Monday, August 25, 2014

ಅನುತ್ತರಾ

ಅದುಮಿಟ್ಟ ಅಸಹನೆ,
ಅವಡುಗಚ್ಚಿದ ದುಃಖ,
ಅಡಗಿಸಿಟ್ಟ ಕೀಳರಿಮೆ,
ಎಲ್ಲವನ್ನ ಉಂಡು
ಹೂಹೂವಿನ ಚಿತ್ರದ
ಮಿದು ಹತ್ತಿಬಟ್ಟೆ ಹೊದ್ದ
ಕ್ರೌರ್ಯ-ವು,
ನಿನ್ನ ಪುಟಿದು ನಿಲ್ಲುವ
ಎಳೆ ಬೆನ್ನಿಗೊಂದು ಸೆಳೆದು
ಬಾರಿಸಿದ್ದು ತಪ್ಪು ಮಗಳೆ.

ಇವತ್ತು,
ಗೊತ್ತಾಗದೆ ಅಥವಾ ಗೊತ್ತಾಗಿಯೇ
ಕ್ಷಮಿಸಿ
ನಕ್ಕು ಮುದ್ದಿಸಿ,
ಕೆನ್ನೆಗೊಂದು ಹೂಮುತ್ತೊತ್ತಿ
ಅಳಿಸಿಬಿಟ್ಟೆ ನನ್ನ ನೀನು.



ಮುಂದೊಮ್ಮೆ ನಾಳೆ,
ವರುಷಗಳು ಕಳೆದು,
ಗೊತ್ತಾದಾಗ,
ಕ್ಷಮಿಸಬೇಡ ನೀನು
ಕ್ಷಮಿಸಲೂಬಾರದು.
ಹೊರಲಾರೆ ಕ್ಷಮೆಯ ಭಾರ ನಾನು. :(

ಪುಟ್ಟಿಗೆ ಹೊಡೆದೆ ಎಂದಲ್ಲ,
ಹೊಡೆಯಬಾರದಿತ್ತು ಎಂದೂ ಅಲ್ಲ,
ಎಲ್ಲೋ ಇರಿದಿದ್ದಕ್ಕೆ ಇಲ್ಲಿ ಹೊಡೆಯುವುದು,
ಯಾತರದೋ ಅಸಹನೆ
ಇಳಿದಾರಿಯಲಿ ಎದುರುಬೀಳದಲ್ಲಿ
ಹರಿಬಿಟ್ಟಿದ್ದು ಹೇಗೆ ಸರಿ?


ಎಲ್ಲಕಿಂತ ಪ್ರೀತಿಯ ಅಮ್ಮ ಎಂದು
ನೀನು ಹೊಂದಿಸಿಕೊಂಡೆ,
ಎಂದರೂ
ನೀನು ಇದೇ ದಾರಿಯ
ಪಥಿಕಳಾಗಬಾರದು.

ಹೌದು,
ಮುಂದೊಮ್ಮೆ ಇದನೋದಿ
ಗೊತ್ತಾದಾಗ ನೀನು
ನನ್ನ ಕ್ಷಮಿಸಬಾರದು,
ಕ್ಷಮಿಸುತ್ತ ಇದೇ
ಹಾದಿಯ ನೀನು
ಹಿಡಿಯಬಾರದು.
ಅದ ಕಲಿಯಬಾರದು.

ಕೆಲವು ಸಲ,
ಕ್ಷಮಿಸುವುದಕ್ಕಿಂತ
ಕ್ಷಮಿಸದಿರುವುದು ಹೆಚ್ಚು ಅಗತ್ಯ.

Monday, July 14, 2014

ನಮ್ಮನೇ ದಿನಚರೀಲಿ...ಬೆಳ್ಗೆ

ಬೆಳ್ಗೆ ನಮ್ಮನೇ ದಿನಚರೀಲಿ ಈ ತರ ಎಲ್ಲಾ ನಡ್ಯತ್ತೆ.

"ಅಮ್ಮಾ
ನಂಗೆ ಒಂದು ಪೆನ್ ಬೇಕು.
ಸಂಜೆ ಆಫೀಸಿಂದ ಬಂದ್ ಮೇಲೆ ಸ್ವಲ್ಪ ಹೊತ್ತು ಕೂತ್ಕೊ.
ಮುಖ ತೊಳ್ಕೋ.
ಕುಕ್ಕರ್ ಇಟ್ಟು ಏನಾದ್ರೂ ತಿನ್ನಕ್ ಕೊಟ್ಟು
ನೀನೂ ಏನಾರು ಚೂರ್ ತಿನ್ನು. ಟೀ ಕುಡಿ.
ಆಮೇಲೆ ಇಬ್ರೂ ಜ್ಯೋತೀಸ್ ಹೋಗೋಣ ಅಮ್ಮ.
ಅಲ್ಲಿ ಆ ಪೆನ್ ಇರ್ಬೋದು."

[ಇದು ಸ್ನಾನದ ಮಧ್ಯದ ಮಾತುಕತೆ.
ಹಾಗಾಗಿ ಬೇಕುಗಳ ಸಾಲು ಬಂದ್ ಕೂಡ್ಲೆ
ನಾನು ಜೋರಾಗಿ ಮೈತಿಕ್ಕಿ ಅವಳು ಒಂದ್ಸಲ
ಜೋರಾಗಿ ಕೂಗಿ.. ಎಲ್ಲ ಆಗುತ್ತೆ ಮದ್ ಮಧ್ಯ]

ನನ್ನ ಬಾಯಿ 'ಆ' ಅಂತ ಕಳ್ದಿರತ್ತೆ. ಹುಬ್ಬು ಪ್ರಶ್ನಾರ್ಥಕ ಚಿಹ್ನೆ.
ಈಗ ಮೊದಲಿಗಿಂತ ಸ್ವಲ್ಪ ಮೆದು ದನಿ, ಅನುನಯದ ಬನಿ.

"ಅದೇನೂ ಅಂದ್ರೆ, ಅಕ್ಸ್ಮಾತ್ ಕರೆಂಟ್ ಹೋಗ್ಬಿಟ್ರೆ ಬರಿಯೋಕ್ ಆಗಲ್ಲ ಅಲ್ವಾ.
ಈ ಪೆನ್ನಲ್ಲಿ ಒಂದು ಲೈಟಿರತ್ತೆ.
ಅದೇ ಬರಿಯಕ್ಕ್ ಬರೋದನ್ನ ಒತ್ತಿದ್ ಕೂಡ್ಲೆ ಪೆನ್ನು ಬರುತ್ತಲ್ವಾ
ಆಗ ಲೈಟೂ ಹತ್ಕೊಳತ್ತೆ. ಬೇಕಾರೆ ಕತ್ಲಲ್ಲೂ ಬರೀಬೋದು."
ಈಗ ನಾನು ನಗಬೇಕೋ ಅಳಬೇಕೋ?

ನಕ್ಕರೆ ಕೂಡಲೇ ಜ್ಯೋತೀಸ್ ಹೋಗಬೇಕಾಗತ್ತೆ.
ಆಗ ಅವಳಿಗೆ ನಗು ಮತ್ತು ನನಗೆ ಇನ್ನೇನು ಅಳು ಬರುವ ಕ್ಷಣ.
ನಾನು ಮರುಮಾತಾಡದೆ ಕೊನೆಯ ತಂಬಿಗೆ ನೀರು ಆ ಪುಟ್ ಪುಟಾಣಿ ಮೈಗೆ ಹೊಯ್ದು


ಮೆತ್ತನೆ ಟವೆಲ್ಲಲ್ಲಿ ಒರಸಿ, ಒಂಚೂರು ಜೋರಾಗಿನೇ ಬಾತ್ರೂಮಿನಿಂದ ದಬ್ಬಿಕೊಂಡು ಹೊರಗೆ ಬರುತ್ತೇನೆ.

ನಾನು ಈ ಮಾತುಕತೆಯ ಮಧ್ ಮಧ್ಯೆ ಬರುವ ಉದ್ಗಾರಗಳು, ಅನುನಯಗಳನ್ನೆಲ್ಲಾ ಇಲ್ಲಿ ಬರೆಯಲು ಹೋಗಿಲ್ಲ. :)

Friday, July 4, 2014

ನಿನ್ನೆಯ ಸಂದೂಕದಿಂದ ತೂರಿಬಂದ ಒಂದು 'ಓಹ್' ಕ್ಷಣ!

ಟ್ರಾಫಿಕ್ಕು ತಪ್ಪಿಸಲು
ಹಳೆಯ ಓಣಿಯಲ್ಲಿ
ಓಡಿದ ಆಟೋ,
ಅಲ್ಲಿ ಮರಗಳ ಮರೆಯಲ್ಲಿ
ಎತ್ತರದ ಕಟ್ಟಡ,
ಹೊಗೆ,ರಶ್ಶು,ಹಾರ್ನು,
ಮೋಡಗಟ್ಟಿದ ಸಂಜೆ,
ತಡವಾದ ಅರ್ಜೆಂಟು,
ಕಾಯಲೇಬೇಕಾದ ದೊಡ್ಡ ಸಿಗ್ನಲ್ಲು,
ಎಲ್ಲ ಮಸುಕಾಗಿ......


ಒಂದು ಚಳಿಗಾಲದ ಇಳಿಮಧ್ಯಾಹ್ಯ-
ಕಾರಿಡಾರಿನುದ್ದಕೂ
ಟೇಬಲ್ಲು ಕುರ್ಚಿ,
ಗೋಡೆಗಳ ಮರೆಮಾಚಿದ
ಪುಸ್ತಕದ ಬೀರು,
ಕಿಟಕಿಪಕ್ಕದಲಿ
ಕುಳಿತಿಹಳು ನಿನ್ನೆ
ಹಸಿರುಚೂಡಿಯ ಮೇಲೆ ಬಿಳಿಬಿಳಿ ಚುಕ್ಕಿ,
ಪುಸ್ತಕದ ಪುಟಗಳಲಿ ಹಾರುತಿಹ ಹಕ್ಕಿ,
ಇನ್ನೆಲ್ಲೋ ಮೂಲೆಯಲಿ ಕೂತು ಓದುತ
ನೋಡಿದವನಿಗೆ ಅಚ್ಚರಿ,ಖುಶಿ ಉಕ್ಕಿ,
ಪುಟಗಳಲ್ಲೆ ಮುಳುಗಿದವಳಿಗೂ ತಟ್ಟಿ
ಭಾವದೊರತೆಯೊಂದು ಬನಿಯಿಳಿದ
ಘಳಿಗೆ!


ಆ ಹಳೆಓಣಿಯ
ನೆನಪಿನ ಕೋಣೆಯ
ಬಾಗಿಲು ದಬ್ಬಿದಾಗ....
ಇಲ್ಲಿ ಅರ್ಜೆಂಟಲ್ಲಿ,ರಶ್ಶಲ್ಲಿ.
ಟ್ರಾಫಿಕ್ಕಲ್ಲಿ.....


ಅವಳ ಹಳೆ ಹಸಿರುಬಿಳಿಚುಕ್ಕೆ ಬಟ್ಟೆ,
ಅವನ ನೀಲಿಗೀಟಿನ ಅರ್ಧತೋಳಿನಂಗಿ,
ಎಲ್ಲಕ್ಕೂ ಮಿಗಿಲಾಗಿ
ತುಟಿಯಂಚಲಿ ಅರಳಿ,
ಕಣ್ಣಲ್ಲಿ ಬೆಳಗಿ,
ಆತ್ಮಕ್ಕೇ ಆಹ್ಲಾದ ಬೆರೆಸಿದ
ನಗೆಹೂಗೊಂಚಲು.


ಓಹ್
ಎಲ್ಲ ಗೊತ್ತೆಂದುಕೊಳ್ಳುವುದೆಷ್ಟು ತಪ್ಪು!!


ಅವತ್ತು
ನೀನು ನಗದಿದ್ದರೆ,
ನನ್ನ ಒಪ್ಪದಿದ್ದರೆ,
ಇವತ್ತು ಈ ನೆನಪಿರುತ್ತಿರಲಿಲ್ಲ. ಜೊತೆಗೆ ನಾನೂ.

Friday, June 27, 2014

ಸಂಸರ್ಗ

ಸೊಟ್ಟಕೆ
ಅಂಕು ಡೊಂಕಾಗಿ
ಕೆಲಕಡೆ ದಪ್ಪಗಾಗಿ
ಮತ್ತೊಂದೆಡೆ ಹರವಾಗಿ
ಬೆಳೆದ ಬಳ್ಳಿಯಲೊಂದು
ಮೊಗ್ಗು
ಬಳ್ಳಿಗೆ ಹಸಿರು ಕಡಿಮೆ
ಸೊಂಪಿಲ್ಲ
ನೆರಳೂ ಇಲ್ಲ
ಘಮ ಕೇಳಲೇಬೇಡಿ.
ಬೇಕೋ ಬೇಡವೋ
ಎಂಬ ಹಾಗೆ.

ಇನ್ನೂಬಿರಿಯದ
ಮೊಗ್ಗು
ಇಷ್ಟು ದೂರಕ್ಕೇ
ಘಮ್ಮೆಂದು
ಎಸಳಿನ ನಾಜೂಕು
ಮ್ಯಾಕ್ರೋ ಲೆನ್ಸಿಗೆ ಗೊತ್ತು.
ಅರಳುವ ಮುನ್ನ
ಒಳಗೆ ಬಣ್ಣ
ತಿಳಿಯಾಗಿ ಹರಡಿಕೊಳ್ಳುವ ಹೊತ್ತು
ಪಕಳೆಗಳ
ಮಧ್ಯದಿ ಬಣ್ ಬಣ್ಣದ
ರೇಣು ಹೊತ್ತ ಶಲಾಕೆ
ಇದು ಈ ಬಳ್ಳಿಯದೇ ಹೂವೇ?!
ಒಣ ಬಳ್ಳಿಗೇ
ಸಂಭ್ರಮವೊಂದು ಆವರಿಸಿದ
ಹಾಗೆ.

ನಾರೂ ಸ್ವರ್ಗಕ್ಕೆ ಹೋದ ಬಗೆ
ಓದಿ ತಿಳಿದಿದ್ದು
ಈಗ ಗೊತ್ತಾಗುವ ಸಮಯ.

Wednesday, June 25, 2014

ರಾತ್ರಿರಾಣಿ

ರಾತ್ರಿರಾಣಿಗೆ
ಮತ್ತೇರಿಸುವ ಸುಗಂಧ,
ಮಾರುದೂರಕ್ಕೆ ಮಾತ್ರ!
ಬಳಿಗೇ ಹೋದರೆ,
ಕಡುಹಸಿರು ಎಲೆಗಳ ಮೇಲೆ
ರಂಗೋಲಿಎಳೆಯಿಟ್ಟ ಹಾಗೆ,
ಹತ್ತಿರದಿ ಮೂಗೊತ್ತಿ
ಮೂಸಿದರೂ ಪರಿಮಳವಿಲ್ಲ.
ಗಾಳಿಗೊಡ್ಡಲೆಂದೇ
ಸೂಸುವ ಘಮ!

ಅದ್ಯಾಕೋ ಹಳೆ
ಝೆನ್ ಕತೆ ನೆನಪಾಗುತ್ತೆ,
ಚಿಟ್ಟೆ,ಸಂತಸ, ಮತ್ತು ಹಿಡಿದಿಡಲು ಕಷ್ಟಪಡುವ ಹುಡುಗೀ
ಹಸಿಯಾಗಿ,ಬಿಸಿಯಾಗಿ,ಮಾಗಿ-
ಬಿಡಲು

ಇವಳು ಬೇಂದ್ರೆಕವಿತೆಯಲ್ಲ.
ಹುಸಿಯಾಗಿ ಉಳಿಯುವ
ಹಗಲುಗನಸು.

ಸಂಜೆಯು ಇರುಳಿನಲ್ಲಿ
ಇಳಿಯುವ ಹೊತ್ತಿಗೆ,
ನೀರುಣಿಸಲು ಹೋದ ತಪ್ಪಿಗೆ,
ಅರೆಬಿರಿದ ಮೊಗ್ಗೆ ಮೊಗ್ಗೆ.
ಸುಮ್ಮನಿರಲು ಬಿಡದೆ
ಪದಗಳ ಹೆಣಿಗೆಗೆ
ಕಾರಣ..
ಕಿವಿಯಲಿ ಕಾಲೂರಿದ ಹಾಗೆ
ಎಲ್ಲದರಲ್ಲೂ ತೂರಿ ಬರುವ
ಈ ಉದ್ದ ಮೂಗೇ..

Wednesday, June 4, 2014

ಹೀಗೆಲ್ಲಾ ಇರುತ್ತೆ...

ಮೊದಲ ಸಲ -
   ಮುಖ ಉಬ್ಬಿ,
   ಕಣ್ ತುಂಬಿ ತುಳುಕಿ,
   ಹಲ್ಲು ಕಚ್ಚಿ,
   ಇಡಲಾರದೆ ಇಟ್ಟ ಹೆಜ್ಜೆ,
   ನೋಟ ಕಿತ್ತಿಡದೆ-,
   ಇರಿಯುತ್ತಾ,
  ಯಾರದೋ ಕೈಯಲ್ಲಿ-
  ಕೈಯಿಡಿಸಿಕೊಂಡು,
  ಬಾಗಿಲಿಂದ ಮರೆಯಾಗುವವರೆಗೂ
  ಬಗೆದು ತಿಂದ
  ಕಣ್ಗಳು.


ಎರಡನೆಯ ಸಲ -
   ಕಿತ್ತಿಡಲೇ ಬೇಕಿದ್ದಿದ್ದು
   ಗೊತ್ತಿದ್ದೇ,
   ತುಳುಕದೆ ತುಂಬಿಕೊಂಡ ಕಣ್ಗಳು.
   ತಿರುಗಿದರೆ ತುಳುಕೀತೆಂದು,
   ನೋಡದೆ,
   ಭರಭರನೆ ನಡೆದು,
   ಬಾಗಿಲಿಂದ
   ಮರೆಯಾಗುವ ಮೊದಲೊಮ್ಮೆ
   ಹಣಿಕಿದ್ದು.

ಮೂರನೆಯ ಸಲ-
   ನವಿಲಿನ ಕುಣಿತವಲ್ಲದಿದ್ದರೂ
   ಹೊಸದರ ನಿರೀಕ್ಷೆಯ
   ನಲಿವಿನ ನಡಿಗೆ.
   ಕಣ್ಣು ಹರಿದಾವು
   ಅತ್ತಿತ್ತ,
   ಹಳಬರ ಹುಡುಕುತ್ತ,
   ಒಳಗಿನ ಹುಮ್ಮಸ ಹೊರಗೂ.

ಆಹಾ..! ಗೆದ್ದೆನೆಂದು
ಬೀಗುವಂತಿಲ್ಲ,
ದಾರಿಯುದ್ದಕೂ
ಸಡಿಲವಾಗಿ ಹಿಡಿದ
ಮೆದು ಕೈ,
ಬಿಡಿಸಿಕೊಳ್ಳುವಾಗ
ಬಿಗಿಯಾಗಿದ್ದು .............
ಅಮ್ಮ ಮಗಳಿಗೆ ಮಾತ್ರ ಗೊತ್ತು.

ಇಂದು ನನ್ನ ಸೃಷ್ಟಿ ಶುಭದಾಯಿನಿಗೆ ಶಾಲೆ ಶುರು. ಪ್ಲೇಹೋಮು, ಎಲ್-ಕೆಜಿ ಮುಗಿಸಿ ಈಗ ಯೂ-ಕೆಜಿ.