Monday, January 29, 2018

ಮುಗುಳ್ನಗೆಯ "ಚೆಲುವ"

ಸುತ್ತೆಲ್ಲ ಕತ್ತಲೆ,
ಮುಚ್ಚಿಟ್ಟ ಬಾಗಿಲು,
ತೆರೆಯದ ಕಿಟಕಿ,
ಒಳಗುಡಿಯಲಿ
ಪದ್ಮಾಸನದಲಿ
ಧ್ಯಾನಮಗ್ನ ಶಿಲೆ.

ಚಿಕ್ಕ ಸೊಡರಿನ ದೀಪ-
ಕಣ್ಣ ಬಳಿ ಹಿಡಿಯೆ
ಮೆಲ್ನಗುವಿನ ಪ್ರತಿಫಲನ;
ಗದ್ದದ ಬಳಿ ಹಿಡಿಯೆ
ಗಂಭೀರ ಶಾಂತ ವದನ;
ಎದೆಯ ಬಳಿ
ಹೃದಯ ಮಿಡಿತದ ಬಳಿ ಹಿಡಿಯೆ
ಅರೆನಿಮೀಲಿತ ಧ್ಯಾನ!

ತುಸುದೂರದಿ ನಿಲ್ಲೆ
ಹಲವು ಸತ್ಯಗಳ ಅನೇಕಾಂತವಾದದ
ಮೂರ್ತರೂಪ;
ಬೆಳಕು ಚೆಲ್ಲೆ
ಪುನರುದ್ಧರಿಸಿದ ಗುಡಿಯ ಶಿಲಾ ನೈಪುಣ್ಯ.
ಎಷ್ಟು ಬೇಕೋ ಅಷ್ಟು ಹರಿಸೆ
ಮೆಟ್ಟಿಲು ಮೆಟ್ಟಿಲಾದ
ಬದುಕಿನ ಪಾಠ.

ನಿಖರ ಬಣ್ಣನೆಯ ನಿಶ್ಚಿತ ಉಕ್ತಿಗಳಲ್ಲಿ
ಪ್ರಜ್ವಲಿಸುವ ಸತ್ಯವು
ಅನುಕ್ತ ಆಕಾಶದಲ್ಲೆಲ್ಲ ಹರಡಿದೆ
ಎಂದು ಕೂತಿರುವ
ಮುಗುಳ್ನಗೆಯ "ಚೆಲುವ"ನಿಗೆ ಮನಸೋತೆ.
ಮತ್ತೆ ಬರುವೆ.

ಅವ ಹೇಗಿದ್ದನೋ!
ಏನಂದನೋ!
ಉಳಿಗೆ ಸಿಕ್ಕಿದ ಕಲ್ಲನು ಕೆತ್ತಿದವನ
ಎದೆಯೊಳಗಿನ ಆಕಾಶ
ನನ್ನ ಕಣ್ಣ ತುಂಬಿತು.



1 comment:

sunaath said...

‘ಕಂಡವರಿಗಲ್ಲೊ ಕಂಡವರಿಗಷ್ಟೆ ಕಂಡೀತು ಇಂಥ ನೋಟ’!
ನಿಮ್ಮ ಕವನ ನನ್ನ ಮನವನ್ನೂ ತುಂಬಿತು.