Wednesday, May 10, 2017

ಇಳಿ-ಕವಿತೆ.

ಹದಿನೆಂಟು ತುಂಬಿದ ಕತ್ತೆ
ಯೂ ಇರಬಹುದು
ಗ್ರೀಕ್ ಚೆಲುವೆ ಆಫ್ರೋದಿತೆ;
ಏರು ಯವ್ವನದ ಕಣ್ಗಳಿಗೆ
ಸುತ್ತೆಲ್ಲ ಹೂ ಹಾಸಿದ
ದಾರಿಯಲಿ ಹೆಜ್ಜೆಯಿಡುವ
ಉನ್ಮತ್ತ ಮೋಹಕತೆ!

ನಿರೀಕ್ಷೆ ಕಳೆದು
ಕೈಗೆ ಸಿಕ್ಕ ನಕ್ಷತ್ರ
ಬಯಸುವ ತಾರೆಯಾಗುವುಳಿವುದೆ ಇಲ್ಲ
ಉದುರಿ ಬಿದ್ದ ಉಲ್ಕೆಯ ಚೂರು.
ಇದು ಚರಿತೆ.

ಬಾಹುಗಳ ಎತ್ತಿ ರೆಕ್ಕೆ ಬಿಚ್ಚಿ
ಹಾರುತಿದ್ದ ಆಪ್ರೋದಿತೆ
ಕುಳಿತಿದ್ದಾಳೆ-
ತೂಕ ಹೆಚ್ಚಿ,
ಸೊಂಟ ಉಳುಕಿ,
ಕಾಲು ಸ್ವಲ್ಪ ನೋವಿದೆ,
ನಗುವ ಅಧರಗಳ
ಬದಿಯ ಆರ್ದ್ರತೆ
ಇಳಿದ ಕಣ್ಬನಿಯ ಕುರುಹ ಹೇಳಿತೆ?
ವಿಷಾದ ತುಳುಕುವ
ಇಳಿ(ಗಾಲದ) ಕವಿತೆ.

Sunday, March 5, 2017

ಪದಕ್ಕಿಳಿಯದ ಕವಿತೆ

ಈ ಗಾಯ
ಇವತ್ತಿನದ್ದಲ್ಲ,
ಇದು ಅಂತಿಂತಹದೂ ಅಲ್ಲ.
ಕಾಣದಂತೆ ಮರೆಸಿ
ಔಷಧಿ ಹಚ್ಚಿ
ಹುಶಾರಾಗಿಸಲು ಸಲ್ಲ.
ಇದು ಕಪ್ಪುಮಣಿಸರಗಳ ಮಧ್ಯೆ
ಹವಳವಾಗಿ ಮೆರೆಯಬೇಕು,
ರಸಿಕೆ ಇಳಿವಾಗ
ಕುರುಳು ತೀಡಬೇಕು,
ಕಣ್ಣ ಬನಿಯು
ಎವೆಯ ತಂತ್ರಗಳಲ್ಲಿ ಹುದುಗಿ
ತುಟಿ ಚೆಲುವಾಗಿ ಅರಳಿ
ನಗುನಗುತ್ತಿರಬೇಕು,
ಹಿಡಿದುಕೊಂಡ ಸೊಂಟ
ಸುಳಿವು ಕೊಡದ ಹಾಗೆ
ಚಿಮ್ ಚಿಮ್ಮಿ ನಡೆದು,
ಬಿಳಿಕೂದಲ ಬೇರಿನ ಮೇಲೆ
ಜೊಂಪೆ ಜೊಂಪೆ ಕಾರ್ಮುಗಿಲು,
ನಡುನಡುವೆ ಹೊನ್ನ ಗೆರೆ.
ಈ ಗಾಯ ಅಂತಿಂಥದ್ದಲ್ಲ
ಈಗೀಗ ಇದನ್ನ ಗಾಯ ಅನ್ನುವುದೂ ಇಲ್ಲ
ಇದೊಂದು ಟ್ಯಾಟೂ
ಹೆಚ್ಚು ಕೆದಕಬಾರದಲ್ಲ,
ಅವರು ಉಪ್ಪು ಸುರಿಯುವುದಕ್ಕೆ
ಇಂಚಿಂಚೇ ತೆರೆದು
ಯಾರೂ ನೋಡದಾಗ
ಪುಳಕ್ಕನೆ ಕಣ್ಣಿಂದ ಮೀನ ಮರಿ ಜಾರಿ
ಮತ್ತೆ ಈ ಕಡೆ ತಿರುಗಿ
ಹಾಲ್ ಬೆಳದಿಂಗಳ ನಗು
ಕಿಚನ್ನಿನಲ್ಲಿ ಪಾತ್ರೆ ತುಂಬಿದ ಸಿಂಕು.
ಈ ಗಾಯ ಅಂತಿಂಥದ್ದಲ್ಲ
ಇವತ್ತಿನದ್ದೂ ಅಲ್ಲ
ಯಜಮಾನ ಜಗಲಿಗೆ
ಮನೆಯೊಡತಿ ಒಳಗೆ
ಎಂಬ ಮಾತಿಗೆ ಒಪ್ಪಿದರೂ
ಒಳ ಹೊರಗಿನ ಗೆರೆ ಎಳೆವ ರೂಲು ದೊಣ್ಣೆ
ಯಜಮಾನನ ಮೇಜೊಳಗೇ.
ಈ ಗಾಯ ಅಂತಿಂಥದ್ದಲ್ಲ
ಇವತ್ತಿನದ್ದೂ ಅಲ್ಲ
ಗಾಯ ಗೊತ್ತಾಗದೆ ಇರದ ಹಾಗೆ
ಇಳಿಬಿದ್ದ ಸರಕೆ ಪದಕ-
-ವಿಟ್ಟು ಓಡಾಡುವ ರೀತಿ ಬರಿ ಇವತ್ತಿನದಲ್ಲ.
ಅಲ್ವಾ..
ಇಷ್ಟೆಲ್ಲ ಗೊತ್ತಿದ್ದೂ
ನಿನ್ನ ಕಣ್ಣ ಮೋಡಕ್ಕೆ ನನ್ನ ಕಣ್ಣು ತೇವ
ನನ್ನ ನೋಟದ ಕರೆಗೆ
ನಿನ್ನ ಕೊರಳು ಬಿಗಿದು
ಎತ್ತೆತ್ತಲೋ ನೋಡಿ
ಕೈ ಬಿಗಿದೊತ್ತಿ....
ಪದಕ್ಕಿಳಿಯದ ಕವಿತೆ

Thursday, March 2, 2017

ಮೌನಹೋಮದ ಸಮಿತ್ತು

ಮಾತಾಡದೇ ಇದ್ದಿದ್ದರೇ ಚೆನ್ನಾಗಿತ್ತು
ಹರಿತವಾದ ಮೌನ
ಚುಚ್ಚಿ ಗಾಯವಾಗಿ ಅಭ್ಯಾಸ,
ಈ ಸುಡು ಮಾತು
ಚುರ್ರೆನ್ನಿಸಿ ಸುಟ್ಟು
ಒಂದೇ ದಿನಕ್ಕೆ ನಂಜು ಕೀವು.

ಗೊತ್ತು
ಹೂಕಣಿವೆಯ ಹಾದಿ ದಾಟಿಯಾಗಿದೆ
ಮುಂದೆ ಮಂಜು ಶಿಖರ
ಹತ್ತಲೂ ಆಗದು
ವಾಪಸಾಗುವ ದಾರಿಯ
ತೊರೆದು ಬಹಳ ದಿನಗಳಾಗಿವೆ

ಈಗ ನೆನಪಿನೆಣ್ಣೆಯೆರೆದು
ಉರಿವ ದೀಪದ ಬೆಳಕಿಗೂ
ಉರಿ!
ಕತ್ತಲೆಯಲ್ಲೇ ಇರಿ,
ಮಾತಲ್ಲಿ ಬೇಡ.

Thursday, February 16, 2017

ಮುಖ ಎಂದರೆ..

ಮುಖ ಎಂದರೆ..
ಉರೂಟು ಆಕಾರ
ಅಳತೆಗೊಪ್ಪುವ ಅಂಗ
ಉಬ್ಬಿನಿಂತ ಎಲುಬು
ಜೀವದೊರತೆ ನೋಟ
ನಗುವೇ ಇರಬಹುದು ಎಂದೆನ್ನಿಸುವ ತುಟಿಯ ಗೆರೆ
ಈ ಕಡೆಯೆ ತಿರುಗಲಿ ಎಂದು ಬಯಸುವ
ಈ ಇಷ್ಟೆ ಇರಬಹುದೆ?


ಅಥವಾ ಇನ್ನೊಂಚೂರು ಟಾಪಿಂಗ್ಸ್:
ಕೆನ್ನೆಯಲೊಂದು ಗುಳಿ
ನಯವಾದ ತ್ವಚೆ
ಹೊಳಪೇರಿದ ಕಣ್ಣು
ಮೊಗ್ಗುಬಿರಿದ ಬಾಯಿ
ಮಾತಾಡುತ್ತಲೆ ಇರಲಿ ಎನಿಸುವಂತಹ ದನಿ
ನೋಡುತ್ತಲೆ ಇರಬೇಕೆನಿಸುವ ನೋಟ..
ಇದೂ ಅಷ್ಟು ಸೇರಿಸಿದರೆ
ಇಷ್ಟಿರಬಹುದೆ ಮುಖ?!

ಅಥವಾ ಈ ಮುಖವನ್ನ ಎತ್ತಿ ಹಿಡಿದ ಶಂಖಗೊರಳು
ಅದರಡಿಗೆ ಆಧಾರದ ಅಳತೆಸ್ಪಷ್ಟ ಅಂಗಾಂಗ
ಆರೋಗ್ಯ ಸದೃಢ
ಚಿಮ್ಮು ನಡಿಗೆ
ಕೂರಲು ಬದಿಗೆ
ಲೋಕವೆಲ್ಲ ಸರಿಯಲು ಬದಿಗೆ..
ಇದಿರಬಹುದೆ?!


ಅಥವಾ
ಅಂದುಕೊಂಡಿರದ ಅಪರಿಚಿತ
ಚಹರೆಯೊಂದು
ಮನದೊಳಗೆ ಅಚ್ಚಾಗಿ
ಹುಚ್ಚಾಗಿ ಕಾಡಿ
ಹೊರಗಿನ ಕುರುಹು
ಹುಡುಕಿ ಸೋತು
ಎದುರು ಸಿಕ್ಕೊಡನೆ
ಆಹ್.. ಗಪ್ಪನೆ ಅಪ್ಪಿ ಕರಗುವ ಬಯಕೆ
ಝಿಲ್ಲೆಂದು ಚಿಮ್ಮುವಾಗ ಅದುಮಿಟ್ಟು
ಸುಮ್ಮನೆ ಎತ್ತಲೋ ನೋಡಿ
ಸಂಭಾಳಿಸುವ ಹಾಗೆ ಮಾಡುವುದೇ
ಇರಬಹುದೆ ಮುಖ ಎಂದರೆ?!

ಹುತ್ತಗಟ್ಟದೆ, ಚಿತ್ತ ಕೆತ್ತದೆ,
ಒಳಗೊಳಗೆ ಅಸ್ಪಷ್ಟ
ಆದರೂ ನಿಖರ,
ಅರೆಬರೆ ಇರುವ ನನ್ನ
ಮಾಡುಬಹುದೆ ಪೂರಾ?!
ಈ ಮುಖ

ಮುಖ ಎಂದರೆ ಇಷ್ಟೆಯೆ?!
ಮುಖ ಎಂದರೆ ಇಷ್ಟೇಯೆ?!
ಬೇಕಿದ್ದರೆ ಓದಿ ನೋಡಿ:
ಚಿಂತಾಮಣಿಯಲ್ಲಿ ಕಂಡ ಮುಖ.

Monday, February 13, 2017

ಉನ್ಮತ್ತೆ

ನೀನು ನಗುತ್ತೀಯ-
ಹೂವರಳುತ್ತದೆ.
ತಣ್ಣಗೆ ಸವರುವ ಗಾಳಿಯಲ್ಲಿ
ಕಳೆದ ಕಾಲದ ಅಲರು
ಪರಿಮಳೋನ್ಮತ್ತ ಮನಸು
ಕಾಲ ಕೆಳಗಿನ ನದರು
ಮರೆತು
ಓಡೋಡುವ ಕಾಲ...


ನೀನು ನಗುವುದಿಲ್ಲ-
ಹೂವು ಅರಳುತ್ತಿದೆ
ನೋಡದೆ ಹೋಗುವ ಕಣ್ಣು,
ತಣ್ಣಗೆ ಸವರುವ ಗಾಳಿಯಲ್ಲಿ-
ಒಣಗಿ ಬಿರಿದ ಮೈ ನಡುಗುತ್ತದೆ
ಕಾಲ ಕೆಳಗೇನೂ ಇಲ್ಲದ ನದರು
ಮರೆತು
ನೆನಪುಗಳ ಬನದ ದಾರಿ
ಹುಡುಕುತ್ತ ನಿಲ್ಲುತ್ತೇನೆ-
ಪರಿಮಳವ ಹುಡುಕಿ ಮತ್ತೆ ಮತ್ತೆ.

ಸಿಗ್ನಲ್ಲು ರಿಪೇರಿಗೆ ಬಂದಿದೆ
ಹಸಿರಿಲ್ಲ. ಕೆಂಪು ಆರುವುದಿಲ್ಲ
ಅದೋ ಅಲ್ಲಿದೆ ದಾರಿ
ಭಗ್ನ ಸೇತುವೆಯ ಚೂರುಗಳು
ಚದುರಿ...

ನೀನು ನಗುತ್ತೀಯ-
ಹೂವರಳಿದ ನೆನಪು;
ಕಳೆದ ಕಾಲದ ಅಲರು;
- ತೀಡದೆ ಉನ್ಮತ್ತೆ, ಭ್ರಾಂತೆ..ಅವಿಶ್ರಾಂತೆ,
ಸಾಕಾಗಿದೆ ಹಾಗೆ ಇಲ್ಲಿ ಮಲಗುತ್ತೇನೆ.

ನೀನು ನಗು ಅಥವಾ ಸುಮ್ಮನಿರು
ಎನಗಿಲ್ಲ ಚಿಂತೆ..
ಸೊನ್ನೆ ತೆಗೆದು ಉರಿಸಲು ಕಾಯುತ್ತಿರುವರಂತೆ.

Monday, February 6, 2017

ಮಾರ್ದವ

ವಾಷಿಂಗ್ ಮಶೀನಿನ ಫಿಲ್ಟರಲ್ಲಿ
ಒಂದಿಷ್ಟು ನೂಲುಕಸ ಕೂತಿರುತ್ತೆ
ವಾರಕ್ಕೊಮ್ಮೆ ತೆಗೆದು ತೊಳೆದು
ಮತ್ತದರದೇ ಜಾಗದಲ್ಲಿ ಫಿಲ್ಟರ್ ಕೂರಿಸುವುದು
ಬಟ್ಟೆ ಒಗೆಯುವಷ್ಟೇ ಮುಖ್ಯ.
ಇವತ್ತು ಕಸ ತೆಗೆಯುವಾಗ
ಪ್ರಪಂಚದಾದಿಯಿಂದ ಇರುವ ಅಚ್ಚರಿ
ನನ್ನ ಕಣ್ಣಳತೆಯಲ್ಲಿ!!!
"ಕಸದ ಮಧ್ಯೆ ಪಚ್ಚೆಮೊಳಕೆ"
ಎಲ್ಲ ಸೃಷ್ಟಿಕ್ರಿಯೆಗೂ ಬೇಕಿರುವುದು
ಒಂದಿಷ್ಟು ತೇವ.
ಅಂತಃಕರಣ..

ಇದೆಲ್ಲ ಮೇಲಿನ ವಿಷಯ
ಒಳಗಿನ ಮಾತೇನು?!!

ಎವೆ ದಾಟಿ ಕೆಳಗಿಳಿಯಿದ
ನನ್ನ ಕಣ್ಣಿನ ತೇವ
ನಿನ್ನ ಬಿರಿದ ಮನದಲ್ಲಿ
ಒರತೆಯುಕ್ಕಿಸಿರಬಹುದೆ
ಎಂದು ಅನಿಸುತ್ತಿರುವ ಈ ಕ್ಷಣ
ತುಸುದೂರವಿದ್ದರೆ ಮಾತ್ರ ಮೂಗಿಗಡರುವ
ರಾತ್ರಿರಾಣಿಯ ಘಮದಲ್ಲಿ ತೋಯ್ದಿದೆ
ಶ್!! ಎಂದು ಬಾಯ ಮೇಲೆ ಬೆರಳಿಟ್ಟಿದೆ.

Tuesday, January 17, 2017

ಸಂಪಿಗೆಸರ

ಸಾಗರದ ಬಸ್ನಿಲ್ದಾಣ,
ಗಿಜಿಗುಟ್ಟುವ ಬಸ್ಸು
ಒಂದು ಕಾಲೂರಿ
ಪಕ್ಕದ ಕಂಬಿಗಾತು ನಿಂತ ಪಯಣ
ಹೆದ್ದಾರಿಯಾಸಿ ನಿಲ್ಲಿಸುವರು:
ಯಾರ್ರೀ ಸಂಪ್ಗೆಸರ, ಸಂಪ್ಗೆಸರ.
ಇಳಿಜಾರಿನ ಮಣ್ಣರಸ್ತೆಯಲ್ಲಿ
ಪುಟುಪುಟು ಹೆಜ್ಜೆ
ಕೊನೆಯಾಗುವಾಗ
ದೊಡ್ಡ ದಣಪೆಯಾಚೆ ಹರವಿದ ಅಂಗಳಕ್ಕೆ
ಕಟ್ಟಿದ ಮನೆಯ ಚಿಟ್ಟೆಯಲ್ಲಿ
ಬಂದ್ಯನೇ ಅಮೀ.. ಬರ್ರೇ ಆಸ್ರಿಗೆಂತು
ಸಡಗರಿಸುವ ಜೀವ.
ಮುಳುಗಡೆಯಾದ ಬದುಕನ್ನು
ಅಬ್ಗತ್ತಿ ನಿಂತು ಮೇಲೆತ್ತಿಸಿದ ಗಟ್ಟಿ ಜೀವ-
-ದ ಮನಸು ಹೂಮೆತ್ತಗೆ
ಕಿಲಿಕಿಲಿಸಿ ನಕ್ಕು ಬಾಳೆತುಂಬ ಬಡಿಸಿ
ಹಪ್ಳ ತಿನ್ನು, ಮನ್ಯಷ್ಟೇ ಮಾಡಿದ್ದು
ಎಂದು ಕರಿಕರಿದು ಬಡಿಸಿ
ಸಂಜ್ಯಾಗುತ್ಲೂ
ಅಮೀ ಒಬ್ಳೆ ಓದ್ತ್ಯಲೆ, ಎಂಗಕ್ಕೂ ಹೇಳೆ,
ಮುಚುಕುಂದ ಗುಹೆಯಲ್ಲಿ
ಕೃಷ್ಣನ ಗೆಲುವು ಕೇಳುತಲೆ
ಕಣ್ಣೀರು ಸುರಿಸಿ....
ನಸುನಕ್ಕ ಬಾಯಿ ಬೊಚ್ಚಾಗಿ
ಬೆನ್ನು ಬಾಗಿ,
ಕಣ್ಣದೀಪ ಮಸುಕಾಗಿ,
ಅರಿವು ಮರೆವಾಗಿ
ನೂರ್ಹತ್ತು ವರುಷಗಳು ಮೊದಲ ತೊದಲಾಗಿ
ಮಲಗಿದ ಸಂಪ್ಗೆಸರದ ಅಮ್ಮಮ್ಮ
ನಿನ್ನೆ ರಾತ್ರಿ ಬಂದಲ್ಲಿಗೇ ಹೋದಳು.
-*-

ಕಥೆ ಕೇಳುವವರ ರುಚಿ ಮತ್ತು ಉಲ್ಲಸದ ಅರಿವು ನನಗೆ ಮೂಡಿಸಿದ ಅಮ್ಮಮ್ಮಾ ಹಗ್ಸ್.