Thursday, December 13, 2007

ಚಾಂದ್ ಸೀ ಮೆಹಬೂಬಾ

ಚಾಂದ್ ಸೀ ಮೆಹಬೂಬಾ ಹೋ ತುಮ್ ಬಿಲ್ಕುಲ್ ಜೈಸಾ ಮೈನೇ ಸೋಚಾ ಥಾ...

ತುಂಬು ಚಂದಿರನಂತ ಹುಡುಗಿಯಿರಬಹುದೆ ಅವಳು ಅಂದುಕೊಂಡಿದ್ದೆ ಅವತ್ಯಾವತ್ತೋ ಅಮ್ಮ ತಂದಿಟ್ಟುಕೊಂಡ ಭಾವಗೀತೆಯ ಕ್ಯಾಸೆಟ್ಟಿನಲ್ಲಿ ಬಾರೆ ನನ್ನ ದೀಪಿಕಾ ಕೇಳಿದಾಗ.. ನನಗೆ ಆಡುವ ವಯಸ್ಸು..ಮತ್ಯಾವತ್ತೋ ಹೈಸ್ಕೂಲಿನ ಕ್ಲಾಸ್ ಮೇಟಿಗೆ ನೋಟ್ ಬುಕ್ಕು ಕೊಟ್ಟಿದ್ದು ನೋಡಿದ ಗೆಳೆಯರು ಚುಡಾಯಿಸಿದಾಗ ನಕ್ಕು ಸುಮ್ಮನಾಗಿದ್ದೆ ಗೊತ್ತಿತ್ತು ಇವಳಲ್ಲ ಅವಳು ಅಂತ. ಕಾಲೇಜಿಗೆ ಹೋಗುವಾಗ ಎಲ್ಲರೂ ಕಣ್ಣೆತ್ತಿ ನೋಡಬೇಕೆಂದು ಚಂದವಾಗಿ ಟ್ರಿಮ್ಮಾಗಿ ಹೋಗಿದ್ದು ಹೌದು, ಆದ್ರೆ ಅವಳು ಸಿಗಲೇಬೇಕೆಂದೇನೂ ಅಲ್ಲ.. ರಜೆಯಲ್ಲಿ ಊರಲ್ಲಿ ಅಕ್ಕತಂಗಿಯರು ಚುಡಾಯಿಸುವಾಗ, ಅಣ್ಣ ಅವನ ಇಂಜಿನಿಯರಿಂಗ್ ಗೆಳತಿಯರ ವಿಷಯ ಹೇಳುವಾಗ ಮನದಲ್ಲಿ ಪ್ರೀತಿಗೂಡಿನ ಮೊದಲ ಕಡ್ಡಿ.. ಅಮ್ಮ ಆಗಾಗ ತಂದಿಡುವ ಹೊಸ ಹೊಸ ಭಾವಗೀತಗಳಿಂದ ಅಲ್ಲಲ್ಲಿ ಕಡ್ಡಿ ಕದ್ದು ಗೂಡು ಒಂದು ಶೇಪಿಗೆ ಬರುತ್ತಿತ್ತು.. ಕನಸೆಲ್ಲ ಕಣ್ಣಲ್ಲಿ ನೆಲೆಯಾಗಿ ಬಂದ ಗಳಿಗೆಯಂತೋ ಏನೋ ಅಲ್ಲೆ ಮನೆ ಮಾಡಿ ಸುಬ್ಬಾ ಭಟ್ಟರ ಮಗಳಿಗೆ ಕಾಯತೊಡಗಿದೆ!

ಅವತ್ತು ಕಾರಿಡಾರಲ್ಲಿ ಜೋರು ಜೋರಾಗಿ ಬೀಸು ಹೆಜ್ಜೆ ಬೀಸುಗೈ ಮಾಡುತ್ತ ನಡೆದವನ ನೋಟ್ ಬುಕ್ಕಿಗೆ ನಿನ್ನ ದಾವಣಿ ಸಿಕ್ಕಿದ್ದು ಹ್ಯಾಗೆ. ಸಿಕ್ಕ ದಾವಣಿಯನ್ನು ಬಿಡಿಸಿಕೊಳ್ಳುತ್ತ ಸಿಡುಕುಗಣ್ಣಲ್ಲಿ ನೋಡಿದ ನಿನ್ನ ನೋಟ ನನ್ನ ಸಿಕ್ಕಿಸಿಹಾಗಿದ್ದು ಹೇಗೆ? ಯಾರು ಹೇಳಬಲ್ಲರು ಇದನ್ನ..
ಅಂತೂ ಇಂತೂ ಜೋಪಾನ ಮಾಡಿ ಕಟ್ಟಿದ ಗೂಡಲ್ಲಿ ನಿನ್ನೆಡೆಗಿನ ಪ್ರೀತಿಮೊಟ್ಟೆ.. ಕಾವು ಕೊಡುತ್ತೀಯಾ ನೀನು? ಹೇಗೆ ಕೇಳಲಿ ಅಂತ ಗೊತ್ತಾಗದೆ ಒಂದ್ವಾರ ಒದ್ದಾಡಿದೆ..ಬೆಳಿಗ್ಗೆ ಕ್ರಿಕೆಟ್ ಪ್ರಾಕ್ಟೀಸಿಗೆ ಹೋದ್ರೆ ಎಲ್ಲಾ ಬಾಲುಗಳೂ ವೈಡೇ..ಬ್ಯಾಟಿಂಗಲ್ಲಿ ಪ್ರತಿಸಲವೂ ಮೊದಲ ಬಾಲಿಗೇ ಔಟು.. ಕೋಚ್ ಗೆ ಸಿಟ್ಟು ಏನಪ್ಪಾ ಕ್ಯಾಪ್ಟನ್ ಆಗಿ ಹೀಗ್ ಮಾಡಿದ್ರೆ ಹೇಗೆ? ಏನಂತ ಹೇಳಲಿ ನಾನು.. ನನ್ನ ಗುರಿಯೆ ತಪ್ಪೋಗಿದೆ ಅಂತಲೆ ಗುರಿಯೊಂದು ಹೊಸತಾಗಿ ಮೂಡಿದೆ ಅಂತಲೆ? ಡಿಫೆನ್ಸೇ ಇಲ್ಲದೆ ಬರಿಗೈಯಲ್ಲಿ ನಿಂತಿದೀನಿ ಅವಳಿಗಾಗಿ, ಭ್ಯಾಟಿಂಗ್ ಹೆಂಗ್ ಮಾಡಲಿ ಅಂತಲೇ?
ಏನೋ ಒಟ್ಟು ಆ ವಾರ ಕಳೆದೆ.

ಮುಂದಿನ ವಾರ ಅವಳೇ ಬರಬೇಕಾ. ಲೈಬ್ರರಿಯಲ್ಲಿ ನಾನು ತಗೊಂಡ ಪುಸ್ತಕವೇ ಅವಳಿಗೆ ಬೇಕಿತ್ತಂತೆ. ಲೈಬ್ರರಿಯನ್ ಕೊಟ್ಟ ಡೀಟೈಲ್ಸ್ ತಗೊಂಡು ನನ್ನತ್ರ ಬಂದಿದ್ದಳು..
ಓಹ್ ನೀನಾ ಅನ್ನುವ ಅನ್ನುವ ಅಚ್ಚರಿತುಂಬಿದ ಕಣ್ಣುಗಳ ಆಳಕ್ಕೆ ಇಳಿದವನಿಗೆ ಮತ್ತೆ ಮೇಲೆ ಬರಲಾಗಲಿಲ್ಲ. ನಾನೇನೂ ಹೇಳದೆ ಅವಳಿಗೆ ಗೊತ್ತಾಗಿಹೋಗಿತ್ತು. ಅವಳ ಕೆನ್ನೆಕೆಂಪು ನಂಗೆ ಅದನ್ನೇ ಸಾರಿ ಸಾರಿ ಹೇಳಿತು.. ತಗೋಳಿ ಅಂತ ನೋಟ್ ಬುಕ್ ಕೊಡಕ್ಕೆ ಹೋದೆ - ಅವಳು ಎಳೆಚಿಗುರಿನಂತ ಬೆರಳುಗಳಲ್ಲಿ ಆ ಮುದ್ದಾದ ಬಾಯಿ ಮುಚ್ಚಿಕೊಂಡು ನಗುನಗುತ್ತ ತಲೆಯಾಡಿಸಿ ಹೊರಟು ಹೋದ ಮೇಲೆ ಗೊತ್ತಾಯಿತು. ಅವಳಿಗೆ ಬೇಕಿರುವುದು ನನ್ನ ನೋಟ್ ಬುಕ್ಕಲ್ಲ ಲೈಬ್ರರಿಯಲ್ಲಿ ತಗೊಂಡು ಎರಡು ವಾರ ಡ್ಯೂ ಆಗಿರೋ ಪುಸ್ತಕ ಅಂತ.. ಏನ್ ಮಚ್ಚಾ ಅಂತ ಗೆಳೆಯರು ಕಂಬಕಂಬಗಳ ಸಂದಿಯಿಂದ ಹೊರಬರುತ್ತಿದ್ದರೆ ಏನು ಉತ್ತರ ಕೊಡಲೂ ಹೊಳೆಯುತ್ತಿಲ್ಲ. ಕುಳಿತಲ್ಲಿ ಅವಳು, ನಿಂತಲ್ಲಿ ಅವಳು, ನೋಡಿದಾ ಕಡೆಯೆಲ್ಲ ಅವಳೇ ಅವಳು.. ವೈದೇಹಿ ಏನಾದಳೋ ಎಂದು ಪರಿತಪಿಸುವ ರಾಮನಿಗಾದರೂ ಗೊತ್ತಿತ್ತು ಅವಳು ಎಲ್ಲಿ ಹೋಗಿದ್ದರೂ ನನ್ನವಳೇ, ನನಗಾಗೇ ಕಾಯುವಳೆಂದು.. ನಾನು ಅವಳು ಮಿಂಚುಕಣ್ಣನ್ನ ಮಿಂಚಿಸಿ ಅಲ್ಲಲ್ಲಿ ಓಡಾಡುವಾಗ ಆ ಕಣ್ಣ ಮಿಂಚು ನಂಗೇನಾ ಇನ್ಯಾರಿಗಾದ್ರೂ ತಾಗುತ್ತಿದೆಯಾ ಅಂತ ನೋಡಬೇಕಿತ್ತು.

ಇಷ್ಟೆಲ್ಲ ಆಗಿ ಇನ್ನೇನೇನೋ ಆಗಿ ಮಿಂಚುಕಣ್ಣಿನ ತಂಪು ತಿಂಗಳಿನ ಅವಳು ಹೂಗೊಪ್ಪಲಿನ ಶಾನುಭೋಗರ ಮಗಳು ತಾಯಿಯಿಲ್ಲದ ಹುಡುಗಿ ಸೀತೆಯಂತ ಗೊತ್ತಾಯಿತು. ಅತ್ರಿಯವರ ಹಾಡು ಕಿವಿಯಲ್ಲಿ ಗುನುಗುತ್ತಿದ್ದರೆ, ನಾನು ಅವಳಷ್ಟೇ ಬೆಳ್ಳಗಿದ್ದೇನಾ, ಎಲ್ಲಾದರೂ ಅವಳ ಕೂದಲಿಗೆ ಹೋಲಿಸಿಕೊಂಡುಬಿಟ್ಟರೆ ಅಂತ ದಿಗಿಲಾಗುತ್ತಿತ್ತು.. ಸಧ್ಯ ನಮ್ದು ಜೋಯಿಸರ ಮನೆಯಲ್ವಲ್ಲಾ ಅಂತ ಸಮಾಧಾನ..

ಆಮೇಲೆ ನಡೆದಿದ್ದು ನಾನು ಬದುಕಿಡೀ ನೆನಪಿನಲ್ಲಿ ಸವಿಯಬಹುದಾದ ಮಾಧುರ್ಯದ ದಿನಗಳು. ಬೈಕಿರಲಿಲ್ಲ, ಒಂದೊಂದ್ಸಲ ಎರಡು ಕಾಫಿಗೆ ದುಡ್ಡಿರ್ತಿರಲಿಲ್ಲ, ಸಿನಿಮಾಕ್ಕೆ ಊರಲ್ಲಿ ಹೋಗುವಂತಿರಲಿಲ್ಲ, ಬೇರೆ ಊರಿಗೆ ಜೊತೆಯಾಗಿ ಹೋಗಿಬರುವ ಪಯಣದ ಬಸ್ ಸ್ಟಾಂಡಿಗೆ ಇಬ್ಬರೂ ಜೊತೆಯಾಗಿ ಹೋಗಿ ಬಸ್ ಹತ್ತುವಂತಿಲ್ಲ, ಸಂಜೆ ನೆನಪಾದರೆ ಮೆಸೇಜು ಕುಟ್ಟಲು ಮೊಬೈಲ್ ಇರಲಿಲ್ಲ, ಮನೆಯ ಫೋನಿಗೆ ಕರೆಮಾಡಲು ಧೈರ್ಯವಿರಲಿಲ್ಲ, ಎಲ್ಲೂ ನನ್ನ ಪ್ರೀತಿಯ ಮೊಟ್ಟೆಗೆ ಕಾವು ಸಿಕ್ಕಿ ಮರಿಯಾಗುತ್ತಿರುವ ಸುಳಿವನ್ನೂ ಬಿಟ್ಟುಕೊಡುವಂತಿರಲಿಲ್ಲ.. ಆದರೆ ಆ ಕಾವು - ಆಹ್ ಎಷ್ಟು ಹಿತ.. ಕಾರಿಡಾರಿನಲ್ಲಿ ನಡೆಯುತ್ತ ಅಲ್ಲಿ ನನ್ನೆಡೆ ಹೊರಳುವ ಮಿಂಚುನೋಟದಲ್ಲಿ - ಹಗಲಿನಲಿ ಕಾಣುವುದು ನಿಮ್ಮಾ ಕನಸೂ, ಇರುಳಿನಲಿ ಕಾಡುವುದು ನಿಮ್ಮ ನೆನಪೂ - ರತ್ನಮಾಲಾರ ದನಿ ಉಲಿಯುತ್ತಿತ್ತು.. ನಿನದೇ ನೆನಪೂ ದಿನವೂ ಮನದಲ್ಲೀ ಅಂತ ಗುಂಯ್ ಗುಡುವ ಪಿ.ಬಿ.ಶ್ರೀನಿವಾಸರ ದನಿಯ ಹಾಡು ನನ್ನ ಮನಸು.. ಮಳೆಗಾಲದಲ್ಲಿ ಬೆಚ್ಚಗೆ ಒಲೆಮುಂದೆ ಕೂತಂತೆ, ಉರಿಬೇಸಿಗೆಯಲ್ಲಿ ನೇರಳೆಮರದ ಅಡಿಯಲ್ಲಿ ಕೂತು ಹೆಕ್ಕಿ ತಿಂದ ಹಣ್ಣರುಚಿಯಂತೆ, ತಂಪಿನಂತೆ, ಮಾಗಿಚಳಿಯ ಬೆಳಗಲ್ಲಿ ಮೈಸುತ್ತಿಕೊಂಡ ಕಂಬಳಿಯಂತೆ - ಹೀಗೇ ಅಂತ ಹೇಗೆ ಹೇಳಲಿ..

ಈಗೇನ್ ಗೊತ್ತಾ, ಬೇಕೆಂದಾಗ ಸುತ್ತಲು ಬೈಕಿದೆ, ಸಂಜೆ ಯಾವ ರೆಸ್ಟುರಾದಲ್ಲಿ ಬೇಕಾದರೂ ಕೂತು ತಿನ್ನಬಹುದಾದ ಬ್ಯಾಲನ್ಸಿದೆ,ಕೆಲಸವಿದೆ, ಯಾರು ನೋಡಿ ಕೇಳಿದರೂ ಉತ್ತರಿಸುವ ಧೈರ್ಯವಿದೆ," ಯಾಕೋ ನಿಂಗೆ ಯಾರೂ ಇಷ್ಟ ಆಗ್ತಿಲ್ಲ,ಹೋಗ್ಲಿ ನೀನೇ ಹುಡುಕ್ಕೋ" ಅಂತ ಹೇಳುವ ಅಮ್ಮ ಇದಾಳೆ.. ಆದ್ರೇನ್ ಮಾಡಲಿ

ನನ್ನ ಸೀತಾದೇವಿ ಬೇರೆ ರಾಮನನ್ನೇ ಹುಡುಕಿಕೊಂಡುಬಿಟ್ಟಿದ್ದಾಳೆ! ಕಾರಣ ಅವಳು ಹೇಳಲಿಲ್ಲ , ಹೇಳುವುದಿಲ್ಲ. ನನಗೆ ಬೇಡವೂ ಬೇಡ.

ಪಿಲಿಯನ್ ತುಂಬುವುದಿಲ್ಲ, ರೆಸ್ಟುರಾ ತಿಂಡಿ ಯಾವತ್ತಿಗೂ ಇನ್ನೊಂದ್ಸ್ವಲ್ಪ ಹೊತ್ತಿರಲಿ, ಈಗ್ಲೇ ಖಾಲಿಯಾಗುವುದು ಬೇಡ ಅನ್ನಿಸುವುದಿಲ್ಲ, ಸಿನಿಮಾಗೆ ಕ್ಯೂ ನಿಂತು ಅಡ್ವಾನ್ಸ್ ಟಿಕೆಟ್ ಖರೀದಿಸುವ ಉತ್ಸಾಹವಿಲ್ಲ, ಯಾರು ನೋಡಿದರೇನು ಬಿಟ್ಟರೇನು ಅನ್ನುವ ಅಸಡ್ಡಾಳತನ.. ಅಮ್ಮನ ಸಲಹೆಗೆ ಹುಂ ಅನ್ನುವ ಬಿಗುಮಾನದ ಹೊರತಾಗಿ ಇನ್ನೇನಿದೆ.. ನನ್ನ ಹಕ್ಕಿ ಮೊಟ್ಟೆ ಮರಿಯಾದ ಕೂಡಲೇ ಪುರ್ರಂತ ಹಾರಿಹೋಗಿದೆ. ಮರಿಗೆ ನನ್ನ ನೆನಪಿನ ತುತ್ತಿನೂಟ.. ಗೂಡಿನ ಕಡ್ಡಿ ಒಂದೊಂದೇ ಬೀಳುತ್ತಿದೆ. ಚಳಿಗಾಲಕ್ಕೆ ಬೆಚ್ಚಗಿರಿಸಲು ಹತ್ತಿಪುರುಳೆ ತರಬೇಕೆನಿಸುತ್ತಿಲ್ಲ.. ಈಗ ಭಾವಗೀತೆಗಳ ಮೆರವಣಿಗೆ ಮುಗಿದು ಗಝಲುಗಳ ಸಂಜೆಪಯಣ.. ಚಮಕ್ತೇ ಚಾಂದ್ ಕೋ ಟೂಟಾ ಹುವಾ ತಾರಾ ಬನಾಡಾಲಾ..

ಇಲ್ಲ ನನಗೆ ಸಿಟ್ಟಿಲ್ಲ ದುಃಖವಿಲ್ಲ, ಏನೂ ಇಲ್ಲದ ಭಾವವನ್ನು ಭರಿಸುವ ತಾಕತ್ತಿಲ್ಲ. ಹೊಸದೊಂದು ಗೂಡಿನ ನೆನಪು ಮೈಯನ್ನು ಮುಳ್ಳಾಗಿಸುತ್ತದೆ. ದೇವಾನಂದನ ತರ - ತೇರೇ ಘರ್ ಕೇ ಸಾಮ್ನೇ - ಅಂತ ಅವಳ ಮನೆ ಮುಂದೇನೇ ಮನೆ ಮಾಡ್ಕೊಂಡ್ ಬಿಡಲಾ ಅಂತ ಯೋಚಿಸಿ ನನ್ನಷ್ಟಕ್ಕೆ ನಾನೆ ನಗುತ್ತೇನೆ.. ಉಂಹುಂ ನನ್ನ ದಾರಿಯಲ್ಲ ಅದು..

ಅವಳ ಗೂಡು ಬೆಚ್ಚಗಿರಲಿ.

ನಾನು ಮುಸಾಫಿರ್ ಹುಂ ಯಾರೋ.. ಅಂತ ಗುನುಗುವ ಕಿಶೋರನ ಉಲಿಯಾಗಿದ್ದೇನೆ. ಗೂಡಿನ ಯೋಚನೆ ಇಲ್ಲದೆ ಹಾಯಾಗಿದ್ದೇನೆ..

ಚಾಂದ್ ಸೀ ಮೆಹಬೂಬಾ ಹೈ ವೋ - ಬಿಲ್ಕುಲ್ ಜೈಸಾ ಮೈನೇ ಸೋಚಾ ಥಾ.. ಆದ್ರೆ.. ಚಂದಿರನಷ್ಟೇ ದೂರ.. ಚಂದಿರನಷ್ಟೇ ಹತ್ತಿರ..

(ತಪ್ಪು ತಿದ್ದಿದ ತ್ರಿವೇಣಿಯಕ್ಕನಿಗೆ ಆಭಾರಿ)

14 comments:

ರಂಜನಾ ಹೆಗ್ಡೆ said...

ಹಾಯ್ ಅಕ್ಕಾ,
ಕೂಸಕ್ಕ ನಿನ್ನ ಬ್ಲಾಗ್ ನಲ್ಲಿ ಪೋಸ್ಟ್ ಗಳ ಸುರಿಮಳೆನೇ ಸುರಿಸ್ತಾ ಇದಿರಾ.

ನಂಗೆ ಈ ತನಕ ಹುಡುಗರು ಹಿಂಗೆಲ್ಲಾ ಪ್ರೀತಿ ಮಾಡುವದರ ಬಗ್ಗೆ ಅನುಮಾನವೇ ಇದೆ. ಯಾಕೋ ಗೊತ್ತಿಲ್ಲಾ .

ತುಂಬಾ ಇಷ್ಟ ಆಯಿತು. ನಿನ್ನ ಕಥೆ.

"ಈಗೇನ್ ಗೊತ್ತಾ, ಬೇಕೆಂದಾಗ ಸುತ್ತಲು ಬೈಕಿದೆ, ಸಂಜೆ ಯಾವ ರೆಸ್ಟುರಾದಲ್ಲಿ ಬೇಕಾದರೂ ಕೂತು ತಿನ್ನಬಹುದಾದ ಬ್ಯಾಲನ್ಸಿದೆ,ಕೆಲಸವಿದೆ, ಯಾರು ನೋಡಿ ಕೇಳಿದರೂ ಉತ್ತರಿಸುವ ಧೈರ್ಯವಿದೆ," ಯಾಕೋ ನಿಂಗೆ ಯಾರೂ ಇಷ್ಟ ಆಗ್ತಿಲ್ಲ,ಹೋಗ್ಲಿ ನೀನೇ ಹುಡುಕ್ಕೋ" ಅಂತ ಹೇಳುವ ಅಮ್ಮ ಇದಾಳೆ.. ಆದ್ರೇನ್ ಮಾಡಲಿ" ಸಾಲುಗಳಾ ಇವು ಮನದ ಮಾತುಗಳಾ? :( :(

ವಿ.ರಾ.ಹೆ. said...

akka, very nice :)

VENU VINOD said...

ಸಿಂಧೂ,
ಹುಡುಗರ ಮನಸ್ಸೆಲ್ಲಾ ಅರಿತುಕೊಂಡ ಹಾಗಿದೆ, ಯಾವತ್ತಾದ್ರೂ ಪರಕಾಯ ಪ್ರವೇಶ ಮಾಡಿದ್ರಾ? ಸೂಪರ್‍ ಬರಹ

Anonymous said...

ಸಿಂಧು, ಇಡೀ ಕಥೆ ಒಂದು ಸುಂದರ ಹಾಡನ್ನು ಕೇಳಿದಂತೆ ಹಿತ ನೀಡಿತು. ಹಾಗೆಯೇ - ’ಮುಸಾಫಿರ್ ಹು ಯಾರೊ ನ ಘರ್ ಹೈ ನ ಠಿಕಾನಾ’ ಹಾಡನ್ನು ನನ್ನ ಪ್ರೀತಿಯ ಕಿಶೋರ್ ಅಕೌಂಟಿನಿಂದ ಕಿತ್ತು ರಫಿಗೆ ಕೊಟ್ಟಿದ್ದಕ್ಕೆ ತುಂಬಾ ಕೋಪ ಕೂಡ :)

ಸಿಂಧು sindhu said...

ರಂಜೂ..
ಇದು ಶರತ್-ಶಿಶಿರದ ಇಬ್ಬನಿ.. ಮಳೆಯಲ್ಲ.. :) ಮಳೆ ಮೋಸ್ಟ್ ಲೀ ಸಿಕ್ಕಾಪಟ್ಟೆ ಉದ್ದಕಿರ್ತು..

ನನಗೆ ಯಾರ ಪ್ರೀತಿಯ ಬಗ್ಗೆಯೂ ಅನುಮಾನವೇ ಇಲ್ಲ. ಅದು ಯಾವುದೋ ಪಾಯಿಂಟಿಂದ ಈ ಪ್ರೀತಿ ನಂಗೇ ಸಿಕ್ಕಿದೆ ಅಂತ ಗೊತ್ತಾದ ಕೂಡಲೇ ಶುರುವಾಗುವ ತಲೆಪ್ರತಿಷ್ಠೆ ಇದೆಯಲ್ಲಾ ಹುಡುಗಿಯಾದರೂ ಹುಡುಗನಾದರೂ ಅಷ್ಟೇ..ಅದು ಉಳಿದದ್ದನೆಲ್ಲ ಮಾಡಿಸೋದು..

ಯಾವುದು ಮನದ ಮಾತುಗಳಲ್ಲ? :D


ವಿಕಾಸ್,
:)

ವೇಣು
ಥ್ಯಾಂಕ್ಸ್.. ಹೀಗೇ ಒಂದು ಪ್ರಯೋಗ.

ತ್ರಿವೇಣಿಯಕ್ಕ,
ನಿಮ್ಮ ಹಿತ ನಂಗೆ ಖುಶಿ ಕೊಟ್ಟಿದೆ.
ಪ್ಲೀಸ್ ಸಿಟ್ ಮಾಡ್ಕೋಬೇಡಿ -ಅವಸರದ ಅವಾಂತರ- ತಿದ್ದಿದೀನಿ. ರಫಿಯ ಹಾಡಿನ ಗುಂಗಲ್ಲಿ ಅವನ ಅಪೀಲಿಂಗ್ ಮಾಧುರ್ಯದಲ್ಲಿ ಮುಳುಗಿದಾಗ ಬರೆದ ಹಾಡಿನಿಂದ ಆದ ತಪ್ಪು ಇದು.

ಪ್ರೀತಿಯಿಂದ
ಸಿಂಧು

jomon varghese said...

"ಚಾಂದ್ ಸೀ ಮೆಹಬೂಬಾ"ದ ಕಾವು ಕೂಡ ಹಿತವಾಗಿತ್ತು. ಪ್ರೀತಿಯ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದೀರಾ.


ಧನ್ಯವಾದಗಳು.

ಮನಸ್ವಿನಿ said...

ಮ......................ಸ್ತ್ :)

Sushrutha Dodderi said...

ನೈಚ್!!
ಬೋತ್ -the post and that reply to Ranju. :-)

"ನನ್ನ ಪ್ರೀತಿಯ ಮೊಟ್ಟೆಗೆ ಕಾವು ಸಿಕ್ಕಿ ಮರಿಯಾಗುತ್ತಿರುವ ಸುಳಿವನ್ನೂ ಬಿಟ್ಟುಕೊಡುವಂತಿರಲಿಲ್ಲ.. ಆದರೆ ಆ ಕಾವು - ಆಹ್ ಎಷ್ಟು ಹಿತ.." ಹ್ಮ್ಮ್... ನಿಜ.. :(

ಸಿಂಧು sindhu said...

ಜೋಮನ್,

ಧನ್ಯವಾದ. ಖುಶಿ ನಂಗೆ ನಿಮಗೆ ಹಿತವಾಗಿದ್ದು ತಿಳಿದು.

ಸುಮನಸ್ವಿನಿ..
ಥ್ಯಾಆಆಆಆಂಕ್ಯೂಊಊಊಊ

ಸುಶ್ರುತ,
ಟೇಂಕೂ.. ಕಣಾ..

ಅದಿರ್ಲಿ ನಮ್ಮ ನೋಟ ಸಾಮ್ರಾಜ್ಯದಲ್ಲಿ ಹೀಗೆ ಮಾಡಲು ಎಷ್ಟು ಧೈರ್ಯ.. ಯಾರವ್ರು ನಮ್ ರಂಜೂನ ಟೀಸ್ ಮಾಡೋರು..ದೂತರೆ ಬೇಗ ಬಂದು ಈ ಕಿಲಾಡಿಕಿನ್ನರನ ಹೊತ್ತೊಯ್ದು ತುಂಬಾ ಹೊತ್ತು ಕಚಗುಳಿ ಕೊಟ್ಟು ನಗಿಸಿ..

ಪ್ರೀತಿಯಿಂದ
ಸಿಂಧು

SuZ said...

ಸೂಪರ್ :)

ಸುಪ್ತದೀಪ್ತಿ suptadeepti said...

ಕಥೆ ಸುಂದರ ಹಂದರ. ಅದರ ನೆರಳಲ್ಲಿ ಕಳೆದುಹೋದೆ.

"ಕಿಲಾಡಿಕಿನ್ನರನ ಹೊತ್ತೊಯ್ದು ತುಂಬಾ ಹೊತ್ತು ಕಚಗುಳಿ ಕೊಟ್ಟು ನಗಿಸಿ.."-- ಇದು ನಮ್ಮನೆಯಲ್ಲಿ ತಪ್ಪಿತಸ್ಥರಿಗೆ ಜಾರಿಯಲ್ಲಿರೋ ಶಿಕ್ಷೆ..... ನಿಮಗೆ ಹೇಗೆ ಗೊತ್ತಾಯ್ತು?

ಶಾಂತಲಾ ಭಂಡಿ (ಸನ್ನಿಧಿ) said...

ಸಿಂಧು...
ಅದೆಷ್ಟು ಚೆನ್ನಾಗಿದೆ ಅಂತ ಹೇಗೆ ಹೇಳಲಿ....
ಸಕತ್....ಮಸ್ತ್....ಎಲ್ಲ ಆಗಿದೆ.

ಶ್ರೀನಿಧಿ.ಡಿ.ಎಸ್ said...

ಮಧ್ಯಾಹ್ನ ಊಟಕ್ಕೆ ಅಂತ ಹೊರಟವನು ನಿನ್ನ ಪೋಸ್ಟು ಓದಿ, ಇಲ್ಲೇ ಬಾಕಿ!:) ಮಸ್ತ್ ಬರದ್ದೆ ನೋಡು, ವೆರಿ ನೈಸು:),

ಆದರೂ..ಎಲ್ಲೋ ಏನೋ ಚುಚ್ಚಿದಂತಾದ್ದು ಸುಳ್ಳಲ್ಲ.

ರಾಜೇಶ್ ನಾಯ್ಕ said...

ನಿಮ್ಮ ಈ ಹೊಸ ಪ್ರಯೋಗ ನನಗಂತೂ ತುಂಬಾನೇ ಇಷ್ಟವಾಯಿತು.