದುಕಿನ ಕಟುವಾಸ್ತವವಗಳು ಸ್ವಲ್ಪ ಕಣ್ಣಿಗೆ ಹೊಡೆಯುವಂತೆಯೇ ಇವೆ. ನಂತರದ ಮಾಗಿದ ಕಾಲದ, ಜವಾಬುದಾರಿಗಳು ಒಂದು ಹಂತಕ್ಕೆ ಬಂದು ಬದುಕು ಸ್ವಲ್ಪ ದಡ ಹತ್ತಿದ ಕಾಲದ ಕವಿತೆಗಳು ಆ ಕಟುತನವನ್ನು ಕಡಿಮೆ ಮಾಡಿಕೊಂಡು ನೋಡಿ ಹೀಗೆಲ್ಲ ಆಯಿತು ಅಂತ ಮೆಲುಮಾತಿನಲ್ಲಿ ಶತಮಾನದ ಹಿಂದಿನ ಕತೆಗಳನ್ನು ಹೇಳುವ ಅಜ್ಜನ ಟೋನಿನಲ್ಲಿ ಬಂದಿವೆ. ನನ್ನ ಮೆಚ್ಚಿನ ಕಥೆಗಾರ ಥಾಮಸ್ ಹಾರ್ಡಿ ಹೇಳುವಂತೆ ನಾವೆಲ್ಲರೂ ಈ ಅಗಾಧ ವಿಶ್ವದ ಒಂದು ಸಣ್ಣಾತಿಸಣ್ಣ ಕಣಗಳು. ವಿಶಾಲ ಪ್ರಕೃತಿಯನ್ನ ಗಮನಿಸುತ್ತಿದ್ದರೆ ಇದು ನಮ್ಮ ಅನುಭವಕ್ಕೆ ಬರುತ್ತದೆ. ಇದು ಬಹುಶಃ ಚೊಕ್ಕಾಡಿಯವರ ಸಾಹಿತ್ಯದ ಬೆಳವಣಿಗೆಯನ್ನು ಗುರುತಿಸಲು ಸಹಾಯಕ್ಕೆ ಬರುತ್ತದೆ.

ಮೊದಮೊದಲಿಗೆ ತನ್ನ ಪರಿಸ್ಥಿತಿಯಿಂದಾಗಿ ಉಂಟಾದ ಅಸಹಾಯಕತೆ, ಸಿಟ್ಟು ಆಕ್ರೋಶಗಳನ್ನೆಲ್ಲ ಹೊರಹಾಕಲು ಸಾಧನವಾದ ಸಾಹಿತ್ಯ ಥಟ್ಟನೆ ನವ್ಯದ ಸ್ವಕೇಂದ್ರಿತ ಫಾರ್ಮ್ಯಾಟನ್ನು ಅಪ್ಪಿಕೊಂಡಿದ್ದನ್ನು ನೋಡಬಹುದು. ಯಾರೇ ಆದರೂ ಆಗ ಚಾಲ್ತಿಯಲ್ಲಿದ್ದ, ಟ್ರೆಂಡಾಗಿದ್ದ ನವ್ಯ ಮತ್ತು ಅಡಿಗರ ಸೆಳೆತಕ್ಕೆ ಒಳಗಾಗದೆ ಇದ್ದ ಕಾಲಮಾನವೇ ಅದು. ಆದರೆ ವಿಶ್ವ ಸಾಹಿತ್ಯವನ್ನು ಓದುತ್ತ, ಗಮನಿಸುತ್ತ, ಬರಿದೆ ತನ್ನ ಬರವಣಿಗೆಯಲ್ಲದೆ ಇತರರ ಬರವಣಿಗೆಯನ್ನೂ ಓದುತ್ತ ಬೆಳೆದ ಕವಿ ಸುಬ್ರಾಯರಿಗೆ ತನ್ನ ಅಂತರಂಗಕ್ಕೆ ಸಂಬಂಧಿಸಿದ ಹಾಗೆ, ತನ್ನ ಬಹಿರಂಗಕ್ಕೆ ಲಗತ್ತಾಗುವ ಹಾಗೆ ತನ್ನ ಅಭಿವ್ಯಕ್ತಿ ಏನಿರಬೇಕು ಎಂದು ಸ್ಪಷ್ಟವಾಗುತ್ತ ಹೋದ ಹಾಗೆ ಅವರ ಕವಿತೆಗಳು ಸ್ವಯಂಕೇಂದ್ರಿತ ಆಕ್ರೋಶದಿಂದ, ಸಮಾಜಸುಧಾರಣೆಯನ್ನು ಬರಹದಿಂದ ಮಾತ್ರವೇ ಮಾಡಬಹುದು ಎಂಬ ಮಜಲಿನಿಂದ ತನ್ನ ಸುತ್ತಲ ಪರಿಸರಕ್ಕೆ ದಾಟಿಕೊಂಡವು. ಅವರ ಬಾಲ್ಯವನ್ನು ಬಡತನ, ಅಸಹಾಯಕತೆಗಳು ಹೇಗೆ ಆಕ್ರಮಿಸಿಕೊಂಡಿದ್ದವೋ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಾಗಿ ಅವರಿದ್ದ ಪರಿಸರವೂ ಪೊರೆದಿತ್ತು ಅನ್ನುವುದನ್ನು ನಾವು ಗಮನಿಸಬೇಕು. ಹಾಗಂತ ಇಲ್ಲಿ ಪ್ರಕೃತಿ ಪ್ರೀತಿ ಎಂಬ ರೊಮ್ಯಾಂಟಿಸಿಸಂ ಇಲ್ಲ. ಇದ್ದದ್ದನ್ನು ಆಕರ್ಷಕವಾಗಿ ಉದ್ರೇಕಗೊಂಡು ದಾಟಿಸುವ ಭಾವೋದ್ವೇಗ ಇಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳುವ ಸಹಜ ನಡೆ... ಮರವೊಂದು ಚಿಗುರಿ ಹಬ್ಬಿ ನೆರಳಾಗಿರುವುದು ಅಥವಾ ಎಲೆಯುದುರುತ್ತಿರುವುದು ನಮಗೆ ನೋಡುವವರಿಗೆ ಒಂದು ಭಾವೋದ್ವೇಗವನ್ನು ಹುಟ್ಟಿಸಲೂಬಹುದು. ಇಲ್ಲ ಅನ್ನಲಾರೆ. ಆದರೆ ಮರಕ್ಕೆ ಚಿಗುರುವುದು, ಹರಡಿಕೊಳ್ಳುವುದು, ಹೂಹಣ್ಣು ಬಿಡುವುದು, ಎಲೆಯುದುರುವುದು, ಹಕ್ಕಿಗಳಿಗೆ ಗೂಡು ಕಟ್ಟಲು ರೆಂಬೆ ಇದ್ದೇ ಇರುವುದು, ಅಥವ ನಾವು ಮನುಷ್ಯರು ಕತ್ತರಿಸಿದಾಗ ಸುಮ್ಮನುಳಿಯುವುದು, ಮತ್ತೆ ವಸಂತದಲ್ಲಿ ಚಿಗುರುವುದು ಬಹಳ ಸಹಜ ಪ್ರಾಕೃತಿಕ ಸಂಗತಿ. ಅದಕ್ಕೆ ಈ ಕುರಿತು ಸಂಭ್ರಮಾಚರಣೆಯಾಗಲೀ ಸಂತಾಪವಾಗಲಿ ಇಲ್ಲ. ಈ ಸಹಜತೆಯನ್ನ, ಇಲ್ಲಿನ ನೇರನಿಷ್ಠುರತೆಯನ್ನ ಸುಬ್ರಾಯ ಚೊಕ್ಕಾಡಿಯವರು ಹಾಸಿ ಹೊದ್ದರು ಮತ್ತು ಅದು ಅವರ ಕಾವ್ಯಮಾರ್ಗದ ಮೇಲೆ ಕೂಡಾ ಪ್ರಭಾವ ಬೀರಿತು ಎನ್ನುವುದು ನನ್ನ ಅಭಿಪ್ರಾಯ.

ಚೊಕ್ಕಾಡಿಯವರ ನಾನೇಕೆ ಬರೆಯುತ್ತೇನೆ ಲೇಖನದಲ್ಲಿ ಒಂದು ಕಡೆ ಲಾರೆನ್ಸನನ್ನು ಉದ್ಧರಿಸಿ ಹೇಳುತ್ತಾರೆ. I am free as a rooted tree is free. ಇದು ಚೊಕ್ಕಾಡಿಯವರ ಕವಿತೆಗಳ ಭಂಡಾರಕ್ಕೆ ಕೀಲಿ ಕೈ ಕೂಡ. ಅವರಿಗೆ ಮನುಷ್ಯನ ಮಿತಿ ಹಾಗೂ ಮೀರುವಿಕೆಗಳ ಸ್ಪಷ್ಟ ವಾಸ್ತವಿಕ ಅರಿವು ಇದೆ. ಎಲ್ಲಿ ಗಪ್ಪಗಿರಬೇಕು ಅಥವಾ ಎಲ್ಲಿ ದನಿಯೆತ್ತಲೇಬೇಕು ಎಂಬ ತಿಳಿವು ಇದೆ. ಹೇಳಲೇಬೇಕಾದ್ದನ್ನು ಹೇಳುವ ನಿಷ್ಠುರತೆಯಲ್ಲೂ ಕೆಲವು ಸಲ ಸುಮ್ಮನಿದ್ದು ಬಿಡಬೇಕು ಎಂಬ ಸೌಜನ್ಯವೂ ಇದೆ.

ಒಂದೆರಡು ಕವಿತೆಗಳನ್ನು ಗಮನಿಸೋಣ.


ಹಂಗು ಎಂಬ ಈ ಕವಿತೆ ಚೊಕ್ಕಾಡಿಯವರ ಕಾವ್ಯಧರ್ಮವನ್ನ ಮನೋಧರ್ಮವನ್ನ ಸ್ಪಷ್ಟವಾಗಿ ಚಿತ್ರಿಸುತ್ತದೆ. ಹಾಗಂತ ವಾಚಾಳಿತನವೇನಿಲ್ಲ.

ಹಂಗು.

ಹಾರಿ ಹೋಗುತ್ತದೆ ಹಕ್ಕಿಗಳು ಗಾಳಿ ಬೀದಿಯಲಿ

ಜಗತ್ತನ್ನೇ ಆವರಿಸಿಕೊಳ್ಳುತ್ತ

ಮರ ಮಾತ್ರ ಅಲ್ಲೆ ನಿಂತಿರುತ್ತದೆ ನೆಲದಲ್ಲಿ ಕಾಲೂರಿ – ದಿಗಂತದತ್ತ

ಕೊಂಬೆರೆಂಬೆಗಳ ಚಾಚಿ ಜಗವನ್ನು ಒಳಗೊಳ್ಳುತ್ತ.


ಸಂಜೆ ಹಿಂದಿರುಗಿದ ಹಕ್ಕಿಗಳು ತೂಗು ಹಾಕುತ್ತವೆ ಮರಕ್ಕೆ ನಮ್ಮ

ಹಾಡುಗಳನ್ನು ನೆಲಮುಗಿಲನೊಳಗೊಂಡ ಜಗದ ಪಾಡುಗಳನ್ನು

ಬೆಳಗೆದ್ದು ನೋಡಿದರೆ, ಮರವೋ ಮಿಟುಕಿಸುತ್ತದೆ – ಮೈತುಂಬಿರುವ

ಹೊಸ ಚಿಗುರು, ಹೂವು ಹಣ್ಣುಗಳ ಕಣ್ಣುಗಳನ್ನು.


ಯಾರವಿವೊ? ಹಕ್ಕಿಗಳ ಕೊಡುಗೆಗಳ ರೂಪಾಂತರವೆ ಅಥವಾ ಮರವು

ನೆಲದಿಂದ ಪಡೆದದ್ದೇ? ಯಾವುದೂ ಸರಿಯಿರಬಹುದು;

ಇಲ್ಲದಿರಬಹುದು.

ಮರದಲ್ಲೇ ಹಕ್ಕಿಗಳ ಹೆಜ್ಜೆಗುರುತುಗಳಿಲ್ಲ; ಹಕ್ಕಿಗಳಲೂ

ಮರದ ಯಾವುದೇ ನೆನವರಿಕೆ ಉಳಿದಂತಿಲ್ಲ.


ಕವಿದ ಕತ್ತಲಲೆ ವರ್ಗಾವಣೆಗೊಂಡವೇ – ಹಕ್ಕಿಗಳು,

ಮರದ ಗಳಿಕೆಗಳು ಮುಟ್ಟಿಯೂ ಮುಟ್ಟದ ರೀತಿಯಲ್ಲಿ?

ಹಕ್ಕಿಗಳು ಹಾಗೂ ಮರ ಮಾತ್ರ ಸುಮ್ಮನೆ ನಿದ್ದೆಹೋಗುತ್ತವೆ

ರಾತ್ರಿ-ಮಾತಿರದೆ, ಯಾವುದೇ ಗೊಡವೆಯೇ ಇರದ ರೀತಿಯಲ್ಲಿ.


ಕನಸಿನ ಅನೂಹ್ಯ ಓಣಿಗಳಲ್ಲಿ ಹಕ್ಕಿಗಳಿಗೋ ಮರದ ಘನತೆ, ಮರಕ್ಕೆ

ಹಕ್ಕಿಗಳ ಲವಲವಿಕೆ ದಕ್ಕಿ ಅದಲು ಬದಲಾದಂತಿದೆ

ನಿಂತವರು ಅಲೆದಂತೆ, ಅಲೆದವರು ನಿಂತಂತೆ, ಈಗ ಹಕ್ಕಿಗಳಿಗಿಲ್ಲ

ಮರದ ಹಂಗು; ಮರಕ್ಕಿಲ್ಲ ಹಕ್ಕಿಗಳ ಹಂಗು.



ಚಕ್ರಚಲನೆ


ದೇಶಪ್ರೇಮಿಗಳಿಗೂ ದೇಶದ್ರೋಹಿಗಳಿಗೂ

ಬಹಳ ವ್ಯತ್ಯಾಸವೇನೂ ಇಲ್ಲ

ನಮ್ಮ ದೇಶದಲ್ಲಿ!

ಒಂದೇ ನಾಣ್ಯದ ಎರಡು ಮುಖಗಳಂತೆ ಅವರು!


ಹೀಗೆಂದರೆ ನಾನು

ಯಾರೂ ಕೋಪಿಸಬೇಕಾಗಿಲ್ಲ,

ಗಮನಿಸಿ ನೋಡಿ:


ಸರಕಾರ ಬದಲಾದಾಗ ಆಗುತ್ತಾರೆ

ದೇಶಪ್ರೇಮಿಗಳು ದೇಶದ್ರೋಹಿಗಳು

ಹಾಗೂ

ದೇಶದ್ರೋಹಿಗಳೂ ದೇಶಪ್ರೇಮಿಗಳು

ಅದೆ ಅದೆ ಬದಲಾದ

ಸರಕಾರದ ದೃಷ್ಟಿಯಲ್ಲಿ.


ಇತಿಹಾಸದ ಚಲನೆ

ಇರುವುದೇ ಹೀಗೆ

ಚಕ್ರ ಚಲನೆಯ ಹಾಗೆ.


ಇದಲ್ಲದೆ ಇವರದ್ದು ಇನ್ನೊಂದು ನನಗೆ ಬಹಳ ಮೆಚ್ಚಿನ ಕವಿತೆಯೊಂದಿದೆ. ಇದರಲ್ಲಿ ಅದು ಎಂಬ ಕವಿತೆ.


ಇದರಲ್ಲಿ ಅದು


ಒಂದು ಕಪ್ಪೆಯ ಬದುಕಿನಲ್ಲಿ

ಏನಿರುತ್ತದೆ ?

ಮೇಲಕ್ಕೂ ಕೆಳಕ್ಕೂ ಜಿಗಿಯುತ್ತದೆ

ಒಣ ನೆಲಕ್ಕೆ ಮಳೆ ಕರೆಯುತ್ತದೆ

ಹಸುರಿನ ಮರೆಯಲ್ಲಿ ಬೇಟೆಗೆ

ಕಾದಿರುತ್ತದೆ.


ಒಂದು ಹಾವಿನ ಬದುಕಿನಲ್ಲಿ

ಏನಿರುತ್ತದೆ?

ಆಚೆಗೂ ಈಚೆಗೂ ತೆವಳುತ್ತದೆ.

ಹೊಳೆಯುವ ಮೈಯಲಿ ಹೊರಳುತ್ತದೆ

ಹಸುರಿನ ಮರೆಯಲಿ ಬೇಟೆಗೆ

ಕಾದಿರುತ್ತದೆ.

ಕಪ್ಪೆ ಹಾವುಗಳೆರಡೂ ಕಾದೇ ಇರುತ್ತವೆ ಅನವರತ

ಜಗತ್ತೇ ತಟಸ್ಥ ಎದುರಲ್ಲಿ

ಎನ್ನುವ ಹಾಗೆ ಧ್ಯಾನ ಸ್ಥಿತಿಯಲ್ಲಿ -


ಬೆನ್ನ ಹಿಂದಿನ - ಕವಿವ ಮತ್ತಿಗೆ

ಕಣ್ಣ ಮುಂದಿನ ಕರೆವ ತುತ್ತಿಗೆ

ವಿದಾಯ ಹೇಳಿದ ಹಾಗೆ ಎಲ್ಲ ಆಪತ್ತಿಗೆ


ಕೊನೆಗೂ ಒಮ್ಮೆ ಅನಿವಾರ್ಯ

ಮುಖಾಮುಖಿಯಲ್ಲಿ ಮಾತ್ರ

ಒಂದು ಇನ್ನೊಂದಾಗುವ ಪವಾಡ ನಡೆಯುತ್ತದೆ .


ಹಾವಿನ ಕಣ್ಣಲ್ಲಿ; ಕಪ್ಪೆಗೆ -ಜೀವದ ಅರಳು

ಕಪ್ಪೆಯ ಕಣ್ಣಲ್ಲಿ; - ಹಾವಿಗೆ ಸಾವಿನ ನೆರಳು.


ನೀವು ಇತ್ತೀಚಿನ ಕಲ್ಲುಮಂಟಪ ಸಂಕಲನ ಅಥವ ಹಲವಾರು ಪ್ರಕಟಿತ ಕವಿತೆಗಳಲ್ಲಿ ಗಮನಿಸಿದರೆ ಈ ಇದರಲ್ಲಿ ಅದು ಅಥವಾ ಅದರಲ್ಲಿ ಇದು ಎಂಬುದು ಮತ್ತೆ ಮತ್ತೆ ಒರೆಹಚ್ಚಲ್ಪಟ್ಟ ಉಪಯೋಗಿಸಲ್ಪಟ್ಟ ಸ್ಥಾಯೀಭಾವವಾಗಿ ನನಗೆ ಕಾಣಿಸುತ್ತದೆ. ಯಾವುದು ಅನುಕ್ಷಣಕ್ಕೂ ಬದಲಾಗುತ್ತಲೇ ಅದೇ ಆಗಿ ಉಳಿದಿರುತ್ತದೆಯೋ... ಅದನ್ನ ಸ್ಥಾಯೀ ಭಾವ ಎನ್ನುವುದೂ ಬಹುಶಃ ಸಂಕೀರ್ಣತೆಯೇ ಇರಬಹುದು. ಆದರೆ ಈ ಮರುಕಳಿಕೆ ನನಗೆ ಅಚ್ಚರಿಯನ್ನಿತ್ತಿದೆ.

ನೀವು ಓದಿನೋಡಿ ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ಅಡಿಗರು, ಎಕೆಆರ್, ಎಕ್ಕುಂಡಿಯವರು, ಕಣವಿ, ಎಸ್.ಆರ್. ಮಂಜುನಾಥ್ (ಜೀವಯಾನ), ಮತ್ತು ಈಗ ಬರೆಯುತ್ತಿರುವ ಹೊಸಕವಿಗಳಿಗಿಂತ ಸ್ವಲ್ಪ ಹಿಂದಿನ ಎಲ್ಲ ಮಾಗಿದ ಕವಿಗಳ ಕಾವ್ಯದಲ್ಲೂ ಈ ಬಗೆಯ ಇದು ಅದಿರಬಹುದೇ, ಅಥವ ನಾವು ಹೀಗೆ ಎಂದು ಕೊಂಡಿದ್ದು ಹಾಗೂ ಇರಬಹುದು, ಕಣ್ಣಿಗೆ ಕಂಡದ್ದಷ್ಟೇ ಅಲ್ಲದೆ ಸಂಪೂರ್ಣ ವಿರುದ್ಧಾರ್ಥವೂ ಇರಬಹುದು ಎಂಬ ಹೊಳಹುಗಳು ಕಾಣುತ್ತವೆ. ಉದಾಹರಣೆಗೆ ಬೇಂದ್ರೆಯವರ ಬೆಳಗು, ಕುವೆಂಪು ಅವರ ದರ್ಶನಂ, ಕೆ.ಎಸ್.ಎನ್.. ಅವರ ಎಲ್ಲಚಿತ್ರಗಳಾಚೆಗಿನ್ನೊಂದು ಚಿತ್ರದ ಪ್ರತಿಮೆ, ಅಡಿಗರ ಕಾಡ ಮೂಲಕವೇ ಪಥ ಆಗಸಕ್ಕೆ.., ಎಕೆಆರ್...ಅವರ ಕವಿತೆಗಳೆಲ್ಲ ಚಕ್ರವರ್ತಿಯ ಕರುಣೆ ..ಇತ್ಯಾದಿ ಹೆಚ್ಚೂ ಕಮ್ಮಿ ಇದನ್ನೇ ಹೇಳುತ್ತವೆ.

ಮಂಜುನಾಥರ ಹಕ್ಕೀ ಪಲ್ಟೀ..ಇರಬಹುದು..ಅಥವಾ ಚೊಕ್ಕಾಡಿಯವರ ಸ್ಪರ್ಧೆ ಕವಿತೆಗಿರುವ ಸಾಮ್ಯತೆ ನನ್ನನ್ನು ಬೆಚ್ಚಿ ಬೀಳಿಸಿತು ಕೂಡಾ..

ರಭಸದಿಂದ ದಿಗಂತವನ್ನೇ

ಸೀಳಿ ಮುನ್ನಡೆವಂತೆ

ನುಗ್ಗಿದ್ದು

ನೀಲಿ ಆಕಾಶದಲ್ಲಿ

ಕಲ್ಲೇ?

ಹಕ್ಕಿಯೇ?

ಅಥವಾ

ಕವಿತೆಯೇ?


ಕಾವ್ಯ ಎಂದರೇನು ಎಂಬುದನ್ನು ತಿಳಿಸಲು ಸುಬ್ರಾಯ ಚೊಕ್ಕಾಡಿಯವರು ಒಂದು ಕಡೆ ಬಲಿಯ ಅಂತಿಮ ಕೂಗು ಎಂಬ ಲೇಖನ ಬರೆದಿದ್ದಾರೆ. ಒಂದು ಅತ್ಯಾಧುನಿಕ ಕಸಾಯಿಕಾನೆಯ (slaughter house) ಒಡೆಯ ತನ್ನ ಸ್ನೇಹಿತನಾದ ಕವಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿನ ಎಲ್ಲ ಅಚ್ಚುಕಟ್ಟು ವ್ಯವಸ್ಥೆಯ ಬಗ್ಗೆ ವಿವರಿಸುತ್ತಾನೆ. ಪ್ರಾಣಿಯೊಂದನ್ನು ಯಂತ್ರದ ಬಾಯಿಗೆ ಕೊಟ್ಟ ಮೇಲೆ ಹೇಗೆ ಅದರ ದೇಹದ ಎಲ್ಲ ಉಪಯುಕ್ತ ಭಾಗಗಳು, ತ್ಯಾಜ್ಯ ಎಲ್ಲವೂ ಸಮರ್ಥವಾಗಿ ಪ್ಯಾಕ್ ಆಗುತ್ತವೆ, ಅಥವ ವಿಲೇವಾರಿಯಾಗುತ್ತದೆ ಮತ್ತು ಈ ಪ್ರೊಸೆಸ್ ನಲ್ಲಿ ಆ ಪ್ರಾಣಿಯ ಪ್ರಾಡಕ್ಟು ಹಾಗೂ ಆವರಣ ಎಲ್ಲವೂ ಎಷ್ಟು ಆರೋಗ್ಯಕರವಾಗಿ, ಶುಚಿಯಾಗಿ ಇಡಲ್ಪಟ್ಟಿದೆ. ಎಲ್ಲಿಯೂ ಒಂದು ಕೊಸರಿರದ ಹಾಗೆ ಹೇಗೆ ವ್ಯವಸ್ಥೆ ಮಾಡಲ್ಪಟ್ಟಿದೆ ಎಂದು ವಿವರಿಸುತ್ತಾನೆ. ಈ ಎಲ್ಲ ವಿವರಗಳನ್ನೂ ಕೇಳುತ್ತ ತಲೆದೂಗುತ್ತಿರುವ ಕವಿ ಒಂದು ಕ್ಷಣ ಮೌನವಾಗಿದ್ದು.. ತನ್ನ ಸ್ನೇಹಿತನಲ್ಲಿ ಒಂದು ಪ್ರಶ್ನೆ ಕೇಳುತ್ತಾನೆ. How do you handle and dispose the final cry before it dies? ಇದು ಕವಿ ಮತ್ತು ಇತರರಿಗಿರುವ ನೋಟದ ಬಹಳ ಚಿಕಿತ್ಸಕ ಅಂತರ. ಇದು ನಮಗೆಲ್ಲರಿಗೂ ಅನಿಸಬಹುದು. ಆದರೆ ಗ್ರಹಿಸುವ ಮತ್ತು ಅಭಿವ್ಯಕ್ತಿಸುವ ಶಕ್ತಿ ಇರುವ ನಿಜವಾದ ಕವಿ ಈ ಉದ್ವೇಗವನ್ನು ಕಾಲಾತೀತವಾದ ಕಾಡುವ ಪ್ರಶ್ನೆಯಾಗಿಸಬಹುದು, ನಮ್ಮ ಮನಸ್ಸಿನಲ್ಲಿ ಈ ಉದ್ವೇಗವನ್ನು ಹಾಯಿಸಿ ನಮ್ಮ ದೈನಂದಿನ ಓಟ ಅಥವ ಈಜಿಗೆ ಒಂದು ದಿಕ್ಕು ನೀಡಲೂಬಹುದು.


ಇದೇ ಮಾತಿಗೆ ಬಂದರೆ.. ಅಡಿಗರು ಬರೆದರು

"ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ

ರಾಮಾಯಣ ಶ್ಲೋಕ ರೇಷ್ಮೆ ತೊಗಲು"


ಕವಿತೆಗಳನ್ನ ಬರೆಯುವುದು, ವಿಮರ್ಶೆ ಬರೆಯುವುದು ಎಲ್ಲ ಒಂದು ಮಟ್ಟಿಗಿನ ಸಾಮರ್ಥ್ಯವಾದರೆ ಅವುಗಳನ್ನು ಓದುವ ಆಸಕ್ತಿಯಿರುವ ಸಹೃದಯರಿಗೆ ಮುಟ್ಟಿಸುವ ಕೆಲಸ ಅದಕ್ಕಿಂತಲೂ ಬಹಳ ದೊಡ್ಡದು. ಹೀಗೆ ಮಾಡಿದರೆ ಮಾತ್ರ ಸಾಹಿತ್ಯ ಪರಂಪರೆಯ ನದಿಗೆ ಪಾತ್ರ ದೊರಕುವುದು. ರಭಸದಿಂದ ಸುರಿವ ಜಲಪಾತವನ್ನ ದೂರದಲ್ಲೇ ನೋಡಿ ಆನಂದಿಸುತ್ತೇವೆಯೇ ಹೊರತು.. ಮುಟ್ಟಲು ಆಗುವುದಿಲ್ಲ. ಆದರೆ ಸುಬ್ರಾಯ ಚೊಕ್ಕಾಡಿಯಂತಹ ತೀಕ್ಷ್ಣಮತಿಗಳು ಮತ್ತು ಟೀಚರು ಆ ಜಲಪಾತದ ಹಿನ್ನೆಲೆಗೆ ಹೋಗಲು ಇರುವ ಕಾಲುದಾರಿಯನ್ನು ತೋರಿಸುತ್ತಾರೆ. ಯಾವ ಕೀ ಹಾಕಿದರೆ ಯಾವ ಬಾಗಿಲು ತೆರೆಯಬಹುದು ಎಂಬುದನ್ನು ತಿಳಿಸಿಕೊಡುತ್ತಾರೆ. ಅದನ್ನ ಚೊಕ್ಕಾಡಿಯವರ ವಿಮರ್ಶಾ ಬರಹಗಳು ಬಲು ಸಮರ್ಥವಾಗಿ ಮಾಡಿದೆ ಎಂಬುದು ನನ್ನ ಅಭಿಪ್ರಾಯ. ಬರೆಯುವ ಹಂಬಲ ಅದಮ್ಯವಾಗಿರುವವರು ಓದಲೇಬೇಕಾದ ಬರಹಗಳಿವೆ ಅವರ ವಿಮರ್ಶಾ ಸಂಕಲನದಲ್ಲಿ.


ಬೇಡ ಬಾಣ ಬಿಟ್ಟಿದ್ದು ಹಕ್ಕಿಗೇ ಆದರೂ ಅದು ತಗುಲಿದ್ದು ಕವಿ ವಾಲ್ಮೀಕಿಗೆ. ಆ ಶೋಕವು ಮುಂದಿನ ಶ್ಲೋಕಕ್ಕೆ ನಾಂದಿಯಾಯಿತು ಎಂಬ ಕತೆಯನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಒಬ್ಬ ಟೀಚರ್ ನಮಗೆ ಈ ಸಂಬಂಧವನ್ನು ಗುರುತಿಸಿ ನೋಡಿ ಇದನ್ನು ನೋಡುವುದು ಹೀಗೆ...

ಮೂಡಲ ಮನೆಯ ಬೆಳಗು ಕವಿತೆ ಕೇಳುತ್ತ ಖುಷಿ ಪಡುವುದು ಒಳ್ಳೆಯದೇ ಆದರೆ ಅದರ ಪ್ಯಾರಾ ಪ್ಯಾರಾಗಳಲ್ಲಿ ಕವಿ ಬೇಂದ್ರೆ ಹೇಳಹೊರಟಿರುವುದು ಪಂಚೇಂದ್ರಿಯಗಳ ಅನುಭವ ಸಾದೃಶ್ಯವನ್ನ... ಗಮನಿಸಿ ನೋಡಿ ಮೊಗ್ಗೆ ಪಟಪಟನೇ ಒಡೆದು ಎನ್ನುವಾಗ ಮೌನದಲ್ಲಿನ ನಿಶ್ಯಬ್ಧದಲ್ಲಿ ದೊರೆಯುವ ಗ್ರಹಣ, ಎಲೆಗಳ ಮೇಲೆ ಎಲೆಯಂತೆಯೇ ಮರೆಸುವ ಹಾಗೆ ಬಿದ್ದಿರುವ ತುಷಾರ ಬಿಂದುಗಳನ್ನ ನೋಡುವ ದೃಷ್ಟಿ, ಬಣ್ಣದ ಪರಾಗವನ್ನೇ ಹೊದ್ದು ಹಾರುವ ದುಂಬಿಯ ದಂಡು ಸವರಿಕೊಂಡು ಹೋಗುವಾಗ ಸಿಗುವ ಸ್ಪರ್ಶ, ಹೀಗೇ ರುಚಿ, ಆಘ್ರಾಣಿಸುವಿಕೆ ಎಲ್ಲ ಹೇಳುತ್ತ ಕೊನೆಗೆ ಈ ಎಲ್ಲದರ ಮೂಲಕ ಆವರಿಸಿಕೊಳ್ಳುವ ಬೆಳಕಿನಲ್ಲಿ ತುಂಬಿರುವ ಶಾಂತಿರಸ... ಹೀಗೆ ತಿಳಿಸಿಕೊಡುವ ಸಾಮರ್ಥ್ಯ ಇರುವ ಅಪರೂಪದ ಟೀಚರಾಗಿ, ಓದುಗೆಳೆಯರಾಗಿ ಸುಬ್ರಾಯ ಚೊಕ್ಕಾಡಿಯವರು ಮಾಡಿರುವ ಕೆಲಸ, ಸಾಹಿತ್ಯ ಪರಿಚಾರಿಕೆಗೆ ಒಂದು ಮಿತಿ ಇಲ್ಲ. ಎಲ್ಲ ಕಾಲದಲ್ಲೂ ಎಲ್ಲ ಸಾಹಿತ್ಯಾಸಕ್ತರಿಗೂ ಅವರು ಅದನ್ನ ತೋರಿಸಿಕೊಟ್ಟಿದ್ದಾರೆ.


ಎಕೆ.ಆರ್ ಬರೆದ ಹಾಗೆ ಕಣ್ಣೆದುರಿಗೆ ಪ್ರತ್ಯಕ್ಷವಾದದ್ದನ್ನ ನೋಡುವುದಕ್ಕೆ ಎರಡು ಕಣ್ಣು ಸಾಲದು ಸ್ವಾಮೀ ಅದೃಷ್ಟ ಬೇಕು... ಎಂಬುದನ್ನ ಚೊಕ್ಕಾಡಿಯವರು ಬಹಳ ಸಲ ನನಗೆ ಸಾಹಿತ್ಯ ಕುರಿತ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದ್ದಾರೆ.


ಚೊಕ್ಕಾಡಿಯವರ ಕಥೆಗಳ ಕುರಿತು ಬಹುಶಃ ಅಧ್ಯಕ್ಷರಾದ ಮತ್ತು ನಮ್ಮ ನಡುವಿನ ಸೊಗಸಾದ ಕಥೆಗಾರರಾದ ಶ್ರೀ ರಶೀದ್ ಮಾತಾಡುತ್ತಾರೆ. ಆದರೂ ಅವರ ಕಥೆಗಳ ಕುರಿತು ನನ್ನದು ಒಂದೆರಡು ಮಾತು. ಕವಿತೆಗಳಲ್ಲಿ ಲಂಬಿಸಿದ ಮಾರ್ದವತೆ ಆ ಕತೆಗಳಲ್ಲಿ ಇಲ್ಲ. ಹಾಗಂತ ಅದು ಕೊರತೆಯಾಗಿ ಅಲ್ಲ. ಆ ಕಥೆಗಳ ಕಥಾಂಶವೇ ಹಾಗಿದೆ. ದಾರುಣ ವಾಸ್ತವದ ಕಥನಕ್ಕೆ ಬೇರೆ ದಾರಿಯೇ ಇಲ್ಲ. ಆ ಕಥೆಗಳು ವಾಸ್ತವಕ್ಕೆ ಕನ್ನಡಿ ಹಿಡಿದಷ್ಟೇ ನಮ್ಮ ಮನಸ್ಸಿಗೂ ಕನ್ನಡಿ ಹಿಡಿಯುತ್ತವೆ. ಕನ್ನಡಿ ಎಂದರೆ ಅದೇ. ಏನಿದೆಯೋ ಅದನ್ನೇ ತೋರುವುದು. ಆ ನಿಟ್ಟಿನಲ್ಲಿ ಚೊಕ್ಕಾಡಿಯವರು ಜನಪ್ರಿಯ ಆಗದೆ ಇದ್ದರೂ ಬಹಳ ಸಮರ್ಥ ಗಟ್ಟಿ ಕಥೆಗಾರರು ಕೂಡ.

ಇಷ್ಟು ಹೇಳಿ ನನ್ನ ಮಾತು ಮುಗಿಸುತ್ತೇನೆ. ಅವಕಾಶ ಕೊಟ್ಟ ರೂಪ ಪ್ರಕಾಶನದ ಮಹೇಶ್, ನನ್ನ ಮಾತುಗಳ ಮೇಲೆ ಭರವಸೆಯಿಟ್ಟ ಅರವಿಂದ ಚೊಕ್ಕಾಡಿಯವರಿಗೆ ನನ್ನ ಧನ್ಯವಾದಗಳು.

No comments: