Tuesday, December 4, 2018

ಹಬ್ಬವೆಂಬ ರೂಪಕ

(2018ರ ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ನನ್ನ ಲೇಖನ.)

ಪ್ರತೀ ದೀವಳಿಗೆಯಲ್ಲೂ ಕತ್ತಲಿನಿಂದ ಬೆಳಕಿನೆಡೆಗೆ ಅಜ್ಞಾನದಿಂದ ತಿಳುವಳಿಕೆಯೆಡೆಗೆ ನಡೆಯುವ ಪ್ರತಿಮೆಯಾಗಿ ಈ ಹಬ್ಬವನ್ನು ಎಲ್ಲರೂ ವಿವರಿಸುತ್ತಿರುತ್ತಾರೆ. ನಗರಕೇಂದ್ರಿತ ಕೆಲಸ,ಬೊಗಸೆ ಮತ್ತು ವಲಸೆಯ ಈ ಕಾಲದಲ್ಲಿ ಬೆಳಕು ಚೆಲ್ಲಾಡುತ್ತಲೆ ಇದೆ. ಪ್ರಪಂಚದೆಲ್ಲೆಡೆಯ ಜ್ಞಾನ ಟೀವಿ ಮೊಬೈಲುಗಳಿಂದ ವಿಂಗಡಿಸಲು ಅಸಾಧ್ಯವಾಗುವಷ್ಟು ಬೇಗ ನಮ್ಮ ಮುಂದೆ ಶೇಖರಣೆಯಾಗುತ್ತಿದೆ. ಯಾವ ಜ್ಞಾನ ಯಾರಿಗೆ ಬೇಕು ಎಂಬುದರ ವಿವೇಕ ಮಾತ್ರ ಈ ಎಲ್ಲ ಝಗಮಗದ ತೀವ್ರ ಕೋರೈಸುವಿಕೆಯನ್ನು ತಡೆಯಲಾಗದೆ, ಕತ್ತಲ ಆಳದಲ್ಲಿ ಮರೆಯಲ್ಲಿ ಕೂತು ಕಣ್ಣು ನೇವರಿಸಿಕೊಳ್ಳುತ್ತಿದೆ.
ದೀಪಾವಳಿಯೆಂದರೆ ಸುಗ್ಗಿ, ಭೂಮಿ ಪೂಜೆ, ನೀರು ಪೂಜೆ, ಆಕಾಶ(ಬೆಳಕು) ಪೂಜೆ, ಆದ ಈ ಹಬ್ಬ ಇವತ್ತು ಬರಿದೆ ಹೊಸಬಟ್ಟೆ, ಹೊಸವಸ್ತು, ಮತ್ತು ಹೊಸಹೊಸ ಸೆಲ್ಪೀಗಳ ಸಂಭ್ರಮವಾಗಿ ಬದಲಾಗುತ್ತಿರುವುದನ್ನು ಕಂಡಾಗ ಮನಸ್ಸು ಮ್ಲಾನವಾಗುತ್ತದೆ. ನಗರದ ಬದುಕಿನಿಂದ ತೀವ್ರ ಪ್ರಭಾವಿತವಾದ ಹಳ್ಳಿಗಳಲ್ಲೂ ಈಗ ಹಬ್ಬ ಹೋಗಿಬಿಟ್ಟಿದೆ. ಪೂಜೆ ಮತ್ತು ಆಚರಣೆ ಮಾತ್ರ ಉಳಿದುಬಿಟ್ಟಿದೆ. ಆದರೂ ಹಳ್ಳಿಗಳಲ್ಲಿ ನಮ್ಮ ವಿದ್ಯುದ್ಮಂಡಳಿಯ ಕೃಪೆಯಿಂದಾಗಿ ಕತ್ತಲಿನ ಸಂಜೆಗಳು ಸಿಗುತ್ತವೆ ಹಚ್ಚಿದ ದೀಪದ ಪುಟ್ಟ ಬೆಳಕಿನಲ್ಲಿ ಒಂದು ಮಾತಿಗೆ ಮೀರಿದ ಸಾಂತ್ವನ ಮಿನುಗುತ್ತದೆ. ಇದು ಬೇಕಿಲ್ಲದೆ, ಗೊತ್ತಿಲ್ಲದೆ ಸಿಗುವ ಸಾಂತ್ವನವಾದ್ದರಿಂದ ಎಲ್ಲರ ಬಯ್ಗುಳಗಳಲ್ಲೆ ಈ ಬೆಳಕು ಮತ್ತು ಕತ್ತಲೆ ತೃಪ್ತಿ ಪಡಬೇಕಿದೆ.
ಒಳ್ಳೆಯ ಮಳೆ ಬಿದ್ದು, ಭೂಮಿಹೊಲಗಳೆಲ್ಲ ಫಲವತ್ತಾಗಿ ಬೀಗುವಾಗ ಮಳೆ ಕಳೆದು ಚಳಿಗಾಳಿಯ ಹೊಡೆತ ಶುರುವಾಗುವ ಮೊದಮೊದಲ ವಾರಗಳಲ್ಲಿ ಬರುವ ಈ ಹಬ್ಬದ ಸುತ್ತಲೂ ಸಮುದಾಯದ ಇಡೀ ವರ್ಷದ ಬದುಕು ಮತ್ತು ಸಂಭ್ರಮ ಸುತ್ತಿಕೊಂಡಿರುತ್ತಿದ್ದ ಕಾಲವೊಂದಿತ್ತು. ಪ್ರಕೃತಿಯ ಬದಲಾವಣೆಗೆ ತನ್ನನ್ನು ಹೊಂದಿಸಿಕೊಂಡು ಅದರಿಂದಲೆ ತನ್ನ ಒಳಿತನ್ನು ಹೂಡಿಕೆ ಮಾಡಿ ಅದರ ಬಡ್ಡಿ ದೀಪದ ಬೆಳಕಲ್ಲಿ ಮಿನುಗುವ ಈ ಹಬ್ಬದ ಗ್ರಾಮ್ಯ ಪರಿಭಾಷೆ ಇವತ್ತು ಗ್ಲೋಬಲ್ ವಿಲೇಜಿನ ತನಗೆ ಬೇಕಾದಂತೆ ಮಾರ್ಪಡಿಸಿಕೊಂಡು ತನ್ನ ಸಮಯಕ್ಕೆ ತಕ್ಕಂತೆ ಹೊಂದಿಸಿಕೊಂಡು ಸಾಲದ ಬಡ್ಡಿ ಕಟ್ಟುತ್ತಾ ಮತಾಪು ರಾಕೆಟ್ಟುಗಳನ್ನು ಹಾರಿಸುತ್ತಾ ಝಗಮಗಿಸುವ ದೀಪದ ಸಾಲುಗಳನ್ನು ಕಟ್ಟುವ ನಗರದ ಪ್ರಗತಿಯ ಪರಿಭಾಷೆಯಾಗಿ ಬದಲಾಗಿದೆ. ಭೂಚಲನೆಯನ್ನು, ಗ್ರಹತಾರೆಗಳ ಚಲನೆಯನ್ನು ತನ್ನ ಮನಸ್ಸಿಗೆ ಬಂದಂತೆ ಬದಲಾಯಿಸಬಹುದಾದ ವಿಪರೀತ ಪರಿಸ್ಥಿತಿಯಿಲ್ಲದೆ ಇರುವುದರಿಂದಾಗಿ ಮಳೆ,ಗಾಳಿ,ಹೊಳೆ, ಬೆಳಕು ಇವು ತನ್ನ ಪಾಡಿಗೆ ಹೇಗೋ ನಡೆದುಕೊಂಡಿದೆ. ಇದೆಲ್ಲ ಯಾರೂ ತಡೆಯಲಾಗದ, ತಡೆಯಲೂಬಾರದ ಬೆಳವಣಿಗೆಯೆ. ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿರುವ ಜಗತ್ತು ಒಂದು ಕ್ಷಣವನ್ನೂ ಪೋಲು ಮಾಡದೆ ಬದಲಾಗುತ್ತಲೆ ಇರುತ್ತದೆ. ಬದಲಾವಣೆಗಳನ್ನ ತಡೆಯಲಾಗುವುದಿಲ್ಲ ಎನ್ನುವುದು ಎಷ್ಟು ನಿಜವೋ ಆ ಬದಲಾವಣೆಗಳ ಜತೆಗೆ ನಾವೂ ಹೋಗದೆ ಇದ್ದರೆ ನಿಂತನೀರಿನ ಹಾಗೆ ಕೊಳೆತುಹೋಗುತ್ತೇವೆ ಎನ್ನುವುದೂ ಅಷ್ಟೆ ನಿಜ. ಬದಲಾವಣೆಗಳ ಜೊತೆಗೆ ಸಾಗುವಾಗ ಹಳೆಯ ವಿವೇಕವನು ಮರೆಯದೆ, ನಮ್ಮ ಅಂತರಂಗದಲಿ ಕತ್ತಲಲಿ ಹಣತೆಯೊಂದನು ಹಚ್ಚಿಕೊಳ್ಳುವುದನ್ನು ನಾವು ಕಲಿಯಬೇಕಿದೆ. ಹಂಬಲವಿದ್ದರೆ ಮಾತ್ರ ಸಾಧ್ಯವೇನೋ. ಹಂಬಲವಿದ್ದರೆ ಪ್ರಕೃತಿಯೂ ಜೊತೆಗೂಡುತ್ತದೆಯೇನೋ.
 
ಮೊದಲಿನಿಂದ ಹೇಳುವುದಾದರೆ ಆದಿಕವಿಯ ರೂಪಕವೊಂದನ್ನ ನೋಡುವ. ತನ್ನ ತಂದೆಯು ತಾಯಿ ಕೈಕೇಯಿಗೆ ಕೊಟ್ಟ ಮಾತಿನ ಸತ್ಯವನ್ನು ಉಳಿಸಲು ರಾಮ ಕಾಡಿಗೆ ಹೋಗುತ್ತಾನೆ. ಈ ಎಲ್ಲ ಘಟನೆಗಳೂ ಭರತನಿಗೆ ರಾಮ ಕಾಡಿಗೆ ಹೋದ ಮೇಲೆ, ತಂದೆ ದಶರಥ ತೀರಿಕೊಂಡ ಮೇಲೆ ತಿಳಿದುಬರುತ್ತದೆ. ಅಜ್ಜನಮನೆಯಿಂದ ಬಂದ ಭರತನಿಗೆ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಈ ರಾಜ್ಯ, ರಾಜ್ಯಭಾರ, ಅಣ್ಣ, ಅಪ್ಪ, ಅಮ್ಮ ಎಲ್ಲರೂ ಎಲ್ಲವೂ ಬದಲಾಗಿಹೋಗಿದೆ. ಬೇಡದೆ ಆದ ಬದಲಾವಣೆಯನ್ನು ಅರಗಿಸಿಕೊಳ್ಳಲಾಗದ ಭರತನೂ ಕಾಡಿಗೆ ಹೊರಡುತ್ತಾನೆ. ಅಣ್ಣನ ಮನವೊಲಿಸಿ ವಾಪಸ್ ಕರೆತರುವ ಆಶೆಯಲ್ಲಿ. ಚಿತ್ರಕೂಟದಲ್ಲಿ ಪರಿಪರಿಯಾಗಿ ಕೇಳಿಕೊಳ್ಳುವ ಅವನಿಗೆ ತನ್ನ ಪ್ರಯತ್ನದ ನಿರರ್ಥಕತೆ ಗೊತ್ತಾಗುತ್ತದೆ.
ತಂದೆಯ ಮಾತಿನ ಸತ್ಯವನ್ನು ಮಗನಾಗಿ ಉಳಿಸಬೇಕಾದ ತನ್ನ ಜವಾಬ್ದಾರಿ, ಮತ್ತು ತಂದೆಯಿಲ್ಲದಿರುವಾಗ ರಾಜನಿಲ್ಲದೆ ಅರಾಜಕವಾದ ರಾಜ್ಯದ ಹೊಣೆಯನ್ನು ರಾಜನಾಗಿ ನಿರ್ವಹಿಸಬೇಕಾದ ಭರತನ ರಾಜಧರ್ಮ ಇವನ್ನು ರಾಮನು ಭರತನಿಗೆ ತಿಳಿಸುತ್ತಾನೆ. ಭರತನೂ ವಿವೇಕವಂತ, ತಿಳಿವಳಿಕೆಯುಳ್ಳವ ಮತ್ತು ಸಮರ್ಥ ರಾಜಕುವರನೇ. ಎಷ್ಟು ಹೇಳಿದರೂ ಅವನ ಮನಸ್ಸು ರಾಮನಿಲ್ಲದ ರಾಜ್ಯವನ್ನು ಕಲ್ಪಿಸಿಕೊಳ್ಳಲೂ ಒಪ್ಪುವುದಿಲ್ಲ. ರಾಮನಿಗೆ ಅವನ ದಾರಿ ಸ್ಪಷ್ಟವಾಗಿದೆ. ತಂದೆಯ ಮಾತನ್ನು ಪಾಲಿಸುವುದು ಮತ್ತು ವನವಾಸ.
ಭರತನಿಗೆ ಸಂದಿಗ್ಧ. ಮನಸಿನ ಮಾತಿಗೆ ಕಿವಿಗೊಡುವ ಅವನಿಗೆ ರಾಜಧರ್ಮವನ್ನು ಬಿಡಲೂ ಆರ. ತಾನು ರಾಜನಾಗಲೂ ಆರ. ಅವನು ರಾಮನ ಜೊತೆಗೆ ಕಾಡಿಗೆ ಹೋಗಲಾರ. ಬೇಡವೆಂದು ಬಿಟ್ಟು ಬಂದ ಅಯೋಧ್ಯೆಯ ರಾಜತ್ವಕ್ಕೆ ಮರಳಲೂ ಆರ. ಕವಿ ವಾಲ್ಮೀಕಿ ಇಲ್ಲಿ ನಂದಿಗ್ರಾಮವನ್ನು ಸೃಷ್ಟಿಸುತ್ತಾರೆ. ತಾನು ರಾಜನಾಗದೆ, ರಾಜಧರ್ಮವನ್ನೂ ಬಿಡದೆ, ತನ್ನ ಮನಸ್ಸಿಗೆ ವಿರುದ್ಧವಾಗದ ಹಾಗೆ ರಾಮನನ್ನೆ ಮುಂದಿಟ್ಟು ಬಯಸದೆ ಬಂದ ರಾಜತ್ವವನ್ನು ಬದಿಗಿಟ್ಟು ಗ್ರಾಮರಾಜ್ಯವನ್ನು ಭರತ ನಿರ್ವಹಿಸುವ ಹಾಗೆ ಮಾಡುತ್ತಾರೆ.
ನಾವು ನಮ್ಮ ಗ್ರಾಮಕ್ಕೆ ಮೂಲಕ್ಕೆ ಹೋಗಲಾರೆವು. ನಗರದ ಝಗಮಗ ಪ್ರಗತಿಯಲ್ಲಿ ಬಾಳಲೂ ಬಯಸೆವು. ಆದರೆ ಮಧ್ಯದ ಒಂದು ನಂದಿಗ್ರಾಮವನ್ನು ಇವೆರಡರ ನಡುವಿನ ಸೇತುವೆಯನ್ನು ಕಟ್ಟಲಾರೆವೇ? ಗೊಲ್ಲ ಕೃಷ್ಣ ಗೋಕುಲದಿಂದ ಮಥುರೆಯ ರಾಜಬೀದಿಗೆ ಬಂದಮೇಲೆ ಅವನು ಗೊಲ್ಲನಾಗಿ ಉಳಿಯಲೇ ಇಲ್ಲ. ಕೊಳಲ ತೊರೆದ, ಚಕ್ರ ಧರಿಸಿದ ಎಂದು ಓದಿದ್ದೇವೆ. ನಿಜಕ್ಕೂ ಹೌದೆ? ಅವನು ಮಥುರೆಯಲ್ಲಿ ಗೋಕುಲದ ಛಾಯೆ ತರಲಿಲ್ಲವೆ? ಅಣ್ಣತಮ್ಮಂದಿರ ಕಚ್ಚಾಟದ ರಾಜ್ಯಗಳಲ್ಲಿಯೂ ಅವನು ಒಳಿತಿನ ಬೀಜ ಬಿತ್ತಲಿಲ್ಲವೆ?
ಗರ್ವದಿಂದ ಮೆರೆವ ರಾಜರ ತೊಡೆ ಮುರಿವ, ಕತ್ತು ಸೀಳುವ ಕೃಷ್ಣ ಅಲ್ಲಲ್ಲೆ ಭಾವಸೇತುವೆಯ ಕಟ್ಟುತ್ತ ಮಡದಿಯರ ಮನವನ್ನು ಕದಿಯಲಿಲ್ಲವೆ? ಭಕ್ತಿಯಿಂದ ಕರೆದವರ ಒಲುಮೆಗೆ ಕಟ್ಟು ಬೀಳಲಿಲ್ಲವೆ? ಲೋಕಪ್ರಸಿದ್ಧ ದ್ಯೂತವನ್ನು ದೇವರೇ ಆದ ಶ್ರೀಕೃಷ್ಣ ನಿಲ್ಲಿಸಿ, ಚಕ್ರ ತೋರಿಸಿ ಸೀರೆಸೆಳೆವವರನ್ನು, ನಕ್ಕವರನ್ನು ಹೆದರಿಸಿ ದ್ರೌಪದಿಯನ್ನು ಕಾಪಾಡಬಹುದಿತ್ತು ಆದರ ಅಕ್ಷಯವಸನವನ್ನೇಕೆ ಕೊಟ್ಟ? ಈ ಎಲ್ಲ ಆಟಾಟೋಪಗಳ ಮಧ್ಯೆದಲ್ಲಿ ಒಂದು ವೃಂದಾವನವಿದೆ ಎಂದು ಸೂಚಿಸುತ್ತಿಲ್ಲವೆ? ಅದರ ದಾರಿ ಬೇಕಾದವರು ಮಾತ್ರ ಹುಡುಕಿಕೊಳ್ಳುತ್ತಾರೆ. ದ್ರೌಪದಿಯ ಆರ್ತತೆ, ಕುಂತಿಯ ದೈನ್ಯ, ತ್ರಿವಕ್ರೆಯ ಶರಣ್ಯ, ವಿದುರನ ನಮ್ರತೆ, ಅಥವಾ ಭೀಷಣವಾಗಿ ಕಾದುತ್ತಲೆ ಆ ಮೂರುತಿಯನ್ನೆ ತನ್ನ ಕಣ್ಣ ನೋಟವಾಗಿಸಿಕೊಂಡ ಕರ್ಣ ಮತ್ತು ಭೀಷ್ಮ, ಮತ್ತು ಅವನಿಲ್ಲದೆಯೂ ತನ್ನ ಭಾವಲೋಕದಿ ತಾನೆ ತೂರಿಕೊಳುವ ರಾಧೆ.. ನಂದಿಗ್ರಾಮದಲಿ ಗ್ರಾಮರಾಜ್ಯ ನಡೆಸಿದ ಭರತನ ಹಾಗೆ.
ಇದೆಲ್ಲ ರೂಪಕಗಳ ಮಾತಾಯಿತು. ಎಲ್ಲಿ ಒಂಚೂರು ಹಿಮ್ಮೊಗ ನೆನಪು ಮಾಡಿಕೊಳ್ಳಿ. ಹಳ್ಳಿಗಳಾದರೆ ಹಬ್ಬಕ್ಕೆ ವಾರವಿರುವಾಗಲೆ ಮನೆಯನ್ನು ಕೊಟ್ಟಿಗೆಯನ್ನು ಚೊಕ್ಕಟಗೊಳಿಸಿ, ಪಾತ್ರೆಪಡಗಗಳನ್ನು ಅಣಿಗೊಳಿಸಿ, ಹಬ್ಬದ ಬಟ್ಟೆಗಳನ್ನ ಬಿಸಿಲಿಗೆ ಹಾಕಿ, ಅಂಗಳ ಬಳಿವ ಕೆಲಸ ಆರಂಭವಾಗುತ್ತಿತ್ತು. ಎಲ್ಲೆಲ್ಲೋ ಹೋದ ಹಕ್ಕಿಗಳೆಲ್ಲ ಗೂಡಿಗೆ ಮರಳಿದ ಹಾಗೆ ಕೆಲಸ, ಓದು, ಮದುವೆ ಇತ್ಯಾದಿಗಾಗಿ ದೂರದೂರದಲ್ಲಿರುವ ಮನೆ ಮಕ್ಕಳೆಲ್ಲ ಎರಡು ದಿನ ಮುಂಚೆಯೆ ಮನೆಗೆ ಬಂದು ನೀರುತುಂಬುವ ಹಬ್ಬದ ಹಂಡೆಗೆ ಕಹಿಂಡಲ ಕಾಯಿ ಬಳ್ಳಿ ಕಟ್ಟುತ್ತಿದ್ದರು. ನೀರು ತುಂಬುತ್ತಿದ್ದರು. ಕಟ್ಟಿಗೆ ಒಟ್ಟಿ ಉರಿ ಕೊಡುತ್ತಿದ್ದರು. ಹಬ್ಬದ ಸಿಹಿ ಹೋಳಿಗೆಗಳು, ಚಕ್ಕುಲಿಗಳು ಮನೆಯ ಹಿರಿಹೆಂಗಸರ ಉಸ್ತುವಾರಿಯಲ್ಲಿ ಹದದಲ್ಲಿ ಸಿದ್ಧವಾಗುತ್ತಿದ್ದವು. ಮನೆಯ ಚಂದ, ಬಣ್ಣ, ರಂಗೋಲಿಗಳು, ಬಾವಿಗೆ ಬಳಿಯುವ ಶೇಡಿ ಕೆಲಸ ಮಧ್ಯದವರ ಪಾಲಿಗೆ. ಮಕ್ಕಳು ಪರಿಚಾರಿಕೆಗೆ ನಿಂತು ಹೂ, ಹಣ್ಣುಗಳ ತರುವ ಕೆಲಸ. ಇಡೀ ಮನೆಯು ಜೀವ ಬಂದ ಹಾಗೆ ಮಿಡಿಯುತ್ತ ಎಲ್ಲರ ಮಾತು, ಕತೆ, ನಗು, ಗಲಾಟೆಗಳಲ್ಲಿ ಕಂಪಿಸುತ್ತಿತ್ತು. ಕೊಟ್ಟಿಗೆಯ ಜೀವಗಳ ಅಂಬಾಗಳಲ್ಲಿ ಬದುಕು ಮಾರ್ನುಡಿಯುತ್ತಿತ್ತು. ಹೊರಗೆ ಅಂಗಳದ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಪಿಲಿ, ಗದ್ದೆ ತೋಟಗಳಲ್ಲಿ ತೊನೆವ ತೆನೆ, ಸಿಂಗಾರಗಳು. ಮಳೆ ಕಡಿಮೆಯಾಗಿ ತೆಳ್ಳಗೆ ಹರಿವ ಹಳ್ಳದಲಿ ಕಾಲಾಡಿಸುವ ಮಕ್ಕಳು. ಪೇಟೆ ಊರಿನ ಹಬ್ಬವೇನೂ ಕಡಿಮೆಯಿರಲಿಲ್ಲ. ಮನೆ ಅಂಗಳಗಳು ಮನೆಯ ಎಲ್ಲರ ಸಹಕಾರದಲಿ ಚೊಕ್ಕವಾಗಿ, ಹಣತೆಯಿಡುವ ಜಾಗಗಳು ನಿಗದಿಯಾಗಿ, ಹೊಸಬಟ್ಟೆಗಳು ಇಸ್ತ್ರಿಯಾಗಿ, ವರ್ತನೆಯ ಹೂಗಳಿಗೆ ಬೇಡಿಕೆ ಹೆಚ್ಚಾಗಿ, ಹಬ್ಬದ ಸಿಹಿಗಳ ರೆಸಿಪಿಗಳು ರಿವೈಸಾಗಿ ಹಿಟ್ಟಿನ ಗಿರಣಿಗಳಲ್ಲಿ ಉದೂದ್ದ ಕ್ಯೂ ಇರುತ್ತಿತ್ತು. ಚೀಟಿ ಕಟ್ಟಿದ ಪಟಾಕಿಗಳು ಅವರವರ ಸಂಬಳಕ್ಕೆ ತಕ್ಕಂತೆ ವಾರಮೊದಲೆ ಪ್ಯಾಕುಗಳಲ್ಲಿ ಬಂದು ಬಿಸಿಲಿಗೆ ಒಣಗಿಸಿಕೊಂಡು ಮಕ್ಕಳ ಹಂಚಿಕೆಯಲ್ಲಿ ಖಾಲಿಯಾಗುತ್ತಿದ್ದವು. ಸ್ನಾನ, ಶುಚಿ, ಹಿರಿಯರಿಗೆ ದೇವರಿಗೆ, ತಮಗೆ ಸಿಕ್ಕಿದ್ದಕ್ಕೆ ನಮಿಸಿ ನಂತರ ಹಬ್ಬದೂಟ ಮುಗಿಸಿ ಆಟ, ಪಟಾಕಿ, ಸಂಭ್ರಮ.
ಸರಿ ಈವತ್ತಿಗೆ ಬನ್ನಿ. ಈಗ ಹಳ್ಳಿಯ ಮನೆಮನೆಗಳಲ್ಲಿ ವಯಸ್ಸಾದ ಹಿರಿಯರು ಬಾಣಗಳೆಲ್ಲ ಖಾಲಿಯಾದ ಬತ್ತಳಿಕೆಗಳ ಹಾಗೆ ಕಾಯುತ್ತ ಕೂತಿರುವರು. ಕೊಟ್ಟಿಗೆ ನಡೆಸಲು ಸೊಂಟ ಸಹಕಾರ ಕೊಡುವುದಿಲ್ಲವಾಗಿ ಈಗ ಕೊಟ್ಟಿಗೆಗಳು ಎತ್ತಂಗಡಿಯಾಗಿವೆ. ಬೆಳಿಗ್ಗೆ ಬರುವ ಬಸ್ಸಿನಲ್ಲಿ ಅಥವಾ ವ್ಯಾನಿನಲ್ಲಿ ಪ್ಯಾಕೆಟ್ ಹಾಲು ಬರುತ್ತದೆ. ಮಕ್ಕಳು ಒಂದು ದಿನ ರಜೆ ಸಿಕ್ಕರೆ ಬಂದರೂ ಬರಬಹುದು. ಮೂರ್ನಾಕು ದಿನ ರಜೆ ಇದ್ದರೆ ಪ್ಯಾಕೇಜು ಟೂರ್ ಹೋದರೂ ಹೋಗಬಹುದು. ವರ್ಷಕಟ್ಟಳೆಯ ಹಬ್ಬವೆಂದು ಬಾವಿಗೆ ನಾಲ್ಕು ಗೀಟು ರಂಗೋಲಿ ಎಳೆಯಲಾಗಿದೆ. ಪಂಪಿನಿಂದ ಕರೆಂಟು ಇರುವಾಗಲೇ ನೀರೆತ್ತಿ ಮೇಲಿನ ಟ್ಯಾಂಕಿಗೆ ತುಂಬಲಾಗಿದೆ. ಪೂಜೆಯ ಹೊತ್ತಿಗೆ ಮಾತ್ರ ಒಂದು ಬಿಂದಿಗೆ ನೀರು ಬಾವಿಯಿಂದ ಸೇದಲಾಗುವುದು. ಟೈಲುಗಳೆಲ್ಲ ಕೊಳೆಯಾಗುವುದೆಂದು ಎಣ್ಣೆಯ ದೀಪವು ವಾಸ್ತುಬಾಗಿಲಿನ ಅಕ್ಕ ಪಕ್ಕಕ್ಕೆ ಮಾತ್ರ. ಉಳಿದೆಲ್ಲ ಕಡೆ ಸೀರಿಯಲ್ ಲೈಟುಗಳನ್ನ ನೇತುಹಾಕಲಾಗಿದೆ. ಏನೋ ಮ್ಯಾಜಿಕ್ ಆಗಿ ಮೊಮ್ಮಕ್ಕಳೇನಾದರೂ ಬಂದರೆ ಇರಲಿ ಅಂತ ಮೊಂಬತ್ತಿಗಳ ಪ್ಯಾಕೆಟ್ಟನ್ನು ಅಜ್ಜಿ ತೆಗೆದಿಟ್ಟಿದ್ದಾಳೆ. ಜನರಿಲ್ಲದ ಹಬ್ಬಕ್ಕೆ ಶಾಸ್ತ್ರಕ್ಕೊಂದು ಪಾಯಸ, ಚಿತ್ರಾನ್ನ, ಕೋಸಂಬರಿ, ಅಷ್ಟು ಖಾಯಿಷು ಬಂದರ ಪೇಟೆಯ ಬೇಕರಿಯಲ್ಲಿ ಸಿಗುವ ಹೋಳಿಗೆಯ ಪ್ಯಾಕೆಟು ತರಲೂಬಹುದು.
ಪೇಟೆಗಳಲ್ಲಿ, ನಗರಗಳಲ್ಲಿ ಕೇಳಲೇಬೇಡಿ. ಇದು ಖರೀದಿಯ ಹಬ್ಬ, ದಿವಾಳಿಯ ಹಬ್ಬ. ಬೇಕು ಬೇಕೆಂದಿದ್ದನ್ನೆಲ್ಲ ಆನ್ ಲೈನಿನಲ್ಲಿ ಇ.ಎಂ.ಐಗಳಲ್ಲಿ ಕೊಂಡರೂ ಪಟಾಕಿಗಳು ಮಾತ್ರ ಅಂಗಡಿಯಲ್ಲಿಯೇ ಖರೀದಿಯಾಗುತ್ತಿವೆ. ಹಬ್ಬಕ್ಕಿಂತ ಮೊದಲೆ ಹಾರಿಸಿದ ಪಟಾಕಿಗಳ ಕಸದ ರಾಶಿಯಲ್ಲಿ ಇನ್ನೂ ಸಿಡಿದಿರಲಾರದ, ಹೊತ್ತಿರಲಾರದ ಪಟಾಕಿಗಳ ಆಯುವ ಪುಟ್ಟ ಕೈಗಳು ಆರಿಸಿ ಆರಿಸಿ ಅವನ್ನ ತಮ್ಮ ಹಬ್ಬದ ಸಂಜೆಗೆ ಎತ್ತಿಡುತ್ತಿವೆ. ಹೀಗೆ ಎಲ್ಲ ವೈರುಧ್ಯಗಳ ಬೆಳಕಿನ ಕೋಲುಗಳು ಒಂದಕ್ಕೊಂದು ಢಿಕ್ಕಿಯಾದರೂ ಇಲ್ಲಿ ಹೊರಗೆ ಕತ್ತಲೇ ಇಲ್ಲ. ದೀಪ ಹಚ್ಚಬೇಕು ಹೇಗೆ ಮತ್ತು ಯಾಕೆ ಎಂದು ಯೋಚಿಸಲು ಸಮಯವೂ ಇಲ್ಲದೆ ಎಲ್ಲ ಮನೆಗಳ ಮುಂದೆ ತೂಗುಬಿದ್ದಿರುವ ಎಲೆಕ್ಟ್ರಿಕ್ ಆಕಾಶಬುಟ್ಟಿ ಕಣ್ಣು ಮಿಟುಕಿಸುತ್ತಿದೆ. ಸ್ನಾನ ಸಂಜೆಗೆ ಮಾಡಿದರೂ ನಡೆಯುತ್ತದೆ. ಗ್ರಾಮೀಣ ಥೀಮಿನ ಹೋಟೆಲುಗಳಿಂದ ಆನ್ಲೈನು ಊಟ ಆರ್ಡರಾಗುತ್ತದೆ. ಟೀವಿ ಕಾರ್ಯರ್ಕ್ರಮಗಳೂ, ಸಿನಿಮಾಗಳು, ಮ್ಯಾಚಿಂಗಾಗಿರುವ ದಿರಿಸಿನಲ್ಲಿ ತೆಗೆದ ಫೋಟೋವನ್ನು ಅರ್ಜಂಟಾಗಿ ಎಫ್ಬಿ,ಇನ್ ಸ್ಟಾ ಗ್ರಾಮು, ವಾಟ್ಸಪ್ಪಿಗೆ ಕಳಿಸಬೇಕಿದೆ. ಆಮೇಲೆ ಉಳಿದಿದ್ದು. ಸಂಭ್ರಮಿಸುತ್ತೇವೆಯೋ ಬಿಡುತ್ತೇವೆಯೋ ಆಚರಿಸುವುದು ಮುಖ್ಯ. ಮತ್ತು ಆ ಆಚರಣೆಯನ್ನು ತೋರಿಸುವುದು ಇನ್ನೂ ಮುಖ್ಯ ಎಂಬ ದೊಡ್ಡ ಬಿಸಿಗಾಳಿಯ ಬಲೂನಿನಲ್ಲಿ ನಾವು ಮೇಲೇರುತ್ತಿದ್ದೇವೆ. ಗಾಳಿ ಕಡಿಮೆಯಾಗುವುದೋ ಅಥವಾ ಅಗತ್ಯಕ್ಕಿಂತ ಹೆಚ್ಚು ಬಿಸಿಯೇರುವುದೋ ಅದು ನಾವು ನಡೆಸಿಕೊಂಡ ಹಾಗೆ. ಒಟ್ಟಿನಲ್ಲಿ ಕೆಳಗೆ ಬೀಳುವುದು ಪುಡಿಯಾಗುವುದು ಮಾತ್ರ ಗ್ಯಾರಂಟಿ. ಥೇಟ್ ಬದುಕಿನ ಹಾಗೆ.
 
ಕೊನೆಗೂ ಮತ್ತು ನಿಜಕ್ಕೂ ಇಷ್ಟೆಯೆ ಅಂತ ಯೋಚಿಸುವಾಗ ಅನಿಸುತ್ತದೆ. ಎಲ್ಲವನ್ನೂ ಅನುಕೂಲಗಳನ್ನಾಗಿ ಪರಿವರ್ತಿಸಿಕೊಳ್ಳುತ್ತ ಇಲ್ಲದಿರುವಾಗ ಇರಸರಿಸಿಕೊಳ್ಳುವ, ಬೇರೆಯವರ ಕಷ್ಟದಲ್ಲಿ ಭಾಗಿಯಾಗುವ, ಸ್ಪಂದಿಸುವ ಮೂಲಮನುಷ್ಯ ಗುಣವನ್ನೆ ಅದುಮಿಟ್ಟು ಮೇಲಕ್ಕೆ ಚಿಮ್ಮುತ್ತಾ ಇದ್ದೇವೆ ಅಂತ. ಒಂದು ಕ್ಷಣ ನಿಂತು ಯೋಚಿಸಿದರೆ ಸುಲಭವಾಗಿ ಸೇತುವೆ ಕಟ್ಟಬಹುದಾದ, ಎಲ್ಲಸೇರಿ ಬದುಕಬಹುದಾದ ಭೂಮಿಯ ದಾರಿ ನಮ್ಮ ಮುಂದೆಯೇ ಇದೆ. ನಾವು ಸ್ವಕೇಂದ್ರಿತ ಸ್ವರ್ಗದಲ್ಲಿ ಒಬ್ಬೊಬ್ಬರೇ ನಿಂತು ಇನ್ನೊಬ್ಬರ ಸ್ವರ್ಗಕ್ಕೆ ನೆಟ್ವರ್ಕ್ ಸಿಗಲೀ ಎಂದು ಕಾಯುತ್ತಿದ್ದೇವೆ.
 
ಹಿಂದೆಲ್ಲ ಜನ ಬಿಡುವಾಗಿದ್ದರೆ? ಈಗಿನ ಪುರುಸೊತ್ತಿಲ್ಲದ ಬದುಕು ಆಗಿರಲಿಲ್ಲವೆ ಅಂತ ಯೋಚಿಸದರೆ ಹೊಳೆಯುತ್ತದೆ. ಹಿಂದೆಯೂ ಅವರಿಗೆಲ್ಲ ಕೈತುಂಬ ಕೆಲಸಗಳಿದ್ದವು. ಪುರುಸೊತ್ತಿರಲಿಲ್ಲ. ಆದರೆ ಈ ಕೈತುಂಬುವ ಕೆಲಸಗಳಿಂದ ಆಗೀಗ ಪುರುಸೊತ್ತು ಮಾಡಿಕೊಳ್ಳದೆ ಹೋದರೆ ಬದುಕಿನ ರುಚಿಯನ್ನು ಸವಿಯುತ್ತಿರುವ ಅರಿವೇ ಆಗದೆ ಹೋಗುತ್ತದೆ ಎಂಬ ತಿಳುವಳಿಕೆ ಅವರಿಗಿತ್ತು. ಅದಕ್ಕೆ ಹಬ್ಬಗಳು ಸರಿಯಾದ ಉಪಾಯವಾಗಿದ್ದವು. ವ್ರತ,ನೇಮದ ಹೆಸರಲ್ಲಿ ದಿನದಿನದ ಯಾಂತ್ರಿಕ ಕೆಲಸಗಳಿಂದ ದೂರವಾಗಿ ಮನೆಯನ್ನ, ಮನಸ್ಸನ್ನ, ಕುಟುಂಬವನ್ನ, ಜತೆಗಿರುವುದನ್ನ ಸಂಭ್ರಮಿಸುವ ದಾರಿ ಹಬ್ಬಗಳಾಗಿದ್ದವು. ಹೊರಬದುಕಿನ ಯಾಂತ್ರಿಕತೆಯ ಗಾಣದ ಬಯಲಿನ ಗಡಿಬಿಡಿ ಮತ್ತು ಹಗಲಾಟಾಗಳ ನಡುವಿನಿಂದ ಸುಮ್ಮನಿರುವ, ಕತ್ತಲ ಒಳಮನೆಗೆ ತಿರುಗಿ ಅಲ್ಲೊಂದು ಯೋಚನೆಯ, ತಿಳಿವಿನ ಹಣತೆ ಹಚ್ಚುವ ಅವಕಾಶಕ್ಕೆ ಸೇತುವೆಯಾಗುವ ಹಾಗೆ ಹಬ್ಬಗಳೆಂಬ ನಂದಿಗ್ರಾಮವೊಂದು ಕಾಯುತ್ತಿತ್ತು. ಈಗಲೂ ಇರಬಹುದು. ಹೋಗೋಣವೇ? ಅಶ್ವಯುಜ ಮಾಸದ ಕೊನೆಯ ಪಕ್ಷದ ಅಮಾವಾಸ್ಯೆ ಭೂಮಿಗೆ ಅತಿ ಕತ್ತಲದಿನವಂತೆ. ತನ್ನ ಪರಿಭ್ರಮಣದಲ್ಲಿ ಸೂರ್ಯನಿಗೆ ಅತಿ ಹೆಚ್ಚು ದೂರದಲಿರುವ ದಿನವನ್ನೆ ನಾವು ದೀಪ ಬೆಳಗಲು ಆರಿಸಿಕೊಂಡ ಈ ಹಬ್ಬದ ರೂಪಕಕ್ಕೆ ನಾನು ಮನಸೋತೆ. ಬೆಳಕು ಬೆಳಗಲು ಕತ್ತಲಿನ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿ ಇದೆಯಲ್ಲವೆ?
ಕತ್ತಲಿನ ತಾಯಿ ಮಡಲಿನಲಿ ಸುಮ್ಮನೆ ಕೂತು ತಂದೆಗಣ್ಣ ದೀಪವ ಹಚ್ಚೋಣವೇ. ಮಕ್ಕಳ ನಕ್ಷತ್ರ ಮಿನುಗುವುದು ಕಾಣಬಹುದಾದ ಕತ್ತಲೆಯು ಬೇಕು. ಗಾಳಿ ಬೀಸುವ ಅಂಗಳದಲಿ ಹಣತೆಯೊಂದನ್ನ ಹಚ್ಚಿ ಕೈಯ ಮರೆಯಿಡಬೇಕು ಎನಿಸುತ್ತಿರುವಾಗ ಗೋಪಾಲಕೃಷ್ಣ ಅಡಿಗರ ಈ ಪದ್ಯದ ಪ್ರಸ್ತುತತೆ ಎದ್ದು ಕಾಣುತ್ತಿದೆ. ಓದಿದ ನಿಮಗೆ ಕತ್ತಲ ಹಂಬಲು ಬಂದರೆ ಅಲ್ಲಿ ಕಿರುಹಣತೆಯು ಬೆಳಗುವ ಕ್ಷಣ ದೂರವಿಲ್ಲ ಎಂದು ನನ್ನ ನಂಬಿಕೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.
 
ಮಾಡಬೇಕಾದ್ದೆಷ್ಟೋ ಇದೆ; ಮೂಲ ಕತ್ತಲಿನಲ್ಲಿ
ಮುಳುಗಿ ಹೋಗುತ್ತಿರುವ ಪರಂಪರಾಗತ ತಿಳಿವ
ನೆತ್ತುವುದು, ಎತ್ತಿ ಪುರಾತನ ಮಗುವ
ಇತ್ತಕಡೆ ಕರೆತಂದು ಅಂತರಂಗದಲಿಟ್ಟು, ಕಾಪಿಟ್ಟು
ಹೊಸಗಾಳಿಯಲ್ಲುಸುರು ಬಿಟ್ಟ ನಡೆಯುವ ಹಾಗೆ
ಆಧುನಿಕಗೊಳಿಸುವುದು, ಆರಾಧಿಸುವುದು, ದೀಪ ಹಚ್ಚಿಟ್ಟು
ಮರೆಯಾದವರ, ತನ್ನ ಕಿರುಹಣತೆಗಳ
ಬೀಸುಗಾಳಿಗೆ ಮರೆಯೊಳಿಟ್ಟು ಆರಯ್ಯುವುದು (ಇದನ್ನು ಬಯಸಿರಲಿಲ್ಲ (ಸಂಕಲನ)ದಿಂದ *ದೆಹಲಿಯಲ್ಲಿ* ಕವಿತೆ by ಅಡಿಗ ) 
  

1 comment:

sunaath said...

ರೂಪಕಗಳ ವಿವರಣೆ ಚೆನ್ನಾಗಿದೆ. ಇದೀಗ ನಂದಿಗ್ರಾಮವನ್ನು ನಾವು ಮನದಲ್ಲಷ್ಟೇ ಕಟ್ಟಬೇಕಾಗಿದೆ. ಏಕೆಂದರೆ ನಾನಿದ್ದ ದೇಶ ಮತ್ತು ಕಾಲ ಈಗಿಲ್ಲ!
"ಎಲ್ಲಿ ಹೋದವೋ ಗೆಳೆಯಾ ಆ ಕಾಲ?"