Tuesday, November 8, 2016

ಗಾಳಿ ಹೆಜ್ಜಿ ಹಿಡಿದ ಸುಗಂಧ...

ಎಷ್ಟೋ ಬಾರಿ ನಕ್ಕು ಕಲೆತು
ಮತ್ತೆಷ್ಟೋ ಪ್ರಶ್ನೋತ್ತರಗಳು ಕುಳಿತು
ಜೊತೆಜೊತೆಗೆ ನಡೆವಾಗ
ಮಾತು ಮಾತಿಗೆ ಮಲೆತು
ಹಾಗೀಗೇ ಓಡಾಡಿಕೊಂಡಿದ್ದ
ಇವೆರಡು ಕಣ್ಣು
ಅವತ್ಯಾಕೋ
ಎಚ್ಚರ ತಪ್ಪಿ ಬಿದ್ದೆದ್ದು
ನಿನ್ನ ಕಣ್ಣ ಕಾಳಜಿಯ
ಕೊಳದಲ್ಲಿ ಹೊಕ್ಕು
ಮತ್ತೆಂದೂ ತೊರೆಯದ ಹಾಗೆ...

ಮತ್ತೆ ಮತ್ತೆ ನೋಟದ ಕರೆಂಟು
ಹರಿದು....
ಫಿಲಮೆಂಟು ಉದುರಿದ ಬಲ್ಬಿನಲ್ಲೂ
ದೀಪ ಉರಿದ ಜಾದು

ಇವತ್ತು ನೀನು ರಾಗವಾಗಿ ಹಾಡುತ್ತೀ...
"ಪ್ರಣತಿ ಇದೆ. ಬತ್ತಿ ಇದೆ.
ಜ್ಯೋತಿ ಬೆಳಗುವೊಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ..." ಎಂದು..

(ಪ್ರಣತಿ ಇದೆ ಬತ್ತಿ ಇದೆ... ಇದು ಅಲ್ಲಮನ ವಚನ. ವೆಂಕಟೇಶ ಕುಮಾರರ ದನಿಯಲ್ಲಿ ಹರಿದ ಸುಧೆ.)

Tuesday, October 25, 2016

ಉಪ ನಿಷತ್

ಹತ್ತಿರವಿರು
ಇಲ್ಲೆ ಬಳಿಯಲ್ಲಿ,
ದೂರವಿರಲಿ
ಮಾತು, ಹೊರನೆಗೆದಾಟ

ದನಿಯೊಡೆಯದೆಯೂ
ಕೇಳಬಲ್ಲೆನಾದರೆ,
ಮುಟ್ಟದೆಯೂ
ಅರಿಯಬಲ್ಲೆನಾದರೆ,
ನೋಡದೆಯೂ
ಕಾಣಬಲ್ಲೆನಾದರೆ,
ಅಷ್ಟು ಸಾಕು
ಈ ಬದುಕಿಗೆ.
ಉಳಿದದ್ದೆಲ್ಲ
ತಮ್ಮ ತಮ್ಮ ಪಾಡಿಗೆ
ಇರಲಿ ಹಾಗೆಯೇ ಚೆಂದಕೆ

ಎಳೆತನವೆ ಸೊಗಸು
ಮಾಗಿದ ಬದುಕಿಗೆ.

Tuesday, October 18, 2016

ಸರಸತಿಯ ಹೂದೋಟದಲ್ಲೊಂದು ಸುತ್ತು

ಬದಿಗಿಟ್ಟ ಚೀಲ
ಆರಿಸಿಟ್ಟ ಫೋನು
ಊರದಂತೆ ಇಟ್ಟ ಹೆಜ್ಜೆ
ಇವತ್ತಿನ ಮೋಡದಲ್ಲಿ
ಹನಿಯಿಳಿಯುತ್ತಿರುವ ಅವತ್ತು

ಸಾಲು ಸಾಲುಗಳಲ್ಲಿ
ಪೇರಿಸಿಟ್ಟ ಭಂಡಾರ
ಅಚ್ಚುಬೆಲ್ಲಕ್ಕೆ ಮುತ್ತಿದಂತೆ ಇರುವೆ
ಮೇಜದ ಸುತ್ತ ಜವಾನಿ,
ಶಬ್ಧ ಕೂಡದು,
ಕೂಡಿದ ಕಣ್ಣು ಕದಲದು,
ಬರಿದೆ ಪುಸ್ತಕ ಕೈಯಲ್ಲಿ ಪೆನ್ನು,
ಸ್ಕ್ಯಾನಾಗುತ್ತಿರುವ ಚಿತ್ರಗಳು,
ಹರವಿಕೊಂಡ ಪುಸ್ತಕಗಳ ಮುಂದೆ-
ಕುರ್ಚಿಗೊರಗಿದ ಬೆನ್ನು.

ಮಧ್ಯಾಹ್ನದ ಬಿಸಿಲಲ್ಲಿ
ರಸ್ತೆಯಲ್ಲಿ ಹೊಳೆದಂತೆ ಮರೀಚಿಕೆ
ಅಚಾನಕ್ ಭೇಟಿಯಲ್ಲಿ
ನೆನಪುಗಳೆಲ್ಲ ಮಿಂಚಿ ಮಸುಕಾಗುತ್ತಿರುವ
೨೦ ವರುಷಗಳ ಹಿಂದಿನ
ಸೆಂಟ್ರಲ್ ಲೈಬ್ರರಿ
ಕೆಂಪು ಕಟ್ಟಡದ
ಒಳಗೆ ಮುಟ್ಟಿಯೂ ಮುಟ್ಟದಂತೆ
ಸುಳಿದುಹೋದ ಎಳವೆಯ ನರುಗಂಪು.

Friday, October 14, 2016

ಹರಿಗೋಲು

ಕಡುಗತ್ತಲ ಹಿನ್ನೆಲೆಯಲ್ಲಿ
ಹೊಳಪಾಗಿ ನಗುವ ಬೆಳದಿಂಗಳು
ಆವರ್ತಕ್ಕೊಮ್ಮೆ ಬದಲಾಗುವ ಕಾಲ
ಬೆಳೆಯುವ ಕರಗುವ ಚಂದ್ರಬಿಂಬ
ಸದ್ದು ಮಾಡದೆ ಹರಿವ ಹೊಳೆಯ
ಜತೆಗೆ ಸರಿವ ಗಾಳಿ
ಬಾಗಿ ತೊನೆಯುವ ಮರಗಳು
ದಡದಿಂದ ದಡಕ್ಕೆ
ದಾಟಿಸುವ ಅಂಬಿಗನ ದೋಣಿ
ಸುಮ್ಮನೆ ದೂಡಿದಂತೆ ಅನಿಸುವ
ಹರಿಗೋಲು ಇಲ್ಲದೆ ದಾಟಬಹುದೆ
ಈಜಬಲ್ಲವರು ಬಹಳವಿದ್ದರೂ
ದಿನದಿನದ ಓಡಾಟಕಿದೆ ಸಹಜ
ಎನಿಸುವ ಊರಿನಂಚಿನ
ಬಯಲ ದಿಬ್ಬದಲಿ ನಾನು:
ಹರಿವ ಹೊಳೆ,
ಸರಿವ ಗಾಳಿ,
ತೊನೆವ ಮರ,
ಕಾಲ ಕೆಳಗೆ ಅಲುಗುವ ಹುಲ್ಲು,
ನಿಶ್ಚಲ ನೆಲದಲ್ಲಿಯೇ ಸರಿಯುವ ಮಣ್ಣು.

ಹರಿಗೋಲು ದೋಣಿಗೆ ಮಾತ್ರವೇ ಬೇಕೆ?

ಹೀಗೆಲ್ಲ ಯೋಚಿಸುವಾಗ ಇಂದು
ಕದ್ದಿಂಗಳ ರಾತ್ರಿ.
ಬೆಳ್ದಿಂಗಳಿಗಿಂತ ಮೋಹಕ
ಆಗಸದಲ್ಲಿ ಬೆರಳಿಡಲು ಜಾಗವಿಲ್ಲದಷ್ಟು ಮಿನುಗು ಚುಕ್ಕಿ
ವೈರುಧ್ಯಗಳಲ್ಲೂ ಎಷ್ಟೊಂದು ಸೊಗಸು.

ನದಿಯ ಮೇಲುದ ಸರಿಸಿದ ಗಾಳಿ
ಇಲ್ಲಿ ಕಾಲ ಕೆಳಗಿನ ಹುಲ್ಲನ್ನೂ ಅಲುಗಿಸುತ್ತಿದೆ.
ಹೊಳೆಹರಿದು ದಣಿವಾಗಿ ಬೆವರಿಳಿದಂತೆ
ನಿಂತವಳ ಹಣೆಯ ಮೇಲೆ ಸಾಲುಮಣಿ.

Tuesday, October 4, 2016

ಡ್ಯಾಮ್ ಟ್ರುಥ್!

ಹೊನಲರಾಣಿಯ ಹುಟ್ಟು
ಮನುಜನೆದೆಯಲಿ ಇಟ್ಟು
ಸಂತತಿಯ ಬೀಜವ ನೆಟ್ಟು
ಪೊರೆಯಿತು ಪ್ರಕೃತಿ
ಹೊಳೆಯೆಂದರೇನು ಬರಿದೆ
ಇಲ್ಲು ಅಲ್ಲು ಎಲ್ಲೆಲ್ಲೂ ಹರಿದೆ
ಬಯಲಲಿ ಬಳಸಿ
ಗವಿಯಲಿ ಅಡಗಿ
ಬಂಡೆ ಮೇಲಿಂದಲುಕ್ಕಿ
ಕಣಿವೆಯಲಿ ಕಣ್ತಪ್ಪಿ
ಹರಿದಷ್ಟೂ ಹರಿವೆ, ನಲಿವೆ.
ಏನೆಲ್ಲ ತೊರೆದು
ಎಷ್ಟೆಲ್ಲ ಪೊರೆದು
ಯಾರೆಲ್ಲ ಸರಿದು
ಕಟ್ಟಲಾಯಿತು ಒಡ್ಡು
ಸಳಸಳನೆ ಹರಿವವಳು
ವಿಶಾಲ ಕಟ್ಟೆಯಲಿ
ಸಾಗರದೊಲು ಅಲೆಅಲೆಯಾಗಿ
ತುಳುಕಿಯೂ ತುಳುಕದಂತೆ
ಒಡ್ಡಿಳಿದು ಅಳತೆಯಲ್ಲಿ ಸುರಿದು
ತಿರುಗುವ ಟರ್ಬೈನು
ಮುಳುಗಡೆಯಾದವರಿಗೂ
ಒಂದು ಧನ್ಯತೆಯ ಕರೆಂಟು ಲೈನು.
ಚಲಿಸಿದ ಕಾಲದ ಚಕ್ರದಲ್ಲಿ
ತುಕ್ಕು ಹಿಡಿದ ನಕಾಶೆ
ಸರಿ ಇರಲಿಲ್ಲ ಯೋಜನೆ
ಎಂದವರು ಮೊಗದಿರುವಿ
ವಿಶಾಲ ಕಾನನದ
ನಟ್ಟ ನಡುವೆ
ಬಿರುಕಿರದ ಒಡ್ಡು
ತಿರುಗಲಾರದ ಚಕ್ರ
ಉತ್ಪಾದಿಸದ ವಿದ್ಯುತ್ತು
ಬಿಟ್ಟು ಹೊರಟ
ಊರಿಗೂರೆ
ಕುಸಿದು ಬಿದ್ದಿದೆ ಅನಾಮತ್ತು
ಬಾಗಿಲಿರದ ಗೋಡೆ
ಚಪ್ಪರವಿರದ ಛಾವಣಿ
ನೀರು ಬರದ ನಲ್ಲಿ
ಕರೆಂಟು ಹರಿಯದ ತಂತಿ
ಸಾಲು ಸಾಲು ಮನೆಗಳಿವೆ ಚಿತ್ರದಂತೆ




ರೂಪಕ ಸಾಮತಿಗಳ ಬಿಟ್ಟುಬಿಡಿ
(ಪ್ರೀತಿ) ನದಿ
ಹರಿದಿದ್ದು ನಿಜ.
ಈಗ
ಬಹಿಷ್ಕೃತ ಡ್ಯಾಮ್ ಸೈಟಾಗಿರುವುದು
ಅ ಮೋರ್ ಡ್ಯಾಮ್ ಟ್ರುಥ್!

ಚಕ್ರ ಮತ್ತು ಸಾವೆಹಕ್ಲು ಇವು ಹೊಸನಗರದ ಹತ್ತಿರ ಇರುವ ಚಕ್ರಾ ನದಿಗೆ ವಿದ್ಯುದುತ್ಪಾದನೆಗೆ ಕಟ್ಟಿದ ಅಣೆಕಟ್ಟೆಗಳು. ಇವುಗಳು ಈಗ ಕೆಲಸ ಮಾಡದೆ ಹಾಳುಬಿದ್ದಿವೆ ತಮ್ಮೆಲ್ಲ ಸಾಮರ್ಥ್ಯ ಮತ್ತು ಸಾಧ್ಯತೆಗಳ ಸಮೇತ ಅವಲ್ಲಿ ಸುಮ್ಮನೆ... ಏನಿಲ್ಲದೆ, ಯಾರೂ ಇಲ್ಲದೆ ಹಾಗೆ.. 

Saturday, October 1, 2016

ಸಮಗ್ರ

ತಂದೆ ಉತ್ಕ್ರಮಣ ಕಾಲದಲ್ಲಿರುವಾಗ
ಆಸೆ ಗರಿಗೆದರಿದ್ದರ ಬಗ್ಗೆ,
ಮಿಲನೋತ್ಕರ್ಷದ ಸಂತಸದಲ್ಲಿರುವಾಗ
ಬಾಗಿಲು ಬಡಿದ ಸಾವಿನ ಸುದ್ದಿಯ ಬಗ್ಗೆ,
ನೀನೇ ಬರೆದಿದ್ದೆಯಲ್ಲ
ನಿನ್ನ ಸತ್ಯಾನ್ವೇಷಣೆಯಲ್ಲಿ.
ಆದರೂ ನಮಗೆ ಹೆಸರಿಡುವ ಚಟ,
ಔಟ್ ಆಫ್ ಕಂಟೆಕ್ಸ್ಟ್ ಕೋಟ್ ಮಾಡುವುದು ಅಹಹಾ ಅದೆಂಥ ಸುಖ.
ವರಕವಿಯ ಉಲುಹು - ಸಿಕ್ಕಲ್ಲಿ ಅಲ್ಲ. ಸಿಕ್ಕಲ್ಲಿ ಮಾತ್ರ.

ಎಲ್ಲದನ್ನೂ ಭೂತಗಾಜಲ್ಲಿಟ್ಟು
ನಮ್ ನಮ್ಮ ಮೂಗಿನ ನೇರಕ್ಕೆ ನೋಡುವ ನಾವು
ಎಷ್ಟು ಬೇಗ ತೀರ್ಪು ಕೊಡುತ್ತೇವೆ!
ಲೋಕ ಬಿರುದು ಕೊಟ್ಟರೆ,
ನೀನು ಅದಕ್ಕಂಟದೆ,
ಶೌಚದ ಕೋಣೆಯ ತೊಳೆಯುತ್ತಿದ್ದೆ;
ಬಾವಲಿ, ಹುಡ್ದುಗಳ ಆಮಿಷಕ್ಕಿಳಿಯದೆ
ತುಂಡು ಪಂಚೆ ಮೇಲುದ ಹೊದ್ದೆ.

ಸಿಕ್ಕದ್ದನ್ನೆಲ್ಲ ಬಳಿದು ಅಕೌಂಟಲ್ಲಿಟ್ಟುಕೊಳ್ಳುವ,
ನಮ್ಮ ಯುಗಕ್ಕೆ ಅನುಮಾನ -
ಈ ಎಲ್ಲ ತೋರಿಕೆಗಳ ಹಿಂದೆ,
ಬಿಸಿಲಿಗೆ ಕಪ್ಪಡರಿದ ಒಣ ಚರ್ಮದ
ಮೊಗದಲ್ಲಿ ಈಗಷ್ಟೆ ಬಿರಿದ ಮಲ್ಲಿಗೆ ನಗು,
ಬರಬೇಕಿದ್ದರೆ ಇನ್ನೇನೋ ಇರಬೇಕು;
ಅಡಗಿಸಿಟ್ಟ ಹುನ್ನಾರ, ಹೊಸದೇನೋ ಹತಾರ
ಬಾಯಲ್ಲಿ ಶಾಂತಿ ಮಂತ್ರ;
ಕೈಯಲ್ಲಿ ಒಡೆದು ಆಳಿದ ತಂತ್ರ
ಇರಬಹುದೇನೋ !? -
ಎಂಬನುಮಾನದ ಹಸಿಕಟ್ಟಿಗೆಗೆ
ಬೆಂಕಿ ಹಚ್ಚುವವರ ದೇಶಾಭಿಮಾನ
ಮತಾಭಿಮಾನ, ಹೆಸರಿಟ್ಟುಕೊಂಡ ಸ್ವಾಭಿಮಾನ!

ಎಲ್ಲದಕ್ಕೂ ನಿನ್ನದು ಪಂಚಮದ ಸೊಲ್ಲು,
ಶುದ್ಧ ಹಿಂದೋಳ, ರಂಗದಿಂದ ದೂರ.
ಮುಂದೆ ವೇದಿಕೆಯಲ್ಲಿ,
ನೆರೆದವರ ಟೋಪಿ,.ಬಣ್ಣ ನುಂಗಿದ ಬಿಳಿ ಬಿಳಿ ಕೋಟಂಗಿ,
ನೀಲಿಯಲ್ಲಿ ಹೂವುದುರಿಸಿ ಪಟಪಟಿಸುವ ತ್ರಿವರ್ಣಧ್ವಜ,
ಆಕಳಿಕೆ ತಡೆದು ಉಸುರುವ ಜೈಜಯವಂತೀ,
ನಡುಮಧ್ಯೆ ಕಿಸೆಯಲ್ಲಿಟ್ಟ ಫೋನಲ್ಲಿ ವಾಟ್ಸಾಪು ಮೆಸೇಜು
ಸೆಕ್ರೆಟರಿ ಬರಕೊಟ್ಟ ಕೊಟೇಶನ್ ಯುಕ್ತ ಭಾಷಣ
ಮುದುರಿ ಒದ್ದೆಯಾಗುವ ಮೊದಲೆ ಗಳುಹಬೇಕು,
ಕೊನೆಗೊಂದು ಮಾತು
ಸಬಕೋ ಸನ್ಮತಿ ಹೇಳಬೇಕು.
"ಸಬಕೋ" ಅಷ್ಟೆ ತನಗಲ್ಲ.
ಇಲ್ಲಿ ಸ್ಮಾರ್ಟು ಫೋನು, ಟೀವಿಯಲ್ಲಿ ಸ್ಟ್ರೀಮಾಗುತ್ತಿರುವ ಪಥ ಸಂಚಲನಕ್ಕೆ
ವಾಹ್ ಗುಟ್ಟುವ ಲೈಕೊತ್ತುವ ಜನ ಮಾನಸ ನಿನ್ನ ನಿಜವ ನಂಬಲೇ ಇಲ್ಲ

ಬರೆದಿಟ್ಟೆ ನೀನು ನಿನ್ನ ಸತ್ಯಾನ್ವೇಷಣೆಯ,
ಇಟ್ಟ ಹೆಜ್ಜೆಗಳ, ತೊಟ್ಟ ನಿಲುವುಗಳ,
ಕಲಿತ ಹೊಳವುಗಳ,
ಹೊಸತಿಗೆ ತೆರೆದುಕೊಂಡ ಬಗೆಯ,
ಹಳತಿಗೆ ಒಲಿದ ಎದೆಯ,
ಎಡವಿದ್ದು, ತಡವಿದ್ದು,
ಆಗಿದ್ದು, ಆಗಬೇಕಾಗಿದ್ದಿದ್ದು, ಆಗಬಹುದಾಗಿದ್ದು..
ಎಲ್ಲ ಖುಲ್ಲಂ ಖುಲ್ಲ
ಆದರೂ ಓದುವವರ ಕಣ್ಣು ತೆರೆಯದೆ
- ಬಿಚ್ಚಿಟ್ಟದ್ದು ಸಿಕ್ಕುವುದಿಲ್ಲ.
ಅವರು ಹುಡುಕಿದ್ದು ಅವರಿಗೆ
ಸಿಕ್ಕಿದರೆ ಸಾಕು,
ನೀನು ಬರೆದಿದ್ದಲ್ಲ!!
ಮತ್ತೆ ವರಕವಿ... ಕಂಡದ್ದು ಅಲ್ಲ, ಕಂಡದ್ದು ಮಾತ್ರ.
ಎಲ್ಲೋ ಒಳಗೆ, ಹೊರಗೆ ಕೇಳಿಸದ ಹಾಗೆ.
((ಯೂ ಬೀ ದ ಚೇಂಜ್... ))


ಇದು ನಿನ್ನೊಬ್ಬನದೆ ಅಲ್ಲ ಅಜ್ಜಾ.
ದಕ್ಷಿಣೇಶ್ವರದ ಆಲದ ಕೆಳಗೆ
ಬೆರಗು ಮೈವೆತ್ತು ನಿಂದವನ ಗತಿಯೂ.
ಅವನ ಮಾನವತಾವಾದದ
ಕಾಲುದಾರಿಯ ಮೇಲೆ
ಕೆಂಪು ಬಾವುಟ, ಕೇಸರಿ ಶಾಲು.
ಅವನ ಹೆಸರು ಹೇಳಲೂ ಲಾಯಕ್ಕಿಲ್ಲದವರ
ಬಾಯಲ್ಲೆಲ್ಲ ಉದ್ಧರಿತ ಸಾಲು ಸಾಲು
ಉತ್ತಿಷ್ಠ, ಜಾಗ್ರತ.. ಪ್ರಾಪ್ಯವರಾನ್ನಿಬೋಧತ..
ಎಲ್ಲದಕ್ಕೂ ಮಧ್ಯಮ ಪುರುಷ ಕರ್ಮಣೀ ಪ್ರಯೋಗ, ತನಗಲ್ಲ.
ಜನ ಮರುಳೋ ಜಾತ್ರೆಯೋ!

ಸಂತೆಯಲ್ಲಿ ನಿಂತು
ಜಪಮಣಿಯೊಳಗೆ ಧ್ಯಾನಸ್ಥನಾದವನ
ಗೋರಿಯ ಸುತ್ತ ದೊಡ್ಡ ಮಂದಿರ;

ನುಡಿದರೆ ಮುತ್ತಿನ ಹಾರವೆಂದವರ-
ಮರ್ಯಾದೆಯನ್ನು ನಾವು ಚರ್ಚೆಗಳಲ್ಲಿ ಹರಾಜು ಹಾಕಿದ್ದೇವೆ.
ಒಳಗಿರುವ ಅನ್ಯವನ್ನ ಅನನ್ಯವಾಗಿಸಿದವನನ್ನು
ಪಾಲು ಮಾಡಿಕೊಂಡಿದ್ದೇವೆ.

ಬಯಲಾದವರನ್ನು ಬೆತ್ತಲಾದವರನ್ನು
ಎಳೆದೆಳೆದು ಪೀಠ ಕಟ್ಟಿದ್ದೇವೆ
ಶೂನ್ಯ ಮಂಟಪಕ್ಕೆ ಸ್ವರ್ಣಲೇಪ
ಝಗ್ಗೆನ್ನುವ ಶಾಂಡೆಲಿಯರ್ ದೀಪ

ಕತ್ತಲು ಎಲ್ಲೂ ಇಲ್ಲ
ಕೊನೆಯ ಪಕ್ಷ ಬೆಳಕನ್ನು ಹುಡುಕಬೇಕು ಎಂಬರಿವು
ಮೂಡಲೂ ಕತ್ತಲಿಲ್ಲ.
ಕರೆಂಟು ಹೋದರೆ ಡೀಸೆಲ್ ಉರಿಸು
ಸೂರ್ಯನಿಗೇ ಪ್ಲಗ್ಗು ಹಾಕು, ಒಟ್ಟಲ್ಲಿ ಝಗಮಗಿಸು.
ಈಗಿವರು ಎಲ್ಲ ಹಿಂದುಳಿದ ಜಾತಿಪಾಲು.
ಮುಂದುವರಿದವರ ಜಾತಿಯೇ ಪಾಲು.

ಆನಿಕೇತನವನ್ನ ಸ್ಮಾರಕವಾಗಿಸಿದ ಮೇಲೆ
ವಿಶ್ವಪಥವು ಟೋಲ್ ರಸ್ತೆ ಹೆಸರಾಗಿದೆ
ಗದ್ದೆಗಳೆಲ್ಲ ಒಣಗಿ ಬಿರಿಯುತ್ತಿದ್ದರೆ
ಪೇಟೆಗಳ ಮಾರ್ಕೆಟ್ ಮಾತ್ರ ಕೆಸರಾಗಿದೆ

ಅಮ್ಮ ಸ್ನಾನಕ್ಕಿಳಿಸಿದ ಪುಟ್ಟ ಮಗುವಿನ ಮುಗ್ಧತೆಯಲ್ಲಿ
ಜಗತ್ತಿಗೆ ಬರಿಮೈಯಾದವನ ಪಂಥವಿದೆ
ನಿಮ್ಮೂರ ಹತ್ ಹತ್ತಿರದವನೆ.
ಅಹಿಂಸೆಯೇ ಜೀವನಧರ್ಮ
ಒಂದು ಪೈಸೆ ಕಡಿಮೆ ಬಿದ್ದರೂ ಬಡ್ಡಿ ಗಿಟ್ಟುವುದಿಲ್ಲ.
ಅಡಮಾನಕ್ಕಿಟ್ಟ ವಸ್ತು ಮರಳುವುದಿಲ್ಲ.

ದುಃಖಮೂಲ ಬದುಕಿಗೆ ಬೆನ್ನು ಹಾಕಿದವನ
ಅನುಯಾಯಿಗಳು,
ಮೂರ್ತಿಪೂಜೆ ಬೇಡೆಂದವನ
ಹಲ್ಲುಗಳನ್ನ ವಜ್ರದ ಕರಂಡಕದಲ್ಲಿಟ್ಟರು!
ದಿಕ್ಕು ದಿಕ್ಕಿನಲ್ಲಿ ಆಕಾಶದೆತ್ತರಕ್ಕೆ ಕಟ್ಟಿದ ವಿಹಾರದ
ಗೋಡೆಯುದ್ದಕ್ಕೆ ವಿಗ್ರಹಗಳಿವೆ ಉದೂದ್ದ!!

ತನ್ನ ತನದಿ ಬೆಳೆದು ಇಡೀ ಭಾರತ
ಮಣಿವ ಸಂವಿಧಾನ ಬರೆದವನು
ಈಗ ಬರಿದೆ ಅಸ್ಪ್ರಶ್ಯರ ನಾಯಕ.
ಫೋಟೋ ಪ್ರತಿಮೆಗಳಲ್ಲಿ
ಜಯಂತಿಯ ದಿನ ಹಾರ ಹಾರಗಳಲ್ಲಿ ಮುಳುಗಿ
ಹೊರಜಗಲಿಯಲ್ಲೆ ಕೂತ ಪಥಿಕ.


ಇರಲಿ ಬಿಡು.

ಕಾಲ ಸಂದ ಬಳಿಕ
ನಿಮ್ಮ ಕಂಪ್ಲೀಟ್ ವರ್ಕ್ಸೂ
ಎಲ್ಲರ ಸೊತ್ತು.
ಹೇಗ್ ಹೇಗೆ ಬಳಸಬೇಕು
ಅವರವರಿಗೆ ಗೊತ್ತು.
ಸಮಗ್ರ - ಬರಿಯ ಶೀರ್ಷಿಕೆಯಲ್ಲಿ ಮಾತ್ರ.


[[ಕನ್ನಡ ಮಾಣಿಕ್ಯ ಪತ್ರಿಕೆಯ ವಾರ್ಷಿಕ ಪ್ರಕಟಣೆ ಸುಗಂಧಿಯಲ್ಲಿ ಪ್ರಕಟವಾದ ನನ್ನ ಕವಿತೆ. ಕರ್ಕಿ ಕೃ‍ಷ್ಣಮೂರ್ತಿ ಮತ್ತು ಬಾಲಕೃಷ್ಣ ಅವರ ಸಂಪಾದಕತ್ವದಲ್ಲಿ ಮೂಡಿ ಬಂದಿರುವ ಈ ಸುಗಂಧಿ ವಿಶೇಷಾಂಕ ಇತ್ತೀಚಿನ ದಿನಗಳಲ್ಲಿ ನಾನು ಓದಿದ ಅತ್ಯುತ್ತಮ ವಿಶೇಷಾಂಕ.]]

Tuesday, September 27, 2016

ಶಿಲುಬೆ ಹೊತ್ತ ಬೆನ್ನು

ಮೋಡ ಕಟ್ಟುತ್ತದೆ
ಹನಿಯುವುದೇ ಇಲ್ಲ
ಹೇಳಲಿಕ್ಕೆ ತುಂಬ ಇದೆ
ದನಿಯಾಗುವುದೇ ಇಲ್ಲ

ಹೀಗಿರಬಾರದಿತ್ತು
ಹಾಗೇ ಇದ್ದಿದ್ದರೆ ಚೆನ್ನಿತ್ತು

ಈಗ ಏನು ಮಾತಾಡಿದರೂ
ಕರ್ತವ್ಯ ಮತ್ತು ಜವಾಬ್ದಾರಿ
ಶಿಲುಬೆ ಹೊತ್ತ ಬೆನ್ನು
ಕೂಡುವುದಿಲ್ಲ ಕಣ್ಣು
ಮಿಂಚುವುದಿಲ್ಲ
ಬರಿದೆ ಗುಡುಗು
ಮಳೆ ಬರದೆಯೂ
ಕಲಕಿ ಹೋದ ಕಣ್ಣು

ಜೊತೆ ಹೆಜ್ಜೆ,
ಗುರಿಯಿರದ ಹಾದಿ
ಹನಿ ಮುದ್ದಿಸುವ ಕಾನು
ಕಂಡ ಶಿಖರವನೇರಲಿಕ್ಕು
ಕಣಿವೆ ತುಂಬ ದಿಕ್ಕು
ಎಲ್ಲ ದಾಟಿ
ರಾಜಪಥದ ಬೀದಿಯ
ಆರತಕ್ಷತೆಯಲ್ಲಿ
ಬಯಲಾದೆವು
ಹಾಗೇ ಇದ್ದಿದ್ದರೆ ಚೆನ್ನಿತ್ತು.

ಶಿಲುಬೆ ಹೊತ್ತ ಬೆನ್ನು
ಸಾಕೆನಿಸಿಯೂ ಹೊರಲೇಬೇಕಿನ್ನು.

Monday, September 19, 2016

ಎಂ.ಎಂ.ಎಸ್.

ಆಕಾಶಮಲ್ಲಿಗೆಯ ಮರಕ್ಕೆ ತೋರಿದ ಮುದ್ದಣ ಮನೋರಮೆಯರ ಸಲ್ಲಾಪ

ಮು: ಇನ್ನು ನೀನು ಮಾತನಾಡಬೇಡ
ಮ: ಹೌದಾ ಹಾಗಾದರೆ ಬೇರೆ ಏನು ಮಾಡಲಿ

ಮು. ಬೇಳೆ ಹೋಳಿಗೆ. ಕಟುಂ ಚಕ್ಕಲಿ
ಕಲಸನ್ನ, ಪಾಯಸ. ಕೋಸಂಬರಿ
ಜೊತೆಗೆ ಕುಂಬಳದ ಮಜ್ಗೆ ಹುಳಿ ಇರಲಿ

ಮ: ಅಭ್ಭಾ ಸರಿ ಸರಿ ಮೆನುವೇನೋ ಭಾರಿ..
ನಾನು ಮಾತನಾಡುವುದಿಲ್ಲ
ನೀನು ನಿಲ್ಲಿಸದಿರು

ಮು: ಅದನ್ನು ನೀನು ಹೇಳಬೇಕೆ
ಮಾತು ಮೌನ ನಿರ್ವಾತದಲ್ಲೂ
ನನ್ನದೇ ಹೇಳಿಕೆ, ಬಡಬಡಿಕೆ
ಎಂದೂ ಮುಗಿಯದ ಚಡಪಡಿಕೆ
ನಿನ್ನ ಕಣ್ಣ ಕೊಳದಲ್ಲಿ ಬಿದ್ದಾದ ಮೇಲೆ
ಏಳುವುದಾದರೂ ಯಾಕೆ?

ಮ: ಇರಲಿರಲಿ.
ಹದವಾಗಿ ಸುಟ್ಟ ಬಾಳೆಕುಡಿಯಲ್ಲಿ
ಬಡಿಸಿರುವ ಪರಮಾನ್ನಗಳ
ಮುಗಿಸು ಮೊದಲು.
ಏಳಕೂಡದು
ನನ್ನೆಲೆಯೂ ಬರಿದಾಗುವ ಮೊದಲು

ಮು: ಅದಕ್ಕೇನಂತೆ
ವೈದ್ಯ ಹೇಳಲೆಂದೇ ಬಯಸುವ ರೋಗಿಯೊಲು
ಇಲ್ಲೆ ಕುಳಿತಿರುವೆ
ಅನುಮತಿಯಿದೆಯೆ ಕೈ ನೆಕ್ಕಲು?
ಬಿರಿಗಣ್ಣು ಬೇಡ ಬಿಡು.
ಊಟ ಅರಗದೆ ಹೋದೀತು.
ಹೊರಗೆ ಅಂಗಳದಲ್ಲಿ
ಅಗಸೆಯ ಮರವನೊರಗಿದ
ಬಳ್ಳಿ ತುಂಬ ಚಿಗುರೆಲೆ
ನೋಡಿದೆಯೋ ಇಲ್ವೋ ಹೇಳು ಮೊದಲು.

ಮ: ಎಲ್ಲ ಗೊತ್ತಿದೆ.
ಜಗುಲಿಯ ತೂಗುಮಂಚದಲ್ಲಿ
ಅಣಿಯಾಗಿದೆ ಎಲಡಿಕೆಯ ಬಟ್ಟಲು
ನೆನಪಿರಲಿ
ಕೈತೊಳೆದು ಬಂದ ಮೇಲೆಯೇ ವೀಳ್ಯ.

ಮು: ಎಲ್ಲ ಗೊತ್ತಿದೆ
ಮಾತು ಕೇಳದಿರೆ
ಸಲ್ಲಾಪದ ವೀಳ್ಯಕ್ಕೆ ರಣ ಸೇರುವುದೆಂದು

ಅಂಗಳದಲ್ಲಿ ಹೂತ ಆಕಾಶಮಲ್ಲಿಗೆ ಮರಕ್ಕೆ ಕಂಡಿದ್ದು ಕೇಳಿದ್ದು ಇಷ್ಟು:

ಜಗುಲಿಯ ತೂಗುಮಂಚದಲ್ಲಿ"
ಇವಳದು ಭಾಮಿನಿ
ಅವನದು ರಗಳೆ
ಇವಳ ಶರಗಳನ್ನು ತಡೆಯಲಸಹಾಯನಾದ
ಅವ ಶರತಲ್ಪದಲ್ಲೇ ಉದ್ದಂಡ.
ಸಣ್ಣ ಗೊರಕೆ.


ಶಾಲೆಗೆ ಹೋದ ಕಂದಪದ್ಯ
ಮನೆಗೆ ಬರುವುದರೊಳಗೆ
ಫಿಲ್ಟರಿನಲ್ಲಿ ಡಿಕಾಕ್ಷನಿಳಿದು
ಸಂಜೆ ಬಂಗಾರದ ಬೆಳಕು
ಅಂಗಳದಂಚಿನ ಅಬ್ಬಲಿಗೆಯ
ಹೊಳೆಯಿಸುವಾಗ,
ಹಬೆಯಾಡುವ ಕಾಫಿ
ಒಳಹೊಗುವಾಗ,
ಒಂದೆರಡು ಸುನೀತ.

ಮತ್ತೆ ಸಂಜೆಯಡಿಗೆ ತಯಾರಿ.
ದಿನದಿನವೂ ಅದದೇ
ಮತ್ತೇ ಭವಿ ಕ್ರೀಡಿತ ವೃತ್ತ.

(ನನ್ನ ಹಾಗಿನ ಏಳನೇ ಕ್ಲಾಸಿಗೆ ಕನ್ನಡದ ಅಭ್ಯಾಸ ಕೊನೆಯಾದವರಿಗಾಗಿ ಒಂದೆರಡು ಮಾತು;ಭಾಮಿನಿ, ಶರ, ಉದ್ದಂಡ ಇವು ಕನ್ನಡದ ಕೆಲ ಷಟ್ಪದಿಗಳು. ರಗಳೆ, ಸುನೀತ, ವೃತ್ತ, ಕಂದಪದ್ಯ ಇವುಗಳೂ ಕನ್ನಡ ಕಾವ್ಯ ರಚನೆಯ ರೀತಿಗಳು.)

Wednesday, August 17, 2016

ರೆಕ್ಕೆಯಿಲ್ಲದ ಗರುಡ

ಈ ತಿಂಗಳಿನ ವಿಷಾದ ರಾಗವೆಲ್ಲಿ?
ಆಷಾಢದ ಕೊನೆಕೊನೆಗೆ ವಿಧುವಡಗಿದಲ್ಲಿ
ಕಣ್ ಬನಿ ತೊಡೆವ ಕತ್ತಲ ಮೂಲೆಯಲ್ಲಿ
ಯಾರೂ ನೋಡದಲ್ಲಿ
ಕಿವಿ ದೂರವಾದಲ್ಲಿ
ತನ್ನಷ್ಟಕೆ ತಾನೆ ಎರಡೆರಡೆ ಹನಿಯಲ್ಲಿ
ಮೀಟುವ ವಿಯೋಗದ ವಿಸ್ತರಣೆಗೆ
ಶೃತಿ ಬೇಕಿಲ್ಲ. ತಬಲ ಸಲ್ಲ.

ಈಗೀಗ
ಕತ್ತಲ ಮೂಲೆ ಸಿಗದೆ
ಬಿಕ್ಕುಗಳ ತೊಡಲು ಸಮಯವಿರದೆ
ಆವರಿಸಿರುವ ಸಂಸಾರ ಸಾರ ಸುಧಾಂಬುಧಿ.
ಕಾಲ ಎಂತ ಹರಿತವನ್ನೂ
ಮೊಂಡಾಗಿಸುತ್ತದೆ.
ಆದರೂ..ಮೊಂಡು ಕತ್ತಿಯ ಗಾಯ
ತುಂಬ ದಿನದ ಮೇಲೆ ಹುಣ್ಣಾಗುತ್ತದೆ.
ಆಷಾಢ ಮುಗಿದ ಶ್ರಾವಣದಲ್ಲಿ
ಹಬ್ಬಸಾಲಿನ ಎಲೆಮರೆಯಲ್ಲಿ
ನಡುಗುವ ಶಿಶಿರ
ಒಳಗೊಳಗೆ ಮೀಟುವ ವಿಹಾಗ
ರೆಕ್ಕೆ ಕತ್ತರಿಸಿ ಬಿದ್ದ ನೆನಪಿನ ವಿಹಗ.

ಮತ್ತೆ ಮತ್ತೆ
ನೋವ ತಿದಿಯೊತ್ತುವುದು ಯಾವುದು

ವಿಯೋಗ ಅಥವಾ ತಪ್ಪಿ ಘಟಿಸಿದ್ದ ಸಂಯೋಗ?
ಇದಕ್ಕಿರಬಹುದೆ ಅಪರಕರ್ಮ?
ಸಂತೈಸಿ ಕಥಿಸುವ ಗರುಡ ಪುರಾಣ?
ಏನು ಕೇಳಿದರೇನು!! ರೆಕ್ಕೆಯಿಲ್ಲದ ಗರುಡ ಹಾರಬಹುದೆಲ್ಲಿಗೆ?

Tuesday, August 16, 2016

ನಿರಂತರ

ಪುಟ್ಟ ಕಾಲ್ಗಳು
ಮೊಗ್ಗು ಬೆರಳುಗಳು
ಚೂರ್ ಚೂರೇ ಅರಳುತ್ತಿರುವ ಹೂದುಟಿಗಳು
ಮೆತ್ ಮೆತ್ತಗಿನ ಗಲ್ಲ, ಕೆನ್ನೆ
ನಕ್ಷತ್ರಹುದುಗಿದ ಆಕಾಶ ಕಣ್ಗಳು
ಎತ್ಕೋ ಎಂದು ಗೋಗರೆಯುವ
ನಿದ್ದೆ ಮರುಳ ಹಾಲ್ ಹಸುಳೆ
ಹುಟ್ಟಿದಾಗ ಅಮ್ಮ ಹುಟ್ಟುತ್ತಾಳೆ
ಮಡಿಲಿನಿಂದ ನೆಲಕ್ಕೆ ಕಾಲ್ ಚಿಮ್ಮುವಾಗ
ಹೊಸಿಲೆಡವಿ ಅಂಗಳದಿ ಆಟದ ರಂಗೋಲಿ ಬಿಡಿಸುವಾಗ
ಶಾಲೆಯಲಿ ಗೆಳೆಯರೊಡನೆ ಹೊಸ ಬಂಧ ಕಟ್ಟುವಾಗ
ಬಿದ್ದಾಗ ಎದ್ದಾಗ ಅಳುವಾಗ ನಗುವಾಗ
ತಮ್ಮನೊಡನೆ ಜಗಳ ಆಡುವಾಗ, ತಮ್ಮನ ಬೆನ್ ಕಟ್ಟುವಾಗ
ಊಟದ ರುಚಿ ಹುಡುಕುವಾಗ
ಸ್ಟೋವ್ ಹಚ್ಚಲು ಕಲಿತಾಗ
ನನಗೆಲ್ಲ ಗೊತ್ತು ಬಿಡು ಎಂದು ಮೊಗದಿರುವುವಾಗ
ಮಗು ಮೊಗ್ಗು ಅರಳಿ ವ್ಯಕ್ತಿಯ ಕಾಯಿ ಕಟ್ಟುವಾಗ
ಹಿನ್ನೆಲೆಯಲಿ ಅಮ್ಮ ಪೊರೆಯುತ್ತ, ಸಂಭಾಳಿಸುತ್ತ
ನೋಯುವ ಸೊಂಟ ತಿಕ್ಕುತ್ತ, ಉಸ್ಸೆನ್ನುತ್ತ
ನಗುನಗುತ್ತ ಕಣ್ಬನಿ ಒರೆಸಿಕೊಂಡು
ತನ್ನೆದುರಿನ ಮಿಂಚಿನ ಪ್ರತಿಫಲನವಾಗುತ್ತ
ದಿನದಿನವೂ ಹುಟ್ಟುತ್ತಾಳೆ
ಹೊಸ ಪಾಠ ಹೊಸನೋಟ
ಬಿಡುವಿರದ ಓಟ
ಪಯಣಿಸುತ್ತಲೇ ವಿರಾಮ
ನೆರವಿಗಿರುವನು ಸುಧಾಮ
ಬಿಸಿಹಾಲಿನ ಬಟ್ಟಲಂತ ಪ್ರೀತಿ
ತಣಿದು ತಾಯ್ತನದ ಹೆಪ್ಪಿಳಿದ
ಘನ ಮೊಸರು ಕಡೆಯುತ್ತಲೇ ಇರುವ
ಅಮ್ಮನ ಮಡಿಕೆ ತುಂಬ ನವನೀತ
ತಂಪಿಗೆ ಮಜ್ಜಿಗೆ,
ಬಿಸಿಯೂಟಕ್ಕೆ ಮರಳು ಮರಳಾದ ತುಪ್ಪ
ಖಾಲಿ ಮಡಕೆ ಬೋರಲು ಬೀಳುವಾಗ
ಪುಟ್ಟ ಪುಟ್ಟ ಕಾಲ್ಗಳಿಗೆ ದೈತ್ಯ ಜಿಗಿತ
ರೆಕ್ಕೆ ಮೂಡಿ ಹಾರಾಟ
ಅವಳ ಆಕಾಶದಲ್ಲಿ ಮಿನು ಮಿನುಗುವ ನೆನಪಿನ ನಕ್ಷತ್ರಗಳಸಂ‍ಖ್ಯಾತ

ಗಿಬ್ರಾನು, ಡೀವಿಜಿ, ವ್ಯಾಸ, ವಾಲ್ಮೀಕಿ, ಮಾರ್ಕ್ ಟ್ವೈನು, ಶೇಕ್ಸ್ ಪಿಯರ್ರು
ಎಲ್ಲರ ನೆರಳಲ್ಲಿ ಹಾದು ಬಂದ ಹೂಚೆಲ್ಲಿದ ಹಾದಿ
ಹೂವಿನ ಕಾಲಕ್ಕೂ ಮುಂಚಿನ ಶಿಶಿರದಲ್ಲಿ ಎಲೆಯುದುರಿ
ಚೈತ್ರದಲ್ಲಿ ಚಿಗುರೊಡೆಯುವ ನೋವಿನಪುಳಕ
ನಿರ್ಗಮನಕ್ಕೆ ಸಿದ್ಧವಾಗಿಯೇ ಕಣ್ಣನ ಪೊರೆಯುವ ಗೋಕುಲ.

ಅಮ್ಮ ಹುಟ್ಟುತ್ತಾಳೆ. ಮಗುವಿನಲ್ಲೂ, ಅಮ್ಮನಲ್ಲೂ
ಅವಳನ್ನ ಅನುಭವಿಸುವ ಸುತ್ತೆಂಟು ಸಮಷ್ಟಿಯಲ್ಲೂ
ಹುಟ್ಟುತ್ತಲೇ ಇರಬೇಕು. ನದಿ ಹರಿವ ಹಾಗೆ.
ಸಣ್ಣ ವ್ಯತ್ಯಾಸವೆಂದರೆ ಇವಳು ವೃತ್ತಾಕಾರ
ಕಿವಿಗೆ ಬರಿಯ ಸಮುದ್ರ ಘೋಷ
ಹೊಂದದೆಯೂ ಹೊಂದುವ ಗುಣವಿಶೇಷ
ಮಡಿಕೆ ಮಣ್ಣು ಸೇರಲು ನಿಶ್ಯೇಷ ನಿರಂತರ.

Tuesday, July 12, 2016

ಪಾತಾಳದಲ್ಲಿ ಪಾಪಚ್ಚಿಗೆ ಕಂಡ ವಂಡರ್ ಲ್ಯಾಂಡ್..

ಇದು ಹೀಗೆ. ಇದು ಹಾಗೆ
ಹೀಗೆ ಮಾಡಬಹುದು, ಹಾಗೆ ಮಾಡಬಾರದು
ಎಲ್ಲ ಎರಡು ವಿಷಯಗಳ ಮಧ್ಯೆ ಒಂದು ಗೆರೆ
ಗೆರೆ ದಾಟುವವರು, ದಾಟಿದವರು
ವ್ಯತ್ಯಾಸ ಹೇಳುತ್ತಲೇ ಇರುತ್ತಾರೆ
ಅವರಿರುವುದೇ ಹೇಳಲಿಕ್ಕೆ.
ಮೊಗ್ಗು ಚಿಗುರಿ ಹೂವಾಗಿ ಅರಳಿ
ಗಂಧ ಬೀರುವ ಹೊತ್ತು
ಗೆರೆ ಕಾಣದ ಮತ್ತು
ಹೇಳಿದ್ದು ಹೇಳದ್ದು ಎಲ್ಲವೂ ಗೊತ್ತು
ಎಂಬ ಗತ್ತು
ಇವೆಲ್ಲ ಮುಗಿದು
ಕವಲು ದಾರಿಯ ಹಾದಿ ಸವೆದು
ಬಯಲಿಗೆ ಬಂದಾಯಿತು
ಬಹುದೂರ ನಡೆದ ಮೇಲೀಗ
ಹಿಂದೆ ತಿರುಗಿ ನೋಡಿದರೆ
ನೂರಾರು ಪಥಿಕರು.
ನಿಲ್ದಾಣದ ಹಂಗಿಲ್ಲದೆ
ಹೊರಟ ಪಯಣ
ಗುರಿತಪ್ಪುವುದಿಲ್ಲ.
ಇಂತಲ್ಲೇ ಹೋಗಬೇಕೆಂದಿಲ್ಲದವರಿಗೆ
ಎಲ್ಲಿ ಹೋದರೂ ಆದೀತೆಂದ ಲೂಯಿ ಕೆರೊಲ್
ಮಾತು ಎಷ್ಟು ಹದವಾದ ನಿಜ!!
ತಲೆಕೆಳಗಾದರೂ ಸುಳ್ಳಾಗದ ನಿಜ.
ಪುಟ್ಟ ಜನರಿಗೆ ದೊಡ್ಡಕೆ ಕಂಡ ಅಲಿಸ್ ನಿಜ.

ಗುರಿ ಮತ್ತು ದಾರಿ
ಅಜ್ಜ ಹೇಳಿದ್ದು ಸರಿ.
ಇರುವ, ಇಲ್ಲದಿರುವ, ಮಾಡಬೇಕಿರುವ... ದಾರಿ
"ಮುಖ್ಯ."
ಪಯಣವೇ ಗುರಿ.

Wednesday, June 22, 2016

ನಿಲ್ ದಾಣ - ನಲ್ ದಾಣ

ಕರೆದುಬಿಡು ಬಂದುಬಿಡುವೆನು ಎಲ್ಲಿಂದಲೆ ಆಗಲಿ
ಬೆಟ್ಟ ಹತ್ತಿ ತೊರೆಯ ದಾಟಿ ಯಾರೆ ನನ್ನ ತಡೆಯಲಿ.. (-ಕೆ.ಎಸ್.ನ)

ಎಂದು ಹೊರಟವನು ಹಳೆಯ ಬಸ್ ನಿಲ್ದಾಣದಲ್ಲಿ ಸುಸ್ತಾಗಿ ಕೂತುಬಿಟ್ಟೆ
ಹೊಸ ಬಸ್ ಬೆಳಿಗ್ಗೆ ಬರಬೇಕಿತ್ತು.
ಮೊನ್ನೆ ಮೊನ್ನೆಯಷ್ಟೇ ನಗರಪಾಲಿಕೆ ಹಾಕಿಸಿದ ಟಾರ್ ರಸ್ತೆ,
ರಾತ್ರಿಯಿಡೀ ಸುರಿದ ಮಳೆಗೆ ನೆಂದು ಮೆತ್ತಗಾದ ಹಾಗೆ ಅನ್ನಿಸುವಾಗ,
ಸೋರುವ ನಿಲ್ದಾಣದ ಮೂಲೆಯ ಮುರುಕುಬೆಂಚಿನ ಬೆಚ್ಚನೆ ಮೂಲೆಯಲ್ಲಿ
ಹಳತು, ಹೊಸತು, ಇನ್ನೂ ಅರಳಬಹುದಾದ ಮೊಗ್ಗಿನ ಕನಸು,
ಎಲ್ಲ ಬೆರೆತ ಚಡಪಡಿಕೆಗಳ ಅಗ್ಗಿಷ್ಟಿಕೆಗೆ ಹೆದರಿ ಚಳಿ ದೂರದಲಿತ್ತು.
ಹೊಟ್ಟೆಗಿರದ, ನಿದ್ದೆ ಬರದ, ಎಚ್ಚರವಿರಲು ರಚ್ಚೆ ಹಿಡಿಯುವ ಮನದ ತುಂಬ
ಹಸಿರೆಲೆಗಳ ನಡುವೆ ಬಿಳಿಬಿಳಿಯಾಗಿ ಅರಳಬಹುದಾದ ಹೂಕನಸು.

ವಿಷಯ ಏನಂದ್ರೆ
ಅವಳು ಕರೆದಿರಲಿಲ್ಲ.
ಕರೆಯದೆ ಇರುವುದೂ ಒಂದು ಬಗೆಯ ಕರೆ
ಅಂತ ಗೊತ್ತಾದವನೇ ನಿಜವಾದ ನಲ್ಲ.
ಬೆಳಕು ಹರಿಯುವ ಮುಂಚೆ
ಮಿಂಚು ಹರಿದ ಹಾಗೆ ಬೆಳಿಗ್ಗೆ ಮುಂಚಿನ ಬಸ್ ಹತ್ತಲು
ಅವಳು ಬಂದೇ ಬಂದಳು
ಇವನು ಈಗಷ್ಟೇ ಮನೆಯಿಂದ ಬಂದ ಹಾಗೆ
ನಿಲ್ದಾಣದಿಂದ ಹೊರಬಂದ ಗತ್ತಿಗೆ
ಶೇಕ್ಸ್ ಪಿಯರ್ ಹೊಸನಾಟಕ ಸೃಷ್ಟಿಸುವ ಆಲೋಚನೆಯಲ್ಲಿದ್ದಾನೆ.
ಅವಳು - ಮರುಮಾತಿಲ್ಲದ ಹಾಗೆ
ಮಳೆನಿಂತ ಬೆಳಗಲ್ಲಿ ತೋಯ್ದು ನಿಂತ ಮಲ್ಲಿಗೆ
ಕಣ್ಣು ಕಣ್ಣು ಕೂಡಿದ ಘಮ ಬರುತಿರುವುದು ಇಲ್ಲಿಗೆ

ಹೀಗೆಲ್ಲ ಆಗಿ
ಕರೆಯದೇ ಬಂದು ಜರುಗಿದ್ದೇ ಹಿಂಗಿದ್ದರೆ
ಕರೆದು ಬಂದರೆ ಏನಾಗಿರುತ್ತಿತ್ತು ಓ ದೇವರೇ
ಬಹುಶಃ ಸ್ವಚ್ಛ ಆಗಸದಲ್ಲಿ
ಮೋಡಗಳೆಲ್ಲ ಮತ್ತೆ ಕಲೆತು
ಮಳೆ ಬರುತ್ತಲೇ ಇರುತ್ತಿತ್ತು.

ಓ ಇವನೆ. ಇಲ್ಲೆ ಪಕ್ಕದಲ್ಲೆ ಇರುವ ನನ್ನೊಲವೆ,
ನೀನು ಎಷ್ಟೆ ದೂರವಿದ್ದರೂ
ಇದನ್ನೆಲ್ಲ ಮರೆಯದಿರಲಿ,
ಇದ್ದಕ್ಕಿದ್ದಂತೆ ತಿರುವು ತಗೊಳ್ಳುವಾಗ
ಇದೆಲ್ಲ ನೆನಪಾಗಿ
ಮಳೆ ಬರದೆ ಇದ್ದರೂ ರೈನ್ ಕೋಟ್ ಹಾಕಿಕೊಂಡು ಹೋಗು ಎಂದು ಅಂದುಕೊಳ್ಳುತ್ತಿರುವೆ.
ಅಕಸ್ಮಾತ್ ಆ ನಿಲ್ದಾಣ ಸೋರುತ್ತಿದ್ದರೆ?
ಈಗ ವಯಸ್ಸಾದ ಮೇಲೆ ಶೀತ ತಡೆಯುವುದಿಲ್ಲ.


{{{{ಮೊದಲೆರಡು ಸಾಲು (ಕೆ.ಎಸ್.ನರಸಿಂಹ ಸ್ವಾಮಿಯವರ ಕವಿತೆಯ ಸಾಲು)}}}

Saturday, June 18, 2016

ಯಾವುದು ಬೇಕೋ ಅದು ಬೇಡ.

ಪುಡಿಯಾದರೆ, ಮುಂದೆ ದಾರಿ,
ಇಲ್ಲದೆ ಇದ್ದರೆ ದರಿ -
ಎಂದ ಹಾಗಿತ್ತು ಅವರು;
ಅಥವಾ ನನಗೆ ಹಾಗೆ ಕೇಳಿದ್ದಿರಬಹುದು;
ಯಾವುದನ್ನೂ ಹಚ್ಚಿಕೊಳ್ಳದ ನನಗೆ
ಈ ಮಾತ್ಯಾಕೋ ಪಥ್ಯವಾಗಿ
ಪುಡಿಯಾಗುವ ಹಂಬಲ.
ಆದರದು ಬರಿಯ ಹಂಬಲ,
ಚಂಚಲ,
ಎಚ್ಚರದ ನಡೆ ಎಡಬಲ.

ಪೆಟ್ಟು ಬಿದ್ದಾಗಲೆಲ್ಲ
ಮುಲುಗುಟ್ಟುವ ಕಲ್ಲು,
ಪುಟಿದೇಳುವ ಸಿಟ್ಟು,
ಕುಟ್ಟಬಹುದೆ ಹೀಗೆ?!
ಹೇಳಬಹುದೆ ಹಾಗೆ?!
ಅಡ್ರಿನಲೈನ್ ಸ್ರಾವ
ಕಡಿಮೆಯಾಗುತ್ತಾ ಬಂದ ಹಾಗೆ
ಇನ್ನೊಂಚೂರು ಗಟ್ಟಿ ಕುಟ್ಟಲೇನಾಗಿತ್ತು ಧಾಡಿ
ಕಬ್ಬಿಣ ಕಾದಾಗಲೆ ಬಡಿ
ಪುಡಿಗಟ್ಟಿಸಲೆಂದೆ ಕಟ್ಟಿದ ಜೋಡಿ
ಇರಬಹುದೆ ಇದೇ ಗುರುವಿನ ಮೋಡಿ
ಅಂತೆಲ್ಲ ಅನ್ನಿಸುತ್ತದೆ..

ಆದರೇನು..
ಬಿಟ್ಟ ಬಿರುಕು ಕೂಡಿ
ಕಲ್ಲು ಮೊದಲಿಗಿಂತ ಗಟ್ಟಿ
ಮತ್ತೊಂದು ಪೆಟ್ಟಿಗೆ
ಇನ್ನಷ್ಟು ತೀಕ್ಷ್ಣ ಪ್ರತಿಕ್ರಿಯೆ
ಎಷ್ಟೇ ಒಡ್ಡಿ ಕೊಳ್ಳ ಬಯಸಿಯೂ
ಬಯಲಿಗೆ ಬಿದ್ದ ಕೂಡಲೆ
ಕಾಪಿಟ್ಟುಕೊಳ್ಳಲು ಬಯಸುವ
ಶತಶತಮಾನದ ಕ್ರಿಯೆ ಮತ್ತು ಕರ್ಮ-
ಒರಟಾಗಿದೆಯೆಂದು ಭಾವಿಸಿರುವ ಸೂಕ್ಷ್ಮ ಚರ್ಮ.

Wednesday, June 15, 2016

ಸ್ಥಾವರವೇ ಜಂಗಮವಾದ ಹಾಗೆ...

[[ಈಗೆರಡು ವಾರಗಳ ಹಿಂದೆ ವಿಶ್ವವಾಣಿಯ ವಿರಾಮ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ ]]

ಕೂಊಊಊಊ ಚುಕ್ ಚುಕ್..ಕೂಊಊಊಊಊಊಊಊಊ ಚುಕ್ ಚುಕ್...ಬರುತಿದೆ ರೈಲು. ಚುಕುಬುಕು ಚುಕುಬುಕು
ಅಕ್ಕನ ಸೊಂಟಕ್ಕೆ ಕಟ್ಟಿದ ಅಮ್ಮನ ವೇಲು ಹಿಡಿದು ಅವಳ ಹಿಂದೆ ವೃತ್ತದಲ್ಲಿ ಸುತ್ತುವ ಪುಟಾಣಿ ಪುಟ್ಟ. ಅಲ್ಲಲ್ಲಿ ಕುಳಿತಿರುವ ಪುಟ್ಟ ಗೆಳೆಯ ಗೆಳತಿಯರು ಅವರವರ ನಿಲ್ದಾಣದಲ್ಲಿ ಹತ್ತುತ್ತಿರುವರು. ಮಧ್ ಮಧ್ಯೆ ಸಿಳ್ಳೆ... ಒಂದೆರಡು ಸುತ್ತು ಸುತ್ತುವಷ್ಟರಲ್ಲಿ ಒಂದಿಬ್ಬರು ಮರಿ ಪ್ರಯಾಣಿಕರಿಗೆ ತಲೆ ಸುತ್ತಿ ನಿಲ್ದಾಣ ಬರುವ ಮುಂಚೆಯೆ ಇಳಿದು ಕುರ್ಚಿಯ ಮೇಲೆ ಸುಮ್ಮನೆ ಕೂತು ಮುಂದಕ್ಕೆ ಮುಂದಕ್ಕೆ ಸುತ್ತುತ್ತಿರುವ ಬಂಡಿ ನೋಡುತ್ತಿರುವರು. ತಮ್ಮನು ರೈಲ್ ಎಕ್ಸ್ ಪರ್ಟ್ ಆಗಿದ್ದರಿಂದ ಇದೊಂದು ಆಟಕ್ಕೆ ಅವನೇ ಇಂಜಿನ್... ಅಕ್ಕನದ್ದು ಬರೀ ಕೂಊಊಊಊಊಊಊ ಸಿಳ್ಳೆ ಹಾಕುವ ಕೆಲಸ. ಇದನ್ನೆಲ್ಲ ಅಡಿಗೆ ಮನೆಯಿಂದ ನೋಡುತ್ತಿರುವ ಅಮ್ಮನಿಗೆ ನೋಟದ ಸವಾರಿಯ ಮಜ. ಮಕ್ಕಳ ಸಿಳ್ಳೆಗೆ ಕುಕ್ಕರ್ ಸಾತ್ ಕೊಟ್ಟು ಮುಗಿಸಿದ ಮೇಲೆ ಈಗೊಂದಿಷ್ಟು ಹೊತ್ತು ಒಳಪಯಣದ ಹೊತ್ತು.

ಹೊರಗೆ ಚುಕ್ಕು ಬುಕ್ಕು ಚುಕ್ಕು ಬುಕ್ಕು ಚುಕ್ಕು ಬುಕ್ಕು.. ಪುಟಾಣಿ ರೈಲು,
ಒಳಗೆ ಶ್...... ಮಹಾಪಯಣ:

ಪಕ್ಕಕ್ಕೇ ಹರಿದು ಜತೆಗೆ ಕೂಡದ, ನೋಡಿದಲ್ಲಿ ಶುರುವಾಗಿ.. ನೋಡಲಾಗದೆಡೆಯವರೆಗೂ ಹರಿದಿರುವ ರೇಲ್ವೆ ಹಳಿಗಳು ಅನಂತವಾಗಿ ಹಬ್ಬಿ ಮಲಗಿವೆ. ಕಂಡ ನೋಟಗಳು, ನಿಲ್ಲದ ನಿಲ್ದಾಣಗಳು, ಬದಲಿಸಿದ ದಾರಿಗಳು, ಕಾಯ್ದು ನಿಂತ ಕೈಮರ, ಕಾದ ಎಂಜಿನ್ನಿಗೆ ನೀರು ತುಂಬುವ ನಿಲ್ದಾಣದಾಚೆಯ ಟ್ಯಾಂಕು, ಆನೆಸೊಂಡಿಲ ಪೈಪು.. ದಿನವೂ ನೋಡಿಯೂ ಅಷ್ಟೇನೂ ಪರಿಚಯವಿಲ್ಲದ ಸ್ಟೇಷನ್ ಮಾಸ್ಟರುಗಳು..ನಿಲ್ದಾಣದ ಕೊನೆಯ ಕಲ್ಲುಚೌಕದ ಮೇಲೆ ಬಾವುಟ ಹಾರಿಸುತ್ತ ನಗೆಸೂಸುವವರು, ಎಲ್ಲೋ ಬೆಟ್ಟತಿರುವಿನ ಹಾದಿಯಲ್ಲಿ ಅಚಾನಕ್ಕಾಗಿ ಕೆಂಪುಬಾವಟಗಳ ಅಡ್ಡವಿರಿಸಿ ಹಳಿ ಜೋಡಿಸುತ್ತಿರುವ ಲೈನುಮನ್ನುಗಳು, ಹತ್ತಿರಹತ್ತಿರವಾಗುತ್ತಿದ್ದ ಹಾಗೆ ಓಡಿಬಂದು ಪಥ ಬದಲಿಸುತ್ತಿರುವ ಜಂಕ್ಷನ್ ಸಿಬ್ಬಂದಿ, ಹರಿಯುತ್ತಿರುವ ಪುಟ್ಟ ಹಳ್ಳದಾಚೆಯ ಗದ್ದೆ ಬದುವಿನ ಮೇಲೆ ಕಾದು ಕೂತು ಕೈಯಾಡಿಸುತ್ತಿರುವ ಯಾವಯಾವದೋ ಊರಿನ ಮಕ್ಕಳು, ಟ್ರ್ಯಾಕಿನ ಬದಿಯಲ್ಲಿರುವ ಮೈದಾನದಲ್ಲಿ ಕ್ಷಣ ಮಾತ್ರಕೆ ಆಟ ಸ್ತಬ್ಧವಾಗಿ ಓಡುತ್ತಿರುವ ಬಂಡಿನ್ನೇರಿದ ನೋಟಗಳು, ಊರದಾರಿಯ ಕತ್ತರಿಸಿ ಓಡುವಲ್ಲಿ ಗೇಟು ತೆರೆಯುವುದನ್ನೇ ಕಾಯುತ್ತ ನಿಂತ ಪಥಿಕರು, ಸವಾರರು, ದೂರ ದಾರಿಯ ಸುಸ್ತಿನ ಕೈಯನ್ನು ನೀವಿಕೊಳ್ಳುತ್ತ ಕುಂತ ಲಾರಿಚಾಲಕರು, ತೆರೆದ ಕೂಡಲೆ ನುಗ್ಗಲು ಹಾದಿಹುಡುಕುತ್ತಿರುವ ಧಾವಂತ ಲೋಕದ ಮಂದಿ, ಬೆಳಗಾತ ಹಳಿಯ ಬಳಿ ಪ್ರಾಕೃತಿಕ ಕರೆ ಮುಗಿಸಿ ಒರೆಸಿಕೊಂಡು ಹೋಗುತ್ತಿರುವ ಜನಸಾಮಾನ್ಯರು, ಗೇಟಿರದ ಲೆವೆಲ್ ಕ್ರಾಸಿಂಗಿನ ಬಳಿ ದೂರಕ್ಕೆ ಕಣ್ಣು ನೆಟ್ಟು ಅಂದಾಜಿನ ಮೇಲೆ ದಾಟುತ್ತಿರುವ ಪಯಣಿಗರು, ಯಾವಾಗಲೋ ಒಂದೊಂದು ಸಂಜೆ ಅಥವಾ ಬೆಳಿಗ್ಗೆ ಈ ಲೋಕದ ಪಯಣ ಸಾಕೆಂದು ಹಳಿಗೆ ಬೆನ್ನುಕೊಟ್ಟು ಚೂರಾದವರು, ಉದೂದ್ದಕ್ಕೆ ಹರಿದ ಕಬ್ಬಿಣದ ಹಳಿಗೆ ಜೊತೆಯಾಗಿಯೋ ಸಡ್ದು ಹೊಡೆದೋ ತೊನೆಯುತ್ತಿರುವ ಹಸಿರು ತೆನೆ ಗದ್ದೆಗಳು, ಗುಡ್ಡದೆದೆ ಬಗೆದು ಬಾಯ್ ತೆರೆದು ಕುಳಿತ ಸುರಂಗಗಳು, ಕೆಳಗೆ ನೋಡಿದರೆ ತಲೆತಿರುಗುವ ಹಾಗಿನ ಉದೂದ್ದ ಸೇತುವೆಗಳ ಕೆಳಗೆ ಎಲ್ಲ ರಭಸಕ್ಕೂ ಸವಾಲೊಡ್ದುವ ನದೀರಾಣಿಯ ಹರಿವು, ಬ್ರಿಟಿಷ ಕಾಲದಿಂದಲೂ ಹಳಿ ಹೊತ್ತು ನಿಂದ ಹಳೆ ಹಳೆ ಸೇತುವೆಗೆ ಬಿಳಿ ಸುಣ್ಣ ಹೊಡೆಯುತ್ತಿರುವವರು...ಕಿಟಕಿಬದಿ ಸೀಟಲ್ಲಿ ಹಟ ಮಾಡಿ ಕುಳಿತವಳ ಕುಳಿರು ಕೆದರಿ, ಎದುರುಗಾಳಿಗೆ ಕಣ್ಣು ಕೆಂಪು. ಪಕ್ಕದಲಿ ಇರುವವರ ಪರಿವೆಯಿಲ್ಲ.. ಕಣ್ಣು ಮನಸ್ಸು ಎರಡೂ ಪಯಣವೇ ಆದ ಹಾಗಿದೆಯಲ್ಲ. ಕೂಊಊಊಊಊಊಊಊಊಊ ಚುಕ್. ಚುಕ್. ಇದೇನೋ ಯಾರೋ ಚೈನು ಜಗ್ಗಿದ ಹಾಗೆ... ಅಮ್ಮಾ ಸ್ಟೇಶನ್ನಿಗೆ ಬಂದಿದೀವಿ ತಿಂಡಿ ಕೊಡಮ್ಮಾ...ಚೂಡಿಯ ಜಗ್ಗುತ್ತಿರುವ ಮಕ್ಕಳು. ಪಯಣಕೊಂದು ತಾತ್ಕಾಲಿಕ ನಿಲುಗಡೆ ಅಥವಾ ಪಯಣವೋ ನಿಲುಗಡೆಯೋ ತಿಳಿಯದ ಹಾಗೆ..ಡಬ್ಬಿಯೊಳಗಿಂದ ಚಕ್ಕುಲಿ ತೆಗೆಯುವ ಬಂಗಾರವಿಲ್ಲದ ಬೆರಳು, ಹಾಲು ಹದಮಾಡಿ ಲೋಟಕೆ ಹನಿಸುವ ತಾಯಿ ಕರುಳು.

ಈ ರೈಲು ಮತ್ತು ಪಯಣ ಧ್ವನಿಸುವ ಅನಂತ ಸಾಧ್ಯತೆ, ಸಾಮ್ಯತೆ ಮತ್ತು ಉಪಮೆಗಳನ್ನ ನೋಡುತ್ತ ಕೂತರೆ ಎಂತಹ ಯಾಂತ್ರಿಕ ಅವಿಷ್ಕಾರವೊಂದು ಮನುಷ್ಯ ಸಮುದಾಯದ ಇರವನ್ನು ಪ್ರಭಾವಿಸಿದ ಪರಿ...ಗಡಿ,ಮಿತಿಗಳನ್ನು ಮೀರಿ ಪ್ರಭಾವಿಸಿದ ಪರಿ ಅಚ್ಚರಿ ಹುಟ್ಟಿಸುತ್ತದೆ. ಭೌಗೋಳಿಕ ಗಡಿ ವಿಸ್ತಾರದಲ್ಲೂ.. ಮಾನಸಿಕ ಪಯಣದ ಹಾದಿಯಲ್ಲೂ.. ಈ ರೈಲು ನೀರೊಳಗಿದ್ದೂ ನೀರುಮುಳುಗದ ಕಮಲದ ಒಲು..ನಿಲ್ದಾಣಗಳಿಗಾಗೆ ಓಡುತ್ತಲೇ ಎಲ್ಲಿಯೂ ನಿಂತುಬಿಡದ ಸ್ಥಾವರವೇ ಜಂಗಮವಾದ ಒಂದು ಅದ್ಭುತ ರೂಪಕವೆನಿಸುವುದಿಲ್ಲವೇ ನಿಮಗೆ.
ದಕ್ಷಿಣ ರೇಲ್ವೆಯ ತುತ್ತತುದಿಯ ಪುಟ್ಟ ಊರಿನ ಕೊನೆ ನಿಲ್ದಾಣದ ಅಂಗಳದಲ್ಲಿ ಕಳಿಸಿಕೊಟ್ಟ ರೈಲು ಭಾರತದುದ್ದಕ್ಕೂ ಕಾವೇರಿಯ ಮೇಲಾಸಿ, ಗೋದಾವರಿಯವರೆಗೂ.. ಅಕೋ ಅದನೂ ದಾಟಿ ಬ್ರಹ್ಮಪುತ್ರೆಯ ಮೇಲೂ..ಓಡಾಡಿ ಬರುತ್ತದೆ. ಎಡಕುಮೇರಿಯ ಸ್ವರ್ಗಸದೃಶ ಕಣಿವೆಯಲ್ಲಿ ಓಲಾಡಿ ಸರಿಯವ ರೈಲು ಬಯಲು ನಾಡಿನ ಭತ್ತಗದ್ದೆಗಳ ನಡುವೆ ನಾಗಾಲೋಟ, ಕಡಲ ತೀರದ ಗುಂಟ ಭೋರ್ಗರೆದು ಸಾಗುತ್ತ, ಕಲ್ಲು ಬೆಟ್ಟಗಳ ಸುರಂಗದಾರಿಯಲ್ಲಿ ಭಾರೀ ದಂಶಕದ ಹಾಗೆ ತೊನೆತೊನೆದು ಹೋಗುವುದು. ಭರತಖಂಡ ತೀರ್ಥಯಾತ್ರೆಯ ಸಾರ್ಥಕ ವಾಹನವಾದ ರೈಲೇ, ತುರಂತ ವೇಗದಲ್ಲಿ ದೂರದೂರಿನ ಬದುಕನ್ನ ಇನ್ನೊಂದೂರಿನ ಅನ್ನದ ತಟ್ಟೆಗೆ ಸೇರಿಸಿ ನೇಯುತಿರುವುದು. ಮಹಾರಾಜರ ಪಯಣಕ್ಕೆ ಸುಖವಾಸಿನಿ ಸುವರ್ಣವಾಹಿನಿ ರೈಲೇ, ದಿನದಿನದ ಪ್ಯಾಸೆಂಜರು ಗೂಡ್ಸ್ ಗಾಡಿಯೂ ಹೌದು. ಹೆಸರು ಮರೆತು ಮಲಗಿದ ಊರುಗಳನೆಲ್ಲ ರಾಷ್ಟ್ರವ್ಯಾಪೀ ಮ್ಯಾಪಿನಲ್ಲಿ ಒಂದು ಚುಕ್ಕಿಯಾಗಿಸಿದ ರೈಲುದಾರಿ...ಕೆಲವೊಮ್ಮೆ ಬೆಳಗ್ಗೆ ಮುಂಚೆ ಇನ್ನೂ ಪೂರ್ತಿ ಕಣ್ಣು ಬಿಟ್ಟಿರದೆ ಅಪ್ಪ=ಅಮ್ಮನ ಅಚ್ಚೆಯಲಿ ಯುನಿಫಾರ್ಮ್ ಸಿಕ್ಕಿಸಿಕೊಂಡು ಶಾಲೆಗೆ ಹೊರಟ ಮಕ್ಕಳವಾಹನದ ಮೃತ್ಯುದೂತನಾಗಿದ್ದೂ ಉಂಟು. ಯಾರೋ ವಿಧ್ವಂಸಕರ ರೋಷದ ಬೆಂಕಿಗೆ ಸುಟ್ಟು ಕರಕಲಾಗಿದ್ದೂ ಉಂಟು.ಗಡಿ ದಾಟಿ ಹೊರಟ ಯಾತ್ರೆಯ ಅನಿಶ್ಚಿತ ಪಯಣದ ಹರಿಕಾರ ರೈಲು. ಚರಿತ್ರೆಯ ಪುಟಗಳ ರಕ್ತಸಿಕ್ತ ದಾರಿಯ ಪಯಣದ ಗಾಯವಿನ್ನೂ ಹಸಿಯಾಗಿಯೇ ಉಳಿದರೂ ಇದು ಸುರಗಂಗೆಯ ದಡದ ಕಾಶೀಯಾತ್ರೆಯ ವಾರ್ಧಕ್ಯ ಸಾರ್ಥಕ್ಯದ ರೈಲು. ಹೊಸ ದಾರಿಗಳ ತೆರೆದು ಸಾಗುವ ಬದುಕಿನ ಮಹಾದ್ವಾರದೊಳಗೆ ದಿನದಿನವೂ ತೂರುವ ರೈಲು.

ಹೀಗೆಲ್ಲ ನಿಜದಲ್ಲಿ, ಬರಿದೆ ಅಂದುಕೊಳ್ಳುವುದರಲ್ಲಿ, ನಿಜವಲ್ಲದಲ್ಲಿ, ತೋರುಗಾಣಿಕೆಯಲ್ಲಿ, ದಪ್ತರಗಳಲ್ಲಿ, ಸಿಗ್ನಲುಗಳಲ್ಲಿ, ಸಿಗ್ನಲ್ ಬೀಳುವುದಕ್ಕೆ ಕಾಯುವುದರಲ್ಲಿ.. ಪಯಣ ಮತ್ತು ಬಂಡಿಯ ತೆಳು ಗೆರೆ ಅಳಿಸಿದಂತೆ ಅನಿಸುವಲ್ಲಿ...ಓಡುತ್ತಿರುವ, ನಿಂತಿರುವ ಮತ್ತೆ ಹೊರಡಲು ಕಾಯುತ್ತಿರುವ ಪಯಣ ಸನ್ನದ್ದ ರೈಲುಗಳು ಕವಿಗಳ ಸಾಹಿತಿಗಳ, ಸಿನಿಮಾಗಳ ಮೂಸೆಯಲ್ಲಿ ಪರಿಪರಿಯಾಗಿ ಬಂದಿದೆ. ಈ ನಿಜಲೋಕದ ಓಟದ ಬಂಡಿ ಕಲ್ಪನೆಯ ಪಯಣಕ್ಕೂ ಸೈ. ಓದಿನ ಪಯಣಕ್ಕೂ ರೈಲಿಗೂ ಎಡೆಬಿಡದ ನಂಟು. ಅದಕ್ಕೇ ಮರುದನಿಸುತ್ತದೆ ಚುಕ್ಕು ಬುಕ್ಕು. ಚುಕ್ಕು ಬುಕ್ಕು.

ಹಲವು ಜನಪ್ರಿಯ ಸಿನಿಮಾಗಳ ಪ್ರೇಮ ರೈಲಿಗೆ ಕೃತಜ್ಞವಾಗಿರುತ್ತದೆ. ಹುಡುಗಿಯನ್ನ ಪಟಾಯಿಸುವುದಕ್ಕೂ, ಹಾರಿಸಿಕೊಂಡು ಹೋಗುವುದಕ್ಕೂ, ಕೈ ಬೀಸಿ ಕಣ್ತುಂಬಿ ಹೊರಡುವುದಕ್ಕೂ.. ಕಾಯುತ್ತ ನಿಲ್ಲುವುದಕ್ಕೂ.. ಅಚಾನಕ್ ಜಂಕ್ಷನ್ ಭೇಟಿಗಳಿಗೂ ರೈಲು ಮತ್ತು ನಿಲ್ದಾಣಗಳೇ ಆಸರೆ. ಆಂಗ್ರಿ ಯಂಗ್ ಸಿನಿಮಾಗಳೆಲ್ಲ ಒಂದು ಕಾಲದಲ್ಲಿ ಶುರುವಾಗುತ್ತಿದ್ದೇ ರೈಲ್ವೇ ಸ್ಟೇಷನ್ ಫೈಟಿಂಗಿಂದ ಅಥವಾ ಮುಗಿಯುತ್ತಿದ್ದಿದ್ದದ್ದು ಓಡುವ ರೈಲಿನ ಮೇಲಿನ ಫೈಟಿಂಗುಗಳಿಂದ. ರೈಲು ಬಿಡದೆ ಸಿನಿಮಾ ಓಡುವುದಾದರೂ ಹೇಗೆ ಅಲ್ಲವೆ?

ತಾಯಿ-ಮಗಳ ಮಾತುಕತೆ ಬೀಳ್ಕೊಡುಗೆಯಲ್ಲಿ ಜನಪದವನ್ನೇ ಕಟ್ಟಿಕೊಟ್ಟ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಗಳಲ್ಲಿ ಮರುಕಳಿಸುವ ರೂಪಕವಾದ ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ ಮೈಸೂರ ಸೇರುವುದ ಎಲ್ಲರೂ ಬಲ್ಲರು. ಪಕ್ಕದಲ್ಲಿ ಕೂತು ಹಿಂದಿನ ನಿಲ್ದಾಣದಲ್ಲಿಳಿದವರ ಹೆಸರ ಕೇಳಲೆ ಇರುವ ನಮ್ಮ ಸ್ವಕೇಂದ್ರಿತ ಪಯಣದ ಹಲಚಿತ್ರಗಳು ಅವರ ಮಲ್ಲಿಗೆ ಮಾಲೆಯಲ್ಲಿವೆ. 
ನವೋದಯದ ಭೂಮಿಯಗೆದು ನವ್ಯದ ಅನಂತ ಆಕಾಶವನ್ನು ಅಕ್ಷರಕ್ಕಿಳಿಸಿದ ಅಡಿಗರ ಹಿಮಗಿರಿಯ ಕಂದರದ ಹಿಮ್ಮುಖ ರೈಲು ಆಚೆ ದಡದ ನಿಲ್ದಾಣದಲ್ಲಿದೆ. ಭಗ್ನ ಸೇತುವೆಯ ದಾಟಿ ಹೋಗುವವರು ಯಾರು? ಕಂದರಕ್ಕಿಳಿವ ಛಾತಿ ಉಳ್ಳವರೇ ಆಗಿರಬೇಕು. ಸದಾ ಮುಂದೋಡುವ ಬದುಕಿನಲ್ಲಿರುವವರು ಕ್ಷಣ ನಿಂತು ಹಿಮ್ಮುಖದ ಈ ಬೋಗಿ ಹತ್ತಬಹುದೆ? ಎಲ್ಲರೂ ಹೊಸ ಮಂದಿ ಹೊಸ ತೊಡುಪು ಹೊಸ ಹೊಸ ತೀರ ನಿಲ್ದಾಣಗಳ ಹೊಸದಿಕ್ಕು. ಮುರಿದ ಸೇತುವೆಯಾಚೆ ಇನ್ನೇನು ಹೊರಡಲು ಕಾದಿರಬಹುದಾದ ಹಿಮ್ಮುಖ ದಿಕ್ಕಿನ ಈ ಪಯಣ ಯಾರಿಗೆ ಬೇಕು?
ದಿಕ್ಕು ಕೆಟ್ಟ ಅರಿವು ಬರುವವರೆಗ ಈ ಸೇತುವೆ ಕಟ್ಟುವವರಿಲ್ಲ. ಟಿಕೆಟ್ಟಿಲ್ಲದ ಈ ದಾರಿಗೆ ಪಯಣಿಗರೂ ಹೆಚ್ಚಿಗಿಲ್ಲ. ವಿಮಾನದ ರೆಕ್ಕೆ ಹತ್ತಿ ಕೂತವರು, ದಿಕ್ಕುಗಳನ್ನೆ ಕಲಸಿದವರು, ನಡೆದ ದಾರಿಯ ಹಿಂತಿರುಗಿ ನೋಡದವರು, ಹತ್ತುವುದೆ ಗುರಿಯಾದವರು, ಎಲ್ಲರಿಗೂ ಈಗ ಆನ್ ಲೈನ್ ಬುಕಿಂಗ್ ತೆರೆದಿದೆ. ಕೂ ಚುಕ್ ಚುಕ್ ಎಂದು ಉದ್ಘರಿಸುವ ನಿಲ್ದಾಣದ ದಂಡೆ ಸದಾ ಗಜಿಬಿಜಿ...ಮುರಿದ ಸೇತುವೆಯಾಚೆಯ ಈ ಹಳೆಯ ಹಿಮ್ಮುಖಬಂಡಿಯ ಎಂಜಿನ್ ಸಿದ್ಧವಿದೆ. ಕಲ್ಲಿದ್ದಲ ಬೆಂಕಿ ಹೂಗಳು ಕಣ್ಣು ಕೋರೈಸುತಿವೆ. ಒಂದೆರಡೇ ಬೋಗಿ. ಅದೂ ಖಾಲಿ... ಎಲ್ಲ ಸಿಗ್ನಲ್ಲುಗಳೂ ಹಸಿರಾಗಿಯೂ ಬಂಡಿ ಕಾಯುತ್ತಲೆ ಇದೆ..ಹತ್ತುವವರೆ ಇಲ್ಲ. ಹಿಮಗಿರಿಯ ಕಂದರ ದಾಟುವವರಿಲ್ಲ.

ಅದೋ ನೋಡಿ ನಿಶ್ಚಿಂದಿಪುರದ ಲೆವೆಲ್ ಕ್ರಾಸಿಂಗಿನ ಬದುವಿನ ಮೇಲೆ ರೈಲಿಗೆ ಕೈಬೀಸಲು ಕಾಯುತ್ತಿರುವ ಪುಟ್ಟ ಬಾಲೆ ದುರ್ಗಾ ಮತ್ತವಳಜೊತೆಗೆ ತಮ್ಮ ಅಪೂ... "ನಿಶ್ಚಿಂದಿ" ಪುರದ ಸಾವಧಾನದಿಂದ ಹೊರಟ ಈ ಪಯಣದ ದಿಕ್ಕು ವ್ಯವಧಾನವೇ ಇರದ ಗೊಂದಲಪುರವೇ ಇರಬಹುದು. ಅದಕ್ಕೇ ಇರಬಹುದು ವಿಭೂತಿ ಭೂಷಣ ಚಟ್ಟೋಪಾಧ್ಯಾಯರ ಈ ಕಥೆಯ ಹೆಸರು ಮಹಾಯಾತ್ರಿಕ. ಯಾತ್ರಿಕನಿಲ್ಲದೆ ಪಯಣವೆಲ್ಲಿಯದು...ಕೂಊಊಊಊಊಊಊಊಊ ಚುಕ್ ಚುಕ್.. ಚುಕ್... ಚುಕ್... ಚು..ಕ್..ಚು..ಕ್..ಕ್..ಕ್.....

Monday, June 13, 2016

ಮರುಕನಸು

ನಾನು:
ಹೀಗ್ ಹೀಗೆಲ್ಲಾ ಆಯ್ತು.
ಮನಸ್ಸು ಬಿಮ್ಮನೆ.
ಬಿಗಿದು.. ಹನಿಯೊಡೆಯದ ಮುಗಿಲು

ಅವಳು:
ಹೌದಾ. ಹೋಗಲಿ ಬಿಡು
ಇದ್ಬಿಡು ಸುಮ್ಮನೆ,
ಕನಸು... ನಿಜವಾಗದ ಹಂಬಲು

ಕನಸಿನನುಭವಕೆ ನಿಜದ ಚೌಕಟ್ಟು
ಇಡಹೊರಡುವವರದೇ ತಪ್ಪು,
ಕನಸಿನೇರಿ ಹತ್ತಿ ಇಳಿದು
ಈಗ
ಮಳೆಬಾರದ ಹಾಗೆ ಜೋಪಾನದಲ್ಲಿ
ಕೊಡೆಹಿಡಿದು ಕತ್ತೆತ್ತದೆ ನಡೆವ ನಾಜೂಕು ದಾರಿ.
ಸ್ವಪ್ನವಿರದ ದೋಷಪೂರಿತ ಇರುಳು,
ದಿಂಬಿಗೆ ತಲೆ ಕೊಡುವ ಮೊದಲೇ ನಿದ್ದೆ

ಕನಸುಗಳಿರುವುದು ಕಾಣಲಿಕ್ಕೆ,
ನಿಜವಾಗಿಸಲಿಕ್ಕೆ,
ನನಸಾದ ಕನಸುಗಳ ಕೆನ್ನೆ ನೇವರಿಸಲಿಕ್ಕೆ.
ಎಲ್ಲ ಸರಿ -
ಬೋಧನೆಗೆ.

ಕೇದಾರದ ಕನಸು ಕಾಣುವವರಿಗೆ
ಕೋಳಿವಾಡವೇ ನಿಲುಕುತ್ತಿಲ್ಲ
ಹೆಜ್ಜೆ ಒದ್ದರೆ ಅಳಿದುಳಿದ ಮಡಕೆಯೊಡೆಯುವುದು
ಗೊತ್ತಿದ್ದೂ ಕನಸನ್ನೆ ಭಾವಿಸುವುದು ತಪ್ಪುತ್ತಿಲ್ಲ.

ಅದೋ ದೂರದಲ್ಲಿ ರಾಜನಂಬಾರಿ
ಸೊಂಡಿಲಲ್ಲಿ ಅಲುಗಾಡುವ ಹಾರ ಭಾರಿ.

Thursday, June 9, 2016

ಮಳೆಗಾಲ

ಇದೀಗ ಮಳೆಗಾಲ;
ಹೋದ ಸಲದ ಮಳೆ ಕಳೆದು
ಚಳಿ ಹಿಡಿದು, ಹಸಿರು ಕೆಂಪಾಗಿ
ಧನುರ್ಮಾಸದ ಚುಮುಚುಮು ಬೆಳಗಲ್ಲಿ
ಬಿಸಿ ಬಿಸಿ ಹುಗ್ಗಿಯುಂಡು
ಸಂಕ್ರಮಣದಲ್ಲಿ ಉದುರಿದ
ಎಲೆಗಳ ಕಾಂಡ ಹೊತ್ತ ಮರಗಿಡಗಳೆಲ್ಲ
ಚೈತ್ರ ಬರುವ ನಿರೀಕ್ಷೆಯಲ್ಲಿ ಚಿಗುರಿ
ವೈಶಾಖದ ಬಿಸಿಲಿನಲ್ಲಿ
ಹೂವ ಅಗ್ಗಿಷ್ಟಿಕೆಯ ದಿವ್ಯ ಗೊಂಚಲು
ಮೊದಲ ಮಳೆ ಬಿದ್ದ ಕೂಡಲೆ
ಬೇಲಿಸಾಲಿನ ಮಲ್ಲಿಗೆ ಬಳ್ಳಿ ತುಂಬ
ಅಚ್ಚ ಬಿಳಿಯ ಮಲ್ಲಿಗೆ
ಕೊಡೆ ಹಿಡಿದು, ಹೊಂಡ ಹಾರುತ್ತ
ಹೋಗುವಾಗ ಸಿಕ್ಕುವುದು
ಮಳೆ ನಿಂತ ಮೇಲಿನ ಹೂಚೆಲ್ಲಿದ ಹಾದಿ

ಇದೀಗ, ಮತ್ತೆ ಮಳೆಗಾಲ:
ಬ್ಲಾಗೂರಿನ ಮರದಲ್ಲಿ
ಮಳೆನಿಂತು ಹನಿಯುತಿದೆ.
ತೂಗಿಬೀಳುವ ಆಕಾಶಮಲ್ಲಿಗೆ
-ಯ ಮೃದುಲಘಮಕ್ಕೆ
ಚಡಪಡಿಸುವ ಮನವನ್ನ
ಸಂತೈಸುವ ಮತ್ತಿದೆ.
ಹಳೆವೈನು ಕೇಳುವವರಿಲ್ಲದೆ ಸುಮ್ಮನೆ ಕೂತಿದೆ.

ಈ ಸಂಭಾಷಣೆ.. ಈ ಸ್ನೇಹ ಸಂಭಾಷಣೆ..

ಸೈಲೆಂಟು ಮೋಡಿನಲ್ಲೆ
ರಿಂಗಾಗುವ ಫೋನು...:
ನಿನ್ನ ಆತುರದ ನುಡಿ
ಕವಿತೆ ಕಳಿಸುತ್ತೇನೆ
ಓದು ಬೇಗ...
ಪಿಸುಗುಡುತ್ತೇನೆ ನಾನು:
ಇರಲಿ, ನಿಧಾನ,
ಇವತ್ತು ತುಂಬ ಕೆಲಸ,

ಎಲ್ಲಿ ಬಿಡುತ್ತೀಯ ನೀನು?:
ಇಲ್ಲ, ಈಗಲೇ!
ಇದು ನಿನ್ನೆ ರಾತ್ರಿಯಿಂದ ನನಗೆ
ಹಿಡಿಸಿದೆ ಹುಚ್ಚು,
ನಿನಗೂ ಒಂದಿಷ್ಟು ಒರೆಸದೆ
ಇರಲಿ ಹೇಗೆ?!
ಈ ಕೂಡಲೆ,
ಎಲ್ಲ ಬದಿಗಿಟ್ಟು
ಓದು..
ಮಧುರವೋ ಚೆನ್ನವೋ
ಆಮೇಲೆ ಹೇಳು.

ಓದು. ಓದಿ ಮರುಳಾಗು,
ಹಿಡಿಯಲಿ ಹುಚ್ಚು,
ಸಂಜೆ ಸಿಗೋಣ,
ಕಾಫಿ ಕುಡಿಯುತ್ತಾ-
ತಿರುಪು ಬಿಚ್ಚು.
ಅಮಾಸೆ ಹುಣ್ಮೆಗಳ,
ಹಂಗಿಲ್ಲದ
ಭಾವಕಡಲ ದಂಡೆಗೆ
ಬಂದೊಡ್ಡಲಿ ಭರತ.

ಹೂಂ.. ಸರಿ ಸರಿ,
ಇನ್ನು ಬಿಡುವುದಿಲ್ಲ ಈ ಮಹರಾಯಿತಿ.
ಈಗ ಶುರುವಾಗಿದೆ
ಮಾನ್ಸೂನು,
ಆಗಲೇ ಕಡಲ್ಕೊರೆತ!


:-) :-):-) :-) :-):-)
ಸರಿ, ಎಲ್ಲಿ? ಇನ್ನೂ ಬರಲಿಲ್ಲ ಕವಿತೆ?
ಹಿಡಿಯುವುದಕ್ಕೆ ಮೊದಲೆ ಹುಚ್ಚು ಕೆದರಿತೆ?!

Tuesday, June 7, 2016

ಜೀವನ್ಮುಖತೆಗೆ ಈಗ ಒಂದೇ ದಿಕ್ಕು - ಪೂರ್ವ

ಮಂಕಾದ ಹಗಲು
ಇಳಿಬಿದ್ದ ಹೆಗಲು
ತಿರುವಿನಲ್ಲಿ ಸಿಕ್ಕ ದಿನ
ಹೊರಟ ಪಯಣಕ್ಕೆ
ದಾರಿ ನೂರಿದ್ದವು
ಏರು ಹೆಜ್ಜೆ, ಬೆಟ್ಟ ಕೊಳ್ಳ
ತುಂಬಿ ಹರಿವ ಹಳ್ಳ
ಬಯಲು ಹೊಕ್ಕವರು
ಇಟ್ಟ ಹೆಜ್ಜೆಗಳ ಹಿಂದೆ
ದೂರದಾರಿ ಮಲಗಿದೆ
ನೆಲೆನಿಂತ ತಾವಿನ
ತುಂಬ ಕುಹೂಗೀತ
ಸ್ಥವಿರಗಿರಿಯ ಚಲನದಾಸೆಯೂ
ಬಿಸಿಯೇ ಘನವಾಗಿ ಸುರಿವ ತಣ್ಬನಿಯೂ
ಜತೆಜತೆಗೆ
ಹಿನ್ನೆಲೆಗೆ ಹೆದ್ದೆರೆಗಳ ಕಡಲು

ಮಂಕಾದ ಹಗಲು
ಇಳಿಬಿದ್ದ ಹೆಗಲು
ನಿನಗೆ ಅಲ್ಝಮೈರು
ನನಗೆ ಪಾರ್ಕಿನ್ಸನ್ನು
ಒಂದೇ ಉಸಿರಿಗೆ ಹತ್ತಿಳಿದ ಬೆಟ್ಟಮಗ್ಗುಲು
-ಗಳ ಮರೆತು ಈಗ ನೋಯಿಸುವ ಬೆನ್ನು

ಮಂಕಾದ ಹಗಲು
ಇಳಿಬಿದ್ದ ಹೆಗಲು
ಸುಖಾಸುಮ್ಮನೆ ನೋಯಿಸುವ ಗಿಬ್ರಾನು
ನಮ್ಮಿಂದಲೇ ಬಂದವರು ನಮ್ಮವರಲ್ಲ
ನಮ್ಮನ್ನ ತಂದವರು ನಮ್ಮವರಾಗಿಲ್ಲ
ದಾರೀಲಿ ನೆನೆದು ಕೈ ಕೈ ಹಿಡಿದವರು
ಧಾರೀಲಿ ನೆನೆದ ಕೈ ಕೈ ಹಿಡಿದವರು
ಜತೆಯಲಿದ್ದೂ ಜತೆಯಲಿಲ್ಲ.
ಜೀವನ್ಮುಖತೆಗೆ ಈಗ ಒಂದೇ ದಿಕ್ಕು - ಪೂರ್ವ
ಎಲ್ಲ ಚಲನಶೀಲತೆಗೆ ಒಂದೇ ಮೂಲೆ - ದೇವ ಮೂಲೆ
ನುಡಿಯದಲೆ ಮುತ್ತಿನ ಹಾರದಂತಿರಬೇಕು
ಬಾಯಿಬಿಟ್ಟರೆ ಬಣ್ಣಗೇಡು.

ಹೀಗಾಗಿಯೇ..
ಮಂಕಾಗಿದೆ ಹಗಲು
ಇಳಿಬಿದ್ದಿದೆ ಹೆಗಲು

ಇನ್ನೇನು ಶಾಲೆಬಿಡುವ ಹೊತ್ತು
ಬಣ್ಣ ಬಣ್ಣಗಳ ಕಾಮನಬಿಲ್ಲು ಬರಬಹುದು ಇವತ್ತು.
ಮಂಕು ಹಗಲು ದಿಢೀರನೆ
ಓಕುಳಿ ಸಂಜೆಯಲ್ಲಿ ಜಾರಿ
ನೀಲಿಗಪ್ಪಾಗಿ ಹರಡಿ
ಮಳೆನಿಂತು ಮಿಂಚಬಹುದು ಅಲ್ಲಲ್ಲಿ ಒಂದೊಂದು ಮುತ್ತು.

[[[ ಬೇಂದ್ರೆಯಜ್ಜನ ಪ್ರಸಿದ್ಧ ಸಾಲು ದಾರಿಲೆ ನೆನೆದ ಕೈ ಹಿಡದಿ ನೀನು. (ನೀ ಹೀಂಗ ನೋಡಬ್ಯಾಡ ನನ್ನ ಕವಿತೆಯಿಂದ) ಇದನ್ನು ನಾನು ಈ ಕವಿತೆಯ ಲಹರಿಗೆ ತಕ್ಕಂತೆ ಉಪಯೋಗಿಸಿದ್ದೇನೆ. ಅಲ್ಲಿ ಬೇರೇನೇ ಉಪಯೋಗಿಸಿದರೂ ಅರ್ಥನಷ್ಟವೆನಿಸಿದ್ದರಿಂದ.]]]

Monday, June 6, 2016

ಮರೀಚಿಕೆ ಕಂಡರೂ ಖುಶಿ

ತುಟಿಯಂಚು ಅಷ್ಟು ಹಿಗ್ಗಬಾರದೆ?,
ಆ ಕಿರಿಹಲ್ಲು ಹೊಳೆಯಿಸುವ ಒಂದು ಪುಟ್ಟ ನಗು..
ಯಾಕೆಂದರೆ?...
ಹೀಗೇ ಸುಮ್ಮನೆ,

ಯಾಕೋ ಈ ಹೊತ್ತು ಮನಸು ಬಿಮ್ಮನೆ,
ಹಗುರಾಗಿ ನಗೆದೋಣಿಯ ಮೇಲೇರಿ
ಒಳ ನದಿಯಲ್ಲೊಂದು ಯಾನ.. ಥಟಕ್ಕನೆ
ಇಳಿದುಬಂದು ಬಿಡಬಹುದು ತೀರ ಬೇಕೆನ್ನಿಸಿದೊಡನೆ.

ಏನಿದೆಲ್ಲ ಹುಚ್ಚಾಟ. ಕಿರಿಕಿರಿ;
ಸುಮ್ಮನಿರಬಾರದೆ.
ಇರುವ ನಾಲ್ಕು ದಿನದ ಬದುಕಿನಲ್ಲಿ ಅಚ್ಚುಕಟ್ಟಾಗಿ
ಶಿಸ್ತಾಗಿ, ಧೂಳು ಹೊಡೆದು, ಮಡಿಕೆ ಮುದುರದೆ
ಇರುವ ಹಾಗೆ..

ನಗು ಎಂದರೆ ನಿನಗೆ ಹೇರಿಕೆ
ನೀ ನಗದಿದ್ದರೆ ನನಗೆ ಚಡಪಡಿಕೆ
ಶಿವನೇ ಇದೆಂಥ ಕ್ರೌರ್ಯ.
ಯೋಗಮುದ್ರೆಯಲ್ಲಿ ನಗುವಿಗೆ ಜಾಗವಿಲ್ಲವಲ್ಲ.
ಒತ್ತಾಯದ ಪರಮಾನ್ನದ ಗತಿ ಎಲ್ಲರಿಗೂ ಗೊತ್ತು.

ಅದು ಸರಿ.
ಈ ಉಸಿರುಗಟ್ಟಿಸುವ ಬದುಕಿನಲ್ಲಿ
ಒಂದು ನಗೆಬುಗ್ಗೆಗೆ ಕಾದವರು
ಮೌನದುಸುಬಿನಲ್ಲಿ ಹುಗಿದೇ ಹೋಗಬಹುದು.
ನಗಲು ಒತ್ತಾಯಿಸಿದರೆ ಹಿಂಸೆ
ನಗದೆ ಇದ್ದರೋ.. ಪ್ರತಿಹಿಂಸೆ. 
ಎರಡು ಸತ್ಯಗಳ ಮಧ್ಯೆ ಒಂದು ಸುಳ್ ಸುಳ್ಳೇ ನಗೆ
ಇಡೀ ಬದುಕಿನ ತುಂಬ ತುಂಟನಗು ಬೀರುತ್ತದೆ.

ಅದಕ್ಕೇ ಇರಬಹುದಾ..
ಮರೀಚಿಕೆ ಕಂಡರೂ ಖುಶಿ.

Monday, May 30, 2016

ಈ ವರ್ಷದ ಬೆಳಗು

ಇವತ್ತು ಬೆಳಗಿಗೊಂದು
ಹೊಸಪಾಠ;
ಹಿಡಿಬೆರಳು ಗಟ್ಟಿಯಾಗಿ
ಬಿಡದೆ ಹಿಡಿದು
ಕಣ್ ಬನಿ ಒರೆಸುತ್ತ
ನಡೆದ ದಾರಿಗಳೀಗ
ಅಗಲಗಲ,
ಮರಗಳಿಂದ ತೂಗುವ
ಹೂಗೊಂಚಲು ಎಡಬಲ,
ಮಳೆನಿಂತು ಹನಿವ
ಹಸಿರೊಳಳಗೆ ಹುದುಗಿ
ಹಾಡುವ ಕೋಕಿಲ,
ಹೊಸದಾಗಿ ಬೈಂಡ್ ಹಾಕಿಟ್ಟ ಪುಸ್ತಕಗಳ
ತುಂಬಿದ ಚೀಲ,
ಹೆಗಲಿಗೇರಿಸಿ...
ನೀ ಬರದಿದ್ದರೇನಂತೆ,
ವ್ಯಾನೇ ಆದರು ಪರವಾ ಇಲ್ಲ,
ಎಂದೋಡುವ
ಕಿನ್ನರ ಕಾಲ್ಗಳ ಒಡತಿ
-ಯ
ಕೈಗಳು
ಹೊರಡುವ ಮುಂಚೆ
ಬರಸೆಳೆದಿದ್ದು ಯಾಕೋ!!?
ಅಪ್ಪಿಕೊಂಡ 
ಹೊಟ್ಟೆಯೊಳಗೆ ತಳಮಳ.

ಇವತ್ತು ಬೆಳಗಿಗೊಂದು
ಹೊಸಪಾಠ;
ಬಿಟ್ಟೋಡುತ್ತ ಹರಿದ ಬದುಕಿಗೆ
ಇನ್ನು ಬಿಟ್ಟುಕೊಡಲು
ಕಲಿಯಬೇಕಿರುವ ಸಂಕಟ.