Monday, April 21, 2014

ಸಾಂತ್ವನ

ನೀನು,
ನಿನ್ನೆ,
ಪೇಟೆಬೀದಿಯ ಮಧ್ಯೆ,
ನನ್ನ ಹರುಕುಬಟ್ಟೆಯನ್ನೂ ಕಿತ್ತೊಗೆದು
ಚಪ್ಪಲಿಯಲ್ಲಿ ಹೊಡೆದುಬಿಟ್ಟೆ.
ಒಂದು ಕಣ್ಣಿನಲ್ಲಿ ನೀರು ಸುರಿದವು-
ಅವಮಾನಕ್ಕೆ,
ಮುಚ್ಚಿಟ್ಟುಕೊಂಡಿದ್ದು
ಬಯಲಾದ ಅಸಹಾಯಕತೆಗೆ,
ಹೊದಿಸಿದ ನೀನೇ
ಕಿತ್ತೊಗೆದ ವಿಪರ್ಯಾಸಕ್ಕೆ.
ಇನ್ನೊಂದು ಕಣ್ಣಲ್ಲಿ ಹನಿಗಳೊಡೆದವು-
ಜನ ಬಂದು,
ಮೈಮುಚ್ಚಿ,
ಕಣ್ಣಲ್ಲೇ ಛೇ ಪಾಪ
ಎಂದಿದ್ದಕ್ಕೆ.

ಪಯಣವೆಂದು
ಭ್ರಮಿಸಿ
ನಿಂತಲ್ಲೇ ನಿಂತಿದ್ದಕ್ಕೆ
ಇದೇ ತಕ್ಕ ಮರ್ಯಾದೆ.

ಕೃತಜ್ಞತೆ ಕೈಕಟ್ಟುತ್ತದೆ.
ದನಿ ಮೂಡದ
ಮಾತುಗಳ
ಬಳ್ಳಿಸಾಲು
ಕಾಗದವಲ್ಲದ ಕಾಗದದಲ್ಲಿ
ಬೆಂಕಿ ಹಚ್ಚುತ್ತದೆ.
ಹೊಗೆಯಿಲ್ಲ,
ಬರಿಯ ಉರಿ ಮಾತ್ರ,
ಕಿಡಿಯೂ ಮರಳದ
ಹಾಗೆ.. ಬೂದಿ ಕೂಡ ಇಲ್ಲ,
ಒಮ್ಮೊಮ್ಮೆ

ಉರಿಯೇ ಸಾಂತ್ವನ.

Friday, April 11, 2014

ಅನುಕ್ತ

ಧುಮ್ಮಿಕ್ಕುತ್ತದೆ
ಧಾರೆ
ಹೊಮ್ಮುತ್ತದೆ
ಜ್ವಾಲೆ
ಸುಯ್ಯುತ್ತದೆ
ಅಲೆ....

ಒಡ್ಡು
ಕಟ್ಟೆ
ದಂಡೆ.. ಗಳಿಗೆ ಸುಳಿಸುಳಿದು-
ತಡೆಯುತ್ತದೆ,
ಹಿಮ್ಮೆಟ್ಟುತ್ತದೆ,
ಮರಳುತ್ತದೆ,

ತುಟಿಗಳಲ್ಲಿ
ನೇತಾಡುವ ಮಾತು..
ತಿರುಗಿ
ಬಂದ ಕಡೆಗೆ ಹೋಗುತ್ತದೆ.

ಹೇಳುವುದಕ್ಕೂ
ಕೇಳುವುದಕ್ಕೂ

ಸಮಯವಿಲ್ಲ.

Monday, April 7, 2014

ಖುಶಿ ಕದ್ದಿಟ್ಟಿದೇನೆ... ರುಚಿ ನೋಡದೆಯೇ...

ಗಾಢ ಕತ್ತಲೆಯ ಒಡಲಿಗೆ,
ಸಾಲುದೀಪದ ಬೆಳಕಿನ ಅಂಚು,
ಕತ್ತಲೆಯನ್ನೇ
ಆಪ್ತವಾಗಿಸುವ ಸಂಚು!

ಟೇಬಲ್ಲಿನ ಮೇಲೆ,
ಮೂಲೆಯಲ್ಲಿ,
ತರಿಸಿಟ್ಟ ಹೊಸ ಪುಸ್ತಕ.
ಪುಟ ಬಿಚ್ಚಿಲ್ಲ,
ಇನ್ನೂ.
ಶುರು ಮಾಡಿದರೆ,
ಮುಗಿದು ಹೋಗುವ ಭಯ.

ಈ ಜನ್ಮದಲ್ಲಿ
ಇದು ಮೊದಲ ಬಾರಿ.
ಅನಿಸಿದ್ದು ಮಾಡದೆ,
ಮುಗಿದು ಹೋಗಬಹುದು
ಎಂದು ತಡೆದಿರುವುದು...!


ಕೋಡಗನ ಕೋಳಿ ನುಂಗಿತ್ತಾ
ಎಂಬ ಶರೀಫಜ್ಜನ ಮಾತು
ಬರಿಯ ಫ್ಯಾಂಟಸಿಯಿಂದ
ನಿಜಕ್ಕೆ ಹೊರಳಿಕೊಳ್ಳುವ
ಹೊತ್ತು......
ಹೌದು ವಯಸ್ಸಾಯಿತು.
ಬಿಸಿಲಿಗೆ ಬಯ್ಯುವುದಕ್ಕೆ
ಮುಂಚೆ,
ಹೆಪ್ಪುಗಟ್ಟಿ ಮೋಡವಾಗುತ್ತಿರುವ
ಗಾಳಿಯ ಅರಿವಾಗಿ
ಸುಮ್ಮನಾಗುವ ಹೊತ್ತು.
ಮುಂದೆಂದೋ ಸುರಿಯಲಿರುವುದಕ್ಕೆ
ಇಂದಿನಿಂದಲೇ ಕಾಯುವ ಹೊತ್ತು.

Wednesday, April 2, 2014

ಕರವಸ್ತ್ರದಂತ ಕವಿತೆ!

ಹುಲ್ಲು ಮುಚ್ಚಿದ
ಹೆಜ್ಜೆ ಮೂಡದ
ಹಾದಿ.

ನೀಲಿಯಲಿ ನೆಲೆಸಿ,
ನೆತ್ತಿ ಸುಡುವವನ
ತಪ್ಪಿಸಿ,
ನೇವರಿಸಿದ
ಮರಹೊದಿಕೆಯ
ಕಡುಹಸಿರು
ನೆರಳು,

ಆರೋಹದ
ನಡುವೆ
ತಿಳಿಹಳದಿ,ಗುಲಾಬಿ
ನೀಲಿ, ಬಿಳಿ, ನೇರಳೆ
ಹೂ ಹೊದ್ದ
ಬಯಲು.

ಬೆವರಿಳಿದು
ಉರಿಯಾಗಿ
ಕಿರಿಹಿಡಿದ ಕಣ್ಣಿಗೆ
ಕಂಡ ಪಯಣದ ಸೊಗಸೇ
ಸೊಗಸು!

ಕಳೆದಿದ್ದು ಎಲ್ಲಿ
ಗಮ್ಯವೆಂದುಕೊಂಡ
ನಿಲುಗಡೆಯಲ್ಲೇ?

ಅದೇಕೋ
ಕಣ್ಣುರಿ,
ಹನಿ ಹೊರಬರದಂತೆ
ತಡೆದು.
ನೆನಪಿನ ಕರವಸ್ತ್ರಕ್ಕೆ
ಸದಾ ಕೆಲಸ,
ಒದ್ದೆಯಾದಷ್ಟೂ
ಒಣಗಿಸುತ್ತದೆ

ಬೆಂಗಳೂರಿನ ಬಿಸಿಲು.

Tuesday, April 1, 2014

ಇಫ್ ವಿಂಟರ್ ಕಮ್ಸ್... ಕೆನ್ ಸ್ಪ್ರಿಂಗ್ ಬೀ ಫಾsssರ್ ಬಿಹೈಂಡ್...? - ಶೆಲ್ಲಿ.

ಅರ್ಧಕ್ಕೆ ಮಡಿಚಿಟ್ಟ ಪುಸ್ತಕ ಸೆಳೆಯುತ್ತದೆ.
ಆದರೇನು ಮಾಡಲಿ ಒಗ್ಗರಣೆಯ ಸಾಸಿವೆ ಸಿಡಿದ ಮೇಲೇ ಪಾತ್ರೆ ಮುಚ್ಚಿಟ್ಟು ಆ ಬದಿಗೆ ಹೊರಳಬೇಕು.
ಅಷ್ಟರಲ್ಲಿ ಇವಳಿಗೆ ಕಕ್ಕ ಬಂದು ಅಮ್ಮಾ ಆsssssತೂ... ತೊಳೆದು, ಕೈತೊಳೆದು, ಅವಳ ಕೈತೊಳೆಸಿ, ಈ ಕಡೆಗೆ ಬರುವಾಗ ಅಕ್ಕನೆಂದರೆ ಪ್ರೀತಿಯ ತಮ್ಮನ ಚಡ್ಡಿಯಲ್ಲಿ ಸುಸ್ಸೂ ಆಗಿಬಿಟ್ಟಿದೆ.
ಚಡ್ದಿ ತೆಗೆದು ನೆಲ ಒರೆಸಿ ಬೇರೆ ಚಡ್ಡಿ ಬದಲಾಯಿಸುವಷ್ಟರಲ್ಲಿ ಇವನಿಗೆ ಟೀ ಕುಡಿಯುವ ಸಮಯ.
ಟೀ ಮುಗಿಯುವಾಗ ಗೆಳತಿಯ ಫೋನು ಬೆಳಗ್ಗಿಂದ ಮೂರು ಸಲಿ ಮಿಸ್ ಕಾಲ್ ಆಗಿಯೂ ಈಗ ಎತ್ತದಿದ್ದರೆ ಎಂಬ ಹಿಂಜರಿಕೆಯಲ್ಲಿ ಮಾತು ಶುರು.
ಮಾತು ಮುಗಿಯುವಾಗ ಕುಕ್ಕರಿನಲ್ಲಿ ಅನ್ನ ಬೆಂದಿದೆ. ಓಹ್ ಮಜ್ಜಿಗೆ ಕಡೆಯಲು ಮರೆತು ಹೋಗಿದೆ.
ಕಡೆದ ಮಜ್ಜಿಗೆಗೆ ಶುಂಠಿ ಚೂರು ಜಜ್ಜಿ, ಕರಿಬೇವೆನೆಸಳು ಸೇರಿಸಿ, ದಿವಾನೆಯ ಮೇಲೆ ಬಿದ್ದುಕೊಂಡಿರುವ ಸಾಪ್ತಾಹಿಕ ಪುರವಣಿಯ ಪುಸ್ತಕ ವಿಮರ್ಶೆಯಲ್ಲಿ ಒಂದು ಮುಗಿಯುವಷ್ಟರಲ್ಲಿ ಮಧ್ಯಾಹ್ನದ ಗಿರಣಿ ಶುರು.
ಎಳೆಯದಕ್ಕೆ ಮಮ್ಮು ನುರಿದು, ತುಸು ಬೆಳೆದವಳಿಗೆ ಕಲೆಸಿಟ್ಟು ಬಾಯಿ ಕಳೆಸಿ ಊಟ ಮುಗಿಯುವಷ್ಟರಲ್ಲೀ ಟಾಮ್ ಅಂಡ್ ಜೆರೀ ಎಪಿಸೋಡೇ ಮುಗಿದಿದೆ.
ಈಗ ದೊಡ್ಡವನ, ಮಕ್ಕಳ ಅಪ್ಪನ ಬಾರಿ. ಭಾನುವಾರವಾದರೂ ಹಪ್ಪಳ ಮುರಿಯದೆ ಉಣ್ಣುವುದು ಹೇಗೆ ಎಂದರೂ ಗೊತ್ತೆನಗೆ.
ಈ ನಿನ್ನಡಿಗೆಯ ಚಂದಕ್ಕೆ ಹಪ್ಪಳವಾದರೂ ಇದ್ದರೆ ಹೇಗೋ ಒಳಗೆ ತಳ್ಳಬಹುದು ಎಂಬ ಅಂದಾಜು ಅವನದೆಂದು. :)
ಎಲ್ಲರ ಊಟ ಮುಗಿದು ಚಿಕ್ಕದನ್ನು ಹೇಗೆ ಹೇಗೋ ಮಂಚಾಲೆಗೆ ಹತ್ತಿಸಿ ಒಂದು ಪುಟೀ ನಿದ್ದೆಯನ್ನೂ ಮುಗಿಸಿ ಬಂದು, ನನ್ನ ಊಟ ಮಾಡುವಾಗ.. ಆಹಾ ಏಮಿ ರುಚಿ.. (ಕುಂವೀ ಟೈಟಲ್ಲು ಕದ್ದರೇ ಆ ರುಚಿ ಸಿಗುವುದು, ಹೇಗೂ ಸೃಜನಶೀಲ ಕದಿಯುವಿಕೆಯೇ ಸೊಗಸು) ಯಾಕಂದರೆ ನನ್ನ ಊಟಕ್ಕೆ ಜೊತೆಗಿರುವುದು ಇಡೀ ಪುರವಣಿ, ಮತ್ತು ಅಕಸ್ಮಾತ ಮುಗಿದು ಹೋದರ ಅದೇ ಅರ್ಧಕ್ಕೆ ಮಡಿಚಿಟ್ಟ ಪುಸ್ತಕ.
ಹೀಗೆಲ್ಲ ಇರುವಾಗ, ಓದಿ ಅದರ ಬಗ್ಗೆ ಬರೀ ಎಂದರೆ ಹೇಗೆ???
ಹೆಚ್ಚೆಂದರೆ ಸ್ಟೇಟಸ್ ಹಾಕಬಹುದು.
ಹಾಗಂತ ಕತೆ ಒಳಗಿಳಿದಿಲ್ಲವೆಂದುಕೋಬೇಡಿ. ಅದಿದೆ ಹೊರಳಾಡುತ್ತ ಒಳಗಿನ ಮನದ ಮೆತ್ತೆಯ ಮೇಲೆ.
ಅಲ್ಲಲ್ಲಿ ತಿವಿಯುತ್ತ ಇನ್ನಲ್ಲಲ್ಲಿ ಮುದಗೊಳಿಸುತ್ತಾ, ಬರಿಯ ಕಾಗದದ ಮೇಲಿನ ಇಂಕಲ್ಲ ಅದು. ಮಾತನಾಡುವ ಭಾವಗಳು. ಎಲ್ಲಿ ಓದಿದ ಮನವು ಮಾತ ಹೊರಡಿಸುವುದೋ ಅಲ್ಲಿ ಕಿವಿಯಾಗುವ ಭಾವಗಳು.
ಚಳಿ ಮುಗಿದು ಬೇಸಿಗೆಯ ಬಿರುವಿಗೆ ಸೂಸುವ ಹೊಂಗೆ ಮರದ ನೆರಳಿನ ಗಾಳಿಯ ಕುಳಿರುಗಳು.
ಹೌದು. ಚೈತ್ರ ವೈಶಾಖ ವಸಂತವನ್ನ ನಾನು ಓದಿದ್ದು ಹೀಗೇ. ಎರಡು ಗಂಟೆಯಲ್ಲಿ ಒಂದೇ ಸಲಕ್ಕೆ ಬಿಡುಬೀಸಾಗಿ ಮುಗಿಸಿದ ಮೊದಲ ಓದನ್ನು ವಾರಗಟ್ಟಲೆಯ ಮರುಓದಾಗಿಸಿ ಅನುಭವಿಸಿದ್ದು.
ಓದಿ ಮುಗಿದ ಮೇಲೆ ಅನ್ನಿಸಿದ್ದು - ಹಾಡಿ ಹಾಡಿ ಬೇಸರಾಗಿ ನೆಲಕೆಸೆದಳು ಕೊಳಲನು.. - ಎಂಬ ಮಾತು ಗಂಡು,ಹೆಣ್ಣು, ಮಾಲೀಕ-ಕೆಲಸಗಾರ, ಬರಹಗಾರ, ಓದುಗ, ಮತ್ತು ಎಲ್ಲ ಪೂರಕ ಸಂಬಂಧಗಳಿಗೂ ಅನ್ವಯಿಸುತ್ತದೆ. ಜೋಗಿ ಕತೆಯ ಎಲ್ಲ ಚಾಪ್ಟರುಗಳಿಗೆ ಇಂತಹುದೇ ಕವಿಸಾಲುಗಳನ್ನ ಶೀರ್ಷಿಕೆಯಾಗಿಟ್ಟಿದ್ದಾರೆ.
ಹಾಗೆಂದೇ ಕತೆ ತನ್ನ ಸಾಲುಗಳಲ್ಲಿ ಮಾತ್ರ ನಿಲ್ಲದೆ ಅದನ್ನು ಮೀರಿದ ಭಾವೋತ್ಕರ್ಷವನ್ನು ಹುಟ್ಟಿಸುತ್ತದೆ.
ಕೊಳ್ಳುಬಾಕ ಸಂಸ್ಕೃತಿಯ ಮುಖವನ್ನ ಹೊತ್ತೂ ಅದರೊಳಗಿನ ಶಚೀತೀರ್ಥವನ್ನ, ಕೊಳದಿ ಮುಳುಗಿದ ಉಂಗುರವನ್ನ, ಉಂಗುರವ ನುಂಗಿದ ಮೀನನ್ನ, ತೋರಲು ದಂಡೆಯ ಮೇಲೇ ಕೂತೇ ಕಪ್ಪೆಕಲ್ಲು ಎಸೆಯುತ್ತಿರುವ ಕತೆಗಾರಿಕೆಯ ಸೊಗಸನ್ನ ಕಟ್ಟಿಕೊಡುತ್ತದೆ.
ಚಿಟ್ಟೆಯಾಗಿ ಮಸಿಯಿಲ್ಲದ ಅಡುಗೆ ಮನೆಯೊಳಗೆ ಬರುವ ಭಾವಭೃಂಗವನ್ನ ಒಳಾಂಗಣ ಗಿಡದ ವೊಲು ಕಾತರಿಸುವ, ಕಥಾನಾಯಕಿ ಹಂಬಲಿಸುವ ಪರಿ ಎಲ್ಲೂ ನಡೆದೀತು. ಮಲೆನಾಡಿನ ಮಕ್ಕಳು ಬಾರದ ಹಳೆಮುದುಕಿಗೂ ಅನಿಸೀತು. ಅಥವಾ ಐಟಿ ಕ್ಯೂಬಿನ ಇಂಗ್ಲಿಷ್ ಪಲುಕಿನ ನಡುವಯದವಳಿಗೂ, ಮಕ್ಕಳು ಮನೆ ಆಫೀಸುಗಳ ನಡುವೆ ದೊಂಬರಾಟ ನಡೆಸುವ ನನ್ನಂತವಳಿಗೂ... ಬೇರು ಕತ್ತರಿಸಿ, ಬೊನ್ಸಾಯ್ ಕುಂಡದ ಆಕೃತಿಗೆ ಹೊಂದಿ ಬೆಳೆದ ಎಲ್ಲ ಚಿಗುರುವಿಕೆಗಳಿಗೂ ಅನಿಸುವ ಹಾಗೆ. ಹುಡುಗಿಗೆ ಮಾತ್ರವೇ ಅಲ್ಲ ಇದು ಹುಡುಗನೊಳಗೂ ಹೊಕ್ಕು ಕಾಡುವ ಹಾಗೆ...
ಹಂಬಲ,ತಲ್ಲಣ ಮತ್ತು ಪ್ರತೀಕ್ಷೆಗಳ ಬದುಕಿಗೆ.. ಊಹೆಗೆ ಮೀರಿದ ಅಂತ್ಯವನ್ನ ಭರಿಸಲು ತತ್ತರಿಸುವ ಎಲ್ಲ ಭಾವಸ್ಪಂದ ಮನಸುಗಳಿಗೆ ಕಲಕುವ ಹಾಗೆ
ಚೈತ್ರ-ವೈಶಾಖ... ವಸಂತ. ಹೌದು ಎಲ್ಲ ಹಿಮಂತಗಳ ಕೊನೆಗೆ ಚಿಗುರೆಬ್ಬಿಸುವ ವಸಂತವಿದೆ ಎನ್ನುವ ಮಾತನ್ನೇ ಬೈಂಡಿಂಗ್ ವೈರಿನ ಹಾಗೆ ಹೊಲಿದುಕೊಂಡ ಕತೆ ಬಲು ಬೇಗ ಮುಗಿಯಿತು. ಬಹುಶಃ ಕತೆಯಾಚೆಗಿನದ್ದನ್ನು ನಾನು ಧ್ಯಾನಿಸುತ್ತ ಕೂರಲು ಸಮಯ ಸಿಗಲಿ ಎಂದಿರಬೇಕು.
ಕತೆಗಾರನಿಗೆ ಕರುಣೆ ಜಾಸ್ತಿ. ಕ್ರೌರ್ಯಕ್ಕಿಂತ ಒಂದು ನೂಲು ಕರುಣೆಯೇ ಜಾಸ್ತಿ.
ಅರ್ಧಕ್ಕೆ ಮಡಿಚಿಟ್ಟ ಪುಸ್ತಕ ಪೂರ್ತಿ ಮುಗಿದಿದೆ. ಈ ಭಾನುವಾರ ಅರ್ಧ ಮಡಿಚಿಟ್ಟ ಪುಸ್ತಕವಿಲ್ಲದೆಯೆ ಅದದೇ ಕೆಲಸ ಪುನರಾವರ್ತನೆಯೊಡನೆ ನಡೆಯಿತು. ಮುಗಿದ ಪುಸ್ತಕ ಒಳಗೊಳಗೇ ನನ್ನನ್ನು ಓದುತ್ತಿರುವ ಪರಿಗೆ ಸ್ವಲ್ಪ ಕಂಗಾಲು ಬಿದ್ದಿರುವುದು ಈ ಕ್ಷಣದ ಸತ್ಯ.

ನಗುವ ಪುರಂದರ ವಿಠಲ ಬರಬಹುದೆಂದು ಕಾಯುತ್ತಾ..

Tuesday, March 4, 2014

ಮರುದಿನ..

ತಾವರೆ ದಳ
ಮಾವಿನ ಹಣ್ಣು
ಬಣ್ಣದ ಚಿಗುರು
ಬೇವಿನ ಎಸಳು-
ಗಳೆಲ್ಲಾ
ಮುದುಡಿ
ಸುಕ್ಕಾಗಿ
ಇಳಿಬಿದ್ದು
ಮಂಕಾಗಿದ್ದವು
ಎರಡು ದಿನ;

ಇಂದು, ಮತ್ತೆ,
ನೇಸರನೆಡೆಗೆ
ತಿರುತಿರುಗಿ ಅರಳಿದೆ ಕೆಂದಾವರೆ,
ಹಣ್ಣು ಕಳಿತು,
ಚಿಗುರಿಗೆ ಬಣ್ಣವಿಳಿದು,
ಎಸಳು ನಳನಳಿಸುತ್ತ,
ಭುವಿಗೆ 
ನಂದನವಿಳಿದ ನೋಟ!
ಮೊನ್ನೆ ಎರಡು ದಿನ
ಜ್ವರ ಬಂದು ಮಲಗಿದವ
ಇವತ್ತು ಮನೆ ತುಂಬ 
ಓಡಾಟ.
ನಿದ್ದೆಗೆಟ್ಟ ಅಮ್ಮನಿಗೆ
ಆಫೀಸು ಕುರ್ಚಿಯೇ
ತಲ್ಪಗಿಲ್ಪ ಮೆರೆದಾಟ.

ಲಕ್ಷ್ಮೀನಾರಾಯಣ ಭಟ್ಟರ ಮಲಗೋ ಮಲಗೆನ್ನ ಮರಿಯೇ ಗೀತೆಯ ರೂಪಕಗಳಿಂದ ಈ ಪೋರನನ್ನು ಅಲಂಕರಿಸಲಾಗಿದೆ.