Tuesday, December 11, 2007

ವೈಶಾಲಿಯಲ್ಲಿ...

ಬುದ್ಧನ ಊರಂತೆ! ಮೊದಲ ಬಾರಿಗೆ ಗಣರಾಜ್ಯವೆಂಬ ಸಮುದಾಯದ ಬದುಕು ಅರಳಿದ್ದಲ್ಲಂತೆ! ಹೆಣ್ಣುಗಂಡೆಂಬ ಬೇಧವಿಲ್ಲದೆ ದಿನವಿಡೀ ಒಟ್ಟಾಗಿ ದುಡಿದು, ಮೆಲ್ಲ ಕವಿಯುವ ಸಂಜೆಇರುಳಲ್ಲಿ ಸಾಮುದಾಯಿಕ ನರ್ತನವಿತ್ತಂತೆ. ಸುತ್ತ ನೋಡಿದಲ್ಲಿ ಹಸಿರು, ಸಮೃದ್ಧಿ, ಗಂಟೆಗೊರಳ ಕಾಮಧೇನುಗಳ ನಲ್ದಾಣ, ಶತ್ರುರಾಜ್ಯಗಳಿಗೆ ಅಬೇಧ್ಯ ಕೋಟೆಯಾಗಿ, ಹಲಕೆಲವು ವಿದ್ಯಾಕೇಂದ್ರಗಳಿಗೆ ಹೆಸರಾಗಿ.. ಮೆರೆದ ಜಾಗವಂತೆ.. ಓದಿದ ಹಲವು ಪುಸ್ತಕಗಳಲ್ಲಿ ನಾ ಕಂಡ ಚಿತ್ರಣವದು. ಕಾಯುತ್ತಿದ್ದೆ ಒಮ್ಮೆ ಅಲ್ಲಿ ಹೋಗಬೇಕೆಂದು. ಆ ಎಲ್ಲ ಕನಸಿನಂತಹ ದಿನಗಳ ನೆರಳು ಬಿದ್ದಿರುವ ಜಾಗದ ಗಾಳಿಯನ್ನೊಮ್ಮೆ ಉಸಿರೊಳಗೆ ಸೇರಿಸಬೇಕೆಂದು..

ಇಲ್ಲ ಅಯ್ಯೋ ಇದಲ್ಲ ಇದಲ್ಲ ಅದು...

ನಿನ್ನೆ ಕೆಲಸ ಮುಗಿಸಿ ಹಗುರಾದವಳು ಕೆಲಕ್ಷಣಗಳ ಮಟ್ಟಿಗೆಂದು ಟೀವಿ ಹಾಕಿ ಹೈರಾಣಾಗಿ ಹೋದೆ. ಆ ನನ್ನ ವೈಶಾಲಿಯಲ್ಲಿ ಇಬ್ಬರು ಪುಟ್ಟ ಮಕ್ಕಳನ್ನು ಟ್ರಾಕ್ಟರಿಲ್ಲ, ಎತ್ತಿಲ್ಲ ಅಂತ ಹೇಳಿ ನೇಗಿಲಿಗೆ ಕಟ್ಟಿ ಗದ್ದೆ ಉಳಲು ಹಚ್ಚಿದ್ದರು. ಹಿಂದೆ ಅವರನ್ನು ಮ್ಯಾನೇಜ್ ಮಾಡುತ್ತ ನಿಂತಿದ್ದ ಅಜ್ಜನಂತ ರೈತ.. ಅವನ ಮನೆಯಲ್ಲೂ ಮಕ್ಕಳಿರಬಹುದು! ಅವನಿಗದು ಬೇಕಿಲ್ಲ. ಮಾಲೀಕ ಕೊಟ್ಟ ಜೀತದ ಮಕ್ಕಳನ್ನು ಮನುಷ್ಯರಂತೆ ನೋಡಬೇಕೆಂದಿಲ್ಲ.. ಮಾಲಿಕ ಖುಶಿಯಾಗಬೇಕು. ನೆಲ ಉತ್ತಬೇಕು. ಫಸಲು ಬೆಳೆಯಬೇಕು..ಮನೆಯಲ್ಲಿ ತುತ್ತಿನ ಚೀಲ ತುಂಬಬೇಕು. ಆ ಪುಟ್ಟ ಜೀವಗಳು..ಅಪ್ಪ ಅಮ್ಮರೆಂದೋ ಮಾಡಿದ ಸಾಲಕ್ಕೆ ಅಕ್ಷರಶಃ ನೊಗ ಹೊರುತ್ತಿದ್ದಾರೆ. ಅವರಪ್ಪ ಅಮ್ಮ ಆರಿಸಿ ಕಳಿಸಿದ ನೇತಾ ಯೂನಿಯನ್ ಮಿನಿಸ್ಟರ್ (ರೂರಲ್ ಡೆವಲಪ್ ಮೆಂಟ್ ಬೇರೆ) ಆಗಿ ಮನೆಯಲ್ಲಿ ಕ್ರಿಸ್ಮಸ್ ರಜೆಗೆ ಯಾವ ರೆಸಾರ್ಟಿಗೆ ಮಕ್ಕಳನ್ನು ಕರೆದುಕೊಂಡು ಹೋಗಲೆಂದು ಯೋಚನೆ ಮಾಡುತ್ತಿರುತ್ತಾನೆ. ಅವನ ತಮ್ಮನೇ ಆದ ಜಮೀನ್ದಾರ ನಡೆಸುವ ಈ ಅಮಾನುಷ ಕೃತ್ಯ ಅವನಿಗೆ ಗೊತ್ತೇ ಇಲ್ಲ. ಮೀಡಿಯಾ ಪ್ರಶ್ನೆ ಮಾಡಿದರೆ - ಇಲ್ಲಪ್ಪ ನನ್ ತಮ್ಮ ಊರಲ್ಲಿ ಏನು ಕೆಲಸ ಮಾಡುತ್ತಿರುತ್ತಾನೋ ಇಲ್ಲಿ ದಿಲ್ಲಿಯಲ್ಲಿ ಕೂತ ನನಗೇನು ಗೊತ್ತು.. ನನಗೇನು ಸಂಬಂಧ? ಇದೆಲ್ಲ ಪ್ರತಿಪಕ್ಷದವರ ಕುತಂತ್ರ ಅಂತ ಸಬೂಬು ಹೇಳುತ್ತಾನೆ..

ಮಕ್ಕಳು ಎಳೆಯಲಾರದ ನೇಗಿಲನ್ನು, ಎಳೆದುಕೊಂಡು ಮುನ್ನಡೆಯುತ್ತಿದ್ದಾರೆ, ಹಿಂದೆ ಹಸಿವಿನ ಚೀಲ ತುಂಬಬೇಕಾಗಿರುವ ಇನ್ಯಾವನೋ ರೈತ ಕೈಯಲ್ಲಿ ಬಾರುಕೋಲು ಹಿಡಿದು ತುತ್ತಿನ ಚೀಲ ತುಂಬಹೊರಟಿದ್ದಾನೆ, ಇವರನ್ನೆಲ್ಲ ಬಳಸಿಕೊಂಡ ಜಮೀನುದಾರ ಇಲ್ಲಿ ಟ್ರಾಕ್ಟರ್ ಬರೋಲ್ಲ, ಎತ್ತು ಇಲ್ಲ, ಇರುವ ಆಳುಮಕ್ಕಳನ್ನ ಬಳಸದೆ ಇನ್ನೇನ್ ಮಾಡಲಿ, ಅವರಿಗೆ ಸಂಬಳ ಕೊಡ್ತೇನಲ್ಲ ಅಂತ ನಿರ್ಲಜ್ಜನಾಗಿ ಹೇಳುತ್ತಾ ಮೀಸೆ ಸವರುತ್ತಿದ್ದಾನೆ..

ಹುಲಿಯಂತ ಹುಲಿಯೂ ಹಸಿವಾದಾಗ ಆಕ್ರಮಣ ಮಾಡುತ್ತದೆಯಲ್ಲವೆ! ಇವನು ಯಾವ ಜಾತಿ?!(species)

ಎಲ್ಲೂ ನಡೆಯಬಾರದ ಕ್ರೌರ್ಯದ ಪರಮಾವಧಿ - ವೈಶಾಲಿಯಲ್ಲಿ, ಬುದ್ಧನ ಊರಲ್ಲಿ, ಗಣತಂತ್ರದ ಮೊದಲ ಉಲಿ ಹಬ್ಬಿದಲ್ಲಿ.. ನಾವೆತ್ತ ಹೋಗುತ್ತಿದ್ದೇವೆ?!

ನನಗೇನು ಮಾಡಬೇಕೋ ಗೊತ್ತಾಗುತ್ತಿಲ್ಲ :(

4 comments:

ನಾವಡ said...

ಬೆಳಗ್ಗೆ ಪತ್ರಿಕೆಯಲ್ಲಿ ಓದಿದಾಗ ನನಗೂ ಬಹಳ ಖೇದವೆನಿಸಿತು. ಜತೆಗೆ ಹಾಸನದಲ್ಲೂ ಅಂಥದ್ದೇ ಒಂದು ಘಟನೆ ನಡೆದಿದೆ. ಕಳ್ಳನೆಂದು ತಪ್ಪಾಗಿ ಗ್ರಹಿಸಿ ಜನರು ಒಬ್ಬನನ್ನು ಥಳಿಸಿ ಕೊಂದಿದ್ದಾರೆ. ಇಂಥ ಘಟನೆಗೂ (ಕೆಲ ತಿಂಗಳ ಹಿಂದೆ ಬಿಹಾರದಲ್ಲಿ ಕಳ್ಳನೊಬ್ಬನನ್ನು ಹೀಗೇ ಸೈಕಲ್ ಗೆ ಕಟ್ಟಿ ದರದರ ಎಳೆದು ಹಿಂಸಿಸಿ ಕೊಲ್ಲಲಾಗಿತ್ತು) ಬಿಹಾರವೇ ಪ್ರೇರಣೆ ಎನಿಸುತ್ತಿದೆ. ಆದರೆ ನಮ್ಮ ರಾಜ್ಯದಲ್ಲೂ ಹೀಗೇ ಅಮಾನವೀಯರಾಗುತ್ತೀದ್ದಾರಾ ಎಂದೆನಿಸುತ್ತಿದೆ.
ದಯವಿಟ್ಟು ಗಮನಿಸಿ. ನನ್ನ ಬ್ಲಾಗ್ ಬದಲಾಯಿಸಿದ್ದೇನೆ. ನಿಮ್ಮ ಲಿಂಕ್ ನಲ್ಲೂ ದಯವಿಟ್ಟು ಬದಲಿಸಿ, ಪ್ಲೀಸ್.
www.chendemaddale.wordpress.com

ರಂಜನಾ ಹೆಗ್ಡೆ said...

ಛೆ ಎಂತಾ ಮರಾಯ್ತಿ ಇದು?!
ಅಯ್ಯೋ ಇನ್ನು ಅರಳಿ ಹೂವಾಗ ಬೇಕಾಗಿರುವ ಮಕ್ಕಳ ಸ್ಥಿತಿ ಇದಾ? ನಮಗೆ ಸ್ವಾತಂತ್ರ ಬಂದು ಎಷ್ಟು ವರ್ಷ ಆತು ಇಗ್ಳೂ ಹಿಂಗಾ? ನಮ್ಮ ದೇಶ ಯಾವತ್ತು ಹಿಂಗೆನಾ? ನಮಗೆಲ್ಲಾ ಎನೂ ಮಾಡಕೆ ಆಗದಿಲ್ಯಾ?

ಬೇಜಾರಾತು ಬೆಳಗ್ಗೆ ಬೆಳಗ್ಗೆ ಇದನ್ನ ಓದಿ.

sritri said...

ಈ ಬಗ್ಗೆ ಕನ್ನಡಪ್ರಭದಲ್ಲಿ ಬಂದ ವರದಿ ಹೀಗಿದೆ. ಯಾರನ್ನು ನಂಬುವುದೋ ತಿಳಿಯುತ್ತಿಲ್ಲ.
http://www.kannadaprabha.com/NewsItems.asp?ID=KPN20071212114205&Title
ಹಣಕೊಟ್ಟು ನೇಗಿಲೆಳೆಸಿದ ಚಾನೆಲ್

(ಸಚಿವ ರಘುವಂಶ್ ಪ್ರಸಾದ್ ಹೊಲದಲ್ಲಿ ಮಕ್ಕಳನ್ನು ಎತ್ತಿನಂತೆ ದುಡಿಸಿಕೊಳ್ಳಲಾಗುತ್ತಿತ್ತು ಎಂಬ ಪ್ರಕರಣ ಹೊಸ ತಿರುವು ಪಡೆದಿದೆ. ‘ಯಾರೋ ಇಬ್ಬರು ಬಂದು ೨೦ ರು. ಕೊಟ್ಟು ನೇಗಿಲು ಎಳೆಯುವಂತೆ ಹೇಳಿದರು. ನಾವು ಎಳೆದವು ಎಂದು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದ ಚಿತ್ರದಲ್ಲಿ ಕಾಣಿಸಿದ್ದ ಇಬ್ಬರು ಬಾಲಕರು ಹೇಳಿದ್ದಾರೆ. ಆದರೆ ಈ ಬಗ್ಗೆ ವರದಿ ಮಾಡಿದ್ದ ವರದಿಗಾರರು ಮಾತ್ರ ಸಚಿವರ ಬೆದರಿಕೆಯಿಂದಾಗಿ ಮಕ್ಕಳು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ‘ಕನ್ನಡಪ್ರಭ’ ಬಳಗದ ‘ಇಂಡಿಯನ್ ಎಕ್ಸ್ ಪ್ರೆಸ್’ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದಾಗ ಟಿ.ವಿ. ವಾಹಿನಿಗಳಲ್ಲಿ ಬಿತ್ತರವಾಗಿದ್ದ ಸುದ್ದಿಯಲ್ಲಿ ಕಾಣಿಸಿದ್ದ ಬಾಲಕರಾದ ಚಂದನ್ ಹಾಗೂ ಸೋನೆಲಾಲ್ ಹೊಲದಲ್ಲಿ ದುಡಿಯುತ್ತಿರಲಿಲ್ಲ. ಒಬ್ಬ ಹಾಗೂ ೩ ಹಾಗೂ ಮತ್ತೊಬ್ಬ ೪ನೇ ತರಗತಿ ಪರೀಕ್ಷೆ ಬರೆಯುತ್ತಿದ್ದ. ಈ ಬಗ್ಗೆ ವಿಚಾರಿಸಿದಾಗ ಬಾಲಕರು ಹೇಳಿದ್ದು ಹೀಗೆ: ‘ಯಾರೋ ಇಬ್ಬರು ಬಂದು ನೊಗ ಎಳೆಯುವಂತೆ ಹೇಳಿದರು. ಇದಕ್ಕೆ ೨೦ ರು. ಕೊಟ್ಟು ಚಿತ್ರ ತೆಗೆಯುವುದಾಗಿ ಹೇಳಿದರು’ ಎಂದಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮಕ್ಕಳ ತಾಯಿಯೂ ಇದೇ ಮಾತನ್ನು ಹೇಳಿದ್ದಾಳೆ.)

ಸಿಂಧು Sindhu said...

ತ್ರಿವೇಣಿಯಕ್ಕ,

ಎರಡೂ ಸುದ್ದಿಗಳೆ. ಮೊದಲ ಸುದ್ದಿಯನ್ನು ನಾನು ಟೀವಿಯಲ್ಲಿ ನೋಡಿದಾಗ - ಇದೇನು ಇಂತಹ ಕ್ರೌರ್ಯವನ್ನ ಇವರು ಹೀಗೆ ಚಿತ್ರಿಸಿದ್ದಾರಲ್ಲ ಹೇಗೆ ಸಾಧ್ಯ ಅಂದುಕೊಂಡು ಅನುಮಾನದಿಂದ ನೋಡಿದೆ..ಸುದ್ದಿಯಲ್ಲಿ ರಘುವಂಶ ಪ್ರಸಾದರು ಮಾಧ್ಯಮಕ್ಕೆ ಉತ್ತರಿಸಿದ್ದನ್ನು ಮತ್ತು ಅವರ ತಮ್ಮ ಮಾತನಾಡಿದ್ದನ್ನು ನೋಡಿದ ಮೇಲೆ ತುಂಬ ದಿಗಿಲು ಮತ್ತು ಹೇವರಿಕೆಯಷ್ಟೆ ಮನದಲ್ಲಿ ನಿಂತಿದ್ದು.

ಕೇಂದ್ರ ಗ್ರಾಮೀಣಾಭಿವೃದ್ಢಿ ಮಂತ್ರಿ ಹೇಳುತ್ತಾನೆ - ಆ ಕೆಲಸ ಯಾರು ಮಾಡಿಸಿದ್ದೋ ನಂಗೊತ್ತಿಲ್ಲ, ನನ್ ತಮ್ಮ ಹಳ್ಳಿಯಲ್ಲಿದ್ದಾನೆ. ಅಲ್ಲಿ ಅವನು ಮಾಡಿದ್ದು ನಂಗೆ ಸಂಬಂಧವಿಲ್ಲ ಅಂತ - ಕೊನೆಯ ಪಕ್ಷ ಮಾಧ್ಯಮದವರು ಅವನನ್ನು ಮಾತನಾಡಿಸಿದಾಗ ಒಂದು ಫೋನ್ ಮಾಡಿ ಏನಿದು ಅಂತ ತಮ್ಮನನ್ನು ವಿಚಾರಿಸಬಹುದಿತ್ತಲ್ಲ?! ಹಳ್ಳಿಯಲ್ಲಿರುವವರಿಗೂ ದಿಲ್ಲಿಯಲ್ಲಿರುವವರಿಗೂ ಅಷ್ಟು ಅಂತರವಾದರೆ ಆ ಮಂತ್ರಿ ಪದವಿ ಏಕೋ? ಗ್ರಾಮೀಣಾಭಿವೃದ್ಢಿ ಅಂದರೆ ಏನೋ?

ಆ ಜಮೀನ್ದಾರ ಮತ್ತು ಮಂತ್ರಿಯ ತಮ್ಮ ಮಾಧ್ಯಮದವರು ಏನಿದು ಅಂತ ಕೇಳಿದರೆ ನೇರವಾಗಿ ಕ್ಯಾಮೆರಾಗೆ ಮುಖ ಕೊಟ್ಟು ಧಾರ್ಷ್ಯದಿಂದ ಹೇಳುತ್ತಾನೆ - ಇಲ್ಲಿ ಟ್ರಾಕ್ಟರ್ ಬರುವುದಿಲ್ಲ, ಎತ್ತು ಇಲ್ಲ. ಇವರಿಗೆ ಸಂಬಳ ಕೊಡುತ್ತೇನೆ ದುಡಿಯುತ್ತಿದ್ದಾರೆ ಅಂತ.. ಇದನ್ನೂ ವಿರೋಧಪಕ್ಷದವರೇ ಹೇಳಿಸಿರಬಹುದಾ? ಅಥವಾ ಅವನೇ ವಿರೋಧಪಕ್ಷವಾ?

ಈ ಪಕ್ಷರಾಜಕಾರಣದ ಮಧ್ಯೆ ಜೀವವಿರೋಧಿ ರಾಜಕೀಯವನ್ನು ಯಾರು ವಿರೋಧಿಸಬೇಕು? ಪ್ರಜಾಪ್ರಭುತ್ವದ ಮುಖವಾಡ ತೊಟ್ಟು ತಮ್ಮತಮ್ಮ ಸ್ವಾರ್ಥ್ಜದ ಕೊಪ್ಪರಿಗೆ ತುಂಬಿಸಿಕೊಳ್ಳುವ ಇವರನ್ನು ಏನೆನ್ನಬೇಕು? ಮಾಧ್ಯಮದವರ ಸಾಮರ್ಥ್ಯವನ್ನು ಹೇಗೆ ದುಡಿಸಿಕೊಳ್ಳಬೇಕು ಮತ್ತು ಅದರ ಮಿತಿಯನ್ನು ಯಾರು ನಿರ್ಧರಿಸಬೇಕು..?

ಎಲ್ಲ ಗೊಂದಲಗಳೇ. ಮಾಧ್ಯಮದವರು ತೀರಾ ರಾಜಕೀಯದವರಷ್ಟು ಕೆಟ್ಟುಹೋಗಿಲ್ಲ ಅನ್ನುವುದು ನನ್ನ ಅನಿಸಿಕೆ. ಯಾರನ್ನು ನಂಬುವುದೂ ಕಷ್ಟ.

೨೦ ರೂಪಾಯಿ ಗಂಟೆಗೆ ಕೊಟ್ಟು ಆ ಕೆಲಸ ಮಾಡಿಸಿದರೂ, ಅಥವಾ ತಿಂಗಳಿಗೆ ಕೊಟ್ಟು ತುತ್ತಿನ ಚೀಲ ತುಂಬುವುದಾದರೂ ಎರಡೂ ಅಮಾನವೀಯ. ಇದರಲ್ಲಿ ಯಾವುದೂ ನಿಜವಾದರೂ ನಮಗೇ ನಾವು ಕರೆದುಕೊಳ್ಳುವ ಮನುಷ್ಯತ್ವಕ್ಕೇ ಅವಮಾನ.. :(

ನಾವಡರೇ,
ಇದು ಬಿಹಾರವೊಂದರ ಕತೆಯಲ್ಲ. ನೀವು ಗಮನಿಸಿಯೇ ಇರುತ್ತೀರ. ಮ್ಯಾಪಲ್ಲೂ ಇರದ ನಮ್ಮ ಪುಟ್ಟ ಪುಟ್ಟ ಹಳ್ಳಿಗಳಲ್ಲೂ ಜೀವವಿರೋಧಿ ಕೆಲಸ ಕ್ರಮೇಣ ಹೆಚ್ಚಾಗುತ್ತಿದೆ. ಎಲ್ಲವೂ ಪತ್ರಿಕೆಗಳ ಹೆಡ್ ಲೈನುಗಳಲ್ಲಿ ಬರುವಷ್ಟು ತೀವ್ರವಾಗಿಲ್ಲ ಅನ್ನುವುದು ಸಮಾಧಾನ. ಆದ್ರೂ..ಯಾರಿಗೂ ಗೊತ್ತೇ ಆಗದೆ ಏನೇನು ಮಾಡಿದ್ದಾರೋ ಅಂತ ದಿಗಿಲು :(

ರಂಜೂ,
ಕ್ಷಮಿಸು, ಬೆಳಿಗ್ಗೆ ಮುಂಚೆ ನಿನ್ನ ಮೂಡ್ ಹಾಳು ಮಾಡಿದ್ದಕ್ಕೆ.

ಇದು ವರದಿಯೆಂದು ಹಾಕಿದ್ದಲ್ಲ ನಾನು. ನೋಡಿ ತುಂಬ ಬೇಸರವಾಯಿತು. 'ವೈಶಾಲಿ' ಎಂಬುದು ನನ್ನ ಚಿಕ್ಕಂದಿನ ಮತ್ತು ಸ್ವಲ್ಪ ದೊಡ್ಡವಳಾದಾಗಿನ ಓದಿನ ಭಾಗ ಮತ್ತು ನನ್ನ ಯಾವತ್ತೂ ಕನಸಿನ ಊರು. ಮಕ್ಕಳನ್ನು ಎಳೆಸಿದ್ದಕ್ಕಿಂತ ಅಮಾನವೀಯವೆನಿಸಿದ್ದು ಅದರಿಂದ ತಪ್ಪಿಸಿಕೊಳ್ಳುವ ಪರಿ ಮತ್ತ್ತು ಅದನ್ನೇ ಸ್ಪಷ್ಟೀಕರಿಸುವ ಧಾರ್ಷ್ಟ್ಯ.

ಸಿಂಧು