Wednesday, December 9, 2009

ಬಹುಮುಖೀ ಚೈತನ್ಯ

ಕಣ್ನಲ್ಲಿ ಕಣ್ಣಿಟ್ಟುಕೊಂಡು ಮುಂದಿದ್ದ ಡಾಕ್ಯುಮೆಂಟನ್ನ ತಿದ್ದುತ್ತ ಕೂತಿದ್ದಾಳೆ ಇಳಾ. ಕಣ್ಣಿಗೂ ಲ್ಯಾಪ್ ಟಾಪಿಗೂ ಮಧ್ಯ ಮೋತಿಚೂರು ಲಾಡುಗಳ ಸಿಹಿಪೆಟ್ಟಿಗೆ ಬಂತು. ಕತ್ತೆತ್ತಿ ನೋಡಿದರೆ ಚಂದಕ್ಕೆ ಹಿತವಾಗಿ ನಗುತ್ತ ನಿಂತಿದ್ದ ಸ್ಫೂರ್ತಿ. ಯಾಕೆ ಎಂದು ಬಾಯಿತೆರೆಯುವುದಕ್ಕೆ ಮುನ್ನ, ಇಂಡಿಯನ್ ಕ್ಯಾಲೆಂಡರ್ ಮೇಲೆ ಇವತ್ತು ನನ್ ಮಗ ಹುಟ್ಟಿ ಒಂದ್ವರ್ಷ.ಅದಕ್ಕೆ ಎಂದು ತನ್ನ ಹಿಗ್ಗಿನ ಮೂಲವನ್ನ ತಿಳಿಸಿದಳು. ಅವಳ ಖುಶಿ ಇಳೆಯ ಮನಸ್ಸಿಗೂ ಇಳಿಯಿತು. ಹೌದಲ್ಲ ಮತ್ತೆ ರಜೆ ಹಾಕಿ ಮನೆಯಲ್ಲಿರಬಹುದಿತ್ತಲ್ಲಾ ಎಂದದ್ದಕ್ಕೆ ನಕ್ಕು ಅವನಿಲ್ಲೆಲ್ಲಿ ಇದಾನೆ. ಅವ್ನಿರೋದು ಪುಣೆಯಲ್ಲಿ ಅವನ ಅಜ್ಜ/ಅಜ್ಜಿ ಜೊತೆ. ಸೀಯೂ ಆಮೇಲೆ ಲಂಚ್ ಅವರ್ಸ್ ಅಲ್ಲಿ ಮಾತಾಡೋಣ. ಈಗ ಎಲ್ರಿಗೂ ಸಿಹಿ ಹಂಚಬೇಕಲ್ಲ ಅನ್ನುತ್ತಾ ಪರಿಮಳದ ಅಲೆಯಂತೆ ತೇಲಿಹೋದಳು. ಇಳಾ ದಂಗಾಗಿ ಕುಳಿತಳು. ಆ ಪುಟ್ಟ ಮಗು ೬ ತಿಂಗಳಾದಾಗಿನಿಂದ ತನ್ನ ಅಜ್ಜ ಅಜ್ಜಿಯ ಜೊತೆಯಲ್ಲಿತ್ತು. ಸ್ಫೂರ್ತಿ ಒಬ್ಬ ಪ್ರಾಡಕ್ಟ್ ಮ್ಯಾನೇಜರ್. ಗಂಡ ಇನ್ನೊಂದು ಕಂಪನಿಯಲ್ಲಿ ಹೆಚ್ಚಿನ ಜವಾಬ್ದಾರಿಯ ಇನ್ನೊಂದು ಕೆಲಸದಲ್ಲಿ. ಅವನು ನೆಲ್ಲೂರಿನವನು, ಇವಳು ಪುಣೆಯವಳು. ಇಬ್ಬರ ಹೆತ್ತವರೂ ಅವರವರ ಊರಲ್ಲಿದ್ದರು. ಇಲ್ಲಿ ಇವರಿಬ್ಬರ ಮುದ್ದಿನ ಚಿಕ್ಕ ಸಂಸಾರ. ಮಗು ಹುಟ್ಟಿದಾಗ ನೋಡಿಕೊಳ್ಳಲು ಸಾಧ್ಯವಾಗದೆ ಕಷ್ಟಪಟ್ಟು ಓದಿ ನಿಲುಕಿದ ಕೆಲಸದಲ್ಲಿ ಒಳ್ಳೆಯ ಸಾಧನೆಯನ್ನು ಮಾಡಿ ಮುಂದಿಟ್ಟ ಹೆಜ್ಜೆಗಳನ್ನು ಅಲ್ಲಿಯೇ ಕಟ್ಟಿಹಾಕಲು ಇಷ್ಟವಿಲ್ಲದ ಸ್ಫೂರ್ತಿ ಮಗನನ್ನು ತನ್ನ ಹೆತ್ತವರ ಬಳಿ ಬಿಟ್ಟಿದ್ದಾಳೆ. ಇಳಾಗೆ ಆ ಕ್ಷಣದಲ್ಲಿ ರೇಗಿಹೋಯಿತು. ಇವಳೆಂತಹ ಅಮ್ಮ. ಇಷ್ಟು ಚಿಕ್ಕ ಮಗುವನ್ನು ಹೇಗೆ ಬಿಟ್ಟಿರಬಲ್ಲಳು, ಮಗುವಿನ ಭಾವನಾತ್ಮಕ ಅವಶ್ಯಕತೆಗಳನ್ನು ಅರಿತುಕೊಳ್ಳದೆ ಹೋದರೆ ಹೇಗೆ ಅಂತೆಲ್ಲ ಅನಿಸಿತು.
ಅದೇ ಗುಂಗಿನಲ್ಲಿ ಮನೆಗೆ ಬಂದರೆ ಅವತ್ತು ಸಂಜೆ ಕೆಲಸದವಳು ಬರಲೇ ಇಲ್ಲ. ರಾತ್ರಿ ಎಂಟರವರೆಗೂ ಕಾದು, ಸಿಂಕಿನಲ್ಲಿ ಬಿದ್ದಿದ್ದ ಪಾತ್ರೆಗಳನ್ನೆಲ್ಲ ತೊಳೆದಿಟ್ಟು, ಅನ್ನ-ಸಾರಿಗೆ ರೆಡಿ ಮಾಡಿಟ್ಟು, ಅವಳಿಗೆ ಫೋನ್ ಮಾಡಿದರೆ, ಅಕ್ಕಾ ಮಗಳಿಗೆ ತುಂಬ ಜರಾ, ಬರಾಕಾಗಿಲ್ಲ ಅಂದಳು. ಬಯ್ಯಲು ಹೊರಟ ಬಾಯಿ ಬಿಮ್ಮನೆ ಸರಿ ಬಿಡು, ಜೋಪಾನ ಮಾಡಿಕೋ ಅಂದು ಸುಮ್ಮನಾಯಿತು.
ಮತ್ತೊಂದಿಷ್ಟು ದಿನಗಳ ಗಾಣದಲ್ಲಿ ತಿರುಗಿ, ಬ್ಯಾಂಕ್ ಬ್ಯಾಲೆನ್ಸಿನ ಎಣ್ಣೆಯನ್ನ ಹಿಂಡಿ ತೆಗೆದು, ಪುಟ್ಟ ಮನೆ ಕಟ್ಟಿ, ಮನೆ ಕಟ್ಟಲು ಸಾಲ ಕಟ್ಟಿ, ಎಲ್ಲೋ ಸಿಕ್ಕಿದ ಕೆಲ ಪುರುಸೊತ್ತಿನ ದಿನಗಳಲ್ಲಿ ಊರಿಗೆ ಹೋಗಿ ಬಂದು, ತನ್ನದೇ ಕನಸಿನ ವಿಸ್ತರಣೆಗಳಂತಹ ಪುಸ್ತಕಗಳನ್ನು ಆಗ ಈಗ ಓದುತ್ತಾ ಕ್ಯಾಲೆಂಡರುಗಳನ್ನು ಬದಲಿಸುವ ಭರಾಟೆಯಲ್ಲಿ ಇಳೆಯ ಸಿಟ್ಟು ಕರಗಿ ಹೋಗಿತ್ತು.
ಸ್ಫೂರ್ತಿಯ ಮಗ ತುಂಟನಾಗಿ ಜಾಣನಾಗಿ ಬೆಳೆದು ನಿಂತು ತಿಂಗಳಿಗೊಮ್ಮೆ ಬರುವ ಅಮ್ಮನೊಡನೆ ಕಳೆಯುವ ಕಾಲಕ್ಕೆ ಸಮಾಧಾನಪಟ್ಟುಕೊಂಡು ಅಜ್ಜಿಯ ಮಡಿಲಲ್ಲಿ ನಗುತ್ತಿದ್ದಾನೆ. ಮನೆ ನಡೆಸಲು ಸೋಮಾರಿತನ ತೋರುವ ಗಂಡನೊಡನೆ ಏಗುವ ಪದ್ದು, ಮನೆಕೆಲಸ ಮಾಡಿಕೊಂಡು ತನ್ನೆರಡು ಮಕ್ಕಳನ್ನು ಅವರಿವರ ಮನೆಯಲ್ಲಿ ಬಿಟ್ಟು, ದೊಡ್ಡವರಾದ ಮೇಲೆ ಶಾಲೆಗೆ ಕಳಿಸಿ ಬದುಕನ್ನು ಅವಡುಕಚ್ಚಿ ಎದುರಿಸುತ್ತಿದ್ದಾಳೆ.
ಭರಾಟೆಯ ಬದುಕಿನ ಮಧ್ಯೆ ಇಳೆಯ ಮಡಿಲು ತುಂಬಲು ಕಂದನೊಂದು ಒಳಗಿನಿಂದಲೇ ಸಿದ್ಧತೆ ನಡೆಸಿದೆ. ಡಾಕ್ಟರು ಅದೇನೇನೋ ಕಾಂಪ್ಲಿಕೇಶನ್ನಿನ ಹೆಸರು ಹೇಳಿ ಓಡಾಡಬಾರ‍ದು ಅಂದುಬಿಟ್ಟಿದಾರೆ. ಸಿಕ್ಕಾಪಟ್ಟೆ ಇರುವ ಹೆಚ್ಚಿನ ಜವಾಬ್ಡಾರಿಯ ಕೆಲಸವನ್ನ ಬೇರೆಯವರಿಗೆ ವಹಿಸಲು ಇಷ್ಟವಿಲ್ಲದ ಇಳೆಯ ಮ್ಯಾನೇಜರ್, ನೀನು ಮನೆಯಿಂದಲೇ ಕೆಲಸ ಮಾಡು, ಹೆರಿಗೆಯ ಹೊತ್ತಿನಲ್ಲಿ ರಜೆ ತಗೋಬಹುದು ಅಂತ ಒಪ್ಪಿಸಿದ್ದಾನೆ. ಇಷ್ಟು ಅವಕಾಶ ಸಿಗುವುದೇ ಹೆಚ್ಚು ಅಂದುಕೊಂಡ ಇಳೆ ಮನೆಯಿಂದಲೇ ಪ್ರಾಜೆಕ್ಟುಗಳನ್ನ ಮುಗಿಸುತ್ತಿದ್ದಾಳೆ. ಕಂದನೊಂದು ಮೂಡಿದರೆ ಹೀಗ್ ಹೀಗೆ ಮಾಡಬೇಕು ಅಂತ ಯಾವತ್ತಿನಿಂದಲೋ ಕಟ್ಟಿಕೊಂಡಿದ್ದ ರಮ್ಯ ಕನಸುಗಳೆಲ್ಲ ವಾಸ್ತವದ ಓಟದ ಬದುಕಿನಲ್ಲಿ ಸೈಡ್ ವಿಂಗಿನಲ್ಲಿ ಸಪ್ಪಗೆ ನೋಡುತ್ತ ಕೂತಿವೆ. ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿ ಮುಗಿಸುವಷ್ಟರಲ್ಲಿ ಆರಾಮದಲ್ಲಿ ಕೂತು ಊಟ ಮಾಡಲೂ ಸಮಯವಿಲ್ಲದ ಇಳೆಗೆ, ಕೆಲಸ ಮುಗಿಸಿ ಬೆನ್ನು ಚಾಚಿ ಮಲಗಿಕೊಳ್ಳುವುದೇ ದೊಡ್ಡ ರಿಲೀಫು ಮತ್ತು ರಿಲ್ಯಾಕ್ಸೇಷನ್.
ಇಷ್ಟೇ ದಿನ ಓಡಿದ್ದ ಸಮಯ ಇನ್ನೂ ಮುಂದಕ್ಕೆ ನಡೆದು ಒಂದು ದಿನ ಬೆಳಿಗ್ಗೆ ಮುಂಚೆ ಚಳಿಯ ದಿನದಲ್ಲೂ ಮಳೆ ಸಣ್ಣಗೆ ಹನಿಯುವಾಗ, ಹೊನಲು ಅಮ್ಮನ ಮಡಿಲ ಬೆಚ್ಚನೆ ಗೂಡಿನಿಂದ ಅಚ್ಚರಿಯ ಜಗದ ಅಂಗಳಕ್ಕೆ ಹರಿದುಬಂದಳು.
ಒಂದು ಮೂರು ತಿಂಗಳು ಇಳೆಯ ಮಟ್ಟಗೆ ಆಫೀಸಿಲ್ಲ, ಪ್ರಾಜೆಕ್ಟಿಲ್ಲ, ಮೈಲಿಲ್ಲ, ಫೋನಿಲ್ಲ, ಧಾವಂತವಿಲ್ಲ - ನಿದ್ದೆಯೂ ಇಲ್ಲ. ಹಗಲೂ ರಾತ್ರಿಯ ಭೇದವಿಲ್ಲದ ಕಂದನ ಬೇಡಿಕೆಗಳನ್ನ ಗಮನಿಸುವಷ್ಟರಲ್ಲಿ ಅಮ್ಮನೆಂಬ ಪದವಿಯ ಆಳ ಅಗಲಗಳನ್ನ ಅರ್ಥ ಮಾಡಿಕೊಂಡಾಯಿತು.
ಇಷ್ಟಕ್ಕೆ ಮುಗಿಯಿತೇ? ಬಾಣಂತನದ ರಜೆ ಮುಗಿದು ಆಫೀಸು ಶುರುವಾದ ಮೇಲೆ ಹೊಸದೇ ಕ್ಷಿತಿಜ. ಆಫೀಸು ಆಫೀಸಿನಲ್ಲಿ, ಮನೆ ಮನೆಯಲ್ಲಿ ಎಂಬ ಎರಡು ಹಳಿಗಳ ಮೇಲೆ ಅಮ್ಮನೆಂಬ ಸವಾರಿ. ರಾತ್ರಿ ನಿದ್ದೆ ಇಲ್ಲ ಎಂದು ಮೀಟಿಂಗ್ ರೂಮಿನಲ್ಲಿ ಮಾತಾಡುವ ಹಾಗಿಲ್ಲ. ಆಫೀಸಿನಲ್ಲಿ ತುಂಬ ಕೆಲಸ ಎಂದು ಮನೆಗೆ ತಂದು ಮಾಡುವಂತಿಲ್ಲ. ಬೆಳಿಗ್ಗೆ ಎಷ್ಟೇ ಲೇಟಾಗಿ ಎದ್ದರೂ, ಹಾಲುಣಿಸದೆ ಹೊರಡುವಂತಿಲ್ಲ, ಮಧ್ಯಾಹ್ನದ ಊಟಾ ಕ್ಯಾಂಟೀನಿನಲ್ಲಿ ನಡೆಯುತ್ತದೆ ಎಂದು ಅಡ್ಜಸ್ಟ್ ಮಾಡಿಕೊಂಡರೂ ಮಗುವಿನ ಪೋಷಣೆಯ ಮೆತ್ತನೆ ಅನ್ನ ಬೇಳೆ ತರಕಾರಿಗೆ ಕುಕ್ಕರ್ ಸೇರಿಸಿಟ್ಟೇ ಓಡಿಕೊಂಡೇ ಮನೆಯಿಂದ ಹೊರಡಬೇಕು. ಈ ಟಾಸ್ಕ್ ಮುಗಿಯಿತು ಎಂದು ನಿಸೂರಾಗಿ ಕುಳಿತ ಕ್ಷಣದಲ್ಲಿ ಕೈ ಅನೈಚ್ಛಿಕವಾಗಿ ಮನೆಯ ನಂಬರ್ ಡಯಲ್ ಮಾಡಿರುತ್ತದೆ. ಎದ್ದು, ತಿಂಡಿ ತಿಂದು ಸ್ನಾನ ಮಾಡಿದ ಮಗುವಿನ ಚಿತ್ರ ಅಮ್ಮನ ಕಣ್ಣು ಮನದಲ್ಲಿ ತುಂಬಿಕೊಡಿರುತ್ತದೆ. ಮೆತ್ತಗೆ ಇಡುವ ತಪ್ಪು ಹೆಜ್ಜೆಯ ನೆನಪು ಗುಂಗಿನಂತೆ ಹಾಗೇ ಇದೆ. ಕೈ ನೀಡಿ ನಗುವ ಮೊಣಕಾಲ ಮೇಲೆ ಕುಳಿತ ಪೋರಿಯ ಸೆಳೆತವನ್ನ ಒತ್ತಿ ಹಿಡಿದುಕೊಂಡು, ಮರೆತ ಹಾಗೆ ನಟಿಸುತ್ತ ಆಫೀಸಿನ ಕೆಲಸ ನಡೆಯುತ್ತಿದೆ. ಸಂಜೆ ಮನೆಗೆ ಹಿಂದಿರುಗುವ ಅಮ್ಮನಿಗೆ ಕಾಯುವ ಮಗು ಮನೆಯ ಹೊಸಿಲು ದಾಟಿ ಕಂಪೌಡಿನ ಗೇಟಿಗೇ ಬಂದಿರುತ್ತದೆ. ಹೊರಗಿನ ನಾಯಿ, ಗಿಡ, ಪಾರಿವಾಳ, ರಸ್ತೆಯಲ್ಲಿನ ಓಡಾಟ ಎಲ್ಲಕ್ಕೂ ಕಣ್ಣಾಗಿ, ದೂರತಿರುವಿನಲ್ಲಿ ಕಾಣಿಸಿಕೊಳ್ಳುವ ಸುಪರಿಚಿತ ಭಂಗಿಗೆ ಕಾಯುತ್ತಾ ಇರುವ ಚೈತನ್ಯ ಅಮ್ಮ ಬಂದ ಕೂಡಲೇ ದುಪ್ಪಟ್ಟಾಗುತ್ತದೆ. ಕರುವೊಂದು ಮೆತ್ತಗೆ ನೆಕ್ಕುವಂತೆ ಅಮ್ಮನಿಗೆ ಅಂಟಿಕೊಳ್ಳುವ ಮಗುವು ರಾತ್ರಿ ೧೨ರವರೆಗೆ ಅಮ್ಮನ ಹಿಂದೆ ಮುಂದೆ. ಇದ್ದಕ್ಕಿದ್ದಂಗೆ ಈ ದಿನಚರಿ ಏರುಪೇರಾಗುವುದುಂಟು. ಕೆಲಸದ ಮಧ್ಯೆ ಫೋನ್ ಮಾಡಿದಾಗ - ಇವತ್ತು ಬೆಳಗಿನಿಂದ ಮೂರು ಸಲ ನೀರಾಗಿ ಕಕ್ಕ ಆಯಿತು ಅಥವಾ ಒಂದು ಸಲವೂ ಚಡ್ದಿ ಒದ್ದೆ ಆಗಿಲ್ಲ ಅಂತ ಪಾಪುವನ್ನು ನೋಡಿಕೊಳ್ಳುವ ಗೌರಮ್ಮ ಹೇಳಿದ ಕೂಡಲೆ ಆಫೀಸಿನ ಕೆಲಸ ಏರು ಪೇರಾಗುತ್ತದೆ. ಇವತ್ತು ಅರ್ಧ ದಿನ ರಜೆ ಹಾಕಿ ಬಸ್ಸು ಹಿಡಿದು ಊರ ಹೊರಗಿರುವ ಆಫೀಸಿನಿಂದ ಮನೆಗೆ ಹೊರಡುತ್ತಾಳೆ. ಡಾಕ್ಟರರ ಸಂಜೆಯ ಅಪಾಯಿಂಟ್ ಮೆಂಟ್ ತಗೊಂಡು ಮನೆ ಸೇರಿದ ಅಮ್ಮನ ಮಡಿಲಿಗೆ ಆತುಕೊಳ್ಳುವ ಕಂದ.
ಕೆಲಸ ಬಿಟ್ಟು ಬಿಡಲೇ - ಮಗುವಿನ ಭಾವನಾತ್ಮಕ ಆಸರೆಯನ್ನು ಗೋಜಲಾಗಿಸುವುದು ಅಮ್ಮನಾಗಿ ಎಷ್ಟು ಸರಿ. ಅವತ್ತು ಸ್ಫೂರ್ತಿಯ ಬಗ್ಗೆ ಸಿಟ್ಟು ಬಂದಿತ್ತಲ್ಲ ಈಗ ತನ್ನ ಪರಿಸ್ಥಿತಿಯೇನು ಭಿನ್ನ ಅನಿಸುತ್ತಿದೆ. ಹಿರಿಯರಿಲ್ಲದ ಚಿಕ್ಕ ಸಂಸಾರ, ಇಬ್ಬರೂ ದುಡಿಯುವ ಬದುಕಿನ ಹಾದಿಯಲ್ಲಿ ಹೊಸ ಮೊಗ್ಗುಗಳನ್ನ ಕುಳಿತು ಕಾಯುವುದು ಯಾರು? ಅಜ್ಜ ಅಜ್ಜಿಗೆ ದೂರದೂರಲ್ಲಿ ಅವರದೇ ಬದುಕು. ಅವರು ಕಂಡುಕೊಂಡ ನೆಲೆಯನ್ನು ಬಿಟ್ಟು ಇಲ್ಲಿ ಮಕ್ಕಳ ಜೊತೆ ಗೂಡು ಬದುಕಿನಲ್ಲಿ ಇರು ಎಂದು ಹೇಳುವುದು ಹೇಗೆ?

ಇದೆಲ್ಲ ಹೋಗಲಿ ಮಗುವನ್ನು ಮಕ್ಕಳನ್ನು ನೋಡಿಕೊಳ್ಳಲೆಂದೇ ಯಾರಾದರೊಬ್ಬರಿದ್ದರೂ, ಅಮ್ಮನ ಜವಾಬ್ದಾರಿಗಳು ಬಹುಮುಖಿಯೇ ಅಲ್ಲವೇ. ಅಪ್ಪ ಇವತ್ತು ನನಗೆ ಮೀಟಿಂಗ್ ಇದೆ ಡಿಸ್ಟರ್ಬ್ ಮಾಡುವ ಹಾಗಿಲ್ಲ ಎಂದು ಫೋನನ್ನು ಸ್ವಿಚ್ ಆಫ್ ಮಾಡಿಡಬಹುದು ಅಮ್ಮ ಇಡುತ್ತಾಳೆಯೇ? ಇವತ್ತು ತುಂಬ ತಲೆನೋವು ಎಂದು ಮನೆಗೆ ಬಂದು ಸಪ್ಪೆ ಮುಖ ಮಾಡಿ ಮಲಗುವ ಹಾಗಿಲ್ಲ, ಹಚ್ಚಗೆ ನಗುವ ಕಂದನನ್ನು ನಗುತ್ತಲೇ ಮಾತನಾಡಿಸಿ ಎತ್ತಿಕೊಂಡು ಲಾಲಿಸಬೇಕು. ಇಲ್ಲಿಯವರೆಗೂ ತನ್ನದಾಗಿ ಹಬ್ಬಿಸಿಕೊಂಡಿದ್ದ ಹವ್ಯಾಸ, ಆಸಕ್ತಿ, ಚಟುವಟಿಕೆಗಳನ್ನು ಕೆಲವು ಕಾಲವಾದರೂ ಕಟ್ಟಿ ನಾಗಂದಿಗೆಯಲ್ಲಿಟ್ಟು, ಎಲ್ಲ ಸಮಯವನ್ನೂ ಮಗುವಿಗೇ ಮೀಸಲಿಡಬೇಕು. ಹಾಗಂತ ಎಲ್ಲ ಬೇಕುಗಳು ಮತ್ತು ಕಟ್ಟಿ ಹಾಕುವ ಕರ್ತವ್ಯವೆಂದಲ್ಲ. ಈ ಎಲ್ಲ ತಪನೆಗೂ ಒಂದು ಕಿಲಕಿಲ ನಗು ತಂಪು ನೇವರಿಕೆಯಂತೆ ಆವರಿಸುತ್ತದೆ. ನನಗೆ ನೀನು ಬೇಕಿತ್ತು ಸಿಕ್ಕಿದೆ ಎಂಬ ಸಮಾಧಾನದ ಆ ಪುಟಾಣಿ ಅಪ್ಪುಗೆ ಎಲ್ಲ ಸುಸ್ತಿಗೂ ಒಂದು ಮದ್ದಾಗಿ ಒದಗುತ್ತದೆ.

ಹೀಗೆಲ್ಲ ಇದ್ದು ಒಂದೊಂದು ದಿನ ತುಂಬ ಬೇಸರವಾಗಿ ತಲೆಗೆಡುತ್ತದೆ. ಇದು ನನ್ನ ಕೈಯಲ್ಲಿ ಸಾಗುವುದಿಲ್ಲ ಅಂದುಕೊಂಡು ನಡೆವಾಗ ನಮ್ಮ ದೈನಂದಿನ ಕೆಲಸದ ಮಧ್ಯೆ ನೆನಪಾಗುವ ಹಟಬಿಡದೆ ಕೆಲಸವನ್ನ ನಡೆಸುವ ಹೈ-ಫೈ ಸ್ಫ್ರೂರ್ತಿ, ತಲೆಬಗ್ಗಿಸದೆ ಅವಡುಕಚ್ಚಿ ಬದುಕುವ ಕೆಲಸದ ಪದ್ದಮ್ಮ, ದಿನದಿನವೂ ಬಿ‌ಎಂಟಿಸಿಯ ರಶ್ ಬಸ್ಸಿನಲ್ಲಿ ತೂಗುಯ್ಯಾಲೆ ಮಾಡಿಕೊಂಡು ಸಾಗುವ ಸಾವಿರಾರು ಅಮ್ಮಂದಿರು, ಬೆನ್ನಿಗೆ ಹರಕು ದುಪಟ್ಟಾದಿಂದ ಜೋಲಿಕಟ್ಟಿಕೊಂಡು ಕಂದನ ಹೊತ್ತು ಕೆಲಸ ಮಾಡುವ ಕಟ್ಟೋಣ ಕೆಲಸದವರು, ಸ್ಕೂಟಿಯೋ ಪ್ಲೆಶರ್ರೋ ಸುಂಯ್ಯನೆ ಇಲ್ಲಿಂದಲ್ಲಿಗೆ ಮಗುವನ್ನು ಸಾಗಿಸಿ, ಅಜ್ಜಯ-ಪ್ಲೇಹೋಮಿನ ಮಡಿಲಿಗೆ ಹಾಕುತ್ತ ಕೆಲಸಕ್ಕೆ ಹೊರಡುವವರು, ಇದೆಲ್ಲ ಮಾಡುತ್ತಲೇ ಹಣೆಗೆ ಮ್ಯಾಚಿಂಗ್ ಬಿಂದಿಯನ್ನಿಡಲು ಮರೆಯದೆ, ಮುಡಿಗೆ ಒಂದು ಚಂದದ ಹೂವು ಸಿಕ್ಕಿಸುವವರು, ಸಿಕ್ಕಾಪಟ್ಟೆ ಕೆಲಸದ ಮಧ್ಯೆ ಒಂದ್ ಹತ್ತು ನಿಮಿಷ ಬಿಡುವು ಮಾಡಿಕೊಂಡು ಕಂದನ ಫೋಟೋ ತೋರಿಸುತ್ತಲೋ, ಆಟವನ್ನು ಅಭಿನಯಿಸುತ್ತಲೋ, ಸಿಹಿ ಹಂಚುತ್ತಲೋ ಕಷ್ಟಗಳನ್ನ ನುಂಗಿ ನಗುವವರು, ಎಲ್ಲ ನೆನಪಾಗುತ್ತಾರೆ.
ಅಲೆದಲೆದು ಗಳಿಸಿದ್ದ ಮೊದಲ ಕೆಲಸ, ಆ ಕೆಲಸ ತುಂಬಿದ ಆತ್ಮವಿಶ್ವಾಸ, ಈಗ ಮಾಡುತ್ತಿರುವ ಕೆಲಸದಿಂದ ದೊರಕುವ ಸ್ಥೈರ್ಯ ಮತ್ತು ಗಟ್ಟಿತನ ಎಲ್ಲ ಸಾಲಾಗಿ ನಿಂತು ಭರವಸೆ ಹುಟ್ಟಿಸುತ್ತವೆ.
ನೀನು ಹೊರಗೆ ಹೋದಾಗ ನಾನಿರುತ್ತೇನೆ ಎಂದು ನಿಲ್ಲುವ ಅಮ್ಮ, ಬೇಬಿ ಸಿಟ್ಟರ್ ಮತ್ತು ಅತ್ತೆಮ್ಮ ಮಾಡುವ ಕೆಲಸ ಬಿಡಬಾರದೆಂದು ಹುರಿದುಂಬಿಸಿದಂತಾಗುತ್ತದೆ. ಬಿರುನುಡಿಯಾಡದ ಸಂಗಾತಿಯ ಹೊಂದಾಣಿಕೆಯ ದಿನಚರಿ, ನಾನು ತೊಂದರೆ ಕೊಡುವುದಿಲ್ಲವೆಂಬ ಮಾತುಕೊಡುತ್ತದೆ.
ಬರಿಗಾಲು,ತುಂಬಿದ ಬಸ್ಸು,ಸ್ಕೂಟಿ ಬೈಕು, ಕಾರು, ಕ್ಯಾಬು, ವಿಮಾನಮುಖೀ ಮಾತೆಯರು ಮತ್ತವರ ಬಹುಮುಖೀ ಚೈತನ್ಯ, ಎಷ್ಟೇ ಕುಗ್ಗಿಹೋಗಿದ್ದರೂ ಮಮತೆಯನ್ನ ಹಚ್ಚಗಿರಿಸುವ ಕಂದನ ದಿವ್ಯಮುಗ್ಧತೆ ಮತ್ತು ಅವಲಂಬನೆ, ಹಿಂದೆಂದೋ ಕುಣಿದು ಕುಪ್ಪಳಿಸಿದ ಬಾಲ್ಯದ ಚಲನಶೀಲತೆ ಇಳೆಯ ಈಗಿನ ಬದುಕನ್ನ, ಚೈತನ್ಯವನ್ನ ತುಂಬಿಕೊಂಡು ಮನೆಯಲ್ಲೂ, ಆಫೀಸಿನಲ್ಲೂ, ತನ್ನದೇ ಆದ ಹವ್ಯಾಸವಲಯದಲ್ಲೂ ಒಂದು ಆಹ್ಲಾದಯುತ ಪ್ರಭಾವಳಿಯನ್ನ ಕಟ್ಟಿಕೊಡುವುದು ದಿನನಿತ್ಯದ ಅಚ್ಚರಿ.

ಎಲ್ಲಕ್ಕಿಂತ ಅಚ್ಚರಿಯೆಂದರೆ ನಾವು ಕೆಲಸಕ್ಕೆ ಹೋಗುವ ಎಲ್ಲ ಅಮ್ಮಂದಿರಲ್ಲೂ ಇಳೆಯ ವಿವಿಧ ಸ್ವರೂಪವೇ ಪ್ರತಿಫಲಿಸುತ್ತದೆ. ಅದೇ ಸಂಭ್ರಮ,ಅದೇ ಸಂಕಟ, ಅದೇ ಸಂಧಿಗ್ಧ, ಅದೇ ಚೈತನ್ಯ, ಅದೇ ಸಂಚಲನ.
ಸೃಷ್ಟಿಯ ನವನವೋನ್ಮೇಷತೆಯೊಂದೇ ಮಹಿಳೆಯರ ಬದುಕನ್ನ ಸಾರ್ಥಕವಾಗಿ ಪ್ರತಿನಿಧಿಸಬಲ್ಲ ಉಪಮೆ.
ಸಂಕಟದಲ್ಲಿ ಸಂತಸವನ್ನ ಆವಾಹಿಸಿಕೊಳ್ಳುವುದಕ್ಕೆ ಇನ್ನೊಂದು ಸಮರ್ಥಕ ಹೆಸರು ಅಮ್ಮ.
ನಿಜ ಹೇಳಲೆ? ಮಗುವಿನ ಮುದ್ದು ಮುಖದ ಅನನ್ಯ ಬಾಂಧವ್ಯಕ್ಕೆ ಸೋಲುವ, ಇನ್ನೂ ಎಷ್ಟು ಕಷ್ಟವಾದರೂ ಪರವಾಗಿಲ್ಲ ಎಂದು ಎದ್ದು ಬಂದು ನಿಲ್ಲುವವಳೇ ಅಮ್ಮ.
ಅದಕ್ಕೇ ಅಲ್ಲವೇ ಮಗುವಿನ ಮೊದಲ ತೊದಲೇ ಅಮ್ಮ!
ನೋವಿನ ಮೊದಲ ಪ್ರತಿಸ್ಪಂದನೆಯ ಶಬ್ಧರೂಪವೂ ಅಮ್ಮ!

ಜೀವಸೃಷ್ಟಿ ಮತ್ತು ಸಂಭಾಳಿಸುವಿಕೆ ಎರಡೂ ಅತ್ಯುತ್ಕೃಷ್ಟ ಹಂತ. ಇವು ಅತಿ ಹೆಚ್ಚಿನ ಚೈತನ್ಯ, ಶಕ್ತಿಗಳನ್ನು ಬೇಡುತ್ತವೆ. ಅದನ್ನು ನಿಭಾಯಿಸಲು ಅಮ್ಮನಾಗುವುವಳಿಗೆ ಮಾತ್ರ ಸಾಧ್ಯ.

ಇಳೆಗೆ ಗೊತ್ತು, ನಾಳೆ ಒಂದು ದಿನ - ತನ್ನದೇ ಗತಿಯಲ್ಲಿ ಹೊರಡಲಿರುವ ಹೊನಲು ಅಮ್ಮನ ಬಗ್ಗೆ ಮಾತನಾಡಲು ಹೆಮ್ಮೆಯಿಂದಿರುತ್ತಾಳೆ ಅಂತ. ಅದು ಸಾಕು ಇವತ್ತಿನ ದಿನದ ಚೈತನ್ಯವನ್ನು ತುಂಬಲಿಕ್ಕೆ. ಅಲ್ಲವಾ? ಏನನ್ನುತ್ತೀರ ನೀವು?