Friday, December 4, 2009

ಝೆಹರ್ ಜೋ ತೂನೇ ದಿಯಾ ಥಾ ವೋ ದವಾ ಹೋ ಬೈಠಾ..

ಅವತ್ತು ಬದುಕೇ ಬೇಜಾರಾಗಿ ಅಳುತ್ತಾ ಕೂತುಬಿಟ್ಟಿದ್ದೆ. ಮಾತನಾಡಿಸಲು ಬಂದ ಗೆಳೆಯ ಗೆಳತಿಯರು ಏನು ಹೇಳಲಿಕ್ಕೂ ತೋಚದೇ, ಸುಮ್ಮನೆ ಹೆಗಲ ಮೇಲೊಮ್ಮೆ ಮೆತ್ತಗೆ ಒತ್ತಿ, ಕೆನ್ನೆ ತಟ್ಟಿ ಸಪ್ಪಗೆ ಹೊರಟು ಹೋಗಿದ್ದರು. ಅವರಿಗೆ ಗೊತ್ತಿತ್ತು ಈ ಕಣ್ಣೀರನ್ನು ಒರೆಸಬಾರದು ಹರಿಯಲು ಬಿಡಬೇಕು ಅಂತ. ಅದಕ್ಕೇ ಅಲ್ಲವಾ ನನಗೆ ಅವರೆಂದರೆ ಅಷ್ಟು ಪ್ರೀತಿ.
ಅಷ್ಟು ಪ್ರೀತಿಯ ಅವರೆಲ್ಲರಿಗಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸಿದ ನಾನು ಆ ಹೊತ್ತಿನಲ್ಲಿ ಎಲ್ಲ ಕಳೆದುಕೊಂಡು ಮೋಹದ ಬೆಂಕಿಯಲ್ಲಿ ಬೂದಿಯಾಗುತ್ತಿದ್ದೆ. ಕಣ್ಣೀರು ಎಣ್ಣೆಯ ತಲೆಯ ಮೇಲೆ ಹೊಡೆದ ಹಾಗೆ ಉರಿಗಳನ್ನು ಎತ್ತರಕ್ಕೆಬ್ಬಿಸುತ್ತಿತ್ತು.
ನೀನು ನಿನ್ನ ಎಂದಿನ ಉಡಾಫೆಯ ರೀತಿಯಲ್ಲಿ ಹೊರಳು ದಾರ‍ಿಯಲ್ಲಿ ಹೊರಟು ನಿಂತಿದ್ದೆ. ಆ ದಾರಿಯ ಅನತಿ ದೂರದ ತಿರುವಲ್ಲಿ ಇನ್ಯಾವುದೋ ಮನಸ್ಸಿನ ಮಂಟಪ ಎದ್ದು ನಿಂತಿತ್ತು - ಹೊಸ ಕ್ಷಿತಿಜಗಳನ್ನ ತೆರೆದು ನಿಂತ ಹೊರಳು ದಾರಿ.ಹೀಗೆ ಇದ್ದಕ್ಕಿದ್ದಂಗೆ ನೀನು ಹೊರಟು ಹೋಗುತ್ತಾ ಇದ್ದರೆ ನನ್ನ ಎಲ್ಲ ಅವಲಂಬನೆಗಳ ಹಂದರವೂ ಕುಸಿದುಬಿದ್ದಿತ್ತು.
ಭೂಕಂಪವಾಗುವವರಿಗೂ ಎಚ್ಚರವಾಗಿದ್ದರೆ ಬೀಳುತ್ತಿರುವ ಮನೆಯಿಂದ ಓಡಿಬರಲು ಸಮಯವಿರುತ್ತದೇನೋ.ನಾನು ಪೆದ್ದಿ. ನಿನ್ನ ಮನದ ಒಳ ಮೂಲೆಯಲ್ಲಿ ಕೂತು ಬಾಗಿಲು ಹಾಕಿಕೊಂಡು ಕೀಲಿ ಕಳಕೊಂಡು ಬಿಟ್ಟಿದ್ದೆ. ಸಾವರಿಸಿಕೊಂಡು ಏಳುವಷ್ಟರಲ್ಲಿ ಚಂದದ ಉದ್ಯಾನ ಮರುಭೂಮಿಯಾಗಿಬಿಟ್ಟಿತ್ತು.ಬೆಳ್ಳಗೆ ಮಿನುಗುವ ಚಂದಿರ ಹೋಗಿ, ಉರಿದು ಬೀಳುವ ಉಲ್ಕೆ ಉಳಿದಿತ್ತು.

ನನ್ನ ಹುಚ್ಚುತನವೇ ನನ್ನ ಹುಚ್ಚಿಯನ್ನಾಗಿ ಮಾಡಿತು ಅಂದರೆ ಅಲ್ದೆ ಮತ್ತಿನ್ನೇನು ಅಂತೀಯ ನೀನು.
ನಿನ್ನದೇ ಹುಚ್ಚು ನನಗೆ ಎನ್ನುವ ನನ್ನ ಮಾತು ತುಟಿಯವರೆಗೆ ಬಂದಿದ್ದು ನಿನ್ನ ಕುಹಕದ ನಗೆಯನ್ನು ನೋಡಿ ಸಪ್ಪಗಾಗಿ ಬಂದ ಕಡೆಯೇ ಹೋಯಿತು.
ಹೋದರೆ ಹೋಗು ಮತ್ತೆ ಬರುತ್ತೀಯ ನೀನು ಅಂದುಕೊಂಡು ಸುಮ್ಮನುಳಿದೆ.
ಎಷ್ಟು ದೂರ ಹೋದೆ ನೀನು, ಕರೆದರೂ ಕೇಳಿಸದ ತೀರದ ಗುಂಟ ನಿನ್ನ ಹಾದಿ.
ಹೆಜ್ಜೆ ಬೆರೆಸಲೂ ಆಗದ ನನಗೆ ಉಳಿದದ್ದು ಒಳಗುದಿ.
ಸುತ್ತಲ ಜನ ಅಯ್ಯೋ ಪಾಪ ಎಂದು ಹೇಳುತ್ತಾ ನಕ್ಕರು. ಬೇಡವೆಂದರೂ ಮಾಡಿಕೊಂಡೆ ಈಗ ಅನುಭವಿಸು ಎಂಬ ಭಾವ ಮಾತಲ್ಲಿ ಹೊರಬರದ ಹಾಗೆ ನೋಡಿಕೊಂಡರು. ಅಷ್ಟು ಮುತುವರ್ಜಿ.
ಬಿದ್ದವಳ ಮೇಲೊಂದು ಕಲ್ಲು ಹಾಕದೆ ಇರುವುದು ಹೇಗೆಂದು ಸಂಕಟವಾಗಿ ನಗೆಮೊಗ್ಗುಗಳನ್ನೆಸೆದರು.
ನನ್ನ ತಪನೆಯ ಉರಿಯ ವರ್ತುಲ ಹೊಕ್ಕಲಾಗದ ಮೊಗ್ಗುಗಳು ತೊಟ್ಟಿನ ಸಮೇತ ಅರಳದೆಯೆ ಕರಕಲಾದವು.
ಒಳಗೆ ಉರಿ, ಹೊರಗೆ ಬೂದಿ, ಕಣ್ಣಲ್ಲಿ ಉರಿಯುವ ಕೆಂಡ. ಸಂಕಟದ ಸಾಗರಕ್ಕೆ ಒಂದೇ ನದಿ.
ತಣ್ಣಗೆ ಗಾಳಿ ಸುಳಿದಾಗಲೆಲ್ಲ ನನ್ನೊಳಗಿನ ಉರಿ ಮತ್ತಷ್ಟು ಕೆನ್ನಾಲಗೆ ಚಾಚಿತು.
ಹೀಗೆ ಬಿಟ್ಟು ಹೋಗಲೇಬೇಕೆಂದು ಇದ್ದವನು ನನ್ನನ್ನ ಕರೆದುಕೊಂಡು ಬಂದೆ ಯಾಕೆ. ಏನು ಕೇಳಿದರೆ ಏನು ಫಲ. ನಮ್ಮ ಮಧ್ಯೆ ಉಳಿದಿರುವುದು ನಿರ್ವಾತ! ನಾನುಹೇಳಿದ್ದು ನಿನಗೆ ಕೇಳುವುದಿಲ್ಲ. ಏನನ್ನಾದರೂ ಹೇಳುವುದು ನಿನಗೂ ಬೇಕಿಲ್ಲ.

ಒಬ್ಬ ಗೆಳೆಯ, ಒಬ್ಬ ಗೆಳತಿ, ಇನ್ನೊಬ್ಬ ತಮ್ಮ ನನ್ನ ಅಳಲಿನ ಹರಿವಿನುದ್ದಕ್ಕೂ ಸುಮ್ಮನೆ ನಡೆಯುತ್ತ ಬಂದರು. ನಾನು ಅಳು ನಿಲ್ಲಿಸಿ ಅವರೆಡೆಗೆ ನೋಡುವ ದಿನಕ್ಕೆ ಕಾಯುತ್ತಾ! ಇದು ಅರಿವಾದ ದಿನ ಒರೆಸಿಕೊಂಡ ಕಣ್ಣು ಮತ್ತೆ ತೇವಗೊಳ್ಳಲಿಲ್ಲ.

ಏನು ಗೊತ್ತಾ ?ನೀನು ಒಳ್ಳೆಯವನು. ನನ್ನ ಮೇಲೆ ನನಗೇ ನಂಬಿಕೆ ಬೆಳೆದಿದ್ದೇ ನೀನು ಬಿಟ್ಟು ಹೋಗಿದ್ದರಿಂದ. ಅವಲಂಬನೆಗಳನ್ನ ಮೀರಿದ ನನ್ನದೇ ಬದುಕನ್ನ ನಾನು ಕಟ್ಟಿಕೊಂಡಿದ್ದೇ ನೀನು ಇಲ್ಲದೆ ಹೋದದ್ದರಿಂದ.ನನ್ನ ಇವತ್ತಿನ ಖುಶಿಯ ಒರತೆಯೇ ನೀನು ಅವತ್ತು ಉಣಿಸಿದ ದುಃಖ. ನೀನೇನಾದ್ರೂ ಹಾಗೆ ಮಾಡದೆ ಇದ್ದಿದ್ದರೆ ಇವತ್ತು ನಾನು ಬರಿಯ ನೆರಳಾಗಿ ಅಷ್ಟೇ ಇರುತ್ತಿದ್ದೆ. ಸಧ್ಯ . ಇವತ್ತಿಲ್ಲಿ ಕಾರ್ತೀಕ. ವಿಷವೇ ಔಷಧಿಯಾಗುವುದನ್ನ ಗಝಲ್ಲುಗಳಲ್ಲಿ ಮಾತ್ರ ಕೇಳಿದ್ದೆ. ನಿನ್ನ ಕೃಪೆ. ಅದನ್ನೇ ಅನುಭವಿಸುತ್ತಿದ್ದೀನಿ.

ಕೃತಜ್ಞತೆಗಳೊಂದಿಗೆ
-ನವೀನ

ಕೊನೆಯ ಒಂದು ಮಾತು:
ನೀನು ಮೋಸ ಮಾಡಿದೆ ಎಂಬ ಬೇಸರವಿಲ್ಲ ನನಗೆ. ನೀನೂ ಮೋಸ ಮಾಡಿದೆಯಲ್ಲ ಎಂಬ ವಿಷಾದವಷ್ಟೇ.