Thursday, June 26, 2008

ಅಶ್ರುತ ಅನುರಣನ.

ಹಸಿರು, ಮಳೆ, ಗುಡ್ಡ, ಹಿನ್ನೀರು
ಹಣ್ಣು,ಜೇನು,ಗಾಳಿ,ಮಳೆ, ಬೆಳದಿಂಗಳ ಬಾಲ್ಯ,
ಮಾವನೊಡನೆ ಮುನಿಸು, ಅತ್ತೆಯೊಡನೆ ಸೊಗಸು,
ಅಜ್ಜನ ಕತೆ, ಅಮ್ಮಮ್ಮನ ಕೊಂಡಾಟ,
ರಜೆಯ ಮಜದ ಮೂರ್ತ ರೂಪ
ನನ್ನದೇ ಊರೆನಿಸಿದ್ದು
ಇವತ್ತು
ನನ್ನದಲ್ಲ, ...!!?? :( :(

ಅದೇ ಹಸಿರು, ಕೊಂಚ ಧೂಳುಬಡಿದಿದೆ
ಅದೇ ಮಳೆ, ಏನೋ ಸ್ವಲ್ಪ ಹಿಂಚು ಮಿಂಚು
ಅದೇ ಗುಡ್ಡ, ಅಲ್ಲಲ್ಲಿ ಬೋಳಾಗಿದೆ
ಅದೇ ಹಿನ್ನೀರು, ಸ್ವಲ್ಪ ಸವುಳಾಗಿದೆ
ಹಣ್ಣು ಜೇನು ಗಾಳಿ ಮಳೆ ಬೆಳದಿಂಗಳು
ಹಾಗೇ ಇರಬಹುದೇನೋ
ಹೋಗಿ ರುಚಿ ನೋಡುವವರು ಯಾರು,ಯಾವಾಗ?


ಸಂಬಂಧಗಳು ರೇಷಿಮೆಯಂತೆ-
ಅಜ್ಜನ ಕತೆಯದೇ ರೂಪಕ;
ಬಾಲ್ಯದ ಜೋಕಾಲಿ ಜೀಕಿ ಮುಗಿಸಿ,
ಬದುಕಿನ ಏರು ಹತ್ತುತ್ತಾ
ಉಸಿರುಬಿಡುತ್ತಿರುವವಳಿಗೀಗ ಹೌದೇಹೌದೆನಿಸುತ್ತಿದೆ:
ಸಂಬಂಧಗಳು ರೇಷಿಮೆಯಂತೆ-
ಸುಲಭವಾಗಿ ಸಿಕ್ಕಾಗುತ್ತವೆ,
ಕಡಿದ ಮೇಲೆ ಜೋಡಿಸಲಾಗದು.
ಮೊನ್ನೆ ಮೊನ್ನೆ
ನಕ್ಕಂತೆ ಅನಿಸಿದ ನಗು,
ಆಡಿದ ಮಾತು, ನೋಡಿದ ನೋಟ
ಎಲ್ಲ ಯಾವಾಗ ಹೇಗೆ ಬದಲಾಯಿತು,
ಗೊತ್ತಾಗುತ್ತಿಲ್ಲ!
ಕೂತು ಕತೆಹೇಳಿ ತರ್ಕಿಸಲು ಅಜ್ಜನಿಲ್ಲ,
ಅಮ್ಮಮ್ಮ ಅವನ ಹಿಂದೆಯೇ ಹೊರಟ ಹಾಗಿದೆ,

ಉಳಿದೆಲ್ಲರೂ ಬದಲಾಗುವ ಕಾಲದ
ಮುಳ್ಳು ಹಿಡಿದು ನೇತಾಡುತ್ತಾ
ಮನದ ತುಂಬ
ಪ್ರೀತಿಯ ಬಂಧವೊಂದರ ಸೂತಕ.


ಮನುಷ್ಯರು ಬದಲಾಗಬಹುದು
ನಿನ್ನೆಯಿದ್ದವರು ಇಂದಿಲ್ಲ,
ಇಂದಿನ ನಾವು ನಾಳೆಗೆ ಸಲ್ಲ,
ಮರ,ಗುಡ್ಡ,ಮಳೆ, ಕಾಡು ಹಾಗಲ್ಲವಲ್ಲ..
ಸೂತಕದ ಒಳಮನೆಯಲ್ಲಿ
ನೆನಪಿನ ದೀಪದ ಮಂದ ಬೆಳಕು!
ಅಲ್ಲಿ ಬೇಕೆಂದಾಗ
ಹೊರಗಿನ ಹಂಗಿಲ್ಲದ
ಅಜ್ಜ,ಅಮ್ಮಮ್ಮ,ಕಾಡು,ಕತೆ,ತಿರುಗಾಟ,
ಅಕ್ಕರೆಯ ಬಂಧದ ಅಶ್ರುತ ಅನುರಣನ.

Friday, May 30, 2008

ಗಂಜಿ..

ಜಿಟಿಜಿಟಿ ಮಳೆ ಬೆಳಿಗ್ಗೆ ಎದ್ದಾಗಿನಿಂದಲೇ ಸುರಿಯುತ್ತಿದೆ. ಹೂವು ಕೊಯ್ಯಲು ಹೋಗುವಾಗಲೂ ಕೊಡೆ ಹಿಡಿದುಕೊಂಡೇ ಹೋಗಬೇಕಾದಷ್ಟು ಜೋರೇ. ಹಾಗಾಗೇ ಇವತ್ತು ದೇವರಿಗೆ ಒಂದೆರಡು ಬೇಲಿಸಾಲಿನ ಹೂಗಳು ಖೋತಾ. ಸ್ನಾನ ಮುಗಿಸಿ ಯುನಿಫಾರ್ಮ್ ಹಾಕಿ, ಕೈಯಲ್ಲಿ ಹಣಿಗೆ ಹಿಡಿದು ಬಂದವಳಿಗೆ ಅಮ್ಮ ಬಿಸಿಬಿಸಿ ಹಬೆಯಾಡುತ್ತಿದ್ದ ತಟ್ಟೆ ಕೊಟ್ಟು ತಲೆಬಾಚತೊಡಗಿದಳು. ತಟ್ಟೆ ನೋಡಿದ ಕೂಡಲೆ ಇವಳಿಗೆ ಸಿಟ್ಟು. ನನಗೆ ಗಂಜಿ ಬೇಡ, ತಿಂಡಿ ಬೇಕು. ಸಿಡುಕತೊಡಗಿದಳು. ಅಮ್ಮ ನಯವಾಗಿ ಮಾತನಾಡಿಸುತ್ತ, ನೋಡು ಈ ಚಳಿ ಮಳೇಲಿ ಬಿಸಿ ಬಿಸಿ ಗಂಜಿ ತಿನ್ನು, ಮೇಲೆ ಘಮ ಘಮ ಕೊಬ್ಬರಿ ಎಣ್ಣೆ ಮತ್ತೆ ಕರಿಯಪ್ಪೆ ಮಾವಿನ ಮಿಡಿ ಇದೆ. ಎಷ್ಟು ರುಚಿ ಇರುತ್ತಲ್ಲಾ ಪುಟ್ಟೀ, ಈ ಮಳೆಯಲ್ಲಿ ಮೈ ಬೆಚ್ಚಗಿರತ್ತೆ. ಹೊಟ್ಟೆ ತಂಪಾಗಿರತ್ತೆ ತಿಂದರೆ ಅಂತ ಹೇಳುತ್ತ ಎರಡೂ ಜಡೆಯನ್ನೂ ಎತ್ತಿ ಕಟ್ಟಿ, ಅಲ್ಲೇ ಕಿಟಕಿಯ ಬಳಿ ಇಟ್ಟಿದ್ದ ಹಳದಿ ಬಣ್ಣದ ಗುಂಡು ಡೇರೆ ಹೂವನ್ನ ಮುಡಿಸಿದಳು. ಇವಳಿಗೆ ಅಮ್ಮನ ಮಾತು ಚೂರು ಚೂರೂ ಇಷ್ಟವಾಗಲಿಲ್ಲ. ಗಂಜಿ ತಿನ್ನಲಿಕ್ಕೇನೋ ರುಚಿಯಾಗೇ ಇತ್ತು. ಮನಸ್ಸು ಕೆಟ್ಟಿತ್ತು. ತಾನು ಓದಿದ ಕತೆಗಳಲ್ಲೆಲ್ಲ ಬಡವರ ಮನೆಯವರು ಗಂಜಿ ತಿಂದು ಬದುಕುತ್ತಿದ್ದರು. ಹಾಗಾದರೆ ನಾವೂ ಬಡವರೆ ಎಂಬ ಗಾಢ ನಿರಾಸೆಯಲ್ಲಿ ತಿಂದು ಮುಗಿಸಿ ಕೈ ತೊಳೆದುಕೊಳ್ಳುವಾಗ ಅವಳ ಕಣ್ಣಲ್ಲಿ ನೀರಿತ್ತು. ಗಮನಿಸಿದ ಅಮ್ಮ ಮೆತ್ತಗೆ ಹೇಳಿದಳು. ನಾಳೆ ತಿಂಡಿ ದೋಸೆ. ಈಗ ಸಿಟ್ಟು ಮಾಡಿಕೊಳ್ಳದೆ ಸ್ಕೂಲಿಗೆ ಹೋಗು ಮಗಳೇ. ಸರಿ ಎಂದರೂ ಬಿಗುವಾದ ಮನದಲ್ಲೆ ಕೊಡೆ ಬಿಚ್ಚಿ ಹೊರಟಳು. ಅಮ್ಮ ಬಾಗಿಲಲ್ಲೇ ತನ್ನ ಟಾಟಾಕ್ಕೆ ಕಾಯುತ್ತಿದ್ದಾಳೆ ಅಂತ ಗೊತ್ತಿದ್ದೂ ತಿರುಗಿ ನೋಡದೆ ಹೋಗಿಬಿಟ್ಟಳು.

ಅವತ್ತು ಶಾಲೆಗೆ ಹೋದರೂ ಬೆಳಗ್ಗಿನಿಂದಲೇ ಒಂದು ತರ ಗೌ ಅನ್ನುತ್ತಿತ್ತು. ಧಾರಾಕಾರ ಮಳೆ. ಶಾಲೆಯ ಹೊರಗಿನ ಅಂಗಳವೆಲ್ಲ ಕೆಸರು ಹೊಂಡವಾಗಿತ್ತು. ಎಲ್ಲರೂ ಕ್ಲಾಸಿನಲ್ಲೆ ನಿಂತುಕೊಂಡು ಪ್ರಾರ್ಥನೆ ರಾಷ್ಟ್ರಗೀತೆ ಹೇಳಬೇಕಾಯಿತು. ಬೆಳಗ್ಗೆ ಹೇಗೆ ಹೇಗೋ ಮುಗಿಯಿತು. ಮಧ್ಯಾಹ್ನದ ಕ್ಲಾಸು ಭಾರೀ ಕಷ್ಟವಾಗಿಬಿಟ್ಟಿತು. ಸಂಜೆಯಾಗೇ ಹೋಯಿತೇನೋ ಅನ್ನುವಂತೆ ಕವಿದುಕೊಂಡಿದ್ದ ಕತ್ತಲು, ಎಲ್ಲರಿಗೂ ನಿದ್ದೆಯ ಮೂಡು ತಂದುಬಿಟ್ಟಿತ್ತು. ಅದಕ್ಕೆ ಸರಿಯಾಗಿ ಗುಂಡಮ್ಮ ಟೀಚರ ಗಣಿತ ಕ್ಲಾಸು ಎರಡು ಪೀರಿಯಡ್ಡು ಬೇರೆ. ಎಷ್ಟು ಕೂಡಿದರೂ ಕಳೆದರೂ ಲೆಕ್ಕವೇ ಮುಗಿಯುತ್ತಿಲ್ಲ. ದಿನವೂ ಆಗಿದ್ದರೆ ಮುಂದಿನ ಪಿರಿಯಡ್ಡು ಆಟಕ್ಕೆ ಬಿಡಬೇಕು. ಹಾಗಾಗಿ ಅದರ ಹಿಂದಿನ ಪಿರಿಯಡ್ಡಿನಲ್ಲೆ ಹಂಚಿಕೆ ಶುರುವಾಗಿರುತ್ತಿತ್ತು ಗುಟ್ಟಾಗಿ. ಯಾರು ರೂಪನ ಟೀಮು, ಯಾರು ಭಾಗ್ಯನ ಕಡೆ, ಕೆರೆ ದಡವೋ, ಕಳ್ಳಾ ಪೋಲಿಸೋ,..ಹೀಗೇ ಎಲ್ಲ ನಿರ್ಧಾರಗಳೂ ಗುಸುಗುಸೂಂತ ಹರಡಿಕೊಂಡು ಕ್ಲಾಸಿನಲ್ಲಿ ತುಂಬ ಚಟುವಟಿಕೆ ಇರುತ್ತಿತ್ತು. ಇವತ್ತು ಎಲ್ಲರೂ ಮಂಕಾಗಿದ್ದರು. ಹೊರಗೆ ಧೋ ಮಳೆ. ಅಷ್ಟಕ್ಕೇ ಮುಗಿಯಲಿಲ್ಲ. ಮುಂದಿನ ಪಿರಿಯಡ್ಡಲ್ಲಿ ಅನಸೂಯಮ್ಮ ಟೀಚರು ಬಂದುಬಿಟ್ಟರು. ಅಯ್ಯೋ ರಾಮ ಇವರಿನ್ನು ಮತ್ತೆ ಬೆಳಗ್ಗಿನ ಕನ್ನಡವನ್ನೇ ಕೊರೆಯುತ್ತಾರಲ್ಲಾ ಅಂದುಕೊಳ್ಳುತ್ತಿದ್ದ ಹಾಗೆ ಒಳಗೆ ಬಂದ ಟೀಚರು, ಮಕ್ಳಾ ಇವತ್ತು ಮಳೆ, ಆಟ ಬಂದ್, ಅದಕ್ಕೆ ಈಗ ಕತೆ ಹೇಳಾಟ ಅಂತ ಶುರು ಮಾಡಿದರು. ಓ ಇದೇನೋ ಬೇರೆ ತರ ನಡೀತಾ ಇದ್ಯಲ್ಲ ಅಂತ ಎಲ್ಲರ ಕಿವಿಯೂ ಚುರುಕಾಯಿತು. ಮೂಲೆಯಲ್ಲಿ ಬಾಗಿಲ ಹಿಂದಿನ ಬೆಂಚಲ್ಲಿ ಕೂತ ಶೋಭಾ ತೂಕಡಿಸುತ್ತಿದ್ದಿದ್ದು ಟೀಚರ ಕಣ್ಣಿಗೆ ಬಿತ್ತು. ಕೂಡಲೇ ಅವರ ಕೈಯಲ್ಲಿದ್ದ ಉದ್ದನೆ ಬೆತ್ತ ತಗೊಂಡು ಅವಳ ಹತ್ತಿರ ಹೋಗಿ ಸಣ್ಣಗೆ ತಿವಿದರು. ಅಯ್ಯಮ್ಮಾ ಅಂತ ಅವಳು ಬೆಚ್ಚಿ ಬಿದ್ದು ಎದ್ದು ಕೂತರೆ ನಮಗೆಲ್ಲ ಮುಸಿಮುಸಿ ನಗು. ಇನ್ಯಾರಾದರೂ ಮಲಗಿದರೆ ಸರಿಯಾಗಿ ಬೀಳತ್ತೆ ಮೈಮೇಲೆ ನಾಗರಬೆತ್ತ ಇದು ಗೊತ್ತಾಯ್ತಾ ಅಂತ ಪುಟ್ಟಗೆ ನಡೆದುಕೊಂಡ ಬಂದ ಟೀಚರು ಒಂದು ಕ್ಷಣ ಅಜ್ಜ ಹೇಳುವ ಕತೆಯ ಲಂಕಿಣಿಯಂತೆಯೇ ಕಾಣಿಸಿದರು. ಛೇ ಛೇ, ಟೀಚರ್ ಬಗ್ಗೆ ಹಂಗೆಲ್ಲಾ ಅಂದ್ಕಂಡ್ರೆ ಪಾಪ ಬರುತ್ತೆ, ಅಂತ ನೆನಪು ಮಾಡಿಕೊಂಡು ಲಂಕಿಣಿಯನ್ನ ಹಿಂದೆ ದಬ್ಬಿದರೂ ಟೀಚರ್ ಕನ್ನಡಕದೊಳಗಿನ ಚೂಪುಕಣ್ಣಿನಲ್ಲಿ ನೋಡುತ್ತಿದ್ದುದ್ದು ಏನೋ ಭಯ ಹುಟ್ಟಿಸುತ್ತಿತ್ತು.
ಅಷ್ಟರಲ್ಲಿ ಟೀಚರ್ ಕತೆ ಶುರುಮಾಡಿದರು. ಅಲ್ಲಿ ನೋಡಿದರೆ ಮತ್ತೆ ಗಂಜಿಯೇ ಬರಬೇಕಾ? ಅದ್ಯಾರೋ ಅಡುಗೂಲಜ್ಜಿ ಅವಳ ಮೊಮ್ಮಗಳಿಗೆ ಮಳೆಯಲ್ಲಿ ಬಿಸಿಬಿಸಿ ಗಂಜಿ ಮಾಡಿ ಕೊಡುವ ಕತೆ. ಇವಳಿಗೆ ಬೇಜಾರಾಗಿ ಹೋಯಿತು. ಇವಳ ಇರುಸುಮುರುಸು ಟೀಚರ ಕಣ್ಣಿಗೂ ಬಿತ್ತು. ಎಬ್ಬಿಸಿ ನಿಲ್ಲಿಸಿ ಕೇಳಿದರು. ಅದು ಅದೂ ಗಂಜಿ ಅಂದ್ರೆ ಬಡವರೂಟ ಅಲ್ವಾ.. ಅಂತ ತೊದಲಿದಳು. ಅಯ್ಯೋ ಹುಚ್ಚಕ್ಕಾ, ಯಾರ್ ಹೇಳಿದ್ದು ಹಂಗೇ ಅಂತ. ಒಂದೊಂದ್ಸಲ ಮಾರಾಜಂಗೂ ಗಂಜಿನೇ ರುಚಿಯಾಗ್ ಬಿಡತ್ತೆ ಗೊತ್ತಾ. ಬಿಸಿಬಿಸಿ ಗಂಜಿಗೆ, ಚೂರು ಉಪ್ಪು, ಎಣ್ಣೆ, ಉಪ್ಪಿನಕಾಯಿರಸ ನೆಂಚಿಕೊಂಡು ತಿಂದರೆ ಆಹಾ ಅಂತ ಅವರೇ ತಿಂದ ಖುಶಿಯಲ್ಲಿ ಚಪ್ಪರಿಸಿಬಿಟ್ಟರು. ಇದು ಬಡವರ ಕತೆಯಾಯಿತು. ಶ್ರೀಮಂತರು ಇದಕ್ಕೊಂಚೂರು ಕಾಯಿತುರಿ ಹಾಕಿ ತಿಂತಾರೆ ಅದಂತೂ ಇನ್ನೂ ರುಚಿ. ತಿಂದು ನೋಡಿದಿಯಾ ಯಾವಾಗಾದ್ರೂ, ಒಂದ್ಸಲ ತಿನ್ನು, ಆಮೇಲೆ ಪಾಯಸ ಕೊಟ್ರೂ ಇಲ್ಲ ಗಂಜಿ ಬೇಕು ಅಂತೀಯ ಅಂತ ಹೇಳಿ ನಕ್ಕರು. ಶ್ರೀಕೃಷ್ಣ ಪರಮಾತ್ಮನಿಗೂ ಹಸಿವಾಗಿ ಸುಧಾಮನ ಮನೆಗೆ ಹೋದಾಗ ಅವನು ಕೊಟ್ಟಿದ್ದು ಅವಲಕ್ಕಿ ಮತ್ತು ಗಂಜಿ, ಹೇಗೆ ಸುರಿದುಕೊಂಡು ತಿಂದ ಗೊತ್ತಾ ಅವನು. ರಾಮನಿಗೆ ಶಬರಿ ಬರೀ ಹಣ್ಣು ಕಚ್ಚಿ ಕೊಟ್ಟಳು ಅಂದುಕೊಂಡ್ಯಾ, ಗಂಜಿ ಉಪ್ಪಿನಕಾಯಿ ರಸವನ್ನೂ ಕೊಟ್ಟಿರುತ್ತಾಳೆ. ಪಾಪ ಇಲ್ಲದಿದ್ದರೆ ಹಸಿವೆಲ್ಲಿ ಹೋಗತ್ತೆ. ಅಂತಹ ರಾಮದೇವರೇ ಗಂಜಿಯನ್ನು ಖುಶಿಯಿಂದ ತಿಂದ ಮೇಲೆ ಇನ್ಯಾವ ಶ್ರೀಮಂತರು ಬೇಕು ನಿನಗೆ? ಆಹ್ ಹೌದಲ್ಲಾ ಅನ್ನಿಸಿತು ಇವಳಿಗೂ.ಮತ್ತೆ ಕತೆ ಮುಂದುವರಿಯಿತು. ಅಜ್ಜಿ, ಮೊಮ್ಮಗಳು, ಕಾಡು, ಬಂಗಾರದ ಹೂವಿನ ಗಿಡ, ರಾಜಕುಮಾರ, ಮತ್ತು ಕೊನೆಗೆ ಅವರಿಬ್ಬರ ಮದುವೆಗೆ ರುಚಿಯಾದ ಗಂಜಿಯೂಟದೊಡನೆ ಕತೆ ಮುಗಿಯಿತು. ಇವಳಿಗೆ ಭಾರೀ ಸಮಾಧಾನ. ಇಷ್ಟು ದಿನಕ್ಕೆ ಒಂದು ಕತೇಲಿ ರಾಜಕುಮಾರ ಗಂಜಿ ತಿಂದ. ಆಮೇಲೆ ಟೀಚರ್ ಬೇರೆ ಶ್ರೀಮಂತರೂ ಗಂಜಿಯನ್ನ ಕೇಳಿ ಮಾಡಿಸಿಕೊಂಡು ತಿಂತಾರೆ ಅಂದ್ ಬಿಟ್ಟಿದಾರೆ. ಹೌದು ಗಂಜಿ ರುಚಿಯೇ ಆದ್ರೆ ಬಡವರು ಮಾತ್ರ ತಿನ್ನುತ್ತಾರೆ ಅನ್ನುವುದು ಅವಳ ಕೊರಗಾಗಿಬಿಟ್ಟಿತ್ತು. ಅದಕ್ಕೆ ಸರಿಯಾಗಿ ಅವರ ಮನೆಯಲ್ಲಿ ವಾರಕ್ಕೆ ನಾಲ್ಕು ದಿನ ಗಂಜಿ. ಈಗ ಏನೋ ಸಮಾಧಾನವಾಯಿತು. ಕತೆ ಮುಗಿಯುವಷ್ಟರಲ್ಲಿ ಮಳೆ ನಿಂತು, ಹೂಬಿಸಿಲು ಮೋಡದ ಮರೆಯಲ್ಲಿ ತೂರಿ ತೂರಿ ಬರುತ್ತಿತ್ತು. ಮತ್ತೆ ಮರುದಿನ ಅಮ್ಮ ದೋಸೆ ಮಾಡಿದರೆ, ಇವಳು ಗಂಜಿ ಹಾಕಮ್ಮಾ ಅಂತ ಕೇಳಿದಳು ಅಂತ ಬೇರೆ ಹೇಳಬೇಕಿಲ್ಲ ಅಲ್ಲವಾ..! :)


ಇತ್ತೀಚೆಗೆ ಹುಶಾರಿಲ್ಲದಾಗ ಒಂದು ದಿನ ಗಂಜಿ ಮಾಡಿ, ಉಪ್ಪಿನಕಾಯಿ ರಸ, ಎಣ್ಣೆಯ ಜೊತೆಗೆ ಚಪ್ಪರಿಸಿ ತಿಂದು ಬಾಯಿ ಸರಿಮಾಡಿಕೊಂಡಾಗಿನಿಂದ ಅನಸೂಯಮ್ಮ ಟೀಚರೂ ಮತ್ತು ಅವರ ಗಂಜಿಯ ಕತೆ ಉಮ್ಮಳಿಸಿ ನೆನಪಾಗುತ್ತಿದೆ. ಅವತ್ತು ಅವರು ಆ ಕತೆಗೆ ಮತ್ತು ಅವಳ ಕುತೂಹಲಕ್ಕೆ ಒಂದು ಮುಗ್ಧ ತಿರುವನ್ನ ಕೊಡದೆ ಹೋಗಿದ್ದರೆ ಎಷ್ಟೊಳ್ಳೆ ಗಂಜಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೆ ನಾನು.
ಎಲ್ಲ ಊರಿನ ಎಲ್ಲ ಶಾಲೆಗಳಲ್ಲೂ ಅನಸೂಯಮ್ಮ ಟೀಚರಿನಂತವರು ಒಬ್ಬರಾದರೂ ಇರಲಿ, ಮಕ್ಕಳ ಮನಸ್ಸನ್ನ ಮೆತ್ತಗೆ ಹೂವರಳಿಸಿದಂತೆ ಕತೆ ಹೇಳಿ ತಿದ್ದಲಿ ಅಂತ ಆಶಿಸುತ್ತೇನೆ. ನನ್ನ ಬಾಲ್ಯದ ಕೊಂಕುಗಳನ್ನ ತಿದ್ದಿದ ಅನಸೂಯಮ್ಮ ಟೀಚರ್ ಮತ್ತು ಅವರಂತಹದೇ ಇನ್ನೂ ಹಲವಾರು ಟೀಚರುಗಳಿಗೆ ಒಂದು ಪ್ರೀತಿಯ ನಮಸ್ಕಾರ.

Thursday, May 8, 2008

ಕಾಯುವುದು..

ಕಡುನೀಲಿ ಆಕಾಶದ ದೂರದಂಚಲ್ಲಿ
ಮಿಂಚಿ ಬೆಳಕಾಗುತ್ತಿದೆ ಒಂದು ಪುಟ್ಟ ಕಿರಣ
ಕಾಯಿ ಇನ್ನೊಂದೆರಡು ಗಳಿಗೆ,
ಕೆಂಪು ಕೆಂಪು ಸೂರ್ಯ
ಬೆಚ್ಚಗೆ ಬೆಳಕಿನೋಕುಳಿಯಲ್ಲಿ!
ಬೂದಿಬೂದಿ ಮೋಡದ ಒಡಲು
ತುಂಬಿ ನಿಂತಿದೆ, ಸೆಖೆಯಲ್ಲೊಂದು ತಂಪುಗಾಳಿ
ಗಳಿಗೆಯೆರಡು ಕಳೆಯಲಿ
ತಂಪು ತಂಪು ಹನಿ, ಉಲ್ಲಸದ ಮಣಿ!
ಹಸಿರೆಲೆಗಳ ನಡುವೆ ಮೂಡಿದ ಮೊಗ್ಗು
ಒಂದೊಪ್ಪತ್ತು ಕಾಯ್ದರಾಯಿತು
ನಸುಬಿರಿದು ಸುತ್ತ ಘಮ ಮೆಲ್ಲಗೆ ಹರಡಿ
ಆಹಾ ಕಾಯುವುದರಲ್ಲೆಷ್ಟು ಸುಖವಿದೆ!

ಸಧ್ಯ ಬರೀ ಕತ್ತಲೆ ಅಂದುಕೊಂಡು
ಮತ್ತೆ ಹೊದ್ದು ಮಲಗಲಿಲ್ಲ
ಕೆಂಪುಮಣಿಯ ಉದಯರಾಗ ಮನತುಂಬಿದೆ;
ಓಹೋ ಸೆಖೆ ಎಂದು ಹಾದಿ ಬಿಟ್ಟು ಸರಿಯಲಿಲ್ಲ
ತಂಪು ಸುರಿದಿದೆ;
ಅರಳಲಿಲ್ಲವೆಂದು ಗಿಡವ ಸಲಹದೆ ಹೋಗಲಿಲ್ಲ
ಇಂದು ಮೊಗ್ಗು ಬಿರಿದಿದೆ;
ಆಹಾ ಕಾಯುವುದರಲ್ಲೂ ಸುಖವಿದೆ.

Friday, April 11, 2008

ಆತ್ಮೀಯರೊಬ್ಬರ ಸಂಗಾತ,

ಮೊನ್ನೆ ಎಲ್ಲೋ ಕಾಡು ಸುತ್ತಲು ಹೋದವರು ಹಾಗೇ ಕಡಲತೀರವನ್ನೊಂದಿಷ್ಟು ನೋಡಿಬಿಡುವಾ ಅಂತ ಹೋದೆವು. ಅಲ್ಲಿಸಿಕ್ಕ ಗೆಳೆಯನೊಡನೆ ಕಳೆದ ಒಂದ್ನಾಲ್ಕೈದು ಗಂಟೆಗಳು ತುಂಬ ತಂಪಾಗಿದ್ದವು. ಕಡಲ ತೀರದ ಮಾರ್ದವ ಬಿಸಿಯ ಮೇಲೆ ತೇಲಿ ಬರುವ ಗಾಳಿಯ ತಂಪು, ನುಣ್ಪು ಮತ್ತು ಬಿಸುಪು ಎಲ್ಲದರ ಒಟ್ಟಂದದಂತಿತ್ತು ಅವರೊಡನೆ ಕಳೆದ ಸಮಯ.

ತುಂಬ ದಿನದಿಂದ ನೋಡಬೇಕೆಂದಿತ್ತು ಇಬ್ಬರಿಗೂ. ಅವಕಾಶವಾಗಿರಲಿಲ್ಲ. ಅವತ್ತು ಅಚಾನಕ್ಕಾಗಿ ಸಿಕ್ಕಿ ಇಬ್ಬರಿಗೂ ಮಾತು ಮೊದಲು ಮಾಡಲು ಗೊತ್ತಾಗಲಿಲ್ಲ. ಒಂದೆರಡು ದೋಸೆ, ಕಾಫಿ, ಲಸ್ಸಿ, ಮತ್ತು ಅಳಿವೆಯೊಂದರಲ್ಲಿ ದೋಣಿಯಾನ, ಜನರಿಂದ ತುಂಬಿರದ ಕಡಲ ತೀರ, ಮಾತು ಮಾತು ಮಾತು.. ಎಲ್ಲ ತುಂಬ ಹಿತವಾಗಿತ್ತು. ಯುಗಾದಿಯ ಹಿಂದಿನ ದಿನ ಮುಕ್ಕಿದ ಆಲೆಮನೆಯ ಬೆಲ್ಲದ ಸಿಹಿಯಿತ್ತು.
ಹೆಚ್ಚು ಹೆಚ್ಚು ಬರೆಯಲಿಕ್ಕೇನಿಲ್ಲ. ತುಂಬ ಸಂತಸ ನನಗೆ ಅವರ ಕಂಡು. ನೋಡಿದ ಸುತ್ತಿದ ಕಾಡೆಲ್ಲ, ಕಾಡಿನ ಪ್ರೀತಿಯೆಲ್ಲ ಮೈವೆತ್ತಂತಹ ವ್ಯಕ್ತಿಯ ಭೆಟ್ಟಿಯಾಗಿ ಮನಸು ಉಲ್ಲಸಗೊಂಡಿದೆ.
ನಮಗಾಗಿ ಸಮಯ ಕೊಟ್ಟು, ಜೊತೆಗೂಡಿದ ಈ ಸ್ನೇಹಿತರಿಗೆ ಪ್ರೀತಿಪೂರ್ವಕ ವಂದನೆಗಳು.

Wednesday, April 2, 2008

ಹಸಿರ ಹೊದ್ದವಳು ಕಾದಿದ್ದಾಳೆ

ಹಸಿರ ಹೊದ್ದವಳು ಕಾದಿದ್ದಾಳೆ
ಹೊಳೆಯ ಹೊಸ್ತಿಲಲಿ
ನೆನಪಿನ ದೀಪ ಹಚ್ಚಿ..
ಏನೂ ಇಲ್ಲದೆ,
ಸುಮ್ಮನೆ,
ಮಾತ ಕದ್ದು
ಮೌನ ಬಡಿಸಿ
ಹಕ್ಕಿಗೊರಳ ಇಂಚರ ನೇಯುತ್ತಾ
ಖಾಲಿ ಬದುಕನ್ನ ತುಂಬಿ ತುಳುಕಿಸಲು..
ಹಸಿರ ಹೊದ್ದವಳು ಕಾದಿದ್ದಾಳೆ


ಇನ್ನೇಕೆ ಮಾತು.
ಬಿಂಕವಿಲ್ಲ,
ಮಾತ ಕಟ್ಟಿಟ್ಟುಹೊರಟೆ..
ಜೊತೆಗಿರುವನು ಚಂದಿರ.

ಆಮೇಲೆ ಸೇರಿಸಿದ್ದು.. ಈ ಹಸಿರು ಪಯಣದ ನೆನಪಿನ ಬರಹ ಕೆಂಡಸಂಪಿಗೆಯಲ್ಲಿ..
ಲಾವಂಚ -
http://www.kendasampige.com/article.php?id=514



Monday, March 31, 2008

ಹೂವು ಚೆಲ್ಯಾವೆ ಹಾದಿಗೆ..

ಮಲೆನಾಡಿನ ಪುಟ್ಟ ಊರಿನಿಂದ ಬಂದ ನನಗೆ ರಾಜಧಾನಿಯ ಗಜಿಬಿಜಿ, ಗಡಿಬಿಡಿ, ಗುಂಪಿನಲ್ಲಿ ಕವಿಯುವ ಏಕಾಂಗಿತನ ಎಲ್ಲ ಬೇಸರಹುಟ್ಟಿಸಿಬಿಟ್ಟಿದ್ದವು. ಎಲ್ಲ ಅಮೂರ್ತವಾಗಿ, ಕನ್ನಡಿಯೊಳಗಿನ ಗಂಟಾಗಿ, ಆಪ್ತತೆಯಿಂದ ಹೊರತಾಗಿ ಕಾಣಿಸುತ್ತಿದ್ದವು.ಈ ಎಲ್ಲ ಬೇಸರದ ಕಾವಳಗಳನ್ನು ಬೆಚ್ಚಗೆ ಅರಳಿದ ಒಂದು ಬೆಳಗು ಸಹ್ಯವಾಗಿಸಿಬಿಟ್ಟಿತು. ಬೆಳಗ್ಗೆ ೭ ಗಂಟೆಗೆ ಬಿ.ಎಂ.ಟಿ.ಸಿ ಬಸ್ಸಿನ ಕಿಟಕಿಯಿಂದ ಕಂಡ ಮೈತುಂಬ ಹೂಬಿರಿದು ಪಾದಪಥಕ್ಕೂ ಚೆಲ್ಲಿದ ಮರಗಳ ಸಾಲು, ಇಬ್ಬನಿಯ ಮಬ್ಬಿನಲ್ಲೂ ಗೆರೆಕೊರೆದಂತೆ ಕಾಣುವ ಬೆಳ್ಳಕ್ಕಿ ಸಾಲು, ಬುಲ್ ಬುಲ್ ಮೈನಾಗಳ ಚಿಲಿಪಿಲಿ, ರಸ್ತೆಬದಿಯಲ್ಲಿ ಬೆವರಿಳಿಸುತ್ತ ಓಡುತ್ತಿರುವ ಮಂದಿ ಎಲ್ಲವೂ ಊರಿನ ಆಪ್ತತೆ ಮತ್ತು ಮಾನುಷೀ ಮಾರ್ದವತೆಯನ್ನ ಚೂರು ಚೂರಾಗಿ ಬನಿ ಇಳಿಸತೊಡಗಿದವು.

ಚಳಿಗಾಲ ಗಾಢವಾಗುತ್ತಿದ್ದಂತೆ ಹೂಬಿರಿದು ನಿಲ್ಲುವ ಮರಗಳ ಸಾಲು ಏನೇನೋ ಖುಷಿಗಳನ್ನ ಹಿತವನ್ನ ಹರಡುತ್ತವೆ. ಬೆಂಗಳೂರೆಂಬ ಮಾಯಾನಗರಿ ಮಾಯೆಯ ಝಗಮಗ ಕಳೆದು, ಇಬ್ಬನಿಯಲ್ಲಿ ತೊಳೆದು ತಂಪಗೆ ಹೊಳೆಯುತ್ತದೆ. ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಕೆಂಪಾಗುವ ಪಡು ದಿಕ್ಕು ಓ ಇದು ನಮ್ಮೂರಲ್ಲಿ ಮುಳುಗುವ ಸೂರ್ಯನೇ ಅಂತನ್ನಿಸಿ ಬೆಂಗಳೂರು ಮನದಲ್ಲಿ ಇನ್ನೊಂದು ಮೆಟ್ಟಿಲೇರುತ್ತದೆ. ಎಲ್ಲ ಬಗೆಯ ಕೆಲಸ ಕಾಯಕಗಳಿಗೆ ಅವಕಾಶ ಕೊಟ್ಟು ಗುಳೆಬಂದ ರೈತರನ್ನೂ, ಓದಲು ಬಂದ ಮಕ್ಕಳನ್ನೂ,ಐಟಿ ಅಲೆಯಲ್ಲಿ ತೇಲುವ ಯುವಜನಾಂಗವನ್ನೂ, ವಾಕಿಂಗಿನಲ್ಲಿ ಸಂಚರಿಸುವ ಹಿರಿಜೀವಗಳನ್ನು, ಗಡಿಬಿಡಿಯಲ್ಲಿ ಓಡುವ ದಿನಗಳನ್ನು ಸಮಾನ ಭಾವದಲ್ಲಿ ಒಳಗೊಳ್ಳುವ ಯುಟೋಪಿಯಾದಂತೆ ಭಾಸವಾಗುತ್ತದೆ.

ಒಮ್ಮೊಮ್ಮೆ ಸಿರಿತನ, ದಾರಿದ್ರ್ಯ ಎರಡೂ ಸೀಸಾ ಆಡುತ್ತಿರುವಂತೆ ಕಂಡು ಮನಸ್ಸಿನಲ್ಲಿ ಮುಳ್ಳು ಚಿಟಿಗೆಯಾಡುತ್ತದೆ. ಒಬ್ಬರಿನ್ನೊಬ್ಬರ ಹೆಗಲು ಕಟ್ಟದ ವ್ಯವಹಾರೀ ಸಂಬಂಧಗಳ ಮೆರವಣಿಗೆ ನೋಡಿ ಮನಸು ಮುದುಡುತ್ತದೆ.ಸಾಕಪ್ಪಾ ಅನ್ನಿಸುತ್ತ ರಾತ್ರಿ ಮಲಗೆ ಬೆಳಗ್ಗೆ ಏಳುವಾಗ ತಂಪಗೆ ಅರಳುವ ಬೆಳಗು, ಹೂಚೆಲ್ಲಿದ ಪಾದಪಥ, ಹೂವಾಡಗಿತ್ತಿ, ತರಕಾರಿಯಮ್ಮ, ಯುನಿಫಾರ್ಮ್ ಹಾಕಿ ತಿದ್ದಿ ತೀಡಿದ ತಲೆಗೂದಲಿನ ಜೊಂಪೆ ಹಿಂದಕ್ಕೆ ತಳ್ಳುತ್ತಾ ನಡೆಯುವ ಪುಟಾಣಿಗಳನ್ನ ನೋಡಿದರೆ ಎಲ್ಲ ಕಸಿವಿಸಿ ಕಳೆದು ಮುದ್ದು ಮೂಡುತ್ತದೆ. ಯಾವುದನ್ನೂ ಪ್ರೀತಿಸುವುದು ನಮ್ಮ ಮನಸ್ಥಿತಿಗೆ ಸಂಬಂಧ ಪಟ್ಟ ವಿಷಯವಾ ಹಾಗಾದರೆ? ನಿನ್ನೆ ಸಿಡುಕು ಮೂಡಿಸಿದ್ದ ದಾರಿಯಲ್ಲಿ ಇವತ್ತು ಹೊಸ ಹಿತ ಹೇಗೆ ಅರಳುತ್ತದೆ? ನಿನ್ನೆ ಚಿಟ್ಟು ಹಿಡಿಸಿದ್ದ ಗಜಿಬಿಜಿ ಇವತ್ತು ಹೇಗೆ ಅಚ್ಚರಿ ಹುಟ್ಟಿಸುತ್ತದೆ? ಯೋಚಿಸಬೇಕಾದ ವಿಷಯ.

ಊರಿನ ನೆನಪನ್ನು ಹೊತ್ತು ತರುವುದು ಇಲ್ಲಿಯ ಅಚಾನಕ್ ಮಳೆ. ಈ ಮಳೆಯನ್ನ ಮಲೆನಾಡಿನ ಧೋ ಮಳೆಯ ಜೊತೆ ಹೋಲಿಸಲಾಗುವುದಿಲ್ಲವಾದರೂ, ಬೇಸಿಗೆ ದಿನಗಳಲ್ಲಿ ಕಾವು ಹೆಚ್ಚಿ ಮನಸ್ಸು ವಿಷಣ್ಣವಾದಾಗ ಇದ್ದಕ್ಕಿದ್ದಂಗೆ ಸಂಜೆಯೋ ರಾತ್ರಿಯೋ ಬಂದು ತೋಯಿಸುವ ಮಳೆ, ಮನಸ್ಸಿನ ಕಸಿವಿಸಿಯನ್ನು ಹೋಗಲಾಡಿಸಿ ಬಾಲ್ಯದ ನೆನಪನ್ನು, ಊರಿನ ಆಪ್ತತೆಯನ್ನು ತಂಪಾಗಿ ತಂದಿಟ್ಟು ಹೋಗುತ್ತದೆ. ಎಲ್ಲ ಚಂದವೇ ಅಂತೇನಿಲ್ಲ. ಕಟ್ಟಿ ನಿಂತ ಮೋರಿಗಳಲ್ಲಿ ಹೋಗಲಾಗದ ನೀರು ರಸ್ತೆಗೆ ನುಗ್ಗುತ್ತದೆ. ರಸ್ತೆ ಹೊಳೆಹಾದಿಯಾಗುತ್ತದೆ. ಕೆಳಗಿನ ಮಟ್ಟದಲ್ಲಿ ಕಟ್ಟಿರುವ ಮನೆಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಬೆಳಿಗ್ಗೆ ಕಸಗುಡಿಸುವವರ ಗಾಡಿ ತುಂಬಿ ತುಳುಕಿ ಭಾರವಾಗಿರುತ್ತದೆ. ಆಫೀಸುಗಳ ಹೌಸ್ ಕೀಪಿಂಗ್ ನವರ ಕೆಲಸ ಡಬ್ಬಲ್ಲಾಗಿರುತ್ತದೆ. ಇದೆಲ್ಲ ನೋಡಿದಾಗ ಮನವು ಮುದುಡಿದರೂ ಸುಮ್ಮನೆ ಕಿಟಕಿಯಾಚೆಯಿಂದ ನೋಡುವಾಗ ಮಳೆಗೆ ತೋಯ್ದು, ಧೂಳು ಕಳೆದ ಚಿಗುರು ಮರಗಳು, ಅಲ್ಲಲ್ಲಿ ಹಸಿರು ಗುಪ್ಪೆಯಾಗಿ ಕಾಣುವ ಪುಟ್ಟ ಪುಟ್ಟ ಪಾರ್ಕುಗಳು, ಸಾಲು ಮರಗಳು, ತಣ್ಣಗೆ ಭಾರವಾಗಿ ಹರಿದಾಡುವ ಗಂಧವತೀ ಗಾಳಿ ಎಲ್ಲ ಮುದುಡಿದ ಮನದ ಪಕಳೆಗಳ ಮೇಲೆ ಒಂದು ನಲಿವಿನ ಛಾಯೆಯನ್ನ ಹಬ್ಬಿಸುತ್ತವೆ. ಮೇಲೆ ನೀಲಿ ಆಗಸ ಕೆಳಗೆ ತಾಯಿ ಭೂಮಿ..ಹಾಡು ನೆನಪಾಗುತ್ತದೆ.

ಚುಕ್ಕಿ ಹರಡಿದ ರಾತ್ರಿಗಳು ನಮ್ಮ ನಿಯಾನು ದೀಪದ ಬೆಳಕಲ್ಲಿ ಮಂಕಾಗಿದ್ದರು ಮಿನುಗುತ್ತಲೇ ಇರುತ್ತವೆ. ನಗರದ ಹೃದಯಭಾಗದಿಂದ ದೂರವಿರುವ ಕೆಲವು ಬಡಾವಣೆಗಳಲ್ಲಿ ಹುಣ್ಣಿಮೆ ಬೆಳಕು ನೇರ ಬಾಲ್ಕನಿಗೇ ನುಗ್ಗಿ ಮನಸ್ಸು ಹಾಡಾಗುತ್ತದೆ.. ಹುಣ್ಣಿಮೆ ಆಗಸದ ಬಣ್ಣದ ಛತ್ರಿಯು ಮೆಲ್ಲನೆ ತಾನಾಗಿ ಬಿಚ್ಚುತ್ತದೆ(ಲಕ್ಷ್ಮೀನಾರಾಯಣ ಭಟ್ಟರ ಕವಿತೆ ಸಾಲು).

ಬೆಚ್ಚಗೆ ಕಾಫೀ ಹೀರುತ್ತ ನಿಂತಾಗ ತಣ್ಣಗೆ ಮುಟ್ಟುವ ಬೇಡುವ ಕೈ, ಮನಸ್ಸನ್ನು ಮಂಜುಗಟ್ಟಿಸುತ್ತದೆಯಾದೆಯಾದರೂ, ಹೊಸಹಗಲಿನ ಭರವಸೆ ನಂದುವುದಿಲ್ಲ. ಉದ್ಯಾನ ನಗರಿ ಎಂದು ಕರೆಸಿಕೊಂಡಿದ್ದ ಉದ್ಯೋಗನಗರಿ ಎಲ್ಲಕ್ಕೂ ಪರಿಹಾರವಿದೆಯೆಂಬ ಭರವಸೆಯಿಂದ ಹೂವರಳಿಸಿ ನಿಲ್ಲುತ್ತದೆ. ತಲ್ಲಣಿಸದಿರು ಕಂಡ್ಯ ತಾಳು ಮನವೇ ಅಂತ ಸಮಾಧಾನಿಸಿಕೊಳ್ಳುತ್ತೇನೆ.

ಹೂಳು ತುಂಬಿ ಲೇಔಟುಗಳಾಗುತ್ತ ನಡೆದಿರುವ ಕೆರೆಗಳನ್ನು ನೋಡಿದರೆ ಮಾತ್ರ ಯಾವ ಹಾಡು, ಎಷ್ಟೇ ಹಸಿರಾಗಿರುವ ಮರವೂ ಕೂಡ ನನಗೆ ಹಾಯೆನಿಸುವುದಿಲ್ಲ. ನಮ್ಮ ಅನ್ನಕ್ಕೆ ನಾವೇ ಕಲ್ಲು ಹಾಕಿಕೊಳ್ಳುವ ನಮ್ಮ ಗೋರಿಯನ್ನ ನಾವೇ ತೋಡುವ ಕೆಲಸದಲ್ಲಿ ಎಷ್ಟು ಗಡಿಬಿಡಿಯಿಂದ ಮುಳುಗಿಹೋಗಿದ್ದೇವಲ್ಲಾ ಅಂತ ಬೇಜಾರಾಗಿ ಹೋಗುತ್ತದೆ. ಏನು ಮಾಡಲಿ? ಬಂದ ಎಲ್ಲರನ್ನೂ ತೆಕ್ಕೆಗೆ ಎಳೆದುಕೊಂಡಿರುವ ಬೆಂಗಳೂರೆಂಬ ಮಹಾತಾಯಿಯ ಬೆನ್ನು ತೊಡೆಗಳನ್ನ ಹುಣ್ಣು ಮಾಡುತ್ತಿರುವ ನಮ್ಮ ಪಾಪಕ್ಕೆ ಪರಿಹಾರವೆಲ್ಲಿದೆ? ನಾನು ಚೂರೂ ನಂಬದಿರುವ ದೇವರು ಇದ್ದಕ್ಕಿದ್ದಂಗೆ ಬಂದು ವರ್ಷಗಟ್ಟಲೆ ಮಾಡಬೇಕಿರುವ ಯಾವುದೋ ಹೊಚ್ಚ ಹೊಸಾ ಹಸಿರು ವ್ರತವನ್ನ ಹೇಳಿಕೊಡಬಾರದೇ ಅನ್ನಿಸುತ್ತಿದೆ.

ಹೂವು ಚೆಲ್ಯಾವೆ ಹಾದಿಗೆ... ಹೂವಲ್ಲ ಅವು ಭೂಮಿಯ ಬಯಕೆಗಳು ಮತ್ತು ನೆನವರಿಕೆಗಳು! ನೆಲದ ಆಳದಿಂದ ಆಗಸೆದೆಡೆಗೆ ಚಿಮ್ಮಿದ ಜೀವನ್ಮುಖತೆಯ ಕುಸುಮಗಳು. ನಡೆಯುವಾಗ ತುಳಿಯದೆ ಹೋಗಲು ಬರದೇ ಹೋಯಿತಲ್ಲ ನಮಗೆ?!