Thursday, May 8, 2008

ಕಾಯುವುದು..

ಕಡುನೀಲಿ ಆಕಾಶದ ದೂರದಂಚಲ್ಲಿ
ಮಿಂಚಿ ಬೆಳಕಾಗುತ್ತಿದೆ ಒಂದು ಪುಟ್ಟ ಕಿರಣ
ಕಾಯಿ ಇನ್ನೊಂದೆರಡು ಗಳಿಗೆ,
ಕೆಂಪು ಕೆಂಪು ಸೂರ್ಯ
ಬೆಚ್ಚಗೆ ಬೆಳಕಿನೋಕುಳಿಯಲ್ಲಿ!
ಬೂದಿಬೂದಿ ಮೋಡದ ಒಡಲು
ತುಂಬಿ ನಿಂತಿದೆ, ಸೆಖೆಯಲ್ಲೊಂದು ತಂಪುಗಾಳಿ
ಗಳಿಗೆಯೆರಡು ಕಳೆಯಲಿ
ತಂಪು ತಂಪು ಹನಿ, ಉಲ್ಲಸದ ಮಣಿ!
ಹಸಿರೆಲೆಗಳ ನಡುವೆ ಮೂಡಿದ ಮೊಗ್ಗು
ಒಂದೊಪ್ಪತ್ತು ಕಾಯ್ದರಾಯಿತು
ನಸುಬಿರಿದು ಸುತ್ತ ಘಮ ಮೆಲ್ಲಗೆ ಹರಡಿ
ಆಹಾ ಕಾಯುವುದರಲ್ಲೆಷ್ಟು ಸುಖವಿದೆ!

ಸಧ್ಯ ಬರೀ ಕತ್ತಲೆ ಅಂದುಕೊಂಡು
ಮತ್ತೆ ಹೊದ್ದು ಮಲಗಲಿಲ್ಲ
ಕೆಂಪುಮಣಿಯ ಉದಯರಾಗ ಮನತುಂಬಿದೆ;
ಓಹೋ ಸೆಖೆ ಎಂದು ಹಾದಿ ಬಿಟ್ಟು ಸರಿಯಲಿಲ್ಲ
ತಂಪು ಸುರಿದಿದೆ;
ಅರಳಲಿಲ್ಲವೆಂದು ಗಿಡವ ಸಲಹದೆ ಹೋಗಲಿಲ್ಲ
ಇಂದು ಮೊಗ್ಗು ಬಿರಿದಿದೆ;
ಆಹಾ ಕಾಯುವುದರಲ್ಲೂ ಸುಖವಿದೆ.

16 comments:

SHREE (ಶ್ರೀ) said...

"ಅರಳಲಿಲ್ಲವೆಂದು ಗಿಡವ ಸಲಹದೆ ಹೋಗಲಿಲ್ಲ
ಇಂದು ಮೊಗ್ಗು ಬಿರಿದಿದೆ;
ಆಹಾ ಕಾಯುವುದರಲ್ಲೂ ಸುಖವಿದೆ..."
ಎಷ್ಟು ಚೆಂದದ outlook... ಬಹಳ ದಿನಗಳ ನಂತರ ಒಂದು ಒಳ್ಳೆಯ ಕವನ. welcome back! :)

Anonymous said...

Nice Post !
You should use a Kannada social bookmarking widget like PrachaarThis to let your users easily bookmark your blog posts.

ತೇಜಸ್ವಿನಿ ಹೆಗಡೆ said...

ಸಿಂಧು,

ಸುಂದರ ಕವನ. ನಿಜ.. ಕಾಯುವಿಕಯಲ್ಲಿರುವ ಸಿಹಿ ನೋವಿನ ಸವಿ ತುಂಬಾ ಮಧುರವಾಗಿರುತ್ತದೆ. ತಾಳ್ಮೆಯೊಂದಿದ್ದರೆ ಜೊತೆ ಎಲ್ಲವೂ ಸುಗಮವೇ!

Karthik said...

ಸಿಂಧು,
ಬಹಳ ಚೆನ್ನಾಗಿದೆ ಕವನ. ನನ್ನ ತಿಮ್ಮಿ ಒಂದು ತಿಂಗಳ ಮಟ್ಟಕ್ಕೆ ಪರದೇಶಕ್ಕೆ ಹೋಗಿದಾಳೆ.. ಅವಳನ್ನೇ ಕಾಯುತಿರುವ ನನಗೇ ಬರೆದ ಕವನದಂತಿತ್ತು ನಿಮ್ಮ ಈ ಸೊಗಸಾದ ಕವನ..

:)

ಮನು said...

ಹೆಲೋ ಸಿಂಧು

ಕವನ ತುಂಬಾ ಚೆನ್ನಾಗಿದೆ.Positivity ತುಂಬಾ ಇಷ್ಟ ಆಯಿತು. ಹೀಗೆ ಬರೀತಾ ಇರಿ.

ಸುಪ್ತದೀಪ್ತಿ suptadeepti said...

ಎಲ್ಲರೂ ಕಾಯುವಿಕೆ ನೋವಿನದೆಂದರೆ ನೀನು ಅದರಲ್ಲಿನ ಹುರುಪನ್ನು ತೆರೆದು ತೋರಿದ ರೀತಿ ಖುಷಿ ಕೊಟ್ಟಿತು. ಒಳ್ಳೆಯ ಕವನ.

Anonymous said...

ಕವಿತೆ ಸೊಗಸಾಗಿದೆ - ಕಾಯುವಾಗ ಇರುವ ಉತ್ಸಾಹ ಹುಮ್ಮಸ್ಸು ಆಮೇಲೆ ಆ ಕ್ಷಣ ಎಷ್ಟು ಕಡಿಮೆ ಕಾಲದ್ದು ಎಂದರಿವಾದಾಗ, ಕಾಯುವುದೇ ಸೊಗಸು ಅನ್ನಿಸದಿರದು.

chakora said...

ಏಳುವುದಕ್ಕೆ ಆಲಸ್ಯ, ಕಾಯುವುದಕ್ಕೆ ಬೇಜಾರು. ನನ್ನಂಥವರು ಮಲಗಿದಲ್ಲೇ ಮನಸ್ಸಿನಲ್ಲಿ ಅರೆ ಕ್ಷಣ ಇದನ್ನೆಲ್ಲ ಊಹಿಸಿಕೊಳ್ಳಬೇಕಷ್ಟೆ ;)

Tina said...

ಸಿಂಧು,
ಎರಡನೆ ಸ್ಟಾಂಜಾ ತುಂಬಾನೇ ಇಷ್ಟವಾಯಿತು.
"ಸಧ್ಯ ಬರೀ ಕತ್ತಲೆ ಅಂದುಕೊಂಡು
ಮತ್ತೆ ಹೊದ್ದು ಮಲಗಲಿಲ್ಲ"
"ಅರಳಲಿಲ್ಲವೆಂದು ಗಿಡವ ಸಲಹದೆ ಹೋಗಲಿಲ್ಲ"
ಸುಪರ್!! ಎಲ್ಲಿಯಾದರು ಕೋಟ್ ಮಾಡುವಂತಿವೆ ಸಾಲುಗಳು. ಕೆಲವೊಮ್ಮೆ ಕಾಯುವಿಕೆಗೆ ಭವಿಷ್ಯವೇ ಇಲ್ಲದಿದ್ದರು, ಅದು ವರ್ಷಾನುಗಟ್ಟಲೆ ಹಬ್ಬಿದರು ಬೇಸರ ತರಿಸದು.

ಜೋಮನ್ said...

ಚಂದದ ಕವಿತೆ....


ಧನ್ಯವಾದಗಳು.

ಜೋಮನ್

VENU VINOD said...

ಹಸಿರೆಲೆಗಳ ನಡುವೆ ಮೂಡಿದ ಮೊಗ್ಗು
ಒಂದೊಪ್ಪತ್ತು ಕಾಯ್ದರಾಯಿತು
ನಸುಬಿರಿದು ಸುತ್ತ ಘಮ ಮೆಲ್ಲಗೆ ಹರಡಿ
ಆಹಾ ಕಾಯುವುದರಲ್ಲೆಷ್ಟು ಸುಖವಿದೆ!

ಸುಂದರ ಸಾಲುಗಳು

ಸುಧೇಶ್ ಶೆಟ್ಟಿ said...

ಕವನದ ಎಲ್ಲಾ ಸಾಲುಗಳು ಇಷ್ಟವಾದುವು. ಅದರಲ್ಲೂ ಕೆಳಗಿನ ಸಾಲುಗಳು ಸು೦ದರ.
ಅರಳಲಿಲ್ಲವೆಂದು ಗಿಡವ ಸಲಹದೆ ಹೋಗಲಿಲ್ಲ
ಇಂದು ಮೊಗ್ಗು ಬಿರಿದಿದೆ;

Sree said...

the poem breathed in fresh energy into me! lovely, n great to see u back:)(baraha hang aagtide, adikkE englishu, kshamsbiDi)

ಸಿಂಧು Sindhu said...

ಸ್ಪಂದಿಸಿದ ಎಲ್ಲರಿಗೂ ಅಕ್ಕರೆಯ ನಮಸ್ಕಾರ.

ಶ್ರೀ,
ಮನಸ್ಸು ಮಾತಾಡಿದ್ದಕ್ಕೆ ಖುಶೀ.

ರೋಶಿನಿ,
ಧನ್ಯವಾದ. ಓದಿದ್ದಕ್ಕೆ ಮತ್ತು ವಿಷಯ ತಿಳಿಸುತ್ತಿರುವುದಕ್ಕೆ.

ತೇಜಸ್ವಿನಿ,
ತಾಳ್ಮೆ ಯಾವಾಗ ಹುಟ್ಟುತ್ತದೆ, ಕಾಯುವಿಕೆಯ ಕೊನೆಗೊಂದು ಭರವಸೆಯಿದ್ದರೆ ಅಲ್ಲವೆ? ಎಲ್ಲ ನಾವು ಇರುವ ಮನಸ್ಥಿತಿ ಮತ್ತು ದೃಷ್ಟಿಕೋನದ ಪರಿಣಾಮ.

ಕಾರ್ತಿಕ್,
ನಿಮ್ಮ ತಿಮ್ಮಿ ಬರುವ ದಿನ ಹತ್ತಿರದಲ್ಲೆ ಇದೆ. ಇಲ್ಲೆ ಇದ್ದಿದ್ದರೆ ಇಷ್ಟೊಂದು ಕಾತರ ಇರ್ತ ಇರಲಿಲ್ಲ ಅಲ್ವಾ. ಬಂದ ಕೂಡಲೆ ಮುದ್ದು ಮಾಡಿ. ಖುಶಿ ಇರಲಿ.

ಮನು,
ಧನ್ಯವಾದ.

ಜ್ಯೋತಿ,
ನನಗೆ ನಾನೆ ಹೇಳಿಕೊಂಡ ಸಮಾಧಾನದಂಚಿನ ಸಂತಸದ ಕ್ಷಣದಲ್ಲಿ ಬಿರಿದ ಕವಿತೆ. ನಿಮ್ಗಿಷ್ಟವಾಗಿದ್ದು ಖುಶೀ.

ನೀಲಾಂಜನ,
ನೀವು ಹೇಳಿದ್ದು ನೂರಕ್ಕೆ ನೂರಾಹತ್ತು ನಿಜ. ಕಾದ ಕ್ಷಣಗಳ ತೀವ್ರತೆ ನನ್ನನ್ನು ಯಾವಾಗಲೂ ಅಚ್ಚರಿಗೊಳಿಸಿದ ವಿಷಯ.

ಚಕೋರ,
ಊಹಿಸಲಿಕ್ಕೆ ಬೇಜಾರಿಲ್ಲವಲ್ಲ. ಅದೇ ಖುಶಿ.

ಟೀನಾ,
ನಿಮಗಿಷ್ಟವಾಗಿದ್ದು ಖುಶಿ. ನೀವು ಕಿಟಕಿಯಲ್ಲಿ ತೋರಿಸಿದ್ದ ಫ್ರೀಡಾಳನ್ನ ಇವತ್ತು ನೋಡಿದೆ. ತುಂಬ ಇಷ್ಟವಾಯಿತು.
Burn the night black and blue..!

ಜೋಮನ್,
:)

ವೇಣು,
ಗುಲಾಬಿ ತೋಟದ ಹುಡುಗನಿಗೆ ಇಷ್ಟವಾಗಿದ್ದು ನೋಡಿ ಖುಶಿ.

ಸುಧೇಶ್,
:) ಹೌದು ಅದು ಚಂದಿದೆ. ಅದು ನಾನು ಬರೆದಿದ್ದಷ್ಟೇ ಆಗಿದ್ದರೆ ಅಕ್ಷರವಾಗಿರುತ್ತಿತ್ತು. ನಿಜವಾಗಲೂ ಹಾಗೇ, ಇಂದು ಮೊಗ್ಗು ಬಿರಿದಿದೆ.

ಶ್ರೀ,
ಇರುವುದೆಲ್ಲವ ಬಿಟ್ಟು ಹುಡುಕಹೊರಟವರಿಗೆ ಇಷ್ಟವಾಗಿದ್ದು ನೋಡಿ ಖುಶಿ. ಕ್ಷಮೆ ಎಲ್ಲ ಬೇಕಾ? ಕೊಡಕ್ಕೆ ನಾನ್ಯಾರು ಪೋರಿ? ಇಂಗ್ಲಿಶೋ, ಕಂಗ್ಲಿಶೋ, ಕನ್ನಡವೋ ಸ್ಪಂದಿಸಿದ ಮನಸು ಮುಖ್ಯ.

ಪ್ರೀತಿಯೊಂದಿಗೆ,
ಸಿಂಧು

ಅರೇಹಳ್ಳಿ ರವಿ Arehalli Ravi said...
This comment has been removed by the author.
ಅರೇಹಳ್ಳಿ ರವಿ Arehalli Ravi said...

Registration- Seminar on the occasion of kannadasaahithya.com 8th year Celebration

Sindhu Madam,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaar
a.com/events/index/english


http://saadha
ara.com/events/index/kannada
Please do come and forward the same to your like minded

friends
-kannadasaahithya.com balaga