Tuesday, July 17, 2018

ಎರಡು ಮೆದುದಿಂಬುಗಳ
ನಡುವಿನ ಹಳ್ಳದಲಿ
ತಲೆಯಿಟ್ಟು ಮಲಗುವುದೆ
ತಾಯ್ತನ!

Tuesday, July 10, 2018

"ಕರೆದ ದಾರಿ ಬೇರೆ, ಮತ್ತೆ
ಹಿಡಿದ ದಾರಿ ಬೇರೆಯೆ!
ಹಾತೊರೆದು ನಡೆವರನ್ನು
ಹಾದಿಗೆಡಿಸುತಾರೆಯೆ?"
 - ದಿಗ್ಭ್ರಾಂತ ಕವಿತೆ - ಗಂಗಾಧರ ಚಿತ್ತಾಲ


ಇವತ್ತು ಈ ಕವಿತೆ ಓದಿ ಒಂದು ವಿಚಿತ್ರ ಮನಸ್ಥಿತಿ ಉಂಟಾಯಿತು. ಎಲ್ಲೆಲ್ಲಿಯದೋ ಯಾವಯಾವದೋ ವಿಷಯಗಳು ಕನೆಕ್ಟ್ ಆಗಿಬಿಟ್ಟಿತು.
ಒಂದೊಳ್ಳೆಯ ಕವಿತೆ ಅಂದ್ರೆ ಹೀಗೆ ಅಲ್ಲವೆ? ನಾನು ಹುಟ್ಟುವುದಕ್ಕೂ ಮೂವತ್ತು ವರುಷಗಳಿದ್ದಾಗ ಬರೆದ ಕವಿತೆ ನಾನು ಹುಟ್ಟಿ ನಲವತ್ತು ವರುಷದ ಮೇಲೆ ನನ್ನನ್ನು ಅಲುಗಾಡಿಸುವ ಈ ಕಾವ್ಯಾನುಸಂಧಾನಕ್ಕೆ ಮನಸೋತಿರುವೆ.
ಪು.ತಿ.ನ ಬರೆದ ಹಾಗೆ "ಕಥೆಗಳ ಬರೆಯುವ ಕಥೆಗಾರ ನಿನ್ನ ಕಲೆಗೆ ಯಾವುದು ಪಾರ.."

ಇದೇ ಹುಕಿಯಲ್ಲಿ ನನ್ನದೊಂದು ಸೊಲ್ಲು ತಡೆದರೂ ಮತ್ತೆ ಬಂದು ಬರೆಸಿಕೊಂಡಿತು.

ಬದಲಾದ ಹಾದಿ, ಹೆಜ್ಜೆ,
ಜತೆಪಯಣದ ವಜ್ಜೆ
ನೋಡುತ್ತಲೆ ಕಳೆದ ದಿನಗಳ
ನಿಲ್ದಾಣದಿಂದ ಹೊರಟು
ನೋಡದಿದ್ದರೂ ನಡೆದೀತೆಂಬ
ನಿಲುಗಡೆಗಳ ದಾರಿ
ತುಟಿಮುಚ್ಚಿದ ಕಣ್ರೆಪ್ಪೆಗಳು ಉದುರಿವೆ
ತುಟಿ ಮುಟ್ಟಲಾರದೆ ಅದುರಿದೆ
ನೀನು ನಡೆದುಬಿಟ್ಟಿದ್ದೀ
ನಾನು ಹೊರಳಿಬಿಟ್ಟಿರುವೆ
ಆದರೂ
ಆ ನೀನು
ಕಾಲವಳಿಸದ ನಿಜ
ನನ್ನ ನೆನಪಿನಲ್ಲಿ,
ಒಂದೇ ಹಾದಿಯ, ಹೆಜ್ಜೆ-ಮೇಲೆ-ಹೆಜ್ಜೆಯೇ ಕನಸಿನಲ್ಲಿ.

Friday, July 6, 2018

ಉಮ್ಮತ್ತಿ

ಇರಬಹುದೆ
ರಸ,ಹಣ್ಣು,ಕಾಯಿ,ಬೇರು..
ಉಮ್ಮತ್ತಿ ಕಾಯಿಯ ಹಾಗೆ?
ಎರಡು ದಿನ ಹಚ್ಚಿದ ಮೇಲೆ
ಕೂದಲುದುರಿ ನುಣ್ಣಗಾಗಿ
ಫಣಿಯ ಮಂಡೆ ಬೋಳಾದ ಹಾಗೆ
ಗಂಟಲ ಸಮುದ್ರದೊಳಗಿಂದ
ಉಕ್ಕಿ ಬರುವ ಮಾತಿನಲೆಗಳ
ಅಡಗಿಸಿ, ಮಲಗಿಸಿ,
ಮೌನದಂಡೆಗೆ ಮರಳಿಸುವ
ಮಾಯಕದ ರಸ, ಹಣ್ಣು, ಕಾಯಿ, ಬೇರು?
ಇರಬಹುದೆ
ಸಿಗಬಹುದೆ
ಜೀವವುಳಿಯಬಹುದೆ?

Friday, June 8, 2018

ಮಳೆಯಾಗುವ ಮೊದಲು..

ವಿಷಯ ತಿಳಿಯಿತು.
ಹಾಂ ಇಲ್ಲ, ಹೂಂ ಇಲ್ಲ,
ಬೇಕಿತ್ತೋ ತಿಳಿಯಲಿಲ್ಲ.
ಬೇಕಾಗಿರಲಿಲ್ಲವೋ ಗೊತ್ತಾಗಲಿಲ್ಲ!

ಇನ್ನೊಂದು ವಾರ,
ಮತ್ತೊಂದು ಸ್ಕ್ಯಾನು,
ಮತ್ತೆ ನಾಕು ಹೃದಯ,
ಕಣ್ಣರಳಲಿಲ್ಲ, ನಗು ಅರಳಲಿಲ್ಲ,
ಕೈಲಿ ಹರಿಯತ್ತಾ ಎಂಬ ಪ್ರಶ್ನೆ
ತುಟಿಯ ಬದಿಗೆ ಬಿರಿದೂ...
ಮಾತಾಗಲಿಲ್ಲ.  :(

ಎರಡು ಜೀವದ
ಬಯಕೆ,
ಸುತ್ತ ಹಬ್ಬಿದ ಜಗಕೆ-
ತಿಳಿಯಲಿಲ್ಲ.

ಎಲ್ಲರ ಕಣ್ಣಿಗೂ ಅವರವರದೆ ಕನ್ನಡಕ.

ಒಂದು ಪುಟ್ಟ ಜೀವ ಮಾತ್ರ
ದಿವಾನ ಏರಿ ನಿಂತು
"ಈಗೆತ್ತಿಕೋ ಅಮ್ಮ
ಕೆಳಗಿಂದ ಎತ್ತಲು ಕಷ್ಟವಾಗುತ್ತೆ" ಅಂತು. 
ಆ ಜೀವದ "ನೆನಕೆ,
ಆಶೆ, ಹೊಟ್ಟೆಕಿಚ್ಚು, ಮತ್ತು ಮುದ್ದುಗರೆಯುವಿಕೆಯೇ
ನಿನ್ನ ಬದುಕಿನ ಹರಕೆ"
ಎಂದು ನಾನು ಇಂದು ಹೇಳಿದರೆ ನಿನಗೆ ತಿಳಿಯುವುದಿಲ್ಲ.

ಎಲ್ಲರ ಕನ್ನಡಕದ ಪವರ್ ಬದಲಾಗಿದೆ.
ಅಂಗಳದಿ ಅರಳಿದ ಹೂವು ಎಲ್ಲರ ಮನವರಳಿಸಿದೆ.
ಹೊಕ್ಕಳ ಬಳ್ಳಿಗೆ ಮಾತ್ರ ಯಾವುದೇ ಕನ್ನಡಕವಿಲ್ಲ, ಲೆನ್ಸು ಇಲ್ಲ.
ಅದೇ ಆಶೆ, ಅದೇ ಬಯಕೆ, ಜೀವದಾಳದಲಿ ಮಮತೆ.

Sunday, June 3, 2018

ಕಿಟಕಿಯಾಚೆಗಿನ ಆಕಾಶ

ಮೋಹದಾ ಹೆಂಡತಿ ತೀರಿದ ಬಳಿಕ...
ಅವನು ಹೋಗಬಹುದು
ಎಳೆಗಳ ರೇಷಿಮೆಯ ಕತ್ತರಿಸಬಹುದದು
ಲೋಕರೂಢಿ

ಮೋಹ ಹರಿದರೂ
ಇವಳು ಮಾತ್ರ...

ಅವನ ಮನೆಯ ಗಟ್ಟಿ ದಿಂಬ (ಗೋಡೆ)
ಅತ್ತೆ ಮಾವರ ದಿಟ್ಟಿ ಕಂಬ
ಮಕ್ಕಳ ಹೊಟ್ಟೆ ತುಂಬ
ಜೀವರಸ ಪಾಕ ಹದಗೊಳಿಸದೆ
ಹೊರಟು
ಮುರಿದರೆ ರೂಢಿ
ಸಮಾಜಕ್ಕೆ ರಾಡಿ.


ಒಳಗಿನ ಬಗ್ಗಡ
ರಾಚದಂತೆ
ನೋವ ನೂಲು
ಕಾಣದಂತೆ
ಬದುಕ ನೇಯ್ಗೆ ನೇಯುವಂತೆ
ಇವಳಿಗೆ ಕಲಿಸಲಾಗಿದೆ.
ಇಲ್ಲದ ಗೂಟಕೆ
ಒಲ್ಲದ ಹಗ್ಗಕೆ
ಒಡ್ದಿ ಇವಳು ನಿಲ್ಲಬೇಕಿದೆ.

ಮೋಹದ ಹೆಂಡತಿ ತೀರಿದ ಬಳಿಕ ಅವನು
ಸ್ವಚ್ಭ ಆಕಾಶದಿ ತೇಲುವ ಹಕ್ಕಿ.
ಒಂದೊಂದು ಸಲ ಆಕಾಶವೂ ಆಗಿಬಿಡಬಹುದು.

ಇವಳು ಬರೀ
ದಿಟ್ಟಿ ಹರಿಸಬಹುದು
ಕಿಟಕಿಯಾಚೆಗಿನ ಆಕಾಶಕೆ.

Tuesday, May 8, 2018

ಮಳೆ ಮೋಡ (ಮಾತ್ರ)..


ಮೊಣಕಾಲುದ್ದ ನೀರಿನ ಹೊಳೆಯಲ್ಲಿ ಆಡುವ ಮಕ್ಕಳು
ಬಿಸಿಬಿಸಿ ಕಲ್ಸೋಪಾನದ ಅಂಚಿಗೆ ನೆರಳಾಡುವ ಅರಳಿಮರ
ಬಿರು ಬೇಸಿಗೆಯ ಮಧ್ಯಾಹ್ನದಿ ಮಳೆ ಮೋಡ.
ಈಗೀಗ,
ಬರಬೇಕಾದ ಮಳೆ, ಮೋಡ ತುಂಬಿಯೂ ಬರುವುದಿಲ್ಲ
ಆಸೆ ತೋರಿಸಿ ಕರಗುವುದನ್ನು ಮೋಡಗಳು ಕಲಿತಿವೆ;
ಕರಗಿದ, ಪುಡಿಯಾದ, ಆಸೆಬೆಟ್ಟದ ತಪ್ಪಲಿನವಳು ಮಾತ್ರ
ಕಲಿಯಲಾರದೆ ಕಾಯುತ್ತಲೇ ಇರುವಳು.

(ದೋಣಿಯೊಳಗೆ ನೀನೂ....)
ನೀನು ಒಬ್ಬನೇ ನಿಲ್ಲಬಯಸಿದೆ.
(ಕರೆಯ ಮೇಲೆ ನಾನೂ...)
ನಾನು ಒಬ್ಬಳೇ ಆಗಿಬಿಟ್ಟೆ.
ಸುತ್ತ ಮಕ್ಕಳು, ನದಿ, ಆಕಾಶ, ಮಳೆ ಮೋಡ, ಬಿಸಿಲು, 
ಸೋಪಾನ, ಅರಳಿ ಮರ, ಮತ್ತು ಊರೊಳಗೆ ಹೋಗುವ ಹಾದಿ.

Friday, April 6, 2018

ನಡೆಯುತ್ತ ನಡೆಯುತ್ತ...

ಮಲ್ಲಿಗೆಯಿಂದ ಮಲ್ಲಿಗೆಗೆ,
ಕನಸಿನಿಂದ ಕನಸಿಗೆ,
ದಾಟುತ್ತ ದಾಟುತ್ತ,
ಈಗ ನನಸಿನ ಬಯಲು,
ಸ್ವಪ್ನ ಹರಡಿದ ಮುಗಿಲು,
ವಸಂತದ ಗಂಧ ಗಾಳಿ ಹೂಗೊಂಚಲು
ಎಂದಿನ ಹಾಗೆ ಚೆಲುವರಿದೂ,
ಕೇಳದಿದೆ ಕೋಗಿಲೆಯ ಕುಕಿಲು,
ನೆರಳಿಗಿಂತಲೂ ಉದ್ದದ ಬಿಸಿಲು.

ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿಕೂತು
ಯಾರಿಗೂ ಹೇಳದ ಪಯಣ-
-ದ ದಾರಿ ಬದಲಾಗಿ
ಸಮಾಹಿತ-
-ದ ನಿರ್ವಾತ,
ಝಗಮಗಿಸುವ ಸೂರ್ಯನೇ
ಬೆಚ್ಚಿ ಬೆಮರುವ ಕಪ್ಪುಕುಳಿ ಬದುಕಿನ
ಅವಕಾಶದಿ,
ಬಗೆಬಗೆಯ ಉಲ್ಕಾಪಾತ.
ಈಗ ಮಲ್ಲಿಗೆ ಬಳ್ಳಿ ಡೆಸ್ಕ್ ಟಾಪಿನ ಸ್ಕ್ರೀನ್ ಸೇವರಲ್ಲಿದೆ,
ರಾತ್ರಿ ರಾಣಿಯ ಬೊನ್ಸಾಯ್ ಕಿಟಕಿ ಪಕ್ಕದ ಕುಂಡದಲ್ಲಿದೆ,
ಮಕ್ಕಳ ಕೈಗೆ ಸಿಕ್ಕಿ ತುದಿ ಹರಿದ-
ಜತೆಪಯಣದ ಚೊಲೋ ಚಿತ್ರವ ಫ್ರೇಮಲ್ಲಿ ಸಿಕ್ಕಿಸಲಾಗಿದೆ.

ಕೆ.ಎಸ್.ನ ಹೇಳಿದಂತೆ
"ಕವಿತೆ ಕರವಸ್ತ್ರ"
ಮತ್ತು ಚಿಕಿತ್ಸೆ ಕೂಡ.
ಲಘು ಗುರು ಮಾತ್ರೆಗಳ ಬಲವೇ ಬಲ.
ಬೇಂದ್ರೆ ಅಜ್ಜ ಬೇಜಾರಾಗಬ್ಯಾಡ್ರಿ
ನೀವು ಹೇಳಿದ ಹಾಗೆ
"ಕವಿಗೆ ಏನು ಬೇಕು
ಹೂತ ಹುಣಸೀಮರ ಸಾಕು"
ಬದುಕಿನ ಮರದೆದೆಗೆ ಕವಿತೆಯ ಹನಿ ಹನಿ ಬೇಕು.
ಆದರೂ ಕೊನೆಗೆ ಒಂದು ಮಾತು ಹೇಳಲು
ಅಡಿಗರೇ ಸೂಕ್ತ..
"ಮುಗಿಲು ಮಿಂಚಿನ ತತ್ತಿ
ತಳಕ್ಕೆ ಬೆಳಕಿನ ಮರಿಗಳಿಳಿಯಲಿಲ್ಲ.
ಅಷ್ಟೊಂದು ಮಿಂಚು ಮಿಂಚಿದ್ದಕ್ಕೂ
ಅಡಿಗೆಮನೆಯ ತರಗೆಲೆ ಹೊತ್ತಲಿಲ್ಲ."
ಪಯಣ ಪೂರ್ಣದೆಡೆಗೇ ಇದ್ದರೂ
ಪುಡಿಯಾಗುವುದು ನಿಯಮ.

Monday, March 12, 2018

ಕವಿ ಮಿತಿ

ನೆಲ ಹೇಳಿತು
ಮುಗಿಲು ಕಿವಿಗೊಟ್ಟಿತು
ಮಧ್ಯದ ಜನಸಂಕುಲ ಗಾಬರಿಯಾಯಿತು
ಒಂದು ತುಂತುರು ಮಳೆ
ಮಳೆ ನಿಂತ ತಂಗಾಳಿ, ಹಕ್ಕಿ ಕುಕಿಲು
ಎಂದಿನ ಹಾಗೆ ಟ್ರಾಫಿಕ್ಕು, ಕೆಲಸ, ಶಬ್ಧ,
ತುಂಬಿ ತುಳುಕುವ ಸಾರಿಗೆ,ಆಸ್ಪತ್ರೆ, ಹೋಟೆಲು,
ಹನಿ ತುಳುಕದ ಹಾಗೆ ಎಚ್ಚರದ ಬಾಟಲು.

ಆಗಸ ಪಿಸುನುಡಿಯಿತು
ಭುವಿ ಕಿವಿಯಾಯಿತು
ಮಧ್ಯದ ಜನಸಂಕುಲ ಕುಮ್ಹಿಟಿಬಿದ್ದರು
ಆತಂಕ, ಸಾಶಂಕ, ದೇಗುಲಗಳಲ್ಲಿ ಪರಿಪರಿಯ ಅರ್ಚನೆ ತಳ್ಳಂಕ
ಮತ್ತೊಂದು ಸುರಿಮಳೆ
ತೊಳೆದ ಕೊಳೆ, ಮುರಿದು ಬಿದ್ದ ರೆಂಬೆ ಕೊಂಬೆ
ಪಕ್ಕದ ಮರದಲ್ಲಿ ಗೂಡು ಸಿದ್ಧಗೊಳ್ಳುತ್ತಿರುವ ಸಂಜೆ
ಬೆಳಕು ಚೆಲ್ಲಿದ ಪಾದಪಥ, ಕಿವಿ ತುಂಬುವ ಹಾರ್ನುಗೀತ
ಮತ್ತದೇ ಟ್ರಾಫಿಕ್ಕು, ಕಿಕ್ಕಿರಿದ ಸಿಗ್ನಲು,
ಉದ್ದ ಕ್ಯೂಭರಿತ ಸಾರಿಗೆ, ಆಸ್ಪತ್ರೆ, ಹೋಟೆಲು
ಒಂದೆರಡು ಹನಿ ತುಳುಕಿಯೂ ತುಳುಕದ ಬಾಟಲು.

ಮಧ್ಯೆ ಟೆಕ್ನಾಲಜಿ
ಪತ್ರ,ಮೆಸೇಜು,ಚಿತ್ರ, ಎಮೋಜಿ
ಎಲ್ಲ ಸ್ತಬ್ಧ.
ಶಬ್ಧದೊಳಗಣ ನಿಶ್ಯಬ್ಧ
ದೊಳಗೆ
ಅಮೃತವಾಹಿನಿಯೊಂದು
ಹರಿಯುತ್ತಲೆ ಇರಲಿ
ಎಂದಷ್ಟೆ ಬಯಸುವುದು
ಕವಿಯ ಭಾಗ್ಯ.

ಇರಬಹುದೆ...

ಜತೆಗಿಳಿದ ದಾರಿ ಬಿಟ್ಟು
ತಿರುಗಿ ಹೊರಟೆ
ಸಕ್ಕತ್ತಾಗಿ ಕೈಕೊಟ್ಲು ಗುರೂ
ಲೋಕವೆಂದಿತು.
ಎಲ್ಲಿ ಕೈಯಿಟ್ಟೆ, ಎಲ್ಲಿ ಬಿಟ್ಟೆ
ಎಲ್ಲಿ ಕಟ್ಟಿದೆ, ಎಲ್ಲಿ ಒಡೆದೆ ಅಂತ
ಅದಕ್ಕೇನು ಗೊತ್ತು
ಪ್ಚ್ ಪ್ಚ್ ಅನ್ನುತ್ತದೆ.


ಬಿದ್ದು ಪುಡಿಯಾಗುವವಳಿದ್ದೆ
ಒಂದು ಕಿರಿಬೆರಳು ಹಿಡಿದೆತ್ತಿ ನಿಲ್ಲಿಸಿತು
ನೋಡ್ದಾ.. ಗೊತಿತ್ತು ನಂಗೆ
ಎಂದು ಹಲವರಿಯಿತು ಲೋಕ
ಏನು ಸಿಕ್ಕಿತು ಏನು ದಕ್ಕಿತು
ಎದ್ದು ನಿಂತಿದ್ದು ಹೇಗೆ
ಅದಕ್ಕೇನು ಗೊತ್ತು
ಮುಸಿನಗೆ ನಗುತ್ತದೆ.


ಹೇಳಿದ ಮಾತು ಕೇಳಲಿಲ್ಲ
ದೊಡ್ಡವರ ದಾರಿ ಸಾಗಲಿಲ್ಲ
ಬೆನ್ನು ಹತ್ತದಿರದೆ ಪಾಪ
ಕಳೆಯಬಹುದೆ ಶಾಪ
ಹೊರೆಸುತ್ತದೆ ಲೋಕ
ಏನು ಕೇಳಿದೆ, ಎಲ್ಲಿ ಹೋದೆ
ಬೆನ್ನೇರಿದ್ದು ಏನು
ಇಳಿಸಿದ್ದು ಏನು
ಶಾಪವೋ ವರವೋ
ಅದಕ್ಕೇನು ಗೊತ್ತು
ಉಪದೇಶ ಮಾಡುತ್ತದೆ.


ಎಲ್ಲ ತಿರುವುಗಳೂ ಒಂದು ದಾರಿಯಲ್ಲಿ
ಒಟ್ಟಾಗಿ ಕರಗುವಾಗ
ಅನಿಸುತ್ತದೆ
ಹೊರಳುದಾರಿ, ಕಿರುಬೆರಳು,
ಎಡವು ನಡೆ, ಎದ್ದ ನಿಲುವು
ಶಾಪ, ಉಶ್ಯಾಪ, ಪಶ್ಚಾತ್ತಾಪ, ಪರಿಹಾರ
ಎಲ್ಲ ನಿಶ್ಚಿತವಾಗಿದ್ದು ಆ ನದೀಮೂಲದಲ್ಲೆ
ಇರಬಹುದೆ?!!
ಎಲ್ಲವೂ ಕರಗುವುದೆ ಒಂದೇ ನಿರಾಳದಲ್ಲಿ...?!
ಮಡಕೆಯೊಳಗಿನ ನೀರು ಸಮುದ್ರದೊಡನೆ ಸೇರುವಲ್ಲಿ!

Monday, January 29, 2018

ಮುಗುಳ್ನಗೆಯ "ಚೆಲುವ"

ಸುತ್ತೆಲ್ಲ ಕತ್ತಲೆ,
ಮುಚ್ಚಿಟ್ಟ ಬಾಗಿಲು,
ತೆರೆಯದ ಕಿಟಕಿ,
ಒಳಗುಡಿಯಲಿ
ಪದ್ಮಾಸನದಲಿ
ಧ್ಯಾನಮಗ್ನ ಶಿಲೆ.

ಚಿಕ್ಕ ಸೊಡರಿನ ದೀಪ-
ಕಣ್ಣ ಬಳಿ ಹಿಡಿಯೆ
ಮೆಲ್ನಗುವಿನ ಪ್ರತಿಫಲನ;
ಗದ್ದದ ಬಳಿ ಹಿಡಿಯೆ
ಗಂಭೀರ ಶಾಂತ ವದನ;
ಎದೆಯ ಬಳಿ
ಹೃದಯ ಮಿಡಿತದ ಬಳಿ ಹಿಡಿಯೆ
ಅರೆನಿಮೀಲಿತ ಧ್ಯಾನ!

ತುಸುದೂರದಿ ನಿಲ್ಲೆ
ಹಲವು ಸತ್ಯಗಳ ಅನೇಕಾಂತವಾದದ
ಮೂರ್ತರೂಪ;
ಬೆಳಕು ಚೆಲ್ಲೆ
ಪುನರುದ್ಧರಿಸಿದ ಗುಡಿಯ ಶಿಲಾ ನೈಪುಣ್ಯ.
ಎಷ್ಟು ಬೇಕೋ ಅಷ್ಟು ಹರಿಸೆ
ಮೆಟ್ಟಿಲು ಮೆಟ್ಟಿಲಾದ
ಬದುಕಿನ ಪಾಠ.

ನಿಖರ ಬಣ್ಣನೆಯ ನಿಶ್ಚಿತ ಉಕ್ತಿಗಳಲ್ಲಿ
ಪ್ರಜ್ವಲಿಸುವ ಸತ್ಯವು
ಅನುಕ್ತ ಆಕಾಶದಲ್ಲೆಲ್ಲ ಹರಡಿದೆ
ಎಂದು ಕೂತಿರುವ
ಮುಗುಳ್ನಗೆಯ "ಚೆಲುವ"ನಿಗೆ ಮನಸೋತೆ.
ಮತ್ತೆ ಬರುವೆ.

ಅವ ಹೇಗಿದ್ದನೋ!
ಏನಂದನೋ!
ಉಳಿಗೆ ಸಿಕ್ಕಿದ ಕಲ್ಲನು ಕೆತ್ತಿದವನ
ಎದೆಯೊಳಗಿನ ಆಕಾಶ
ನನ್ನ ಕಣ್ಣ ತುಂಬಿತು.Wednesday, January 17, 2018

ಮಡಕೆ

ಕನಸುಗಾತಿ
ಮಡಕೆ ಕೊಂಡಳು
ಅವನು ಹಸುವಿನ ಬಗ್ಗೆ ಮಾತನಾಡಿ ಮುಗಿಸುವಷ್ಟರಲ್ಲಿ
ಇವಳು ಸಂತೆಗೆ ಹೋಗಿ
ಮಡಕೆ ತಂದಾಯಿತು
ಹಾಲಿಗೆ, ಮೊಸರಿಗೆ, ಬೆಣ್ಣೆಗೆ, ತುಪ್ಪಕ್ಕೆ
ಇಷ್ಟಲ್ಲದೆ ಮಿಗುವ ಹಾಲನ್ನು ತುಂಬಿಸಿಡಲಿನ್ನೊಂದು ಮಡಕೆ

ಅರಿವಿದೆಯೆ ನಿನಗೆ
ಕನಸಿನ ಹಸುವಿನ ಮಧುರ ಹಾಲಿಗೆ
ಕಣ್ಣೆತ್ತಿ ನಿಂದವಳೆ
ಕನಸು ಮುಗಿಯುತ್ತದೆ
ಎಚ್ಚರಾದಾಗ
ಹಸು, ಹಾಲು, ಮಾತು, ಮೌನ,
ಬೆಣ್ಣೆ ಮತ್ತು ತುಪ್ಪ
ಯಾವುದೂ ಇರದ
ಬದುಕಿನ ಮಡಿಕೆ
ಬೋರಲು ಬಿದ್ದಿದೆ

ಮಡಕೆಗಳ ಹಸಿಯೊಡಲಿನಲಿ ಬರಿದೆ ಕನಸು.
ತುಂಬಿದರೂ ತುಂಬದಿದ್ದ ಹಾಗೆ
ಅವು ಎಂದಿಗೂ ಖಾಲಿ.

ಥೇಟ್ ಬದುಕಿನ ಹಾಗೆ
ಕನಸೂ ಇದ್ದು ಬಿಟ್ಟರೆ
ಏನು ಮಾಡುವುದು?
ಕೊಳಲನೂದುವ ಗೋವಳ 
ಸುಮ್ಮನಿರುವನು
ಕನಸಿನ ವಾಸ್ತವಕ್ಕೆ ಬೆದರಿ.