Thursday, August 1, 2013

ಹೊಸ್ತಿಲು

ಹೊಸ್ತಿಲು ದಾಟುತ್ತಿರುತ್ತೇನೆ
ನಡೆದಷ್ಟೂ ಸಾರಿ,
ನಡೆದಷ್ಟೇ ದಾರಿ.
ಹೆಜ್ಜೆ ದಣಿದಾಗ
ಸುದೂರದಿ ಮರದ ನೆರಳು,
ಅಷ್ಟರ ಮಟ್ಟಿನ ಪುಣ್ಯ.

ನೆರೆ ಇಳಿದು
ಕೆಸರು ಕಳೆದು
ಬೇಸಗೆಯಲ್ಲಿ ಬೆಂದು
ಬಿರುಕಾದ
ಕಣಿವೆಯ ಮಡಿಲ ತುಂಬ
ಸಾವಯವ ಕೃಷಿ.
 
ಮುಳ್ಳು ಚುಚ್ಚಿದ ಕಾಲು
ಕಿತ್ತಿಟ್ಟರೆ
ಮೆತ್ತಗೆ ಅಪ್ಪುವ ಹುಲ್ ಹಾಸು
ಕಂಬಳಿ ಹುಳು ತಾಗಿ
ತುರಿಸುತ್ತ ನಡೆವಾಗ
ಹೂವಿಂದ ಹೂವಿಗೆ
ಹಾರುವ ಭೃಂಗ
ನೋಡುತ್ತ
ಕಾಲ ಕಳೆದಿದ್ದು
ಗೊತ್ತಾಗುವುದೇ ಇಲ್ಲ
ಕೂಡಿದ್ದೇನು ಅಂತಲೂ ಗೊತ್ತಾಗಲಿಲ್ಲ
ಕೊಟ್ಟಿದ್ದು ಮರೆಯುವಳಿಗೆ
ಇಸಕೊಳ್ಳಲು ಮುಜುಗರ.

ವರುಷಕ್ಕೊಮ್ಮೆ ದಾಟುವ ಹೊಸ್ತಿಲು
ಎಡವುತ್ತದೆ.
ಕಣ್ಣು ತುಂಬುವಾಗ
ನೆನಪೆಲ್ಲ ಮಸುಕು.

(ಕಣ್ಣೀರೆ ಅಸ್ತ್ರವೆಂದಿದ್ದು ಇದಕ್ಕೇ ಇರಬಹುದು.)

ನಗುವಾಗ ನಕ್ಕು
ಅಳುವಾಗ ಅತ್ತಿದ್ದರೆ
ಅರ್ಧ ದಾರಿ ಮುಗಿಯಿತು
ಎಂದರು ಕವಿ
ನಗುವಾಗ ನಗಲಾಗದೆ
ಅಳುವಾಗ ಅಳಲಾಗದೆ
ಅದಲು ಬದಲಾದವರ
ದಾರಿ ಮುಗಿಯುವುದೆ
ಬರಿದೆ ಸಾಗುವುದೆ?!

ನಡೆದಷ್ಟೂ ದಾರಿ
ನಡೆದಷ್ಟೇ ದಾರಿ.
ಹೊಸ್ತಿಲು ದಾಟುತ್ತಿರುತ್ತೇನೆ.
ಎಡವಿದಾಗೆಲ್ಲ
ಒಂದು ಭಾವಸ್ರೋತ,
.....ಕವಿತ.
.....ಅನುಗ್ರಹೀತ.

[ಕಂಬನಿ ಬದುಕು.
ಕವಿತೆ ಕರವಸ್ತ್ರ.]


("ಅಳುವಾಗ ಅತ್ತು ನಗುವಾಗ ನಕ್ಕು ಮುಗಿದಿತ್ತು ಅರ್ಧ ದಾರಿ" ಮತ್ತು "ಕಂಬನಿ ಬದುಕು ಕವಿತೆ ಕರವಸ್ತ್ರ" ಇವು ಕೆ.ಎಸ್.ನ ಅವರ ಕವಿತೆಸಾಲುಗಳು.)