Monday, March 30, 2015

ಜಲದ ಕಣ್ಣು

ಹೊಳೆಯು ಹರಿದೇ ಹರಿವುದು,
ದಂಡೆ ಸಿಕ್ಕದೆಯೂ,
ಒಡ್ಡು ಕಟ್ಟದೆಯೂ,
ತನ್ನ ಪಾತ್ರವ ತಾನೇ ನಿರ್ಮಿಸಿ,
ಹೊಳೆಯು ಹರಿದೇ ಹರಿವುದು.


ಕಲ್ಲು, ಕೊರಕಲು, ಬಯಲು,
ಬರೆದಿಡದ ಹಾದಿ,
ಬೇಡ ಯಾವ ಕೈದೀಪ,
ಹರಿವು ಮುಗಿಯದ ಹಾಗೆ
ಹಳ್ಳ, ತೊರೆ, ನದಿ
ಮೇಲಿಂದ ಧುಮ್ಮಿಕ್ಕುವ ತಡಸಲು,
ಹೊಳೆಯು ಹರಿದೇ ಹರಿವುದು.


ಮರಳ ಮೇಲೆ
ತೆಳುವಾಗಿ ಹರಡಿದ ನೀರಪರದೆ;
ಬಿಸಿಲು ಚುರುಗುಟ್ಟಿ ನೆಲದೊಳಗೆ ಇಂಗಿ
ಒಳಗೊಳಗೇ ಜಿನುಗುವ ಆರ್ದ್ರತೆ;
ಚುಚ್ಚುವ ಕಲ್ಲು ರಾಶಿಗಳನೆಲ್ಲ
ನುಣುಪಾಗಿಸಿ ಸರಿವ ಪೂರ;
ಸುತ್ತಿಬಳಸಿ ಹತ್ತಿ ಇಳಿದು
ಉಸ್ಸೆಂದು ನೋಡುವ ಮುಖಕ್ಕೆ
ಎರಚುವ ಹನಿ ಹನಿ ಆಹ್ಲಾದ ಪಾತ;
ಹೊಳೆಯು ಹರಿದೇ ಹರಿವುದು.


ದೂರದ ಕಡಲು ಎಂದು
ಮುನಿಸಿ ಕೂರುವುದಿಲ್ಲ;
ಬಿಸಿಲ ದಾರಿ ಎಂಬ ಸೆಡವಿಲ್ಲ;
ನೆಳಲು ಹೆಚ್ಚು ಎಂದು ಅಸೌಖ್ಯಗೊಳ್ಳುವುದಿಲ್ಲ;
ಈ ಬಾರಿ ಮಳೆ ಕಡಿಮೆ,.. ಸರಿ ಪುಟ್ಟ ಪಾತ್ರ;
ಈ ಬಾರಿ ಬಿಸಿಲು ಜಾಸ್ತಿ... ತುಸು ಮೆಲ್ಲ ನಡೆ;
ಈ ಬಾರಿ ಅಧಿಕ ಮಾನ್ಸೂನು..ಭೋರ್ಗರಿಸಿ ಹೆಡೆ;
ಹೊಳೆಯು ಹರಿದೇ ಹರಿವುದು.


ಈ ಸಂಲಗ್ನಕ್ಕೆ --
ಪಂಚಾಂಗ ಶುದ್ಧವಿರಬೇಕು,
ಒಳಗಿನ ಒರತೆಯ ಕಣ್ಣು ಬಿಡಿಸಿರಬೇಕು,
ಅಷ್ಟು ಸಾಕು!
ಹೊಳೆಯು ಹರಿದೇ ಹರಿವುದು.
ಕಡಲನ್ನ ಕೂಡಿಯೇ ಸಿದ್ಧ-
ಇನ್ನೊಂದು ಮಹಾನದಿಯನ್ನೇ ಸೇರಿಯಾದರೂ...