Friday, December 28, 2007

ನನ್ಹೀ ಕಲೀ

ಮೇರೆ ಘರ್ ಆಯೀ ಏಕ್ ನನ್ಹೀ ಪರೀ..

ತುಂಬಿ ಹರಿಯುತ್ತಿರುವ ಕಂದು ಯಮುನೆ.. ಅಮ್ಮನಂತೆ ಕರುಣೆಯಿಂದ ನನ್ನ ದುಃಖಕ್ಕೆ ಕಣ್ಣು ತುಂಬಿ ತುಳುಕಿಸುತ್ತಿರುವ ಮೋಡಕಪ್ಪಿನ ಬಾನು, ಹಿನ್ನೆಲೆಗೆ ಆ ಬಿಳಿಯ ಭವ್ಯ ಸ್ಮಾರಕ.. ನಮ್ಮೆಲ್ಲ ಕವಿಕಲ್ಪನೆಗಳ ಉಯ್ಯಾಲೆಯಲ್ಲಿ ಜೀಕಿ ಜೀಕಿ ತೂಗಿದ ತಾಜ್ ಮಹಲ್ಲು.

ಅತ್ತಿತ್ತ ನೋಡಿದೆ. ಯಾರೋ ಇಬ್ಬರು ಹೆಂಗಸರು ಮಿನಾರುಗಳ ಕುಸುರಿ ಚಂದ ನೋಡುತ್ತ ನಿಂತಿದ್ದರು. ಸಣ್ಣ ತುಂತುರಿತ್ತು. ಎಲ್ಲ ಪ್ರವಾಸಿಗಳೂ ಮಹಲಿನ ನೆರಳಲ್ಲಿ, ಒಳಗೆ ನಿಂತು ಸವಿಯುತ್ತಿದ್ದರು. ಇದು ಹಿಂಭಾಗವಾದ್ದರಿಂದ ಅಷ್ಟು ದಟ್ಟಣೆಯಿರಲಿಲ್ಲ.
ಹೋಗಿ ಬರ್ತೀಯಾ..ಹುಶಾರಾಗಿರು ಅಂತ ಕಣ್ತುಂಬಿದ ಅಮ್ಮನ ನೆನಪಾಯಿತು. ಮಾತಾಡದೆ ಕಣ್ಣ ತುಂಬ ನನ್ನನ್ನೇ ತುಂಬಿಕೊಂಡು ನೋಡುತ್ತ ನಿಂತ ಅಪ್ಪ ಮತ್ತವನ ಬೆಚ್ಚನೆ ಕೈಹಿಡಿತ ನೆನಪಾಯಿತು. ಕಂಡ ಕನಸೆಲ್ಲದರ ನೂರು ರೂಪ ಕ್ಯಾಲಿಡೋಸ್ಕೋಪಿನ ಚಿತ್ತಾರಗಳಂತೆ ಬಂದು ಹೋಯಿತು. ಎಲ್ಲ ಮುಗಿದ ಮೇಲಿನ್ನೇನು ಎಂಬ ಭಾವ ಒತ್ತರಿಸಿಬಂತು.ಕಣ್ಣು ಮುಚ್ಚಿದವಳು ಕಂಪೌಂಡ್ ಹತ್ತಿ ಹಾರಿಯೇಬಿಟ್ಟೆ..ಆಹ್ ಹೊದೆದ ದುಪ್ಪಟ್ಟಾ ಗಾಳಿಗೆ ತೇಲಿ ಹೋಯಿತು. ತಣ್ಣನೆ ಕೊರೆವ ಗಾಳಿ ಮೈಸೋಕಿದ್ದಷ್ಟೇ ಅಷ್ಟರಲ್ಲೇ ಬಿದ್ದಿದ್ದೆ ನೀರಿಗೆ. ಯಮುನೆಯೆಂಬ ಸಾವಿನ ಸುಳಿಗೆ.. ನೀರು ಕಣ್ಣು ಮೂಗಲ್ಲೆಲ್ಲ ತುಂಬಿ ಉಸಿರು ಕಟ್ಟಿ ಎದೆಯನ್ನು ಯಾರೋ ಒತ್ತರಿಸಿ ಹಿಡಿದಿದ್ದಾರೆನ್ನಿಸುವಷ್ಟು ತಳಮಳ. ಕಣ್ಣೆಲ್ಲ ಉರಿ. ಮುಚ್ಚಿಕೊಂಡರೆ ಕತ್ತಲು ಭಯ. ಆಹ್ ಒಂದು ಉಸಿರು ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಒಂದ್ಸಲ ಯಮುನೆಯ ಅಪ್ಪುಗೆಯಲ್ಲಿ ನನ್ನೇ ನಾನು..ಎಲ್ಲ ಕತ್ತಲಾಗಿ...

ಮಳೆ ನಿಂತ ನಿರಭ್ರ ನೀಲಿ ಹತ್ತಿರದಲ್ಲಿ ಬಿಳಿಯ ಎತ್ತರದ ಮಿನಾರು ತಣ್ಣನೆ ನೆಲ ಹಣೆಯ ಮೇಲೆ ಬೆಚ್ಚನೆ ಕೈ.. ಅಮ್ಮನಂತ ಚಂದ ಹೆಂಗಸೊಬ್ಬರ ಮುಖ ಮಸುಕು ಮಸುಕಾಗಿ ಕಣ್ಣು ತುಂಬಿತು. ಆಗಯೀ ಆಗಯೀ.. ಸುತ್ತಲ ಗೊಣಗಾಟ.. ಹರಿವ ಯಮುನೆಯಲ್ಲಿ ಮುಳುಗಿದವಳನ್ನ ಈಜುಗಾರ ಪ್ರವಾಸಿಯೊಬ್ಬ ನೋಡಿ ಹಿಡಿದು ಮೇಲೆ ತಂದಿದ್ದ.. ಮಿನಾರುಗಳ ಚಂದ ನೋಡುತ್ತಿದ್ದ ಇಬ್ಬರು ಹೆಂಗಸರೂ ಓಡಿ ಬಂದು ನನ್ನ ಉಸಿರಾಟವನ್ನು ರೀಸಸಿಕೇಟ್ ಮಾಡಿ ಬದುಕಿನ ಬೇಲಿಯೊಳಗೆ ಎಳೆದುಕೊಂಡಿದ್ದರು..ಅಲ್ಲಿ ಜನ, ಮಾತು, ಮೊನಚು, ಸೆಕ್ಯುರಿಟಿ ಎಲ್ಲವನ್ನೂ ನಿಭಾಯಿಸಿದ ಅವರಿಬ್ಬರೂ ನನ್ನ ಆಗ್ರಾದ ಗಲ್ಲಿಯೊಂದರ ಹಳೇ ಮನೆಯ ಹೊರಕೊಠಡಿಯ ಮಂಚದ ಮೇಲೆ ಮಲಗಿಸಿ, ಇಲ್ಲೇ ಬರುತ್ತೇವೆ ಸ್ವಲ್ಪ ಆರಾಂ ಮಾಡು ಅಂದು ಹೋದರು. ಅಯ್ಯೋ ಬದುಕಿಸಿಬಿತ್ರಲ್ಲ ಇವರು ಅಂತ ನಂಗೆ ಹತಾಶೆಯಾಗಿದ್ದರೂ, ಎಲ್ಲರಂತೆ ಚುಚ್ಚದೆ, ಮೊನಚು ನೋಟ ಬೀರದೆ ಸುಮ್ಮನೆ ಜೊತೆ ಕೊಟ್ಟ ಆ ಇಬ್ಬರೂ ಯಾಕೋ ಇಷ್ಟವಾಗತೊಡಗಿದರು. ಮೂಗೆಲ್ಲ ಉರಿಯುತ್ತಿತ್ತು. ಸುಸ್ತು. ನಿದ್ದೆ ಬಂದಿತ್ತು.

ಎಚ್ಚರಾದಾಗ ಅವರು ಅಲ್ಲೆ ಕೂತು ಅವತ್ತು ತೆಗೆದ ಫೋಟೊಗಳನ್ನು ನೋಡುತ್ತ ಕೂತಿದ್ದರು. ನಾನು ಮಾತಾಡದೆ ಎದ್ದು ಅವರ ಪಕ್ಕ ಹೋಗಿ ಕೂತೆ. ಹಸಿರ್ಹಸಿರು ಅಗಲಗಲ ಎಲೆಗಳ ಮೇಲೆ ಬಿರಿದ ಅಚ್ಚಮಲ್ಲಿಗೆಯಂತ ಮೆಲ್ನಗು ನಕ್ಕು ನನಗೂ ತೋರಿದರು ಫೋಟೋಗಳನ್ನ. ಮರುದಿನ ಅವರು ಹೊರಟಾಗ ನಾನೂ ಹೊರಟೆ. ಬಸ್ಸು ಕಂಡು ಕೇಳರಿಯದ ಉತ್ತರ ಪ್ರದೇಶದ ಚಿಕ್ಕ ಊರೊಂದಕ್ಕೆ ತಂದುಬಿಟ್ಟಿತು. ಅವರನ್ನೇ ಹಿಂಬಾಲಿಸಿದ ಕಾಲ್ಗಳು ನಿಂತ ಪುಟ್ಟ ಬೀದಿಯ ಹಳೇ ಮನೆಯ ಬಾಗಿಲಲ್ಲಿ ಹೆಸರಿತ್ತು "ಉದಯಮಹಲ್"

ಒಳಗೆ ಕಾಲಿಟ್ಟೊಡನೆ ಕಂಡ ವಿಶಾರ ಹಜಾರದಲ್ಲಿ ಅಲ್ಲಲ್ಲಿ ಗುಂಪಾಗಿ ಆಡುತ್ತಿದ್ದ ಮಕ್ಕಳು ಓಡೋಡಿಬಂದರು. ದೀದಿಮಾ, ಬಾಯಿಮಾ ಅಂತ ಕೂಗುತ್ತಾ..ಅವರಿಬ್ಬರು ಆ ಮಕ್ಕಳೊಂದಿಗೆ ಮಗುವಾದರು. ಅಂದು ಸಂಜೆ ಅವರ ಕೊಠಡಿಗೆ ನನ್ನ ಕರೆದ ದೀದಿಮಾ - ಹೇಳು ಬೇಟೀ ಯಾಕೆ ಹಾಗೆ ಮಾಡಲಿಕ್ಕೆ ಹೋದೆ - ಅಂತ ಕೇಳಿದರು. ಯಾರು ಕೇಳಿದರೂ ಹೇಳಬಾರದೆಂದುಕೊಂಡಿದ್ದೆಲ್ಲ ಮರೆತುಹೋಯಿತು.

ನನ್ನ ಹಳವಂಡಗಳನ್ನ ಬಿಚ್ಚಿಟ್ಟೆ. ಹೇಗೆ ಎಷ್ಟು ಪ್ರೀತಿಯ ಅಪ್ಪ ಅಮ್ಮನ ಪ್ರೀತಿಗೆ ಬೆನ್ನು ತೋರಿ ನಯವಂಚಕನ ಬಲೆಗೆ ಬಿದ್ದೆ. ಪ್ರೀತಿ ತೋರಿದ ಜೀವಗಳ ಸಲಹೆಯನ್ನ ಹೇಗೆ ಕಾಲಲ್ಲೊದ್ದೆ? ಅವನ ಬೆನ್ನ ಹಿಂದೆ ಹೇಗೆ ನನ್ನ ಮನಸ್ಸು ಆಳಸುಳಿಯೊಳಗಿಳಿದಂತೆ ಹೊರಟುಬಿಟ್ಟಿತು. ಎಲ್ಲ ಓದು, ಕೆಲಸ, ಜವಾಬ್ದಾರಿಯ ಮರೆತು ಅವನ ಸೋಗಿಗೆ ಹೇಗೆ ಮರುಳಾದೆ. ಅವನ ಬಯಕೆಯ ಗಾಳಕ್ಕೆ ನನ್ನ ಪ್ರೀತಿಮೀನು ಹೇಗೆ ಸಿಕ್ಕಿ ನುಲಿದಾಡಿತು ಮತ್ತು ನನ್ನ ಈ ಎಲ್ಲ ತಿಕ್ಕಲುತನವನ್ನೂ ನುಣ್ಣಗೆ ನೆಕ್ಕಿ ನೀರು ಕುಡಿವಂತೆ ಅವನು ಹೇಗೆ ಉಲ್ಟಾ ಹೊಡೆದ, ಮುಖ ಮೇಲೆತ್ತಿ ಬದುಕುವ ಆಸೆ ಪಟ ಹೇಗೆ ಪಲ್ಟಿಯಾಗಿ ಬಿದ್ದು ಚಿಕ್ಕಚೂರಾಯಿತು ಎಲ್ಲ ಹೇಳಿದೆ..ಇಷ್ಟೆಲ್ಲ ಆಗಿ ಅಪ್ಪ ಅಮ್ಮನ ಹೊಟ್ಟೆಗೆ ಬೆಂಕಿ ಸುರಿದು ನಾನು ಬದುಕಬೇಕಾ, ತಿರುಗಿ ಹೋಗಬೇಕಾ, ನಾನು ಮಾಡಿದ್ದೇ ಸರಿ ಅಲ್ವಾ.. ಈಗೇನು ಮಾಡಲಿ ನಾನು ಹೇಳಿ ಅಂತ ಮಾತು ಮುಗಿಸಿದೆ.

ಒಂದೈದು ನಿಮಿಷ ಮಾತಾಡಲಿಲ್ಲ. ಎದ್ದು ಕಿಟಕಿಯ ಬಳಿ ಹೋಗಿ ನಿಂತು ನನ್ನ ಕರೆದರು. ಪಕ್ಕಕ್ಕೆ ಹೋದವಳಿಗೆ ಅಲ್ಲಿ ಅಂಗಳದಲ್ಲಿ ಕಣ್ಣಾಮುಚ್ಚೆ ಆಡುತ್ತಿದ್ದ ಪುಟಾಣಿಗಳಲ್ಲಿ ಬಾಯ್ ಕಟ್ ಮಾಡಿಕೊಂಡು ಗುಂಡುಗುಂಡಗೆ ಇದ್ದವಳನ್ನ ತೋರಿ ಹೇಳಿದರು - ಅವಳು ಆಶಾ, ಅಮ್ಮ ಅಪ್ಪ ಮೀರತ್ತಿನ ಹಳ್ಳಿಯೊಂದರಲ್ಲಿ ಜೀತದಾಳುಗಳು. ಎಂಟು ವರ್ಷದ ಇವಳನ್ನ ಚಂಡೀಗರದ ಶ್ರೀಮಂತನಿಗೆ ಮದುವೆಗೆ ತಯಾರಿ ಮಾಡಿದ್ದರು. ಅಲ್ಲಿನ ಗ್ರಾಮಸೇವಾ ಸಂಘದ ಸಹಾಯಕಿಯಿಂದ ಆಗಬಹುದಾಗಿದ್ದ ಅನ್ಯಾಯ ತಪ್ಪಿ ಇವಳು ಸುರಕ್ಷಿತ ಬೆಳವಣಿಗೆಯಲ್ಲಿ ಬೆಳೆಯುವ ಮಗು. ಅವರಪ್ಪ ಅಮ್ಮ ಅತ್ತು ಕರೆದು ಮಾಡಿದರು. ನಮಗೆ ಓದಿಸೋಕ್ಕಾಗಲ್ಲ, ತುತ್ತಿಗೇ ಕಷ್ಟಪಡುವ ಜನ ನಾವು ಓದಿಸಿ ಮುಂದೆ ತರುವ ಚೈತನ್ಯ ಇಲ್ಲವೆಂದು. ನಮ್ಮ ಸಂಸ್ಥೆ ಜೊತೆಯಾಯಿತು. ಇವತ್ತು ೪ನೇ ತರಗತಿ ಓದುವ ಈ ಪುಟಾಣಿ ಕ್ಲಾಸಿಗೇ ಫಸ್ಟ್. ಚಂದ ಹಾಡುವ ಇವಳು ಇಂಡಿಯನ್ ಐಡಲ್ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಇನ್ನೊಂದೆರಡು ತಿಂಗಳಲ್ಲಿ ಭಾಗವಹಿಸುತ್ತಾಳೆ. ಅವಳ ಕಣ್ಣಿನ ಹೊಳಪು ನೋಡು ಅದನ್ನ ನೋಡ್ತಾ ಇದ್ದರೆ ಅವಳ ನೋವಿನ ಕತೆ ನೆನಪಾಗುತ್ತಾ?

ಅಲ್ಲಿ ಮೂಲೆಯಲ್ಲಿ ದೊಡ್ಡವಳ ಹಾಗೆ ಕೂತುಕೊಂಡು ಎಲ್ಲರೂ ಗಲಾಟೆ ಮಾಡದ ಹಾಗೆ ಆಟವಾಡಿಸುತ್ತಿರುವ ಆ ಹುಡುಗಿ ನೋಡು. ವಸಂತಿ - ಕಾನ್ಪುರದ ಹಳ್ಳಿಯವಳು. ತುಂಬ ಬಡತನದ ಮನೆಯ ಅಪ್ಪ ಅಮ್ಮ ಊರಿನ ಜಮೀನ್ದಾರೀ ಅಟ್ಟಹಾಸಕ್ಕೆ ಬಲಿಯಾದರು. ಗಂಡನನ್ನು ಕೊಂದ ಜಮೀನ್ದಾರನ ವಿರುದ್ಧ ಕೇಸು ಹಾಕಿದ ಹೆಂಡತಿಯನ್ನ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಕೊಂದರು. ಆಟವಾಡಲು ಹೋಗಿದ್ದ ಮಗು ವಸಂತಿ ಮನೆಗೆ ಬಂದು ಕಂಗಾಲಾಗಿದ್ದರೆ ಅಲ್ಲಿನ ಸ್ವಸಹಾಯ ಮಹಿಳಾ ಮಂಡಲ ರಕ್ಷಿಸಿ ನಮಗೆ ತಂದುಕೊಟ್ಟರು. ಅವಳು ಈಗ ಏಳನೇ ತರಗತಿ. ಚೆನ್ನಾಗಿ ಓದುತ್ತಾಳೆ. ಭಾಷೆಗಳನ್ನು ಚೆನ್ನಾಗಿ ಮಾತಾಡುವ ಇವಳಿಗೆ ಭಾಷಾ ಶಾಸ್ತ್ರ ಕಲಿಯುವಾಸೆ. ಇವರಿಬ್ಬರೇ ಏನಲ್ಲ ಇಲ್ಲಿರುವ ಎಲ್ಲ ಪುಟ್ಟ ಮಕ್ಕಳ ಹಿಂದೂ ಒಂದೊಂದು ಗಾಢ ನೋವಿನ ಹಿನ್ನೆಲೆ. ಹಾಗೇ ಬಿಟ್ಟರೆ ಹೊಸಕಿಹೋಗಬಹುದಾಗಿದ್ದ ಈ ಹೂಗಳಿಗೆ ಚೂರೇ ಚೂರೂ ಜೊತೆಕೊಟ್ಟಿದ್ದಕ್ಕೆ ಅವರ ಕಲಿಕೆಗೆ ದಾರಿಯಾಗಿದ್ದಕ್ಕೆ ಹೇಗೆ ಹೊರಗಿನ ಎಲ್ಲ ನೋವು ಒತ್ತಡಗಳನ್ನು ಅದುಮಿ ಮೇಲೆ ಚಿಮ್ಮಿದ್ದಾರೆ ನೋಡಿದೆಯಾ? ಅವರ ನೋವು ಕಲಿಸಿದ ಪಾಠ ತುಂಬ ದೊಡ್ಡದು.

ಇಗೋ ಇಲ್ನೋಡು ಈ ಫೋಟೋ ಹೇಗನ್ನಿಸ್ತದೆ ನಿಂಗೆ? - ಒಂದು ಫ್ರೇಮ್ ಹಾಕಿದ ಕಪ್ಪುಬಿಳುಪು ಫೋಟೋ ಕೊಟ್ಟರು. ಐದು ನಗೆಮುಖಗಳು. ಅಪ್ಪ ಅಮ್ಮ ಮತ್ತು ಮೂವರು ಮಕ್ಕಳು. ಅರೇ ಇದೇನು ಅಮ್ಮ ದೀದಿಮಾನೆ.. ನೀವೇ ಅಲ್ಲವಾ...ಅವರನ್ನೇ ನೋಡಿದೆ.

ಸದಾ ಕಿರುನಗೆಯಿಂದ ಮಿನುಗುವ ಆ ಕಣ್ಣುಗಳು ಇದ್ದಕ್ಕಿದ್ದಂತೆ ಬ್ಲಾಂಕಾಗಿ ಹೋದವು. ನನ್ನ ಕೇಳು ಅಂತ ಉಬ್ಬಿ ನಿಂತಿರುತ್ತಿದ್ದ ಹಣೆಯ ಮೇಲೆ ಪುಟ್ಟ ಪುಟ್ಟ ನಿರಿಗೆಗಳು. ಮುದ್ದಾದ ಮುಖ ಬಾಡಿದ ಹಾಗೆ. ಅದು ನನ್ನದಾಗಿದ್ದ ಕುಟುಂಬ. ೮೪ ಡಿಸೆಂಬರ್ ಮೂರರ ಚುಮುಚುಮು ಚಳಿಯ ಬೆಳಗಿನಲ್ಲಿ ಧೂಳೀಪಟವಾಗಿ ಹೋಯಿತು. ಯೂನಿಯನ್ ಕಾರ್ಬೈಡ್ ಎಂಬ ಅನ್ನ ಹಾಕಿದ ಕಂಪನಿಯೇ ನನ್ನೆಲ್ಲವನ್ನೂ ಕಸಿದುಕೊಂಡ ರಾಕ್ಷಸನಾಯಿತು. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಗಂಡ ಮನೆಗೆ ಬರಲಿಲ್ಲ. ಮಕ್ಕಳು ಕಣ್ಣುರಿ ಎದೆನೋವೆಂದು ಮಲಗಿದವರು ಒಬ್ಬೊಬ್ಬರಾಗಿ ಭೀಕರ ನೋವು ರೋಗಕ್ಕೆ ತುತ್ತಾಗಿ ಒಂದು ವರ್ಷದಲ್ಲೇ ಸತ್ತು ಹೋದರು. ಎಲ್ಲ ಮೀಥೈಲ್ ಐಸೋಸೈನೇಟ್ ಎಂಬ ವಿಷಾನಿಲ ಮತ್ತು ಬೇಜವಾಬ್ದಾರಿ ಕಂಪನಿಯೊಂದರ ಕಾರಣದಿಂದ. ನಂಗೆ ಜೀವನವೇ ರೋಸಿಹೋಗಿ ಬಿದ್ದು ಸಾಯೋಣವೆಂದು ಮನೆಯಿಂದ ಓಡಿಬಂದೆ. ಮನೆಯೆನ್ನುತ್ತಾರಾ ಅದನ್ನ? ಇಡೀ ಊರಿಗೆ ಊರೇ ಸ್ಮಶಾನವಾಗಿ ಹೋಗಿತ್ತು.

ಒಂದೇ ಸಲಕ್ಕೆ ಸಾವಿರಗಟ್ಟಲೆ ಜನಸತ್ತು ಹೋದರು. ದಿನಾ ದಿನಾ ಒಂದೊಂದು ಪರಿಚಯದ ಮನೆಯಲ್ಲಿ ಸಾವಿನ ಆಲಾಪ. ಬದುಕುಳಿದವರ ಕತೆ ಕೇಳುವುದು ಬೇಡ ಹೆಸರು ಗೊತ್ತಿಲ್ಲದ ನೂರು ರೋಗಗಳು, ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖ.. ಹುಚ್ಚು ಹುಚ್ಚೇ ಹಿಡಿಯುವಂತಾಗಿತ್ತು ನನಗೆ. ಅವರ ದನಿಯ ಕಂಪನ ನನಗೆ ಗೊತ್ತಾಗುವಷ್ಟಿತ್ತು. ಎರಡು ವರ್ಷಗಳ ನಂತರವೂ ಪರಿಹಾರ ಬರಲಿಲ್ಲ. ಬದುಕು ನಿರಾಶ್ರಿತರ ಕ್ಯಾಂಪಿನಲ್ಲಿ ದಿನದೂಡುತ್ತಿತ್ತು. ಅಲ್ಲಿ ಇನ್ಯಾರೋ ತಲೆಹಿಡುಕರು. ಬೆಂದಮನೆಯಲ್ಲೇ ಗಳಹಿರಿಯುವವರು. ರೋಸಿದ ಬದುಕು ಸಾಕಾಗಿ ಹೋಯಿತು.

ಹೀಗೇ ತಳ್ಳಿದ ದಿನಗಳ ಕೊನೆಗೆ ಒಬ್ಬ ದಯಾಳು ಮಹಿಳೆ ಸಿಕ್ಕಿದರು. ನನಗೆ ನರ್ಸಿಂಗ್ ಗೊತ್ತಿತ್ತು. ಬಾ ಅಂತ ಕರೆದುಕೊಂಡು ಹೋದವರು ದೂರದ ಜಬ್ಬಲ್ ಪುರದಲ್ಲಿ ನಿರ್ಮಿಸಿದ್ದ ಕ್ಯಾಂಪಿಗೆ ಸೇರಿಸಿದರು. ಅಲ್ಲಿ ಈ ವಿಷಾನಿಲ ದುರಂತಕ್ಕೆ ಸಿಕ್ಕಿ ಮನೆ, ಜನ, ಆರೋಗ್ಯ ಕಳೆದುಕೊಂಡು ನರಳುತ್ತಿದ್ದ ಜನರ ಶುಶ್ರೂಷೆ ಮಾಡಬೇಕಾಗಿತ್ತು. ಇನ್ನೊಬ್ಬರ ನೋವೊರೆಸುತ್ತ ನನ್ನ ನೋವು ಸಹನೀಯವಾಯಿತು. ನಮಗೆಲ್ಲ ನಮ್ಮ ನಮ್ಮ ದುಃಖಗಳೇ ದೊಡ್ಡದಾಗಿ ಭೂತದಂತೆ ಕಾಡುತ್ತವೆ. ಆದರೆ ಒಂದು ಗಳಿಗೆ ಸುಮ್ಮನೆ ನಿಂತು ಸುತ್ತ ನೋಡು - ನಿರ್ಗತಿಕರು, ಓದಿಲ್ಲದವರು, ಆರೋಗ್ಯವಿಲ್ಲದವರು, ಕಣ್ಣು, ಕೈ ಕಾಲಿಲ್ಲದವರು, ಬುದ್ಧಿಮಾಂದ್ಯರು, ತಮ್ಮದಲ್ಲದ ತಪ್ಪಿಗೆ ಬದುಕಿನ ವ್ರಣವನ್ನು ಹೊತ್ತು ತಿರುಗುವವರು..
ನಮ್ಮಂತ ಸೋತು ನಿಂತವರ ಜೊತೆಯೂ ಆಶ್ರಯವೆನ್ನಿಸುವಷ್ಟು ಸಹಾಯ ಬೇಕಾದವರು ಎಲ್ಲಿ ನೋಡಿದರೂ ಕಾಣಸಿಗುತ್ತಾರೆ.

ನನ್ನ ಆರೋಗ್ಯ, ಓದು, ಸಿಕ್ಕ ಚಂದದ ಬಾಲ್ಯ, ಕೆಲವೇ ವರ್ಷಗಳಾದರೂ ಉಂಡ ಕುಟುಂಬ ಜೀವನದ ನೆಮ್ಮದಿ ಇವೆಲ್ಲ ನನ್ನಲ್ಲಿ ಎಂತಹ ಕಷ್ಟವನ್ನೂ ಎದುರಿಸಿ ನಿಲ್ಲುವ ಬದುಕನ್ನ ಪ್ರೀತಿಸುವ ಸಹನೆ ಬೆಳೆಸಬೇಕು ಅಲ್ಲವಾ? ಕಷ್ಟದಲ್ಲಿ ತೆವಳುತ್ತಿರುವವರಿಗೆ ಹುಲ್ಲುಕಡ್ಡಿಯೇ ಆದರೂ ಬಯಸಿದ ಆಸರೆ ಕೊಡಲಾಗದಾ? ಐದಾರು ವರ್ಷಗಳು ಆ ಕ್ಯಾಂಪಲ್ಲಿ ಕಳೆದ ಅನುಭವ ನನ್ನ ಬದುಕನ್ನ ತಿದ್ದಿತು. ರೋಸಿಹೋಗಿದ್ದ ಬದುಕು ನೂರೆಂಟು ಜೀವಗಳಿಗೆ ತಂಪು ನೆರಳನ್ನು ಕೊಟ್ಟ ಪವಾಡ ನೋಡಿದವಳಿಗೆ ಇನ್ನೂ ಏನೇನು ಮಾಡಬಹುದೆನ್ನುವ ಉಮೇದು ಹುಟ್ಟಿತು.

ಅಷ್ಟರಲ್ಲಿ ಪರಿಚಯವಾಯಿತು ನನ್ಹಿ ಕಲಿ ಅನ್ನುವ ಈ ಸಂಸ್ಥೆ. ದಯಾಳುವಾದ ಅದೃಷ್ಟವಂತರು ಕೊಡಮಾಡಿದ ದೇಣಿಗೆಯಲ್ಲಿ ಒಂದೊಂದೇ ಪುಟ್ಟ ಹೂವಿಗೆ ನೀರೆರೆದು, ಮಣ್ಣೂಡಿ, ಕೋಲು ಕೊಟ್ಟು ನಿಲ್ಲಿಸುವ ಕೆಲಸ. ಒಂದೊಂದು ಮಗುವಿನ ವರ್ಷದ ಖರ್ಚು ಸಾವಿರ ಚಿಲ್ಲರೆ ಬರುತ್ತದೆ. ಶಾಲೆಗೆ ಕಳಿಸಲಾರದ ಬಡ ತಂದೆತಾಯಿಗಳನ್ನು ಗುರುತಿಸಿ, ಅವರಿಗೆ ತಿಳಿಹೇಳಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸುವ ಕೆಲಸ. ಅವರ ಶಾಲೆಯ ವೆಚ್ಚವನ್ನ ವರ್ಷಪೂರ್ತಿ ಬರಬಹುದಾದ ಇತರೇ ವೆಚ್ಚವನ್ನ ನನ್ಹಿ ಕಲಿ ನೋಡಿಕೊಳ್ಳುತ್ತದೆ. ಒಬ್ಬ ದಯಾಳು ಒಂದು ಮಗುವನ್ನು ಸ್ಪಾನ್ಸರ್ ಮಾಡಬಹುದು. ವರ್ಷಕ್ಕೆ ಅಥವಾ ಹಲವರ್ಷಗಳಿಗೆ. ನನ್ಹಿ ಕಲಿ ಆ ಮಗು ಸರಿಯಾಗಿ ಶಾಲೆಗೆ ಹೋಗಿ ಓದಿ ಬರೆದು, ಓದು ಮುಂದುವರಿಸುವಂತೆ, ವಿದ್ಯಾವಂತೆಯಾಗುವಂತೆ ನೋಡಿಕೊಳ್ಳುತ್ತದೆ. ಹೀಗೇ ದೇಶದ ತುಂಬಾ ಮತ್ತು ದೇಶದ ಹೊರಗೂ ಇರುವ ಪುಣ್ಯವಂತರು ಜೀವನಪ್ರೀತಿಯವರು ಕೊಟ್ಟ ಸಹಕಾರ ಮತ್ತು ಸಹೃದಯತೆಯಿಂದ ಇವತ್ತು ನಮ್ಮ ಹಳ್ಳಿಗಳ ನೂರಾರು ಹೆಣ್ಣು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ತೀರಾ ಬಡತನ ಕಷ್ಟ ಮತ್ತು ಅನ್ಯಾಯಕ್ಕೆ ಸಿಲುಕಿದವರಿಗೆ ಅನಾಥರಿಗೆ ಆಶ್ರಯವಾಗಿ ಈ ಉದಯಮಹಲ್ಲಿದೆ. ಉಳಿದೆಲ್ಲ ಮಕ್ಕಳೂ ಅವರವರ ಮನೆಯಲ್ಲಿದ್ದೇ ಶಾಲೆಗೆ ಹೋಗುತ್ತಾರೆ. ನಮ್ಮ ಸ್ವಯಂಸೇವಕರು, ಅಲ್ಲಲ್ಲಿ ಇದ್ದು ಅವರ ದೇಖರೇಖೆ ನೋಡುತ್ತಾರೆ.

ಈಗ ಹೇಳು ನೀನು ಸಾಯಬೇಕಿತ್ತಾ? ಅವನ್ಯಾವನೋ ತಲೆಕೆಟ್ಟವನು ನಿನ್ನ ಭಾವನೆಗಳ ಜೊತೆ ಆಟಾಡಿದ ಅಂತ, ಬದುಕೇ ಬೇಡಾ ಅಂತ ತಳ್ಳಿ ನಡೆಯುವ ಧಾರ್ಷ್ಟ್ಯವೇನು? ನಿನ್ನ ಸಮೃದ್ಢ ಬಾಲ್ಯ, ಕಲಿತ ಓದು, ತುಂಬು ಆರೋಗ್ಯವನ್ನ, ಒಂದು ಪುಟ್ಟ ಹೂವನ್ನೂ ಅರಳಿಸದೆ ನಗಿಸದೆ ಯಮುನೆಯ ಪಾಲು ಮಾಡಹೊರಟಿದ್ದೆಯಲ್ಲಾ - ಎತ್ತಿ ಬೆಳೆಸಿದ ನಿನ್ನಪ್ಪ ಅಮ್ಮನಿಗೆ ತೋರಿದ ಅತಿ ಹೇಯ ಅವಮರ್ಯಾದೆಯಲ್ಲವಾ ಇದು? ನಿನಗೆ ಕೊಟ್ಟ ಬದುಕನ್ನ ತಿರಸ್ಕರಿಸಿ ನಡೆಯುವುದ್ಯಾವ ಮಹಾ ಘನಂದಾರಿ ಕೆಲಸ. ಯಾರ್ ಬೇಕಾದ್ರೂ ಮಾಡಬಹುದು. ಆ ನೋವನ್ನ ಮೆಟ್ಟಿ ನಿಂತು ಇನ್ನೊಬ್ಬರ ನೋವಿಗೆ ಹೆಗಲು ಕೊಡುವ ಕೆಲಸವಿದೆಯಲ್ಲಾ ಅದು ದೇವರ ಕೆಲಸ. ಪ್ರೀತಿಯಿಂದ ಆದರಿಸಿದ ಬದುಕಿನ ಕೆಲವೇ ಘಳಿಗೆಗಳಿಗೆ ನಾವು ಸಲ್ಲಿಸಬಹುದಾದ ಒಂದು ಪುಟ್ಟ ಕೃತಜ್ಞತೆ. ನಿನ್ನ ಒಂದು ನಗು, ಒಂದು ಬೆಚ್ಚನೆ ಸ್ಪರ್ಶ ಯಾವ ನೊಂದ ಜೀವದ ಮನವನ್ನ ಅರಳಿಸುತ್ತದೆಯೋ ಯಾರು ಬಲ್ಲರು?

ನನ್ನ ಕಣ್ಣಲ್ಲಿ ನೀರಿಳಿಯುತ್ತಿತ್ತು. ಹತ್ತಿರ ಹೋಗಿ ಅವರನ್ನು ಬಳಸಿಕೊಂಡು ಹೇಳಿದೆ. ದೀದಿಮಾ ನೀವು ನನ್ನ ದಾರಿಗೆ ಬೆಳಕಾದಿರಿ. ಊರಿಗೆ ಹೋದವಳು ನನ್ಹಿ ಕಲಿಯರನ್ನು ಸ್ಪಾನ್ಸರ್ ಮಾಡುತ್ತೇನೆ. ಅಷ್ಟೆ ಯಾಕೆ ನಮ್ಮೂರಿನ ಹಳ್ಳಿಗಳಲ್ಲಿ ನಿಮ್ಮ ನನ್ಹಿ ಕಲಿಯ ಶಾಖೆ ತೆರೆಯೋಣ. ನನ್ನ ನೋವಿನ ಹೊರತಾಗಿಯೂ ಇರುವ ಬದುಕಿನ ನೂರು ಸವಿಚಿತ್ರಗಳನ್ನ, ಪುಟ್ಟ ಪುಟ್ಟ ಹೂಗಳ ಅರಳುವಿಕೆಯನ್ನ ಅನುಭವಿಸುತ್ತ ಬಂದ ಬದುಕನ್ನು ಪ್ರೀತಿಯಿಂದ ಬದುಕುತ್ತೇನೆ. ಮಾತಾಡಲು ಇನ್ನೇನಿದೆ.. ಅಲ್ಲಿ ಹೂಗಳಿವೆ. ನಾನು ನೀರುಣಿಸಬೇಕಿದೆ.

ದೀದಿಮಾನ ನೀರು ತುಂಬಿದ ಕಣ್ಣಲ್ಲಿ ಹೊಸಹೊಳಪು.

ಊರಿಗೆ ಬಂದವಳು ತೋಟವನ್ನೇ ಮಾಡಿದೆ. ನಾನೊಬ್ಬಳೇ ಅಲ್ಲ ಎಲ್ಲ ಸ್ನೇಹಿತರಿಗೂ ಹೇಳಿದೆ.
ಹತ್ತು ವರ್ಷಗಳ ಕೃಷಿಯಲ್ಲಿ ಜೊತೆಯಾಗಿ ಬಂದು ಸಂಗಾತಿಯೂ ಆದವನು ಸುಧಾಂಶು ಎಂಬ ಸುಹೃದ. ಮುದ್ದು ಮಗ ಸುಹಾಸ ಇದ್ದಾನೆ. ಇವತ್ತು ಅವನಿಗೆ ಜೊತೆಯಾಗಿ ಬೆಳೆಯಲು, ಬೆಹ್ರಾಮ್ ಪುರದ ಕಲಿ - ಸುಹಾನೀ ಬರುತ್ತಿದ್ದಾಳೆ.

ಮೇರೇ ಘರ್ ಆಯೀ ಏಕ್ ನನ್ಹಿ ಪರೀ - ಅಂತ ಅವಳು ಬಂದ ಕೂಡಲೇ ಹಾಡಲು ಹೇಳಿಕೊಡುತ್ತಿದೇನೆ ಸುಹಾಸನಿಗೆ..

ಈ ಲಿಂಕಿನಲ್ಲಿ ನನ್ಹಿ ಕಲಿಯ ಹೆಚ್ಚಿನ ವಿವರವಿದೆ. http://www.ashanet.org/projects/project-view.php?p=729 ನೋಡಿ ನೀವೂ ಹೂವರಳಿಸಬಹುದು.