Friday, October 17, 2014

ಮರಗಟ್ಟು!

ಯಾವತ್ತೋ ಯಾರೋ
ಯಾವ ಯೋಜನೆಗೋ
ಬೀಜವೆಸೆದ ನೆನಪು,
ಬಿಸಿಲು ಕುಗ್ಗಿ ಮೋಡ ಕಟ್ಟಿ
ಮಳೆ ಸುರಿದ ತಂಪು,
ಒಳಗಿನ ಕುದಿ ಕಳೆದು
ಮೊಳಕೆಯೆದ್ದು ಈಗಷ್ಟು
ವರ್ಷ
ಬೀದಿ ಬದಿಯ ಕುರಿ-ದನ
ಆಡು ಮಕ್ಕಳ ಕರುಣೆಯಲಿ
ಚಿಗುರು ರೆಂಬೆಯಾದ ಸೊಂಪು,
 
ಪಕ್ಕದ ರಸ್ತೆ ಅಗಲವಾಗುವಾಗ
ಬೊಡ್ದೆ ಕತ್ತರಿಸಿದ ಹಾಗೆ
ಅಳಿದುಳಿದ ಕೊರಡಲ್ಲಿ
ಮತ್ತೆ ಚೈತ್ರ
ಮರಳಿದ ಹಾಗೆ
ಈ ಸಲದ ಯುಗಾದಿಯ
ಬಿಸಿಲು ಹೊಡೆಯಲು
ಹಸಿರು ನೆರಳು ಕೊಡೆ ಸೂಸಿದೆ
ನೆಳಲ ಕೆಳಗೆ ನಿಲ್ಲಲು
ಗಾಳಿಯೊಂದು ಸುಯ್ದರೆ
ಮತ್ತೇರಿಸುವ ಹೊಂಗೆ ಹೂವಿನ ಚಂದಸ್ಸು!
ಹುಲು ಮನುಜನಿಗೇನು,
ಮಹಾನಗರದ ಮಾಲ್ ಭರಿತ ಡಿಯೋಡರೆಂಟಲ್ಲಿ
ತುಂಬಿಕೊಂಡ ನಾಸಿಕಗವಿಯಲ್ಲಿ
ಜಾಗವಿದೆಯೋ ಇಲ್ಲವೋ
ಯುಗ ಯುಗಾದಿಗಳಿಂದ
ವರಕವಿಗಳಿಂದ
ಮೈತಡವಿಸಿಕೊಂಡ ದುಂಬಿದಂಡಿಗೆ
ಅದೇ ಮತ್ತು ಮತ್ತೆ ಮತ್ತೆ ಗಮ್ಮತ್ತು!
 
ಕೆತ್ತಿ ಕೆತ್ತಿ ಬಿಟ್ಟರೂ
ಸುತ್ತ ಡಾಮರನ್ನೇ ಇಟ್ಟರೂ
ಹೊಗೆಯೊಂದೇ ನೇವರಿಸಿದರೂ
ಕೆಳಗೆ ನಿಂತು ಮರು ಮಾತಾಡದೇ ನಡೆದರೂ
ಬಿಸಿಲು ಕುಡಿದು ಕುಡಿದೇ
ಚಿಗುರಿ ಚಿಗುರಿ ಹರಡುವ ಮರವೇ
ಹಿರಿಯರೇಕೆ
"ಮರಗಟ್ಟು" ಎಂಬ ನುಡಿಗಟ್ಟು ಬರೆದರು?
 
ಒಂದು ನಲ್ನುಡಿಗೆ
ಮೆತ್ತನೆ ಸ್ಪರ್ಶಕ್ಕೆ
ಒಲವೂಡುವ ನೋಟಕ್ಕೆ
ಕಣ್ಣ ಮಿಂಚಿಗೆ ಹಂಬಲಿಸುವ ಮನವೇ -
ಮರಗಟ್ಟು,
ಕತ್ತರಿಸಿ ಕೊಯ್ಯಿಸಿಕೊಂಡರೇನು
ಆಗಸಕೆ ಮುಖವೆತ್ತು.
ದೊರಗು ಮೈಯ
ಕಾಂಡ ಹೊತ್ತ
ಹಸಿರು ಹಸಿರು ಒಡಲ
ತುಂಬ ಬಿಳಿ ಬಿಳಿ ಮುತ್ತು.